Home Blog Page 233

‘ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ; ಕಾಂಗ್ರೆಸ್ ಕುಮ್ಮಕ್ಕಿನ ಹಿಂಸಾಚಾರ’: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ

0

ಶಿವಮೊಗ್ಗ: ಬಳ್ಳಾರಿಯಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ನಿವಾಸದ ಎದುರು ನಡೆದ ಘಟನೆ ಸಾಮಾನ್ಯ ಗಲಾಟೆಯಲ್ಲ, ಕಾಂಗ್ರೆಸ್ ಬೆಂಬಲಿತ ಗೂಂಡಾಗಳಿಂದ ನಡೆಸಲಾದ ಪೂರ್ವನಿಯೋಜಿತ ಹಾಗೂ ಸರ್ಕಾರಿ ಪ್ರಾಯೋಜಿತ ದುಷ್ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಜನಾರ್ಧನ ರೆಡ್ಡಿ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಯ ಬ್ಯಾನರ್ ಅಳವಡಿಕೆಯನ್ನು ನೆಪವನ್ನಾಗಿ ಮಾಡಿಕೊಂಡು, ಬಳ್ಳಾರಿಯಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿಲ್ಲ. ನಾಗರಿಕರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ದುಷ್ಕೃತ್ಯ ನಡೆಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಜನಾರ್ಧನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆಯಾದ ನಂತರ ಬಳ್ಳಾರಿಯಲ್ಲಿ ಬಿಜೆಪಿ ಸಂಘಟನೆ ಬಲಗೊಳ್ಳುತ್ತಿದೆ. ಜೊತೆಗೆ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರ ನಡುವಿನ ಬಾಂಧವ್ಯ ಪುನಃ ಗಟ್ಟಿಯಾಗಿರುವುದು ರಾಜಕೀಯ ದುಷ್ಟಶಕ್ತಿಗಳಿಗೆ ಅಸಹ್ಯವಾಗುತ್ತಿದೆ. ಅದೇ ಕಾರಣಕ್ಕೆ ಇಂತಹ ಹಿಂಸಾತ್ಮಕ ಘಟನೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ವಿಪರ್ಯಾಸವೆಂದರೆ, ಬಳ್ಳಾರಿಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಪೊಲೀಸರು ಕಾಂಗ್ರೆಸ್ ಕೈಗೊಂಬೆಗಳಾಗಿ ವರ್ತಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆ ಸಂಭವಿಸದೇ ಇರಬಹುದಿತ್ತು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಬಿಜೆಪಿ ಪ್ರಮುಖ ನಾಯಕರಿಗೆ ಕೂಡಲೇ ಸೂಕ್ತ ಭದ್ರತೆ ಒದಗಿಸಬೇಕು. ಜೊತೆಗೆ ಈ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಸಂಪೂರ್ಣ ಸತ್ಯವನ್ನು ಹೊರತರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

‘ಜನಾರ್ದನ ರೆಡ್ಡಿ ನೀಚ, ರಾಕ್ಷಸ’ – ಬ್ಯಾನರ್ ಗಲಾಟೆ ಬಳಿಕ ಶಾಸಕ ಭರತ್ ರೆಡ್ಡಿ ಆಕ್ರೋಶ

0

ಬಳ್ಳಾರಿ: ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಪ್ರಕರಣ ರಾಜಕೀಯ ಕಾವು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ವಿರುದ್ಧ ತೀವ್ರ ಆರೋಪಗಳ ಸುರಿಮಳೆಗೈದಿದ್ದಾರೆ.

“ಜನಾರ್ದನ ರೆಡ್ಡಿ ಒಬ್ಬ ನೀಚ, ಹೇಡಿ ಹಾಗೂ ರಾಕ್ಷಸ. ಅವನು ಜೀವಮಾನಪೂರ್ತಿ ಇಂತಹದ್ದೇ ಕೆಲಸ ಮಾಡಿಕೊಂಡು ಬಂದಿದ್ದಾನೆ. ಅಂತಹವನಿಗೆ ಅಂತ್ಯ ಮಾಡಿಯೇ ಮಾಡ್ತೇವೆ” ಎಂದು ಭರತ್ ರೆಡ್ಡಿ ಕಿಡಿಕಾರಿದರು.

