Home Blog Page 241

ಮೋಹನ್‌ಲಾಲ್ ತಾಯಿ ಶಾಂತಕುಮಾರಿ ನಿಧನ; ಅಂತಿಮ ನಮನ ಸಲ್ಲಿಸಿದ ನಟ ಮಮ್ಮುಟಿ

ಮಲಯಾಳಂ ಚಿತ್ರರಂಗದ ಲೆಜೆಂಡ್ ನಟ ಮೋಹನ್ಲಾಲ್ ಅವರ ಜೀವನದಲ್ಲಿ ದುಃಖದ ಘಟನೆ ಸಂಭವಿಸಿದೆ. ಅವರ ತಾಯಿ ಶಾಂತಕುಮಾರಿ ಅವರು ಮಂಗಳವಾರ (ಡಿಸೆಂಬರ್ 30) ಎರ್ನಾಕುಲಂ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಶಾಂತಕುಮಾರಿ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ದಶಕದಿಂದ ಹಾಸಿಗೆ ಹಿಡಿದ ಸ್ಥಿತಿಯಲ್ಲೇ ಜೀವನ ನಡೆಸುತ್ತಿದ್ದರು. ಸ್ಟ್ರೋಕ್ ನಂತರ ಅವರನ್ನು ತಿರುವನಂತಪುರಂನಿಂದ ಕೊಚ್ಚಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ನಿರಂತರ ಚಿಕಿತ್ಸೆ ನಡೆಯುತ್ತಿತ್ತು.

ತಾಯಿ ನಿಧನದ ಸಂದರ್ಭದಲ್ಲಿ ಮೋಹನ್ಲಾಲ್ ಅವರು ಚಿತ್ರೀಕರಣದ ಕಾರಣ ಮನೆಯಲ್ಲಿರಲಿಲ್ಲ. ಸುದ್ದಿ ತಿಳಿದ ತಕ್ಷಣವೇ ಅವರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಕೊಚ್ಚಿಗೆ ವಾಪಸ್ಸಾದರು. ಈ ದುಃಖದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಹಲವರು ಮೋಹನ್ಲಾಲ್ ಮನೆಗೆ ಆಗಮಿಸಿ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.

ಖ್ಯಾತ ನಟ ಮಮ್ಮುಟಿ ಅವರು ಶಾಂತಕುಮಾರಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೋಹನ್ಲಾಲ್ ಹಾಗೂ ಕುಟುಂಬಕ್ಕೆ ಸಾಂತ್ವನ ಸಂದೇಶಗಳನ್ನು ಹರಿಸುತ್ತಿದ್ದಾರೆ.

ಮೋಹನ್ಲಾಲ್ ಅವರ ವೃತ್ತಿಜೀವನದ ಯಶಸ್ಸಿನ ಹಿಂದೆ ತಾಯಿ ಶಾಂತಕುಮಾರಿ ಅವರ ಬೆಂಬಲ ಪ್ರಮುಖವಾಗಿತ್ತು. ಈ ವರ್ಷ ದೊರೆತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮೋಹನ್ಲಾಲ್ ಅವರ ಬದುಕಿನ ದೊಡ್ಡ ಗೌರವವಾಗಿತ್ತು. ಪ್ರಶಸ್ತಿ ಪಡೆದ ಬಳಿಕ ತಾಯಿಯನ್ನು ಭೇಟಿಯಾದ ಕ್ಷಣವನ್ನು ಅವರು ಅತ್ಯಂತ ವಿಶೇಷವಾಗಿ ನೋಡಿದ್ದರು.

ಶಾಂತಕುಮಾರಿ ಅವರ ಪತಿ ವಿಶ್ವನಾಥ್ ನಾಯರ್ ಅವರು ಈಗಾಗಲೇ ನಿಧನರಾಗಿದ್ದು, ಕುಟುಂಬದಲ್ಲಿ ಈ ಹಿಂದೆ ಕೂಡ ನೋವಿನ ಘಟನೆಗಳು ನಡೆದಿವೆ. ಆದರೂ ಕೂಡ ಮೋಹನ್ಲಾಲ್ ಅವರು ಕುಟುಂಬದ ಜೊತೆಗೆ ಸದಾ ನಿಂತು, ತಾಯಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.

ಕೋರ್ಟ್‌ನಿಂದ ಮಹತ್ವದ ಆದೇಶ ತಂದ ‘ಡೆವಿಲ್’ ಚಿತ್ರತಂಡ: ಉಲ್ಲಂಘಿಸಿದ್ರೆ ಕಠಿಣ ಕಾನೂನು ಕ್ರಮ!

