Home Blog Page 240

ಯಶಸ್ವಿ ಕಾರ್ಯಾಚರಣೆ: ಕೊನೆಗೂ ಚಾಮರಾಜನಗರದಲ್ಲಿ ಗಂಡು ಹುಲಿ ಸೆರೆ

0

ಚಾಮರಾಜನಗರ: ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಬೀಡುಬಿಟ್ಟಿರುವ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸಮೀಪ ಗಂಡು ಹುಲಿಯೊಂದು ಕಾಣಿಸಿಕೊಂಡಿದ್ದು, ಮಂಗಳವಾರ ರಾತ್ರಿ 10ರ ಸುಮಾರಿಗೆ ಸೆರೆ ಹಿಡಿಯಲಾಗಿದೆ.

ನಂಜೇದೇವನಪುರ, ವೀರನಪುರ, ಆನೆ ಮಡುವಿನ ಕೆರೆ ಬಳಿ 5 ಹುಲಿಗಳಿವೆ ಎಂದು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ನಿನ್ನೆ ರಾತ್ರಿ ಗಂಡು ಹುಲಿ ಕಾಣಿಸಿಕೊಂಡ ಕೂಡಲೇ ಸಾಕಾನೆಗಳ ಸಹಾಯದಿಂದ ಅರಿವಳಿಕೆ ಕೊಟ್ಟು ಸೆರೆ ಹಿಡಿಯಲಾಗಿದೆ.

ಕೂಂಬಿಂಗ್​​ ಎಕ್ಸ್​ಪರ್ಟ್​​ ಸುಗ್ರೀವ ಕರಾರುವಕ್ಕಾಗಿ ಹುಲಿಯ ವಾಸನೆ ಪತ್ತೆ ಹಚ್ಚಿ ತನ್ನ ಮಾವುತ ಶಂಕರ್​ಗೆ ಸೂಚನೆ ನೀಡಿತ್ತು. ತಕ್ಷಣ ಸುಗ್ರೀವ ಆನೆಯ ಸಹಾಯದಿಂದ ಆನೆಮಡುವಿನ ಕೆರೆ ಪಕ್ಕ ನೀರು ಕುಡಿಯಲು ಬಂದ ಹುಲಿಗೆ ಪಶು ವೈದ್ಯರು ಅರಿವಳಿಕೆ ಕೊಟ್ಟರು. ಬಳಿಕ ಸೆರೆ ಹಿಡಿಯಲಾಯಿತು.

ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಒಂದೆಡೆ ಇದ್ದರೆ, ಈ ಗಂಡು ಹುಲಿ ಪ್ರತ್ಯೇಕವಾಗಿತ್ತು. ಇದರಿಂದ ನಂಜೇದೇವನಪುರದಲ್ಲಿ ಇದ್ದದ್ದು 5 ಅಲ್ಲ 6 ಹುಲಿ ಎಂಬಂತಾಗಿದೆ. ಕಲ್ಪುರದಲ್ಲಿ ಕಳೆದ ತಿಂಗಳು ಕ್ಯಾಮರಾ ಟ್ರ್ಯಾಪ್​ನಲ್ಲಿ ಕ್ಯಾಪ್ಚರ್​ ಆಗಿದ್ದ ದೊಡ್ಡ ಗಾತ್ರದ​ ಹುಲಿ ಇದಾಗಿದೆ ಎನ್ನಲಾಗಿದೆ.

ಹೊಸ ವರ್ಷಾಚರಣೆ: ದೇವರಾಯನದುರ್ಗ, ನಾಮದ ಚಿಲುಮೆ, ಮಂದಾರಗಿರಿ ಬೆಟ್ಟಗಳಲ್ಲಿ ನಿಷೇಧಾಜ್ಞೆ!

