Home Blog Page 245

ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 20 ದಿನಗಳಲ್ಲಿ 3.73 ಕೋಟಿ ರೂ. ಕಾಣಿಕೆ ಸಂಗ್ರಹ!

0

ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 20 ದಿನಗಳಲ್ಲಿ ಭಕ್ತರಿಂದ ಒಟ್ಟು 3.73 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು,

ಭಕ್ತರಿಂದ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಮಠದ ಪ್ರಕಟಣೆಯಂತೆ, ಕಳೆದ 20 ದಿನಗಳಲ್ಲಿ ಒಟ್ಟು 3,73,66,587 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಸಂಗ್ರಹವಾದ ಕಾಣಿಕೆಯಲ್ಲಿ 3,62,69,247 ರೂಪಾಯಿ ಕರೆನ್ಸಿ ನೋಟುಗಳ ರೂಪದಲ್ಲಿ ಲಭ್ಯವಾಗಿದ್ದು, 10,97,340 ರೂಪಾಯಿ ನಾಣ್ಯಗಳಾಗಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ತಿಳಿಸಿದೆ. ನಗದು ಜೊತೆಗೆ ಭಕ್ತರು 87 ಗ್ರಾಂ ಚಿನ್ನ ಮತ್ತು 910 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದಾರೆ.

ಭಕ್ತರ ಭಕ್ತಿ ಹಾಗೂ ನಂಬಿಕೆಗೆ ಇದೊಂದು ಸಾಕ್ಷಿಯಾಗಿದೆ. ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಭದ್ರತಾ ಕ್ರಮಗಳ ನಡುವೆ ಎಣಿಕೆ ಕಾರ್ಯ ಸಂಪೂರ್ಣಗೊಂಡಿದೆ.

ಬೆಳಗಾವಿಯಲ್ಲಿ ಸಿಮೆಂಟ್ ಲಾರಿ ಪಲ್ಟಿ: 5ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು..!

0

ಬೆಳಗಾವಿ: ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲಶಿರಗೂರು ಬಳಿ ನಡೆದಿದೆ. ಈ ಅಪಘಾತದಲ್ಲಿ 5ನೇ ತರಗತಿ ವಿದ್ಯಾರ್ಥಿ ಅಮಿತ್ ಕಾಂಬಳೆ (11) ಲಾರಿ ಅಡಿಯಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದೆ.

ಘಟನೆಯಲ್ಲಿ ಅಂಜಲಿ ಕಾಂಬಳೆ (15) ಮತ್ತು ಅವಿನಾಶ ಕಾಂಬಳೆ (14) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಲಾರಿ ಪಲ್ಟಿಯಾದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕ್ರೇನ್ ಬಳಸಿ ಲಾರಿಯನ್ನು ಮೇಲೆತ್ತಿ ಕೆಳಗೆ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ.

ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿ, ತಿರುವಿನಲ್ಲಿ ನಿಯಂತ್ರಣ ತಪ್ಪಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಇನ್ನೂ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೋಗಿಲು ಲೇಔಟ್‌ʼಗೆ 2 ದಿನಗಳಲ್ಲಿ ಪರಿಹಾರ: ತುಷ್ಟೀಕರಣ ರಾಜಕಾರಣ ಎಂದ ಪ್ರಹ್ಲಾದ್ ಜೋಶಿ

0

ಬೆಂಗಳೂರು: ಇತ್ತೀಚೆಗೆ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕರ್ನಾಟಕದ ಜನ ವಿಪತ್ತಿಗೊಳಗಾಗಿ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಟೀಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ ಎಂದು ಬರೆದುಕೊಂಡಿರುವ ಜೋಶಿ, ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರು, ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ.

