Home Blog Page 232

ದಡ ಸೇರಿಸಿದ ಅಂಬಿಗನನ್ನೇ ಮರೆತ ರಶ್ಮಿಕಾ? 9 ವರ್ಷಗಳ ಸಂಭ್ರಮದಲ್ಲಿ ‘ಕಿರಿಕ್ ಪಾರ್ಟಿ’ಗೂ ಜಾಗ ಇಲ್ಲ!

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕೆಲವೇ ದಿನಗಳಲ್ಲಿ ಸ್ಟಾರ್ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಸಿನಿ ಬದುಕಿಗೆ 9 ವರ್ಷಗಳು ಪೂರೈಸಿದ್ದಾರೆ. ಈ ಸಾಧನೆಯನ್ನು ಸಂಭ್ರಮಿಸುತ್ತಾ ಅವರು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಆ ಪತ್ರವೇ ಈಗ ವಿವಾದಕ್ಕೆ ಕಾರಣವಾಗಿದೆ.

ಒಂಭತ್ತು ವರ್ಷಗಳ ಸಿನಿ ಪಯಣದಲ್ಲಿ 26 ಸಿನಿಮಾಗಳಲ್ಲಿ ನಟಿಸಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ತಮ್ಮ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ಎಂಬ ಹೆಸರನ್ನೇ ಅವರು ಉಲ್ಲೇಖಿಸಿಲ್ಲ. ಅವಕಾಶ ಕೊಟ್ಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರನ್ನೂ ನೆನೆಸದೆ ಹೋದದ್ದು ಕನ್ನಡ ಸಿನಿ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.

ರಶ್ಮಿಕಾರ ಈ ವರಸೆ ಹೊಸದಲ್ಲ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಆದರೂ ಈ ವಿಶೇಷ ಸಂದರ್ಭದಲ್ಲಾದರೂ ಹತ್ತಿದ ಏಣಿಯನ್ನು ನೆನೆಯಬಹುದಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ದಡ ಸೇರಿಸಿದ ಅಂಬಿಗನನ್ನೇ ಮರೆತಂತೆ ಮೊದಲ ಚಿತ್ರದ ನೆನಪಿಲ್ಲದಿರುವುದು ಮತ್ತೆ ಟೀಕೆಗೆ ದಾರಿ ಮಾಡಿಕೊಟ್ಟಿದೆ.

ಈ ನಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಭಿಮಾನಿಗಳು ರಶ್ಮಿಕಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, “ಕನ್ನಡದಿಂದ ಬೆಳೆದು ಹೊರಗಿನ ಭಾಷೆಗಳಲ್ಲಿ ಹೆಸರು ಮಾಡಿದ ಬಳಿಕ ಕನ್ನಡವನ್ನೇ ಮರೆತಿದ್ದಾರೆ” ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. 9 ವರ್ಷದ ಸಂಭ್ರಮವೇ ಇದೀಗ ರಶ್ಮಿಕಾಗೆ ಮುಜುಗರವಾಗಿ ಪರಿಣಮಿಸಿದೆ.

ಮದುವೆ ಸಂಭ್ರಮದ ನಡುವೆ ಬಿಗ್ ನ್ಯೂಸ್: ವಿಜಯ್–ರಶ್ಮಿಕಾ ಸಿನಿಮಾ ಹಿಂದಿಗೆ ರಿಮೇಕ್

ಸೌತ್ ಸಿನಿರಂಗದ ಫೇವರಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದ ಸಿನಿಮಾ ಇದೀಗ ಬಾಲಿವುಡ್‌ನಲ್ಲಿ ಮರುಹುಟ್ಟು ಪಡೆಯಲು ಸಜ್ಜಾಗಿದೆ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕರಣ್ ಜೋಹರ್ ಈ ಚಿತ್ರವನ್ನು ಹಿಂದಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಆರು ವರ್ಷಗಳ ಬಳಿಕ ಈ ರಿಮೇಕ್ ಪ್ರಕ್ರಿಯೆ ಆರಂಭವಾಗಿದೆ.