0

ತುಮಕೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳ್ಳಲಾಗಿದೆ. ದೇವರಾಯನದುರ್ಗ, ನಾಮದ ಚಿಲುಮೆ ಮತ್ತು ಮಂದಾರಗಿರಿ ಬೆಟ್ಟಗಳಲ್ಲಿ ಸೆಕ್ಷನ್ 144 ಜಾರಿಮಾಡಲಾಗಿದೆ.

ಡಿ.31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 8 ಗಂಟೆಯವರೆಗೆ ಮತ್ತು ಜನವರಿ 1 ಸಂಜೆ 6 ಗಂಟೆಯಿಂದ ಜನವರಿ 2 ಬೆಳಗ್ಗೆ 8 ಗಂಟೆಯವರೆಗೆ ಸೆಕ್ಷನ್ 144 ಅನ್ವಯವಾಗಲಿದೆ.

ಹೊಸ ವರ್ಷದ ಸಂಭ್ರಮದ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಲು ಅವಕಾಶ ನೀಡಲು ಹಗಲು ಹೊತ್ತಿನಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ, ಈ ಪ್ರದೇಶದಲ್ಲಿ ಮೋಜು–ಮಸ್ತಿ ಮತ್ತು ಅಪಾಯಕಾರಿಯ ಚಟುವಟಿಕೆಗಳನ್ನು ತಡೆಯಲು ನಿಷೇಧಾಜ್ಞೆ ಜಾರಿಯಾಗಿದೆ.

ಈ ನಡುವೆ, ಪ್ರವಾಸಿಗರು ಮಧ್ಯಾಹ್ನದ ನಂತರ ದೌಡಾಯಿಸುತ್ತಿದ್ದು, ದೇವರಾಯನದುರ್ಗ ಮತ್ತು ನಾಮದ ಚಿಲುಮೆಗೆ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

‘ನನ್ನ ದೂರು ಕಡಿಮೆ ಮುಖ್ಯವೇ?’ – ನ್ಯಾಯ ವ್ಯವಸ್ಥೆ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಪ್ರಶ್ನೆ

ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರೂ, ಪೊಲೀಸರಿಂದ ಯಾವುದೇ ಕ್ರಮವಾಗಿಲ್ಲ ಎಂಬ ಆರೋಪವನ್ನು ವಿಜಯಲಕ್ಷ್ಮಿ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಬೇಸರ ಹಂಚಿಕೊಂಡಿರುವ ವಿಜಯಲಕ್ಷ್ಮಿ,
“ನಾನು ದಾಖಲಿಸಿದ ದೂರು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಆದರೆ ಮತ್ತೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದು ನನಗೆ ಅಚ್ಚರಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ತಮ್ಮ ದೂರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿರುವ ಅವರು,
“ನನ್ನ ವಕೀಲರಿಂದ ನಿರಂತರವಾಗಿ ವಿಚಾರಿಸಿದರೂ ಯಾವುದೇ ಪ್ರಗತಿ ಇಲ್ಲ. ಇಂದು ವೈಯಕ್ತಿಕವಾಗಿ ಹೋಗಿ ಮತ್ತೆ ನೆನಪಿಸಬೇಕಾಯಿತು. ಈ ವಿಳಂಬವು ಯಾವುದೇ ಪ್ರಭಾವದಿಂದಾಗಿಲ್ಲ ಎಂದು ನಾನು ಆಶಿಸುತ್ತೇನೆ” ಎಂದು ಹೇಳಿದ್ದಾರೆ.

ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡಿರುವ ವಿಜಯಲಕ್ಷ್ಮಿ ದರ್ಶನ್, “ನ್ಯಾಯವು ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು. ಇಂತಹ ವರ್ತನೆಗೆ ಬೆಂಬಲಿಸುವವರು ತಮ್ಮ ಶಕ್ತಿಯನ್ನು ಉತ್ತಮ ದಿಕ್ಕಿನಲ್ಲಿ ಬಳಸಬೇಕು” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ ಡಿಸೆಂಬರ್ 31ರಂದು ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ತಮ್ಮ ದೂರಿನ ಬಗ್ಗೆ ಪ್ರಶ್ನಿಸಿದರು. ವಕೀಲರ ಜೊತೆ ಆಗಮಿಸಿದ್ದ ಅವರು, ಪೊಲೀಸ್ ಕ್ರಮದ ವಿಳಂಬದ ಬಗ್ಗೆ ಗರಂ ಆಗಿದ್ದಂತೆ ಕಂಡುಬಂದಿತು. ನಂತರ ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಮಂಡ್ಯದಲ್ಲಿ ಹೊಸ ವರ್ಷಾಚರಣೆ ಭದ್ರತೆ: ಕಾವೇರಿ ತೀರದಲ್ಲಿ ನಿಷೇಧಾಜ್ಞೆ

0

ಮಂಡ್ಯ: ಹೊಸ ವರ್ಷ 2026ನ್ನು ಸ್ವಾಗತಿಸಲು ಉತ್ಸಾಹದಿಂದ ಇಡೀ ದೇಶ ತುದಿಗಾಲದಲ್ಲಿ ಸಜ್ಜಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸುರಕ್ಷಿತವಾಗಿ ನಡೆಸಲು ಪೊಲೀಸ್ ಇಲಾಖೆ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಕಾವೇರಿ ನದಿ ತೀರದಲ್ಲಿ ಪ್ರತಿ ವರ್ಷ ಜನರು ನದಿಗೆ ಇಳಿದು ಉತ್ಸವ ಆಚರಿಸುತ್ತಿದ್ದರು. ಕಳೆದ ವರ್ಷಗಳಲ್ಲಿ ಇದರಿಂದ ಸಂಭವಿಸಿದ ಪ್ರಾಣಹಾನಿ–ಅಪಘಾತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಜನವರಿ 1ರಿಂದ 2ರವರೆಗೆ ಬೆಳಗ್ಗೆ 6ಗಂಟೆಯಿಂದ ನಿಶ್ಚಿತ ಸಮಯದವರೆಗೆ ನದಿ ತೀರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

ಕಾವೇರಿ ತೀರದ ಪ್ರಮುಖ ಸ್ಥಳಗಳಾದ ಬಲಮುರಿ, ಎಡಮುರಿ, ವೇಣುಗೋಪಾಲಸ್ವಾಮಿ ದೇವಸ್ಥಾನ, ಮುತ್ತತ್ತಿ, ಕಾವೇರಿ ಹಿನ್ನೀರು ಪ್ರದೇಶಗಳಲ್ಲಿ ಜನರ ಪ್ರವೇಶವನ್ನು ನಿಯಂತ್ರಿಸಲಾಗಿದೆ. ಜನರು ನದಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೇ ಹೊಸ ವರ್ಷಾಚರಣೆಯ ನೆಪದಲ್ಲಿ ಡ್ರಗ್ಸ್, ಗಾಂಜಾಗಳಂತಾ ಮಾದಕ ವಸ್ತುಗಳ ಬಳಿಕೆಯ ವಿಚಾರದಲ್ಲಿ ಮಂಡ್ಯ ಖಾಕಿ ಅಲರ್ಟ್ ಆಗಿದೆ.

ಕೋಗಿಲು ಜಟಾಪಟಿ ಬಳಿಕ ಕೇರಳ ಸಿಎಂ ಜತೆ ಸಿದ್ದರಾಮಯ್ಯ ಆತ್ಮೀಯ ಕುಶಲೋಪರಿ!

0

ತಿರುವನಂತಪುರಂ: ಕೇರಳದ ವರ್ಕಳದಲ್ಲಿ ಆಯೋಜಿಸಲಾಗಿರುವ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಆತ್ಮೀಯ ಸಂಭಾಷಣೆ ನಡೆಸಿದರು.

