Home Blog Page 234

‘ಧುರಂಧರ್’ ಸಿನಿಮಾದ ಎರಡು ಸಂಭಾಷಣೆ ತೆಗೆಸಿದ ಸರ್ಕಾರ: ಕಾರಣವೇನು?

ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾಗಳ ಪಟ್ಟಿಗೆ ‘ಧುರಂಧರ್’ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ರಣ್ವೀರ್ ಸಿಂಗ್ ಅಭಿನಯದ ಈ ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ 1000 ಕೋಟಿ ರೂ. ಗಳಿಕೆ ದಾಟಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ನಡೆಯುವ ಚಟುವಟಿಕೆಗಳ ಮಾಹಿತಿಯನ್ನು ಭಾರತೀಯ ಸೇನೆಗೆ ರವಾನೆ ಮಾಡುವ ಕಥೆಯನ್ನು ‘ಧುರಂಧರ್’ ಸಿನಿಮಾ ಹೊಂದಿದೆ. ನಿಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದಲ್ಲಿ ಕೆಲವು ನೈಜ ಪಾತ್ರಗಳು ಹಾಗೂ ಸ್ಥಳಗಳ ಉಲ್ಲೇಖವೂ ಇದೆ.

ಇದೀಗ ಸಿನಿಮಾದ ವಿಷಯ ಸಂಬಂಧ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಮಧ್ಯಪ್ರವೇಶ ಮಾಡಿದ್ದು, ಸಿನಿಮಾದ ಎರಡು ಹೆಸರನ್ನು ತೆಗೆದುಹಾಕಲು ಹಾಗೂ ಒಂದು ಸಂಭಾಷಣೆಯನ್ನು ಬದಲಾಯಿಸುವಂತೆ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೇ ನಿರ್ಮಾಪಕರು ಹಾಗೂ ವಿತರಕರು ಚಿತ್ರಮಂದಿರಗಳಿಗೆ ಇ-ಮೇಲ್ ಕಳುಹಿಸಿ, ಹೊಸ ಆವೃತ್ತಿಯನ್ನೇ ಪ್ರದರ್ಶಿಸುವಂತೆ ಸೂಚಿಸಿದ್ದಾರೆ.

ಸರ್ಕಾರದ ಸೂಚನೆಯಂತೆ ಸಿನಿಮಾದಲ್ಲಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶವನ್ನು ಸೂಚಿಸುವ ‘ಬಲೂಚ್’ ಪದವನ್ನು ತೆಗೆದುಹಾಕಲಾಗಿದೆ. ಜೊತೆಗೆ ಇನ್ನೊಂದು ಹೆಸರನ್ನೂ ಅಳಿಸಲಾಗಿದ್ದು ಅಥವಾ ಬೀಪ್ ಮಾಡಲಾಗಿದೆ. ತಿದ್ದುಪಡಿ ಮಾಡಲಾದ ಈ ಹೊಸ ಆವೃತ್ತಿ ಜನವರಿ 1ರಿಂದ ಪ್ರದರ್ಶನ ಆರಂಭಿಸಿದೆ.

ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನ, ಆರ್. ಮಾಧವನ್, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ನಾಯಕಿಯಾಗಿ ಸಾರಾ ಅರ್ಜುನ್ ಅಭಿನಯಿಸಿದ್ದಾರೆ.

ಹಾಸನ: ಅಡಕೆ ಕಟಾವು ವಾಹನ ಪಲ್ಟಿ, ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು

