Home Blog Page 231

ಏರ್ ರೈಫಲ್ ಶೂಟಿಂಗ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ: ಸಾಕ್ಷಿ ಬಾಗಡೆಗೆ ಎಚ್.ಕೆ. ಪಾಟೀಲ ಅಭಿನಂದನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಂಜರಭಾಟ ಸಮುದಾಯದ ಸಾಕ್ಷಿ ಮಂಜುನಾಥ್ ಬಾಗಡೆ ಶಾಲಾ ಕ್ರೀಡಾಕೂಟದ ಏರ್ ರೈಫಲ್ ಶೂಟಿಂಗ್‌ನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಸಾಧಕಿ ಸಾಕ್ಷಿ ಮಂಜುನಾಥ ಬಾಗಡೆ ಇವಳಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿನಂದಿಸಿ ರಾಷ್ಟ್ರಮಟ್ಟದಲ್ಲಿ ಜಯಶಾಲಿಯಾಗಿ ಗದಗ ಜಿಲ್ಲೆಗೆ ಕೀರ್ತಿ ತರುವಂತೆ ಶುಭ ಹಾರೈಸಿದರು.

ಸಾಧಕಿ ಸಾಕ್ಷಿ ಮಂಜುನಾಥ್ ಬಾಗಡೆ ಇವಳಿಗೆ ಗದಗ ಜಿಲ್ಲಾ ಯುವ ಕಾಂಗ್ರೆಸ್‌ನ ಕೃಷ್ಣಗೌಡ ಪಾಟೀಲ, ಸುರೇಶ್ ಕಟ್ಟಿಮನಿ, ಮೋಹನ್ ಕಟ್ಟಿಮನಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೆರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವೀಂದ್ರ ಎಸ್ ಹಾಗೂ ಎನ್.ಆರ್. ನಿಡಗುಂದಿ, ಜೆ.ಬಿ. ಅಣ್ಣಿಗೇರಿ ರಾಜಪ್ಪ, ದೈಹಿಕ ಶಿಕ್ಷಕ ಥಾಮಸ್, ಶಾಲಾ ಸಿಬ್ಬಂದಿಗಳು ಹಾಗೂ ತರಬೇತಿದಾರರ ಬಸವರಾಜ ಹೊಂಬಾಳಿ, ಡಾ. ಅನಿಲ ತಮ್ಮನ್ನವರ ಹರಣಶಿಕಾರಿ ಸಮುದಾಯದ ಎಲ್ಲ ಮುಖಂಡರು ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ವೀರಾಪುರ್, ವೈ.ಜಿ. ಗಡಾದ, ಅಶೋಕ ಬಾಗಡೆ, ಮನೋಜ್, ದೀಪಕ, ಗಣೇಶ್, ರಮೇಶ್, ಸಂಜೀವ, ವಿನೋದ, ಮಹೇಶ್, ಲಖನ, ಬಾದಲ್, ಕಿರಣ್, ವಿಶ್ವಾಸ, ಮಹೇಶ್ ಪಿ.ಎನ್, ರವಿ ಕಟ್ಟಿಮನಿ, ಸುರೇಶ್ ನವಲೇಕರ್, ರೋಹಿತ್, ಮುಖೇಶ, ರಾಕೇಶ್, ಕುಶಾಲ್, ಸಂತೋಷ್, ಸಚಿನ್, ರಾಹುಲ್, ಕರಣ, ಕಾರ್ತಿಕ್, ರಾಧಾ, ರೋಹಿತ್ ವಿ, ಅರ್ಚನಾ ಬಾಗಡೆ, ತನುಷ, ಅವಿರ, ನಿಹಾಲ್ ಮುಂತಾದವರಿದ್ದರು.

ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವೈಕುಂಠ ಏಕಾದಶಿಯ ದಿನದಂದು ಪಟ್ಟಣದ ಸವಣೂರ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಆಚರಣೆ-ಸಂಪ್ರದಾಯಗಳು ನೆರವೇರಿದವು.