ಈ ಅತಿಕ್ರಮಣದಾರರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಸಹ ಘೋಷಿಸಿದ್ದು, ಪ್ರತಿ ಮನೆಗೆ 8 ರಿಂದ 11 ಲಕ್ಷ ರೂ. ಮತ್ತು ಸಬ್ಸಿಡಿ ನೀಡುವುದಾಗಿ ಹೇಳಿದ್ದು, ಇದೊಂದು ಬಾರಿ ಪರಿಹಾರ ಕಲ್ಪಿಸಲಾಗುತ್ತದೆ ಎಂದಿರುವುದು ವಿಪರ್ಯಾಸ. ಸರ್ಕಾರದ್ದು ಅದ್ಯಾವ ರೀತಿಯ ಪರಿಹಾರ ಕ್ರಮ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ನಿಧನ; ಮೋದಿ ಸೇರಿ ವಿಶ್ವದ ಗಣ್ಯರ ಸಂತಾಪ!

0

ಢಾಕಾ:- ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರು ಇಂದು ನಿಧನರಾಗಿದ್ದಾರೆ.

ಬೇಗಂ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದ ಕಾರಣ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಬೇಗಂ ಅವರು ಮತ್ತೊಮ್ಮೆ ದೇಶವನ್ನು ಮುನ್ನಡೆಸುತ್ತಾರೆ ಎಂದು ಭಾವಿಸಲಾಗಿತ್ತು. ದುರದೃಷ್ಟವಶಾತ್ ಅವರು ನಿಧನ ಹೊಂದಿದ್ದಾರೆ.

ಖಲೀದಾ ಜಿಯಾ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಕುಟುಂಬ ಮತ್ತು ಬಾಂಗ್ಲಾದೇಶದ ಎಲ್ಲಾ ಜನರಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. 2015 ರಲ್ಲಿ ಢಾಕಾದಲ್ಲಿ ಅವರೊಂದಿಗಿನ ನನ್ನ ಆತ್ಮೀಯ ಭೇಟಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ದೂರದೃಷ್ಟಿ ಮತ್ತು ಪರಂಪರೆ ಉಭಯ ದೇಶಗಳಿಗೆ ಮಾರ್ಗದರ್ಶನವಾಗಿದೆ ಎಂದು ನಾವು ಭಾವಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ.

ಬಹುಕಾಲದ ಗೆಳತಿ ಜೊತೆ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ನಿಶ್ಚಿತಾರ್ಥ

0

ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

25 ವರ್ಷದ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್‌ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬಗಳೂ ಒಪ್ಪಿಗೆ ಸೂಚಿಸಿದ್ದಾಗಿ ತಿಳಿದುಬಂದಿದೆ. ಅವಿವಾ ಬೇಗ್ ಹಾಗೂ ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಎರಡೂ ಕುಟುಂಬಗಳು ಪರಸ್ಪರ ನಿಕಟ ಸಂಪರ್ಕದಲ್ಲಿವೆ ಎನ್ನಲಾಗಿದೆ.

ರೈಹಾನ್ ವಾದ್ರಾ ಒಬ್ಬ ದೃಶ್ಯ ಕಲಾವಿದರಾಗಿದ್ದು, ಕಳೆದ 10 ವರ್ಷಗಳಿಂದ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತಿನ ವಿಭಿನ್ನ ಆಯಾಮಗಳನ್ನು ಸೆರೆಹಿಡಿಯುತ್ತಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಸಮಕಾಲೀನ ಕಲಾ ಗ್ಯಾಲರಿಯಾದ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಅವರ ಜೀವನಚರಿತ್ರೆ ಲಭ್ಯವಿದೆ. ಅವರ ಛಾಯಾಗ್ರಹಣ ಪೋರ್ಟ್‌ಫೋಲಿಯೊದಲ್ಲಿ ವನ್ಯಜೀವಿ ಸೇರಿದಂತೆ ಹಲವು ಕ್ಷೇತ್ರಗಳು ಸೇರಿವೆ.

ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರೋತ್ಸಾಹದಿಂದ ರೈಹಾನ್ ಬಾಲ್ಯದಿಂದಲೇ ಛಾಯಾಗ್ರಹಣದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೊ ಛಾಯಾಗ್ರಹಣದ ಮೇಲೆ ವಿಶೇಷ ಆಸಕ್ತಿ ಇತ್ತು ಎನ್ನಲಾಗಿದೆ. ಅವಿವಾ ಬೇಗ್ ಕೂಡ ವೃತ್ತಿಯಿಂದ ಛಾಯಾಗ್ರಾಹಕಿ ಹಾಗೂ ನಿರ್ಮಾಪಕಿಯಾಗಿದ್ದಾರೆ. ಅವರ ಇನ್ಸ್ಟಾಗ್ರಾಮ್ ಬಯೋದಲ್ಲಿಯೇ ಈ ಮಾಹಿತಿಯನ್ನು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ.

ವಿದ್ಯುತ್ ಗ್ರಾಹಕರಿಗೆ ಹೊಸ ವರ್ಷದ ಶಾಕ್: ದರ ಏರಿಕೆ, ಆದರೆ ‘ಟಾಪ್-ಅಪ್’ ಎಂದು ಕರೆಯಲು KERC ನಿರ್ಧಾರ

0

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ನಡುವೆಯೇ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಶಾಕ್ ನೀಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ವಿದ್ಯುತ್ ಬಳಕೆಗೆ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆದರೆ ಇದನ್ನು ನೇರವಾಗಿ ‘ವಿದ್ಯುತ್ ದರ ಪರಿಷ್ಕರಣೆ’ ಎಂದು ಕರೆಯದೆ, “ಟಾಪ್-ಅಪ್” ಅಥವಾ “ಟ್ರೂ-ಅಪ್” ಎಂದು ಕರೆಯಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಮಾರ್ಚ್ 2025ರಲ್ಲಿ ವಿದ್ಯುತ್ ದರ ಪರಿಷ್ಕರಣೆ ಘೋಷಿಸಿದ್ದ ಕೆಇಆರ್‌ಸಿ, ಮೂರು ವರ್ಷಗಳ ಕಾಲ ದರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಮಾರುಕಟ್ಟೆಯ ಏರಿಳಿತಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂಗಳು) ಬಾಕಿ ಮೊತ್ತವನ್ನು ಪರಿಗಣಿಸಿ ಇದೀಗ ವರ್ಷಕ್ಕೊಮ್ಮೆ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಲಾಗುತ್ತಿದೆ. ಇದನ್ನೇ ‘ಟಾಪ್-ಅಪ್’ ಎಂದು ಕರೆಯಲಾಗುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯಂತೆ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದ್ದು, ಮಧ್ಯಂತರದಲ್ಲಿ ಟಾಪ್-ಅಪ್ ಜಾರಿಯಾಗಲಿದೆ. ಈ ಟಾಪ್-ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದ್ದು, ಪ್ರತಿ ಯೂನಿಟ್‌ಗೆ ಗರಿಷ್ಠ 8ರಿಂದ 10 ಪೈಸೆವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಕೃಷಿ ವಿದ್ಯುತ್ ಸಬ್ಸಿಡಿ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ, ಅದರ ಮೊತ್ತವನ್ನು ಕಡಿಮೆ ಮಾಡುವ ಕುರಿತು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ತಮ್ಮ ಲೆಕ್ಕಾಚಾರವನ್ನು ಪರಿಷ್ಕರಿಸಿ, ಪ್ರತಿ ಯೂನಿಟ್‌ಗೆ 8.3 ರೂಪಾಯಿದ್ದ ಕೃಷಿ ಸಬ್ಸಿಡಿಯನ್ನು 7.7 ರೂಪಾಯಿಗೆ ಇಳಿಸುವಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2025–26 ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಬೆಲೆ ಸ್ಥಿರವಾಗಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿರಂತರವಾಗಿ ಕಲ್ಲಿದ್ದಲು ಪೂರೈಕೆ ಲಭ್ಯವಾಗಿರುವುದರಿಂದ ಆಮದು ಕಲ್ಲಿದ್ದಲಿನ ಅವಶ್ಯಕತೆ ಕಡಿಮೆಯಾಗಿದೆ. ಜೊತೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ವೆಚ್ಚಗಳಲ್ಲಿ ಬದಲಾವಣೆ ಕಂಡುಬಂದಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬಂದರೂ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬೇಕಿರುವುದರಿಂದ ದರದಲ್ಲಿ ಕಡಿತ ಸಾಧ್ಯವಿಲ್ಲ. ಈ ಕಾರಣದಿಂದಾಗಿ ಈ ವರ್ಷವೂ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದ್ದು, ಇದನ್ನು ‘ದರ ಪರಿಷ್ಕರಣೆ’ ಎನ್ನದೆ ‘ಟಾಪ್-ಅಪ್’ ಎಂದು ಪರಿಗಣಿಸಲಾಗುತ್ತದೆ ಎಂದು ಕೆಇಆರ್‌ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ| ದ್ವಿಚಕ್ರ ವಾಹನಕ್ಕೆ ಸಾರಿಗೆ ಬಸ್ ಡಿಕ್ಕಿ, ಇಬ್ಬರು ಮಕ್ಕಳು ಸೇರಿ ಮೂವರು ಸಾವು!