0

ಹಾಸನ: ಅಡಕೆ ಕಟಾವು ಮಾಡಿ ಸಾಗಿಸುತ್ತಿದ್ದ ಪಿಕಪ್ ವಾಹನ ಟೈರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಅರಸೀಕೆರೆ ತಾಲ್ಲೂಕಿನ ಚಿಕ್ಕಾರಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ–69ರಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಶಬ್ಬೀರ್ (55), ತಿಮ್ಮಣ್ಣ (53) ಹಾಗೂ ಸಂಜಯ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ಪ್ರಕಾರ, ಅಡಕೆ ತುಂಬಿಕೊಂಡು ಸಾಗುತ್ತಿದ್ದ ಪಿಕಪ್ ವಾಹನದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದೇ ವೇಳೆ ಹಾಸನ ಮೂಲದ ನೌಶದ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರೆಲ್ಲರೂ ಕಡೂರು ತಾಲ್ಲೂಕಿನ ತಂಗ್ಲಿ ಗ್ರಾಮದ ನಿವಾಸಿಗಳು ಎನ್ನಲಾಗಿದ್ದು, ತಿಮ್ಮಣ್ಣ ಹಾಗೂ ಸಂಜಯ್ ಅವರ ಮೃತದೇಹಗಳನ್ನು ಕಡೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ, ಶಬ್ಬೀರ್ ಮೃತದೇಹವನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂತನ ಎಸ್ಪಿ ಶುಭಾನ್ವಿತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸಿನಿಮಾ ಪ್ರಚಾರಕ್ಕೆ ಹೊಸ ಐಡಿಯಾ: ‘ಕೊರಗಜ್ಜ’ ರೀಲ್ಸ್ ಸ್ಪರ್ಧೆಗೆ ಕೋಟಿ ಬಹುಮಾನ ಘೋಷಣೆ

ಹಿಂದೆ ಸಿನಿಮಾ ಕ್ಯಾಸೆಟ್ ಖರೀದಿಸಿದವರಿಗೆ ಬಹುಮಾನ, ಸಿನಿಮಾ ನೋಡಿ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಉಡುಗೊರೆ ಎಂಬ ಸಂಪ್ರದಾಯವಿತ್ತು. ಅದೇ ಶೈಲಿಗೆ ಹೊಸ ರೂಪ ನೀಡಿರುವ ‘ಕೊರಗಜ್ಜ’ ಚಿತ್ರತಂಡ, ಇದೀಗ ಹಾಡುಗಳಿಗೆ ರೀಲ್ಸ್ ಮಾಡಿದವರಿಗೆ ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹೊಟೆಲ್ ಹಾಲಿಡೇ ಇನ್‌ನಲ್ಲಿ ವಿನೂತನವಾಗಿ ಆಯೋಜಿಸಲಾಗಿತ್ತು. ಬಿಗ್ ಎಫ್‌ಎಂ 92.7 ಸೇರಿದಂತೆ ಹಲವು ಆಡಿಯೋ ಪ್ಲಾಟ್‌ಫಾರ್ಮ್‌ಗಳ ಸಹಯೋಗದಲ್ಲಿ ನಡೆದ “ಸಾಂಗ್ಸ್ ಪ್ರೀಮಿಯರ್” ಕಾರ್ಯಕ್ರಮದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮವೂ ಮಿಶ್ರಣಗೊಂಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರತಂಡ, ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಳ್ಳುವವರಿಗೆ ಭರ್ಜರಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ. ಅತ್ಯುತ್ತಮ ರೀಲ್ಸ್ ಆಯ್ಕೆ ಮಾಡಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿಸಿದೆ.

ಕಾರ್ಯಕ್ರಮದಲ್ಲಿ ಆರ್ಜೇಗಳು ಹಾಗೂ ಸಿಬ್ಬಂದಿ ಹಾಡುಗಳನ್ನು ಎಂಜಾಯ್ ಮಾಡಿದರು. ಮಹಿಷಾಸುರ ಯಕ್ಷಗಾನ ಪ್ರದರ್ಶನವೂ ನಡೆಯಿತು. ಹಿರಿಯ ನಟಿ ಭವ್ಯ, ಶರೋನ್ ಪ್ರಭಾಕರ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ನೀಡಿದರು.

ದೈವದ ಕಥೆಯನ್ನು ಆಧರಿಸಿರುವ ‘ಕೊರಗಜ್ಜ’ ಸಿನಿಮಾ ‘ತ್ರಿವಿಕ್ರಮ ಸಿನಿಮಾಸ್’ ಮತ್ತು ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್‌ಗಳಲ್ಲಿ ಮೂಡಿಬರುತ್ತಿದ್ದು, ಕನ್ನಡದ ಜೊತೆಗೆ ಇತರೆ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ.

