Home Blog Page 240

ಬೆಂಗಳೂರು| ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕ ಅರೆಸ್ಟ್!

0

ದೇವನಹಳ್ಳಿ:- ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕನೋರ್ವನನ್ನು ಬಂಧಿಸಲಾಗಿದೆ.

ಅಬು ಅಕಿಲ್ ಅಜರ್ ಚಾದ್ ಬಂಧಿತ ಆರೋಪಿ. ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳಲು ಆಗಮಿಸಿದ್ದ ಅಬು ಅಕಿಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶದ ವೇಳೆ ತಪಾಸಣೆಗೆ ಒಳಗಾಗಿದ್ದ. ಈ ವೇಳೆ ಭದ್ರತಾ ನಿಯಮಾನುಸಾರ ಎರಡು ಹಂತಗಳಲ್ಲಿ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಅಬು ಅಕಿಲ್, ತನ್ನ ಬ್ಯಾಗ್‌ನಲ್ಲಿ ಎರಡು ಸಣ್ಣ ಬಾಂಬ್‌ಗಳಿವೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಬೆದರಿಕೆ ವಿಚಾರ ತಿಳಿದ ಕೂಡಲೇ ಎಚ್ಚೆತ್ತ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ, ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು, ಬ್ಯಾಗ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಪರಿಶೀಲನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಬಾಂಬ್ ಬೆದರಿಕೆ ಹಾಕಿದ ಕಾರಣ ಆರೋಪಿಯನ್ನು ಕೆಂಪೇಗೌಡ ಏರ್‌ಪೋರ್ಟ್ ಪೊಲೀಸ್ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಈ ಸಂಬಂಧ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಂತಹ ಬೆದರಿಕೆಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ; 7 ಮಂದಿ ವಿರುದ್ಧ ಎಫ್‌ಐಆರ್

0

ಮೈಸೂರು: ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್‌ನ ಮೈಸೂರು ಶಾಖೆಯಲ್ಲಿ ನಡೆದ ಭಾರೀ ಚಿನ್ನ ಗಿರವಿ ವಂಚನೆ ಪ್ರಕರಣ ಬ್ಯಾಂಕಿಂಗ್ ವ್ಯವಸ್ಥೆಯೊಳಗಿನ ಅಕ್ರಮ ಚಟುವಟಿಕೆಗಳನ್ನೇ ಬಹಿರಂಗಪಡಿಸಿದೆ. ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹56.78 ಲಕ್ಷ ಸಾಲ ಪಡೆದುಕೊಂಡಿರುವುದು ಇದೀಗ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಸೂರಿನ ಅಬ್ದುಲ್ ಜಲೀಲ್ ಸೇರಿದಂತೆ ಮಂಡ್ಯ ಮತ್ತು ಬೆಂಗಳೂರು ಮೂಲದ ಆರೋಪಿಗಳು ವಿವಿಧ ಹೆಸರಿನಲ್ಲಿ ಬ್ಯಾಂಕ್‌ಗೆ ನಕಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದರು.

ಪ್ರಕರಣದ ಗಂಭೀರ ಅಂಶವೆಂದರೆ, ಬ್ಯಾಂಕ್‌ನ ಚಿನ್ನಾಭರಣ ಮೌಲ್ಯಮಾಪಕರಾಗಿದ್ದ ಟಿ.ನರಸೀಪುರದ ರವೀಂದ್ರ ಕುಮಾರ್ ಕೂಡ ಈ ವಂಚನೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ನಕಲಿ ಚಿನ್ನವನ್ನು ನಿಜವಾದ ಚಿನ್ನವೆಂದು ಮೌಲ್ಯಮಾಪನ ಮಾಡಿ ಸಾಲ ಮಂಜೂರು ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಒಟ್ಟು 782 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ವಿವಿಧ ಖಾತೆಗಳ ಮೂಲಕ ಅಡವಿಟ್ಟು ಸಾಲ ಪಡೆದಿರುವ ಆರೋಪಿಗಳು, ಬ್ಯಾಂಕ್ ಮತ್ತು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. 2026ರ ಜನವರಿ 26ರಂದು ಮರುಮೌಲ್ಯಮಾಪನದ ವೇಳೆ ವಂಚನೆ ಪತ್ತೆಯಾಗಿದ್ದು, ಪ್ರಕರಣ ದೊಡ್ಡ ಮಟ್ಟದ ಹಗರಣದ ಸ್ವರೂಪ ಪಡೆಯುವ ಸಾಧ್ಯತೆ ಇದೆ.