ಡಿಸೆಂಬರ್ 11ರಂದು ತೆರೆಗೆ ಬಂದ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ದರ್ಶನ್ ಅವರು ಒಳ್ಳೆಯ ಹಾಗೂ ಕೆಟ್ಟ ಪಾತ್ರಗಳಲ್ಲಿ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಫ್ಯಾನ್ಸ್‌ಗೆ ದೊಡ್ಡ ಪ್ಲಸ್ ಆಗಿದೆ.

ಈ ನಡುವೆ, ‘ದಿ ಡೆವಿಲ್’ ಸಿನಿಮಾಗೆ ಸಂಬಂಧಿಸಿದಂತೆ ನೆಗೆಟಿವ್ ಪ್ರಚಾರದ ವಿರುದ್ಧ ಚಿತ್ರತಂಡ ಕಠಿಣ ಹೆಜ್ಜೆ ಇಟ್ಟಿದೆ. ‘ಶ್ರೀ ಜೈಮಾ ಕಂಬೈನ್ಸ್’ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಚಿತ್ರದ ಬಗ್ಗೆ ನೆಗೆಟಿವ್ ಬರಹಗಳು ಮತ್ತು ರೇಟಿಂಗ್‌ಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದೆ.

ಕೋರ್ಟ್ ನೀಡಿರುವ ಆದೇಶದಂತೆ,
ಚಿತ್ರದ ವಿರುದ್ಧ ಅವಹೇಳನಕಾರಿ, ಮಾನಹಾನಿಕರ ಅಥವಾ ಅಪಪ್ರಚಾರಾತ್ಮಕ ವಿಮರ್ಶೆಗಳನ್ನು ಯಾವುದೇ ಮಾಧ್ಯಮ, ಸೋಶಿಯಲ್ ಮೀಡಿಯಾ ಖಾತೆ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಕಟಿಸುವಂತಿಲ್ಲ.

ಇಂತಹ ವಿಷಯಗಳನ್ನು ಪ್ರಕಟಿಸಿದರೆ ಅಥವಾ ಈಗಾಗಲೇ ಪ್ರಕಟಿಸಿದ್ದನ್ನು ತೆಗೆದುಹಾಕದೇ ಇದ್ದರೆ,
ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದು, ಅಗತ್ಯವಿದ್ದರೆ ಬಂಧನವೂ ಸಂಭವಿಸಬಹುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಇನ್ನು ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ದರ್ಶನ್ ಅವರ ಡಬಲ್ ಶೇಡ್ ಪಾತ್ರಗಳು ಅಭಿಮಾನಿಗಳಿಗೆ ಭಾರಿ ಇಂಪ್ರೆಶನ್ ನೀಡಿವೆ. ಒಂದೇ ಚಿತ್ರದಲ್ಲಿ ಎರಡು ವಿಭಿನ್ನ ಮುಖಗಳನ್ನು ನೋಡಿದ ಫ್ಯಾನ್ಸ್ ಸಿನಿಮಾ ಬಗ್ಗೆ ಪಾಸಿಟಿವ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಾಲ ವಸೂಲಿ ವಿಚಾರಕ್ಕೆ ಗಲಾಟೆ: ಮಚ್ಚಿನಿಂದ ಸಂಬಂಧಿಯನ್ನೇ ಕೊಚ್ಚಿ ಹಾಕಿದ ಕುಡುಕ!

0

ಚಾಮರಾಜನಗರ:- ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚೆನ್ನಿಪುರದೊಡ್ಡಿಯಲ್ಲಿ ಕೊಟ್ಟ ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ಎಂದು ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದಿರುವ ಘಟನೆ ಜರುಗಿದೆ.

ಮೃತನನ್ನು ಉಮೇಶ್ ಎಂದು ಗುರುತಿಸಲಾಗಿದ್ದು, ಆತ ತನ್ನ ಸಂಬಂಧಿ ಸ್ವಾಮಿ ಗೌಡನಿಗೆ ಸಾಲ ನೀಡಿದ್ದ. ಕೆಲ ದಿನಗಳ ಬಳಿಕ ಸಾಲ ವಾಪಸ್ ಕೇಳಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಸ್ವಾಮಿ ಗೌಡ ರೊಚ್ಚಿಗೆದ್ದು ಉಮೇಶ್‌ನ ತಲೆ ಹಾಗೂ ಮುಖಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿ, ಬಳಿಕ ಕತ್ತು ಕೊಯ್ದಿದ್ದಾನೆ.

