Home Blog Page 26

ತಮಿಳು ಚಿತ್ರರಂಗಕ್ಕೆ ಆಘಾತ; ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಖ್ಯಾತ ಚಿತ್ರಕಥೆಗಾರ ಹಾಗೂ ನಟ ಕೆ. ಭಾಗ್ಯರಾಜ್ ಅವರು ಶನಿವಾರ (ಜೂನ್ 27) ಹೃದಯಾಘಾತದಿಂದ ನಿಧನರಾಗಿದ್ದಾರೆ. ಚೆನ್ನೈನ ನಿವಾಸದಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ನಿಧನದ ವೇಳೆ ಅವರಿಗೆ 73 ವರ್ಷ ವಯಸ್ಸಾಗಿತ್ತು.

ಕೆ. ಭಾಗ್ಯರಾಜ್ ಅವರ ನಿಧನದಿಂದ ತಮಿಳು ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದ್ದು, ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳ ಬದುಕನ್ನು ಆಧರಿಸಿದ ಕಥೆಗಳ ಮೂಲಕ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಸರಳ ಕಥಾಹಂದರ, ಪರಿಣಾಮಕಾರಿ ಚಿತ್ರಕಥೆ ಮತ್ತು ಮನಸಿಗೆ ಹತ್ತಿರವಾಗುವ ಪಾತ್ರಗಳ ಮೂಲಕ ಅವರು ಲಕ್ಷಾಂತರ ಸಿನಿಪ್ರೇಕ್ಷಕರ ಮನ ಗೆದ್ದಿದ್ದರು.

ಭಾಗ್ಯರಾಜ್ ಅವರ ಪತ್ನಿ ಪೂರ್ಣಿಮಾ ಮಾಜಿ ನಟಿಯಾಗಿದ್ದು, ಪುತ್ರ ಶಂತನು ಭಾಗ್ಯರಾಜ್ ಹಾಗೂ ಪುತ್ರಿ ಶರಣ್ಯ ಕುಟುಂಬದ ಸದಸ್ಯರಾಗಿದ್ದಾರೆ. ಪುತ್ರ ಶಂತನು ಕೂಡ ತಮಿಳು ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗ್ಯರಾಜ್ ಭಾಗವಹಿಸಿದ್ದರು.

ಸಿನಿಮಾ ಬದುಕಿನ ಪಯಣ

ಕೃಷ್ಣಸ್ವಾಮಿ ಭಾಗ್ಯರಾಜ್ ಎಂಬುದು ಅವರ ಪೂರ್ಣ ಹೆಸರು. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಜನಿಸಿದ ಅವರು, ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ್ದರು. ಖ್ಯಾತ ನಿರ್ದೇಶಕ ಭಾರತೀರಾಜ ಅವರ ಬಳಿ ಸಿನಿಮಾ ಕಲೆ ಕಲಿತ ಬಳಿಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. 1980 ಮತ್ತು 1990ರ ದಶಕಗಳಲ್ಲಿ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ತಮ್ಮ ವೃತ್ತಿಜೀವನದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಭಾಗ್ಯರಾಜ್, 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ಚಿತ್ರಕಥೆಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು, ಹಲವು ಯಶಸ್ವಿ ಹಾಗೂ ಕ್ಲಾಸಿಕ್ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.

ಅವರ ನಿರ್ದೇಶನದ ‘ಮುಂದಾನೈ ಮುಡಿಚ್ಚು’, ‘ಅಂದ 7 ನಾಟ್ಕಳ್’ ಹಾಗೂ ‘ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್’ ಚಿತ್ರಗಳು ಇಂದಿಗೂ ತಮಿಳು ಸಿನಿರಂಗದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತವೆ.