ಈ ಕುರಿತು ದೇವರಾಜ ಪೊಲೀಸರು ತನಿಖೆ ಮುಂದುವರಿಸಿದ್ದು, ಬ್ಯಾಂಕ್ ಸಿಬ್ಬಂದಿಗಳ ಪಾತ್ರ ಹಾಗೂ ವಂಚನೆ ಜಾಲದ ವ್ಯಾಪ್ತಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಚಿಕ್ಕಮಗಳೂರು| ಹಿಂದೂ ಸಮಾಜೋತ್ಸವ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು; ಶೃಂಗೇರಿಯಲ್ಲಿ ಉದ್ವಿಗ್ನ ಸ್ಥಿತಿ!

0

ಚಿಕ್ಕಮಗಳೂರು:- ಜಿಲ್ಲೆ ಶೃಂಗೇರಿ ತಾಲೂಕಿನ ಬೇಗಾರು ಸಮೀಪದ ಬೋಳೂರು ಕ್ರಾಸ್ ಬಳಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಅಳವಡಿಸಿದ್ದ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ನಡೆದಿದೆ.

ಈ ಘಟನೆಯನ್ನು ಖಂಡಿಸಿ ಹಿಂದೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರೀಗೆಬೈಲು ಗ್ರಾಮದಲ್ಲಿ ಜನವರಿ 31ರಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆ ಜನವರಿ 28ರ ರಾತ್ರಿ ಯುವಕರು ಕಾರ್ಯಕ್ರಮದ ಫ್ಲೆಕ್ಸ್‌ನ್ನು ಅಳವಡಿಸಿದ್ದರು. ಮಧ್ಯರಾತ್ರಿ 12:30ರವರೆಗೆ ಯುವಕರು ಸ್ಥಳದಲ್ಲೇ ಇದ್ದು ಬಳಿಕ ತೆರಳಿದ್ದರು. ಆದರೆ ಇಂದು ಮುಂಜಾನೆ ಕಿಡಿಗೇಡಿಗಳು ಫ್ಲೆಕ್ಸ್‌ನ್ನು ಹರಿದು ಹಾಕಿರುವುದು ಬೆಳಕಿಗೆ ಬಂದಿದೆ.

ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷ ಪ್ರದೀಪ್ ಚೋಳರಮನೆ ಅವರು ಶೃಂಗೇರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಫ್ಲೆಕ್ಸ್‌ ಹರಿದು ಹಾಕಿದ ಕೃತ್ಯದಿಂದ ಸ್ಥಳೀಯವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಬಂಡೀಪುರ ರಾತ್ರಿ ಪ್ರಯಾಣ ಸಮಸ್ಯೆಗೆ ಪರಿಹಾರ: ಸುರಂಗ ಮಾರ್ಗಕ್ಕೆ ಕೇಂದ್ರ ಸರ್ಕಾರದ ಪ್ಲ್ಯಾನ್!

0

ಚಾಮರಾಜನಗರ: ಕರ್ನಾಟಕ–ಕೇರಳ ಸಂಪರ್ಕಿಸುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಪ್ರಯಾಣ ನಿಷೇಧದಿಂದ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಬಂಡೀಪುರ ಅರಣ್ಯ ಮಾರ್ಗಕ್ಕೆ ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಯೋಜನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ವಿಷಯವನ್ನು ಕೇರಳ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಪ್ರಕಟಿಸಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ರಕ್ಷಣೆಯ ಕಾರಣಕ್ಕೆ ಕರ್ನಾಟಕ ಸರ್ಕಾರ ರಾತ್ರಿ ಸಂಚಾರಕ್ಕೆ ತಡೆ ವಿಧಿಸಿದ್ದರಿಂದ, ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆ ಮುಂದಿಟ್ಟಿತ್ತು. ಈ ಪ್ರಸ್ತಾವನೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಯೋಜನೆಯ ಸಾಧ್ಯತೆ, ಪರಿಸರ ಪರಿಣಾಮ ಹಾಗೂ ತಾಂತ್ರಿಕ ಅಂಶಗಳ ಅಧ್ಯಯನಕ್ಕಾಗಿ ಸಮಿತಿ ರಚನೆ ಮಾಡಿದೆ. ಸುರಂಗ ಮಾರ್ಗದ ಜೊತೆಗೆ ವಯನಾಡು ಜಿಲ್ಲೆಯ ನಾಲ್ಕು ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಿಂದ ₹105 ಕೋಟಿ ಅನುದಾನವನ್ನು ಅನುಮೋದಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.

