Home Blog Page 244

ಕೇರಳಿಗರು ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯವಿದೆ, ಬಿಜೆಪಿ ಹುಳಿ ಹಿಂಡುವುದು ಬೇಡ: ಡಿ.ಕೆ. ಶಿವಕುಮಾರ್

0

ಬೆಂಗಳೂರು: “ಕೇರಳ ಸಿಎಂ, ಕೇರಳ ಸರಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ರಾಜೀವ್ ಚಂದ್ರಶೇಖರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೇರಳದ ಜನರು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳ ಜನ ನನ್ನನ್ನು ಬಹಳ ಪ್ರೀತಿಸುತ್ತಾರೆ.

ನನಗೂ ಅವರ ಮೇಲೆ ಗೌರವವಿದೆ. ಕೇರಳ ಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಅಲ್ಲಿ ನಮ್ಮ ಸರ್ಕಾರ ಬರಲಿದೆ. ಹೀಗಾಗಿ ಬಿಜೆಪಿಯವರು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಅವರು ಈ ರೀತಿ ಹುಳಿ ಹಿಂಡುವುದು ಬೇಡ. ನಮ್ಮ ಪಕ್ಷದ ನಾಯಕರು ನಮಗೆ ಸಲಹೆ ನೀಡಿದ್ದು, ನಾವು ಅದನ್ನು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.

ಗ್ಯಾಸ್ ಗೀಸರ್ ಸೋರಿಕೆ: ಸ್ನಾನಕ್ಕೆಂದು ಹೋಗಿದ್ದ ಯುವತಿ ಬಾತ್ ರೂಮ್ʼನಲ್ಲೇ ಸಾವು

0

ಚಿತ್ರದುರ್ಗ: ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರುವ ದುರ್ಘಟನೆ ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ವಿನಾಯಕ ಕಲ್ಯಾಣ ಮಂಟಪದ ಬಳಿ ನಡೆದಿದೆ. ಮೃತ ಯುವತಿಯನ್ನು ನೂತನ (20) ಎಂದು ಗುರುತಿಸಲಾಗಿದೆ.

ನೂತನ ಡಾನ್ ಬೋಸ್ಕೋ ಡಿಗ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್.ಸಿ. ವಿದ್ಯಾರ್ಥಿನಿಯಾಗಿದ್ದಳು.
ಸ್ನಾನಕ್ಕೆಂದು ಬಾತ್ ರೂಮ್‌ಗೆ ತೆರಳಿದ್ದ ವೇಳೆ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿದೆ. ಈ ವೇಳೆ ಬಾತ್ ರೂಮ್‌ ಬಾಗಿಲು ಹಾಗೂ ಕಿಟಕಿಗಳು ಮುಚ್ಚಿದ್ದರಿಂದ ಯುವತಿಗೆ ಉಸಿರುಗಟ್ಟಿ ಅಸ್ವಸ್ಥತೆಗೆ ಕಾರಣವಾಗಿದೆ.

ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಪೋಷಕರು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಿದರು. ಆದರೆ, ಅಷ್ಟರಲ್ಲೇ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಟ್ರಾಸಿಟಿ ಪ್ರಕರಣ: ಲಂಚಕ್ಕೆ ಬೇಡಿಕೆ ಇಟ್ಟ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ..!

0

ಕಲಬುರಗಿ: ಅಟ್ರಾಸಿಟಿ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಕಲಬುರಗಿ ಹೈಕೋರ್ಟ್‌ನ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ರಾಜಮಹೇಂದ್ರ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಸರ್ಕಾರಿ ಅಭಿಯೋಜಕ ರಾಜಮಹೇಂದ್ರ  ಪ್ರಕರಣದಲ್ಲಿ ಅನುಕೂಲ ಮಾಡಿಕೊಡುವುದಾಗಿ ಹೇಳಿ ದೂರುದಾರ ನವೀನ್ ಎಂಬುವರಿಂದ 50 ಸಾವಿರ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು. ಈ ಪೈಕಿ 25 ಸಾವಿರ ರೂಪಾಯಿಯನ್ನು ಮುಂಗಡವಾಗಿ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಈ ಕಾರ್ಯಾಚರಣೆ ಕಲಬುರಗಿ ಹೈಕೋರ್ಟ್ ಮುಂಭಾಗದಲ್ಲಿ ನಡೆದಿದ್ದು, ಲಂಚದ ಹಣ ಸಹಿತವಾಗಿ ಆರೋಪಿಯನ್ನು ರೆಡ್‌ಹ್ಯಾಂಡ್ ಬಂಧಿಸಲಾಗಿದೆ.  ಲೋಕಾಯುಕ್ತ ಎಸ್ಪಿ ಸಿದ್ದರಾಜು ಹಾಗೂ ಡಿವೈಎಸ್ಪಿ ಶೀಲವಂತ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ಝೀರೋ ಟ್ರಾಫಿಕ್‌ʼನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ನವಜಾತ ಶಿಶು ಸಾವು..!