ಕನ್ನಡ ಚಿತ್ರರಂಗದ ಜೊತೆಯೂ ನಂಟು

ಕೆ. ಭಾಗ್ಯರಾಜ್ ಅವರಿಗೆ ಕನ್ನಡ ಚಿತ್ರರಂಗದೊಂದಿಗೂ ಒಡನಾಟವಿತ್ತು. 2015ರಲ್ಲಿ ಬಿಡುಗಡೆಯಾದ ‘ರೆಡ್ ಅಲರ್ಟ್’ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. 2025ರಲ್ಲಿ ಬಿಡುಗಡೆಯಾದ ‘ಕುಬೇರ’ ಅವರ ನಟನೆಯ ಕೊನೆಯ ಸಿನಿಮಾ ಎನ್ನಲಾಗಿದೆ.

ಕೆ. ಭಾಗ್ಯರಾಜ್ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದ ಒಬ್ಬ ಅಪರೂಪದ ಕಥೆಗಾರ, ನಿರ್ದೇಶಕ ಮತ್ತು ನಟನ ಅಧ್ಯಾಯ ಅಂತ್ಯಗೊಂಡಂತಾಗಿದೆ.

ನಾನು 13 ಸಿಕ್ಸರ್ ಹೊಡೆಯುತ್ತೇನೆ ಎಂದಿದ್ದ: ವೈಭವ್ ಸೂರ್ಯವಂಶಿಯ ಆತ್ಮವಿಶ್ವಾಸದ ಕಥೆ ಬಿಚ್ಚಿಟ್ಟ ಕುಮಾರ್ ಸಂಗಕ್ಕಾರ

0

ಭಾರತದ ಉದಯೋನ್ಮುಖ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಮತ್ತು ಆತ್ಮವಿಶ್ವಾಸದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.

ಈ ಬಾರಿ ಅವರ ಬಗ್ಗೆ ವಿಶೇಷವಾಗಿ ಮಾತನಾಡಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ. ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ‘ಸ್ಕೈ ಕ್ರಿಕೆಟ್’ಗೆ ನೀಡಿದ ಸಂದರ್ಶನದಲ್ಲಿ ಸಂಗಕ್ಕಾರ, ವೈಭವ್ ಅವರ ಅಸಾಧಾರಣ ಆತ್ಮವಿಶ್ವಾಸದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಐಪಿಎಲ್ 2026ರ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಕಣಕ್ಕಿಳಿದಿತ್ತು. ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ 220 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದ ರಾಜಸ್ಥಾನ್‌ಗೆ ಈ ಪಂದ್ಯ ಗೆಲ್ಲುವುದು ಅತ್ಯಗತ್ಯವಾಗಿತ್ತು.

ಇಂತಹ ಒತ್ತಡದ ಸಂದರ್ಭದಲ್ಲಿ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ಗೆ ತೆರಳುವ ಮುನ್ನ ಕೋಚ್ ಕುಮಾರ್ ಸಂಗಕ್ಕಾರ ಅವರ ಬಳಿ ಬಂದು, “ಕೋಚ್, ನೀವು ಚಿಂತಿಸಬೇಡಿ… ಪಂದ್ಯ ಮುಗಿದಂತೆಯೇ,” ಎಂದು ಆತ್ಮವಿಶ್ವಾಸದಿಂದ ಹೇಳಿ ಮೈದಾನಕ್ಕಿಳಿದಿದ್ದರು ಎಂದು ಸಂಗಕ್ಕಾರ ನೆನಪಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಡಗೌಟ್‌ನಲ್ಲಿದ್ದ ಸಹ ಆಟಗಾರರಾದ ಡೊನೊವನ್ ಫೆರೇರಾ ಹಾಗೂ ಲುಹಾನ್-ಡ್ರೆ ಪ್ರಿಟೋರಿಯಸ್ ಅವರ ಬಳಿಗೂ ತೆರಳಿ, “ಇಂದು ನಾನು 13 ಸಿಕ್ಸರ್‌ಗಳನ್ನು ಹೊಡೆಯುತ್ತೇನೆ. ನಾನು ಔಟಾದ ನಂತರ ಉಳಿದ ರನ್‌ಗಳನ್ನು ನೀವು ಪೂರ್ಣಗೊಳಿಸಿ,” ಎಂದು ಹೇಳಿದ್ದರಂತೆ.