ಪಟ್ಟಣದ ದಿ. ವೆಂಕಪ್ಪ ಅಗಡಿ ಕುಟುಂಬದಿಂದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಮಾದರಿಯಲ್ಲಿಯೇ ನಿರ್ಮಿತವಾದ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಶ್ರೀ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ಸಂಗೀತ ಕಾರ್ಯಕ್ರಮ, ವೆಂಕಟೇಶ್ವರ ಮೂರ್ತಿಯ ಪಲ್ಲಕ್ಕಿ ಉತ್ಸವ, ಪ್ರಸಾದ ಸೇವೆ ನೆರವೇರಿತು.

ವೈಕುಂಠ ಏಕಾದಶಿಯಂದು ವೈಷ್ಣವ ರೂಪದ ಶ್ರೀ ವೆಂಕಟೇಶ್ವರನ ದರ್ಶನ, ಉಪವಾಸ ವೃತಾಚರಣೆ ಮಾಡುವುದರಿಂದ ಕಷ್ಟ ಕಾರ್ಪಣ್ಯಗಳು ಕಳೆದು ನೆಮ್ಮದಿ, ಶಾಂತಿ, ಪುಣ್ಯ, ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ದರ್ಶನಾಶೀರ್ವಾದ ಪಡೆದರು ಎಂದು ದೇವಸ್ಥಾನದ ಡಾ. ಅರುಣಕುಮಾರ ಜೋಶಿ ಹೇಳಿದರು.

ಭಾವಸಾರ ಕ್ಷತ್ರಿಯ ಸಮಾಜದಿಂದ ಭಗವದ್ಗೀತಾ 9 ಮತ್ತು 12ನೇ ಅಧ್ಯಾಯ ಪಾರಾಯಣ ನೆರವೇರಿತು. 2012ರಲ್ಲಿ ತಮಿಳುನಾಡಿನ ಉತ್ಕೃಷ್ಟ ಶಿಲೆಗಳಿಂದ ನಿರ್ಮಾಣಗೊಂಡ ಈ ಬೃಹತ್ ದೇವಸ್ಥಾನದ ಸುತ್ತಲೂ ಇರುವ ಶ್ರೀದೇವಿ, ಭೂದೇವಿ, ಗಣಪತಿ, ಮೈಲಾರಲಿಂಗೇಶ್ವರ, ನಾಗದೇವತೆಗಳ ಮಂಟಪಗಳಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜಾ ಅಲಂಕಾರ ನೆರವೇರಿಸಲಾಗಿತ್ತು.

ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಸೇರಿ ಆಡಳಿತ ಮಂಡಳಿ, ವ್ಯವಸ್ಥಾಪಕ ರಮೇಶ ಬಾವಿಕಟ್ಟಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕ್ರಮ: ಚಂದ್ರಶೇಖರ ಕಂದಕೂರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಜನವರಿ 7ರಿಂದ 17ರವರೆಗೆ ವಿಶೇಷ ಕರವಸೂಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳು ಈ ಅಭಿಯಾನದಲ್ಲಿ ಭಾಗವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಕರವಸೂಲಿ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಕರವಸೂಲಾತಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಹೆಚ್ಚಿನ ಪ್ರಮಾಣದ ತೆರಿಗೆ ವಸೂಲಿ ಮಾಡುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪಕಾರ್ಯದರ್ಶಿಗಳು ಸೂಚಿಸಿದ ಪ್ರಯುಕ್ತ ಜನವರಿ 7ರಿಂದ 17ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿ.ದ.ಲೆ. ಸಹಾಯಕರು, ಕರವಸೂಲಿಗಾರರು, ಗಣಕಯಂತ್ರ ನಿರ್ವಾಹಕರು, ವಾಟರ್ ಮ್ಯಾನ್‌ಗಳು, ಸಿಪಾಯಿಗಳು ಸೇರಿ ಇತರೆ ಗ್ರಾ.ಪಂ ಸಿಬ್ಬಂದಿಗಳು ತಂಡವಾಗಿ ಕಾರ್ಯ ನಿರ್ವಹಿಸಿ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡುವ ಮೂಲಕ ಸದರಿ ಕರವಸೂಲಾತಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಕರವಸೂಲಿ ಅಭಿಯಾನದಲ್ಲಿ ಆಯಾ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸಹಾಯ ಪಡೆದು ಸಾರ್ವಜನಿಕರ ಸಹಕಾರದೊಂದಿಗೆ ಎಲ್ಲಾ ಸಿಬ್ಬಂದಿಗಳನ್ನು ಒಗ್ಗೂಡಿಸಿಕೊಂಡು ಕರವಸೂಲಾತಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.

