Home Blog Page 248

ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ನಿಮಿತ್ತ ವಿಶ್ವಮಾನವ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ, ಹುಟ್ಟುವ ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ಪ್ರತಿ ಮಗುವು ವಿಶ್ವಮಾನವನೇ. ಆನಂತರ ಮಗುವನ್ನು ಜಾತಿ-ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ, ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಎಂದು ಹೇಳಿದರು.

ಶಿಕ್ಷಕರಾದ ಎಚ್.ಡಿ. ನಿಂಗರೆಡ್ಡಿ, ಆರ್.ಕೆ. ಉಪನಾಳ, ಆರ್.ಎಂ. ಶಿರಹಟ್ಟಿ, ಎಲ್.ಎ. ಬಣಕಾರ, ನೇತ್ರಾವತಿ ಕುಂಬಾರ ಹಾಗೂ ಎನ್‌ಟಿಸಿ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವ್ಯಸನಮುಕ್ತ ಸಮಾಜ ನಿರ್ಮಿಸೋಣ: ಪಿಎಸ್‌ಐ ಈರಪ್ಪ ರಿತ್ತಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯ ವ್ಯಸನ ಯುವ ಜನಾಂಗದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಿದೆ. ಯುವ ಜನಾಂಗ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ವ್ಯಸನಮುಕ್ತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ ಎಂದು ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

ಅವರು ಶಿರಹಟ್ಟಿಯ ಎಫ್.ಎಮ್. ಡಬಾಲಿ ಪದವಿಪೂರ್ವ ಕಾಲೇಜಿನಲ್ಲಿ ಗದಗ ಜಿಲ್ಲಾ ಪೊಲೀಸ್ ಮತ್ತು ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶರೀರದ ನರಮಂಡಲದ ಮೇಲೆ ಈ ಮಾದಕ ವ್ಯಸನಗಳಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿ ವ್ಯಕ್ತಿಯು ಸಾವಿನ ದವಡೆಗೆ ದೂಡಲ್ಪಡುತ್ತಾನೆ. ವ್ಯಸನ ಮುಕ್ತ ಸಮಾಜ ನಮ್ಮೆಲ್ಲರ ಸಂಕಲ್ಪವಾಗಬೇಕು ಮತ್ತು ಪೊಲೀಸ್–ಪೌರರ ಸಹಭಾಗಿತ್ವ ಅಪರಾಧದ ಮೂಲ ದಮನ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ಮಾದಕ ದ್ರವ್ಯ ವ್ಯಸನ ಯುವ ಜನಾಂಗಕ್ಕೆ ಬಹಳಷ್ಟು ಅಪಾಯಕಾರಿಯಾಗಿದ್ದು, ಅವುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಮತ್ತು ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದುವುದರಿಂದ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಮಂಜುನಾಥ ಚವಡಿ, ಎನ್. ಹನುಮರೆಡ್ಡಿ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ಎಫ್.ಎ. ಬಾಬುಖಾನವರ, ಪಿ.ವಿ. ಹೊಸೂರ, ನೀಲಕಾಂತ ಕಂಕನವಾಡ, ಸೋಮಶೇಖರ ರಾಮಗೇರಿ, ಮಲ್ಲಿಕಾರ್ಜುನ ವಡ್ಡರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಕ್ತರ ಜಯಘೋಷಗಳ ನಡುವೆ ಶ್ರೀಗಳ ಪುರ ಪ್ರವೇಶ | ಭವ್ಯ ಸಾರೋಟ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠಕ್ಕೆ ಚನ್ನಬಸವ ಶ್ರೀಗಳನ್ನು ನೇಮಕ ಮಾಡಲಾಗಿದೆ ಎಂದು ಸರ್ವಧರ್ಮ ಸಮನ್ವಯ ಪೀಠದ ಮುಖ್ಯ ಪೀಠಾಧಿಪತಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಮಾಗಡಿ ವಿರಕ್ತಮಠದ ಶಿವಮೂರ್ತಿ ಶ್ರೀಗಳು ಹೇಳಿದರು.

