Home Blog Page 246

‘ಸು ಫ್ರಮ್ ಸೋ’ ಗೆಲುವಿನ ಬಳಿಕ ರಾಜ್ ಬಿ. ಶೆಟ್ಟಿ ಹೊಸ ಅಟ್ಟಹಾಸ: ‘ರಕ್ಕಸಪುರದೋಳ್’ ಟೀಸರ್ ವೈರಲ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇ ಶೈಲಿಯನ್ನು ಕಟ್ಟಿಕೊಂಡಿರುವ ನಟ ರಾಜ್ ಬಿ. ಶೆಟ್ಟಿ, ಒಂದರ ಬಳಿಕ ಒಂದರಂತೆ ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 2025ರಲ್ಲಿ ‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸಿನ ಬಳಿಕ, ‘45’ ಸಿನಿಮಾದ ಪ್ರಮುಖ ಪಾತ್ರವೂ ಗಮನ ಸೆಳೆದಿತ್ತು. ಇದೀಗ ಅವರ ಮುಂದಿನ ಸಿನಿಮಾ ‘ರಕ್ಕಸಪುರದೋಳ್’ ಟೀಸರ್ ಬಿಡುಗಡೆ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ.

‘ರಕ್ಕಸಪುರದೋಳ್’ ಸಿನಿಮಾವನ್ನು ರವಿ ಸಾರಂಗ ನಿರ್ದೇಶಿಸುತ್ತಿದ್ದು, ಅವರು ‘ಜೋಗಿ’ ಪ್ರೇಮ್ ಅವರ ಶಿಷ್ಯ ಎಂಬುದು ವಿಶೇಷ. ಪ್ರತಿಯೊಬ್ಬ ವ್ಯಕ್ತಿಯೊಳಗೂ ಇರುವ ಒಳ್ಳೆಯದು–ಕೆಟ್ಟದ್ದು ಎಂಬ ಎರಡು ಮುಖಗಳ ಕಥೆಯನ್ನು ಈ ಸಿನಿಮಾದಲ್ಲಿ ತೆರೆದಿಡಲಾಗುತ್ತಿದೆ. ಟೀಸರ್‌ನಲ್ಲಿ ದಟ್ಟ ಕಾಡು, ಮಾಟ ಮಂತ್ರ, ರಹಸ್ಯಮಯ ಸರಣಿ ಸಾವುಗಳ ದೃಶ್ಯಗಳು ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿವೆ.

2026ರ ಫೆಬ್ರವರಿ 6ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮನರಂಜನೆ ಜೊತೆಗೆ ವಿಭಿನ್ನ ಅನುಭವ ನೀಡುವ ಸಿನಿಮಾ ಇದಾಗಲಿದೆ ಎಂಬ ಭರವಸೆ ಟೀಸರ್ ನೀಡಿದೆ. ರಾಜ್ ಬಿ. ಶೆಟ್ಟಿ ಅವರಿಗೆ ಇದು ಡಿಫರೆಂಟ್ ಹಾಗೂ ಪವರ್‌ಫುಲ್ ಸಿನಿಮಾ” ಎಂಬ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ನಿರ್ಮಾಪಕರಾಗಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ವಿಲಿಯನ್ ಡೇವಿಡ್ ಛಾಯಾಗ್ರಹಣ ಹಾಗೂ ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನ ಸಿನಿಮಾ ತಾಂತ್ರಿಕವಾಗಿ ಭರ್ಜರಿ ಇರಲಿದೆ ಎಂಬ ಸೂಚನೆ ನೀಡುತ್ತದೆ.

ಒಟ್ಟಾರೆ, ‘ರಕ್ಕಸಪುರದೋಳ್’ ಸಿನಿಮಾ ರಾಜ್ ಬಿ. ಶೆಟ್ಟಿ ಅವರ ವೃತ್ತಿ ಜೀವನದಲ್ಲಿ ಮತ್ತೊಂದು ವಿಭಿನ್ನ ಅಧ್ಯಾಯವಾಗಲಿದೆ ಎಂಬುದಕ್ಕೆ ಟೀಸರ್ ಸ್ಪಷ್ಟ ಸೂಚನೆ ನೀಡುತ್ತಿದೆ.