ಕಳೆದ 3 ವರ್ಷಗಳಿಂದ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿಗಳ ಮಾಲೀಕರಿಗೆ ನೋಟೀಸ್ ನೀಡುವುದು ಮತ್ತು ಸದರಿ ದಿನದಂದು ಬಾಕಿಯಿರುವ ಎಲ್ಲ ತೆರಿಗೆಗಳನ್ನು ವಸೂಲಿ ಮಾಡುವುದು. ಸದರಿ ಮಾಹಿತಿಯು ಪಂಚತಂತ್ರ 2.0 ತಂತ್ರಾಂಶದಲ್ಲಿ ಲಭ್ಯವಿದ್ದು, ಪಟ್ಟಿಯನ್ನು ಪಡೆದುಕೊಂಡು ಸಂಬಂಧಿಸಿದವರಿಗೆ ನೊಟೀಸ್ ಜಾರಿ ಮಾಡಿ ಜನವರಿ 17ರೊಳಗೆ ಕರವಸೂಲಿ ಮಾಡಿಸಬೇಕು ಎಂದು ತಿಳಿಸಿದರು.

ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಅತೀ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಟ 200 ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ತಗಾದೆ ನೋಟಿಸ್ ನೀಡಿ, ಅಭಿಯಾನದ ದಿನದಂದು ಸಂಪೂರ್ಣ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು. ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರಿಗೆ ನೋಟೀಸ್ ನೀಡಿ ಶೇ. 100ರಷ್ಟು ಬಾಕಿ ವಸೂಲಿ ಮಾಡಬೇಕು ಎಂದು ಸೂಚಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛ ವಾಹಿನಿ ಮತ್ತು ಡಂಗೂರ ಸಾರುವ ಮೂಲಕ ಅಭಿಯಾನದ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಪ್ರಚಾರ ನೀಡುವುದು. ಸದರಿ ಅಭಿಯಾನದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡು ಆಯಾ ವಾರ್ಡ್ವಾರು ಸಾರ್ವಜನಿಕರ ಮನವೊಲಿಸಿ ತೆರಿಗೆ ವಸೂಲಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎರಡನೇ ಶನಿವಾರ ಮತ್ತು ಬಾನುವಾರ ರಜೆ ಮಾಡದೇ ಕರವಸೂಲಿ ಮಾಡಬೇಕು. ಜನವರಿ 15 (ಮಕರ ಸಂಕ್ರಾಂತಿ) ದಿನದಂದು ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ತೆರಿಗೆ ವಸೂಲಿ ಪ್ರಮಾಣ ಕಡಿಮೆ ಇರುವ ಕಾರಣ ಜನವರಿ 7ರಿಂದ 17ರವರೆಗೂ ತಾಲೂಕಿನ 13 ಗ್ರಾ.ಪಂಗಳಲ್ಲಿ ವಿಶೇಷ ಕರವಸೂಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ತೆರಿಗೆ ವಸೂಲಿ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಅಭಿಯಾನದ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿಗಳು ರಜೆ ಪಡೆಯುವಂತಿಲ್ಲ. ಅನಧಿಕೃತವಾಗಿ ಗೈರು ಹಾಜರಾದ ಅಧಿಕಾರಿಗಳು /ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

  • ಚಂದ್ರಶೇಖರ ಕಂದಕೂರ,
    ತಾ.ಪಂ ಇ.ಓ, ಗಜೇಂದ್ರಗಡ.

ಮರಣಾನಂತರವೂ ಮಾನವೀಯತೆ: ಶಿವರುದ್ರಪ್ಪ ಕಳಸಾಪೂರರಿಂದ ನೇತ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ನಿವಾಸಿ, ಗಣ್ಯರಾದ ಶಿವರುದ್ರಪ್ಪ ಎಸ್.ಕಳಸಾಪೂರ (72) ಅವರು ಗುರುವಾರ ಮಧ್ಯಾಹ್ನ ನಿಧನರಾದರು. ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಳಗವನ್ನು ಬಿಟ್ಟು ಅಗಲಿದ್ದಾರೆ.

ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತರ ನೇತ್ರದಾನಕ್ಕೆ ಪ್ರೇರಣೆ ನೀಡಿದರು. ಕುಟುಂಬದವರ ಒಪ್ಪಿಗೆಯ ಮೇರೆಗೆ ಹುಬ್ಬಳ್ಳಿ ಕಣ್ಣಿನ ಆಸ್ಪತ್ರೆಯ ತಜ್ಞರ ತಂಡವು ನೇತ್ರದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಪ್ರಶಾಂತ ಅಳಗುಂದಿ, ಡಾ. ಗುರುಪ್ರಸಾದ, ಡಾ. ಶ್ವೇತಾ ಸಂಕನೂರ ಮುಂತಾದವರಿದ್ದರು.

ವ್ಯಕ್ತಿಯ ನಿಧನದ ಬಳಿಕ ಕುಟುಂಬದವರು ಮೃತ ವ್ಯಕ್ತಿಯ ನೇತ್ರಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ದೃಷ್ಟಿ ಬರುವಂತಾಗಲು ಮಾನವೀಯ ಕಾರ್ಯಕ್ಕೆ ಮುಂದಾಗಬೇಕೆಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಹಾತ್ಮರ ಜೀವನ ಚರಿತ್ರೆಯನ್ನು ಅರಿಯಿರಿ: ಶ್ರೀ ಚನ್ನವೀರಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಂತರು, ಶರಣರು, ಮಹಾತ್ಮರ ಜೀವನ ಚರಿತ್ರೆ ಬದುಕಿಗೆ ದಾರಿದೀಪವಾಗಿದ್ದು, ಅವರ ಜೀವನ ವೃತ್ತಾಂತಗಳ ಪುರಾಣ-ಪ್ರವಚನಗಳನ್ನು ಶ್ರವಣ ಮಾಡುವ ಮೂಲಕ ಮನಸ್ಸಿನ ದುಃಖ-ದುಮ್ಮಾನಗಳು ಕಳೆದು ಮನಃಶಾಂತಿ, ನಿರ್ಮಲ ಶುದ್ಧ-ಪ್ರಸನ್ನಚಿತ್ತ ಮನಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರಮಹಾಸ್ವಾಮಿಗಳು ಹೇಳಿದರು.

ಅವರು ಗುರುವಾರ ಶ್ರೀಮಠದ 47ನೇ ಜಾತ್ರಾ ಮಹೋತ್ಸವ ಮತ್ತು ಲಿಂ. ನಿರಂಜನ ಶ್ರೀಗಳ ಪುಣ್ಯಾರಾಧನೆ ಅಂಗವಾಗಿ ಶ್ರೀ ಕೊಟ್ಟೂರು ಬಸವೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂತರ, ಶರಣರ, ಮಹಾತ್ಮರ ಚಿಂತನ-ಮಂಥನಗಳ ಸತ್ಸಂಗ ಕಾರ್ಯಕ್ರಮಗಳು ಜನರ ಮನಸ್ಸನ್ನು ಕಟ್ಟಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿವೆ. ಅಂತರಂಗದಲ್ಲಿ ಪ್ರೀತಿ, ದಯೆ, ಕರುಣೆ, ದಾನ, ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳು ಒಡಮೂಡಲು ಮಹಾತ್ಮರ ಜೀವನ ಚರಿತ್ರೆಯನ್ನು ಅರಿಯಬೇಕು. ಶ್ರೇಷ್ಠರಾದ ಮುಳುಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತ್ರೆ ಸನ್ಮಾರ್ಗದ ದೀವಿಗೆಯಾಗಿದ್ದು, ಈ ಪುರಾಣ ಕಾರ್ಯದಲ್ಲಿ ಪಾಲ್ಗೊಂಡು ಕೆಲ ತತ್ವ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜ. 1ರಿಂದ ಪ್ರಾರಂಭಗೊಂಡಿರುವ ಪುರಾಣ ಪ್ರವಚನ ಕಾರ್ಯಕ್ರಮ ಜ. 13ರವರೆಗೆ ನಿತ್ಯ ಸಂಜೆ ಶ್ರೀಮಠದಲ್ಲಿ ನೆರವೇರಲಿದೆ. ಪ್ರವಚನಕಾರರಾಗಿ ರಾಚಯ್ಯ ಶಾಸ್ತಿಗಳು ಹಿರೇಮಠ, ನಿಂಗಯ್ಯ ಸ್ವಾಮಿ ಹಿರೇಮಠ ಮತ್ತು ಶಿವಕುಮಾರ ಸಂಗೀತ ಸೇವೆ ನೀಡುವರು. ಪುರಾಣ ಕಾರ್ಯಕ್ರಮದಲ್ಲಿ ಹೂವಿನಶಿಗ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮವ್ವ ಗಡ್ಡೆಣ್ಣವರ, ಉಪಾಧ್ಯಕ್ಷೆ ಚೈತ್ರಾ ಅತ್ತಿಗೇರಿ ಸೇರಿ ಸರ್ವ ಸದಸ್ಯರು, ಮಾಂತೇಶ ಹುಲ್ಲೂರ, ಶ್ರೀಮಠದ ಭಕ್ತರು ಇದ್ದರು.