ಅವರು ಸೋಮವಾರ ಶ್ರೀಗಳ ಪುರ ಪ್ರವೇಶದ ನಿಮಿತ್ತ ಹಮ್ಮಿಕೊಂಡಿದ್ದ 510 ಮಹಿಳೆಯರಿಂದ ಆರತಿ ಹಾಗೂ ಶ್ರೀಗಳ ಪುರ ಪ್ರವೇಶದ ಸಾರೋಟ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಮಾರನಬಸರಿ ಗ್ರಾಮ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಗ್ರಾಮದಲ್ಲಿನ ಸರ್ವ ಜನಾಂಗದವರು ಏಕತೆ ಮತ್ತು ಸಹೋದರತೆಯಿಂದ ಜೀವನ ನಡೆಸುತ್ತಿರುವುದು ನಾಡಿಗೆ ಮಾದರಿಯಾಗಿದೆ. ಇಂತಹ ಗ್ರಾಮದಲ್ಲಿ ಸಿದ್ದನಕೊಳ್ಳದ ಶಿದ್ದಯ್ಯಜ್ಜನವರು ಜನ್ಮ ತಾಳಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಕಾಯಕವೇ ಕೈಲಾಸ ಎಂಬ ತತ್ವವನ್ನು ನಂಬಿಕೊಂಡು ಬದುಕು ನಡೆಸುವ ಗ್ರಾಮ ಮಾರನಬಸರಿ ಎಂದರು.

ಮಾರನಬಸರಿ ಗ್ರಾಮ ಇನ್ನುಮುಂದೆ ಸುಕ್ಷೇತ್ರ ಮಾರನಬಸರಿ ಗ್ರಾಮವಾಗಿ ಗೋಚರವಾಗಲಿದೆ. ಮುಖ್ಯವಾಗಿ ಈಗಿನ ಪೀಠಾಧಿಪತಿಗಳಾದ ಚನ್ನಬಸವ ಶ್ರೀಗಳು ಸಹ ಎಲ್ಲ ಧರ್ಮಗಳ ಜನರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದಾರೆ. ಕಾರಣ ಅವರು ಬಸವ ತತ್ವದ ಮೇಲೆ ನಂಬಿಕೆಯನ್ನು ಹೊಂದಿದವರು. ಜೊತೆಗೆ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಅಡಕವಾಗಿರಬೇಕು ಎಂಬುದನ್ನು ಅರಿತವರು. ಹೀಗಾಗಿ ಸರ್ವಧರ್ಮ ಸಮನ್ವಯ ಪೀಠ ಗ್ರಾಮಕ್ಕೆ ಬೆಳಕನ್ನು ಚೆಲ್ಲಲಿದೆ ಎಂದ ಅವರು, ಐದು ದಿನಗಳ ಕಾಲ ಕಲ್ಯಾಣ ದರ್ಶನ ಪ್ರವಚನ ಅದ್ಧೂರಿಯಾಗಿ ನಡೆದಿದ್ದು, ಶ್ರೀಗಳ ಪುರ ಪ್ರವೇಶಕ್ಕೆ ಮತ್ತಷ್ಟು ಮೆರಗು ನೀಡಿದೆ ಎಂದರು.