ತೀವ್ರ ಗಾಯಗೊಂಡ ಉಮೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಾಹಿತಿ ಪಡೆದ ಚಾಮರಾಜನಗರ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಸ್ವಾಮಿ ಗೌಡನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಮಾಡಲು ಪ್ರಚೋದನೆ ನೀಡಿದ ಆರೋಪದ ಮೇಲೆ ಕೆಂಡಗಣ್ಣ ಎಂಬ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ದೇವಸ್ಥಾನ ಹಾಗೂ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು ಎನ್ನಲಾಗಿದೆ. ಶವವನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದಾಗಲೇ ದುರಂತ; ಪ್ರತಿಷ್ಠಿತ ಕಂಪನಿಯ 6ನೇ ಮಹಡಿಯಿಂದ ಬಿದ್ದು ಯುವಕ ಸಾವು

0

ಬೆಂಗಳೂರು:- ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಔಷಧ ತಯಾರಿಕ ಕಂಪನಿಯ ಕಟ್ಟಡದ ಮೇಲಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜರುಗಿದೆ.

ಅನಂತ್ ಕುಮಾರ್ ಮೃತ ದುರ್ದೈವಿ. 6ನೇ ಮಹಡಿಯ ಬಾಲ್ಕನಿಯಲ್ಲಿ ಗೆಳತಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇಂದು ಡಿ.30ರ ಮಧ್ಯಾಹ್ನ ಬಾಲ್ಕನಿ ಬಳಿ ತನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ನೇಹಿತೆಯ ಜೊತೆ ಏನು ಸಂಭಾಷಣೆ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪತ್ರಿಕಾರಂಗ ಥರ್ಡ್ ಅಂಪೈರ್ ಇದ್ದಂತೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕನೇ ಅಂಗ ಎಂದೇ ಕರೆಯಲ್ಪಡುವ ಪತ್ರಿಕಾರಂಗವು ಥರ್ಡ್ ಅಂಪೈರ್ ಇದ್ದಂತೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಭಿಪ್ರಾಯಪಟ್ಟರು.

ಮಂಗಳವಾರ ಪತ್ರಿಕಾ ಭವನದಲ್ಲಿ `ಚಕ್ರವರ್ತಿ’ ಹೆಮ್ಮೆಯ ಕನ್ನಡ ದಿನ ಪತ್ರಿಕೆಯ 2026ರ ವರ್ಣರಂಜಿ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುವ ಶಕ್ತಿ ಪತ್ರಿಕಾರಂಗಕ್ಕೆ ಇರುವುದರಿಂದ ಇದು ಥರ್ಡ್ ಅಂಪೈರ್ ಆಗಿ ಕಾಣುತ್ತಿದೆ ಎಂದರು.

ಸರಕಾರದ ಯೋಜನೆಗಳು ಸಮರ್ಪಕವಾಗಿ ಜಾರಿ ಆಗುತ್ತದೆಯೋ ಇಲ್ಲವೋ ಎಂಬುದು ಅನುಭವಿಸುವ ವ್ಯಕ್ತಿಗಳಿಗೆ ತಿಳಿಯಬೇಕು. ಇಲ್ಲವೇ ಸ್ವತಂತ್ರವಾದ ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಇರುವ ಪತ್ರಿಕಾರಂಗಕ್ಕೆ ತಿಳಿಯಬೇಕು. ಇದನ್ನು ಬಿಟ್ಟರೆ ಯಾರು ಕೂಡಾ ಸ್ಪಷ್ಟವಾಗಿ ತಿಳಿಯಲಾರರು. ನಿಖರವಾದ, ನೇರವಾದ ಸುದ್ದಿಗಳು ಬಂದರೆ ಅಂತಹ ಮಾಧ್ಯಮಗಳು ಜನರ ವಿಶ್ವಾಸ ಗಳಿಸಲು ಸಾಧ್ಯವಿದೆ. ಪತ್ರಿಕಾರಂಗ ಜವಾಬ್ದಾರಿಯನ್ನು ಅರಿತುಕೊಂಡಾಗ ಪತ್ರಿಕಾರಂಗದ ಆಶಯ ಈಡೇರಲು ಸಾಧ್ಯವೆಂದರು.

ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಮಾಧ್ಯಮರಂಗ ಕಲುಷಿತವಾಗಲು ಕಾರಣಗಳೇನು ಎಂಬುದನ್ನು ಅರಿತುಕೊಂಡು ಅವುಗಳಿಂದ ದೂರವಾದರೆ ಮಾಧ್ಯಮಗಳು ಎಲ್ಲರ ವಿಶ್ವಾಸ ಗಳಿಸಲು ಸಾಧ್ಯವಿದೆ ಎಂದರು.