0

ಕೊಪ್ಪಳ: ಹೆರಿಗೆ ವೇಳೆ ನವಜಾತ ಶಿಶುವಿನ ಕರುಳು ಹೊರಗೆ ಬಂದಿದ್ದ ಗಂಭೀರ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಶಿಶು ಮೃತಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದ ಶಿಶು ನಿನ್ನೆ ರಾತ್ರಿ ಅಸುನೀಗಿದೆ.

ಕುಕನೂರ ತಾಲೂಕಿನ ಗುತ್ತೂರ ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಮತ್ತು ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ ಹುಟ್ಟುವ ವೇಳೆಯಲ್ಲೇ ಶಿಶುವಿನ ಕರುಳೆಲ್ಲ ಹೊರಗಡೆ ಬಂದಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.

ಶಿಶುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗುವನ್ನು ಕೊಪ್ಪಳದಿಂದ ಹುಬ್ಬಳ್ಳಿಗೆ ಐದು ಆಂಬ್ಯುಲೆನ್ಸ್‌ಗಳ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸಹ ಸಹಕಾರ ನೀಡಿದ್ದರು.

ನವಜಾತ ಶಿಶುವಿಗೆ ಕಿಡ್ನಿ ಸಮಸ್ಯೆಯೂ ಇರುವುದಾಗಿ ವೈದ್ಯರು ತಿಳಿಸಿದ್ದರು. ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಿಶುವನ್ನು ಉಳಿಸಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನವಜಾತ ಶಿಶುವಿನ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಶೋಕ ವಾತಾವರಣ ಆವರಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

ಬೈಕ್‌ʼಗೆ ಅಡ್ಡ ಬಂದ ನಾಯಿ ತಪ್ಪಿಸಲು ಯತ್ನ: ಬೈಕ್‌ʼನಿಂದ ಬಿದ್ದು ಸ್ಥಳದಲ್ಲೇ ASI ಸಾವು.!

0

ಚಿತ್ರದುರ್ಗ: ಬೈಕ್‌ಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದ ವೇಳೆ ಬೈಕ್‌ನಿಂದ ಬಿದ್ದು ಸಹಾಯಕ ಉಪನಿರೀಕ್ಷಕ (ಎಎಸ್ಐ) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಪರಶರಾಂಪುರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ (50) ಎಂದು ಗುರುತಿಸಲಾಗಿದೆ.  ಐಮಂಗಲ ಪೊಲೀಸ್ ತರಬೇತಿ ಶಾಲೆಯಿಂದ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬೈಕ್‌ನಲ್ಲಿ ಮಂಜುನಾಥ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಪೊಲೀಸ್ ಪೇದೆ ಸೂರ್ಯಪ್ರಭಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುವನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಹುಕಾಲದ ಬಳಿಕ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ: ‘ಮಾರ್ಕ್’ ಯಶಸ್ಸಿಗೆ ಸುದೀಪ್ ಸ್ಪೆಷಲ್ ಸೆಲೆಬ್ರೇಷನ್

ಅಭಿಮಾನಿಗಳ ಜೊತೆ ನೇರವಾಗಿ ಸಿನಿಮಾ ವೀಕ್ಷಿಸುವ ಕ್ಷಣಗಳು ನಟರಿಗೆ ವಿಶೇಷವಾಗಿರುತ್ತವೆ. ಆದರೆ ಭದ್ರತೆ ಹಾಗೂ ನೂಕು–ನುಗ್ಗಲು ಕಾರಣದಿಂದಾಗಿ ನಟ ಕಿಚ್ಚ ಸುದೀಪ್ ಅವರು ಮೊದಲ ದಿನ ಫ್ಯಾನ್ಸ್ ಜೊತೆ ಸಿನಿಮಾ ನೋಡುವುದನ್ನು ಬಹುಕಾಲದಿಂದ ತಪ್ಪಿಸಿಕೊಂಡಿದ್ದರು. ಇದೀಗ ಅದೇ ಸುದೀಪ್, ‘ಮಾರ್ಕ್’ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ಮುಂದಾಗಿದ್ದಾರೆ.