ಕೊಪ್ಪದ ಕ್ರಾಸ್ ರಸ್ತೆಯಲ್ಲಿನ ಕಾಳಿಕಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮ ಆರಂಭಗೊಂಡಿತು. ಸಾವಿರಾರು ಭಕ್ತರ ಸಂಗಮದಲ್ಲಿ ಚನ್ನಬಸವ ಶ್ರೀಗಳ ಸಾರೋಟ ಮೆರವಣಿಗೆ ಗ್ರಾಮಕ್ಕೆ ತಲುಪುತ್ತಿದ್ದಂತೆ ಎರಡು ಜೆಸಿಬಿ ಯಂತ್ರಗಳ ಮೂಲಕ ಭಕ್ತರು ಶ್ರೀಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಮನೆಗಳ ಮುಂದೆ ರಂಗೋಲಿ ಹಾಕಿ ಆರತಿ ಬೆಳಗುವ ಮೂಲಕ ಶ್ರೀಗಳನ್ನು ಬರಮಾಡಿಕೊಂಡರು. ಕೆಂಪಿನ ಸಿದ್ದವೃಷಭೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕುಂದಗೋಳದ ಬಸವಣ್ಣ ಅಜ್ಜನವರು, ಚಿಕೇನಕೊಪ್ಪದ ಶಾಂತವೀರ ಶರಣರು, ಅಭಿನವ ಪಂಚಾಕ್ಷರ ಶಿವಚಾರ್ಯರು, ಡಾ. ಶಿವಕುಮಾರ ಶ್ರೀಗಳು, ಶ್ರೀ ಗಂಗಾಧರ ದೇವರು ನೇತೃತ್ವ ವಹಿಸಿದ್ದರು.

ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಸಾವಿರಾರು ಭಕ್ತರು ಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾರನಬಸರಿ ಗ್ರಾಮಸ್ಥರ ಏಕತೆ ಮತ್ತು ಸೌಹಾರ್ದತೆಯನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೆ. ಆದರೆ ಶಿವಮೂರ್ತಿ ಶ್ರೀಗಳು ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ನಮಗೆ ಗ್ರಾಮದ ಇತಿಹಾಸವನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀಗಳು ಬಸವಣ್ಣನವರ ತತ್ವಗಳ ಮೇಲೆ ನಂಬಿಕೆ ಇಟ್ಟುಕೊಂಡವರು. ಎಲ್ಲ ಜನಾಂಗದವರ ಪ್ರೀತಿಯನ್ನು ಸಂಪಾದಿಸಿದ್ದಾರೆ. ಗ್ರಾಮದ ಸರ್ವಧರ್ಮ ಸಮನ್ವಯ ಪೀಠ ಮತ್ತಷ್ಟು ಎತ್ತರಕ್ಕೆ ಬೆಳದು ಭಕ್ತರ ಬಾಳಿನಲ್ಲಿ ಬೆಳಕು ಹರಿಸಲಿ.

  • ಹಜರತ್ ಸುಲೇಮಾನ ಶಾವಲಿ ದರ್ಗಾದ ಅಜ್ಜನವರು.
    ರೋಣ.

ವಿಶ್ವಮಾನವ ತತ್ವವು ಇಂದಿನ ಸಮಾಜಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ–ಮತ–ಭಾಷೆಗಳ ಅಂತರವನ್ನು ಮೀರಿ ಮಾನವತೆಯೇ ಧರ್ಮ ಎಂಬ ಸಂದೇಶವನ್ನು ಕುವೆಂಪು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಯುವಜನತೆ ಕುವೆಂಪು ಅವರ ಚಿಂತನೆಗಳನ್ನು ಅರ್ಥಮಾಡಿಕೊಂಡು ಸಾಮಾಜಿಕ ಬದಲಾವಣೆಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಗದಗ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ಕುವೆಂಪು ಅವರ ಸಾಹಿತ್ಯ, ದರ್ಶನ ಮತ್ತು ವಿಶ್ವಮಾನವ ತತ್ವದ ಪ್ರಸ್ತುತತೆಯ ಕುರಿತು ಮಾತನಾಡಿದರು.

ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದ ಉಪನ್ಯಾಸ ನೀಡುತ್ತಾ, ಭೂಮಿ ಮೇಲೆ ಹುಟ್ಟುವ ಪ್ರತಿ ಮಗು ವಿಶ್ವಮಾನವ. ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ ಮತ್ತು ಬಸವಣ್ಣನವರಂತೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಕುವೆಂಪು ಹೇಳಿದ್ದಾರೆ ಎಂದು ತಿಳಿಸಿದರು.