ಗದಗ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಜಿಲ್ಲೆಯ ಮಾಧ್ಯಮಗಳ ಬೆಳವಣಿಗೆಯಲ್ಲಿ, ಸರಕಾರದ ಸೌಲಭ್ಯಗಳ ಸದುಪಯೋಗದಲ್ಲಿ ವಾರ್ತಾ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದರು.

ಸಮಾರಂಭದ ವೇದಿಕೆಯಲ್ಲಿದ್ದ ಹಿರಿಯ ಪತ್ರಕರ್ತ ಜಗದೀಶ್ ಕುಲಕರ್ಣಿ, ವಿಜಯಸಾಕ್ಷಿ ದಿನಪತ್ರಿಕೆ ಸಂಪಾದಕ ಎಚ್.ಎಂ. ಶರೀಫನವರ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಸಂಪಾದಕರ ಸಂಘದ ಅಧ್ಯಕ್ಷ ಜಗದೀಶ ಪೂಜಾರ, ಎ.ಬಿ.ಎಸ್.ಎಸ್.ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಈಶ್ವರಸಾ ಮೇರವಾಡೆ ಸಂದರ್ಭೋಚಿತವಾಗಿ ಮಾತನಾಡಿ ಚಕ್ರವರ್ತಿ ಪತ್ರಕೆಯ ಸಮಾಜಮುಖಿ ಸೇವೆಯನ್ನ ಶ್ಲಾಘಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸೊರಟೂರ ಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಪತ್ರಿಕಾರಂಗ ಮತ್ತು ಪತ್ರಕರ್ತರ ಬದುಕು ತಂತಿಯ ಮೇಲಿನ ನಡಿಗೆಯಾಗಿದೆ. ದಿನನಿತ್ಯ ಹಲವಾರು ಸವಾಲುಗಳನ್ನು ಎದುರುಸುತ್ತಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೆಯ ಸಂಪಾದಕ ಎನ್.ಆರ್. ಭಾಂಡಗೆ ಸರ್ವರ ಸಹಕಾರ ಸ್ಮರಿಸಿ ಅಭಿನಂದಿಸಿದರು. ವೇದಿಕೆ ಮೇಲೆ ಬೆಟಗೇರಿ ಎಸ್.ಎಸ್.ಕೆ ಪಂಚ್ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ್ ಕಬಾಡಿ, ಗದಗ ಎಸ್.ಎಸ್.ಕೆ ಪಂಚ್ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ ಉಪಸ್ಥಿತರಿದ್ದರು.

ಸುನೀಲ ಪ್ರಾರ್ಥಿಸಿದರು. ನ್ಯಾಯವಾದಿ, ಪತ್ರಿಕಾ ಕಾನೂನು ಸಲಹೆಗಾರ ಟಿ.ಎನ್. ಭಾಂಡಗೆ ಸ್ವಾಗತಿಸಿದರು. ರೈಜ್ ಆಫ್ ಗದಗ ಸಂಪಾದಕ ಆನಂದಯ್ಯ ವಿರಕ್ತಮಠ ನಿರೂಪಿಸಿದರು. ಆಸ್ಕ್ ನ್ಯೂಸ್ ಸಂಪಾದಕ ಡಾ. ಅನಂತ ಎಸ್. ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಮಾರಂಭದಲ್ಲಿ ಸಾಧಕರು, ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಮಾಧ್ಯಮಗಳ ಮಹತ್ವವನ್ನು ಎಲ್ಲರೂ ಅರ್ಥೈಸಿಕೊಳ್ಳುವ ಅಗತ್ಯವಿದೆ. ಪೊಲೀಸ್ ತನಿಖೆಯಲ್ಲಿ ಬಹಳಷ್ಟು ಸಹಕಾರಿಯಾಗಿ ನಿಲ್ಲುವ ಶಕ್ತಿ ಮಾಧ್ಯಮಗಳು. ಹೀಗಾಗಿ ಆಡಳಿತದ ಸುಧಾರಣೆಯಲ್ಲಿ, ಆಡಳಿತದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಶಕ್ತಿ ಮಾಧ್ಯಮಕ್ಕಿರುವುದರಿಂದ ಆಡಳಿತದ ಜೊತೆ ಮಾಧ್ಯಮಗಳು ಆತ್ಮೀಯ ಸಂಬಂಧ ಹೊಂದಿವೆ ಎಂದರು.

