Home Blog Page 255

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಧನ ದಾಹಿ ಡಾಕ್ಟರ್ʼಗೆ ಬೇಕಂತೆ ಬಂಗಾರ, ಹಣ

0

ವಿಜಯಪುರ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾದ ಹೃದಯವಿದ್ರಾವಕ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಬಂಗಾರ ಮತ್ತು ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡಿದ್ದ ವೈದ್ಯನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಗೃಹಿಣಿಯನ್ನು ಸವಿತಾ ಶಿರಶ್ಯಾಡ್ (30) ಎಂದು ಗುರುತಿಸಲಾಗಿದೆ. ಘಟನೆ ವಿಜಯಪುರ ನಗರದ ಗೌರಿ ಶಂಕರ ಬಡಾವಣೆಯಲ್ಲಿ ನಡೆದಿದೆ. ಸುಮಾರು 10 ವರ್ಷಗಳ ಹಿಂದೆ ಸವಿತಾ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮದುವೆಯಾದ ಬಳಿಕವೂ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.

ವೈದ್ಯ ಡಾ. ರಾಜಶೇಖರ ಶಿರಶ್ಯಾಡ ಬಂಗಾರ ಹಾಗೂ ಹಣ ತರಬೇಕೆಂದು ಪತ್ನಿಯನ್ನು ನಿರಂತರವಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಗೃಹಿಣಿ ಸವಿತಾರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಪತಿ ಹಾಗೂ ಆತನ ಕುಟುಂಬಸ್ಥರ ಮೇಲೆ ಕೇಳಿಬಂದಿದೆ.

ಘಟನೆ ನಡೆದ ನಂತರ ಸವಿತಾ ತವರು ಮನೆಯವರಿಗೆ ವೈದ್ಯನ ಕುಟುಂಬಸ್ಥರು ಕರೆ ಮಾಡಿ, ಸವಿತಾ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿಸಿರುವುದಾಗಿ ಆರೋಪಿಸಲಾಗಿದೆ. ಆದರೆ ಬಳಿಕ ಗೃಹಿಣಿ ಸಾವನ್ನಪ್ಪುತ್ತಿದ್ದಂತೆ ವೈದ್ಯ ಮತ್ತು ಆತನ ಕುಟುಂಬಸ್ಥರು ಮನೆ ಹಾಗೂ ಆಸ್ಪತ್ರೆಗೆ ಹೋಗಿ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸವಿತಾ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ವಿಜಯಪುರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು

0

ರಾಯಚೂರು: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ದೇಶಾದ್ಯಂತ ಚರ್ಚೆಯಾಗುತ್ತಿರುವ ನಡುವೆಯೇ, ರಾಯಚೂರಲ್ಲೂ ಜೆಸಿಬಿ ಕಾರ್ಯಾಚರಣೆ ನಡೆಯಿತು. ನಗರದ ಮಾವಿನಕೆರೆ ರಸ್ತೆಯ ವಾರ್ಡ್ ನಂ. 4ರ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ 20 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗಿದೆ.

ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಕಾಂಪೌಂಡ್‌ಗಳು ಹಾಗೂ ಕಟ್ಟೆಗಳು ತೆರವು ಮಾಡಲಾಗಿದೆ. ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಕಟ್ಟಡಗಳು ಮತ್ತು ರಸ್ತೆ ಒತ್ತುವರಿಗಳನ್ನು ತೆರವುಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು. ಜೆಸಿಬಿಗಳ ಸಹಾಯದಿಂದ ರಸ್ತೆ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಸಂಚಾರ ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಧಿಕೃತ ಕಟ್ಟಡಗಳ ವಿರುದ್ಧ ಮುಂದೆಯೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕಾರವಾರ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೊದಲ ಆದ್ಯತೆ: ಡಿ.ಕೆ. ಶಿವಕುಮಾರ್

0

ಕಾರವಾರ: “ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಶಾಸಕರಾದ ಸತೀಶ್ ಸೈಲ್ ಅವರು ನಮ್ಮ ಜನರು ಗೋವಾ, ಉಡುಪಿ, ಮಂಗಳೂರಿಗೆ ಉತ್ತಮ ಚಿಕಿತ್ಸೆಗೆ ಹೋಗಲು ಆಗುವುದಿಲ್ಲ. ಅದಕ್ಕೆ ನಮಗೆ ಅತ್ಯುತ್ತಮ ‌ಆಸ್ಪತ್ರೆ ಬೇಕು ಎಂದಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ” ಎಂದರು.