ಮದ್ಯದ ನಶೆಯಲ್ಲಿ ಅಪ್ರಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್​ ಸೇರಿ ಇಬ್ಬರು ಅರೆಸ್ಟ್

0

ರಾಮನಗರ: ಕುಡಿದ ಮತ್ತಿನಲ್ಲಿ ಅಪ್ರಾಪ್ತೆಯ ಅಪಹರಣಕ್ಕೆ ಯತ್ನಿಸಿ ಆಕೆಯೊಂದಿಗೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಯೂಟ್ಯೂಬರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಂಬಂಧಿಕರ ಮನೆಯಲ್ಲಿ ಹೊಸ ವರ್ಷ ಆಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯ ಅಪಹರಣಕ್ಕೆ ಆರೋಪಿಗಳು ಯತ್ನಿಸಿದ್ದು, ಈ ವೇಳೆ ಕುಟುಂಬಸ್ಥರೇ ಆಕೆಯ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ವಿವರ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾಗಡಿ ಪಟ್ಟಣದ ವೆಂಕಟೇಶ್ ಎಂಬಾತ ತನ್ನ ಫಾರ್ಮ್ ಹೌಸ್‌ನಲ್ಲಿ ಯಾವುದೇ ಅನುಮತಿ ಇಲ್ಲದೆ ನ್ಯೂ ಇಯರ್ ಪಾರ್ಟಿ ಆಯೋಜಿಸಿದ್ದ. ಈ ಪಾರ್ಟಿಯಲ್ಲಿ ಪ್ರಖ್ಯಾತ ಯೂಟ್ಯೂಬರ್‌ಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ವೇಳೆ ತುಮಕೂರು ಜಿಲ್ಲೆಯ ಶಿರಾ ಮೂಲದ ರವಿಚಂದ್ರ ಎಂಬ ಯೂಟ್ಯೂಬರ್, ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನು ತಡೆದು ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಮಗಳು ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದು, ಈ ನಡುವೆ ಸಂತ್ರಸ್ತೆ ಸಹೋದರನಿಗೆ ಕರೆ ಮಾಡಿದ್ದಾಳೆ. ಆರೋಪಿಯ ಮೊಬೈಲ್‌ನಿಂದಲೇ ಕರೆ ಬಂದಿರುವುದು ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಯಿತು.

ಕೂಡಲೇ ಅಲರ್ಟ್ ಆದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಾರನ್ನು ಪತ್ತೆ ಮಾಡಿ ಅಡ್ಡಗಟ್ಟಿ ಬಾಲಕಿಯನ್ನು ರಕ್ಷಿಸಿದ್ದು, ಆಕ್ರೋಶದಿಂದ ಕಾರನ್ನು ಜಖಂಗೊಳಿಸಿದ್ದಾರೆ. ಪ್ರಕರಣ ಸಂಬಂಧ ಪಾರ್ಟಿ ಆಯೋಜಕ ವೆಂಕಟೇಶ್ ಹಾಗೂ ಯೂಟ್ಯೂಬರ್ ರವಿಚಂದ್ರನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.