ಜಿಲ್ಲಾ ಸಂಚಾಲಕ ರಾಚಯ್ಯ ಹೊಸಮಠ ನೇತೃತ್ವದಲ್ಲಿ ‘ಮನ್ ಕೀ ಬಾತ್’ ಕಾರ್ಯಕ್ರಮ ವೀಕ್ಷಣೆ

0

ಗದಗ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ `ಮನ್ ಕೀ ಬಾತ್’ 2025ನೇ ಸಾಲಿನ ಕೊನೆಯ 129ನೇ ಸಂಚಿಕೆಯ ಕಾರ್ಯಕ್ರಮವನ್ನು 4ನೇ ವಾರ್ಡ್‌ನ ಬೂತ್ ಸಂಖ್ಯೆ 24, 25, 26, 27 ಹಾಗೂ 28ರಲ್ಲಿ ಮನ್ ಕೀ ಬಾತ್ ಗದಗ ಜಿಲ್ಲಾ ಸಂಚಾಲಕ ರಾಚಯ್ಯ ಹೊಸಮಠ ಇವರ ನೇತೃತ್ವದಲ್ಲಿ ವೀಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರಾದ ಶ್ರೀಪತಿ ಉಡುಪಿ, ದೇವೇಂದ್ರಪ್ಪ ಗೋಟುರ, ಮಂಜುನಾಥ ತಳವಾರ, ಶಂಕರ ಕಾಕಿ, ಮಂಜಣ್ಣ ಮಾದಗುಂಡಿ, ಕೃಷ್ಣ ಚಿಂತಾ, ಲಕ್ಷ್ಮಣ ವಾಲ್ಮೀಕಿ, ಶಿವು ಗೋಟೂರ ಭಾಗವಹಿಸಿದ್ದರು.

ದಾಖಲಾಗದೇ ಉಳಿದಿರುವ ಪ್ರಕರಣ ಪತ್ತೆ ಮಾಡಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಯಾವುದೇ ನಾಯಿ ಕಡಿತದ ಪ್ರಕರಣಗಳು ದಾಖಲಾಗದೇ ಇದ್ದಲ್ಲಿ ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇಲಾಖಾಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಬೇಕು. ಇದರ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಸಭೆಯಲ್ಲಿ ಮಾಹಿತಿ ಒದಗಿಸಬೇಕು. ನೀರಿನ ಮಾದರಿ ವಿಶ್ಲೇಷಣೆಗೆ ಸಂಬಂಧಿಸಿದಂತೆ ಕೇಂದ್ರೀಯ ಅಂತರ್ಜಲ ಮಂಡಳಿ ನೀರಿನ ಮಾದರಿ ರಾಸಾಯನಿಕ ವಿಶ್ಲೇಷಣೆ ಮಾಡಿದ್ದು, ಕೆಲವೊಂದು ಕಡೆ ಅರ್ಸೆನಿಕ್ ಹಾಗೂ ಯುರೇನಿಯಂ ಪ್ರಮಾಣ ಪರಿಮಿತಿಗಿಂತ ಹೆಚ್ಚಾಗಿರುವುದು ಕಂಡು ಬಂದಿರುತ್ತದೆ. ಅಂತಹ ಸ್ಥಳಗಳನ್ನು ಗುರುತಿಸಿ ಮಾದರಿಗಳನ್ನು ಶೇಖರಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 2025ರಿಂದ ನವೆಂಬರ್ 2025ರವರೆಗೆ 3929 ಕರುಳು ಬೇನೆ, 3774 ಟೈಫಾಯಿಡ್, 47 ಹೆಪಟೈಟಿಸ್-ಎ, 118 ಡೆಂಘಿ ಹಾಗೂ 3 ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಜನವರಿ 2025ರಿಂದ ನವೆಂಬರ್ 2025ರವರೆಗೆ ಒಟ್ಟು 3,26,804 ಸಂಶಯಾಸ್ಪದ ಮಲೇರಿಯಾ ರಕ್ತದ ಲೇಪನಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 7 ಖಚಿತ ಪ್ರಕರಣಗಳು ವರದಿಯಾಗಿವೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಾವು ಕಡಿತ, ಇಲಿ ಜ್ವರ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರಿಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ಡಾ. ಅರುಂಧತಿ ಕುಲಕರ್ಣಿ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ರಾಷ್ಟ್ರಿಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ವಿಶ್ವ ರೇಬಿಸ್ ದಿನಾಚರಣೆಯನ್ನು ಮುಂಡರಗಿಯ ಶ್ರೀ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಕ್ಟೋಬರ್ 3ರಂದು ಆಚರಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ 9,008 ನಾಯಿಕಡಿತ ಹಾಗೂ 1,541 ಇತರೆ ಪ್ರಾಣಿಗಳ ಕಡಿತ ಪ್ರಕರಣಗಳು ವರದಿಯಾಗಿವೆ ಎಂದು ಡಾ. ವೆಂಕಟೇಶ ರಾಠೋಡ ಸಭೆಗೆ ತಿಳಿಸಿದರು.