ರಕ್ತಪಾತಕ್ಕೆ ತಿರುಗಿದ ಬಳ್ಳಾರಿ ಬ್ಯಾನರ್ ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಸಾವು, ನಿಷೇಧಾಜ್ಞೆ ಜಾರಿ

0

ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಭಾರೀ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜನವರಿ 3ರಂದು ನಡೆಯಲಿರುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ನಗರದಾದ್ಯಂತ ಬ್ಯಾನರ್ ಅಳವಡಿಕೆ ನಡೆಯುತ್ತಿತ್ತು. ಈ ವೇಳೆ ಜನಾರ್ದನ ರೆಡ್ಡಿ ಅವರ ಮನೆ ಎದುರಿನ ರಸ್ತೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಮಾತಿನ ಚಕಮಕಿ ಆರಂಭವಾಗಿದೆ. ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಬ್ಯಾನರ್ ಅಳವಡಿಸಿದ ಹಿನ್ನೆಲೆಯಲ್ಲಿ ಎರಡು ಬಣಗಳ ನಡುವೆ ವಾಗ್ವಾದ ನಡೆಯಿತು.

ಸ್ವಲ್ಪ ಸಮಯದಲ್ಲೇ ಗಲಾಟೆ ತೀವ್ರಗೊಂಡು, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರೂ ಉದ್ವಿಗ್ನತೆ ತಗ್ಗಲಿಲ್ಲ. ಈ ವೇಳೆ ಗುಂಡಿನ ಸದ್ದು ಕೇಳಿಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡು ತಗುಲಿ ಮೃತಪಟ್ಟಿದ್ದಾರೆ. ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯಿಸಿ, ಜನಾರ್ದನ ರೆಡ್ಡಿ ಬೆಂಬಲಿಗರ ದಾಳಿಯಿಂದ ನಮ್ಮ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಇದು ಪೂರ್ವನಿಯೋಜಿತ ಕೃತ್ಯ. ತಕ್ಷಣವೇ ಜನಾರ್ದನ ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಇನ್ನೊಂದೆಡೆ ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದು, ನಗರ ಶಾಸಕ ನಾರಾ ಭರತ್ ರೆಡ್ಡಿ, ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ಮನೆ ಎದುರೇ ಗನ್‌ಮ್ಯಾನ್‌ಗಳಿಂದ ಫೈರಿಂಗ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಗಾಳಿಯಲ್ಲಿ ಹಾರಿಬಿದ್ದ ಗುಂಡನ್ನು ಮಾಧ್ಯಮಗಳಿಗೆ ತೋರಿಸಿ, ವಾಲ್ಮೀಕಿ ಪ್ರತಿಮೆ ಹೆಸರಿನಲ್ಲಿ ನಗರಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಘಟನೆಯ ನಂತರ ಬಳ್ಳಾರಿ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಿರುಗುಪ್ಪ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಜನಾರ್ದನ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ಶಾಸಕ ನಾರಾ ಭರತ್ ರೆಡ್ಡಿ ಅವರು ಹವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರೇ ಧರಣಿ ನಡೆಸಿದರು.

ಇದೀಗ ಬ್ಯಾನರ್ ಅಳವಡಿಕೆ ಸಂಬಂಧ ನಡೆದ ಮೊದಲ ಘರ್ಷಣೆಗೆ ಸಂಬಂಧಿಸಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 11 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರಿನ ಆಧಾರದಲ್ಲಿ ಜನಾರ್ದನ ರೆಡ್ಡಿಯನ್ನು ಎ1 ಆರೋಪಿ ಮಾಡಲಾಗಿದ್ದು, ಸೋಮಶೇಖರ ರೆಡ್ಡಿ ಎ2, ಮಾಜಿ ಸಚಿವ ಶ್ರೀರಾಮುಲು ಎ3 ಹಾಗೂ ಮೋತ್ಕರ್ ಶ್ರೀನಿವಾಸ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳಾಗಿದ್ದಾರೆ.