“ಉತ್ತರ ಕನ್ನಡ ಜಿಲ್ಲೆಯ ಜನತೆ ಐದು ಜನ‌ ಶಾಸಕರನ್ನು ನೀಡಿ ಸರ್ಕಾರಕ್ಕೆ ಶಕ್ತಿ ತುಂಬಿದ್ದೀರಿ. ನೀವು ಶಕ್ತಿ ಕೊಟ್ಟ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಿಮ್ಮಿಂದ ಈ ಕೈ ಗಟ್ಟಿಯಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದರು.

“ನಿಮಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಮಾಡಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಯುವ ಜನರ ವಲಸೆ ತಪ್ಪಿಸುತ್ತೇವೆ. ಮನೆ ಬಾಗಿಲಲ್ಲಿ ಉದ್ಯೋಗ ನೀಡುತ್ತೇವೆ. ಜನವರಿ 10 ರಂದು ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು” ಎಂದರು.

“ಪಶ್ಚಿಮ ಘಟ್ಟ, ಸಮುದ್ರ ತೀರ ಹೊಂದಿರುವ ವಿಶಿಷ್ಟವಾದ ಪ್ರದೇಶವಿದು. ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೀಗೆ ವೈವಿಧ್ಯಮಯವಾದ ಪ್ರದೇಶವಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು, ಸಮುದ್ರ ಎಂದರೆ ಜೀವನ, ಮೀನುಗಾರರ ಬದುಕಿಗೆ ದೊಡ್ಡ ಆಧಾರ, ವ್ಯಾಪಾರಿಗರ ನಿಧಿ, ಪ್ರವಾಸಿಗರ ಸ್ವರ್ಗ ಈ ಸಮುದ್ರ” ಎಂದು ಕರಾವಳಿಯ ವೈಭವವನ್ನು ಬಣ್ಣಿಸಿದರು.

“ಕಳೆದ ಏಳು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಈ ವರ್ಷ ನೀವು ಬರಲೇಬೇಕು ಎಂದು ಸತೀಶ್ ಸೈಲ್ ಅವರು ಜಿಲ್ಲಾ ಮಂತ್ರಿ ಮಂಕಾಳ್ ವೈದ್ಯ ಅವರು ಒತ್ತಾಯ ಪೂರ್ವಕವಾಗಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ದೇವರು ವರ,‌ ಶಾಪ ಎರಡನ್ನೂ ನೀಡುವುದಿಲ್ಲ‌.

ಆದರೆ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಇದನ್ನು ಸತೀಶ್ ಸೈಲ್ ಅವರು ಬಳಸಿಕೊಂಡು ಜಿಲ್ಲೆಯ ಕಲಾವಿದರು ಸೇರಿದಂತೆ ಅನೇಕವರಿಗೆ ಅವಕಾಶ ಸೃಷ್ಟಿಸಿ ಕೊಟ್ಟಿದ್ದಾರೆ” ಎಂದು ಹೇಳಿದರು. “ಕರಾವಳಿ ಉತ್ಸವದಿಂದ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ಅವಕಾಶ ನೀಡಿದಂತಾಗಿದೆ. ಈ ರೀತಿ ಪ್ರೋತ್ಸಾಹ ನೀಡುವುದರಿಂದ ಯುವ ಕಲಾವಿದರ ಬೆಳವಣಿಗೆ ಸಾಧ್ಯ” ಎಂದರು.