ವೈಭವ್ ಬ್ಯಾಟಿಂಗ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸತತ ಸಿಕ್ಸರ್‌ಗಳ ಸುರಿಮಳೆ ಆರಂಭವಾಗಿತ್ತು. ಆರಂಭದಲ್ಲೇ ಐದು ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದಂತೆ, ಡಗೌಟ್‌ನಲ್ಲಿದ್ದ ಆಟಗಾರರು ಅಚ್ಚರಿಗೊಂಡಿದ್ದರು. “ಈ ಹುಡುಗ ಹೇಳಿದ್ದನ್ನೇ ಮಾಡುತ್ತಿದ್ದಾನೆ. ಈಗ ಇವನು ಎಷ್ಟು ಸಿಕ್ಸರ್ ಹೊಡೆಯುತ್ತಾನೆ ಎಂಬುದನ್ನು ಎಣಿಸಲು ಶುರು ಮಾಡೋಣ,” ಎಂದು ತಮ್ಮೊಳಗೆ ಮಾತನಾಡಿಕೊಂಡಿದ್ದರು ಎಂದು ಸಂಗಕ್ಕಾರ ತಿಳಿಸಿದ್ದಾರೆ.

ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 48 ಎಸೆತಗಳಲ್ಲಿ 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಅವರ ಬ್ಯಾಟ್‌ನಿಂದ 10 ಸಿಕ್ಸರ್ ಹಾಗೂ ಹಲವು ಬೌಂಡರಿಗಳು ಮೂಡಿಬಂದಿದ್ದವು. 13 ಸಿಕ್ಸರ್ ಹೊಡೆಯುವ ತಮ್ಮ ಮಾತನ್ನು ಮೂರು ಸಿಕ್ಸರ್‌ಗಳಿಂದ ತಪ್ಪಿಸಿಕೊಂಡರೂ, ತಂಡಕ್ಕೆ ಏಳು ವಿಕೆಟ್‌ಗಳ ಅಮೋಘ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವೈಭವ್ ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ ಕುಮಾರ್ ಸಂಗಕ್ಕಾರ, “ಇಂತಹ ಆತ್ಮವಿಶ್ವಾಸ ಎಲ್ಲರಲ್ಲೂ ಇರುವುದಿಲ್ಲ. ವೈಭವ್ ಕೇವಲ ಪ್ರತಿಭಾವಂತ ಆಟಗಾರ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಭವಿಷ್ಯದಲ್ಲಿ ಕ್ರಿಕೆಟ್ ಜಗತ್ತಿನ ಸೂಪರ್‌ಸ್ಟಾರ್ ಆಗುವ ಎಲ್ಲಾ ಗುಣಗಳು ಆತನಲ್ಲಿವೆ,” ಎಂದು ಪ್ರಶಂಸಿಸಿದ್ದಾರೆ.

ಐರ್ಲೆಂಡ್ ವಿರುದ್ಧ ಸೋಲು ಕಂಡ ಟೀಮ್ ಇಂಡಿಯಾ: ಸೋಲಿನ ಕಾರಣ ಬಿಚ್ಚಿಟ್ಟ ನಾಯಕ ಶ್ರೇಯಸ್ ಅಯ್ಯರ್

0

ಬೆಲ್‌ಫಾಸ್ಟ್: ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲು ಕಂಡಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ 34 ರನ್‌ಗಳ ಗೆಲುವು ಸಾಧಿಸಿದ ಐರ್ಲೆಂಡ್, ಭಾರತ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಜಯ ದಾಖಲಿಸಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತು. 183 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 148 ರನ್‌ಗಳಿಗೆ ಸೀಮಿತವಾಗಿ ಸೋಲೊಪ್ಪಿಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಬೌಲರ್‌ಗಳು ಮಧ್ಯದ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ವಿಫಲವಾದದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

“ಆರಂಭದಲ್ಲಿ ನಮ್ಮ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಿಚ್‌ನಲ್ಲಿದ್ದ ಸ್ವಿಂಗ್ ಮತ್ತು ಲ್ಯಾಟರಲ್ ಮೂವ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೇವಲ 36 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದ್ದೆವು. ಆ ಹಂತದಲ್ಲಿ ಪಂದ್ಯ ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿತ್ತು. ಆದರೆ ನಂತರ ನಾವು ಲಯ ಕಳೆದುಕೊಂಡೆವು,” ಎಂದು ಅಯ್ಯರ್ ಹೇಳಿದ್ದಾರೆ.

