Home Blog Page 24

ಸಾಲದ ಬಡ್ಡಿ ಮನ್ನಾ ನಿರ್ಧಾರವು ಸಂವಿಧಾನದ ವಿರೋಧಿ ಕ್ರಮ: ಸಿ.ಟಿ. ರವಿ ಎಚ್ಚರಿಕೆ

0

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ, “ಮುಖ್ಯಮಂತ್ರಿಗಳು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವಂತೆ ಕೆಲಸ ಮಾಡಬಾರದು. ಕೇವಲ ಒಂದು ಸಮುದಾಯವನ್ನು ಓಲೈಸುವ ರಾಜಕಾರಣ ಇತರ ಸಮುದಾಯಗಳಿಗೆ ದೊಡ್ಡ ಅನ್ಯಾಯ” ಎಂದು ಹೇಳಿದರು.

ಸಾಲದ ಬಡ್ಡಿ ಮನ್ನಾ ನೀತಿಯನ್ನು ವಿಶೇಷ ವರ್ಗದ ಮತಗಳನ್ನು ನೆಚ್ಚಿಕೊಂಡು ಕೈಗೊಳ್ಳುವುದು ಸಂವಿಧಾನ ವಿರೋಧಿ ಕ್ರಮ. ಸರ್ವ ಸಮುದಾಯಗಳ ಬಡವರ ಬಡ್ಡಿಯನ್ನೂ ತಕ್ಷಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ, ಸಂಸದ ತೇಜಸ್ವಿ ಸೂರ್ಯರನ್ನು ಬಂಧಿಸಿರುವ ಬಗ್ಗೆ ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದರು. ಜನರ ಪರ ಧ್ವನಿ ಎತ್ತಿರುವವರಿಗೆ ಸರ್ಕಾರದ ಈ ಕಠಿಣ ಕ್ರಮವು ಸರ್ವಾಧಿಕಾರಿ ಧೋರಣೆ ಮತ್ತು ಜನವಿರೋಧಿ ನೀತಿಯನ್ನು ತೋರಿಸುತ್ತದೆ. ಇಂತಹ ಕ್ರಮಗಳು ಪ್ರಜಾಪ್ರಭುತ್ವದಲ್ಲಿ ದೀರ್ಘಕಾಲ ಉಳಿಯುವುದಿಲ್ಲ” ಎಂದು ಎಚ್ಚರಿಸಿದರು.

ಅಮೃತ ಯೋಜನೆಯಿಂದ ನೀರಿನ ಸಮಸ್ಯೆ ನಿವಾರಣೆ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದಲ್ಲಿ ಅತಿ ಶೀಘ್ರದಲ್ಲೇ 38 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ 15ನೇ ಹಣಕಾಸು ಯೋಜನೆಯಡಿ 50.40 ಲಕ್ಷ ರೂ.ಗಳ ವೆಚ್ಚದಲ್ಲಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಪಟ್ಟಣದ ನಾಗರಿಕ ಸಮುದಾಯದ ಹಿತದೃಷ್ಟಿಯಿಂದ ಅಮೃತ ಯೋಜನೆಯನ್ನು ತರಲಾಗಿದ್ದು, ಕಾಮಗಾರಿ ಕೂಡ ಭರದಿಂದ ಸಾಗಿದೆ. ಅಮೃತ ಯೋಜನೆಯಿಂದ ನೀರಿನ ಸಮಸ್ಯೆ ತಗ್ಗಲಿದೆ. ಅಲ್ಪಸಂಖ್ಯಾತರ ವಸತಿ ಶಾಲೆಗೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಟ್ಟಣದ ಹೃದಯ ಭಾಗದಲ್ಲಿರುವ ಶಾನಭೋಗರ ಕೆರೆ ಅಭಿವೃದ್ಧಿಗಾಗಿ 1 ಕೋಟಿ ರೂ.ಗಳ ಅನುದಾನವನ್ನು ತರಲಾಗಿದೆ ಎಂದರು.

ಪಟ್ಟಣ ಪ್ರದೇಶಗಳು ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿವೆ. ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವನ್ನು ಒದಗಿಸುತ್ತಿದೆ ಎಂಬುದನ್ನು ನಾಗರಿಕ ಸಮಾಜ ಮರೆಯಬಾರದು ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ವಿ.ಆರ್. ಗುಡಿಸಾಗರ, ಮುತ್ತಣ್ಣ ಸಂಗಳದ, ತೋಟಪ್ಪ ನವಲಗುಂದ, ಬಾವಾಸಾಬ ಬೆಟಗೇರಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಪರಶುರಾಮ ಅಳಗವಾಡಿ, ದುರ್ಗಪ್ಪ ಹಿರೇಮನಿ, ದಾವಲಸಾಬ ಬಾಡಿನ, ಸಂಜಯ ದೊಡ್ಡಮನಿ, ಮಲಿಕ ಯಲಿಗಾರ, ಅಸ್ಲಂ ಕೊಪ್ಪಳ, ರಂಗವ್ವ ಭಜಂತ್ರಿ, ಮುಖ್ಯಾಧಿಕಾರಿ ರಮೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೋಲ್ಡ್ ಸ್ಟೋರೇಜ್‌ನ್ನು ಪಟ್ಟಣಕ್ಕೆ ತರಲಾಗಿದ್ದು, ಈ ಯೋಜನೆಯಿಂದ ರೈತರಿಗೆ ಲಾಭವಾಗಲಿದೆ. ಪಟ್ಟಣದ ಎಲ್ಲ ವಾರ್ಡ್ಗಳ ಪ್ರಗತಿಗಾಗಿ ಸಾಕಷ್ಟು ಅನುದಾನವನ್ನು ಒದಗಿಸಲಾಗಿದ್ದು, ಸಿಸಿ ರಸ್ತೆ ಕಾಮಗಾರಿಗಳು ಸಹ ನಡೆಯುತ್ತಿವೆ. ಮುಖ್ಯವಾಗಿ 20 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಸಹ ಪ್ರಗತಿಯತ್ತ ಸಾಗಿದ್ದು, ಇನ್ನೂ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳು ರೋಣ ಪಟ್ಟಣಕ್ಕೆ ಬರಲಿವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಗ್ರಾಹಕರ ಕೈ ಸುಡುತ್ತಿದೆ ವೀಳ್ಯದೆಲೆ ಬೆಲೆ!