ಡಿಸೆಂಬರ್ 31ರಂದು ಸುದೀಪ್ ಅವರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಅಭಿಮಾನಿಗಳ ಜೊತೆ ‘ಮಾರ್ಕ್’ ಸಿನಿಮಾ ವೀಕ್ಷಿಸಲಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30ರ ಶೋ, ಬಳಿಕ ಮೈಸೂರಿನ ಸಂಗಮ ಚಿತ್ರಮಂದಿರದಲ್ಲಿ ಸಂಜೆ 4.30ರ ಶೋನಲ್ಲಿ ಅವರು ಹಾಜರಾಗಲಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಫ್ಯಾನ್ಸ್‌ಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.

ಕಳೆದ ವರ್ಷ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾದ ಬಳಿಕ, ಡಿಸೆಂಬರ್ 31ರಂದು ಸುದೀಪ್ ಅವರು ಪತ್ನಿ ಪ್ರಿಯಾ ಸೇರಿದಂತೆ ಆಪ್ತರ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದನ್ನು ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ಬಾರಿ ‘ಮಾರ್ಕ್’ ಸಿನಿಮಾದೊಂದಿಗೆ ಆ ಸಂಭ್ರಮ ಮತ್ತೆ ಮರುಕಳಿಸುತ್ತಿದೆ.

ಈ ಮೊದಲು “ಫಸ್ಟ್ ಡೇ ಸಿನಿಮಾ ನೋಡುವ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ. ಸಿನಿಮಾ ಚೆನ್ನಾಗಿ ಹೋದರೆ ಡಿಸೆಂಬರ್ 31ರಂದು ಫ್ಯಾನ್ಸ್ ಜೊತೆ ನೋಡುತ್ತೇನೆ” ಎಂದು ಸುದೀಪ್ ಹೇಳಿದ್ದರು. ಈಗ ಆ ಮಾತು ಕಾರ್ಯರೂಪಕ್ಕೆ ಬಂದಿದೆ.

ಡಿಸೆಂಬರ್ 25ರಂದು ಬಿಡುಗಡೆಯಾದ ‘ಮಾರ್ಕ್’ ಸಿನಿಮಾ ನಾಲ್ಕೇ ದಿನಗಳಲ್ಲಿ 35 ಕೋಟಿ ರೂ. ಕಲೆಕ್ಷನ್ ಮಾಡಿ, ಸುದೀಪ್ ಅವರ ವೃತ್ತಿ ಜೀವನಕ್ಕೆ ಮತ್ತೊಂದು ಸೂಪರ್ ಹಿಟ್ ಸೇರ್ಪಡೆಗೊಂಡಿದೆ.

ಕೋಗಿಲು ಬಡಾವಣೆ ಅಕ್ರಮ ಮನೆಗಳ ತೆರವು; ಸಿಎಂ, ಡಿಸಿಎಂ ಯೂಟರ್ನ್- ವಿಜಯೇಂದ್ರ

0

ಬೆಳಗಾವಿ: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಇದೀಗ ಯೂಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ನೀತಿಯಿಂದ ರಾಜ್ಯದ ಜನರು ದಂಗೆ ಏಳುವಂಥ ಸ್ಥಿತಿ ಇದೆ. ಜನವರಿ 5ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಡ್ರಗ್ ಮಾಫಿಯ, ಕನ್ನಡಿಗರಿಗೆ ಅಪಮಾನ, ಗೃಹಲಕ್ಷ್ಮಿ ಯೋಜನೆಯ ಅಕ್ರಮದ ಕುರಿತು ಸಮಗ್ರವಾಗಿ ಚರ್ಚಿಸಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಿದ್ದೇವೆ ಎಂದು ಪ್ರಕಟಿಸಿದರು.

ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯ ಮನೆಗಳನ್ನು ಕೊಡುವುದಾಗಿ ನಿರ್ಧರಿಸಿದ್ದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನಮ್ಮ ರಾಜ್ಯದ ನೀತಿ ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತ ಕೇರಳ ಮೂಲದ ಕೆ.ಸಿ.ವೇಣುಗೋಪಾಲ್ ತೀರ್ಮಾನಿಸಬೇಕೇ? ಈ ರಾಜ್ಯದ ಮುಖ್ಯಮಂತ್ರಿಗಳು ನಿರ್ಧರಿಸಬೇಕೇ? ಬೈಯಪ್ಪನಹಳ್ಳಿಯ ಮನೆಗಳನ್ನು ಕನ್ನಡಿಗರಿಗೆ, ಬಡವರಿಗೆ ಕೊಡಲು ಕಟ್ಟಲಾಗಿದೆ. ಹೈಕಮಾಂಡಿಗೆ ಬೆದರಿ, ಕುರ್ಚಿ ಉಳಿಸಿಕೊಳ್ಳಲು ಮನಸೋಇಚ್ಛೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಸಿಎಂ ನಿರ್ಧಾರಕ್ಕೆ ಕಾನೂನಿನಡಿ ಅಧಿಕಾರ ಇದೆಯೇ? ಎಂದು ಕೇಳಿದರು.

ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡುವುದಾಗಿ ಘೋಷಿಸಿದ್ದು ಖಂಡಿತಕ್ಕೂ ಕಾನೂನಿನ ವಿರುದ್ಧವಾದುದು. ಸಿಎಂ, ಡಿಸಿಎಂ ನಿರ್ಧಾರವೇ ಅಕ್ರಮ. ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ಆಗುವಂತೆ ಯಾಕೆ ಇಂಥ ನಿರ್ಧಾರ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು. ರಾಜ್ಯದ ತೆರಿಗೆದಾರರ ಹಣದಿಂದ ಕಟ್ಟಿದ ಮನೆಗಳನ್ನು ನೀವು ಖುಷಿ ಬಂದಂತೆ ತೀರ್ಮಾನ ಮಾಡುವುದು ಸರಿಯೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿಯವರ ಹೇಳಿಕೆ, ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ ಬಳಿಕ ಹೀಗಾಗಿದೆ. ಸಿಎಂ ಅವರು ತಮ್ಮ ಕುರ್ಚಿ ಉಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೆ, ಉಪ ಮುಖ್ಯಮಂತ್ರಿಗಳು ಸಿಎಂ ಕುರ್ಚಿ ಪಡೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ವಿಶ್ಲೇಷಿಸಿದರು.

ಸೈಕೋ ಪತಿ ಕಿರುಕುಳ ಆರೋಪ: ವಿಚಿತ್ರ ವರ್ತನೆಯಿಂದ ಬೆಚ್ಚಿಬಿದ್ದ ಪತ್ನಿ – ದೂರು ದಾಖಲು

0

ಬೆಂಗಳೂರು: ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳಾಗಿದ್ದ ಯುವಕ-ಯುವತಿ ನಡುವಿನ ಪರಿಚಯ ಪ್ರೀತಿಗೆ ತಿರುಗಿ, ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯ ವಿಚಿತ್ರ ಹಾಗೂ ಮಾನಸಿಕ ಕಿರುಕುಳದ ವರ್ತನೆಯಿಂದ ಪತ್ನಿ ಕಂಗಾಲಾಗಿದ್ದು, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹೆಚ್‌ಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಸೆಪ್ಟೆಂಬರ್ 3, 2025ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ದಾಂಪತ್ಯ ಜೀವನ ಸುಗಮವಾಗಿದ್ದರೂ, ನಂತರ ಮಂಜುನಾಥ್ ಸೈಕೋ ರೀತಿಯಲ್ಲಿ ವರ್ತಿಸಲು ಆರಂಭಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.

 ಮಂಜುನಾಥ್ ಮೊಬೈಲ್ ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಾನೆ. ಅಲ್ಲದೆ, ಮನೆಯಲ್ಲಿ ಅತ್ತೆ-ಮಾವನ ಮುಂದೆಯೇ ಬಟ್ಟೆ ಇಲ್ಲದೆ ಓಡಾಡುವುದು, ಪ್ಯಾಸೇಜ್‌ಗೆ ಹೋಗಿ ಅಕ್ಕಪಕ್ಕದವರಿಗೆ ಮುಜುಗರ ಉಂಟುಮಾಡುವುದು ಸೇರಿದಂತೆ ಅಸಹಜ ವರ್ತನೆ ತೋರುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ತನಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್​​ ಮನೆ ಬಿಟ್ಟು ಹೋಗಿದ್ದ., ಬಹಲ್ಲೆಗೂ ಯತ್ನಿಸಿದ್ದಾನೆ.