“ಮಧ್ಯದ ಓವರ್‌ಗಳಲ್ಲಿ ಸರಿಯಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಈ ಮೈದಾನದಲ್ಲಿ ಮುಂಭಾಗದ ಬೌಂಡರಿಗಳು ಚಿಕ್ಕದಾಗಿವೆ ಎಂಬುದು ಗೊತ್ತಿದ್ದರೂ, ಬ್ಯಾಟರ್‌ಗಳಿಗೆ ನೇರವಾಗಿ ಶಾಟ್‌ಗಳನ್ನು ಆಡಲು ಅವಕಾಶ ನೀಡಿದೆವು. ಅದೇ ನಮ್ಮ ಮೇಲೆ ಭಾರಿಯಾಗಿ ಬಿತ್ತು,” ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ, “ನಾವು ಪಡೆದ ಆರಂಭವನ್ನು ಗಮನಿಸಿದರೆ ಐರ್ಲೆಂಡ್ ತಂಡವನ್ನು 140 ರನ್‌ಗಳೊಳಗೆ ನಿಯಂತ್ರಿಸಬೇಕಿತ್ತು. ಆ ಮೊತ್ತವನ್ನು ಈ ಪಿಚ್‌ನಲ್ಲಿ ಸುಲಭವಾಗಿ ಬೆನ್ನಟ್ಟಬಹುದಿತ್ತು. ಆದರೆ ಡೆತ್ ಓವರ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರಿಂದ ಎದುರಾಳಿ 182 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಾಧ್ಯವಾಯಿತು,” ಎಂದು ಅಯ್ಯರ್ ಅಭಿಪ್ರಾಯಪಟ್ಟರು.

ಮೊದಲ ಪಂದ್ಯದಲ್ಲೇ ಸೋಲು ಕಂಡಿರುವ ಭಾರತ ತಂಡ, ಸರಣಿಯಲ್ಲಿ ಸಮಬಲ ಸಾಧಿಸುವ ಉದ್ದೇಶದಿಂದ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸವಾಲನ್ನು ಎದುರಿಸಲಿದೆ.

ಪತ್ನಿ ದೂರು ಕೊಟ್ಟ ತಕ್ಷಣ ಪತಿಯನ್ನು ಜೈಲಿಗೆ ಕಳುಹಿಸಬೇಡಿ; ಪೊಲೀಸರ ವಿರುದ್ಧ ಹೈಕೋರ್ಟ್‌ ತೀವ್ರ ಆಕ್ರೋಶ

ಬೆಂಗಳೂರು: ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕಾನೂನು ಪ್ರಕ್ರಿಯೆಯನ್ನು ಸಮರ್ಪಕವಾಗಿ ಪಾಲಿಸದೆ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಾಗಲೂರು ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಳೆದ ಏಪ್ರಿಲ್‌ನಿಂದ ಜೈಲಿನಲ್ಲಿದ್ದ ಅರ್ಜಿದಾರರನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಹಾಗೂ ಬಂಧನದಿಂದ ಬಿಡುಗಡೆ ಕೋರಿ ರಾಮಕೃಷ್ಣಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ 12 ವಾರಗಳೊಳಗೆ ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ವಿಚಾರಣೆ ವೇಳೆ ಹಾಜರಾಗಿದ್ದ ತನಿಖಾಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಪೀಠ, ಯಾವ ಪ್ರಕರಣದಲ್ಲಿ ಬಂಧಿಸಬೇಕು, ಯಾವ ಪ್ರಕರಣದಲ್ಲಿ ಬಂಧಿಸಬಾರದು ಎಂಬ ಮೂಲಭೂತ ಅರಿವೂ ಇಲ್ಲವೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೆ ಉತ್ತರಿಸಿದ ತನಿಖಾಧಿಕಾರಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅರ್ಜಿದಾರರು ಹಾಜರಾಗಿರಲಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಜವಾಗಿಯೂ ನೋಟಿಸ್ ನೀಡಲಾಗಿತ್ತೇ ಅಥವಾ ಕೇವಲ ದಾಖಲೆಗಾಗಿ ಸೃಷ್ಟಿಸಲಾಗಿತ್ತೇ ಎಂದು ಪ್ರಶ್ನಿಸಿತು.