ಎಫ್‌ಐಆರ್ ಪ್ರಕಾರ, ಜನಾರ್ದನ ರೆಡ್ಡಿ ಹಾಗೂ ಅವರ ಬೆಂಬಲಿಗರು ಉದ್ದೇಶಪೂರ್ವಕವಾಗಿ ಬ್ಯಾನರ್ಗಳನ್ನು ಕಿತ್ತು ಹಾಕಿದ್ದು, ಪ್ರಶ್ನಿಸಿದ ಸತೀಶ್ ರೆಡ್ಡಿ ಹಾಗೂ ಗನ್‌ಮ್ಯಾನ್ ಬಸವರಾಜ್ ಜೊತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಶ್ರೀನಿವಾಸ ಅವರಿಗೂ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ಐಜಿಪಿ ವರ್ತಿಕಾ ಕಟಿಯಾರ್ ಹಾಗೂ ಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ವಿಜಯನಗರ, ಕೊಪ್ಪಳ ಹಾಗೂ ರಾಯಚೂರಿನಿಂದ ಹೆಚ್ಚುವರಿ ಪೊಲೀಸ್ ಪಡೆ ಕರೆಸಲಾಗಿದೆ. ಮೂರು ಎಸ್ಪಿ, 10 ಡಿವೈಎಸ್ಪಿ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ವಿಶೇಷ ಕಾನೂನು ರಚನೆಗೆ ಸರ್ಕಾರದಿಂದ ಕ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಜರುಗಿರುವ ಘಟನೆಗೆ ಸಂಬಂಧಿಸಿದಂತೆ ಅಂತರ್ಜಾತಿ ವಿವಾಹವಾಗಿದ್ದ ಯುವತಿಯ ಹತ್ಯೆ ಮತ್ತು ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯದ ಕುರಿತು ಪಾರದರ್ಶಕ ತನಿಖೆ ಕೈಗೊಂಡು ತ್ವರಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಇಂತಹ ದುರ್ಘಟನೆಗಳು ಜರುಗದಂತೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಅಗತ್ಯವಿದ್ದರೆ, ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆಗೆ ಕ್ರಮವಹಿಸಲಾಗುವುದು. ಈ ಕುರಿತು ಜಿಲ್ಲಾಡಳಿತ ವರದಿ ಸಲ್ಲಿಸಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದರು.

ಅವರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.

ಆಧುನಿಕ ಸಮಾಜದಲ್ಲಿ ಇಂತಹ ಅಮಾನವೀಯ ಘಟನೆ ಜರುಗಬಾರದಿತ್ತು. ಜಿಲ್ಲೆಯಲ್ಲಿ ಜರುಗಿರುವ ಅಂತರ್ಜಾತಿ ವಿವಾಹಗಳ ಕುರಿತು ಮಾಹಿತಿ ಪಡೆಯಬೇಕು. ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಾಧಿಸಿ, ಜನರಿಗೆ ತಿಳುವಳಿಕೆ ಮತ್ತು ಮನವರಿಕೆ ಮಾಡಿ, ಸಂವಿಧಾನದ ಆಶಯಗಳನ್ನು ತಿಳಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇಶದ ಕಾನೂನಿನ ಪ್ರಕಾರ ವಯಸ್ಸಿಗೆ ಬಂದ ಯುವಕ-ಯುವತಿಯರು ತಮ್ಮಿಷ್ಟದ ಸಂಗಾತಿಯನ್ನು ಮದುವೆಯಾಗಲು ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದರು.