0

ಹುಬ್ಬಳ್ಳಿ:- ದ್ವಿಚಕ್ರ ವಾಹನಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿ ಜರುಗಿದೆ.

ಅಪಘಾತಕ್ಕೀಡಾದ ಬಸ್ ಕಾರವಾರದಿಂದ ಹುಬ್ಬಳ್ಳಿಯತ್ತ ಬರುತ್ತಿತ್ತು ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಮೃತರ ಸಂಪೂರ್ಣ ಗುರುತು ಮತ್ತು ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಯುತ್ತಿದೆ.

ಬೈಕ್ ನಲ್ಲಿ ಎರಡು ಮಕ್ಕಳೊಂದಿಗೆ ತಂದೆಯೋರ್ವ ತಡಸದತ್ತ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈ| ಭಾಂಡಪ್‌ನಲ್ಲಿ ಬೆಸ್ಟ್ ಬಸ್ ಅಪಘಾತ: 4 ಸಾವು, 9 ಮಂದಿಗೆ ಗಾಯ!

0

ಮುಂಬೈ: ಬೆಸ್ಟ್ ಬಸ್‌ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಮುಂಬೈನ ಭಾಂಡಪ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ ಬಸ್‌ ಮಾರ್ಗದ ಕೊನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ವೇಳೆ ಬಸ್‌ ಚಾಲಕ ಸಂತೋಷ್ ರಮೇಶ್ ಸಾವಂತ್ (52) ಹಾಗೂ ಕಂಡಕ್ಟರ್ ಭಗವಾನ್ ಭಾವು ಘರೆ (47) ಕರ್ತವ್ಯದಲ್ಲಿದ್ದರು. ಮಾಹಿತಿ ಪಡೆದ ತಕ್ಷಣ ಹಿರಿಯ ಅಧಿಕಾರಿಗಳು ಹಾಗೂ ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಲಾ ₹5 ಲಕ್ಷ ಆರ್ಥಿಕ ನೆರವು ಘೋಷಿಸಿ, ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ವೈಕುಂಠ ಏಕಾದಶಿ ಸಂಭ್ರಮ: ಬೆಂಗಳೂರಿನ ತಿರುಮಲ ದೇಗುಲಕ್ಕೆ ಹರಿದು ಬಂದ ಭಕ್ತರ ದಂಡು!

0

ಬೆಂಗಳೂರು: ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಟಿಟಿಡಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಈ ವರ್ಷ ಎರಡು ಬಾರಿ ವೈಕುಂಠ ಏಕಾದಶಿ ಬಂದಿರುವುದು ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ.
ತಿರುಪತಿ ತಿರುಮಲಕ್ಕೆ ತೆರಳಲು ಸಾಧ್ಯವಾಗದ ಭಕ್ತರಿಗೆ ತಿರುಪತಿಯ ಅನುಭವ ನೀಡುವ ಉದ್ದೇಶದಿಂದ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