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

0

ದೊಡ್ಡಬಳ್ಳಾಪುರ: ಸಿಮೆಂಟ್ ಬಲ್ಕರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ.

ಮೃತರನ್ನು ಪವನ್ ಕುಮಾರ್ (22) ಮತ್ತು ಅಶೋಕ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಬೈಕ್‌ನಲ್ಲಿ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಸಿಮೆಂಟ್ ಬಲ್ಕರ್ ಲಾರಿ ಏಕಾಏಕಿ ರಸ್ತೆಯ ಮಧ್ಯೆ ನಿಲ್ಲಿಸಲಾಗಿದ್ದು, ಹಿಂಬದಿಯಿಂದ ಬಂದ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದ ಬಳಿಕ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರ ಸರ್ಕಾರಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉನ್ನಾವೋ ಅತ್ಯಾಚಾರ ಪ್ರಕರಣ: ಜೀವಾವಧಿ ಶಿಕ್ಷೆ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

0

ನವದೆಹಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್  ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್  ತಡೆ ನೀಡಿದೆ.

ಡಿಸೆಂಬರ್ 23ರಂದು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶದಂತೆ ಸೆಂಗಾರ್ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಪರಿಶೀಲನೆಗೆ ಒಳಪಡಬೇಕಾದ ಅನೇಕ ಮಹತ್ವದ ಕಾನೂನು ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿದೆ.

ಸಿಬಿಐ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕುಲದೀಪ್ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದೆ. 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಸೆಂಗಾರ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಆ ತೀರ್ಪನ್ನು ರದ್ದುಪಡಿಸಿ ಜಾಮೀನು ಮಂಜೂರು ಮಾಡಿತ್ತು.

ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಹಾಗೂ ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ, ಸೆಂಗಾರ್‌ಗೆ 15 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಸಮಾನ ಮೊತ್ತದ ಮೂರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಜೊತೆಗೆ, ಸಂತ್ರಸ್ತೆಯ ಮನೆಯ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರವೇಶಿಸಬಾರದು ಮತ್ತು ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು.

ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತಡೆಯಿಂದಾಗಿ, ಸೆಂಗಾರ್‌ಗೆ ನೀಡಿದ್ದ ಜಾಮೀನು ಅಮಾನತುಗೊಂಡಿದ್ದು, ಮುಂದಿನ ಆದೇಶದವರೆಗೆ ಜೈಲಿನಲ್ಲೇ ಇರಬೇಕಾಗಿದೆ.

Gold Rate: ಚಿನ್ನದ ದರ ಇಳಿಕೆ: ಬೆಂಗಳೂರಿನಲ್ಲಿ ಹಳದಿ ಲೋಹದ ದರ ಪಟ್ಟಿ ಇಂತಿದೆ!

0

ಬೇರೆ ದೇಶಗಳಿಗೆ ಹೋಲಿಸಿದೆರೆ, ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನ. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ.

ಆದರೆ ಈಗ ಏರುತ್ತಿರುವ ಬೆಲೆ ನೋಡಿದರೆ ಬಂಗಾರ ಮುಟ್ಟಂಗಿಲ್ಲ ಅನ್ನೋ ರೀತಿ ಆಗಿದೆ. ಭಾರತ ಸೇರಿ ವಿಶ್ವದಲ್ಲಿಯೇ ಚಿನ್ನಕ್ಕೆ ಚಿನ್ನ ಮಾತ್ರವೇ ಸಾಟಿ ಎನ್ನುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಚಿನ್ನ ತನ್ನ ಬೆಲೆ ಹೆಚ್ಚಿಸಿಕೊಂಡಿದೆ.