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ್ ಮಾತನಾಡಿ, ಇನಾಂವೀರಾಪೂರ ಗ್ರಾಮದ ಘಟನೆ ಹಿನ್ನೆಲೆಯಲ್ಲಿ, ಇತರ ಸ್ಥಳಗಳಲ್ಲಿ ಇರುವ ಅಂತರ್ಜಾತಿ ವಿವಾಹವಾಗಿರುವ ಕುಟುಂಬಗಳಿಗೆ ಅಗತ್ಯ ಭದ್ರತೆ ಹಾಗೂ ಭರವಸೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಬೇಕು. ದೊಡಮನಿ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಹೇಳಿದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಇನಾಂವೀರಾಪೂರ ಗ್ರಾಮದ ಘಟನೆ ಧಾರವಾಡ ಜಿಲ್ಲೆಯಲ್ಲಿ ಆಗಿರುವುದು ವಿಷಾದನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಘಟನೆ ಜರುಗಿದ ದಿನದಿಂದ ಪೊಲೀಸ್, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಗತ್ಯ ಕ್ರಮವಹಿಸಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಜರುಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಿ. ರಣದೀಪ್ ಮತ್ತು ಆಯುಕ್ತ ಡಾ. ರಾಕೇಶಕುಮಾರ ಅವರು ಪ್ರಕರಣದ ತನಿಖೆ ಮತ್ತು ಸರ್ಕಾರದ ಕಾಯ್ದೆ, ಕಾನೂನುಗಳ ಬಗ್ಗೆ ವಿವರಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಇನಾಂವೀರಾಪೂರ ಗ್ರಾಮದ ಪ್ರಕರಣದಲ್ಲಿ ಎಲ್ಲ ಇಲಾಖೆಗಳು ಸೂಕ್ತ ಕ್ರಮ ವಹಿಸಿವೆ. ಜಿಲ್ಲಾಡಳಿತ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಪರಿಹಾರ ಹಾಗೂ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲಾಗಿದ್ದು, ಅವರಿಗೆ ಅವಶ್ಯಕ ಗೃಹೋಪಯೋಗಿ ಸಾಮಗ್ರಿಗಳನ್ನು ತಲುಪಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಬೆಳಗಾವಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿವೈಎಸ್‌ಪಿ ವಿನೋದ ಮುಕ್ತೆದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಪ್ರಶಾಂತ ಸಿದ್ದನಗೌಡರ ಸೇರಿದಂತೆ ಅವಳಿ ನಗರದ ಎಲ್ಲ ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಎಲ್ಲ ತಾಲೂಕಿನ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಘಟನೆ ಜರುಗಿದ ತಕ್ಷಣ ಪೊಲೀಸ್ ಇಲಾಖೆ ಕ್ರಮವಹಿಸಿ, ವಿವೇಕಾನಂದ ದೊಡಮನಿ ಕುಟುಂಬವನ್ನು ರಕ್ಷಿಸಿ, ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಿದೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ದೂರಿನಲ್ಲಿರುವ ಇತರ ಆರೋಪಿಗಳ ಬಂಧನಕ್ಕೂ ಕ್ರಮವಹಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆರೋಪ ಪಟ್ಟಿ (ಚಾರ್ಜ್ ಶೀಟ್) ತಯಾರಿಸಲಾಗುವುದು ಎಂದು ಹೇಳಿದರು.

ಇನಾಂವೀರಾಪೂರ ಪ್ರಕರಣದ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ, ಭದ್ರತೆ, ಪರಿಹಾರ ಕುರಿತು ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬದವರು ಪ್ರಕರಣದ ಕುರಿತು ತ್ವರಿತ ತನಿಖೆ, ಪುನರ್ವಸತಿ ಸೌಲಭ್ಯ, ಉದ್ಯೋಗ ಮತ್ತು ಭದ್ರತೆಯನ್ನು ಕೇಳಿದ್ದಾರೆ. ಈ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ, ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು.

  • ಡಾ. ಹೆಚ್.ಸಿ. ಮಹದೇವಪ್ಪ.
    ಸಮಾಜ ಕಲ್ಯಾಣ ಇಲಾಖೆ ಸಚಿವರು.

ಪಾಕೆಟ್ ಕ್ಯಾಲೆಂಡರ್ ಮಾದರಿಯಾಗಿದೆ: ಡಾ. ಬಸವರಾಜ ಬಳ್ಳಾರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಮುಖಿ ಚಿಂತನೆ, ಹೊಸತನ, ಆಕರ್ಷಣೆಯೊಂದಿಗೆ ಮುದ್ರಣಗೊಂಡಿರುವ `ಆಸ್ಕ್ ನ್ಯೂಸ್’ 2026ರ ವರ್ಣರಂಜಿತ ಪಾಕೆಟ್ ಕ್ಯಾಲೆಂಡರ್ ಎಲ್ಲರಂತಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಅಭಿಪ್ರಾಯಪಟ್ಟರು.