ಬ್ಯಾನರ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಅವರು, “ನಾವು ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಬ್ಯಾನರ್ ಹಾಕಲಾಗಿದೆ. ಅಕ್ರಮ ಗಣಿಗಾರಿಕೆ ವಿಷಯವನ್ನು ಮುಚ್ಚಿಹಾಕಲು ಈ ರೀತಿಯ ನೀಚ ಕೃತ್ಯ ನಡೆದಿದೆ” ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ನಾನು ಯಾವುದೇ ಕೇಸ್ ಡೈವರ್ಟ್ ಮಾಡಲು ಹೋಗಲ್ಲ. ನಮ್ಮ ಕಾರ್ಯಕರ್ತನ, ತಮ್ಮನ ಸಾವಿನಿಂದ ನಾವು ನೋವಿನಲ್ಲಿದ್ದೇವೆ” ಎಂದು ಹೇಳಿದರು.

ನಾಳೆ ನಡೆಯಲಿರುವ ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, “ಯಾವುದೇ ದುರುದ್ದೇಶ, ಎಷ್ಟೇ ಅಡ್ಡಿ ಬಂದರೂ ಕಾರ್ಯಕ್ರಮ ನಿಲ್ಲುವುದಿಲ್ಲ. ನಮ್ಮ ಅಜ್ಜನ ಕಾರ್ಯಕ್ರಮ ಅದ್ದೂರಿಯಾಗಿ ಮಾಡುತ್ತೇವೆ” ಎಂದು ಘೋಷಿಸಿದರು.

ಈ ವೇಳೆ ಪಕ್ಷದ ಬೆಂಬಲದ ಬಗ್ಗೆ ಮಾತನಾಡಿದ ಭರತ್ ರೆಡ್ಡಿ, “ರಾಜ್ಯ ನಾಯಕರು, ಹೈಕಮಾಂಡ್ ಹಾಗೂ ಡಿ.ಕೆ.ಶಿವಕುಮಾರ್ ಅವರು ನನ್ನ ಜತೆ ಮಾತನಾಡಿದ್ದಾರೆ. ಯಾವುದಕ್ಕೂ ಕುಗ್ಗಬೇಡ, ನಾವೆಲ್ಲ ನಿನ್ನ ಜತೆ ಇದ್ದೇವೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.

“ಬಳ್ಳಾರಿ ಶಾಂತಿಯುತ ನಗರ. ರಾಕ್ಷಸರ ಅಟ್ಟಹಾಸಕ್ಕೆ ನಾವು ಭಯಪಡುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ” ಎಂದು ಭರತ್ ರೆಡ್ಡಿ ಹೇಳಿದರು.

ಬಳ್ಳಾರಿಯಲ್ಲಿ ಬಿಹಾರ ಮಾದರಿಯ ಗೂಂಡಾಗಿರಿ? ಶ್ರೀರಾಮುಲು ಆಕ್ರೋಶ

0

ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಶುರುವಾದ ಗಲಾಟೆ ಬಳ್ಳಾರಿಯಲ್ಲಿ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಶಾಸಕ ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಪೆಟ್ರೋಲ್ ಬಾಂಬ್ ಎಸೆದಿರುವ ಶಂಕೆಯೂ ವ್ಯಕ್ತವಾಗಿದೆ.

ಘಟನೆಯ ಬಳಿಕ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, “ನಿನ್ನೆ ನಡೆದದ್ದು ನಡೆಯಬಾರದ ಘಟನೆ. ಫೈರಿಂಗ್‌ನಲ್ಲಿ ಯುವಕ ರಾಜಶೇಖರ್ ಪ್ರಾಣ ಕಳೆದುಕೊಂಡಿದ್ದಾನೆ. ಅವನ ಸಾವಿಗೆ ಯಾರು ಕಾರಣರು ಎಂಬುದು ಸತ್ಯಾನ್ವೇಷಣೆಯಿಂದ ಹೊರಬರಬೇಕು” ಎಂದು ಹೇಳಿದರು.

“ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಮಾತಿನ ಚಕಮಕಿ ನಡೆದಿತ್ತು. ಆದರೆ ನಂತರ ಅದು ಕಲ್ಲು ತೂರಾಟ ಮತ್ತು ಗುಂಡಿನ ದಾಳಿಗೆ ತಿರುಗಿದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿಸಿದ ದೃಶ್ಯ ಅವರೇ ತೋರಿಸಿದ್ದಾರೆ” ಎಂದು ತಿಳಿಸಿದರು.