ಶಿವಗಿರಿ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ಗೌರವ ಸಲ್ಲಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಉಪಸ್ಥಿತರಿದ್ದರು. ಈ ವೇಳೆ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಿಣರಾಯಿ ವಿಜಯನ್ ಪರಸ್ಪರ ಕುಶಲೋಪರಿ ವಿಚಾರಿಸಿದರು.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬ್ರಹ್ಮಶ್ರೀ ಜ್ಞಾನತೀರ್ಥ ಸ್ವಾಮೀಜಿ ಹಾಗೂ ನಾರಾಯಣ ಗುರುಗಳ ಅನುಯಾಯಿಗಳು ನೀಡಿದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಹರ್ಷಗೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.

ಜಾತಿಯಾಧಾರಿತ ಶೋಷಣೆ ಹಾಗೂ ಅಸಮಾನತೆಯಿಂದ ಬಳಲುತ್ತಿದ್ದ ಸಮಾಜಕ್ಕೆ ಸಮಾನತೆಯ ದಾರಿ ತೋರಿದ ನಾರಾಯಣ ಗುರುಗಳು ನಡೆದಾಡಿದ ನೆಲದಲ್ಲಿ ನಡೆಯಲಿರುವ ಯಾತ್ರಾರ್ಥಿಗಳ ಮಹಾಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

‘ಟಾಕ್ಸಿಕ್’ನಲ್ಲಿ ಗಂಗಾ ಪಾತ್ರದಲ್ಲಿ ನಯನತಾರಾ; ಶಾಟ್ ಗನ್ ಹಿಡಿದ ಮಾಸ್ ಲುಕ್ ವೈರಲ್

ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಸದ್ಯ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಕುರಿತ ಕುತೂಹಲ ಹೆಚ್ಚಿಸಲು ಚಿತ್ರತಂಡ ಪಾತ್ರಗಳ ಪರಿಚಯವನ್ನು ಹಂತ ಹಂತವಾಗಿ ಮಾಡುತ್ತಿದೆ. ಈಗಾಗಲೇ ಕಿಯಾರಾ ಅಡ್ವಾಣಿ ಹಾಗೂ ಹುಮಾ ಖುರೇಷಿ ಪಾತ್ರಗಳು ರಿವೀಲ್ ಆಗಿದ್ದು, ಇದೀಗ ನಟಿ ನಯನತಾರಾ ಅವರ ಪಾತ್ರದ ಅನಾವರಣ ನಡೆದಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಅವರು ಗಂಗಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಹಲವು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಪಾತ್ರ ರಿವೀಲ್ ಆದ ಬಳಿಕ ಅವರ ಲುಕ್‌ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅರಮನೆಯ ಶೈಲಿಯ ಸೆಟ್, ಹಿಂಭಾಗದಲ್ಲಿ ನಿಂತಿರುವ ವಿದೇಶಿ ಗಾರ್ಡ್ಗಳು ಮತ್ತು ಕೈಯಲ್ಲಿ ಶಾಟ್ ಗನ್ ಹಿಡಿದ ನಯನತಾರಾ – ಈ ದೃಶ್ಯಗಳು ಅವರ ಪಾತ್ರದಲ್ಲಿ ಆ್ಯಕ್ಷನ್ ಹಾಗೂ ಮಾಸ್ ಎಲಿಮೆಂಟ್ಸ್ ಹೆಚ್ಚಾಗಿ ಇರಲಿವೆ ಎಂಬುದಕ್ಕೆ ಸುಳಿವು ನೀಡುತ್ತಿವೆ. ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಜನವರಿ 8ರಂದು ನಟ ಯಶ್ ಅವರ ಜನ್ಮದಿನ ಇರುವ ಹಿನ್ನೆಲೆಯಲ್ಲಿ, ಆ ದಿನ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೂ ಮುನ್ನ ಎಲ್ಲಾ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಮೂಲಕ ಸಿನಿಮಾದ ಹೈಪ್ ಹೆಚ್ಚಿಸುವ ತಂತ್ರವನ್ನು ಚಿತ್ರತಂಡ ಅನುಸರಿಸುತ್ತಿದೆ.