ತುಂಗಭದ್ರ ನದಿ ಚರಂಡಿಯಾಗಿ ಪರಿವರ್ತನೆಯಾಗುತ್ತಿದೆ: ಹಿರಿಯ ಚಿಂತಕ ರಹಮತ್ ತರೀಕೆರೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ದೇವರು ಸಮೃದ್ಧಿಯಾಗುವ ಸಮಯದಲ್ಲಿ ಭಕ್ತರು ಸ್ಮಶಾನದ ಕಡೆಗೆ ಸಾಗುವಂತಾಗಿದೆ. ಇಲ್ಲಿನ ಕಾರ್ಖಾನೆಗಳ ಕೊಳವೆಗಳು ಫಿರಂಗಿಗಳಂತೆ ಪರಿಣಮಿಸಿವೆ ಎಂದು ಹಿರಿಯ ಚಿಂತಕ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯ 61ನೇ ದಿನದ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು.

ತುಂಗಭದ್ರ ನದಿ ಇಂದು ಚರಂಡಿಯಾಗಿ ಪರಿವರ್ತನೆಯಾಗುತ್ತಿದ್ದು, ಇಲ್ಲಿಂದ ಜಿಂದಾಲ್‌ವರೆಗೆ ಸುಮಾರು 70 ಕಿ.ಮೀ ವ್ಯಾಪ್ತಿಯು ಅಪಾಯಕಾರಿ ಮಾಲಿನ್ಯದ ಕಾರಿಡಾರ್ ಆಗಿದೆ. ಸರಕಾರಗಳೇ ಜನರ ಮೇಲೆ ಯುದ್ಧ ಸಾರಿದಂತಾಗಿದೆ ಇಲ್ಲಿನ ಪರಿಸ್ಥಿತಿ. ಆದ್ದರಿಂದ ಇದು ಎಲ್ಲರ ಹೋರಾಟವಾಗಬೇಕು. ಕೊಪ್ಪಳದ ಗವಿಮಠದ ಜಾತ್ರೆಯೂ ಜನಪರವಾಗಿ ನಿಲ್ಲಬೇಕು. ಇಲ್ಲಿನ ದೂಳು, ಹೊಗೆ ಹಾಗೂ ವಿಷಾನಿಲದ ವಿರುದ್ಧದ ಹೋರಾಟ ಇದಾಗಿದೆ. ಕಾರ್ಖಾನೆಗಳ ಕೊಳವೆಗಳು ಇಲ್ಲಿನ ಜನರನ್ನು ಕೊಲ್ಲುವ ಫಿರಂಗಿಗಳಂತೆ ಕಾಣುತ್ತಿದ್ದು, ಇದು ಬದುಕಿನ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಹೇಳಿದರು.

