Home Blog Page 254

 ಡ್ರಗ್ಸ್ ಪ್ರಕರಣ: ‘ಕೈ’ ನಾಯಕರಿಗೆ ಶಾಕ್ – ಸಚಿವ ಜಮೀರ್ ಅಹ್ಮದ್ ಪರಮಾಪ್ತ ಅರೆಸ್ಟ್

0

ದಾವಣಗೆರೆ: ರಾಜ್ಯದಲ್ಲಿ ಸಿಂಥೆಟಿಕ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮತ್ತೊಬ್ಬ ಸಚಿವರ ಆಪ್ತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಡಿಸೆಂಬರ್ 23ರಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ ಸುಮಾರು 90 ಗ್ರಾಂ ಎಂಡಿಎಂಎ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಇದೇ ಪ್ರಕರಣದ ಮುಂದುವರಿದ ತನಿಖೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್  ಆಪ್ತ ಅನ್ವರ್ ಬಾಷಾ ರನ್ನು ಇದೀಗ ಬಂಧಿಸಲಾಗಿದೆ. ಜೊತೆಗೆ ಪಾರಸ್, ಕೃಷ್ಣಮೂರ್ತಿ ಹಾಗೂ ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ನಿರ್ಭೀತಿಯಿಂದ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿದ್ದಾರೆ. ಎಸ್ಪಿ ಉಮಾ ಪ್ರಶಾಂತ್‌ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Dharwad: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಕೂಟಿ ಸವಾರರಿಬ್ಬರು ಸಾವು

0

ಹುಬ್ಬಳ್ಳಿ: ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ನಿವಾಸಿಗಳಾದ ಕಿಶನ್ ಖಾನವಾಲೆ (30) ಹಾಗೂ ಕಿರಣ ಖಡವಾಕರ್ (32) ಎಂದು ಗುರುತಿಸಲಾಗಿದೆ.

ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಯರಿಕೊಪ್ಪ ಸಮೀಪ ಮಿಶ್ರಾಪೇಡಾ ಮುಂಭಾಗ ಸ್ಕೂಟಿ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರರು ಲಾರಿಯ ಚಕ್ರದಡಿ ಸಿಲುಕಿದ್ದು, ಪರಿಣಾಮ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಬಿದ್ದಿದ್ದವು.

ಘಟನೆಯ ನಂತರ ಸ್ಥಳೀಯರು ತಕ್ಷಣವೇ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ತೆರವುಗೊಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Gadag Breaking.. ರಾಜ್ಯದಲ್ಲಿ ಡ್ರಗ್ ಮಾಫಿಯಾ ವಿಚಾರ: ಶಾಸಕ ಸಿ.ಸಿ. ಪಾಟೀಲ್ ಹೇಳಿದ್ದೇನು..?

0

ಗದಗ: ರಾಜ್ಯದಲ್ಲಿ ಡ್ರಗ್ ಮಾಫಿಯಾ ಚಟುವಟಿಕೆಗಳ ಕುರಿತು ಶಾಸಕ ಸಿ.ಸಿ. ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ಎರಡು ಬಾರಿ ಕರ್ನಾಟಕಕ್ಕೆ ಬಂದು ಡ್ರಗ್ ಜಾಲವನ್ನು ಪತ್ತೆಹಚ್ಚಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ನಮ್ಮ ರಾಜ್ಯದ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಇಲಾಖೆ ಏನು ಮಾಡುತ್ತಿವೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಧಿಕಾರಿಗಳ ಕೈಗಳನ್ನು ಕಟ್ಟಿಹಾಕಲಾಗಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ಶಾಸಕ ಸಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು. ಮುಂಬೈ ಪೊಲೀಸರು ಇಲ್ಲಿನ ಡ್ರಗ್ ಜಾಲ ಪತ್ತೆ ಮಾಡುತ್ತಿರುವುದು ಆಡಳಿತ ವೈಫಲ್ಯಕ್ಕೆ ಉದಾಹರಣೆ ಎಂದು ಹೇಳಿದರು.