ಮಲಯಾಳಂನ ಗೀತು ಮೋಹನ್ದಾಸ್ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದು, ಕಥೆ ಬರವಣಿಗೆಯಲ್ಲಿ ಯಶ್ ಅವರ ಪಾತ್ರವೂ ಇದೆ. ಪೋಸ್ಟರ್‌ನಲ್ಲಿ ತಿಳಿಸಿರುವಂತೆ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ ಇದೆ.

ಮಾರ್ಚ್ 19ರಂದು ಈದ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಹಿಂದಿಯಲ್ಲಿ ‘ಧುರಂಧರ್ 2’ ಸಿನಿಮಾ ತೆರೆಗೆ ಬರುತ್ತಿದೆ. ಈ ಕಾರಣದಿಂದ ‘ಟಾಕ್ಸಿಕ್’ಗೆ ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ ಎದುರಾಗುವ ಸಾಧ್ಯತೆ ಇದೆ.

ಸ್ಲೀಪರ್ ಕೋಚ್ ಬಸ್​ʼಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಂಭೀರ ಗಾಯ

0

ಆನೇಕಲ್: ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಫ್ಲೈಓವರ್ ಮೇಲೆ ಎರಡು ಸ್ಲೀಪರ್ ಕೋಚ್ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ಎರಡು ಸ್ಲೀಪರ್ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

ಮುಂಭಾಗದಲ್ಲಿ ಸಾಗುತ್ತಿದ್ದ ಬಸ್‌ಗೆ ಹಿಂಬದಿಯಿಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದು, ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಈ ಅಪಘಾತದಲ್ಲಿ ಎರಡೂ ಬಸ್‌ಗಳು ಸಂಪೂರ್ಣವಾಗಿ ಜಖಂಗೊಂಡಿವೆ.

ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಹಿನ್ನೆಲೆ ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರವನ್ನು ಸುಗಮಗೊಳಿಸಿದರು. ಪ್ರಕರಣವು ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ, ಸಾಧಾರಣ ಮಳೆಯ ನಿರೀಕ್ಷೆ: ಹವಾಮಾನ ಇಲಾಖೆ

0

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಒಣಹವೆಯ ವಾತಾವರಣ ಮುಂದುವರಿದಿದ್ದು, ಇಂದು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಈ ಹಿನ್ನೆಲೆ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವರ್ಷಾಂತ್ಯದವರೆಗೆ ರಾಜ್ಯದಲ್ಲಿ ಒಣಹವೆಯೇ ಮುಂದುವರಿಯಲಿದ್ದು, ಹೊಸ ವರ್ಷದ ವೇಳೆ ಮಳೆಯ ಸಾಧ್ಯತೆ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ?

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಇಂದೂ ಮುಂದುವರಿಯಲಿದೆ.

ಬೆಂಗಳೂರಿನ ಹವಾಮಾನ

ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸ್ವಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಳಿಯ ಪರಿಣಾಮ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿರುವುದರಿಂದ ಬಿಸಿ ಆಹಾರ ಸೇವನೆ ಹಾಗೂ ಬೆಚ್ಚಗಿನ ಹೊದಿಕೆ ಬಳಸುವಂತೆ ವೈದ್ಯರು ಸೂಚಿಸಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಗಲ್ವಾನ್’ ಚಿತ್ರಕ್ಕೆ ಚೀನಾ ಆಕ್ಷೇಪ: ತಿರುಗೇಟು ನೀಡಿದ ಭಾರತ