ಇನ್ನೊಂದೆಡೆ, ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಪುನರಾರಂಭ ಕುರಿತು ಕೂಡ ಚರ್ಚೆ ಜೋರಾಗಿದೆ. ಪ್ರವಾಸೋದ್ಯಮ ವಲಯದ ಒತ್ತಡದ ನಡುವೆಯೇ, ಸಫಾರಿಗಳನ್ನು ಮತ್ತೆ ಆರಂಭಿಸುವ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯು ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಸಫಾರಿ ಪುನರಾರಂಭ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಪಿ.ಟಿ. ಉಷಾ ಜೀವನ ಸಂಗಾತಿ ವಿಧಿವಶ: ಮಾಜಿ ಸಿಐಎಸ್‌ಎಫ್ ಅಧಿಕಾರಿ ವಿ. ಶ್ರೀನಿವಾಸನ್ ನಿಧನ

0

ತಿರುವನಂತಪುರಂ: ಭಾರತದ ಕ್ರೀಡಾ ಲೋಕದ ಹೆಮ್ಮೆ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಜೀವನ ಸಂಗಾತಿ ವಿ. ಶ್ರೀನಿವಾಸನ್ (67) ನಿಧನರಾಗಿದ್ದಾರೆ. ಈ ಘಟನೆ ಕ್ರೀಡಾ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ದುಃಖ ಮೂಡಿಸಿದೆ.

ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ತಿಕ್ಕೋಡಿ ಪೆರುಮಾಳ್‌ಪುರಂನಲ್ಲಿರುವ ನಿವಾಸದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ವೇಳೆ ಪಿ.ಟಿ. ಉಷಾ ಅವರು ಮನೆಯಲ್ಲಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಮಲಪ್ಪುರಂ ಜಿಲ್ಲೆಯ ಪೊನ್ನಾನಿ ತಾಲೂಕಿನ ಕುಟ್ಟಿಕ್ಕಾಡ್‌ನ ವೆಂಗಲಿ ಥರಾವದ್ ಮೂಲದ ಶ್ರೀನಿವಾಸನ್, ನಾರಾಯಣನ್ ಮತ್ತು ಸರೋಜಿನಿ ದಂಪತಿಯ ಪುತ್ರರಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯಲ್ಲಿ ಡೆಪ್ಯೂಟಿ ಎಸ್‌ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

1991ರಲ್ಲಿ ಪಿ.ಟಿ. ಉಷಾ ಅವರನ್ನು ವಿವಾಹವಾಗಿದ್ದ ಅವರು, ಸದಾ ಅವರ ವೈಯಕ್ತಿಕ ಮತ್ತು ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಪುತ್ರನಿದ್ದಾನೆ.

ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಿ.ಟಿ. ಉಷಾ ಅವರಿಗೆ ಸಂತಾಪ ಸೂಚಿಸಿದ್ದಾರೆ. ಕ್ರೀಡಾ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಶೋಕ ಸಂದೇಶಗಳನ್ನು ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಲ್ಲಿ ಚಿರತೆ ಹಾವಳಿ; ವ್ಯಕ್ತಿ ಮೇಲೆ ಏಕಾಏಕಿ ದಾಳಿ, ಪ್ರಾಣಾಪಾಯದಿಂದ ಪಾರು

0

ಚಾಮರಾಜನಗರ:- ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಚಿರತೆ ದಾಳಿಗೆ ಒಳಗಾದ ವ್ಯಕ್ತಿಯನ್ನು ರಾಜಶೇಖರಪ್ಪ ಎಂದು ಗುರುತಿಸಲಾಗಿದ್ದು, ದಾಳಿಯಿಂದ ಅವರ ಮುಖ ಹಾಗೂ ಕತ್ತಿನ ಭಾಗಕ್ಕೆ ಪರಚಿದ ಗಾಯಗಳಾಗಿವೆ. ದಾಳಿ ನಡೆದ ಸಂದರ್ಭದಲ್ಲಿ ಧೈರ್ಯದಿಂದ ಪ್ರತಿರೋಧ ತೋರಿದ ರಾಜಶೇಖರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡ ರಾಜಶೇಖರಪ್ಪ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಚಿರತೆಯನ್ನು ಶೀಘ್ರವಾಗಿ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ತುಮಕೂರು| ಮಾದರಿ ಆಗಬೇಕಿದ್ದ ಸರ್ಕಾರಿ ಕಚೇರಿಗಳೇ ಹೀಗೆ ಮಾಡಿದ್ರೆ ಹೇಗೆ? 44 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ! ಕ್ಲಿಯರ್ ಯಾವಾಗ?

