ಬೀದರ್: 99 ಲಕ್ಷ ರೂ. ಸಾಲವನ್ನು ಹಿಂತಿರುಗಿಸದೆ ವಂಚನೆ ನಡೆಸಿದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಸಂಜು ಸುಗುರೆ ಅವರು ಈ ಕುರಿತು ದೂರು ನೀಡಿದ್ದಾರೆ.
ದೂರುದಾರ ಉದ್ಯಮಿ ಸಂಜು ಸುಗುರೆ ಪ್ರಕಾರ, 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ವೆಚ್ಚಕ್ಕೆಂದು ಶಾಸಕ ಶರಣು ಸಲಗರ್ ಅವರು 99 ಲಕ್ಷ ರೂ. ಸಾಲ ಪಡೆದಿದ್ದಾರೆ. ಸಾಲದ ಭದ್ರತೆಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸಹಿ ಮಾಡಿ ಶಾಸಕರು ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಲ ಪಡೆದ ಬಳಿಕ ಅನೇಕ ಬಾರಿ ಹಣ ವಾಪಸ್ ನೀಡುವಂತೆ ಕೇಳಿದರೂ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಸೆಪ್ಟೆಂಬರ್ 14ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿಕೊಂಡು ಶಾಸಕ ಶರಣು ಸಲಗರ್ ಅವರು ಮತ್ತೊಮ್ಮೆ ಚೆಕ್ ನೀಡಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 16ರಂದು ಚೆಕ್ ಬ್ಯಾಂಕಿಗೆ ಹಾಕುವ ಬಗ್ಗೆ ಖಚಿತಪಡಿಸಿಕೊಳ್ಳಲು ಉದ್ಯಮಿ ಸಂಜು ಸುಗುರೆ ಅವರ ಪತ್ನಿ ಹಾಗೂ ಪುತ್ರರು ಶಾಸಕರ ಮನೆಗೆ ತೆರಳಿದಾಗ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಚೆಕ್ ಬ್ಯಾಂಕಿಗೆ ಹಾಕುವುದಾಗಿ ಹೇಳಿದ್ದಕ್ಕೆ ಶಾಸಕ ಶರಣು ಸಲಗರ್ ಅವರು ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಸೆಪ್ಟೆಂಬರ್ 19ರಂದು ಶಾಸಕರು ನೀಡಿದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಚೆಕ್ ವಾಪಸ್ ಬಂದಿದೆ. ಕರ್ನಾಟಕ ಬ್ಯಾಂಕ್‌ನಲ್ಲಿ ಶಾಸಕರ ಖಾತೆ ಮುಚ್ಚಲ್ಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಉದ್ಯಮಿ ಸಂಜು ಸುಗುರೆ ಅವರು ಬೆಂಗಳೂರಿನ ಎಸಿಜೆಎಂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

