Home Blog Page 24

“‘ಸರ್ಕೆ ಚುನರಿ’ ಸಾಂಗ್‌ಗೆ ಅಶ್ಲೀಲ ನೃತ್ಯ: ನೋರಾ ಫತೇಹಿ ವಿರುದ್ಧ ಫತ್ವಾ

‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಕೆ ಚುನರಿ’ ಹಾಡು ಸೃಷ್ಟಿಸಿರುವ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈಗಾಗಲೇ ಸಿಬಿಎಫ್ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿರುವ ನಡುವೆ, ಉತ್ತರ ಪ್ರದೇಶದ ಧಾರ್ಮಿಕ ಸಂಸ್ಥೆಯೊಂದು ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ.

ಹಾಡಿನ ದೃಶ್ಯಗಳು ‘ಪ್ರಚೋದನಾತ್ಮಕ ಮತ್ತು ಅಶ್ಲೀಲ’ವಾಗಿವೆ ಎಂದು ಆರೋಪಿಸಿರುವ ದಾರುಲ್ ಇಫ್ತಾ ಸಂಸ್ಥೆ, ಇಂತಹ ವಿಷಯಗಳು ಧಾರ್ಮಿಕ ಮೌಲ್ಯಗಳಿಗೆ ವಿರುದ್ಧವೆಂದು ಹೇಳಿದೆ.

ಈ ವಿವಾದ ರಾಷ್ಟ್ರಮಟ್ಟದಲ್ಲೂ ಪ್ರತಿಧ್ವನಿಸಿದ್ದು, ಲೋಕಸಭೆ ಅಧಿವೇಶನದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಾಡಿನ ನಿಷೇಧವನ್ನು ಘೋಷಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.

ಇದರ ನಡುವೆ ರಾಷ್ಟ್ರೀಯ ಮಹಿಳಾ ಆಯೋಗವು ನೋರಾ ಫತೇಹಿ, ಸಂಜಯ್ ದತ್ ಹಾಗೂ ಗೀತರಚನೆಕಾರರಿಗೆ ನೋಟಿಸ್ ಜಾರಿ ಮಾಡಿದೆ.

ವಿವಾದ ಹೆಚ್ಚುತ್ತಿರುವ ಸಂದರ್ಭದಲ್ಲೇ ನೋರಾ ಫತೇಹಿ ಸ್ಪಷ್ಟನೆ ನೀಡಿ, ಹಾಡಿನ ಹಿಂದಿ ಆವೃತ್ತಿಯ ವಿಷಯಗಳು ತನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ತಾನು ಈ ವಿವಾದದಿಂದ ದೂರವಿರಲು ಪ್ರಯತ್ನಿಸಿದ್ದಾರೆ.

RCB ಅಭಿಮಾನಿಗಳಿಗೆ ಬಂಪರ್ ಆಫರ್: ಟಿಕೆಟ್ ಇದ್ದರೆ ಮೆಟ್ರೋದಲ್ಲಿ ಉಚಿತ ಪ್ರಯಾಣ!

ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಭಿಮಾನಿಗಳಿಗೆ ವಿಶೇಷ ಸೌಲಭ್ಯ ಘೋಷಿಸಿದೆ. ತವರಿನ ಪಂದ್ಯಗಳಿಗೆ ಟಿಕೆಟ್ ಖರೀದಿಸುವವರಿಗೆ ‘ನಮ್ಮ ಮೆಟ್ರೋ’ದಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಖರೀದಿಸಿದವರಿಗೆ, ಅದರ ಜೊತೆಗೆ ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಕೋಡ್ ನೀಡಲಾಗುತ್ತದೆ. ಅಭಿಮಾನಿಗಳು ಮೆಟ್ರೋ ನಿಲ್ದಾಣಗಳಲ್ಲಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಉಚಿತ ಪ್ರಯಾಣ ಸೌಲಭ್ಯ ಪಡೆಯಬಹುದು.

ಟಿಕೆಟ್ ಖರೀದಿ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾತ್ರ ಲಭ್ಯವಿದ್ದು, ತಂಡದ ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕ ಪಡೆಯಬಹುದು. ಟಿಕೆಟ್ ಮಾರಾಟದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಯಾವುದೇ ಅನಧಿಕೃತ ವೆಬ್‌ಸೈಟ್ ಅಥವಾ ವ್ಯಕ್ತಿಗಳಿಂದ ಟಿಕೆಟ್ ಖರೀದಿಸಬಾರದು ಎಂದು ಫ್ರಾಂಚೈಸಿ ಎಚ್ಚರಿಕೆ ನೀಡಿದೆ.