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಇದೀಗ ಮಾರುಕಟ್ಟೆಗಳಲ್ಲಿ ವೀಳ್ಯದೆಲೆಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಗ್ರಾಹಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಪ್ರಸ್ತುತ ಒಂದು ಕಟ್ಟು ವೀಳ್ಯದೆಲೆ ಬೆಲೆ 170ರಿಂದ 200 ರೂ. ಗಡಿ ದಾಟಿದ್ದು, ಕಳೆದ ದಶಕದಲ್ಲೇ ಅಪರೂಪದ ದಾಖಲೆ ಏರಿಕೆಯಾಗಿ ಪರಿಣಮಿಸಿದೆ. ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದ್ದರೆ, ಗ್ರಾಹಕರಿಗೆ ಬಾಯಿ ಸುಡುವಂತೆ ಮಾಡಿದೆ.

ಕಳೆದ ಮೂರು ತಿಂಗಳಿಂದ ವೀಳ್ಯದೆಲೆ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇತ್ತೀಚಿನ ಒಂದು ವಾರದಲ್ಲೇ ಒಂದು ಕಟ್ಟಿನ ಬೆಲೆ 50ರಿಂದ 60 ರೂ.ವರೆಗೆ ಹೆಚ್ಚಳವಾಗಿರುವುದು ಗ್ರಾಹಕರ ಮೇಲೆ ಭಾರೀ ಹೊರೆಯಾಗುತ್ತಿದೆ. ಒಂದು ಕಟ್ಟಿನಲ್ಲಿ ಸಾಮಾನ್ಯವಾಗಿ 100 ವೀಳ್ಯದೆಲೆಗಳು ಇರುತ್ತವೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರೂ ದರದಲ್ಲಿ ಮಾರಾಟವಾಗುತ್ತಿದೆ.

ಮದುವೆ, ಗೃಹಪ್ರವೇಶ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಶುಭ ಕಾರ್ಯಗಳಿಗೆ ಅತ್ಯವಶ್ಯವಾಗಿ ಬೇಕಾಗಿರುವ ವೀಳ್ಯದೆಲೆಯ ಬೆಲೆಯು ಬಂಗಾರದ ಬೆಲೆಯಂತೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಖರೀದಿಸುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ತಾಲೂಕಿನಾದ್ಯಂತ ಅಂದಾಜು 55 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದ್ದು, ಶಾಂತಗೇರಿ, ಮುಸಿಗೇರಿ, ರುದ್ರಾಪೂರ, ಅಮರಗಟ್ಟಿ, ಗೋಗೇರಿ, ಮಾಟರಂಗಿ, ಜಿಗೇರಿ, ರಾಜೂರ, ಗುಳಗುಳಿ, ಕಲ್ಲಿಗನೂರು ಸೇರಿದಂತೆ ಹತ್ತಾರು ಗ್ರಾಮಗಳ ರೈತರು ವೀಳ್ಯದೆಲೆಯ ಕೃಷಿಯಿಂದ ಜೀವನ ನಡೆಸುತ್ತಿದ್ದಾರೆ.