ಈ ವೇಳೆ ಡ್ರಗ್ ವಶಪಡಿಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಮುಂದಿಟ್ಟರು. 2015ರಲ್ಲಿ 10,084 ಕೆಜಿ ಡ್ರಗ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ 104 ಕೋಟಿ 17 ಲಕ್ಷ ರೂ. ಆಗಿದೆ. 2023ರಲ್ಲಿ 12,340 ಕೆಜಿ ಡ್ರಗ್ ವಶಪಡಿಸಲಾಗಿದ್ದು, ಅದರ ಮೌಲ್ಯ 18 ಕೋಟಿ 7 ಲಕ್ಷ ರೂ. ಎಂದು ತಿಳಿಸಿದರು. 2024ರಲ್ಲಿ 7,016 ಕೆಜಿ ಡ್ರಗ್ ಪತ್ತೆಯಾಗಿದ್ದು, ಅದರ ಮೌಲ್ಯ 16 ಕೋಟಿ 27 ಲಕ್ಷ ರೂ. ಆಗಿದೆ. ಈ ಬಗ್ಗೆ ಗೃಹ ಸಚಿವರಿಂದ ಇದುವರೆಗೆ ಸ್ಪಷ್ಟ ಉತ್ತರ ಇಲ್ಲ ಎಂದು ಆರೋಪಿಸಿದರು.

ಕಾನೂನು ಕ್ರಮ ಕೈಗೊಳ್ಳುವುದೇ ಇಲ್ಲ ಅಂದರೆ ಗೃಹ ಸಚಿವರ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಶಾಸಕ ಎತ್ತಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಆಡಳಿತ ರಹಿತ ಸರ್ಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಅಬಕಾರಿ ಇಲಾಖೆಯ ಮದ್ಯ ಲೈಸೆನ್ಸ್ ನೀತಿಗೂ ಸಿ.ಸಿ. ಪಾಟೀಲ್ ವಿರೋಧ ವ್ಯಕ್ತಪಡಿಸಿದರು. ಐದು ವರ್ಷಗಳಿಗೆ ಮದ್ಯ ಲೈಸೆನ್ಸ್ ರಿನಿವಲ್ ಮಾಡಲಾಗುತ್ತಿದ್ದು, ಡಿಸೆಂಬರ್ 31ರಂದು ಬೆಳಿಗ್ಗೆ 6 ಗಂಟೆಯಿಂದ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಮಧ್ಯರಾತ್ರಿ 12ರಿಂದ 1 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂಬುದನ್ನೂ ಉಲ್ಲೇಖಿಸಿದರು. ಮದ್ಯ ಮಾರಾಟಕ್ಕೆ ಒಂದು ಕಡೆ ಅನುಮತಿ ನೀಡುತ್ತಾ, ಮತ್ತೊಂದೆಡೆ ಪೊಲೀಸರ ಮೂಲಕ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸುವುದು ದ್ವಂದ್ವ ನೀತಿ ಎಂದು ಆರೋಪಿಸಿದರು. ಮದ್ಯ ಮಾರಾಟ ನೀತಿ ವಿರುದ್ಧ ಗದಗದಲ್ಲಿ ಶಾಸಕ ಸಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಗೃಹ ಇಲಾಖೆ ನಿಭಾಯಿಸಲು ಆಗದಿದ್ದರೆ ಪರಮೇಶ್ವರ್ ರಾಜೀನಾಮೆ ನೀಡಲಿ: ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು: ಕರ್ನಾಟಕದ ಗೃಹ ಇಲಾಖೆಯನ್ನು ನಡೆಸಲು ಆಗದಿದ್ದರೆ ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು,