‘ಗೀತಾ ಗೋವಿಂದಂ’ ಚಿತ್ರದ ಭರ್ಜರಿ ಯಶಸ್ಸಿನಿಂದ ವಿಜಯ್–ರಶ್ಮಿಕಾ ಜೋಡಿ ಸೌತ್ ಇಂಡಸ್ಟ್ರಿಯಲ್ಲೇ ದೊಡ್ಡ ಫ್ಯಾನ್‌ಬೇಸ್ ಸಂಪಾದಿಸಿತ್ತು. ನಂತರ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ಒಟ್ಟಾಗಿ ನಟಿಸಿ ಮತ್ತೊಮ್ಮೆ ತಮ್ಮ ಜೋಡಿ ಮ್ಯಾಜಿಕ್ ತೋರಿಸಿದ್ದರು. ಈಗ ಅವರ ಸಿನಿಮಾ ಹಿಂದಿಗೆ ಬರುತ್ತಿರುವುದು, ಉತ್ತರ ಭಾರತದ ಪ್ರೇಕ್ಷಕರಿಗೂ ಈ ಕಥೆಯನ್ನು ಪರಿಚಯಿಸುವ ಅವಕಾಶ ಕಲ್ಪಿಸಿದೆ.

ಸಿನಿಮಾ ಸುದ್ದಿಯ ಜೊತೆಗೆ, ಈ ಜೋಡಿಯ ವೈಯಕ್ತಿಕ ಜೀವನವೂ ಸದ್ದು ಮಾಡುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಈ ವರ್ಷ ಫೆಬ್ರವರಿ 26ರಂದು ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮದುವೆ ತಯಾರಿಗಳ ನಡುವೆ, ಅವರ ಸಿನಿಮಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಲ್ಲಿ ಡಬಲ್ ಖುಷಿ ತಂದಿದೆ.

ಸೌತ್‌ನಿಂದ ಬಾಲಿವುಡ್‌ಗೆ ಸಾಗುತ್ತಿರುವ ಈ ರಿಮೇಕ್ ಸಿನಿಮಾ ಯಾವ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ವಿಜಯ್–ರಶ್ಮಿಕಾ ಜೋಡಿ ಹೆಸರು ಮತ್ತು ಕರಣ್ ಜೋಹರ್ ನಿರ್ಮಾಣದ ಬೆಂಬಲ, ಈ ಚಿತ್ರಕ್ಕೆ ಈಗಾಗಲೇ ಬಿಗ್ ಹೈಪ್ ಸೃಷ್ಟಿಸಿದೆ.

ಪ್ರಭಾಸ್ ಎಫೆಕ್ಟ್! ‘ದಿ ರಾಜಾ ಸಾಬ್’ ನಿರ್ದೇಶಕ ಮಾರುತಿಗೆ 18 ಕೋಟಿ ಸಂಭಾವನೆ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭಾರತೀಯ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ‘ಬಾಹುಬಲಿ’ ನಂತರ ಅವರ ಸಂಭಾವನೆ 100 ಕೋಟಿ ರೂಪಾಯಿ ದಾಟಿದ್ದು, ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಪ್ರಭಾಸ್ ಸಿನಿಮಾಗಳಿಂದ ಲಾಭವಾಗುತ್ತಿರುವುದು ನಟರಿಗೆ ಮಾತ್ರವಲ್ಲ, ನಿರ್ದೇಶಕರು ಹಾಗೂ ತಂತ್ರಜ್ಞರಿಗೂ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ನಿರ್ದೇಶಕ ಮಾರುತಿ ಅವರಿಗೆ ಸಿಕ್ಕಿರುವ ಸಂಭಾವನೆ ಇದೀಗ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾಗೆ ಮಾರುತಿ 18 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದು ಅನುಭವೀ ಸ್ಟಾರ್ ನಿರ್ದೇಶಕರಿಗೂ ಸಿಗದ ಮಟ್ಟದ ಮೊತ್ತ ಎನ್ನಲಾಗಿದೆ.