ಚಿತ್ರದುರ್ಗದಲ್ಲಿ ಅಕ್ರಮ ಗೂಡಂಗಡಿಗಳ ಮೇಲೆ ಜೆಸಿಬಿ ದಾಳಿ!

0

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಜೆಸಿಬಿಗಳ ಘರ್ಜನೆ ಆರಂಭವಾಗಿದ್ದು, ರಸ್ತೆ ಬದಿಯ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ.

ಚಳ್ಳಕೆರೆ ಗೇಟ್ ಬಳಿ ರಸ್ತೆ ಪಕ್ಕ ನಿರ್ಮಿಸಲಾಗಿದ್ದ ಅಕ್ರಮ ಗೂಡಂಗಡಿಗಳನ್ನು ಚಿತ್ರದುರ್ಗ ನಗರಸಭೆ ಆಯುಕ್ತೆ ಲಕ್ಷ್ಮೀ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಗುತ್ತಿದೆ. ಹಲವು ಬಾರಿ ನೋಟಿಸ್ ನೀಡಿದ್ದರೂ ವ್ಯಾಪಾರಿಗಳು ನಿರ್ಲಕ್ಷ್ಯ ವಹಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.

ಹಣ್ಣು, ತರಕಾರಿ, ಟೀ ಸ್ಟಾಲ್, ಗುಜರಿ ಅಂಗಡಿ ಸೇರಿದಂತೆ ವಿವಿಧ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಗೂಡಂಗಡಿಗಳನ್ನು ತೆರವು ಮಾಡದಂತೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆ ಹಾಗೂ ಕೋರ್ಟ್ ಆದೇಶದ ಆಧಾರದ ಮೇಲೆ ನಗರಸಭೆ ಈ ಕ್ರಮ ಕೈಗೊಂಡಿದೆ. ನಗರಸಭೆ ಅಧಿಕಾರಿಗಳ ಕ್ರಮಕ್ಕೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕೆಲಸದ ಅವಕಾಶ ಇದ್ದರೂ ಇಷ್ಟವಿಲ್ಲದೇ ನೇಣಿಗೆ ಶರಣಾದ ನಟಿ ನಂದಿನಿ: ಸ್ನೇಹಿತೆ ತನುಜಾ ಭಾವುಕ

ಕನ್ನಡ–ತಮಿಳು ಕಿರುತೆರೆಗಳಲ್ಲಿ ಭವಿಷ್ಯ ತುಂಬಿರುವ ನಟಿಯಾಗಿ ಗುರುತಿಸಿಕೊಂಡಿದ್ದ ನಂದಿನಿ ಸಿಎಂ ಅವರ ಅಕಾಲಿಕ ನಿಧನ ಕಿರುತೆರೆ ವಲಯವನ್ನು ಶೋಕಕ್ಕೆ ತಳ್ಳಿದೆ. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುತ್ತಿದ್ದ ನಂದಿನಿ, ಡಿಸೆಂಬರ್ 28ರ ರಾತ್ರಿ ಬೆಂಗಳೂರಿನ ಕೆಂಗೇರಿ ಪ್ರದೇಶದ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂದಿನಿ ಅವರು ಕನ್ನಡದಲ್ಲಿ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’, ‘ಅಣ್ಣ-ತಂಗಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ದೀರ್ಘಕಾಲದ ಶ್ರಮದಿಂದ ಕಿರುತೆರೆಯಲ್ಲಿ ತಮ್ಮದೇ ಸ್ಥಾನ ಕಟ್ಟಿಕೊಂಡಿದ್ದರು.

ನಂದಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅವರ ಸ್ನೇಹಿತೆ ತನುಜಾ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.
“ತಂದೆ ತೀರಿಕೊಂಡ ನಂತರ ಸರ್ಕಾರಿ ಕೆಲಸ ನಂದಿನಿಗೆ ಬಂದಿತ್ತು. ಆದರೆ ಆ ಕೆಲಸಕ್ಕೆ ಅವಳಿಗೆ ಮನಸ್ಸಿರಲಿಲ್ಲ. ನಟನೆಯಲ್ಲಿ ಮುಂದುವರಿಯಬೇಕು ಎಂಬ ಆಸೆ ಅವಳಿಗಿತ್ತು. ಆದರೆ ಮನೆಯವರಿಂದ ಚಿತ್ರರಂಗ ಬಿಟ್ಟು ಸರ್ಕಾರಿ ಕೆಲಸಕ್ಕೆ ಸೇರುವ ಒತ್ತಡ ಇತ್ತು. ಅದರಿಂದ ಅವಳು ಮಾನಸಿಕವಾಗಿ ತುಂಬಾ ಕುಗ್ಗಿದ್ದಳು” ಎಂದು ಹೇಳಿದ್ದಾರೆ.

ಇನ್ನೂ, “ಇನ್ನೂ ಒಳ್ಳೆಯ ಪ್ರಾಜೆಕ್ಟ್ ಮಾಡಬೇಕು ಅನ್ನೋ ಕನಸು ಅವಳಿಗಿತ್ತು. ಆತ್ಮಹತ್ಯೆಯೇ ಪರಿಹಾರ ಅಲ್ಲ. ಅವಳು ಬದುಕಬಹುದಿತ್ತು. ಈಗ ಏನು ಸಾಧನೆ ಆಯಿತು?” ಎಂದು ತನುಜಾ ದುಃಖ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 29ರ ಬೆಳಗ್ಗೆ ಆರ್‌ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು ಮೂಲದ ನಂದಿನಿ, ವೈಯಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.

‘ಗೌರಿ’ ಧಾರಾವಾಹಿ ನಾಯಕಿ ನಂದಿನಿ ಸಿಎಂ ಆತ್ಮಹತ್ಯೆ

ಕನ್ನಡ–ತಮಿಳು ಕಿರುತೆರೆ ಲೋಕದಲ್ಲಿ ಬೆಳೆಯುತ್ತಿರುವ ನಟಿಯಾಗಿ ಗುರುತಿಸಿಕೊಂಡಿದ್ದ ನಂದಿನಿ ಸಿಎಂ ಅವರ ಅಕಾಲಿಕ ನಿಧನ ಅಭಿಮಾನಿಗಳನ್ನು ದುಃಖಕ್ಕೀಡು ಮಾಡಿದೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡು ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ನಂದಿನಿ ಅವರು ಕನ್ನಡ ಕಿರುತೆರೆಯಲ್ಲಿ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತಮಿಳಿನ ಜನಪ್ರಿಯ ‘ಗೌರಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು, ದ್ವಿಪಾತ್ರದ ಮೂಲಕ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ದುರ್ಗಾ ಹಾಗೂ ಕನಕ ಎಂಬ ಪಾತ್ರಗಳು ಅವರಿಗೆ ವಿಶೇಷ ಗುರುತನ್ನು ತಂದಿದ್ದವು.

ಮೂಲತಃ ಕೊಟ್ಟೂರು ಮೂಲದವರಾದ ನಂದಿನಿ, ನಟನೆಯ ಕನಸನ್ನು ಬೆನ್ನಟ್ಟಿ ಬೆಂಗಳೂರಿಗೆ ಬಂದಿದ್ದರು. ಪಿಜಿಯಲ್ಲಿ ವಾಸವಿದ್ದ ಅವರು ತಾಯಿಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಿರುತೆರೆ ಲೋಕದಲ್ಲಿ ಹೊಸ ಅವಕಾಶಗಳು ತಲಪುವ ಹಂತದಲ್ಲಿದ್ದ ಈ ಸಮಯದಲ್ಲಿ ಅವರು ಈ ತೀರ್ಮಾನ ಕೈಗೊಂಡಿರುವುದೇಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ‘ಗೌರಿ’ ಧಾರಾವಾಹಿ ತಂಡಕ್ಕೂ ಈ ಸುದ್ದಿ ಆಘಾತ ಉಂಟುಮಾಡಿದೆ. ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸುತ್ತಿದ್ದಾರೆ.