ವೀಳ್ಯದೆಲೆ ದರ ಹೆಚ್ಚಾಗಲು ಹವಾಮಾನ ವೈಪರೀತ್ಯ ಕಾರಣ ಎನ್ನಲಾಗಿದೆ. ವೀಳ್ಯದೆಲೆ ತೋಟಗಳಲ್ಲಿ ಚಳಿಗೆ ಬಳ್ಳಿಗಳು ಎಲೆ ಕಟ್ಟುತ್ತಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ವೀಳ್ಯದೆಲೆ ದರ ಹೆಚ್ಚಾಗಿದೆ. ಯುಗಾದಿ ನಂತರದಲ್ಲಿ ಹೊಸ ಚಿಗುರು ಬರಲು ಪ್ರಾರಂಭವಾಗಿ ಇಳುವರಿ ಹೆಚ್ಚಾಗುತ್ತದೆ. ನಂತರವಷ್ಟೇ ದರ ಇಳಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ರೈತರು ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ವೀಳ್ಯದೆಲೆ ಬಳ್ಳಿ ನಾಟಿ ಮಾಡಿದ ನಂತರ ಎಲೆ ಕಟಾವಿಗೆ ಸಿಗಲು ಕನಿಷ್ಠ 2 ವರ್ಷವಾದರೂ ಬೇಕಾಗುತ್ತದೆ. ಬೆಲೆ ಏರಿಕೆಯಾಗುತ್ತಿರುವುದು ರೈತರಿಗೆ ಸಂತಸ ತಂದಿದೆ. ಆದರೆ ದೊಡ್ಡ ವ್ಯಾಪಾರಸ್ಥರಿಗೆ ಒಂದೆರಡು ಬಂಡಲ್‌ಗೂ ಸಾವಿರಾರು ಬಂಡವಾಳ ಹಾಕುವ ಅನಿವಾರ್ಯತೆ ಎದುರಾಗಿದ್ದು, ಸಣ್ಣ ವ್ಯಾಪಾರಸ್ಥರು ಖರೀದಿಸಿ ಅವುಗಳನ್ನು ಬಿಡಿ ಬಿಡಿಯಾಗಿ ಗ್ರಾಹಕರಿಗೆ ಮಾರಾಟ ಮಾಡಿ ಹಾಕಿದ ಬಂಡವಾಳ ಹಿಂತೆಗೆಯುವ ಸವಾಲು ಎದುರಾಗಿದೆ.

ವೀಳ್ಯದೆಲೆಯು ಶುಭ ಸಮಾರಂಭಗಳಿಗೆ ಅಗತ್ಯವಾಗಿ ಬೇಕಾಗಿರುವ ವಸ್ತು. ಇದರೊಂದಿಗೆ ದೈನಂದಿನ ಬದುಕಿನಲ್ಲಿ ವೀಳ್ಯದೆಲೆ ಅವಶ್ಯಕವಾಗಿದೆ. ಬೇಸಿಗೆ ಕಾಲ ಬಂದಿರುವುದರಿಂದ ಇಳುವರಿ ಕುಂಠಿತವಾಗಿದ್ದು, ದರ ಏರಿಕೆಯಾದರೂ ಖರೀದಿಸುವುದು ಅನಿವಾರ್ಯವಾಗಿದೆ ಎಂದು ಕೊಡಗಾನೂರ ಗ್ರಾಮದ ರಮೇಶ ರಾಮಜಿ ಅಭಿಪ್ರಾಯಪಟ್ಟಿದ್ದಾರೆ.

ಕೋಟ್

ಕಳೆದ ಒಂದು ತಿಂಗಳ ಹಿಂದೆ ವೀಳ್ಯದೆಲೆ ಬೆಳೆಗೆ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವೀಳ್ಯದೆಲೆಯ ಇಳುವರಿ ಕುಂಠಿತವಾಗಿದ್ದು, ಅನಿವಾರ್ಯವಾಗಿ ದರ ಏರಿಕೆ ಕಂಡಿದೆ.

  • ಹನಮಂತ ಕರಿ.
    ಪ್ರಗತಿಪರ ರೈತ, ರುದ್ರಾಪೂರ.

ಕೋಟ್

ಚಳಿಗಾಲದ ಸಮಯ ಮತ್ತು ಈ ಸಮಯದಲ್ಲಿ ಗುಣಮಟ್ಟದ ಇಳುವರಿ ಬಾರದಿರುವುದು, ಜತೆಗೆ ಮಂಗಳ ಕಾರ್ಯಗಳು ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಇದು ಇನ್ನೂ 3-4 ತಿಂಗಳು ಹೀಗೆ ಇರುವ ಸಾಧ್ಯತೆ ಇದೆ.

  • ಮಹಾಂತೇಶ್ ಆಂಟಿನ.
    ಸಹಾಯಕ ತೋಟಗಾರಿಕೆ ಅಧಿಕಾರಿ-ನರೇಗಲ್.

ಪರಿಸರದ ಉಳಿವಿಗೆ ಜನತೆಯ ಸಹಕಾರವಿರಲಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: 33 ಸಾವಿರ ಹೆಕ್ಟೇರ್ ವ್ಯಾಪ್ತಿಯ ವಿಸ್ತಾರದಲ್ಲಿ ಹಬ್ಬಿರುವ ಸಸ್ಯ ಕಾಶಿ ಕಪ್ಪತ್ತಗುಡ್ಡ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ 132ಕ್ಕೂ ಹೆಚ್ಚು ಭಾಗಗಳಲ್ಲಿ ಫೈರ್‌ಲೈನ್ (ಬೆಂಕಿ ತಡೆ ರೇಖೆ) ನಿರ್ಮಿಸುವ ಮೂಲಕ ಬೆಂಕಿ ತಡೆಗೆ ಅರಣ್ಯ ಇಲಾಖೆ ಸನ್ನದ್ಧವಾಗಿದೆ.