ಮನುಜ ಮತ ವಿಶ್ವಪಥ' ಇದು ಕುವೆಂಪು ಅವರ ವಿಶ್ವಮಾನವ ಸಂದೇಶದ ತಿರುಳಾಗಿದೆ. ಅಂದರೆ, ಮನುಷ್ಯನ ಧರ್ಮವೇ ವಿಶ್ವದ ಪಥ’ ಎಂದು ಸಾರುವ ಮೂಲಕ ಎಲ್ಲ ಮಾನವರೂ ಒಂದೇ ಎಂಬ ಭಾವನೆಯನ್ನು ಬೆಳೆಸುವುದಾಗಿದೆ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ 20 ಮಕ್ಕಳನ್ನು ಹಾಗೂ ತಲಾ 10 ಹಿರಿಯ ಹಾಗೂ ಯುವ ಸಾಹಿತಿ, ಕವಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣನವರ, ಶರೀಫ್ ಬಿಳೆಯಲಿ, ಡಾ. ರಾಜೇಂದ್ರ ಗಡಾದ, ಮುತ್ತು ಬಿಳೆಯಲಿ, ಶ್ರೀನಿವಾಸಮೂರ್ತಿ ಕುಲಕರ್ಣಿ, ಆರ್.ಎಸ್. ಬುರಡಿ, ಶ್ರೀಧರ ಚಿನಗುಡಿ ಇದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರ್ವಹಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ವಿಶ್ವಮಾನವನೆಂಬ ಧ್ಯೇಯವೇ ನಮ್ಮ ಬದುಕಿನ ದಾರಿಯಾಗಲಿ. ಎಲ್ಲರೂ ಸಮಾನರು, ಎಲ್ಲರಲ್ಲೂ ಮಾನವೀಯತೆಯೇ ಮೊದಲ ಧರ್ಮ. ಸತ್ಯ, ಪ್ರೀತಿ ಮತ್ತು ಸಹಾನುಭೂತಿಗಳಿಂದಲೇ ನಿಜವಾದ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ತತ್ವವು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. ಮಾನವೀಯತೆ, ಸಮಾನತೆ, ಸಹಾನುಭೂತಿ ಹಾಗೂ ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ.

  • ಸಿ.ಎನ್. ಶ್ರೀಧರ.
    ಜಿಲ್ಲಾಧಿಕಾರಿಗಳು, ಗದಗ.

ತಾಲೂಕಾ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ರೋಣ: ಕಾರ್ಯನಿರತ ಪತ್ರಕರ್ತರ ಸಂಘದ ರೋಣ ತಾಲೂಕು ಘಟಕಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೆಹೆಬೂಬ ಮೋತೆಖಾನ್ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಹೊಳೆಆಲೂರ ಹೋಬಳಿಯ ವೀರಯ್ಯ ವಸ್ತ್ರದ, ಪ್ರಧಾನ ಕಾರ್ಯದರ್ಶಿಯಾಗಿ ವಿರೂಪಾಕ್ಷ ಕಲಬುರ್ಗಿ, ಕಾರ್ಯದರ್ಶಿಯಾಗಿ ವೀರಭದ್ರಯ್ಯ ಹಿರೇಮಠ, ಖಜಾಂಚಿಯಾಗಿ ಖಲೀಲ ಇಟಗಿ, ಕಾರ್ಯಕಾರಿಣಿ ಸಮಿತಿಗೆ ಚಂದ್ರು ನೆಲ್ಲೂರ, ವೀರಯ್ಯ ಪಾಟೀಲ, ಸಂತೋಷ ಹೊಸಳ್ಳಿ ಆಯ್ಕೆಯಾದರು.

ಚುನಾವಣಾಧಿಕಾರಿಗಳಾಗಿ ಜಿಲ್ಲಾ ಕಾರ್ಯದರ್ಶಿ ಸಂಗು ವ್ಯಾಪಾರಿ, ಸಹಾಯಕ ಚುನಾವಣಾಧಿಕಾರಿಗಳಾಗಿ ಮೌನೇಶ ಬಡಿಗೇರ, ಶಿವಕುಮಾರ ಶಶಿಮಠ, ವೆಂಕಟೇಶ ಇಮ್ರಾಪೂರ, ಸೂರಜ ಮಾಯೇಕರ ಕಾರ್ಯ ನಿರ್ವಹಿಸಿದರು.