ನಂದಿನಿ ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ತನಿಖಾ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಟೋಪಿ ಹಾಕಿ ಅವಮಾನ: ಇಬ್ಬರು ಅರೆಸ್ಟ್

0

ಬೆಳಗಾವಿ: ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅವಮಾನ ಮಾಡಿದ ಘಟನೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಸಂಭವಿಸಿದೆ.

ಘಟನೆ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಬೋಸ್ ಲೈನಿನ ಪಿಲಿಪ್ ಸಿಮೋನ್ ಸಪ್ಪರಪು (25), ಆದಿತ್ಯ ನವಜೀತ್ ಹೆಡಾ (25) ಬಂಧಿತ ಆರೋಪಿಗಳು. ಬಂಧಿತರು, ಬೆಳಗಾವಿಯ ಹಿಂಡಲಗಾ ರಸ್ತೆಯ ಕ್ಯಾಂಪ್ ಬಳಿಯಿರುವ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದ್ದರು. ಕಿಡಿಗೇಡಿಗಳು ಪ್ರತಿಮೆಯ ತಲೆ ಮೇಲೆ ಹಾಗೂ ಕೈ ಮೇಲೆ ಟೋಪಿ ಹಾಕಿ ಫೋಟೋ ತೆಗೆದು ಹಂಚಿಕೊಂಡಿದ್ದರು.

ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಕಿಡಿಗೇಡಿಗಳ ಕೃತ್ಯಕ್ಕ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಗಳನ್ನು ಮದುವೆ ಮಾಡಲು ಒಪ್ಪದ ತಾಯಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಅರೆಸ್ಟ್

0

ಬೆಂಗಳೂರು: ಬೆಂಗಳೂರಿನ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ಪುತ್ರಿಯನ್ನು ಮದುವೆ ಮಾಡಿಕೊಡಲಿಲ್ಲವೆಂಬ ಕಾರಣಕ್ಕೆ ಆಕೆಯ ತಾಯಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿರುವಂತಹ ಘಟನೆ ಜರುಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಗೀತಾ ಎಂಬ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಆರೋಪಿ ಮುತ್ತು ಅಭಿಮನ್ಯು ಈಗ ಬಸವೇಶ್ವರ ನಗರ ಪೊಲೀಸರ ಅತಿಥಿ ಆಗಿದ್ದಾನೆ. ಘಟನೆ ಕಳೆದ ಮಂಗಳವಾರ ನಡೆದಿದ್ದು, ಮುತ್ತು ಅಭಿಮನ್ಯು ಎಂಬಾತ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ.

ಗೀತಾ ಕಳೆದ ಕೆಲವು ವರ್ಷಗಳಿಂದ ತನ್ನ 19 ವರ್ಷದ ಮಗಳೊಂದಿಗೆ ಭೋವಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ಗೀತಾಗೆ, ಅನೇಕ ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದ ಮುತ್ತು ಪರಿಚಯವಾಗಿತ್ತು. ಮುತ್ತು ಮನೆಯಲ್ಲಿ ಗೀತಾ ಹಾಗೂ ಅವಳ ಮಗಳೊಂದಿಗೆ ಇದ್ದರೂ, ಮಗಳ ಮೇಲೆ ಪ್ರೇಮಾಂಕುರವಾಗಿ, ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಾ ಗಲಾಟೆ ಸೃಷ್ಟಿಸುತ್ತಿದ್ದ.