ಹಿರೇವಡ್ಡಟ್ಟಿ, ಡೋಣಿ, ಬಾಗೇವಾಡಿ, ಕಲಕೇರಿ, ಡಂಬಳ ಭಾಗದ ಸಂರಕ್ಷಿತ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ವಾಟರ್ ರಸ್ತೆಗಳಲ್ಲಿ ಬೆಂಕಿ ತಡೆಗೆ ಕಪ್ಪತ್ತಗುಡ್ಡದ 5 ಶಾಖೆಗಳಲ್ಲಿ ಫೈರ್ ಲೈನ್ ನಿರ್ಮಿಸಲಾಗುತ್ತಿದೆ. ಪ್ರಾಣಿಗಳು ವಾಸವಿರುವ ಜಾಗಗಳನ್ನು ಗುರುತಿಸಿ ಪ್ರಾಣಿಗಳ ಸಂರಕ್ಷಿತ ಪ್ರದೇಶಗಳಲ್ಲಿ, ಕಪ್ಪತ್ತಗುಡ್ಡ ಫ್ಯಾನ್‌ಗಳ ನಿರ್ವಹಣೆಗಾಗಿ ನಿರ್ಮಾಣವಾಗಿರುವ ರಸ್ತೆ ಪಕ್ಕದ ಅರಣ್ಯ ವಲಯದಲ್ಲಿ ವಾಹನಗಳು ಸಂಚರಿಸುವ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಬೆಂಕಿ ತಡೆಯುವ ರೇಖೆ ನಿರ್ಮಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು.

ಗದಗ ಜಿಲ್ಲಾ ಹಿರಿಯ ಅರಣ್ಯ ಅಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮತ್ತು ಮುಂಡರಗಿಯ ಆರ್‌ಎಫ್‌ಓ ಮಂಜುನಾಥ ಮೇಗಲಮನಿ ವಿಶೇಷ ಅಭಿಯಾನದ ಮೂಲಕ ಜಾಗೃತಿ ಮೂಡಿಸಿ ಪರಿಸರವೇ ಮನುಷ್ಯನ ಶಕ್ತಿಯಾಗಿದೆ ಎಂದು ಸಾರಿದ್ದರಿಂದ ಅಪಾರ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಬಾಕ್ಸ್

ಕೆಲ ಕಿಡಿಗೇಡಿಗಳು ಹರಕೆಯನ್ನು ಈಡೇರಿಸಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವ ಮೌಢ್ಯ ಆಚರಣೆಯಷ್ಟೇ ಅಲ್ಲದೆ, ವಿವಿಧ ಕಂಪನಿಗಳು ನಿರ್ಮಿಸಿರುವ ವಿಂಡ್ ಫ್ಯಾನ್‌ಗಳಲ್ಲಿ ಕೆಲ ಬಾರಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗುವ ಬೆಂಕಿ ತಡೆಯಲು ನಿಗಾ ಇಡಲಾಗಿದ್ದು, ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಪರಿಸರವಾದಿಗಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಲಾಖೆ ಮುಂದಾಗುವುದರ ಮೂಲಕ ಪರಿಸರ ಉಳಿವಿಗಾಗಿ ಅರಣ್ಯ ಸಿಬ್ಬಂದಿ ಮತ್ತು ಗುತ್ತಿಗೆ ವಾಚರ್‌ಗಳ ಮೂಲಕ ಮತ್ತು 2 ಡ್ರೋನ್ ಕಣ್ಗಾವಲು, ಗುಡ್ಡದ ಪ್ರಮುಖ ಭಾಗಗಳಲ್ಲಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ ಎಂದು ಆರ್.ಎಫ್.ಒ ಮಂಜುನಾಥ ಮೇಗಲಮನನಿ ಮಾಹಿತಿ ನೀಡಿದರು.

ಕಪ್ಪತ್ತಗುಡ್ಡದ ಉಳಿವಿಗಾಗಿ ಅರಣ್ಯ ಇಲಾಖೆ ಮಾತ್ರ ಶ್ರಮಿಸಿದರೆ ಸಾಲದು. ಪರಿಸರದ ಉಳಿವಿಗಾಗಿ ಜನತೆಯ ಸಹಕಾರ, ಪರಿಸರವಾದಿಗಳ ಕಾಳಜಿಯೊಂದಿಗೆ ಆಮ್ಲಜನಕ ಸೃಷ್ಟಿಯ ಫ್ಯಾಕ್ಟರಿ, ಜನರ ಹೃದಯದಂತಿರುವ ಸಸ್ಯಗಳ ತಾಣ ಕಪ್ಪತ್ತಗುಡ್ಡದ ಸಸ್ಯ ಸಂಪತ್ತಿನ ಉಳಿವಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ.

  • ಸಂತೋಷಕುಮಾರ ಕೆಂಚಪ್ಪನವರ.
    ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ.

ಬಿಸಿಸಿಐ ಹೊಸ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟ: ಪುರುಷ–ಮಹಿಳಾ ಆಟಗಾರರು ಯಾರಿದ್ದಾರೆ ಗೊತ್ತಾ?

0

ಟಿ20 ವಿಶ್ವಕಪ್ ನಡುವೆಯೇ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಹೊಸ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಪುರುಷರ ತಂಡದಲ್ಲಿ ಒಟ್ಟು 30 ಆಟಗಾರರು ಸೇರಿದ್ದು, A, B, C ಗ್ರೇಡ್‌ನಲ್ಲಿ ವರ್ಗೀಕರಣ ಮಾಡಲಾಗಿದೆ. A ಗ್ರೇಡ್‌ನಲ್ಲಿ ಶುಭ್ಮನ್ ಗಿಲ್, ಜಸ್ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ ಮತ್ತು ಅವರು ಅತ್ಯಧಿಕ ಸಂಭಾವನೆ ಪಡೆಯಲಿದ್ದಾರೆ. B ಗ್ರೇಡ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್ ಸೇರಿದ್ದಾರೆ.