‘ಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ ಪೋಸ್ಟರ್’ ಅನ್ನು ಅವರು ಬಿಡುಗಡೆಗೊಳಿಸಿದರು. ಗೃಹ ಸಚಿವರೇ ಸಬೂಬುಗಳನ್ನು ಹೇಳಿಕೊಂಡು ಎಷ್ಟು ದಿನ ಈ ರಾಜ್ಯವನ್ನು ಹಾಳು ಮಾಡುತ್ತೀರಿ? ನೀವು ಅಧಿಕಾರ ಬಿಟ್ಟು ಕೊಡಿ. ಬೇರೆ ಯಾರಿಗಾದರೂ ತಾಕತ್ತಿದ್ದರೆ ಆಡಳಿತ ನಡೆಸಲಿ ಎಂದು ಒತ್ತಾಯಿಸಿದರು. ಡಾ. ಪರಮೇಶ್ವರ್ ಅವರೇ, ಇದು ನಿಮ್ಮ ಅಸಹಾಯಕತೆಯೇ? ಅಥವಾ ಬೇರೆಯವರು ನಿಮಗೆ ಕೆಟ್ಟ ಹೆಸರು ತರಲು ನಿಮ್ಮ ವಿರುದ್ಧವಾಗಿ ಮಾಡಿದ ಷಡ್ಯಂತ್ರವೇ ಎಂದು ಹೇಳಿ ಎಂದು ಆಗ್ರಹವನ್ನು ಮುಂದಿಟ್ಟರು.

ರಾಜ್ಯದಲ್ಲಿ ಡ್ರಗ್ ಮಾಫಿಯ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಮಾಫಿಯಕ್ಕೆ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರಕಾರವೇ ಡ್ರಗ್ ಸರಕಾರವಾಗಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಡ್ರಗ್ ಕಾರ್ಖಾನೆ ತಲೆ ಎತ್ತಿರುವುದು ಹೊರಕ್ಕೆ ಬರುತ್ತಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮೊದಲಿನಿಂದ ತಿಳಿಸಿ, ನಿದರ್ಶನ ನೀಡಿದ್ದೇವೆ. ಅತ್ಯಾಚಾರಗಳು ನಡೆಯುತ್ತಿದ್ದವು. ಎಷ್ಟೋ ಪ್ರಾಣಹಾನಿಗಳಾದವು. ಹತ್ಯೆಗಳೂ ನಡೆದವು. ಆದರೆ, ತಡೆಯಲು ಈ ಸರಕಾರದಿಂದ ಆಗಲಿಲ್ಲ ಎಂದು ಟೀಕಿಸಿದರು.

ಕೇರಳ ಸರ್ಕಾರಕ್ಕೂ ನಮಗೂ ಸಂಬಂಧವಿಲ್ಲ, ನಮ್ಮದು ಶಾಂತಿಯುತ ರಾಜ್ಯ: ಸಚಿವ ಬೈರತಿ ಸುರೇಶ್

0

ದಾವಣಗೆರೆ: ಕೇರಳ ಸರ್ಕಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮದು ಶಾಂತಿಯುತ ರಾಜ್ಯ. ಕೇರಳ ಸರ್ಕಾರದವರಿಂದ ಬುದ್ಧಿ ಹೇಳಿಸಿಕೊಂಡು ನಮ್ಮ ಜನರಿಗೆ ಏನು ಮಾಡಬೇಕು ಎಂಬ ಅಗತ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಕೋಗಿಲು ಬಡಾವಣೆ ನಿವಾಸಿಗಳ ಒತ್ತುವರಿ ತೆರವು ವಿಚಾರ ಕುರಿತು ಮಾತನಾಡಿದ ಅವರು, ಕೇರಳ ಸರ್ಕಾರಕ್ಕೆ ತಾವೇ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳಿವೆ. ಕಾಂಗ್ರೆಸ್ ಸರ್ಕಾರ ಅಲ್ಲಿನ ಬಡವರಿಗೆ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳಿಕೊಂಡು ಸಮಸ್ಯೆ ಎದುರಿಸುತ್ತಿದೆ ಎಂದು ಟೀಕಿಸಿದರು.