ಐಪಿಸಿ ಸೆಕ್ಷನ್ 498ಎ ಅಡಿ ಪತ್ನಿ ದೂರು ನೀಡಿದ ತಕ್ಷಣ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕಾನೂನಿನಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಪಾಲುದಾರಿಕೆ ಒಪ್ಪಂದದಲ್ಲಿ ಸಹಿ ನಕಲಿ ಮಾಡಿರುವ ಆರೋಪವಿದ್ದರೆ ಮಾತ್ರಕ್ಕೆ ಬಂಧಿಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿತು.

“ಜೈಲಿಗೆ ಕಳುಹಿಸುವುದೆಂದರೆ ಆಟವಾಗಿಬಿಟ್ಟಿದೆಯೇ? ಅಪರಾಧ ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಆದರೆ ಅಮಾಯಕರನ್ನು ವಿಚಾರಣೆ ನಡೆಸದೇ ಜೈಲಿಗೆ ಕಳುಹಿಸುವುದು ಅಧಿಕಾರ ದುರುಪಯೋಗ” ಎಂದು ನ್ಯಾಯಪೀಠ ಕಿಡಿಕಾರಿತು.

ಇತ್ತೀಚಿನ ದಿನಗಳಲ್ಲಿ ಪತ್ನಿಯರಿಂದ ದೂರು ಬಂದ ತಕ್ಷಣ ಪೊಲೀಸರು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ ಪತಿಯನ್ನು ನೇರವಾಗಿ ಬಂಧಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಪಾಲಿಸದೆ ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ, “ಪೊಲೀಸರು ಎಂದರೆ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದೀರಾ? ನಿಮ್ಮ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಈ ಬಂಧನದಿಂದ ಅರ್ಜಿದಾರರಿಗೆ ಉಂಟಾದ ಹಾನಿಗೆ ಒಂದು ಲಕ್ಷ ರೂಪಾಯಿ ನಿಮ್ಮ ವೈಯಕ್ತಿಕ ಜೇಬಿನಿಂದಲೇ ಪಾವತಿಸುವ ಪರಿಸ್ಥಿತಿ ಬರಬಹುದು” ಎಂದು ನ್ಯಾಯಪೀಠ ಮೌಖಿಕವಾಗಿ ಎಚ್ಚರಿಕೆ ನೀಡಿತು.

ಪತ್ನಿಯಿಂದ ದೈಹಿಕ ಅಥವಾ ವರದಕ್ಷಿಣೆ ಕಿರುಕುಳದ ಆರೋಪವಿಲ್ಲದಿದ್ದರೂ, ಕೇವಲ ಪಾಲುದಾರಿಕೆ ಒಪ್ಪಂದದಲ್ಲಿ ಸಹಿ ನಕಲಿ ಮಾಡಿದ ಆರೋಪಕ್ಕೆ ಜೈಲಿಗೆ ಕಳುಹಿಸಿರುವುದು ಸರಿಯಲ್ಲ. ಪತ್ನಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣಕ್ಕೆ ಪತಿಯನ್ನು ಬಂಧಿಸಲಾಗಿದೆ ಎಂಬ ಅನುಮಾನ ಮೂಡುತ್ತದೆ. ಬಂಧನಕ್ಕೂ ಮುನ್ನವೇ ನೋಟಿಸ್ ನೀಡಿರುವಂತೆ ದಾಖಲೆ ಸೃಷ್ಟಿಸಿರುವುದು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು.