ಯುವ ರೈತ ಗವಿಸಿದ್ದಪ್ಪ ಪುಟಗಿ ಮಾತನಾಡಿ, ಈಗಾಗಲೇ ಕೃಷಿ ಇಲಾಖೆ ಇಲ್ಲಿ ಬೆಳೆ ಬೆಳೆಯಬೇಡಿ ಎನ್ನುತ್ತಿದೆ. ತೋಟಗಾರಿಕೆ ಸಂಪೂರ್ಣವಾಗಿ ನಿಂತುಹೋಗಿದೆ. ಪಶುಸಂಗೋಪನಾ ಇಲಾಖೆ ದನ-ಕರುಗಳನ್ನು ಸಾಕಬೇಡಿ ಎಂದು ಸೂಚಿಸುತ್ತಿದೆ. ಇಲಾಖೆಗಳು ಈ ಪ್ರದೇಶವನ್ನು ಬಫರ್‌ಜೋನ್ ಎಂದು ಹೇಳುತ್ತಿದ್ದರೂ ಅಲ್ಲಿ ಗಿಡವೂ ಬೆಳೆಯದ ಸ್ಥಿತಿ ಇದೆ. ಅನೇಕ ಅಧಿಕಾರಿಗಳು ಕಾರ್ಖಾನೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಮಾತ್ರವೇ ಇಲ್ಲಿ ಕ್ಯಾನ್ಸರ್‌ನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಅಧ್ಯಯನ ನಡೆಸುವ ಸಂಸ್ಥೆಗಳು ಮತ್ತು ಸಮಿತಿಗಳು ಕೇವಲ ಕಾರ್ಖಾನೆ ಪರವಾಗಿ ಸೂಟ್‌ಕೇಸ್‌ಗಳಿಗೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕಾರ್ಖಾನೆ ವಿರೋಧಿ ಈ ಹೋರಾಟದ ವೇದಿಕೆಯಲ್ಲಿ ಸಾಹಿತ್ಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಲ್ವರು ದಿಗ್ಗಜರಾದ ಹೆಚ್.ಎಸ್. ಪಾಟೀಲ್, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ ಹಾಗೂ ಚಿಂತಕ ರಹಮತ್ ತರೀಕೆರೆ ಉಪಸ್ಥಿತರಿರುವುದು ಈ ಹೋರಾಟದ ಗಂಭೀರತೆಯನ್ನು ತೋರಿಸುತ್ತದೆ. ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಧರಣಿಯಲ್ಲಿ ಪುಷ್ಪಲತಾ ಏಳುಭಾವಿ, ಬಿ.ಜಿ. ಕರಿಗಾರ, ಸಾವಿತ್ರಿ ಮುಜುಮದಾರ್, ಸಿ.ವಿ. ಜಡಿಯವರ, ಎಸ್.ಬಿ. ರಾಜೂರು, ಗಂಗಾಧರ ಖಾನಾಪೂರ, ರವಿ ಕಾಂತನವರ, ಕವಿ ಮಹೇಶ ಮನ್ನಾಪುರ, ಎಂ.ಡಿ. ಪಾಟೀಲ್, ಶಂಭುಲಿಂಗಪ್ಪ ಆರ್. ಹರಗೇರಿ, ಮಂಜುನಾಥ ಆಟೋ, ಮಂಜುನಾಥ ಕೊಂಡನಹಳ್ಳಿ, ಶಾಂತಯ್ಯ ಅಂಗಡಿ, ಯಲ್ಲಪ್ಪ ಕೋಳೂರು, ಎಸ್. ಮಹಾದೇವಪ್ಪ ಮಾವಿನಮಡು, ಈರಯ್ಯಸ್ವಾಮಿ ಸಾಲಿಮಠ, ಗೀತಾ ಭೋವಿ, ಸದಾಶಿವ ಪಾಟೀಲ್, ರಮೇಶ ಡಂಬ್ರಳ್ಳಿ ಕುಣಿಕೇರಿ, ರಮೇಶ ಕೋಳೂರು, ಶಿವಪ್ಪ ಜಲ್ಲಿ, ಬಸವರಾಜ ನರೇಗಲ್, ಪಾಮಣ್ಣ ಕೆ. ಮಲ್ಲಾಪುರ, ಮಖ್ಬುಲ್ ರಾಯಚೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಖ್ಯಾತ ವಿಮರ್ಶಕ ಹಾಗೂ ಸಂಶೋಧಕ ರಹಮತ್ ತರೀಕೆರೆ ಅವರು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪುಸ್ತಕ ಪ್ರಕಾಶಕ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ ಅವರೊಂದಿಗೆ ಕಾರ್ಖಾನೆಗಳಿಂದ ಬಾಧಿತವಾಗಿರುವ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ ತಾಂಡಾ ಹಾಗೂ ಹಾಲವರ್ತಿ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ವೀಕ್ಷಿಸಿದರು.

ಉತ್ಸವವನ್ನು ಯಶಸ್ವಿಯಾಗಿಸಲು ಕಾರ್ಯೋನ್ಮುಖರಾಗಿ: ಎಸ್.ಆರ್. ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಸಂಕೇತಿಸುವ ಪಂಚ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಲ್ಲಿ 2026ರ ಜನವರಿ 5ರಂದು ಅದ್ಧೂರಿಯಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ತಿಳಿಸಿದರು.

ಅವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಉತ್ಸವದ ಯಶಸ್ವಿಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳಿರುವ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿಯ ಪ್ರತಿಯೊಬ್ಬ ಸದಸ್ಯರೂ ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈ ಉತ್ಸವವು ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಿರುವುದರ ಪ್ರತಿಬಿಂಬವಾಗಬೇಕು ಎಂದು ಹೇಳಿದರು.

ಜಿಲ್ಲೆಯಾದ್ಯಂತ ಇರುವ ಎಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉತ್ಸವದಲ್ಲಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಅಥವಾ ಅಧಿಕಾರಿಗಳಿಗೆ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ತೊಡಕುಗಳಿದ್ದರೆ, ಅವುಗಳನ್ನು ತಕ್ಷಣವೇ ಗಮನಕ್ಕೆ ತರಬೇಕು. ಅಂತಹ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ವೇದಿಕೆಯಲ್ಲಿ ಧಾರವಾಡ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ಯಾನಪ್ಪಗೌಡ ಆರ್.ಪಾಟೀಲ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಉಪಸ್ಥಿತರಿದ್ದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಕಮಿಟಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಂಚ ಗ್ಯಾರಂಟಿಗಳಿಂದ ಜನರ ಜೀವನದಲ್ಲಿ ಆದ ಬದಲಾವಣೆಗಳ ಜನರಿಗೆ ಮನವರಿಕೆ ಮಾಡಲು, ಪ್ರತಿ ಯೋಜನೆಗೆ ಒಂದರಂತೆ ಐದು ವಿಶೇಷ ಕಿರುಚಿತ್ರಗಳನ್ನು ಸಿದ್ಧಪಡಿಸಬೇಕು. ಅಲ್ಲದೆ, ಫಲಾನುಭವಿಗಳ ನೈಜ ಯಶೋಗಾಥೆಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶಿಸಬೇಕು ಎಂದು ಎಸ್.ಆರ್. ಪಾಟೀಲ್ ಅಧಿಕಾರಿಗಳಿಗೆ ತಿಳಿಸಿದರು.