ಈ ವೇಳೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯಲ್ಲಪ್ಪ ತಳವಾರ, ಸೋಮು ಲದ್ದಿಮಠ, ಪಿ.ಎಸ್. ಪಾಟೀಲ, ಉಮೇಶಗೌಡ ಬಸನಗೌಡ್ರ, ಕಲ್ಮೇಶ ಗಾಣಿಗೇರ ಉಪಸ್ಥಿತರಿದ್ದರು.

ಬೆಂಗಳೂರು ಡ್ರಗ್ಸ್ ದಂಧೆ ಕೇಸ್: ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ ಸಸ್ಪೆಂಡ್!

0

ಬೆಂಗಳೂರು: ನಗರದಲ್ಲಿ ಮಹಾರಾಷ್ಟ್ರ ಪೊಲೀಸ್ ಎಎನ್‌ಟಿಎಫ್ ನಡೆಸಿದ ಭರ್ಜರಿ ಡ್ರಗ್ಸ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಪ್ರಕರಣದಲ್ಲಿ ಕೊತ್ತನೂರು, ಬಾಗಲೂರು ಮತ್ತು ಅವಲಹಳ್ಳಿ ಪೊಲೀಸ್ ಠಾಣೆಗಳ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಎಎನ್‌ಟಿಎಫ್ ತಂಡ ಬೆಂಗಳೂರಿನ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿಗಳನ್ನು ಪತ್ತೆಹಚ್ಚಿ, ಸುಮಾರು 55.88 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಎಂಡಿ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿತ್ತು. ಈ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಮುಂಬೈನಲ್ಲಿ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಬಳಿಕ ನಡೆದ ತನಿಖೆಯಲ್ಲಿ ಅಬ್ದುಲ್ಲ ಖಾದರ್ ಶೇಖ್ ಮತ್ತು ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಬಂಧನವಾಗಿತ್ತು. ಪಾಟೀಲ್ ನೀಡಿದ ಮಾಹಿತಿಯ ಮೇರೆಗೆ ಹೊರಮಾವು, ಯರಪ್ಪನಹಳ್ಳಿ ಮತ್ತು ಕಣ್ಣೂರು ಸಮೀಪ ಆರ್‌ಜೆ ಇವೆಂಟ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 4.1 ಕೆಜಿ ಘನ ಎಂಡಿ ಮತ್ತು 17 ಕೆಜಿ ದ್ರವ ಎಂಡಿ ಸೇರಿ ಒಟ್ಟು 21.4 ಕೆಜಿ ಡ್ರಗ್ಸ್, ಯಂತ್ರೋಪಕರಣಗಳು ಹಾಗೂ ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಜಸ್ಥಾನ ಮೂಲದ ಕಿಂಗ್‌ಪಿನ್‌ಗಳು ಈ ದಂಧೆ ನಡೆಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ದೇಶದ ಹಲವು ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತರ ವಿಚಾರಣೆ ಮುಂದುವರಿದಿದ್ದು, ಪ್ರಮುಖ ಆರೋಪಿಗಳಿಗಾಗಿ ಮಹಾರಾಷ್ಟ್ರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ರದ್ದು!

0

ಬೆಂಗಳೂರು: ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ.ರೇವಣ್ಣಗೆ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ.

ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ ರದ್ದುಗೊಳಿಸಿ ಇಂದು ಆದೇಶ ಹೊರಡಿಸಿದೆ. ದೂರು ದಾಖಲಿಸುವಲ್ಲಿ ಅತಿಯಾದ ವಿಳಂಬವಾಗಿರುವುದು ಹಾಗೂ ಪ್ರಕರಣದ ವಿಚಾರಣೆಯೂ ತಡವಾಗಿ ನಡೆದಿರುವುದನ್ನು ಗಮನಿಸಿದ ನ್ಯಾಯಾಲಯ, ಈ ಕಾರಣಗಳನ್ನು ಆಧಾರವಾಗಿಸಿಕೊಂಡು ರೇವಣ್ಣರನ್ನು ಆರೋಪಗಳಿಂದ ಮುಕ್ತಗೊಳಿಸಿದೆ.