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಬ್ಯಾಟಲ್ ಆಫ್ ಗಲ್ವಾನ್’ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎದ್ದಿದೆ. ಸಿನಿಮಾದಲ್ಲಿರುವ ಗಲ್ವಾನ್ ಕಣಿವೆ ಘರ್ಷಣೆಯ ದೃಶ್ಯಗಳಿಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜೂನ್ 2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಚಿತ್ರಣವು ವಾಸ್ತವ ಘಟನೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಚೀನಾ ಆರೋಪಿಸಿದೆ. ಗಲ್ವಾನ್ ಕಣಿವೆ ಎಲ್‌ಎಸಿ ವ್ಯಾಪ್ತಿಯಲ್ಲಿ ಚೀನಾದ ಭಾಗದಲ್ಲಿದೆ. ಭಾರತೀಯ ಸೈನಿಕರು ಗಡಿ ದಾಟಿ ಪ್ರಚೋದನೆ ನೀಡಿದ ಕಾರಣವೇ ಘರ್ಷಣೆಗೆ ಕಾರಣ ಎಂದು ಚೀನಾ ಹೇಳಿಕೊಂಡಿದೆ.

ಚೀನಾದ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಸಿನಿಮಾ ನಿರ್ಮಾಣವು ಕಲಾವಿದರ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ಸಿನಿಮಾ ತಯಾರಕರು ತಮ್ಮ ದೃಷ್ಟಿಕೋನದಂತೆ ಚಿತ್ರ ನಿರ್ಮಿಸಬಹುದು ಎಂದು ಹೇಳಿದೆ.

ಇದಲ್ಲದೆ, ಈ ಸಿನಿಮಾದೊಂದಿಗೆ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೂ ಯಾರಿಗಾದರೂ ಆಕ್ಷೇಪಣೆ ಇದ್ದರೆ ಸರ್ಕಾರವನ್ನು ಸಂಪರ್ಕಿಸಬಹುದು. ಅಗತ್ಯವಾದ ಸ್ಪಷ್ಟನೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಬಿಕ್ಕುಮಳ್ಳ ಸಂತೋಷ್ ಬಾಬು ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಸೇನೆಯ ಶೌರ್ಯವನ್ನು ಆಧರಿಸಿರುವ ಈ ಸಿನಿಮಾ 2026ರ ಏಪ್ರಿಲ್ 17ರಂದು ತೆರೆಕಾಣಲಿದೆ.

ಸಂಜೆ 6 ಗಂಟೆಯ ನಂತರ ಅಪ್ಪಿತಪ್ಪಿಯೂ ಇಂತಹ ಆಹಾರಗಳ ಸೇವನೆ ಮಾಡಬೇಡಿ!

0

ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಖಾರವಾದ ಸ್ನಾಕ್ಸ್ ತಿನ್ನಬೇಕೆಂದು ಅನಿಸುವುದು ಸಹಜ. ವಿಶೇಷವಾಗಿ ಚಳಿಗಾಲ ಹಾಗೂ ಮಳೆಗಾಲದಲ್ಲಿ ಸಮೋಸಾ, ಪಕೋಡಾ, ಬಜ್ಜಿ ಹೀಗೆ ಕರಿದ ತಿನಿಸುಗಳತ್ತ ಮನಸ್ಸು ಓಡುತ್ತದೆ. ಆದರೆ ಈ ಆಹಾರಗಳನ್ನು ಯಾವ ಸಮಯದಲ್ಲಿ ಸೇವಿಸುತ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಆರೋಗ್ಯ ತಜ್ಞರ ಪ್ರಕಾರ, ಸಂಜೆ 6 ಗಂಟೆಯ ನಂತರ ಸೇವಿಸುವ ಆಹಾರಗಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಹೆಚ್ಚು ಒತ್ತಡ ಉಂಟುಮಾಡುತ್ತವೆ. ಇದರಿಂದ ದೀರ್ಘಾವಧಿಯಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಸಂಜೆ 6 ಗಂಟೆಯ ನಂತರ ದೂರವಿರಬೇಕಾದ ಆಹಾರಗಳು

ಸಂಜೆಯ ವೇಳೆಗೆ ಬಾಯಿಯ ರುಚಿಗಾಗಿ ಸೇವಿಸುವ ಕೆಲವು ಆಹಾರಗಳು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಪ್ರಮಾಣವನ್ನು ಹೆಚ್ಚಿಸಬಹುದು. ಆದ್ದರಿಂದ ಇವುಗಳಿಂದ ದೂರವಿರುವುದು ಒಳಿತು.