ಮಾರುತಿ ಇದುವರೆಗೂ ಸಾಧಾರಣ ಯಶಸ್ಸು ಕಂಡ ಕೆಲವು ಸಿನಿಮಾಗಳನ್ನು ಮಾತ್ರ ನಿರ್ದೇಶಿಸಿದ್ದಾರೆ. ದೊಡ್ಡ ಹಿಟ್, ಬಿಗ್ ಬಜೆಟ್ ಅಥವಾ ಟಾಪ್ ಸ್ಟಾರ್ ಸಿನಿಮಾಗಳ ಅನುಭವ ಇಲ್ಲದಿದ್ದರೂ, ಪ್ರಭಾಸ್ ಅವರು ಮಾರುತಿ ಹೇಳಿದ ಕಥೆಗೆ ಮಾರು ಹೋಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಎರಡು ವರ್ಷಕ್ಕೂ ಹೆಚ್ಚು ಕಾಲ್‌ಶೀಟ್ ನೀಡಿರುವುದು ಈ ನಂಬಿಕೆಯ ಸಾಕ್ಷಿ.

ಸಂದರ್ಶನವೊಂದರಲ್ಲಿ ಮಾತನಾಡಿದ ಮಾರುತಿ, ‘ಈ ಸಿನಿಮಾಗೆ ನನ್ನ ಜೀವನದ ಮೂರು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಆ ಮೂರು ವರ್ಷಗಳ ಶ್ರಮಕ್ಕೆ 18 ಕೋಟಿ ಸಂಭಾವನೆ ನೀಡಿದ್ದಾರೆ. ಇದಕ್ಕೆ ನೇರ ಕಾರಣ ಪ್ರಭಾಸ್ ಅವರೇ’ ಎಂದು ಹೇಳಿದ್ದಾರೆ. ಈ ಮೊತ್ತದಲ್ಲಿ ನಾಲ್ಕು ಅಥವಾ ಐದು ಸಣ್ಣ ಬಜೆಟ್ ಸಿನಿಮಾಗಳನ್ನು ನಿರ್ಮಿಸಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ.

ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಿಗೆ ಭಾರಿ ಸಂಭಾವನೆ ನೀಡುವ ಸಂಸ್ಕೃತಿ ಈಗಾಗಲೇ ಇದೆ. ರಾಜಮೌಳಿ ಅವರಿಗೆ ನಟರಿಗಿಂತಲೂ ಹೆಚ್ಚಿನ ಸಂಭಾವನೆ ಸಿಗುತ್ತಿದೆ. ‘ವಾರಣಾಸಿ’ ಸಿನಿಮಾಕ್ಕೆ ಬೋಯಪಾಟಿ ಶ್ರೀನು ಅವರಿಗೆ 10 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.

‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾಗಿದ್ದು, ಪ್ರಭಾಸ್ ಮೊದಲ ಬಾರಿಗೆ ಈ ಜಾನರ್‌ನಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಳವಿಕಾ ಮೋಹನನ್, ರಿಧಿ ಕುಮಾರ್ ಮತ್ತು ನಿಧಿ ಅಗರ್ವಾಲ್ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.

ಮರ್ಯಾದಾ ಹತ್ಯೆ ವಿರುದ್ಧ ಲಿಂಗಾಯತ ಸಂಘಟನೆಗಳ ಆತ್ಮಪರಿಶೀಲನೆ: ಗದಗದಲ್ಲಿ ‘ಪ್ರಾಯಶ್ಚಿತ ದಿನ’ ಆಚರಣೆ