ಅವರು ಆಸ್ಕ್ ನ್ಯೂಸ್ 2026ರ ವರ್ಣರಂಜಿತ ಪಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಪೇಪರ್‌ಲೆಸ್ ವ್ಯವಸ್ಥೆಯ ಮಧ್ಯೆ ಡಿಜಿಟಲ್ ಯುಗದಲ್ಲಿ ತೂಗು ಕ್ಯಾಲೆಂಡರ್ ಸೇರಿ ಬೇರೆ ಬೇರೆ ಕ್ಯಾಲೆಂಡರ್‌ಗಳು ಹೊಂದಿರುವ ಎಲ್ಲ ಮಾಹಿತಿಯನ್ನು ಸೆರೆ ಹಿಡಿಯುವ ಜೊತೆಗೆ ಅತ್ಯಮೂಲ್ಯ ಚಿಂತಕರ ಸುಭಾಷಿತ ವಿಚಾರಗಳನ್ನು ಅಳವಡಿಸಿರುವ ಪಾಕೆಟ್ ಕ್ಯಾಲೆಂಡರ್ ನಿಜಕ್ಕೂ ಮಾದರಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ನಿಕಟಪೂರ್ವ ಉಪಾಧ್ಯಕ್ಷ ರವಿ ಎಲ್.ಗುಂಜೀಕರ ಮಾತನಾಡಿ, ಹೊಸ ಯೋಜನೆಗೆ, ಯೋಚನೆಗೆ, ಆಲೋಚನೆಗೆ, ಸಾಮಾಜಿಕ ಚಿಂತನೆಗೆ ಮಾದರಿಯಾಗಿರುವ ಆಸ್ಕ್ ನ್ಯೂಸ್ ಚಾನಲ್ ಹೊರತಂದಿರುವ 2026ರ ಪಾಕೆಟ್ ಕ್ಯಾಲೆಂಡರ್ ಅತ್ಯಂತ ಅರ್ಥಗರ್ಭಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ಹೋಮಿಯೋಪತಿ ವೈದ್ಯ ಡಾ. ಎಸ್.ವ್ಹಿ. ಶಿವನಗೌಡರ ಮಾತನಾಡಿ, ಅಂದವಾಗಿ ಮೂಡಿಬಂದಿರುವ ಆಸ್ಕ್ ನ್ಯೂಸ್ 2026ರ ವರ್ಣರಂಜಿತ ಪಾಕೆಟ್ ಕ್ಯಾಲೆಂಡರ್ ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಆನಂದ ಸಾಲಿಗ್ರಾಮ ಮಾತನಾಡಿ, ಹಿಂದೆ ಜನಪ್ರಿಯವಾಗಿದ್ದ ಪಾಕೆಟ್ ಕ್ಯಾಲೆಂಡರ್ ಇತ್ತೀಚೆಗೆ ಮರೆಯಾಗಿತ್ತು. ಮತ್ತೆ ಪಾಕೆಟ್ ಕ್ಯಾಲೆಂಡರ್ ಟ್ರೆಂಡ್‌ಗೆ ಆಸ್ಕ್ ನ್ಯೂಸ್ ಮುನ್ನುಡಿ ಬರೆದಂತಿದೆ ಎಂದರು.

ರೈಜ್ ಆಫ್ ಗದಗ ಸಂಪಾದಕ ಆನಂದಯ್ಯ ವಿರಕ್ತಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಸ್ಕ್ ನ್ಯೂಸ್ ಸಂಪಾದಕ ಡಾ. ಅನಂತ ಎಸ್.ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ನ್ಯಾಯವಾದಿ ಟಿ.ಎನ್. ಭಾಂಡಗೆ ವಂದಿಸಿದರು.

ಗಣ್ಯ ವರ್ತಕರಾದ ಈಶ್ವರಸಾ ಮೇರವಾಡೆ ಮಾತನಾಡಿ, ತಮ್ಮ ಪರಿಚಯ, ಬ್ಲಡ್ ಗ್ರುಪ್, ಕಚೇರಿ, ಮನೆ ವಿಳಾಸ, ವಾಹನ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಸೇರಿ ತಮ್ಮ ಬಯೋಡಾಟಾವನ್ನು ಪಾಕೆಟ್ ಕ್ಯಾಲೆಂಡರ್‌ನಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥೆ ಹೊಂದಿರುವ ಆಸ್ಕ್ ನ್ಯೂಸ್ 2026ರ ಪಾಕೆಟ್ ಕ್ಯಾಲೆಂಡರ್ ಉಪಯುಕ್ತವಾಗಿದೆ ಎಂದರು.