C ಗ್ರೇಡ್‌ನಲ್ಲಿ ತಿಲಕ್ ವರ್ಮಾ, ಅಕ್ಸರ್ ಪಟೇಲ್, ಶಿವಂ ದುಬೆ, ಸಂಜು ಸ್ಯಾಮ್ಸನ್ ಸೇರಿದಂತೆ 16 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಬಾರಿ BCCI A+ ಗ್ರೇಡ್ ಅನ್ನು ರದ್ದುಗೊಳಿಸಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿರುವ ಕಾರಣ ಅವರನ್ನು ಹಿಂಬಡ್ತಿ ನೀಡಲಾಗಿದೆ.

ಮಹಿಳಾ ತಂಡದಲ್ಲಿ ಒಟ್ಟು 21 ಆಟಗಾರ್ತಿಯರು ಸೇರಿದ್ದು, A ಗ್ರೇಡ್‌ನಲ್ಲಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ, B ಗ್ರೇಡ್‌ನಲ್ಲಿ ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ಸ್ನೇಹ ರಾಣಾ, C ಗ್ರೇಡ್‌ನಲ್ಲಿ ರಾಧಾ ಯಾದವ್, ಅಮಂಜೋತ್ ಕೌರ್ ಸೇರಿದಂತೆ 13 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ದೇವಸ್ಥಾನದ ಕೆಲಸದಲ್ಲಿ ರಾಜಕೀಯ ಮಾಡದಿರಿ: ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಮ್ಮೆಲ್ಲರ ಒಗ್ಗಟ್ಟಿನಿಂದ ಭಕ್ತಿಯ ಜೊತೆಗೆ ಶಕ್ತಿ ಕೇಂದ್ರವಾಗಿ ಬೆಳೆಯಲಿ ಎಂದು ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಆಶಿಸಿದರು.

ಅವರು ನಗರದ ಸಂಭಾಪೂರ ರಸ್ತೆಯ ಕೆ.ಇ.ಬಿ ಗ್ರಿಡ್ ಹಿಂದುಗಡೆ ಬಡಾವಣೆಯಲ್ಲಿ ಶ್ರೀ ರೇಣುಕಾದೇವಿ ಪ್ರತ್ಯಂಗಿರಾದೇವಿ ಟ್ರಸ್ಟ್ ಗದಗ-ಬೆಟಗೇರಿ ಇವರ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾದೇವಿ ಹಾಗೂ ಶ್ರೀ ಪ್ರತ್ಯಂಗಿರಾದೇವಿ ಉಭಯ ದೇವಸ್ಥಾನಗಳ ಭೂಮಿಪೂಜಾ ನೆರವೇರಿಸಿ ಮಾತನಾಡಿದರು.

ಎಲ್ಲರ ಜೀವನದಲ್ಲಿ ದೇವಿಯ ಶಕ್ತಿಯ ಅನುಭವವಾಗಿರುತ್ತದೆ. ಎಲ್ಲರೂ ದೇವಸ್ಥಾನದ ಕೆಲಸದಲ್ಲಿ ರಾಜಕೀಯ ಮಾಡದೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ನಿರೀಕ್ಷೆಗೂ ಮೀರಿ ಕೆಲಸವಾಗುತ್ತದೆ. ಕೂಡಲೇ ದೇವಸ್ಥಾನದ ಕಟ್ಟಡದ ನಿರ್ಮಾಣ ಕಾರ್ಯ ಪ್ರಾರಂಭದ ಜೊತೆಗೆ ಸಮ ಸಮಾಜದ ನಿರ್ಮಾಣವಾಗಬೇಕಾಗಿದೆ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಫೀರಸಾಬ ಕೌತಾಳ ಮಾತನಾಡಿ, ದೇವನೊಬ್ಬ ನಾಮ ಹಲವು. ಎಲ್ಲರೂ ಒಟ್ಟಾಗಿ ಸಹೋದರತೆಯಿಂದ ಬಾಳಿ ಬದುಕಿದಾಗ ಮಾತ್ರ ಈ ಮಾನವ ಜನ್ಮ ಸಾರ್ಥಕವಾಗುವದು. ನಿಮ್ಮ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವದಾಗಿ ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ದೇವಸ್ಥಾನದ ಕಟ್ಟಡದ ನಿರ್ಮಾಣಕ್ಕೆ ಅನುದಾನವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಯುವ ಮುಖಂಡ ಅಮರೇಶ ಬೆಟಗೇರಿ, ಹನಮಂತ ವೀರಾಪೂರ, ಶ್ರೀ ರೇಣುಕಾದೇವಿ ಪ್ರತ್ಯಂಗಿರಾದೇವಿ ಟ್ರಸ್ಟ್ನ ಗೌರವ ಅಧ್ಯಕ್ಷರಾದ ಗದಿಗೆವ್ವ ಗುಡೇನಕಟ್ಟಿ, ಅಧ್ಯಕ್ಷರಾದ ಅನಿತಾ ಬಾಗಲಕೋಟಿ, ಉಪಾಧ್ಯಕ್ಷರಾದ ಮಂಜುಳಾ ಕುರಿ, ಕಾರ್ಯದರ್ಶಿ ಗಂಗವ್ವ ಚಕ್ರಣ್ಣವರ, ಸಹಕಾರ್ಯದರ್ಶಿ ರೇಖಾ ಬಾಗಲಕೋಟಿ, ಸಂಘಟನಾ ಕಾರ್ಯದರ್ಶಿ ಈರಮ್ಮ ಬಾಗಲಕೋಟಿ, ಖಜಾಂಚಿ ರೇಖಾ ಜಡಿಯವರ, ಶೈಲಾ ಬೆರಗೇರಿ, ತೇಜಸ್ವಿ ಬಾಗಲಕೋಟಿ ಮುಂತಾದವರು ಉಪಸ್ಥಿತರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಣೆ ಮಾಡಿದರು. ಗಂಗಾ ಚಕ್ರಣ್ಣವರ ಸ್ವಾಗತಿಸಿದರು. ರೇಖಾ ಜಡಿಯವರ ವಂದಿಸಿದರು.