ಕೊನೆಗೆ ತಾಯಿ ಒಪ್ಪದ ಹಿನ್ನೆಲೆ ಮಹಿಳೆಗೆ ಬೆಂಕಿ ಹಚ್ಚಿ ತಾತ್ಕಾಲಿಕವಾಗಿ ತಮಿಳುನಾಡಿಗೆ ಓಡಿ ಹೋಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೋಲೀಸರು, ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ವರ್ಷಾಚರಣೆಗೆ ಕ್ಷಣಗಣನೆ; ರಾತ್ರಿ 2ರವರೆಗೂ ಬಿಎಂಟಿಸಿ ಬಸ್ ಸಂಚಾರ

0

ಬೆಂಗಳೂರು:- ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಅಂದು ರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಗರದ ಎಂ.ಜಿ.ರೋಡ್ ಮತ್ತು ಬ್ರಿಗೇಡ್‌ರೋಡ್‌ಗಳಿಂದ ನಗರದ ಪ್ರಮುಖ ಭಾಗಗಳಿಗೆ, ಸಾರ್ವಜನಿಕರ ಅನುಕೂಲಕ್ಕಾಗಿ, ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ರಾತ್ರಿ 11:00 ಗಂಟೆಯಿಂದ ಮಧ್ಯರಾತ್ರಿ 2:00 ಗಂಟೆಯವರೆಗೆ ಹೆಚ್ಚುವರಿ ಬಸ್‌ಗಳು ಓಡಿಸಲಿದ್ದು, ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವಂತೆ ಹೆಚ್ಚಿನ ವಾಹನ ವ್ಯವಸ್ಥೆ ಮಾಡಲಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಎಚ್‌ಬಿ ಕ್ವಾಟರ್ಸ್, ಜನಪ್ರಿಯ ಟೌನ್‌ಶಿಪ್, ನೆಲಮಂಗಲ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮನಗರ ಸೇರಿದಂತೆ ಹಲವೆಡೆ ಬಸ್‌ಗಳು ಸಂಚರಿಸಲಿವೆ.

ಪ್ರಧಾನಿ ದೇಶದ ಜನರನ್ನು ಒಗ್ಗೂಡಿಸುತ್ತಿದ್ದಾರೆ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಮಾನ್ಯ ಜನರ ಅಸಾಮಾನ್ಯ ಕೆಲಸಗಳನ್ನು ದೇಶದ ಜನರಿಗೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ತಿಳಿಸಿ ಜನರೊಡಗೂಡಿ ಜನರಿಂದಲೇ ಸಮೃದ್ಧ ದೇಶವನ್ನು ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ರೈತ ಮೋರ್ಚಾದ ವತಿಯಿಂದ ಏರ್ಪಡಿಸಿದ್ದ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಜನರ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡು ಇಡೀ ದೇಶದಲ್ಲಿ ಆಗುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ದೇಶಕ್ಕೆ ತಿಳಿಸಿ ಅವುಗಳಿಂದ ಪ್ರೇರಣೆ ಪಡೆಯಲು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿ ಸಾಮಾನ್ಯರು ಮಾಡಿರುವ ಅಸಾಮಾನ್ಯ ಸಾಧನೆಗಳನ್ನು ಹೇಳುತ್ತಾರೆ. ದುಬೈನಲ್ಲಿ ಕನ್ನಡ ಶಾಲೆ ತೆರೆದಿರುವುದು, ಮಣಿಪುರದಲ್ಲಿ ಸೋಲಾರ್ ಬಳಕೆ ಮೂಲಕ ವಿದ್ಯುತ್ ಸಂಪರ್ಕ ಪಡೆದು ವಿದ್ಯೆ ಪಡೆದಿರುವುದು, ದಲ್ಲಾಳಿಗಳನ್ನು ದೂರ ಮಾಡಿ ರೈತರೇ ರೈತ ಉತ್ಪಾದಕ ಕಂಪನಿಗಳನ್ನು ತೆರೆದಿರುವುದು ಇತ್ಯಾದಿಗಳೊಂದಿಗೆ ಹೆಣ್ಣು ಮಕ್ಕಳ ಸಾಧನೆ, ರೈತರ ಸಾಧನೆಗಳನ್ನು ಮನ್‌ಕಿ ಬಾತ್‌ನಲ್ಲಿ ಹೇಳುವ ಮೂಲಕ ಸ್ಫೂರ್ತಿದಾಯಕ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ, ತಿಮ್ಮರಡ್ಡಿ ಮರಡ್ಡಿ, ಸಣ್ಣೀರಪ್ಪ ಹಳ್ಳೆಪ್ಪನವರ, ನಾಗರಾಜ ಕುಲಕರ್ಣಿ, ಶಿವಪ್ರಕಾಶ ಮಹಾಜನಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ, ಥಾವರಪ್ಪ ಲಮಾಣಿ, ಅಶ್ವಿನಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ನವೀನ ಹಿರೇಮಠ, ಅಶೋಕ ಸೂರಣಗಿ, ಕುಮಾರ ಬೆಟಗೇರಿ, ಸಚಿನ ಮೆಲ್ಮುರಿ, ಈರಣ್ಣ ಶಿರನಹಳ್ಳಿ, ಫಕ್ಕೀರೇಶ ರಗಟಿ, ದ್ಯಾಮಣ್ಣ ನೀರಲಗಿ, ಮಲ್ಲಪ್ಪ ಮಠಪತಿ ಸೇರಿದಂತೆ ಗ್ರಾಮಸ್ಥರು, ಪ್ರಮುಖರು ಉಪಸ್ಥಿತರಿದ್ದರು.

ಬೆಳೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳು ಗೋಲ್‌ಮಾಲ್ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ. ನಾನು ಮುಖ್ಯಮಂತ್ರಿ ಇದ್ದಾಗ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡು ಪಟ್ಟು ಪರಿಹಾರ ನೀಡಿದ್ದೆ. ಒಣ ಬೇಸಾಯಕ್ಕೆ ನಾನು 12500 ರೂ. ಕೊಟ್ಟಿದ್ದೆ. ನೀರಾವರಿಗೆ 25 ಸಾವಿರ, ತೋಟಗಾರಿಕೆಗೆ 28 ಸಾವಿರ ರೂ. ಪರಿಹಾರ ನೀಡಿದ್ದೆ. ರೈತರ ಪರ ಸರ್ಕಾರ ಇದ್ದರೆ ಪರಿಹಾರ ಸಿಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅಸ್ಪೃಶ್ಯತೆಯ ಮಾಹಿತಿ ನೀಡಿದರೆ ಕ್ರಮ ವಹಿಸುತ್ತೇವೆ: ಸಿಪಿಐ ಬಿ.ವಿ. ನ್ಯಾಮಗೌಡ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳನ್ನು ಕಾನೂನಿನಡಿಯಲ್ಲಿ ಶೀಘ್ರಗತಿಯಲ್ಲಿ ಬಗೆಹರಿಸುತ್ತೇವೆ ಎಂದು ಸಿಪಿಐ ಬಿ.ವಿ. ನ್ಯಾಮಗೌಡ ಹೇಳಿದರು.

ಅವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಜನರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಎಲ್ಲಿಯಾದರೂ ಅಸ್ಪೃಶ್ಯತೆ ಇರುವ ಮಾಹಿತಿ ಇದ್ದರೆ ಅದನ್ನು ಠಾಣೆಗೆ ತಿಳಿಸಿದಲ್ಲಿ, ಪೊಲೀಸ್ ಇಲಾಖೆ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಇತ್ತೀಚೆಗೆ ರೈತ ಹೋರಾಟ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನವಾದ ಪ್ರಕರಣ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ನಲ್ಲಿ ದೂರು ದಾಖಲಾಗಿದೆ. ಸ್ಥಳೀಯ ಪೊಲೀಸ್ ಇಲಾಖೆಯ ಜೊತೆಗೂಡಿ ಪ್ರಕರಣದ ಗಂಭೀರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರಾದ ಸುರೇಶ ನಂದೆಣ್ಣವರ, ಫಕ್ಕೀರೇಶ ಮ್ಯಾಟಣ್ಣವರ ಹಾಗೂ ಕೋಟೆಪ್ಪ ವರ್ದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೂ ಪೊಲೀಸ್ ಇಲಾಖೆ ಮೀನ–ಮೇಷ ಮಾಡುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ತಪ್ಪಿತಸ್ಥರ ಮೇಲೆ 5 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ ತಾಲೂಕುಗಳಲ್ಲಿ ದಲಿತ ಹಾಗೂ ಅಂಬೇಡ್ಕರ್ ಅಭಿಮಾನಿಗಳಿಂದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಈ ವೇಳೆ ಪಿಎಸ್‌ಐ ನಾಗರಾಜ ಗಡಾದ, ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ, ಹಿರಿಯರಾದ ಜಯಕ್ಕ ಕಳ್ಳಿ, ಮಲ್ಲೇಶ ವಡ್ಡರ, ಬಸವಣೆಪ್ಪ ನಂದೆಣ್ಣವರ, ಸದಾನಂದ ನಂದೆಣ್ಣವರ, ಮಂಜುನಾಥ ಗಜಾಕೋಶ, ಪ್ರಮೋದ ಕರಾಟೆ, ಸತೀಶ ನಾರಾಯಣಕರ, ಮಂಜುನಾಥ ಶಿರಹಟ್ಟಿ, ರಾಜಶೇಖರ ಮೆಲ್ಮುರಿ, ಸಂತೋಷ ಲಮಾಣಿ, ಅನಿಲ ನಂದೆಣ್ಣವರ, ಮಲ್ಲೇಶ ಮಣ್ಣಮ್ಮನವರ ಮುಂತಾದವರಿದ್ದರು. ಪ್ರಕಾಶ ಮ್ಯಾಗೇರಿ ನಿರೂಪಿಸಿದರು.

ಹೊಸವರ್ಷಕ್ಕೆ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಡಿ.31ರಂದು ರೈಲು ಸೇವೆ ವಿಸ್ತರಣೆ!

0

ಬೆಂಗಳೂರು: ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದೆ.

ಡಿಸೆಂಬರ್ 31ರಂದು ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದ್ದು, ಕೊನೆಯ ರೈಲು ರಾತ್ರಿ 2:45ರವರೆಗೆ ಸಂಚರಿಸಲಿದೆ. ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ರಾತ್ರಿ 1:45ಕ್ಕೆ ಹಾಗೂ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ರಾತ್ರಿ 2ಕ್ಕೆ ಕೊನೆಯ ರೈಲು ಹೊರಡಲಿದೆ.

ಹಸಿರು ಮಾರ್ಗದಲ್ಲಿ ಮೆಜೆಸ್ಟಿಕ್–ನಾಗಸಂದ್ರ ಎರಡೂ ದಿಕ್ಕಿಗೂ ರಾತ್ರಿ 2 ಗಂಟೆಗೆ ಕೊನೆಯ ರೈಲು ಇರುತ್ತದೆ. ಹಳದಿ ಮಾರ್ಗದಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ರಾತ್ರಿ 3:10ಕ್ಕೆ ಹಾಗೂ ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಗೆ ರಾತ್ರಿ 1:30ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಡಿಸೆಂಬರ್ 31ರ ರಾತ್ರಿ 11ರಿಂದ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ, ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಹೆಚ್ಚಿನ ಜನಸಂದಣಿ ಹಿನ್ನೆಲೆಯಲ್ಲಿ ರಾತ್ರಿ 11 ನಂತರ ಟಿಕೆಟ್ ಕೌಂಟರ್‌ಗಳು ಬಂದ್ ಆಗಲಿದ್ದು, ಕ್ಯೂಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಬೇಕೆಂದು ಸೂಚಿಸಲಾಗಿದೆ.

ಇದೇ ವೇಳೆ ರಾತ್ರಿ 10ರಿಂದ ಎಂಜಿ ರೋಡ್ ಮೆಟ್ರೋ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

error: Content is protected !!