ಪಾರ್ಟಿಯಲ್ಲಿ ಭಾಗವಹಿಸಿ ನಂತರ ನಾಪತ್ತೆಯಾಗಿದ್ದ ಮಂಡ್ಯ ಮೂಲದ ಯೂಟ್ಯೂಬರ್‌ಗಳಾದ ಕೆಂಪ ಮತ್ತು ಕಬ್ಜ ಶರಣ ಬಳಿಕ ಪೊಲೀಸ್ ಠಾಣೆಗೆ ಬಂದಿದ್ದು, ಆಕ್ರೋಶಗೊಂಡ ಸ್ಥಳೀಯರು ಇವರಿಬ್ಬರಿಗೂ ಧರ್ಮದೇಟು ನೀಡಿದ್ದಾರೆ. ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಬಡವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಿ: ಅಧಿಕಾರಿಗಳಿಗೆ ಸಿಎಂ ಕಿವಿಮಾತು

0

ಬೆಂಗಳೂರು: ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದ ಸಭಾಂಗಣದಲ್ಲಿ ಕೆಎಎಸ್ ಅಧಿಕಾರಿಗಳ ಸಂಘದ ಕ್ಯಾಲೆಂಡರ್ ಮತ್ತು ದಿನಚರಿಯನ್ನು ಬಿಡುಗಡೆಗೊಳಿಸಿ, ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿನ ಬಡವರು, ದಲಿತರು, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ವಿಶೇಷ ಕಾಳಜಿಯಿಂದ ಹಾಗೂ ಹೊಸ ಉತ್ಸಾಹದಿಂದ ಎಲ್ಲರೂ ಕಾರ್ಯ ನಿರ್ವಹಿಸಬೇಕೆಂದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲೆ ನಿಂತಿದೆ. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಬೇಕಿದೆ. ಇಲ್ಲವಾದಲ್ಲಿ ಅಸಮಾನತೆ ಹೋಗಲು ಸಾಧ್ಯವಿಲ್ಲ, ಅಂತೆಯೇ ಅಸಮಾನತೆ ತೊಲಗದೇ, ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವುವೂ ಅಸಾಧ್ಯ ಎಂದು ಹೇಳಿದ್ದನ್ನು ತಿಳಿಸಿದರು.

ಸಮಸಮಾಜಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಅಗತ್ಯ
ಎಲ್ಲರಿಗೂ ಸಮಾನ ಅವಕಾಶ ದೊರೆತು, ಸಮಾಜದ ಮುಖ್ಯವಾಹಿನಿಗೆ ಬರುವಂತಾದಗ ಮಾತ್ರರೆ ಮಾತ್ರ ಸಮಾನತೆ ಬರಲು ಸಾಧ್ಯ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದೆ. ಜಾತಿ ಮತ್ತು ವರ್ಗ ವ್ಯವಸ್ಥೆ ಅಳಿಯಬೇಕಾದರೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಲೇಬೇಕು ಎಂದರು.

ಸ್ವಜಾತಿ ಪಕ್ಷಪಾತ ಬೇಡ- ಅಧಿಕಾರಿಗಳಿಗೆ ಸಿಎಂ ಸೂಚನೆ
ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇನ್ನೂ ಜಾತಿ ವ್ಯವಸ್ಥೇ ನಿರ್ಮೂಲನೆಯಾಗಿಲ್ಲ. ಎಲ್ಲಾ ಅಧಿಕಾರಿಗಳು ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ದೃಷ್ಟಿಕೋನ ಜಾತ್ಯಾತೀತವಾಗಿರಬೇಕು. ಯಾವುದೇ ಕಾರಣಕ್ಕೂ ಸ್ವಜಾತಿ ಪಕ್ಷಪಾತ ಮಾಡಬಾರದು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕು
ಬಡವರ ಒಳಿತಿಗೆ ಕರ್ತವ್ಯ ನಿರ್ವಹಿಸುವಾಗ, ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕಲ್ಲದೇ, ವ್ಯವಸ್ಥೆಯನ್ನು ಸರಿ ಮಾಡುವ ಪ್ರಯತ್ನವನ್ನು ಮಾಡಬೇಕು. ತಹಶೀಲ್ದಾರ್, ಸಹಾಯಕ ಆಯುಕ್ತರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.ಬಡವರ ಬಗ್ಗೆ ಕರುಣೆಯಲ್ಲ, ಸಂವಿಧಾನ ಅವರಿಗೆ ನೀಡಿರುವ ಅವರ ಹಕ್ಕುಗಳ ರಕ್ಷಣೆ ಮಾಡುವ ಪ್ರಯತ್ನ ಮಾಡಬೇಕು ಎಂದರು.