ಇಂದು ಸೋಮವಾರ ಚಿನ್ನದ ಬೆಲೆ ಇಳಿಕೆಯಾದರೆ, ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿದೆ. ಆಭರಣ ಚಿನ್ನದ ಬೆಲೆ 13,055 ರೂನಿಂದ 12,990 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,192 ರೂನಿಂದ 14,122 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 251 ರೂನಿಂದ 258 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 281 ರೂ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,628 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,990 ರೂ
  • ಚೆನ್ನೈ: 13,020 ರೂ
  • ಮುಂಬೈ: 12,990 ರೂ
  • ದೆಹಲಿ: 13,005 ರೂ
  • ಕೋಲ್ಕತಾ: 12,990 ರೂ
  • ಕೇರಳ: 12,990 ರೂ
  • ಅಹ್ಮದಾಬಾದ್: 12,995 ರೂ
  • ಜೈಪುರ್: 13,005 ರೂ
  • ಲಕ್ನೋ: 13,005 ರೂ
  • ಭುವನೇಶ್ವರ್: 12,990 ರೂ

 

ಭೀಕರ ರಸ್ತೆ ಅಪಘಾತ: ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ – ಚಾಲಕ ಸಾವು

0

ಲಕ್ನೋ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೊಲೆರೊ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯ ಪಹಾಡಿ ಗೇಟ್ ಸಮೀಪದ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.

ಹೊಟ್ಟು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಕ್ಕದಲ್ಲಿ ಚಲಿಸುತ್ತಿದ್ದ ಬೊಲೆರೊ ವಾಹನದ ಮೇಲೆ ಉರುಳಿಬಿದ್ದಿದೆ. ಡಿಕ್ಕಿಯ ತೀವ್ರತೆಗೆ ಬೊಲೆರೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು,  ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಜೆಸಿಬಿ ಸಹಾಯದಿಂದ ಲಾರಿಯನ್ನು ತೆರವುಗೊಳಿಸಿ, ಬೊಲೆರೊ ವಾಹನವನ್ನು ಹೊರತೆಗೆದುಕೊಳ್ಳಲಾಯಿತು. ಮೃತ ಚಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

99 ಲಕ್ಷ ರೂ. ಸಾಲ ಮರುಪಾವತಿ ಆರೋಪ: BJP ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲು

0

ಬೀದರ್: 99 ಲಕ್ಷ ರೂ. ಸಾಲವನ್ನು ಹಿಂತಿರುಗಿಸದೆ ವಂಚನೆ ನಡೆಸಿದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಸಂಜು ಸುಗುರೆ ಅವರು ಈ ಕುರಿತು ದೂರು ನೀಡಿದ್ದಾರೆ.

ದೂರುದಾರ ಉದ್ಯಮಿ ಸಂಜು ಸುಗುರೆ ಪ್ರಕಾರ, 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ವೆಚ್ಚಕ್ಕೆಂದು ಶಾಸಕ ಶರಣು ಸಲಗರ್ ಅವರು 99 ಲಕ್ಷ ರೂ. ಸಾಲ ಪಡೆದಿದ್ದಾರೆ. ಸಾಲದ ಭದ್ರತೆಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸಹಿ ಮಾಡಿ ಶಾಸಕರು ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಲ ಪಡೆದ ಬಳಿಕ ಅನೇಕ ಬಾರಿ ಹಣ ವಾಪಸ್ ನೀಡುವಂತೆ ಕೇಳಿದರೂ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಸೆಪ್ಟೆಂಬರ್ 14ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿಕೊಂಡು ಶಾಸಕ ಶರಣು ಸಲಗರ್ ಅವರು ಮತ್ತೊಮ್ಮೆ ಚೆಕ್ ನೀಡಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 16ರಂದು ಚೆಕ್ ಬ್ಯಾಂಕಿಗೆ ಹಾಕುವ ಬಗ್ಗೆ ಖಚಿತಪಡಿಸಿಕೊಳ್ಳಲು ಉದ್ಯಮಿ ಸಂಜು ಸುಗುರೆ ಅವರ ಪತ್ನಿ ಹಾಗೂ ಪುತ್ರರು ಶಾಸಕರ ಮನೆಗೆ ತೆರಳಿದಾಗ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಚೆಕ್ ಬ್ಯಾಂಕಿಗೆ ಹಾಕುವುದಾಗಿ ಹೇಳಿದ್ದಕ್ಕೆ ಶಾಸಕ ಶರಣು ಸಲಗರ್ ಅವರು ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸೆಪ್ಟೆಂಬರ್ 19ರಂದು ಶಾಸಕರು ನೀಡಿದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಚೆಕ್ ವಾಪಸ್ ಬಂದಿದೆ. ಕರ್ನಾಟಕ ಬ್ಯಾಂಕ್‌ನಲ್ಲಿ ಶಾಸಕರ ಖಾತೆ ಮುಚ್ಚಲ್ಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಉದ್ಯಮಿ ಸಂಜು ಸುಗುರೆ ಅವರು ಬೆಂಗಳೂರಿನ ಎಸಿಜೆಎಂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಚಿತ್ರರಂಗಕ್ಕೆ ವಿಜಯ್ ವಿದಾಯ? ‘ಜನ ನಾಯಗನ್’ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಭಾವುಕ

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಡಿಸೆಂಬರ್ 27ರಂದು ಮಲೇಷ್ಯಾದಲ್ಲಿ ಭರ್ಜರಿಯಾಗಿ ನಡೆಯಿತು. ಈಗಾಗಲೇ ರಾಜಕೀಯ ಪಕ್ಷ ಸ್ಥಾಪಿಸಿರುವ ವಿಜಯ್, ಈ ಸಿನಿಮಾವೇ ತಮ್ಮ ನಟನಾ ಜೀವನದ ಕೊನೆಯ ಚಿತ್ರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ವೇಳೆ ಮಾತನಾಡಿದ ವಿಜಯ್, “ಇದು ನನ್ನ ಕೊನೆಯ ಸಿನಿಮಾ ಎಂದು ಹೇಳುವುದೇ ನನಗೆ ಕಷ್ಟವಾಗುತ್ತಿದೆ. ಆದರೆ ನನ್ನ ಮುಂದಿನ ಜೀವನದ 30 ವರ್ಷಗಳನ್ನು ಅಭಿಮಾನಿಗಳಿಗಾಗಿ ಮತ್ತು ಸಮಾಜಕ್ಕಾಗಿ ಮೀಸಲಿಡಬೇಕಿದೆ” ಎಂದು ಹೇಳಿದರು.

ನಟನೆಗೆ ಕಾಲಿಟ್ಟ ದಿನದಿಂದ ಇಂದಿನವರೆಗೂ ಅಭಿಮಾನಿಗಳು ತಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದ ಅವರು, “ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅಭಿಮಾನಿಗಳಿಗಾಗಿ ನಾನು ನನ್ನ ಪ್ರೀತಿಯ ಸಿನಿಮಾವನ್ನೇ ತ್ಯಜಿಸುತ್ತಿದ್ದೇನೆ. ನಾನು ಕೇವಲ ಒಳ್ಳೆಯದು ಹೇಳಲು ಬಂದವನಲ್ಲ, ಒಳ್ಳೆಯತನವನ್ನು ಸ್ಥಾಪಿಸಲು ಬಂದವ” ಎಂದು ಘೋಷಿಸಿದರು.

ಸಿನಿಮಾ ತಂಡದ ಬಗ್ಗೆ ಮಾತನಾಡಿದ ವಿಜಯ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಎಂದಿಗೂ ನಿರಾಶೆ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕ ಎಚ್. ವಿನೋದ್ ಅವರ ಸಿನಿಮಾ ಶೈಲಿಯನ್ನು ಶ್ಲಾಘಿಸಿದರು. ನಾಯಕಿ ಪೂಜಾ ಅವರ ನಟನಾ ಪ್ರತಿಭೆ ಹಾಗೂ ಅಂದವನ್ನು ಹೊಗಳಿದರು. ಮಮಿತಾ ಹಾಗೂ ಪ್ರಕಾಶ್ ರೈ ಜೊತೆಗಿನ ಕಾಂಬಿನೇಷನ್ ಕುರಿತು ಸಹ ಮಾತನಾಡಿದರು.