ಆತನ ಈ ಕೃತ್ಯಕ್ಕೆ ತನ್ನ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಗಂಡನ ನಿರಂತರ ಕಿರುಕುಳದಿಂದ ಬೇಸತ್ತ ಪತ್ನಿ, ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೋಗಿಲು ಲೇಔಟ್ ಅಕ್ರಮ ಮನೆ ತೆರವು: ಕರ್ನಾಟಕದವರಿಗೆ ಮಾತ್ರ ಮನೆ – ಸಚಿವ ಜಮೀರ್  ಸ್ಪಷ್ಟನೆ

0

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮನೆಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದು, ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದವರಾಗಿದ್ದರೆ ಮಾತ್ರ ಪುನರ್ವಸತಿ ಮನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಪಾಕಿಸ್ತಾನದ ಹೆಸರನ್ನು ಎಳೆದು ತರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ನಮ್ಮ ದೇಶದ ವಿಚಾರದಲ್ಲಿ ಮಾತನಾಡಲು ಅವರಿಗೆ ಯಾವ ಹಕ್ಕಿಲ್ಲ ಎಂದು ಕಿಡಿಕಾರಿದರು.

ಪಾಕಿಸ್ತಾನದಲ್ಲಿ ಬಡತನ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಮೊದಲು ಅವರು ತಮ್ಮ ದೇಶವನ್ನು ನೋಡಿಕೊಳ್ಳಲಿ ಎಂದು ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದರು. ಮುಸ್ಲಿಮರನ್ನು ನೋಡಿಕೊಳ್ಳುವ ವಿಚಾರದಲ್ಲಿ ಹೊರಗಿನವರು ಸಲಹೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ ಸಚಿವರು, ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಡಾಕ್ಯುಮೆಂಟ್ ಪರಿಶೀಲನೆಯ ನಂತರ ನಿಜವಾದ ಕರ್ನಾಟಕದವರಿಗೆ ಮಾತ್ರ ಮನೆ ನೀಡಲಾಗುವುದು. ಹೊರಗಿನಿಂದ ಬಂದವರಿಗೆ ಯಾವುದೇ ಮನೆ ನೀಡುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಯಾವ ರೀತಿಯಲ್ಲೂ ಓಲೈಕೆ ರಾಜಕಾರಣ ಮಾಡುವಂತಹ ಪ್ರಶ್ನೆ ಬರುವುದಿಲ್ಲ: ಡಿ.ಕೆ. ಶಿವಕುಮಾರ್

0

ಬೆಂಗಳೂರು: “ಅಕ್ರಮವಾಗಿ ಒತ್ತುವರಿ ಯಾರೂ ಮಾಡಬಾರದು. ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ. ಯಾವ ರೀತಿಯಲ್ಲೂ ಓಲೈಕೆ ರಾಜಕಾರಣ ಮಾಡುವಂತಹ ಪ್ರಶ್ನೆ ಬರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಮುಸ್ಲಿಂಮರ ಓಲೈಕೆ ಮಾಡಲಾಗುತ್ತಿದೆ ಎನ್ನುವ ಪ್ರತಿಪಕ್ಷದ ಟೀಕೆಗಳ ಬಗ್ಗೆ ಕೇಳಿದಾಗ, “ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರು ಹಣ ಸಂಗ್ರಹಿಸಿದ್ದಾರೆ ಎಂದು ಅಲ್ಲಿನವರೇ ಹೇಳಿಕೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುವುದು” ಎಂದರು.

“ಈ ಹಿಂದೆ ಕೆಲವು ಭಾಗಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಅದನ್ನು ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಹೊರಗಿನಿಂದ ಬಂದವರು ಸಹ ಹೊಸದಾಗಿ ಸೇರಿಕೊಂಡಿದ್ದಾರೆ. ನೈಜ ಮತದಾರರು ಎಷ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು” ಎಂದರು.

ಕರ್ನಾಟಕದ ವಿಚಾರದಲ್ಲಿ ಕೇರಳ ರಾಜ್ಯದ ಹಸ್ತಕ್ಷೇಪ ಬೇಡ ಎನ್ನುವ ಹೇಳಿಕೆಯನ್ನು ಕೇರಳದ ಕೆಲವು ಸಂಸದರು ಖಂಡಿಸಿರುವ ಬಗ್ಗೆ ಕೇಳಿದಾಗ, “ನಾವು ಉತ್ತಮವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ನಾವು ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಅವರು ಈ ಹಿಂದೆ ಕೊಟ್ಟ ಭರವಸೆ, ಪ್ರವಾಹದ ಸಂದರ್ಭದಲ್ಲಿ ನೀಡಿದ ಮಾತನ್ನೇ ಈಡೇರಿಸಿಲ್ಲ. ಅಂತಹವರು ನಮಗೆ ಹೇಳುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ” ಎಂದರು.

error: Content is protected !!