0

ತುಮಕೂರು:- ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 44 ಕೋಟಿ 05 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷವೇ ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಬೆಸ್ಕಾಂ ಸೂಚನೆ ನೀಡಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ ಎನ್ನುವ ಆರೋಪ ಕೇಳಿಬಂದಿದೆ. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸದೇ ಉಳಿಸಿಕೊಂಡಿವೆ. ಕಳೆದ ನವೆಂಬರ್ ಅಂತ್ಯದೊಳಗೆ ಬಿಲ್ ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ತಿಳಿದುಬಂದಿದೆ.

ತಿಂಗಳುಗಟ್ಟಲೆ ಬಿಲ್ ಕಟ್ಟದೇ ಇರುವುದರಿಂದ ಬಾಕಿ ಹಣ ವಸೂಲಿಗೆ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆಗಳು ಕೋಟಿಗಟ್ಟಲೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಬೆಸ್ಕಾಂ ಖಡಕ್ ಎಚ್ಚರಿಕೆ ನೀಡಿದೆ. ಸಾಮಾನ್ಯ ಜನರಿಗೆ ನಿಯಮ ಕಟ್ಟುನಿಟ್ಟಾಗಿ ಅನ್ವಯಿಸುವ ಸರ್ಕಾರದ ಇಲಾಖೆಗಳೇ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಪ್ರಮುಖ ಇಲಾಖೆಗಳು:

ಜಲಸಂಪನ್ಮೂಲ ಇಲಾಖೆ – 17.73 ಕೋಟಿ ರೂ.

ಸಣ್ಣ ನೀರಾವರಿ ಇಲಾಖೆ – 12.72 ಕೋಟಿ ರೂ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 3.63 ಕೋಟಿ ರೂ.

ನಗರಾಭಿವೃದ್ಧಿ ಇಲಾಖೆ – 2.65 ಕೋಟಿ ರೂ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ – 1.85 ಕೋಟಿ ರೂ.

ಕಂದಾಯ ಮತ್ತು ಮುಜರಾಯಿ ಇಲಾಖೆ – 1.44 ಕೋಟಿ ರೂ.

ಶಾಲಾ ಶಿಕ್ಷಣ ಇಲಾಖೆ – 1.10 ಕೋಟಿ ರೂ.

ಸಮಾಜ ಕಲ್ಯಾಣ ಇಲಾಖೆ – 1.09 ಕೋಟಿ ರೂ.

ತೋಟಗಾರಿಕೆ ಇಲಾಖೆ – 37 ಲಕ್ಷ ರೂ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ – 34 ಲಕ್ಷ ರೂ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 31 ಲಕ್ಷ ರೂ.

ಗೃಹ ಇಲಾಖೆ – 23 ಲಕ್ಷ ರೂ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – 11.97 ಲಕ್ಷ ರೂ.

ಲೋಕೋಪಯೋಗಿ ಇಲಾಖೆ – 7.56 ಲಕ್ಷ ರೂ.

ಕಾನೂನು ಇಲಾಖೆ – 6.11 ಲಕ್ಷ ರೂ.

ಅರಣ್ಯ ಇಲಾಖೆ – 8 ಲಕ್ಷ ರೂ.

ಇತರೆ ಇಲಾಖೆಗಳನ್ನು ಸೇರಿಸಿ ಒಟ್ಟು ಬಾಕಿ ಮೊತ್ತ 44.05 ಕೋಟಿ ರೂ.

ಬೆಂಗಳೂರು| ಒನ್-ವೇ ನಿಯಮ ಉಲ್ಲಂಘನೆ; ಬರೋಬ್ಬರಿ 23 ಸಾವಿರ ಕೇಸ್ ದಾಖಲು!

0

ಬೆಂಗಳೂರು: ಏಕಮುಖ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಜನವರಿ 21ರಿಂದ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 9 ದಿನಗಳಲ್ಲಿ 23,000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ನಿನ್ನೆ ಮಾತ್ರ 3,000 ಪ್ರಕರಣ ದಾಖಲಾಗಿದ್ದು, ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ಯಾವ ವಲಯದಲ್ಲಿ ಎಷ್ಟು?