ಮಲೇಷ್ಯಾ ತಮಿಳು ಚಿತ್ರರಂಗಕ್ಕೆ ಪ್ರಮುಖ ಮಾರುಕಟ್ಟೆ ಎಂದು ಹೇಳಿದ ವಿಜಯ್, ತಮ್ಮ ಕೊನೆಯ ಸಿನಿಮಾದ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ವಿಶೇಷ ಕ್ಷಣ ಎಂದು ಹೇಳಿದರು. ‘ಜನ ನಾಯಗನ್’ ಸಿನಿಮಾ ಜನವರಿ 09ರಂದು ಬಿಡುಗಡೆಯಾಗಲಿದೆ.

ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ: ಮ್ಯಾನೇಜರ್ ವಿರುದ್ಧ FIR ದಾಖಲು

0

ಬೆಂಗಳೂರು: ನಗರದ ಮಲ್ಲೇಶ್ವರಂ ಪ್ರದೇಶದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಭಾರೀ ಹಣಕಾಸು ವಂಚನೆ ನಗರವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ವಿರುದ್ಧವೇ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿ ಕೋಟಿ ಕೋಟಿ ರೂ. ವಂಚಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಹಿರಿಯ ವ್ಯವಸ್ಥಾಪಕ ಎನ್. ರಘು ಅವರು, 2025ರ ಅಕ್ಟೋಬರ್ 4ರಿಂದ ಡಿಸೆಂಬರ್ 9ರವರೆಗೆ 41 ಗ್ರಾಹಕರ ಖಾತೆಗಳಲ್ಲಿ ಯಾವುದೇ ಚಿನ್ನವಿಲ್ಲದೇ ನಕಲಿ ಗೋಲ್ಡ್ ಲೋನ್‌ಗಳನ್ನು ತೆರೆದು ಸುಮಾರು 3.11 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಂಚನೆಗೆ ವಯೋವೃದ್ಧರು, ಪಿಂಚಣಿದಾರರು, ಅರ್ಚಕರು ಹಾಗೂ ಹೋಲ್‌ಸೇಲ್ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಕೆಲಸಕ್ಕೆ ಅಗತ್ಯವೆಂದು ಸುಳ್ಳು ಹೇಳಿ ಗ್ರಾಹಕರಿಂದ OTP ಮತ್ತು ಚೆಕ್‌ಗಳನ್ನು ಪಡೆದು, ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೇ ಅವರ ಖಾತೆಗಳಲ್ಲಿ ಗೋಲ್ಡ್ ಲೋನ್ ತೆರೆದು, ಲೋನ್ ಹಣವನ್ನು ಡ್ರಾ ಮಾಡಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಆರೋಪಿತ ಅಧಿಕಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದರಿಂದ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆನರಾ ಬ್ಯಾಂಕ್ 41 ಗ್ರಾಹಕರ ಖಾತೆಗಳನ್ನು ಫ್ರೀಜ್ ಮಾಡಿದೆ.

ಯಾವುದೇ ಚಿನ್ನವಿಲ್ಲದೇ ಗ್ರಾಹಕರು ಲೋನ್ ಹೊರೆ ಹೊರುವ ಸ್ಥಿತಿಗೆ ತಲುಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಹಿನ್ನೆಲೆಯಲ್ಲಿ, ತಮ್ಮ ಖಾತೆಗಳಲ್ಲಿ ಯಾವುದೇ ಅನುಮಾನಾಸ್ಪದ ಲೋನ್ ಅಥವಾ ವ್ಯವಹಾರಗಳಿವೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿಕೊಳ್ಳುವಂತೆ ಬ್ಯಾಂಕ್ ಗ್ರಾಹಕರಿಗೆ ಸೂಚನೆ ನೀಡಲಾಗಿದೆ.

error: Content is protected !!