0

ಗದಗ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಮರ್ಯಾದಾ ಹತ್ಯೆ ಪ್ರಕರಣವನ್ನು ಖಂಡಿಸಿ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ವಿವಿಧ ಲಿಂಗಾಯತ, ಪ್ರಗತಿಪರ, ಮಹಿಳಾ ಹಾಗೂ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ, ಈ ಘಟನೆಯನ್ನು ಲಿಂಗಾಯತ ಪರಂಪರೆಯ ಮೇಲಿನ ಕಳಂಕ ಎಂದು ಕರೆದವು. ಪ್ರತಿಭಟನೆಯಲ್ಲಿ ಡಿ.ಆರ್. ಪಾಟೀಲ್, ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ, ಸಮಾಜದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಹಿಂಸೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೆಳ ಜಾತಿಯ ಯುವಕನನ್ನು ಮದುವೆಯಾದ ಒಂದೇ ಕಾರಣಕ್ಕೆ ಗರ್ಭಿಣಿ ಮಾನ್ಯ ಪಾಟೀಲ್ ಅವರನ್ನು ಹತ್ಯೆ ಮಾಡಿರುವುದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಲಿಂಗಾಯತ ಧರ್ಮದಲ್ಲಿ ಜಾತಿಯೇ ಇಲ್ಲ ಎಂಬ ಬಸವ ತತ್ವವನ್ನು ಮರೆತ ಪರಿಣಾಮವೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಈಗಾಗಲೇ ಗೃಹ ಸಚಿವರು, ಶಾಸಕರು ಹಾಗೂ ಹಲವು ನಾಯಕರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಆದರೆ ಕೇವಲ ಸಾಂತ್ವಾನ ಸಾಲದು. ಮರ್ಯಾದಾ ಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ವಿಶೇಷ ಕಾನೂನು ರೂಪಿಸಿ ತಕ್ಷಣ ಜಾರಿಗೆ ತರಬೇಕು ಎಂದು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಯಿತು.

ಕಲಬುರಗಿ ಸೆಂಟ್ರಲ್ ಜೈಲಲ್ಲಿ ಕೈದಿಗಳ ‘ಬಿಂದಾಸ್ ಲೈಫ್’: ವಿಡಿಯೋ ವೈರಲ್ ಬೆನ್ನಲ್ಲೇ ನಾಲ್ವರು ವಿರುದ್ಧ ಎಫ್‌ಐಆರ್

0

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಜೈಲನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡು ಜೂಜಾಟ, ಸಿಗರೇಟ್ ಮತ್ತು ಡ್ರಿಂಕ್ಸ್ ಮಾಡಿರುವ shocking ಪ್ರಕರಣ ಹೊರಬಿದ್ದಿದೆ. ಕೈದಿಗಳ ‘ಬಿಂದಾಸ್ ಲೈಫ್’ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾಲ್ವರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಕೈದಿಗಳು ಇಸ್ಪೀಟ್ ಆಟ ಆಡುತ್ತಾ, ಸಿಗರೇಟ್ ಸೇದುತ್ತಾ ಮದ್ಯ ಸೇವಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿ ನಾಲ್ವರು ಕೈದಿಗಳು ಜೈಲು ನಿಯಮಗಳನ್ನು ಧಿಕ್ಕರಿಸಿರುವುದು ಸ್ಪಷ್ಟವಾಗಿದೆ.

ವೈರಲ್ ವಿಡಿಯೋ ಪ್ರಕರಣದ ಬೆನ್ನಲ್ಲೇ ಜೈಲು ಅಧೀಕ್ಷಕಿ ಅನೀತಾ ಫರ್ತಾಬಾದ್ ಅವರು ನಾಲ್ವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ತನಿಖೆಗೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕ ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.

ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿರುವ ಆನಂದ್ ರೆಡ್ಡಿ ಅವರು ಜೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದು, ಜೈಲು ಸಿಬ್ಬಂದಿಯ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ.

ಇನ್ನೂ ಪ್ರಕರಣದ ಗಂಭೀರತೆಯನ್ನು ಗಮನಿಸಿ ಜನವರಿ 3ರಂದು ಡಿಜಿಪಿ ಅಲೋಕ್ ಕುಮಾರ್ ಸ್ವತಃ ಕಲಬುರಗಿ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ. ಈ ಪ್ರಕರಣ ರಾಜ್ಯದ ಜೈಲು ವ್ಯವಸ್ಥೆಯ ಭದ್ರತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಗೋವಾಕ್ಕೆ ನ್ಯೂ ಇಯರ್ ಪಾರ್ಟಿಗೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು!