ನಾಳೆಯಿಂದ ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ: MB ಪಾಟೀಲ್

0

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ಮಾರುಕಟ್ಟೆ ಬಲವರ್ಧನೆಗಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು 2 ವರ್ಷದ ಅವಧಿಗೆ ಪ್ರಚಾರ ರಾಯಭಾರಿಯಾಗಿ ನೇಮಿಸಿದೆ.

ಅವರು ಫೆ.10ರಿಂದ ಅಧಿಕೃತವಾಗಿ ತಮ್ಮ ಕಾರ್ಯಾರಂಭ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನವನವೀನ ರೂಪದಲ್ಲಿಯೂ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, KSDL ವಹಿವಾಟನ್ನು 2030ಕ್ಕೆ ₹5,000 ಕೋಟಿ ತಲುಪಿಸುವ ಗುರಿಯಿದೆ. ತಮನ್ನಾ ಅವರ ಸೆಲೆಬ್ರಿಟಿ ಪ್ರಭಾವದಿಂದ ಯುವಜನಾಂಗ ಹಾಗೂ ಉತ್ತರ ಭಾರತದ ಮಾರುಕಟ್ಟೆಗೆ ಉತ್ತೇಜನ ನೀಡಲಾಗುವುದು. ಕೆಎಸ್‌ಡಿಎಲ್‌ ಶತಮಾನಕ್ಕೂ ಮೇಲಾಗಿರುವ ಪರಂಪರೆಯ ಸಂಸ್ಥೆ.

ಪ್ರಸ್ತುತ 57 ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಮೈಸೂರು ಸ್ಯಾಂಡಲ್ ಸೋಪಿನಿಂದ ಕುಡಿಯುವ ನೀರಿನವರೆಗೂ ವ್ಯಾಪ್ತಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ತಮನ್ನಾ ಇತರ ಖಾಸಗಿ ಕಂಪನಿಗಳಲ್ಲಿನ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲರ 34ನೇ ಪುಣ್ಯಸ್ಮರಣೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿ. ಕೆ.ಎಚ್. ಪಾಟೀಲರ ಪುಣ್ಯಸ್ಮರಣೆಯನ್ನು ಸೋಮವಾರ ನಗರದ ದಿ. ಗದಗ ಕೋ-ಆಪ್ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಅತ್ಯಂತ ಭಕ್ತಿ-ಗೌರವಗಳೊಂದಿಗೆ ಆಚರಿಸಲಾಯಿತು.

ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರು ದಿ. ಕೆ.ಎಚ್. ಪಾಟೀಲರ ಭವ್ಯ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಎಚ್. ಪಾಟೀಲರು ಸಹಕಾರಿ ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೀಳಗಿ ಶಾಸಕ ಜಿ.ಟಿ. ಪಾಟೀಲ, ರೋಣ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ತಾಲೂಕು ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಕಾಂಗ್ರೆಸ್ ಮುಖಂಡರಾದ ಎಸ್.ಎನ್. ಬಳ್ಳಾರಿ, ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಾಬರ್ಚಿ, ಜಿ.ಪಂ ಮಾಜಿ ಅಧ್ಯಕ್ಷ ಸುಜಾತಾ ದೊಡ್ಡಮನಿ, ನಗರಸಭೆ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ಕಡೆಮನಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಉಮರಫಾರೂಖ್ ಹುಬ್ಬಳ್ಳಿ, ಮುಖಂಡರಾದ ವೀಣಾ ಕಟ್ನಳ್ಳಿ, ಶಾರೂಖ್ ಹುಯಿಲಗೋಳ, ಶಹಬಾಜ್ ಮುಲ್ಲಾ, ಶಂಭು ಕಾಳೆ, ಮಹಮ್ಮದ್ ಶಾಲಗಾರ, ಸರ್ಫರಾಜ್ ಬಾಬರ್ಚಿ, ವಿನಾಯಕ ಬಳ್ಳಾರಿ, ಸೈಯದ್‌ಖಾಲಿದ ಕೊಪ್ಪಳ, ಅನ್ವರ ನದಾಫ್, ಮಹಾಂತೇಶ ಮಡಿವಾಳರ, ಪರಪ್ಪ ಕಮತರ, ಕಮಲಾಕ್ಷಿ ಹಾದಿಮನಿ, ಯಲ್ಲಮ್ಮ ಜಡಿ, ದ್ರಾಕ್ಷಾಯಣಿ ಹಾಸಿಲ್ಕರ್, ಪೂಜಾ ಬೇವೂರ, ಮರಿಯಪ್ಪ ಸಣ್ಣತಂಗಿಯವರ, ಮಹೇಶ ಪಟ್ಟಣಶೆಟ್ಟಿ, ಜಾಕೀರ ಕುನ್ನಿಬಾವಿ, ಪರಮೇಶಪ್ಪ ಜಂತ್ಲಿ, ಕರಬಸಯ್ಯ ನಾಲ್ವಾಡಮಠ, ಮಲಿಕ್ ಸಂಗಾಪೂರ, ಉಮರ್‌ಫಾರೂಖ್ ಬಾರಿಗಿಡದ, ಅಭಿಷೇಕ, ಶಿವು ಹಾದಿಮನಿ, ಸಂತೋಷ ರಾಮೇನಹಳ್ಳಿ, ಮಹಮ್ಮದ್ ಬೆಟಗೇರಿ, ಅಜ್ಜಪ್ಪ ವಗ್ಗನ್ನವರ, ವಿರೂಪಾಕ್ಷ ನಂದೆಣ್ಣವರ, ಅಹ್ಮದ್ ಖಾಜಿ, ಹುಸೇನ್ ಓಲೇಕಾರ, ಅನ್ವರ ಶಿರಹಟ್ಟಿ, ಕಾಂಗ್ರೆಸ್ ಮುಖಂಡರು, ಕೆ.ಎಚ್. ಪಾಟೀಲ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವಿವಿಧ ಇಲಾಖೆಗಳಲ್ಲಿ ನೈಪುಣ್ಯತೆಯನ್ನು ಕೆ.ಎಚ್. ಪಾಟೀಲರು ಹೊಂದಿದ್ದರು. ಅಂದು ಗದಗ-ಬೆಟಗೇರಿಯಲ್ಲಿ ನೀರಿನ ಸಮಸ್ಯೆ ಸಾಕಷ್ಟು ತಲೆದೋರಿತ್ತು. ಆ ನೀರಿನ ಸಮಸ್ಯೆಯನ್ನು ಬಗೆಹರಿಸಿ ನೀರಾವರಿ ಭೀಷ್ಮ ಎಂದೇ ಕರೆಯಿಸಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿಯೂ ಅಷ್ಟೇ ವಿಶೇಷ ಆಸಕ್ತಿಯನ್ನು ದಿ. ಕೆ.ಎಚ್. ಪಾಟೀಲರು ಹೊಂದಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದರು ಎನ್ನುವುದನ್ನು ಅವರ ಪುಣ್ಯ ಸ್ಮರಣೆಯ ದಿನದಂದು ನಾವು ಸ್ಮರಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.

ರೈತರ ಹಿತ ಕಾಯುವುದು ಸಹಕಾರಿಗಳ ಕರ್ತವ್ಯ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರೈತರ ಹಿತವನ್ನು ಬಯಸುವುದು ಸಹಕಾರಿ ಸಂಘಗಳ ಆದ್ಯ ಕರ್ತವ್ಯವಾಗಿದ್ದು, ನೂತನವಾಗಿ ಆಯ್ಕೆಯಾದ ಸದಸ್ಯರು ಇದನ್ನು ಅರಿತು ತಮ್ಮ ಕೆಲಸ ನಿರ್ವಹಿಸಬೇಕು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ರವಿವಾರ ಸಂಜೆ ತಮ್ಮ ನಿವಾಸದಲ್ಲಿ ಹೊಸಳ್ಳಿ ಗ್ರಾಮದ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಜಯ ಗಳಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸತ್ಕರಿಸಿ ಮಾತನಾಡಿದರು.

ಸಹಕಾರಿ ಸಂಘಗಳು ಮೊದಲಿನಿಂದಲೂ ರೈತರ ಹಿತಕ್ಕಾಗಿ ಬೆಳೆದು ಬಂದಿರುವ ಸಂಘಗಳು. ಸದಸ್ಯರು ರೈತರ ಬೆಳವಣಿಗೆಯನ್ನು ಬಯಸಿದಾಗ ಮಾತ್ರ ಕೃಷಿ ಪತ್ತಿನ ಸಹಕಾರಿ ಸಂಘ ಬೆಳೆಯಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಹಕಾರಿ ಸಂಘಗಳ ಆರ್ಥಿಕ ಬೆಳವಣಿಗೆಯಲ್ಲಿ ರೈತರ ಪಾಲು ಕೂಡ ಇದ್ದು, ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರಳಿಸಬೇಕು. ಇದರಿಂದ ಸಂಘದ ಚೇತರಿಕೆ ಜೊತೆಗೆ ಮತ್ತೆ ಹೆಚ್ಚಿನ ಸಾಲ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳ ಬಲವರ್ಧನೆಗೊಳಿಸಲು ಸಹಕಾರಿ ಸಂಘಗಳತ್ತ ಅವಲಂಬಿತರಾಗಿರುತ್ತಾರೆ. ಅಲ್ಲದೆ ಗ್ರಾಮದಲ್ಲಿಯೇ ಹಣಕಾಸಿನ ವ್ಯವಹಾರ ನಡೆಯುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಈ ದಿಶೆಯಲ್ಲಿ ಸಹಕಾರಿ ಸಂಘಗಳು ಕೂಡ ರೈತರಿಗೆ ಹೆಚ್ಚಿನ ಸಾಲವನ್ನು ಕೊಡುವ ಜೊತೆಗೆ ಅವರ ಪ್ರಗತಿಗೆ ಕಾರಣವಾಗಬೇಕು ಎಂದರು.