“ಇದು ಪೊಲೀಸ್‌ಗಳಿಂದ ನಡೆದ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಗಳು ಗನ್ ಬಳಸಿದ್ದಾರೆ. ಇಂತಹ ದೌರ್ಜನ್ಯ ಸಹಿಸಲಾಗದು. ಯಾರ ಗನ್‌ನಿಂದ ಬುಲೆಟ್ ಹಾರಿಸಲಾಗಿದೆ ಎಂಬುದನ್ನು ತಕ್ಷಣ ಪತ್ತೆ ಮಾಡಬೇಕು” ಎಂದು ಶ್ರೀರಾಮುಲು ಆಗ್ರಹಿಸಿದರು.

ಇನ್ನೂ, “ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಬಳ್ಳಾರಿಯನ್ನು ಭಸ್ಮ ಮಾಡುವ ಮಾತುಗಳು ಕೇಳಿಬಂದಿವೆ. ಇವೆಲ್ಲವೂ ಪೂರ್ವನಿಯೋಜಿತ ಗಲಾಟೆಯ ಅನುಮಾನ ಮೂಡಿಸುತ್ತಿವೆ” ಎಂದು ಆರೋಪಿಸಿದರು.

ಘಟನೆಯ ತನಿಖೆಗೆ ನ್ಯಾಯಾಂಗ ತನಿಖೆ ಅಗತ್ಯವಿದ್ದು, ತಪ್ಪಿತಸ್ಥರು ಯಾವ ಪಕ್ಷದವರೇ ಆಗಿರಲಿ ಕಠಿಣ ಶಿಕ್ಷೆಗೆ ಒಳಪಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಣ್ಣೆ ಏಟಲ್ಲಿ ಸ್ವೀಟ್ ಮಾರ್ಟ್ ಗೆ ನುಗ್ಗಿ ಪುಡಿ ರೌಡಿಗಳ ಅಟ್ಟಹಾಸ! CCTVಯಲ್ಲಿ ವಿಡಿಯೋ ವೈರಲ್‌

0

ಚಿತ್ರದುರ್ಗ: ಹೊಸ ವರ್ಷದ ಸಂಭ್ರಮದ ನಡುವೆ ಎಣ್ಣೆ ಏಟಿನಲ್ಲಿ, ಸ್ವೀಟ್ ಮಾರ್ಟ್ ಮಾಲೀಕನ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗದ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ. ಜನವರಿ 1ರ ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ಅಟ್ಟಹಾಸ ನಡೆದಿದ್ದು, ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸ್ವೀಟ್ ಮಾರ್ಟ್‌ಗೆ ನುಗ್ಗಿದ್ದ ನಾಲ್ವರು ಯುವಕರು ತಿನಿಸು ಸೇವಿಸಿ ಹಣ ನೀಡದೆ ಹೊರಟಿದ್ದರು. ಈ ವೇಳೆ ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ಕೋಪಗೊಂಡು ಯುವಕರು ಮತ್ತೆ ಅಂಗಡಿಯೊಳಗೆ ನುಗ್ಗಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಅದಲ್ಲದೆ ಅಂಗಡಿಯಲ್ಲಿದ್ದ ಸಿಕ್ಕಸಿಕ್ಕ ವಸ್ತುಗಳನ್ನು ಎತ್ತಿ ಮಾಲೀಕನ ಮೇಲೆ ಎಸೆದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

ಈ ಘಟನೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

ಪ್ರತಿನಿತ್ಯ KSRTC ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳ ಉಪಟಳ ಹೆಚ್ಚಾಗುತ್ತಿದ್ದು, ಎಣ್ಣೆ ಹಾಗೂ ಗಾಂಜಾ ಏಟಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಏನು ಕ್ರಮ ಕೈಗೊಳ್ಳುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಹಾಕಿದ್ದ ಇಬ್ಬರ ಬಂಧನ

ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳಿಗೆ ಬರುವ ಅಶ್ಲೀಲ ಕಮೆಂಟ್‌ಗಳು ಹಾಗೂ ಮೆಸೇಜ್‌ಗಳನ್ನು ಹಿಂದಿನಂತೆ ಮೌನವಾಗಿ ಸಹಿಸುವ ಕಾಲ ಮುಗಿದಿದೆ. ಇದೀಗ ಹಲವರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಪೊಲೀಸ್ ಠಾಣೆಗಳ ಮೆಟ್ಟಿಲು ಏರುತ್ತಿದ್ದಾರೆ. ಈ ಸಾಲಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಸೇರಿದ್ದಾರೆ.

ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್‌ಗಳು ಹಾಗೂ ಅವಾಚ್ಯ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ‘ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಇತ್ತೀಚೆಗೆ ಅವರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು. ಇವರು ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಪದಗಳಿಂದ ನಿಂದನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಗಳು ತಮ್ಮ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಸೈಬರ್ ಪೊಲೀಸರು ಐಪಿ ಅಡ್ರೆಸ್ ಆಧರಿಸಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ಬಂಧನಗಳಾಗುವ ಸಾಧ್ಯತೆ ಇದೆ.

ಅಶ್ಲೀಲ ಕಮೆಂಟ್ ಮಾಡಿದವರು ಯಾವ ನಟರ ಅಭಿಮಾನಿಗಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಬಂಧನ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಕ್ಕೆ ಕಠಿಣ ಸಂದೇಶ ರವಾನಿಸಿದೆ.

RTO ಕಚೇರಿ ಮೇಲೆ ಲೋಕಾಯುಕ್ತ ದಾಳಿ: ದಾಖಲೆಗಳ ತಪಾಸಣೆ

0

ಬೀದರ: ಜಿಲ್ಲೆಯ ಹುಮನಾಬಾದ ಪಟ್ಟಣದ ಹೊರವಲಯದಲ್ಲಿರುವ ಆರ್‌ಟಿ ಓ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಲೋಕಾಯುಕ್ತ ತಂಡದ ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ ಕಚೇರಿಗೆ ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ವಸಂತ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶಂಕರಪ್ಪ, ವಿಜಯಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು. ದಾಳಿ ವೇಳೆ ಆರ್‌ಟಿಓ ಕಚೇರಿಯಲ್ಲಿ ಅಧಿಕಾರಿಗಳಾದ ಮಹೇಶಕುಮಾರ, ರವಿ ಶಂಕರ್ ಹಾಗೂ ಪ್ರಕಾಶ ಇದ್ದರು.

ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳ ತಂಡ ಕಚೇರಿಯ ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದಾಳಿ ಮುಂದುವರಿದಿದೆ. ಈ ದಾಳಿಯಿಂದ ಆರ್‌ಟಿಓ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ: ಕೊನೆಗೂ ಇಬ್ಬರ ಬಂಧನ

0

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿ ನಿಂದಿಸಿದ್ದ ಪ್ರಕರಣದಲ್ಲಿ ಸೈಬರ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಂದ್ರು ಮತ್ತು ನಿಖಿಲ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಓರ್ವ ಬೆಂಗಳೂರು ಮೂಲದವನು ಎಂದು ತಿಳಿದುಬಂದಿದೆ.

2025ರ ಡಿಸೆಂಬರ್‌ನಲ್ಲಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಹೇಳಿಕೆ ನೀಡಿದ ಬಳಿಕ, ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳು ಹರಿದಾಡಿದ್ದವು. ಇದರಿಂದ ಅಸಮಾಧಾನಗೊಂಡ ವಿಜಯಲಕ್ಷ್ಮಿ, 15 ಇನ್ಸ್ಟಾಗ್ರಾಂ ಐಡಿ ಹಾಗೂ 150ಕ್ಕೂ ಹೆಚ್ಚು ಕೆಟ್ಟ ಕಾಮೆಂಟ್‌ಗಳ ವಿರುದ್ಧ ಫೋಟೋ ಸಮೇತ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಸೈಬರ್ ಪೊಲೀಸರು 15 ಐಡಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

ಇತ್ತೀಚೆಗೆ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರನ್ನು ಭೇಟಿ ಮಾಡಿ, ತಮ್ಮ ದೂರಿನ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದರು.

ಫೆ.23ರಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ!

0

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಫೆಬ್ರವರಿ 23ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ದಿವಂಗತ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಉದ್ಘಾಟನೆ ಮಾಡಲಿದ್ದಾರೆ.