ಮಹಿಳೆಯ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 354(ಎ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸಿದ್ದರೂ, ವಾದ–ಪ್ರತಿವಾದ ಪರಿಶೀಲಿಸಿದ ಬಳಿಕ ಕೋರ್ಟ್‌, ಪ್ರಕರಣ ಮುಂದುವರಿಸಲು ಬೇಕಾದಷ್ಟು ಆಧಾರ ಇಲ್ಲವೆಂದು ಅಭಿಪ್ರಾಯಪಟ್ಟಿದೆ.

 ಡ್ರಗ್ಸ್ ಪ್ರಕರಣ: ‘ಕೈ’ ನಾಯಕರಿಗೆ ಶಾಕ್ – ಸಚಿವ ಜಮೀರ್ ಅಹ್ಮದ್ ಪರಮಾಪ್ತ ಅರೆಸ್ಟ್

0

ದಾವಣಗೆರೆ: ರಾಜ್ಯದಲ್ಲಿ ಸಿಂಥೆಟಿಕ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮತ್ತೊಬ್ಬ ಸಚಿವರ ಆಪ್ತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಡಿಸೆಂಬರ್ 23ರಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ ಸುಮಾರು 90 ಗ್ರಾಂ ಎಂಡಿಎಂಎ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಇದೇ ಪ್ರಕರಣದ ಮುಂದುವರಿದ ತನಿಖೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್  ಆಪ್ತ ಅನ್ವರ್ ಬಾಷಾ ರನ್ನು ಇದೀಗ ಬಂಧಿಸಲಾಗಿದೆ. ಜೊತೆಗೆ ಪಾರಸ್, ಕೃಷ್ಣಮೂರ್ತಿ ಹಾಗೂ ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ನಿರ್ಭೀತಿಯಿಂದ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿದ್ದಾರೆ. ಎಸ್ಪಿ ಉಮಾ ಪ್ರಶಾಂತ್‌ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Dharwad: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಕೂಟಿ ಸವಾರರಿಬ್ಬರು ಸಾವು

0

ಹುಬ್ಬಳ್ಳಿ: ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ನಿವಾಸಿಗಳಾದ ಕಿಶನ್ ಖಾನವಾಲೆ (30) ಹಾಗೂ ಕಿರಣ ಖಡವಾಕರ್ (32) ಎಂದು ಗುರುತಿಸಲಾಗಿದೆ.

ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಯರಿಕೊಪ್ಪ ಸಮೀಪ ಮಿಶ್ರಾಪೇಡಾ ಮುಂಭಾಗ ಸ್ಕೂಟಿ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರರು ಲಾರಿಯ ಚಕ್ರದಡಿ ಸಿಲುಕಿದ್ದು, ಪರಿಣಾಮ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಬಿದ್ದಿದ್ದವು.

ಘಟನೆಯ ನಂತರ ಸ್ಥಳೀಯರು ತಕ್ಷಣವೇ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ತೆರವುಗೊಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Gadag Breaking.. ರಾಜ್ಯದಲ್ಲಿ ಡ್ರಗ್ ಮಾಫಿಯಾ ವಿಚಾರ: ಶಾಸಕ ಸಿ.ಸಿ. ಪಾಟೀಲ್ ಹೇಳಿದ್ದೇನು..?