0

ಹಾಸನ: ನ್ಯೂ ಇಯರ್ ಪಾರ್ಟಿಗಾಗಿ ಗೋವಾಕ್ಕೆ ತೆರಳಿದ್ದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ರಕ್ಷಿತ್ (26) ಎಂದು ಗುರುತಿಸಲಾಗಿದೆ.

ಡಿ.31 ರಂದು ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ ಮತ್ತು ಪ್ರವೀಣ್ ಜೊತೆ ರಕ್ಷಿತ್ ಗೋವಾಗೆ ತೆರಳಿದ್ದರು. ಅದೇ ದಿನ ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಆಚರಿಸಿದ್ದರು. ಜ.1 ರಂದು ಬೆಳಿಗ್ಗೆ ತಿಂಡಿ ಮುಗಿಸಿ ಗೋವಾದಲ್ಲಿ ತಿರುಗಾಡುತ್ತಿರುವ ವೇಳೆ ರಕ್ಷಿತ್ಗೆ ದಿಢೀರ್ ಹೃದಯಾಘಾತ ಸಂಭವಿಸಿದೆ.

ಕೂಡಲೇ ಜೊತೆಯಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ರಕ್ಷಿತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗೋವಾದಿಂದ ಮೃತದೇಹವನ್ನು ಸ್ವಗ್ರಾಮ ಹೊಸಳ್ಳಿಗೆ ತರಲಾಗಿದ್ದು, ಈ ಸುದ್ದಿ ತಿಳಿದ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 ಗುಂಡಿನ ದಾಳಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ: ರಾಜಶೇಖರ್ ಮೃತದೇಹ ನಿವಾಸಕ್ಕೆ ರವಾನೆ

0

ಬಳ್ಳಾರಿ: ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ಗುಂಡು ತಗುಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪಾರ್ಥಿವ ಶರೀರವನ್ನು ಇಂದು ಹುಸೇನ್ ನಗರದಲ್ಲಿನ ಅವರ ನಿವಾಸಕ್ಕೆ ಆಂಬ್ಯುಲೆನ್ಸ್ ಮೂಲಕ ತರಲಾಯಿತು.

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಿಂದ ಮೃತದೇಹವನ್ನು ಮನೆಗೆ ಕರೆತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತ ರಾಜಶೇಖರ್ ರನ್ನು ನೋಡಲು ಜನಸಾಗರವೇ ಹರಿದು ಬಂದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದು, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರೊಂದಿಗೆ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಸಕರು ಕುಟುಂಬಕ್ಕೆ ಧೈರ್ಯ ತುಂಬಿದರು.

ಇದಕ್ಕೂ ಮೊದಲು, ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡದ ಉಪಸ್ಥಿತಿಯಲ್ಲಿ ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್  ಕೂಡ ಆಸ್ಪತ್ರೆಗೆ ಭೇಟಿ ನೀಡಿದರು.

ಟೋಲ್ ಪ್ಲಾಜಾ ಬೂತ್ ಗೆ ಸ್ಲೀಪರ್ ಕೋಚ್ ಬಸ್ ಡಿಕ್ಕಿ: ತಪ್ಪಿದ ಭಾರಿ ಅನಾಹುತ

0

ಬೆಂಗಳೂರು: ಹೈದರಾಬಾದ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 44 ರ ದೇವನಹಳ್ಳಿ ಟೋಲ್ ಪ್ಲಾಜಾ ಬಳಿ ಖಾಸಗಿ ಸ್ಲೀಪರ್ ಕೋಚ್ ಬಸ್ ಅಪಘಾತಕ್ಕೀಡಾಗಿದೆ. ಅತಿವೇಗದಿಂದ ಬಂದು ನಿಯಂತ್ರಣ ತಪ್ಪಿದ ಬಸ್ ಟೋಲ್ ಬೂತ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಟೋಲ್ ಬೂತ್ ಕೂಡ ಹಾನಿಗೊಳಗಾಗಿದೆ.