ಅದೇ ದಿನ ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ ಶ್ರೀಕ್ಷೇತ್ರ ಆದಿಚುಂಚನಗಿರಿ ಹಾಗೂ ಧಾರ್ಮಿಕ ವಿಚಾರಗಳ ಕುರಿತು ಪ್ರಧಾನಿ ಮೋದಿ ವಿಶೇಷವಾಗಿ ಭಾಷಣ ಮಾಡುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿ ಅವರ ಈ ಪ್ರವಾಸಕ್ಕೆ ಸಂಬಂಧಿಸಿದಂತೆ ಇನ್ನೇನು ಕೆಲವೇ ದಿನಗಳಲ್ಲಿ ಚುಂಚನಗಿರಿ ಶ್ರೀಗಳು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಭೇಟಿ ಹಿನ್ನೆಲೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

 

ನಟನೆ ಆರಂಭಿಸಿದ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ನಿರ್ದೇಶಕ ಎಆರ್ ರೆಹಮಾನ್

ಎಆರ್ ರೆಹಮಾನ್ – ಈ ಹೆಸರು ಕೇಳಿದರೆ ಸಾಕು ಸಂಗೀತ ಪ್ರೇಮಿಗಳಲ್ಲಿ ಗೌರವ ಮೂಡುತ್ತದೆ. ಕಳೆದ ಹಲವು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನಂಬರ್‌–1 ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರೆಹಮಾನ್, ಇಂದಿಗೂ ಸೂಪರ್ ಹಿಟ್ ಹಾಡುಗಳ ಮೂಲಕ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ರೆಹಮಾನ್, ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ಹೌದು, ಸಂಗೀತ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಎಆರ್ ರೆಹಮಾನ್ ಮೊದಲ ಬಾರಿಗೆ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರವೊಂದರಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಹಿಂದೆ ಕೆಲ ಆಲ್ಬಂ ಹಾಡುಗಳು, ಯೂಟ್ಯೂಬ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರೂ, ಸಿನಿಮಾ ಪಾತ್ರದಲ್ಲಿ ನಟಿಸಿದ್ದು ಇದೇ ಮೊದಲು.

ರೆಹಮಾನ್ ಅವರು ತಮಿಳಿನ ‘ಮೂನ್ ವಾಕ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ನಾಯಕ ಖ್ಯಾತ ನಟ-ನೃತ್ಯಗಾರ ಪ್ರಭುದೇವ. ಪ್ರಭುದೇವ ಹಾಗೂ ರೆಹಮಾನ್ ನಡುವಿನ ಆತ್ಮೀಯ ಸ್ನೇಹವೇ ಈ ವಿಶೇಷ ನಿರ್ಧಾರಕ್ಕೆ ಕಾರಣವಾಗಿದೆ. ಮನೋಜ್ ಎನ್‌ಎಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಬಿಹೈಂಡ್ ವುಡ್ಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ನೃತ್ಯದ ಹಿನ್ನೆಲೆಯ ಮೇಲೆ ಸಾಗುವ ಹಾಸ್ಯ ಪ್ರಧಾನ ಕಥೆ ಹೊಂದಿರುವ ‘ಮೂನ್ ವಾಕ್’ ಸಿನಿಮಾದಲ್ಲಿ, ಎಆರ್ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಸಿನಿಮಾದಲ್ಲಿನ ಪಾತ್ರದ ಹೆಸರೂ ಸಹ ಎಆರ್ ರೆಹಮಾನ್ ಎಂದೇ ಇರುತ್ತದೆ.

ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ, ‘ಮೂನ್ ವಾಕ್’ ಸಿನಿಮಾದ ಎಲ್ಲಾ ಐದು ಹಾಡುಗಳನ್ನು ರೆಹಮಾನ್ ಅವರೇ ಹಾಡಿದ್ದಾರೆ. ಇದು ಅವರ ಕರಿಯರ್‌ನಲ್ಲೇ ಮೊದಲ ಬಾರಿ ಒಂದು ಸಂಪೂರ್ಣ ಸಿನಿಮಾ ಆಲ್ಬಂಗೆ ಸ್ವತಃ ಧ್ವನಿ ನೀಡಿರುವ ಘಟನೆ.