ಇಡೀ ದೇಶದ ಜನರನ್ನು ನಮ್ಮವರು ಎಂದುಕೊಳ್ಳುತ್ತೇವೆ. ಆದರೆ ನಮ್ಮ ಕನ್ನಡಿಗರಿಗೆ ಕೇರಳದವರಿಂದ ಪಾಠ ಕಲಿತುಕೊಳ್ಳುವ ಅಗತ್ಯವಿಲ್ಲ. ನಮ್ಮ ಜನರಿಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎಂಬುದು ನಮಗೆ ಸ್ಪಷ್ಟವಾಗಿದೆ ಎಂದು ಹೇಳಿದರು.

ಈ ವಿಚಾರವಾಗಿ ಕೆ.ಸಿ. ವೇಣುಗೋಪಾಲ್ ಅವರು ಅಲ್ಲಿನ ಸಮಸ್ಯೆಯನ್ನು ನೋಡಿ ಸಹಾಯ ಮಾಡುವಂತೆ ಮಾತ್ರ ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಅವರು ರಾಜಕೀಯ ಮಾಡಲು ಬಂದಿಲ್ಲ. ಆದರೆ ಈ ವಿಷಯದಲ್ಲಿ ಕೇರಳದ ಮುಖ್ಯಮಂತ್ರಿ ರಾಜಕೀಯ ಮಾಡಿದ್ದಾರೆ ಎಂದು ಸಚಿವರು ಆರೋಪಿಸಿದರು.

ವೇಣುಗೋಪಾಲ್ ಅವರು ಪಕ್ಷಾತೀತವಾಗಿ ಸಮಸ್ಯೆ ಎದುರಿಸುತ್ತಿರುವವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದಲೇ ಹೇಳಿಕೆ ನೀಡಿದ್ದಾರೆ ಎಂದು ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಧನ ದಾಹಿ ಡಾಕ್ಟರ್ʼಗೆ ಬೇಕಂತೆ ಬಂಗಾರ, ಹಣ

0

ವಿಜಯಪುರ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾದ ಹೃದಯವಿದ್ರಾವಕ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಬಂಗಾರ ಮತ್ತು ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡಿದ್ದ ವೈದ್ಯನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಗೃಹಿಣಿಯನ್ನು ಸವಿತಾ ಶಿರಶ್ಯಾಡ್ (30) ಎಂದು ಗುರುತಿಸಲಾಗಿದೆ. ಘಟನೆ ವಿಜಯಪುರ ನಗರದ ಗೌರಿ ಶಂಕರ ಬಡಾವಣೆಯಲ್ಲಿ ನಡೆದಿದೆ. ಸುಮಾರು 10 ವರ್ಷಗಳ ಹಿಂದೆ ಸವಿತಾ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮದುವೆಯಾದ ಬಳಿಕವೂ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.

ವೈದ್ಯ ಡಾ. ರಾಜಶೇಖರ ಶಿರಶ್ಯಾಡ ಬಂಗಾರ ಹಾಗೂ ಹಣ ತರಬೇಕೆಂದು ಪತ್ನಿಯನ್ನು ನಿರಂತರವಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಗೃಹಿಣಿ ಸವಿತಾರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಪತಿ ಹಾಗೂ ಆತನ ಕುಟುಂಬಸ್ಥರ ಮೇಲೆ ಕೇಳಿಬಂದಿದೆ.

ಘಟನೆ ನಡೆದ ನಂತರ ಸವಿತಾ ತವರು ಮನೆಯವರಿಗೆ ವೈದ್ಯನ ಕುಟುಂಬಸ್ಥರು ಕರೆ ಮಾಡಿ, ಸವಿತಾ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿಸಿರುವುದಾಗಿ ಆರೋಪಿಸಲಾಗಿದೆ. ಆದರೆ ಬಳಿಕ ಗೃಹಿಣಿ ಸಾವನ್ನಪ್ಪುತ್ತಿದ್ದಂತೆ ವೈದ್ಯ ಮತ್ತು ಆತನ ಕುಟುಂಬಸ್ಥರು ಮನೆ ಹಾಗೂ ಆಸ್ಪತ್ರೆಗೆ ಹೋಗಿ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸವಿತಾ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ವಿಜಯಪುರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು

0

ರಾಯಚೂರು: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ದೇಶಾದ್ಯಂತ ಚರ್ಚೆಯಾಗುತ್ತಿರುವ ನಡುವೆಯೇ, ರಾಯಚೂರಲ್ಲೂ ಜೆಸಿಬಿ ಕಾರ್ಯಾಚರಣೆ ನಡೆಯಿತು. ನಗರದ ಮಾವಿನಕೆರೆ ರಸ್ತೆಯ ವಾರ್ಡ್ ನಂ. 4ರ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ 20 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗಿದೆ.

ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಕಾಂಪೌಂಡ್‌ಗಳು ಹಾಗೂ ಕಟ್ಟೆಗಳು ತೆರವು ಮಾಡಲಾಗಿದೆ. ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಕಟ್ಟಡಗಳು ಮತ್ತು ರಸ್ತೆ ಒತ್ತುವರಿಗಳನ್ನು ತೆರವುಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು. ಜೆಸಿಬಿಗಳ ಸಹಾಯದಿಂದ ರಸ್ತೆ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಸಂಚಾರ ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಧಿಕೃತ ಕಟ್ಟಡಗಳ ವಿರುದ್ಧ ಮುಂದೆಯೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕಾರವಾರ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೊದಲ ಆದ್ಯತೆ: ಡಿ.ಕೆ. ಶಿವಕುಮಾರ್

0

ಕಾರವಾರ: “ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಶಾಸಕರಾದ ಸತೀಶ್ ಸೈಲ್ ಅವರು ನಮ್ಮ ಜನರು ಗೋವಾ, ಉಡುಪಿ, ಮಂಗಳೂರಿಗೆ ಉತ್ತಮ ಚಿಕಿತ್ಸೆಗೆ ಹೋಗಲು ಆಗುವುದಿಲ್ಲ. ಅದಕ್ಕೆ ನಮಗೆ ಅತ್ಯುತ್ತಮ ‌ಆಸ್ಪತ್ರೆ ಬೇಕು ಎಂದಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ” ಎಂದರು.

“ಉತ್ತರ ಕನ್ನಡ ಜಿಲ್ಲೆಯ ಜನತೆ ಐದು ಜನ‌ ಶಾಸಕರನ್ನು ನೀಡಿ ಸರ್ಕಾರಕ್ಕೆ ಶಕ್ತಿ ತುಂಬಿದ್ದೀರಿ. ನೀವು ಶಕ್ತಿ ಕೊಟ್ಟ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಿಮ್ಮಿಂದ ಈ ಕೈ ಗಟ್ಟಿಯಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದರು.

“ನಿಮಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಮಾಡಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಯುವ ಜನರ ವಲಸೆ ತಪ್ಪಿಸುತ್ತೇವೆ. ಮನೆ ಬಾಗಿಲಲ್ಲಿ ಉದ್ಯೋಗ ನೀಡುತ್ತೇವೆ. ಜನವರಿ 10 ರಂದು ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು” ಎಂದರು.

“ಪಶ್ಚಿಮ ಘಟ್ಟ, ಸಮುದ್ರ ತೀರ ಹೊಂದಿರುವ ವಿಶಿಷ್ಟವಾದ ಪ್ರದೇಶವಿದು. ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೀಗೆ ವೈವಿಧ್ಯಮಯವಾದ ಪ್ರದೇಶವಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು, ಸಮುದ್ರ ಎಂದರೆ ಜೀವನ, ಮೀನುಗಾರರ ಬದುಕಿಗೆ ದೊಡ್ಡ ಆಧಾರ, ವ್ಯಾಪಾರಿಗರ ನಿಧಿ, ಪ್ರವಾಸಿಗರ ಸ್ವರ್ಗ ಈ ಸಮುದ್ರ” ಎಂದು ಕರಾವಳಿಯ ವೈಭವವನ್ನು ಬಣ್ಣಿಸಿದರು.