IPL ವಿವಾದ ನಡುವೆಯೇ BCCI ಅಚ್ಚರಿ ನಿರ್ಧಾರ: 6 ಪಂದ್ಯಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ

0

ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್‌ಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿರುವ ನಡುವೆಯೇ, ಬಿಸಿಸಿಐ (BCCI) ಅಚ್ಚರಿಯ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತ ತಂಡವು ಏಕದಿನ ಹಾಗೂ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.

ಈ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇಂದು ಅಧಿಕೃತವಾಗಿ ಪ್ರಕಟಿಸಿದೆ. ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿರುವುದನ್ನು ಗಮನಿಸಿ ಪ್ರವಾಸಕ್ಕೆ ಮರುಅನುಮೋದನೆ ನೀಡಲಾಗಿದೆ.

ವೇಳಾಪಟ್ಟಿಯ ಪ್ರಕಾರ, ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯೊಂದಿಗೆ ಆರಂಭವಾಗಿ ಟಿ20 ಸರಣಿಯೊಂದಿಗೆ ಅಂತ್ಯಗೊಳ್ಳಲಿದೆ. ಉಭಯ ತಂಡಗಳು ಸೆಪ್ಟೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಲಿವೆ.

ಸರಣಿ ವೇಳಾಪಟ್ಟಿ

ಏಕದಿನ ಸರಣಿ:
▪️ ಮೊದಲ ಪಂದ್ಯ – ಸೆಪ್ಟೆಂಬರ್ 1
▪️ ಎರಡನೇ ಪಂದ್ಯ – ಸೆಪ್ಟೆಂಬರ್ 3
▪️ ಮೂರನೇ ಪಂದ್ಯ – ಸೆಪ್ಟೆಂಬರ್ 6

ಟಿ20 ಸರಣಿ:
▪️ ಮೊದಲ ಪಂದ್ಯ – ಸೆಪ್ಟೆಂಬರ್ 9
▪️ ಎರಡನೇ ಪಂದ್ಯ – ಸೆಪ್ಟೆಂಬರ್ 12
▪️ ಮೂರನೇ ಪಂದ್ಯ – ಸೆಪ್ಟೆಂಬರ್ 13

ಭಾರತ ತಂಡವು ಕೊನೆಯ ಬಾರಿ 2022–23ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು. ಆ ವೇಳೆ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೂ, ಬಾಂಗ್ಲಾದೇಶ ನೆಲದಲ್ಲಿ ಭಾರತ ಉತ್ತಮ ದಾಖಲೆಯನ್ನು ಹೊಂದಿದ್ದು, 25 ಪಂದ್ಯಗಳಲ್ಲಿ 18 ಗೆಲುವು ಸಾಧಿಸಿದೆ.

ಕೊಲೆ ಪ್ರಕರಣ ದಾಖಲಿಸಿ ಶಾಸಕರನ್ನು ಕೂಡಲೇ ಬಂಧಿಸಿ: ಆರ್.ಅಶೋಕ್ ಒತ್ತಾಯ

0

ಬೆಂಗಳೂರು: ಬಳ್ಳಾರಿಯಲ್ಲಿ ಗುಂಡು ಹಾರಿಸಿ ಒಬ್ಬರು ಮೃತಪಟ್ಟ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ಆ ಶಾಸಕರನ್ನು ಕೂಡಲೇ ಬಂಧಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಮಧ್ಯಾಹ್ನ ನೃಪತುಂಗ ರಸ್ತೆಯಲ್ಲಿರುವ ಪೆÇಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದರು. ಬಳಿಕ ಆರ್. ಅಶೋಕ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಗೊತ್ತಿಲ್ಲದೇ ಗುಂಡು ಹಾರಿದೆ; ಗೊತ್ತಿಲ್ಲದೇ ಸತ್ತಿದ್ದಾರೆ ಎಂದು ನಾಳೆ ಹೇಳಬಹುದು ಎಂದು ತಿಳಿಸಿದರು. ಇವರು ನಾಳೆ ಏನು ಹೇಳಬಹುದೆಂದು ಇವತ್ತೇ ಹೇಳಿದ್ದೇನೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು.
ಅವರು ಜನಾರ್ದನ ರೆಡ್ಡಿ ಮನೆ ಕಾಂಪೌಂಡಿಗೆ ಹೋಗಿ ಹೇಗೆ ಬ್ಯಾನರ್ ಕಟ್ಟಿದರು? ನಾವು ಪೊಲೀಸ್ ದೂರು ಕೊಟ್ಟಿದ್ದೇವೆ. ಆದರೂ ಎಫ್‍ಐಆರ್ ಆಗಿಲ್ಲ. ಅವರು ಕೊಟ್ಟ ದೂರಿಗೆ ಸಂಬಂಧಿಸಿ ಪಟಾಪಟ್ ಎಫ್‍ಐಆರ್ ಮಾಡಿದ್ದಾರೆ ಎಂದು ಟೀಕಿಸಿದರು.

ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಈ ನಿಯೋಗದಲ್ಲಿ ವಿಧಾನ ಪರಿಷತ್ತಿನ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕರಾದ ಸಿ.ಸಿ. ಪಾಟೀಲ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ತಿನ ಸದಸ್ಯ ಕೇಶವ ಪ್ರಸಾದ್, ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಸಪ್ತಗಿರಿ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಉಪಸ್ಥಿತರಿದ್ದರು

ಗೋವಾದಲ್ಲಿ ದುಡಿದ ಹಣದಲ್ಲಿ ಬೆಳೆದಿದ್ದ ಮೆಕ್ಕೆಜೋಳ ದುಷ್ಕರ್ಮಿಗಳ ಕೃತ್ಯಕ್ಕೆ ಭಸ್ಮ! ಮುಂಡರಗಿ ತಾಲೂಕಿನಲ್ಲಿ ಮನಕಲಕುವ ಘಟನೆ..!

0

ಗದಗ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ರೈತ ಕುಟುಂಬದ ಬದುಕು ಬೆಂಕಿಗೆ ಆಹುತಿಯಾದ ಮನಕಲಕುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಡಿಸೇಲ್ ಮತ್ತು ಪೆಟ್ರೋಲ್ ಸುರಿದು ಮೆಕ್ಕೆಜೋಳಕ್ಕೆ ರಾಶಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 60 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಅತ್ತಿಕಟ್ಟಿ ಗ್ರಾಮದ ಗಣೇಶ ಮತ್ತು ಗೋಪಿ ಚವ್ಹಾಣ ಸಹೋದರರು ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಗ್ರಾಮ ಹೊರವಲಯದಲ್ಲಿ ರಾಶಿ ಮಾಡಿ ಇಟ್ಟಿದ್ದರು. ಆದರೆ ರಾತ್ರೋರಾತ್ರಿ ನಾಲ್ವರು ದುಷ್ಕರ್ಮಿಗಳು ಬಂದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ, ಅಷ್ಟರಲ್ಲಿ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಗೆ ಆಹುತಿಯಾದ ಬೆಳೆ ನೋಡಿದ ರೈತ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಮಕ್ಕಳ ಸಮೇತ ಮೆಕ್ಕೆಜೋಳದ ರಾಶಿಯಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ತಕ್ಷಣವೇ ರೈತ ಕುಟುಂಬವನ್ನು ರಕ್ಷಿಸಿದ್ದಾರೆ.

ಸುಮಾರು 25 ರಿಂದ 30 ಲಕ್ಷ ರೂ. ಸಾಲ ಮಾಡಿಕೊಂಡು, ಗೋವಾದಲ್ಲಿ ದುಡಿದು ಹಣ ಸಂಗ್ರಹಿಸಿ ಈ ಬೆಳೆ ಬೆಳೆದಿದ್ದ ಸಹೋದರರ ಕನಸುಗಳು ಕ್ಷಣಾರ್ಧದಲ್ಲಿ ಭಸ್ಮವಾಗಿವೆ. ಘಟನೆಗೆ ಗ್ರಾಮಸ್ಥರು ಕಣ್ಣೀರಿಟ್ಟಿದ್ದು, ದುಷ್ಕರ್ಮಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ ಎರ್ರೀಸ್ವಾಮಿ ಹಾಗೂ ಪೊಲೀಸರು ಹಾಗೂ SOCO ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

error: Content is protected !!