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ: ಅಂತಿಮ ಮತದಾರರ ಪಟ್ಟಿ ಪ್ರಕಟ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ 01.11.2025ಕ್ಕೆ ಅನ್ವಯವಾಗುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರಕಟಿಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ, 25.11.2025ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

25.11.2025ರಿಂದ 10.12.2025ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸದರಿ ಅವಧಿಯಲ್ಲಿ ಸ್ವೀಕರಿಸಲಾದ ಅರ್ಜಿಗಳ ಪರಿಶೀಲನೆಯ ನಂತರ, ಪಶ್ಚಿಮ ಪದವೀಧರರ ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು 30.12.2025ರಂದು ಪ್ರಕಟಿಸಲಾಗಿದೆ.

ಸದರಿ ಅಂತಿಮ ಮತದಾರರ ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು ಧಾರವಾಡ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆ ಇವರ ಕಚೇರಿಯಲ್ಲಿ ಹಾಗೂ ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿರುತ್ತದೆ. ಅದೇ ರೀತಿ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ವೆಬ್‌ಸೈಟ್‌ನಲ್ಲಿ ಹಾಗೂ ಕಾರ್ಯಾಲಯದ ವೆಬ್‌ಸೈಟ್ hಣಣಠಿs://ಡಿಛಿbeಟಚಿgಚಿvi.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿಯೂ ಲಭ್ಯವಿದೆ.

ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ 51,599 ಪುರುಷ ಮತದಾರರು ಮತ್ತು 36,488 ಮಹಿಳಾ ಮತದಾರರು ಸೇರಿದಂತೆ ಒಟ್ಟು 88,087 ಮತದಾರರು ಇರುತ್ತಾರೆ.

ಅಂತಿಮ ಮತದಾರರ ಪಟ್ಟಿಯಲ್ಲಿ ತಪ್ಪಿಹೋದ ಅರ್ಹ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕೆ 10 ದಿನಗಳ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುವುದು ಎಂದು ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ ಮತದಾರರ ನೋಂದಣಿ ಅಧಿಕಾರಿಗಳಾದ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಮ್. ಜಾನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 3ರಂದು  ನಿಡಗುಂದಿಕೊಪ್ಪದಲ್ಲಿ ಪುಣ್ಯಸ್ಮರಣೋತ್ಸವ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಲಿಂ. ಚನ್ನಬಸವ ಸ್ವಾಮೀಜಿಗಳ 42ನೇ ಹಾಗೂ ಲಿಂ. ಶಿವಬಸವ ಸ್ವಾಮೀಜಿಗಳ 10ನೇ ಪುಣ್ಯಸ್ಮರಣೋತ್ಸವ ಸಮಾರಂಭವನ್ನು ಜ. 3ರಂದು ಹಮ್ಮಿಕೊಳ್ಳಲಾಗಿದೆ.

ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ, ಶಾಖಾ ಶಿವಯೋಗಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸುವರು. ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ವಿ.ಪ. ಸದಸ್ಯ ಎಸ್.ವಿ. ಸಂಕನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಕಾಂಬೋಗಿ, ನಿವೃತ್ತ ಪ್ರಾಚಾರ್ಯ ಶೇಖರಪ್ಪ ಕಲಕಬಂಡಿ, ವೀರಣ್ಣ ಸೊಬಗಿನ, ಆನಂದ ಕೊಪ್ಪದ, ರುದ್ರಪ್ಪ ಬೆಲ್ಲದ ಮುಂತಾದವರು ಆಗಮಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಇನಾಂ ವೀರಾಪುರ ಗ್ರಾಮಕ್ಕೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಭೇಟಿ, ಕುಟುಂಬಸ್ಥರಿಗೆ ಚೆಕ್ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರಲ್ಲದೆ, ಘಟನೆಯ ಕುರಿತು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಿಗೆ ಬಂದ ಗಂಡು-ಹೆಣ್ಣು ಮದುವೆಯಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ವಯಸ್ಸಿಗೆ ಬಂದ ಹೆಣ್ಣು ತನ್ನ ಇಚ್ಛೆಗೆ ಅನುಗುಣವಾಗಿ ನಡೆಯಬಹುದು ಎಂದು ಹೇಳಿದ್ದಾರೆ. ವಯಸ್ಕ ಮಹಿಳೆ ತನ್ನ ಸಂಗಾತಿಯನ್ನು ಅವಳ ವಿವೇಕ, ಭರವಸೆ ಮತ್ತು ಇಷ್ಟಪಟ್ಟಿರುವ ವ್ಯಕ್ತಿಯನ್ನು ಮದುವೆಯಾಗಬಹುದು ಎಂದು ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್‌ನಲ್ಲಿ ವಿವರಿಸಿದ್ದಾರೆ. ಸ್ವ-ಇಚ್ಛೆಯಂತೆ ತಾನು ಇಷ್ಟಪಟ್ಟಿರುವ ವ್ಯಕ್ತಿಯನ್ನು ಮದುವೆಯಾಗುವುದು ಮೂಲಭೂತ ಹಕ್ಕಾಗಿದ್ದು, ಈ ಘಟನೆಯಲ್ಲಿ ಮೂಲಭೂತ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಗರ್ಭಿಣಿ ಮಹಿಳೆಯನ್ನು ಅವರ ಕುಟುಂಬದವರೇ ಕೊಲೆ ಮಾಡಿರುವುದು ಅತ್ಯಂತ ಮೃಗೀಯ ಘಟನೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಸಚಿವರು, ಶಾಸಕರು ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದಾರೆ ಎಂದರು.

ಮಾನ್ಯಾ ಪ್ರಕರಣದಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸಬಾರದು. ಮಾನ್ಯಾ ಹೆಸರಿನಲ್ಲಿ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಕ್ರಮ ವಹಿಸಲಾಗುವುದು. ಸರ್ಕಾರದಿಂದ ಈಗಾಗಲೇ 5 ಲಕ್ಷ ರೂ ಹಣವನ್ನು ನೀಡಲಾಗಿದೆ ಎಂದು ತಿಳಿಸಿದರು. ಕುಟುಂಬದ 8 ಸದಸ್ಯರಿಗೆ ತಲಾ 2 ಲಕ್ಷದಂತೆ ಒಟ್ಟಾರೆ 16 ಲಕ್ಷ ರೂ ಮೊತ್ತದ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ್, ಶಾಸಕರಾದ ಎನ್.ಎಚ್. ಕೋನರಡ್ಡಿ, ಎಫ್.ಎಚ್. ಜಕ್ಕಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಣದೀಪ ಡಿ, ಆಯುಕ್ತರಾದ ರಾಕೇಶ ಕುಮಾರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಶಾಲಂ ಹುಸೇನ್,

ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಜೆ.ಬಿ. ಮಜ್ಜಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಡಾ. ರಾಮಚಂದ್ರ ಹೊಸಮನಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಗಳ ಮುಖಂಡರು ಉಪಸ್ಥಿತರಿದ್ದರು.

ಬಳಿಕ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ದೊಡ್ಡಮನಿ ಅವರ ತಾಯಿ ರೇಣವ್ವ ದೊಡ್ಡಮನಿಯವರ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಉತ್ತಮ ಚಿಕಿತ್ಸೆ, ಔಷಧಿ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಆಚರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಅವರು ಅಮರಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸುರೇಶ ಅಕ್ಕಸಾಲಿಗರ ಅವರು ಅಮರಶಿಲ್ಪಿ ಜಕಣಾಚಾರಿಯವರ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಶಿಲ್ಪಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀಕ್ಷಕ ರಾಜಕುಮಾರ ಸೋಪಡ್ಲಾ, ಮೌನೇಶ ಬಡಿಗೇರ, ಮೌನೇಶ ಅಕ್ಕಸಾಲಿಗರ, ಗೋಪಾಲ ಬಡಿಗೇರ, ಅಶೋಕ ಸುತಾರ, ವೆಂಕಟೇಶ ಸುತಾರ, ಕುಸುಮಾ ಸುತಾರ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು ಹಾಜರಿದ್ದರು.

error: Content is protected !!