ಪಂದ್ಯ ವೀಕ್ಷಕರಿಗೆ ಸೀಮಿತ ಪಾರ್ಕಿಂಗ್ ಸೌಲಭ್ಯವನ್ನು ಮುಂಗಡವಾಗಿ ಬುಕ್ ಮಾಡುವ ಅವಕಾಶವಿದ್ದು, ಪಾರ್ಕಿಂಗ್ ಸ್ಥಳದಿಂದ ಕಬ್ಬನ್ ರಸ್ತೆವರೆಗೆ ಶಟಲ್ ಸೇವೆಯೂ ಒದಗಿಸಲಾಗುತ್ತದೆ.

2026ರ ಐಪಿಎಲ್ ಟೂರ್ನಿ ಮಾರ್ಚ್ 28ರಿಂದ ಆರಂಭವಾಗಲಿದ್ದು, ಮೊದಲ ಹಂತದ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಆರಂಭಿಕವಾಗಿ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ ರೈಸರ್ಸ್​ ಹೈದರಾಬಾದ್​  ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

 

Gold Rate Rise: ಭಾರಿ ಕುಸಿತದ ಬಳಿಕ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ! ಇಂದಿನ ದರ ಹೀಗಿದೆ?

ಬೆಂಗಳೂರು: ಚಿನ್ನದ ಬೆಲೆ ನಿನ್ನೆ ಭಾರೀ ಕುಸಿತ ಕಂಡಿದ್ದರೆ, ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ನಿನ್ನೆ ಒಂದೇ ದಿನದಲ್ಲಿ 7 ಸಾವಿರ ರೂಪಾಯಿಗೂ ಹೆಚ್ಚು ಇಳಿಕೆಯಾಗಿದ್ದ ಚಿನ್ನದ ದರ, ಇಂದು ಏರಿಕೆಯಾಗಿದೆ.

ಮಾರ್ಚ್ 20, 2026 (ಶುಕ್ರವಾರ) ರಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 650 ರೂಪಾಯಿ ಏರಿಕೆ ಕಂಡು, 1,50,930 ರೂಪಾಯಿಗೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ 65 ರೂಪಾಯಿ ಏರಿಕೆ ಆಗಿ 15,093 ರೂಪಾಯಿಗೆ ದಾಖಲಾಗಿದೆ.

ಇನ್ನೊಂದೆಡೆ, 22 ಕ್ಯಾರೆಟ್ ಚಿನ್ನದ ದರವೂ ಹೆಚ್ಚಾಗಿದೆ. 1 ಗ್ರಾಂಗೆ 60 ರೂಪಾಯಿ ಏರಿಕೆ ಆಗಿ 13,835 ರೂಪಾಯಿ ಆಗಿದೆ. 10 ಗ್ರಾಂ ಬೆಲೆ 600 ರೂಪಾಯಿ ಏರಿಕೆ ಕಂಡು, 1,38,350 ರೂಪಾಯಿಗೆ ತಲುಪಿದೆ.

ಆದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು ಬೆಳ್ಳಿ ದರ 5,000 ರೂಪಾಯಿ ಕುಸಿತಗೊಂಡು, ಪ್ರತಿ ಕೆಜಿ ಬೆಲೆ 2,55,000 ರೂಪಾಯಿಗೆ ಇಳಿದಿದೆ.

ಇರಾನ್–ಅಮೆರಿಕಾ ಸಂಘರ್ಷ, ಡಾಲರ್ ಮೌಲ್ಯದ ಏರಿಳಿತ ಸೇರಿದಂತೆ ಅಂತರರಾಷ್ಟ್ರೀಯ ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರುಪೇರುಗಳು ಕಂಡು ಬರುತ್ತಿವೆ.

ತುಮಕೂರು ಲಾಕಪ್ ಡೆತ್: ಸಿಐಡಿ ತನಿಖೆಗೆ ಆದೇಶ – ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ತುಮಕೂರಿನಲ್ಲಿ ನಡೆದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಿನ್ನೆ ವಿಚಾರಣೆ ನಡೆಯುವ ಸಂದರ್ಭದಲ್ಲೇ ವ್ಯಕ್ತಿ ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ದರಿಂದ ಸಿಐಡಿ ತನಿಖೆಗೆ ಆದೇಶಿಸಲಾಗಿದೆ,” ಎಂದು ಹೇಳಿದರು.

ಕುಟುಂಬಸ್ಥರು ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಸಿಐಡಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ಮರಣೋತ್ತರ ಪರೀಕ್ಷೆಯಲ್ಲೂ ಸ್ಪಷ್ಟತೆ ಸಿಗಲಿದೆ,” ಎಂದು ತಿಳಿಸಿದ್ದಾರೆ.