ಈಗಾಗಲೇ ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣ ಮುಗಿಸಿರುವ ರೆಹಮಾನ್, ನಟನೆಯನ್ನು ಬಹಳ ಎಂಜಾಯ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇತ್ತ ‘ಪೆದ್ದಿ’ ಸಿನಿಮಾದ ಹಾಡುಗಳು ಸಕ್ಸಸ್ ಕಂಡಿದ್ದು, ‘ರಾಮಾಯಣ’ ಸಿನಿಮಾಕ್ಕೂ ಸಂಗೀತ ನೀಡುತ್ತಿರುವ ರೆಹಮಾನ್, ಪ್ರಸ್ತುತ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಧುಮೇಹ ಇರುವವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಾ? ಇಲ್ಲಿದೆ ಉತ್ತರ

0

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ರೋಗಿಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಮಧುಮೇಹವು ಕ್ರಮೇಣ ದೇಹದ ಅನೇಕ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ವಿಶ್ವ ಹೃದಯ ಒಕ್ಕೂಟದ ವರದಿಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಪ್ರಕರಣಗಳು ವೇಗವಾಗಿ ಹೆಚ್ಚಾಗಿವೆ. ಇದು ಗಂಭೀರವಾದ ಎಚ್ಚರಿಕೆಯ ಸಂಕೇತವಾಗಿದ್ದು, ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೇ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ.

ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು?

ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಧಿಕವಾಗಿರುವುದು ರಕ್ತನಾಳಗಳಿಗೆ ಹಾನಿ ಉಂಟುಮಾಡುತ್ತದೆ. ಇದರಿಂದ ಹೃದಯಕ್ಕೆ ರಕ್ತ ಸಾಗಿಸುವ ಅಪಧಮನಿಗಳು ಕಿರಿದಾಗುವ ಅಥವಾ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಇದುವೇ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಪ್ರಮುಖ ಕಾರಣವಾಗಿದೆ.

ಮಧುಮೇಹವು ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆಗಳೊಂದಿಗೆ ಸಂಪರ್ಕ ಹೊಂದಿದ್ದು, ಇವುಗಳು ಹೃದಯಾಘಾತದ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಜೊತೆಗೆ ದೇಹದಲ್ಲಿ ಉರಿಯೂತ ಮತ್ತು ಕೊಬ್ಬಿನ ಶೇಖರಣೆ ಹೆಚ್ಚುವುದರಿಂದ ಅಪಧಮನಿಗಳು ಗಟ್ಟಿಯಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳದೆ ಇರುವುದರಿಂದ ಚಿಕಿತ್ಸೆ ಪಡೆಯುವಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ.

ಲಕ್ಷಣಗಳು ಹೇಗಿರುತ್ತವೆ?

ಮಧುಮೇಹ ರೋಗಿಗಳಲ್ಲಿ ಹೃದಯಾಘಾತದ ಲಕ್ಷಣಗಳು ಸಾಮಾನ್ಯ ವ್ಯಕ್ತಿಗಳಿಗಿಂತ ವಿಭಿನ್ನವಾಗಿರಬಹುದು.

  • ಎದೆ ಭಾಗದಲ್ಲಿ ನೋವು, ಒತ್ತಡ ಅಥವಾ ಸುಡುವ ಅನುಭವ

  • ಉಸಿರಾಟದ ತೊಂದರೆ

  • ತೀವ್ರ ಆಯಾಸ ಅಥವಾ ತಲೆತಿರುಗುವಿಕೆ

  • ಹೆಚ್ಚು ಬೆವರುವುದು

  • ದವಡೆ, ಕುತ್ತಿಗೆ, ಭುಜ ಅಥವಾ ಎಡಗೈಯಲ್ಲಿ ನೋವು

  • ವಾಕರಿಕೆ, ವಾಂತಿ ಅಥವಾ ಅಸ್ವಸ್ಥತೆ

ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ?

  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಿ

  • ಸಮತೋಲಿತ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಿ

  • ನಿಯಮಿತವಾಗಿ ವ್ಯಾಯಾಮ ಮಾಡಿ

  • ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ

  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಹಾಗೂ ಸಮರ್ಪಕ ನಿದ್ರೆ ಪಡೆಯಿರಿ

ಮಧುಮೇಹವನ್ನು ಸರಿಯಾಗಿ ನಿಯಂತ್ರಿಸಿದರೆ ಹೃದಯಾಘಾತದ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

error: Content is protected !!