ಉತ್ತರ: 329 (ಒಟ್ಟು 4,660)
ದಕ್ಷಿಣ: 1,327 (ಒಟ್ಟು 7,709)
ಪೂರ್ವ: 913 (ಒಟ್ಟು 6,832)
ಪಶ್ಚಿಮ: 499 (ಒಟ್ಟು 4,327)

ಏಕಮುಖ ಸಂಚಾರದಿಂದ ವಾಹನ ದಟ್ಟಣೆ, ಸವಾರರಿಗೆ ಸಮಸ್ಯೆ ಆಗುತ್ತಿದೆ ಎಂದು ಪ್ರಯಾಣಿಕರು ಸಂಚಾರ ಪೊಲೀಸರಿಗೆ ದೂರು ನೀಡುತ್ತಿದ್ದರು. ದಿನೇ ದಿನೇ ಒನ್‌ವೇ ಸವಾರರ ಕಿರಿಕಿರಿ ಜಾಸ್ತಿಯಾಗುತ್ತಿದ್ದಂತೆ ಪೊಲೀಸರು ಈಗ ಕಾರ್ಯಾಚರಣೆಗೆ ಇಳಿದಿದ್ದಾರೆ. ಒನ್ ವೇ ಸಂಚಾರದ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಿಎಂ–ಡಿಸಿಎಂ ಚಿತ್ರ ಬಳಸಿ ಅವಹೇಳನಕಾರಿ ಪೋಸ್ಟ್: ಬಿಜೆಪಿ ವಿರುದ್ಧ ದೂರು ದಾಖಲು

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರ ಚಿತ್ರಗಳನ್ನು ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ದೂರು ದಾಖಲಾಗಿದೆ.

ಈ ಪೋಸ್ಟ್ “ಕರ್ನಾಟಕವನ್ನು ಹಗಲಿರುಳು ಲೂಟಿ ಹೊಡೆಯುತ್ತಿರುವ ಸ್ಕ್ಯಾಮ್ ಸಾಮ್ರಾಜ್ಯದ ಅಸಲಿ ಕಥೆ” ಎಂಬ ಶೀರ್ಷಿಕೆ ಹೊಂದಿದ್ದು, “ಲೂಟಿ” ಮತ್ತು “ಸ್ಕ್ಯಾಮ್” ಎಂಬ ಪದಗಳನ್ನು ಹಿನ್ನಲೆಯಲ್ಲಿ ಬಳಸಲಾಗಿದೆ. ಕೆಪಿಸಿಸಿ ವಕೀಲರ ತಂಡದವರು, ಈ ಪೋಸ್ಟ್ ವ್ಯಕ್ತಿತ್ವ ಹರಣ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಉದ್ದೇಶ ಪಟ್ಟಿರುವುದಾಗಿ ದೂರು ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಅವಹೇಳನಕಾರಿ ವಿಷಯಗಳನ್ನು ಗುರುತಿಸಿ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಮುಂದುವರಿಸಿದ್ದಾರೆ.

ರಾಜ್ಯಸಭಾ ಸದಸ್ಯೆ ಪಿ.ಟಿ ಉಷಾ ಪತಿ ಶ್ರೀನಿವಾಸನ್ ನಿಧನ!

0

ತಿರುವನಂತಪುರಂ:- ರಾಜ್ಯಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ನಿಧನರಾಗಿದ್ದಾರೆ.

ಶುಕ್ರವಾರ ನಡುರಾತ್ರಿ ತಿಕ್ಕೋಡಿ ಪೆರುಮಾಳ್‌ಪುರಂನಲ್ಲಿ ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ನಿಧನರಾದರು. ಅವರನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ವೈದ್ಯರ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಘಟನೆ ಸಮಯದಲ್ಲಿ ಉಷಾ ಮನೆಯಲ್ಲಿ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದರು.

ಶ್ರೀನಿವಾಸನ್ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಕುಟ್ಟಿಕ್ಕಾಡ್‌ನ ವೆಂಗಲಿ ಥರಾವದ್‌ನಲ್ಲಿ ಜನಿಸಿದರು. ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) ಡೆಪ್ಯೂಟಿ ಎಸ್‌ಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 1991 ರಲ್ಲಿ ದೂರದ ಸಂಬಂಧದ ಮೂಲಕ ಪಿ.ಟಿ. ಉಷಾ ಅವರೊಂದಿಗೆ ಅವರ ವಿವಾಹ ನಡೆಯಿತು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಪುತ್ರನಿದ್ದಾರೆ.

ಶ್ರೀನಿವಾಸನ್ ಅವರ ಅಕಾಲಿಕ ನಿಧನವು ಕುಟುಂಬ, ಸ್ನೇಹಿತರ ಹಾಗೂ ಕ್ರೀಡಾ ವಲಯದಲ್ಲಿ ತೀವ್ರ ಸಂತಾಪಕ್ಕೆ ಕಾರಣವಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳು ಉಷಾ ಅವರ ಕುಟುಂಬದೊಂದಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅವರ ಜೀವನ ಮತ್ತು ಸೇವೆಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಹ ನಮನ ಸಲ್ಲಿಸಲಾಗಿದೆ.

error: Content is protected !!