“ತನಿಖೆಯ ವರದಿ ಆಧರಿಸಿ, ಯಾರಾದರೂ ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ನೀರಾನೆ ದಾಳಿಗೆ ಸಿಲುಕಿ ಪಶುವೈದ್ಯೆ ಸಾವು! ಈಶ್ವರ್ ಖಂಡ್ರೆ‌ ಸಂತಾಪ – ತನಿಖೆಗೆ ಆದೇಶ

ಶಿವಮೊಗ್ಗ: ನಗರದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತರನ್ನು ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಎಂದು ಗುರುತಿಸಲಾಗಿದೆ. ಅವರು ಸಫಾರಿಯಲ್ಲಿ ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು.

ಗುರುವಾರ ರಾತ್ರಿ ಸುಮಾರು 10:30 ವೇಳೆಗೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಹಕ್ಕಿಯ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದರು. ಬಳಿಕ ರಾತ್ರಿ 11:45 ಸುಮಾರಿಗೆ ಗರ್ಭಿಣಿ ನೀರಾನೆಯ ಆರೋಗ್ಯ ಪರಿಶೀಲನೆಗಾಗಿ ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಆವರಣದೊಳಗೆ ಪ್ರವೇಶಿಸಿದ್ದರು.

ವೇಳೆ ನೀರಾನೆ ಹಠಾತ್ತಾಗಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಸಮೀಕ್ಷಾ ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಅವರು ನಿಧನರಾಗಿದ್ದಾರೆ.

ಘಟನೆಗೆ ಸಂತಾಪ ಸೂಚಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ಪ್ರತಿ ಜೀವವೂ ಅಮೂಲ್ಯ. ಸರ್ಕಾರ ಮೃತ ವೈದ್ಯರ ಕುಟುಂಬದ ಜೊತೆ ನಿಲ್ಲಲಿದೆಎಂದು ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಸುರಕ್ಷತಾ ಲೋಪಗಳಿವೆವೇ ಎಂಬುದರ ಕುರಿತು ಪರಿಶೀಲಿಸಿ 7 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

BREAKING: ಶಿವಾನಂದ ಮಠದ ಪೀಠಾಧಿಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

0

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕು ವ್ಯಾಪ್ತಿಯ ಬಸ್ಸಾಪುರ (ಇಜೆ) ಗ್ರಾಮದಲ್ಲಿರುವ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ದೇವೇಂದ್ರಪ್ಪ ಸ್ವಾಮಿ (58) ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಮಠದ ಭೋಜನಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.  ದೇವೇಂದ್ರಪ್ಪ ಸ್ವಾಮಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರು ಮೂಲತಃ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾಗಿದ್ದು, ಕಳೆದ 20 ವರ್ಷಗಳಿಂದ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ವೈರಾಗ್ಯದಿಂದ ಮಠವನ್ನು ನಿರ್ಮಿಸಿ, ಶಾಲಾ ಅವಧಿ ನಂತರ ಮಠದಲ್ಲಿ ಧಾರ್ಮಿಕ ಪ್ರವಚನ ನೀಡುತ್ತಿದ್ದರು.

ಕುಟುಂಬದಿಂದ ದೂರವಿದ್ದುಕೊಂಡಿದ್ದ ದೇವೇಂದ್ರಪ್ಪ ಸ್ವಾಮಿ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ತುರುವಿಹಾಳ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದೆ.

ರಥೋತ್ಸವ ಮಧ್ಯೆ ಕಾರು ಕಿರಿಕ್: ಜಾತ್ರೆಯಲ್ಲಿ ಗಲಾಟೆ, ಮೂವರು ಯುವಕರು ವಶಕ್ಕೆ!

ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ಕಾರಿನ ವಿಚಾರವಾಗಿ ಗಲಾಟೆ ಉಂಟಾಗಿ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ನಿನ್ನೆ ನಡೆದ ಜಾತ್ರೆಯ ರಥೋತ್ಸವದಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಈ ವೇಳೆ ರಥೋತ್ಸವ ಸಾಗುತ್ತಿರುವ ಮಧ್ಯೆ ಸಲೀಂ ಬಡೇಖಾನ್ ಮತ್ತು ಅವರ ತಂಡ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ರಥ ಸಾಗುವ ದಾರಿಯಲ್ಲಿ ಕಾರು ನಿಂತಿದ್ದರಿಂದ ಜಾತ್ರಾ ಸಮಿತಿ ಸದಸ್ಯರು ಕಾರನ್ನು ಸೈಡಿಗೆ ತೆಗೆದುಕೊಳ್ಳುವಂತೆ ವಿನಂತಿಸಿದರು.

