ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಹಿರಿಯರಾದ ಎಸ್.ಎಸ್. ಕಳಸಾಪುರಶೆಟ್ರು ಅಕಾಲಿಕವಾಗಿ ತಮ್ಮ 73ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದು ಅವಳಿ ನಗರಕ್ಕೆ ಮತ್ತು ಉತ್ತರ ಕರ್ನಾಟಕದ ಅವರ ಅಭಿಮಾನಿಗಳಿಗೆ ತುಂಬಲಾರದ ಹಾನಿಯಾಗಿದೆ.
ಪ್ರಗತಿಪರ ವಿಚಾರವಾದಿಗಳು, ಚಿಂತಕರಾಗಿದ್ದ ಗದುಗಿನ ಶಿವರುದ್ರಪ್ಪ ಸಿದ್ದಲಿಂಗಪ್ಪ ಕಳಸಾಪೂರಶೆಟ್ಟರೆಂದರೆ ಗದಗ, ಧಾರವಾಡ ಜಿಲ್ಲೆಗೆ ಚಿರಪರಿಚಿತರು. ಇವರು ಎಡೆಯೂರು ಸ್ವಾಮಿ ಸಿದ್ಧಲಿಂಗೇಶ್ವರರ ಪರಮಭಕ್ತರಾಗಿದ್ದು, ಗದುಗಿನ ತೋಂಟದಾರ್ಯ ಶ್ರೀಗಳವರ ಖಾಸಾ ಭಕ್ತರಾಗಿದ್ದರು.
ಪೂಜ್ಯ ತೋಂಟದಾರ್ಯ ಜಗದ್ಗುರುಗಳವರು ಪ್ರತಿವರ್ಷ ತೋಂಟದಾರ್ಯ ಜಾತ್ರಾ ಮಹೋತ್ಸವದಂದು ಶ್ರೀ ಕಳಸಾಪೂರ ಶೆಟ್ಟರ ಮನೆಯಲ್ಲಿಯೇ ಪೂಜೆ-ಪ್ರಸಾದ ತೀರಿಸಿಕೊಂಡು ಶ್ರೀಮಠಕ್ಕೆ ಆಗಮಿಸಿದ ನಂತರ ಶ್ರೀಮಠದ ತೇರು ಸಾಗುವುದು. ಈ ಪದ್ಧತಿ ಕಳೆದ ಸುಮಾರು 250 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಮನೆತನದವರು ಈ ಪರಂಪರೆಯನ್ನು ಬಹಳ ಭಕ್ತಿ-ಶ್ರದ್ಧೆ-ಅಭಿಮಾನದಿಂದ ನಡೆಸಿಕೊಂಡು ಬಂದಿದ್ದಾರೆ.
ಸೇವೆ ಮತ್ತು ತ್ಯಾಗಕ್ಕೆ ಹೆಸರಾದ ಶಿವರುದ್ರಪ್ಪನವರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು, ಜಾತ್ರಾ ಮಹೋತ್ಸವ ಇರಲಿ, ಶಿವರಾತ್ರಿ ಕಾರ್ಯಕ್ರಮ ಇರಲಿ, ದಸರಾ ಮಹೋತ್ಸವ ಇರಲಿ, ಪುರಾಣ ಪ್ರವಚನ ಇರಲಿ, ಶ್ರಾವಣ ಮಾಸದ ಕಾರ್ಯಕ್ರಮ ಇರಲಿ, ಯಾವುದೇ ಶ್ರೀಮಠದ ಶಿಕ್ಷಣ ಸಂಸ್ಥೆ ಕಾರ್ಯಕ್ರಮವಿರಲಿ ಅವುಗಳಲ್ಲಿ ಕ್ರಿಯಾಶೀಲರಾಗಿ ಬಹಳ ಅಭಿಮಾನದಿಂದ ಸೇವೆ ಸಲ್ಲಿಸಿದ್ದಾರೆ.
50 ವರ್ಷಗಳ ಹಿಂದೆ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಉತ್ತರ ಕರ್ನಾಟಕದಿಂದ ಎಡೆಯೂರು ಸ್ವಾಮಿ ಸಿದ್ಧಲಿಂಗೇಶ್ವರರ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ವಿವಿಧ ಊರುಗಳಿಂದ ಪಾದಯಾತ್ರೆ ಪ್ರಾರಂಭಿಸಿದರು. ಗದುಗಿನ ಮಾರ್ಗವಾಗಿ ಎಡೆಯೂರಿಗೆ ಹೋಗುವಾಗ ಈ ಪಾದಯಾತ್ರಾ ಮಂಡಳಿಗೆ ಶ್ರೀ ಕಳಸಾಪುರ ಶೆಟ್ರು ಬಹಳ ಭಕ್ತಿಯಿಂದ ಸಹಾಯ ಮಾಡುತ್ತ, ಕೊನೆಗೆ ಪಾದಯಾತ್ರೆ ಮುಕ್ತಾಯದ ದಿನ ಎಡೆಯೂರು ಕ್ಷೇತ್ರಕ್ಕೆ ಕೂಡ ಹೋಗಿಬರುತ್ತಿದ್ದರು.
ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಎಸ್.ಎಂ. ಜಾಮದಾರ ಅವರ ಮಾರ್ಗದರ್ಶನದಲ್ಲಿ ಇವರು ಹಾಗೂ ಇವರ ಸಹೋದರ ಶೇಖಣ್ಣ ಇವರು ಒಳ್ಳೆಯ ಗುತ್ತಿಗೆದಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರೀಯುತರು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೆಗೌಡರು, ಹಿಂದಿನ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ಬಸವರಾಜ ಬೊಮ್ಮಾಯಿ, ಎಂ.ಪಿ. ಪ್ರಕಾಶ್ ಮತ್ತು ಇಂದಿನ ಪ್ರಗತಿಪರ ಚಿಂತನೆಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಆಪ್ತರು. ಆ ಕಾರಣಕ್ಕಾಗಿ ಎಸ್.ಆರ್. ಬೊಮ್ಮಾಯಿಯವರು ರಾಜ್ಯಸಭಾ ಸದಸ್ಯರಾಗಿದ್ದಾಗ 2000ನೇ ಇಸ್ವಿಯಲ್ಲಿ 5 ಲಕ್ಷ ರೂಪಾಯಿಗಳ ಅನುದಾನವನ್ನು ಶ್ರೀ ತೋಂಟದಾರ್ಯ ಶಿಕ್ಷಣ ಸಂಸ್ಥೆಗೆ ಕೊಡಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಆಳಂದದ ಇಂದಿನ ಶಾಸಕರಾದ ಬಿ.ಆರ್. ಪಾಟೀಲ, ಕುಷ್ಟಗಿ ಮಾಜಿ ಶಾಸಕರಾದ ಕೆ. ಶರಣಪ್ಪ, ಗದುಗಿನ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಸಚಿವರಾದ ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಸ್.ಎಸ್. ಕಡಪಟ್ಟಿ, ಮಾಜಿ ಸಂಸದರಾದ ಕೆ.ಎಸ್. ವೀರಭದ್ರಪ್ಪ, ಆರ್.ಎಸ್. ಪಾಟೀಲ, ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಹುಂಬರವಾಡಿ, ಶಲವಡಿ ಶಂಕರಗೌಡ್ರ, ಶ್ರೀಶೈಲಪ್ಪ ಬಿದರೂರ, ಸಭಾಪತಿಗಳಾದ ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ, ಎಂ.ಆರ್. ಪಾಟೀಲ, ಹಿರೇಗೌಡ್ರ, ಲಕ್ಷ್ಮೇಶ್ವರದ ಟಿ.ಈಶ್ವರ, ನಾಡಿನ ಹಿರಿಯ ಸಂಶೋಧಕರಾದ ಡಾ. ಎಂ.ಎನ್. ಕಲಬುರ್ಗಿ ಹಾಗೂ ಅನೇಕ ಸಮಾಜಮುಖಿ ಗಣ್ಯರ ಆಪ್ತ ವಲಯದಲ್ಲಿ ಇದ್ದವರು.
ಪೂಜ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳ ಕಾಲದಲ್ಲಿ ಮತ್ತು ಅವರು ಲಿಂಗೈಕ್ಯರಾದಾಗ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಅದೇ ರೀತಿ ಇಂದಿನ ಪೂಜ್ಯರೊಂದಿಗೆ ಆಪ್ತವಾದ ಸಂಬಂಧವನ್ನು ಹೊಂದಿದ್ದರು. ಕಳೆದ ನಾಲ್ಕು ದಶಕಗಳಿಂದ ನನ್ನ ಜೊತೆ ಒಡನಾಟ ಹೊಂದಿದ ಇವರ ಅಗಲಿಕೆಯು ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಬಸವಾದಿ ಪ್ರಮಥರು ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.
– ಪ್ರೊ. ಶಿವಾನಂದ ಎಸ್. ಪಟ್ಟಣಶೆಟ್ಟರ
ಕಾರ್ಯದರ್ಶಿಗಳು,
ಜಗದ್ಗುರು ತೋಂಟದಾರ್ಯ ವಿದ್ಯಾಸಂಸ್ಥೆ, ಗದಗ.