ಬಸ್ನಲ್ಲಿ ಪ್ರಯಾಣಿಕರಿಲ್ಲದ ಕಾರಣ, ಭಾರೀ ಅನಾಹುತ ತಪ್ಪಿದ್ದು, ಚಾಲಕ ಮತ್ತು ಸಹ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು, ದೇವನಹಳ್ಳಿ ಸಂಚಾರಿ ಪೊಲೀಸ್ ಸ್ಥಳಕ್ಕೆ ಧಾವಿಸಿ ಬಸ್ ಒಳಗೆ ಸಿಲುಕಿದ್ದವರನ್ನು ಹೊರಗೆ ಎಳೆದಿದ್ದಾರೆ. ಗಾಯಗೊಂಡವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಮತ್ತು ಪ್ರಕರಣ ದಾಖಲಾಗಿದೆ. ಟೋಲ್ ಪ್ಲಾಜಾ ಭದ್ರತೆ ಮತ್ತು ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಾಯಿತು.

ಈ ತಿಂಗಳಿಂದಲೇ ಬಜೆಟ್ ಪೂರ್ವಭಾವಿ ಸಭೆ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಈ ತಿಂಗಳಿನಿಂದಲೇ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪವರ್ ಫೈಟ್ ನಡುವೆಯೇ ಬಜೆಟ್ ಸಭೆಗಳನ್ನು ಯಾರು ನಡೆಸುತ್ತಾರೆ ಎಂಬ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ತಿಂಗಳಿಂದಲೇ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ನಾನೇ ಬಜೆಟ್ ಮಂಡನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹಲವು ಬಾರಿ ಹೇಳಿದ್ದು, ಈ ಹೇಳಿಕೆ ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಗೊಂದಲ ಮುಂದುವರಿದಿರುವ ನಡುವೆಯೇ ಸಿಎಂ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಜನವರಿ ಮೊದಲ ವಾರದಲ್ಲೇ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಶಾಸಕರು ಗಟ್ಟಿಯಾಗಿ ಹೇಳುತ್ತಿದ್ದರು. ಬಜೆಟ್ ಮಂಡನೆಗೂ ಮುನ್ನವೇ ಬದಲಾವಣೆ ಆಗಬಹುದು ಎಂಬ ಚರ್ಚೆಗಳು ಡಿಕೆಶಿ ಆಪ್ತ ವಲಯದಿಂದ ಕೇಳಿ ಬರುತ್ತಿದ್ದವು.

ಆದರೆ, ಸಿಎಂ ಸಿದ್ದರಾಮಯ್ಯ ಮೊದಲಿನಿಂದಲೂ ನಾನೇ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದು, ಇದೀಗ ಬಜೆಟ್ ಪೂರ್ವಭಾವಿ ಸಭೆಗಳ ಘೋಷಣೆಯ ಮೂಲಕ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಬ್ಯಾನರ್​​ ಗಲಾಟೆ: ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಜನರ ವಿರುದ್ಧ FIR

0

ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆ ಪ್ರಕರಣ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ಬಳ್ಳಾರಿಯ ಬ್ರೂಸ್ಫೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜನವರಿ 3 ರಂದು ನಡೆಯಲಿರುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಜನವರಿ 1ರಂದು ಬಳ್ಳಾರಿಯ ಹವಂಬಾವಿ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್ ಅಳವಡಿಸಲು ಒಂದು ಗುಂಪು ಮುಂದಾಗಿತ್ತು. ಈ ವೇಳೆ ಮಾತಿನ ಚಕಮಕಿ ಆರಂಭಗೊಂಡು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರು ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಕಲ್ಲು ತೂರಾಟ ನಡೆದಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಆಗಮಿಸಿದರು. ಈ ವೇಳೆ ಎರಡೂ ಕಡೆಯಿಂದ ತೀವ್ರ ಮಾತಿನ ಚಕಮಕಿ ನಡೆಯಿತು.

ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದರು. ಆದರೂ ಕಾರ್ಯಕರ್ತರು ಕಲ್ಲು ತೂರಾಟ ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಗನ್‌ಮ್ಯಾನ್ಗಳಿಂದ ಫೈರಿಂಗ್ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಈ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇನ್ನು ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ನಂತರ ಜನಾರ್ದನ ರೆಡ್ಡಿ ಮನೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

error: Content is protected !!