ಆದರೆ ಈ ಮಾತಿನ ಮೇಲೆ ವಾಗ್ವಾದ ಶುರುವಾಗಿ, ಪರಿಸ್ಥಿತಿ ತೀವ್ರಗೊಂಡು ಹಲ್ಲೆಗೆ ತಿರುಗಿದೆಯೆಂಬ ಆರೋಪ ಕೇಳಿ ಬಂದಿದೆ. ಜಾತ್ರಾ ಸಮಿತಿಯ ಕೆಲ ಯುವಕರ ಮೇಲೆ ಸಲೀಂ ತಂಡ ದಾಳಿ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜಾತ್ರಾ ಸಮಿತಿ ಸದಸ್ಯರು ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಲೀಂ ಬಡೇಖಾನ್, ಲೋಕೇಶ್ ರಾಮಜಿ ಮತ್ತು ಮಂಜುನಾಥ್ ಹಾದಿಮನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗದಗ ಗ್ರಾಮಾಂತರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಜೈ ಬಾಂಗ್ಲಾ ಘೋಷಣೆ ಪ್ರಕರಣ: ಮಹಿಳೆಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ನಗರದ ಹೆಬ್ಬಗೋಡಿ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಅಕ್ರಮ ಶೆಡ್ ತೆರವು ವೇಳೆ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮೂಲತಃ ಪಶ್ಚಿಮ ಬಂಗಾಳದವರಾದ ಹಾಗೂ ಸದ್ಯ ಆನೇಕಲ್ ತಾಲೂಕಿನ ಹುಲಿಮಂಗಲದಲ್ಲಿ ವಾಸಿಸುತ್ತಿರುವ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಕ್ರಮವಾಗಿ ನಿರ್ಮಿಸಲಾದ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮಹಿಳೆಯನ್ನು ‘ಜೈ ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದ್ದರೆಂದು ತಿಳಿದುಬಂದಿದೆ. ಈ ವೇಳೆ ಮಹಿಳೆ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದು, ಬಳಿಕ ಮೂರು ಬಾರಿ ‘ಜೈ ಭಾರತ್ ಮಾತಾ ಕಿ ಜೈ’ ಎಂದು ಕೂಗಿರುವುದಾಗಿ ನ್ಯಾಯಾಲಯದ ಮುಂದೆ ವಿವರಿಸಲಾಗಿದೆ.

ಪ್ರಕರಣದ ಸನ್ನಿವೇಶ ಮತ್ತು ಸತ್ಯಾಸತ್ಯತೆಗಳನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳು ಇದ್ದು ಅವರ ಪಾಲನೆ ಜವಾಬ್ದಾರಿ ಇರುವುದನ್ನೂ ಗಮನಿಸಿ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯ ವಿಧಿಸಿದ ಷರತ್ತುಗಳ ಪ್ರಕಾರ, ಮಹಿಳೆ ₹1 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಸ್ಥಳೀಯ ಶ್ಯೂರಿಟಿ ಒದಗಿಸಬೇಕು. ಜೊತೆಗೆ, ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಬಾರದು ಹಾಗೂ ವಿಚಾರಣಾ ನ್ಯಾಯಾಲಯದ ಎಲ್ಲಾ ದಿನಾಂಕಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ ಎಂದು ಸೂಚಿಸಲಾಗಿದೆ.

ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಜಾಮೀನು ರದ್ದುಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶವಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

‘ಸರ್ಸೆ ಸೆರಗ’ ಹಾಡಿನ ವಿವಾದ : ಸಂಜಯ್ ದತ್, ನೋರಾ ಫತೇಹಿ ಸೇರಿ ತಂಡಕ್ಕೆ NCW ನೋಟಿಸ್

‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡು ವಿವಾದ ಈಗ ರಾಷ್ಟ್ರ ಮಟ್ಟಕ್ಕೆ ತಲುಪಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಸಿನಿಮಾ ತಂಡದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಹಾಡಿನ ಸಾಹಿತ್ಯ ಹಾಗೂ ದೃಶ್ಯಗಳು ಅಸಭ್ಯ ಮತ್ತು ಸಮಾಜಕ್ಕೆ ಹಾನಿಕಾರಕ ಎಂದು ಆರೋಪಿಸಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.