ಇಂದು ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ.
ಭಕ್ತರ ಸುಗಮ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ವಯೋವೃದ್ಧರು ಹಾಗೂ ವಿಐಪಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಭಕ್ತರಿಗೆ ಬೆಳಿಗ್ಗೆ 3:30 ರಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ನೀನು ಏನೂ ಕಿತ್ತುಕೊಳ್ಳೋಕೆ ಆಗಲ್ಲ: ಮತ್ತೆ ಶುರುವಾಯ್ತು ಗಿಲ್ಲಿ, ಅಶ್ವಿನಿ ಗೌಡ ಮಾತಿನ ಯುದ್ಧ

‘ಬಿಗ್ ಬಾಸ್ ಕನ್ನಡ 12’ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ, ಅಧಿಕಾರದ ಬಳಕೆಯಿಂದಲೇ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಮಾತಿನ ಯುದ್ಧ ಪ್ರೇಕ್ಷಕರ ಗಮನ ಸೆಳೆದಿದೆ.

ಹಿಂದೆ ಇತರ ಸ್ಪರ್ಧಿಗಳು ಕ್ಯಾಪ್ಟನ್ ಆಗಿದ್ದಾಗ ಕೆಲಸಕ್ಕೆ ನಿರ್ಲಕ್ಷ್ಯ ತೋರಿಸಿದ್ದ ಗಿಲ್ಲಿ ನಟ, ಈಗ ತಾವೇ ಕ್ಯಾಪ್ಟನ್ ಆದ ಬಳಿಕ ಇತರರು ಸಹಕರಿಸದಿದ್ದಕ್ಕೆ ಕೋಪಗೊಂಡಿದ್ದಾರೆ. ಇದರ ಪರಿಣಾಮವಾಗಿ ಅಶ್ವಿನಿ ಗೌಡರ ಜೊತೆ ತೀವ್ರ ವಾಗ್ವಾದ ನಡೆದಿದೆ.

ಬಿಗ್ ಬಾಸ್ ನೀಡಿದ್ದ ವಿಶೇಷ ಅಧಿಕಾರದಡಿ, ಗಿಲ್ಲಿ ನಟ ಅವರು ಅಶ್ವಿನಿ ಗೌಡರಿಂದ ನಾಮಿನೇಷನ್ ಅಧಿಕಾರವನ್ನು ಕಿತ್ತುಕೊಂಡರು. ಇದಕ್ಕೆ ಕಾರಣವಾಗಿ, “ಕಿಚನ್ ಕೆಲಸ ಹೇಳಿದಾಗ ಪ್ರತಿಕ್ರಿಯೆ ಇಲ್ಲ. ಮಾತಿನಲ್ಲಿ ಶುಗರ್ ಕೋಟಿಂಗ್ ಇದೆ. ರೂಲ್ ಬುಕ್‌ಗೆ ವಿರುದ್ಧವಾದ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ” ಎಂದು ಗಿಲ್ಲಿ ನಟ ಸ್ಪಷ್ಟನೆ ನೀಡಿದರು.

ಆದರೆ ಅಶ್ವಿನಿ ಗೌಡ ಈ ನಿರ್ಧಾರವನ್ನು ಒಪ್ಪಲಿಲ್ಲ.
“ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು. ಇದು ಅಧಿಕಾರದ ಬಳಕೆ ಅಲ್ಲ, ದುರಹಂಕಾರ. ಇದು ವ್ಯಕ್ತಿತ್ವದ ಆಟ, ಅಹಂಕಾರದ ಆಟ ಅಲ್ಲ. ನನ್ನನ್ನು 2.0 ರೀತಿ ಇರಲು ಬಿಡು. ನೀನು ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಅಶ್ವಿನಿ ಗೌಡ ಗಿಲ್ಲಿ ನಟ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಜಗಳದಿಂದ ಬಿಗ್ ಬಾಸ್ ಮನೆಯಲ್ಲಿ ಅಧಿಕಾರ, ಅಹಂಕಾರ ಮತ್ತು ವ್ಯಕ್ತಿತ್ವದ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಗಿಲ್ಲಿ ನಟ ಅವರ ಕ್ಯಾಪ್ಟನ್ಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿವಾದಗಳಿಗೆ ಕಾರಣವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!