“ಕಳೆದ ಏಳು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಈ ವರ್ಷ ನೀವು ಬರಲೇಬೇಕು ಎಂದು ಸತೀಶ್ ಸೈಲ್ ಅವರು ಜಿಲ್ಲಾ ಮಂತ್ರಿ ಮಂಕಾಳ್ ವೈದ್ಯ ಅವರು ಒತ್ತಾಯ ಪೂರ್ವಕವಾಗಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ದೇವರು ವರ,‌ ಶಾಪ ಎರಡನ್ನೂ ನೀಡುವುದಿಲ್ಲ‌.

ಆದರೆ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಇದನ್ನು ಸತೀಶ್ ಸೈಲ್ ಅವರು ಬಳಸಿಕೊಂಡು ಜಿಲ್ಲೆಯ ಕಲಾವಿದರು ಸೇರಿದಂತೆ ಅನೇಕವರಿಗೆ ಅವಕಾಶ ಸೃಷ್ಟಿಸಿ ಕೊಟ್ಟಿದ್ದಾರೆ” ಎಂದು ಹೇಳಿದರು. “ಕರಾವಳಿ ಉತ್ಸವದಿಂದ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ಅವಕಾಶ ನೀಡಿದಂತಾಗಿದೆ. ಈ ರೀತಿ ಪ್ರೋತ್ಸಾಹ ನೀಡುವುದರಿಂದ ಯುವ ಕಲಾವಿದರ ಬೆಳವಣಿಗೆ ಸಾಧ್ಯ” ಎಂದರು.

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

0

ದೊಡ್ಡಬಳ್ಳಾಪುರ: ಸಿಮೆಂಟ್ ಬಲ್ಕರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ.

ಮೃತರನ್ನು ಪವನ್ ಕುಮಾರ್ (22) ಮತ್ತು ಅಶೋಕ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಬೈಕ್‌ನಲ್ಲಿ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಸಿಮೆಂಟ್ ಬಲ್ಕರ್ ಲಾರಿ ಏಕಾಏಕಿ ರಸ್ತೆಯ ಮಧ್ಯೆ ನಿಲ್ಲಿಸಲಾಗಿದ್ದು, ಹಿಂಬದಿಯಿಂದ ಬಂದ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದ ಬಳಿಕ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರ ಸರ್ಕಾರಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉನ್ನಾವೋ ಅತ್ಯಾಚಾರ ಪ್ರಕರಣ: ಜೀವಾವಧಿ ಶಿಕ್ಷೆ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

0

ನವದೆಹಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್  ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್  ತಡೆ ನೀಡಿದೆ.

ಡಿಸೆಂಬರ್ 23ರಂದು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶದಂತೆ ಸೆಂಗಾರ್ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಪರಿಶೀಲನೆಗೆ ಒಳಪಡಬೇಕಾದ ಅನೇಕ ಮಹತ್ವದ ಕಾನೂನು ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿದೆ.

ಸಿಬಿಐ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕುಲದೀಪ್ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದೆ. 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಸೆಂಗಾರ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಆ ತೀರ್ಪನ್ನು ರದ್ದುಪಡಿಸಿ ಜಾಮೀನು ಮಂಜೂರು ಮಾಡಿತ್ತು.

ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಹಾಗೂ ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ, ಸೆಂಗಾರ್‌ಗೆ 15 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಸಮಾನ ಮೊತ್ತದ ಮೂರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಜೊತೆಗೆ, ಸಂತ್ರಸ್ತೆಯ ಮನೆಯ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರವೇಶಿಸಬಾರದು ಮತ್ತು ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು.

ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತಡೆಯಿಂದಾಗಿ, ಸೆಂಗಾರ್‌ಗೆ ನೀಡಿದ್ದ ಜಾಮೀನು ಅಮಾನತುಗೊಂಡಿದ್ದು, ಮುಂದಿನ ಆದೇಶದವರೆಗೆ ಜೈಲಿನಲ್ಲೇ ಇರಬೇಕಾಗಿದೆ.

error: Content is protected !!