ಹಿಂದಿ ಆವೃತ್ತಿಯ ಹಾಡು ‘ಸರ್ಕೆ ಚುನರಿಯಾ ತೇರಿ ಸರ್ಕೆ’ ಹೆಚ್ಚು ವಿವಾದಕ್ಕೀಡಾಗಿದ್ದು, ಸಿಬಿಎಫ್ಸಿ ಮತ್ತು ಸೈಬರ್ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಈ ನಡುವೆ ಲೋಕಸಭೆಯಲ್ಲೂ ಚರ್ಚೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ.

ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕ ನೈತಿಕತೆಗೆ ಧಕ್ಕೆ ಹಾಗೂ ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ವಿಷಯ ಪ್ರಸಾರ ಆರೋಪಗಳ ಮೇಲೆ ವಿಚಾರಣೆ ನಡೆಸಲು ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಗೀತರಚನೆಕಾರ ರಕೀಬ್ ಆಲಂ ಹಾಗೂ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮಾರ್ಚ್ 24 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದ್ದು, ಗೈರಾದರೆ ಕಠಿಣ ಕ್ರಮ ಎದುರಾಗಲಿದೆ. ಇದೇ ವೇಳೆ ಪ್ರೇಮ್ ತಮ್ಮ ಹೇಳಿಕೆಯಲ್ಲಿ, ಹಾಡು ಕುರಿತು ಉಂಟಾದ ವಿವಾದಕ್ಕೆ ಕ್ಷಮೆ ಕೇಳಿ, ಸಾಹಿತ್ಯವನ್ನು ಮರುಸಂಸ್ಕರಿಸಿ ಮತ್ತೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ನಾಳೆ ಬೆಂಗಳೂರಿನಲ್ಲಿ ಉಸ್ತುವಾರಿ ಸಮಿತಿ ಸಭೆ: ಟಿಕೆಟ್ ಘೋಷಣೆ ನಿರೀಕ್ಷೆ – ಸಚಿವ ಮಲ್ಲಿಕಾರ್ಜುನ

ದಾವಣಗೆರೆ: ನಾಳೆ ಬೆಂಗಳೂರಿನಲ್ಲಿ ಉಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಶನಿವಾರ ಅಭ್ಯರ್ಥಿ ಟಿಕೆಟ್ ಘೋಷಣೆ ಆಗುವ ನಿರೀಕ್ಷೆಯಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ದಾವಣಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದ್ದು, ಶ್ರೀನಿವಾಸ್ ತಮ್ಮ ಉತ್ತಮ ಸ್ನೇಹಿತರು. ಚುನಾವಣೆ ಸ್ನೇಹಪೂರ್ವಕವಾಗಿ ನಡೆಯಲಿ ಎಂದು ಹೇಳಿದರು.

ದಾವಣಗೆರೆ ಜನತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವುದು ಮುಖ್ಯ ಉದ್ದೇಶವಾಗಿದ್ದು, ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಭೆಗೆ ತಮ್ಮನ್ನು ಆಹ್ವಾನಿಸದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಅಭ್ಯರ್ಥಿ ಪರವಾಗಿ ಮಾತನಾಡಿದಂತೆ ಆಗುತ್ತದೆ ಎಂದು ತಿಳಿಸಿ, ಭಾಗವಹಿಸಬೇಡಿ ಎಂದು ಹೇಳಿದರು. ಆದ್ದರಿಂದ ನಾನು ಭಾಗವಹಿಸಲಿಲ್ಲ. ಪಕ್ಷದ ಯಾವುದೇ ನಿರ್ಣಯಕ್ಕೂ ಬದ್ದನಾಗಿದ್ದೇನೆ ಎಂದು ಉಸ್ತುವಾರಿ ಸಮಿತಿಗೆ ತಿಳಿಸಿದ್ದೇನೆ” ಎಂದು ಹೇಳಿದರು.

ಉಸ್ತುವಾರಿ ಸಮಿತಿ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಅವರು, “ಅಲ್ಲಿಗೆ ಬಂದು ಗೊಂದಲ ಸೃಷ್ಟಿಸಿದವರು ನಮ್ಮ ಪಕ್ಷದ ಕಾರ್ಯಕರ್ತರು ಅಲ್ಲ. ಅವರನ್ನು ನಾವು ಈ ಹಿಂದೆ ಪಕ್ಷದಲ್ಲಿ ನೋಡಿಲ್ಲ. ಇತ್ತೀಚೆಗೆ ಸೇರಿರುವ ಕೆಲವರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ” ಎಂದು ಹೇಳಿದರು.

error: Content is protected !!