  • ಹುರಿದ ಆಹಾರಗಳು: ಸಮೋಸಾ, ಪಕೋಡಾ, ಬಜ್ಜಿ

  • ಜಂಕ್ ಫುಡ್: ಹೆಚ್ಚು ಬೆಣ್ಣೆ ಹಾಗೂ ಚೀಸ್ ಇರುವ ಬರ್ಗರ್, ಪಿಜ್ಜಾ

  • ಸಿಹಿತಿಂಡಿಗಳು: ಜಲೇಬಿ ಮತ್ತು ಹೆಚ್ಚು ಸಕ್ಕರೆ ಹೊಂದಿರುವ ಮಿಠಾಯಿಗಳು

  • ಬೀದಿ ಆಹಾರ: ಮಸಾಲಾ ಪುರಿ, ಚಾಟ್ ಮೊದಲಾದ ಮಸಾಲೆಯುಕ್ತ ತಿನಿಸುಗಳು

ಈ ಆಹಾರಗಳನ್ನು ಯಾಕೆ ಸೇವಿಸಬಾರದು?

ಸಂಜೆಯ ನಂತರ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಈ ಸಮಯದಲ್ಲಿ ಹುರಿದ ಮತ್ತು ಮಸಾಲೆಯುಕ್ತ ಆಹಾರ ಸೇವನೆಯಿಂದ ಹಲವು ಸಮಸ್ಯೆಗಳು ಉಂಟಾಗಬಹುದು.

  • ಹುರಿದ ಆಹಾರಗಳು ಟೈಪ್–2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ

  • ಇನ್ಸುಲಿನ್ ಪ್ರತಿರೋಧ ಹೆಚ್ಚಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಸ್ತವ್ಯಸ್ತವಾಗುತ್ತದೆ

  • ಗ್ಯಾಸ್ಟ್ರಿಕ್, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

  • ಕರಿದ ಆಹಾರಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತವೆ

  • ಹೆಚ್ಚಿನ ಕ್ಯಾಲೋರಿ ಇರುವುದರಿಂದ ದೇಹದಲ್ಲಿ ಕೊಬ್ಬು ವೇಗವಾಗಿ ಸಂಗ್ರಹವಾಗುತ್ತದೆ

ಸಂಜೆ ತಿನ್ನಬಹುದಾದ ಆರೋಗ್ಯಕರ ತಿಂಡಿಗಳು

ಸಂಜೆಯ ವೇಳೆಗೆ ಹಗುರ ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ತಜ್ಞರು ಸಲಹೆ ನೀಡುವ ಕೆಲವು ಆರೋಗ್ಯಕರ ಆಯ್ಕೆಗಳು ಹೀಗಿವೆ:

  • ಬೆಣ್ಣೆ ಇಲ್ಲದೆ ಹುರಿದ ಮಖಾನಾ

  • ಬೇಯಿಸಿದ ಸಿಹಿ ಕಾರ್ನ್

  • ಬಿಸಿ ತರಕಾರಿ ಸೂಪ್

  • ಕಡಿಮೆ ಎಣ್ಣೆಯಲ್ಲಿ ಮಾಡಿದ ಪನೀರ್ ಫ್ರೈ ಅಥವಾ ಮಸಾಲೆ ಕಡಲೆ

  • ಗೋಧಿ ಹಿಟ್ಟಿನಿಂದ ಮಾಡಿದ ಡಂಪ್ಲಿಂಗ್‌ಗಳು

error: Content is protected !!