ಸಹಕಾರಿ ಸಂಘಗಳಲ್ಲಿ ಸ್ಥಳಾವಕಾಶವಿದ್ದರೆ ಅಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿಕೊಳ್ಳಬೇಕು. ಇದರಿಂದ ಸಹಕಾರಿ ಸಂಘಗಳಿಗೆ ಆದಾಯ ಸಿಗುತ್ತದೆ. ಸಹಕಾರಿ ಸಂಘಗಳಿಗೆ ಸರ್ಕಾರ ಕೊಡಮಾಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರೈತರ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಂಗಪ್ಪ ಮೆಣಸಿನಕಾಯಿ, ಪಸಾರಾದ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರು, ಮುಖಂಡರು ಉಪಸ್ಥಿತರಿದ್ದರು.

ಇತ್ತೀಚೆಗೆ ಹೊಸಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಗ್ರಾ.ಪಂ ಚುನಾವಣೆಯನ್ನೂ ಮೀರಿಸುವಂತೆ ನಡೆದಿತ್ತು. ಅಲ್ಲದೆ ಗ್ರಾಮದಲ್ಲಿ ಡಿಆರ್ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು. ಒಟ್ಟು 12 ಸ್ಥಾನಗಳನ್ನು ಹೊಂದಿರುವ ಹೊಸಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬಿಜೆಪಿ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿಯನ್ನು ಹಿಡಿದರು. ಹೇಮಯ್ಯ ಹಿರೇಮಠ, ಭೀಮರೆಡ್ಡಪ್ಪ ರೆಡ್ಡೇರ, ಶರಣಪ್ಪ ಮೇಟಿ, ಕಳಕಪ್ಪ ಪಟ್ಟಣಶೆಟ್ಟಿ, ಅಂದಪ್ಪ ಹೂಗಾರ, ಪರಶುರಾಮ ಕುರಿ, ಬಸವರಾಜ ತೆಗ್ಗಿ, ಶರಣಪ್ಪ ಪೂಜಾರ, ಜುಲೇಖಾ ಬೇಗಂ ಹೊಸಳ್ಳಿ, ರೇಣುಕಾಬಾಯಿ ಕದಂ ಆಯ್ಕೆಗೊಂಡ ಸದಸ್ಯರಾಗಿದ್ದಾರೆ.

ಬೆಂಗಳೂರು| ಜ್ಯುವೆಲರ್ಸ್ ಶಾಪ್ ಗೆ ನುಗ್ಗಿ 30 ಗ್ರಾಂ ಚಿನ್ನಾಭರಣ ದೋಚಿದ್ದ ಐವರು ಅರೆಸ್ಟ್!

0

ನೆಲಮಂಗಲ:- ಕಳೆದ ಜನವರಿ 27ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ರಾಮ್ ದೇವ್ ಜ್ಯುವೆಲರ್ಸ್​​ನಲ್ಲಿ ನಡೆದ ಭಯಾನಕ ದರೋಡೆ ಪ್ರಕರಣದಲ್ಲಿ ಗನ್ ಹಿಡಿದು 30 ಗ್ರಾಂ ಚಿನ್ನಾಭರಣ ಕದ್ದ 5 ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸ್ ತಂಡ ಏಳು ದಿನಗಳಲ್ಲಿ ಬಂಧಿಸಿದೆ.

ಬಂಧಿತರನ್ನು ರಾಜಸ್ತಾನಿ ಮೂಲದ ಅನೂಪ್ ಸಿಂಗ್, ರವಿ, ಅಂಕಿತ್, ಅರುಣ್, ಅನೂಪ್ ರಾಮ್ ಎಂದು ಗುರುತಿಸಲಾಗಿದೆ. ದರೋಡೆ ನಂತರ ರಾಜಸ್ಥಾನಕ್ಕೆ ತೆರಳಿದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಕಳೆದ ವಾರವಷ್ಟೇ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಪುರದ ರಾಮ್ ದೇವ್ ಜ್ಯವೆಲರ್ಸ್​​ನಲ್ಲಿ ಈ ಭಯಾನಕ ದರೋಡೆ ನಡೆದಿತ್ತು. ದರೋಡೆಕೋರರು ಗನ್ ತೋರಿಸಿ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸದ್ಯ ಐವರು ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲಿಸರು ಬಂಧಿಸಿದ್ದಾರೆ.

error: Content is protected !!