0

ಗದಗ: ರಾಜ್ಯದಲ್ಲಿ ಡ್ರಗ್ ಮಾಫಿಯಾ ಚಟುವಟಿಕೆಗಳ ಕುರಿತು ಶಾಸಕ ಸಿ.ಸಿ. ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ಎರಡು ಬಾರಿ ಕರ್ನಾಟಕಕ್ಕೆ ಬಂದು ಡ್ರಗ್ ಜಾಲವನ್ನು ಪತ್ತೆಹಚ್ಚಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ನಮ್ಮ ರಾಜ್ಯದ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಇಲಾಖೆ ಏನು ಮಾಡುತ್ತಿವೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಧಿಕಾರಿಗಳ ಕೈಗಳನ್ನು ಕಟ್ಟಿಹಾಕಲಾಗಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ಶಾಸಕ ಸಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು. ಮುಂಬೈ ಪೊಲೀಸರು ಇಲ್ಲಿನ ಡ್ರಗ್ ಜಾಲ ಪತ್ತೆ ಮಾಡುತ್ತಿರುವುದು ಆಡಳಿತ ವೈಫಲ್ಯಕ್ಕೆ ಉದಾಹರಣೆ ಎಂದು ಹೇಳಿದರು.

ಈ ವೇಳೆ ಡ್ರಗ್ ವಶಪಡಿಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಮುಂದಿಟ್ಟರು. 2015ರಲ್ಲಿ 10,084 ಕೆಜಿ ಡ್ರಗ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ 104 ಕೋಟಿ 17 ಲಕ್ಷ ರೂ. ಆಗಿದೆ. 2023ರಲ್ಲಿ 12,340 ಕೆಜಿ ಡ್ರಗ್ ವಶಪಡಿಸಲಾಗಿದ್ದು, ಅದರ ಮೌಲ್ಯ 18 ಕೋಟಿ 7 ಲಕ್ಷ ರೂ. ಎಂದು ತಿಳಿಸಿದರು. 2024ರಲ್ಲಿ 7,016 ಕೆಜಿ ಡ್ರಗ್ ಪತ್ತೆಯಾಗಿದ್ದು, ಅದರ ಮೌಲ್ಯ 16 ಕೋಟಿ 27 ಲಕ್ಷ ರೂ. ಆಗಿದೆ. ಈ ಬಗ್ಗೆ ಗೃಹ ಸಚಿವರಿಂದ ಇದುವರೆಗೆ ಸ್ಪಷ್ಟ ಉತ್ತರ ಇಲ್ಲ ಎಂದು ಆರೋಪಿಸಿದರು.

ಕಾನೂನು ಕ್ರಮ ಕೈಗೊಳ್ಳುವುದೇ ಇಲ್ಲ ಅಂದರೆ ಗೃಹ ಸಚಿವರ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಶಾಸಕ ಎತ್ತಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಆಡಳಿತ ರಹಿತ ಸರ್ಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಅಬಕಾರಿ ಇಲಾಖೆಯ ಮದ್ಯ ಲೈಸೆನ್ಸ್ ನೀತಿಗೂ ಸಿ.ಸಿ. ಪಾಟೀಲ್ ವಿರೋಧ ವ್ಯಕ್ತಪಡಿಸಿದರು. ಐದು ವರ್ಷಗಳಿಗೆ ಮದ್ಯ ಲೈಸೆನ್ಸ್ ರಿನಿವಲ್ ಮಾಡಲಾಗುತ್ತಿದ್ದು, ಡಿಸೆಂಬರ್ 31ರಂದು ಬೆಳಿಗ್ಗೆ 6 ಗಂಟೆಯಿಂದ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಮಧ್ಯರಾತ್ರಿ 12ರಿಂದ 1 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂಬುದನ್ನೂ ಉಲ್ಲೇಖಿಸಿದರು. ಮದ್ಯ ಮಾರಾಟಕ್ಕೆ ಒಂದು ಕಡೆ ಅನುಮತಿ ನೀಡುತ್ತಾ, ಮತ್ತೊಂದೆಡೆ ಪೊಲೀಸರ ಮೂಲಕ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸುವುದು ದ್ವಂದ್ವ ನೀತಿ ಎಂದು ಆರೋಪಿಸಿದರು. ಮದ್ಯ ಮಾರಾಟ ನೀತಿ ವಿರುದ್ಧ ಗದಗದಲ್ಲಿ ಶಾಸಕ ಸಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

error: Content is protected !!