ಮೆಕ್ಕೆಜೋಳ ಖರೀದಿಯಲ್ಲಿ `ಮಾಮೂಲಿ’ ಸಮಸ್ಯೆ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಟಿಎಪಿಸಿಎಂಎಸ್‌ನ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳದ ಗುಣಮಟ್ಟ ಪರೀಕ್ಷೆಯ ನೆಪದಲ್ಲಿ ಅಲ್ಲಿನ ಸಿಬ್ಬಂದಿಗಳು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮಾಮೂಲು ಕೊಟ್ಟರೆ ಕ್ವಾಲಿಟಿ ಚೆನ್ನಾಗಿದೆ ಎಂದು, ಕೊಡದಿದ್ದರೆ ಕ್ವಾಲಿಟಿ ನೆಪದಲ್ಲಿ ಖರೀದಿ ತಿರಸ್ಕಾರ ಮಾಡುತ್ತಿದ್ದಾರೆ ಎಂದು ಸಮಗ್ರ ರೈತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ ಹಾಗೂ ರೈತ ಮುಖಂಡ ರವಿಕಾಂತ ಅಂಗಡಿ ಆರೋಪಿಸಿದರು.

ಅವರು ಮಂಗಳವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನೋಂದಣಿ ಮಾಡಿಕೊಂಡ ರೈತರ ಮೆಕ್ಕೆಜೋಳ ಖರೀದಿಯಾಗುತ್ತಿಲ್ಲ. ಸರದಿ ಸಾಲಿನಲ್ಲಿ 8-10 ದಿನ ನಿಂತರೆ ನಿತ್ಯ ಸಾವಿರ ರೂ ಟ್ರ್ಯಾಕ್ಟರ್ ಬಾಡಿಗೆ ಕೊಡಬೇಕು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೆಸರ ಮೇಲೆ ದುಡ್ಡು ಮಾಡುತ್ತಿದ್ದಾರೆ. ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂದು ಹೋರಾಟ ಮಾಡಿದರೆ ಅದರ ಲಾಭ ಬಂಡವಾಳಶಾಹಿಗಳಿಗೆ ಸಿಗುತ್ತಿದೆ. ಖರೀದಿ ಕೇಂದ್ರದಲ್ಲಿ ಯಾರೂ ಕೇಳುವವರೇ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ನಾಗರಾಜ ಚಿಂಚಲಿ ಮಾತನಾಡಿ, ಸೊಸೈಟಿ ಮುಂದೆ ಇಟ್ಟುಕೊಂಡು ರೈತರ ಬಳಿ ಸುಲಿಗೆ ಮಾಡುತ್ತಿದ್ದಾರೆ. 8-10 ದಿನದಿಂದ ಮೆಕ್ಕೆಜೋಳ ತಂದು ಪಾಳಿಯಲ್ಲಿ ನಿಂತರೂ ಇಲ್ಲದ ಕಾರಣ ಹೇಳಿ ಮೆಕ್ಕೆಜೋಳ ತಿರಸ್ಕಾರ ಮಾಡುತ್ತಿದ್ದಾರೆ. ಸರ್ಕಾರದ ಸ್ಪಷ್ಟ ಆದೇಶದ ನಡುವೆಯೂ ರೈತರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸಬೇಕು ಎಂದು ಹೇಳಿದರು.

ಈ ವೇಳೆ ಪೂರ್ಣಾಜಿ ಖರಾಟೆ, ಬಸವರಾಜ ಹಿರೇಮನಿ, ಟಾಕಪ್ಪ ಸಾತಪುತೆ, ಪ್ರಕಾಶ ಗುತ್ತಲ, ಮಂಜುನಾಥ ಮುಳುಗುಂದ, ಫಕ್ಕೀರಯ್ಯ ಹಿರೇಮಠ ಮುಂತಾದವರು ಇದ್ದರು.

error: Content is protected !!