ಅರ್ಜಿದಾರರು ಈ ಹಿಂದೆ ಒಂದು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು ಎಂಬ ಕಾರಣಕ್ಕೆ ಮತ್ತೆ ಜೈಲಿಗೆ ಕಳುಹಿಸಬೇಕು ಎನ್ನುವ ಮನೋಭಾವ ಸರಿಯಲ್ಲ. ಒಮ್ಮೆ ಜೈಲು ಸೇರಿದ್ದರೆ ಜೀವನಪೂರ್ತಿ ಅಲ್ಲೇ ಇರಬೇಕೆಂಬ ಕಾನೂನು ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ದೂರು ದಾಖಲಾಗಿ ಐದು ತಿಂಗಳಾದ ಬಳಿಕ ಬಂಧಿಸಿರುವುದು, ಮೂರು ತಿಂಗಳು ಯಾವುದೇ ತನಿಖೆ ನಡೆಸದೆ ಇದ್ದದ್ದು ಹಾಗೂ ತನಿಖಾಧಿಕಾರಿ ಬದಲಾದ ತಕ್ಷಣ ನೋಟಿಸ್ ನೀಡಿ ತನಿಖೆಗೆ ಸಹಕರಿಸಿಲ್ಲ ಎಂಬ ನೆಪದಲ್ಲಿ ಬಂಧಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಂಧನಕ್ಕೆ ಅನುಮತಿ ನೀಡುವ ವೇಳೆ ಮ್ಯಾಜಿಸ್ಟ್ರೇಟ್ ಕೂಡ ಸೂಕ್ತ ವಿವೇಚನೆ ಬಳಸಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ

ಸುಮಾರು 12 ವರ್ಷಗಳ ಹಿಂದೆ ರಾಮಕೃಷ್ಣಂ ಹಾಗೂ ದೂರುದಾರರ ವಿವಾಹವಾಗಿತ್ತು. ಬಳಿಕ ದಂಪತಿ ನಡುವೆ ವರದಕ್ಷಿಣೆ ಕಿರುಕುಳ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಇದೇ ವೇಳೆ ಪತಿ ತನ್ನ ಸಹಿಯನ್ನು ನಕಲು ಮಾಡಿ ಬ್ಯಾಂಕ್ ಚಾಲ್ತಿ ಖಾತೆ ತೆರೆದಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.

ನಂತರ ತನಿಖಾಧಿಕಾರಿ ಬದಲಾದ ಬಳಿಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35ರ ಅಡಿಯಲ್ಲಿ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಇದೀಗ ಈ ಬಂಧನವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬಂಧನ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ.

ಕೋತಿಗಳ ದಾಳಿಗೆ ಬೆಚ್ಚಿಬಿದ್ದ ನವವಿವಾಹಿತೆ ಬೆಟ್ಟದಿಂದ ಬಿದ್ದು ಸಾವು: ಪತಿಯ ಕಣ್ಣೆದುರೇ ದುರಂತ

0

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈನಲ್ಲಿ ಕೋತಿಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನವವಿವಾಹಿತೆಯೊಬ್ಬರು ಬೆಟ್ಟದ ತುದಿಯಿಂದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.

ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರೇಶ್ (29) ಅವರೊಂದಿಗೆ ವಿವಾಹವಾಗಿದ್ದ ಅವರು, ಪತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಲು ಕಜುಗುಮಲೈನ ಪ್ರಸಿದ್ಧ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಮುಖ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ದಂಪತಿ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣು ನೀಡಲು ಮುಂದಾಗಿದ್ದರು. ಹಣ್ಣುಗಳಿಗಾಗಿ ಏಕಾಏಕಿ ಹತ್ತಾರು ಕೋತಿಗಳು ಅನಿತಾ ಅವರನ್ನು ಸುತ್ತುವರೆದಿದ್ದು, ಭಯಗೊಂಡ ಅವರು ಹಿಂದೆ ಸರಿಯುವಾಗ ಕಾಲು ಜಾರಿ ಬೆಟ್ಟದ ತುದಿಯಿಂದ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಕಣ್ಣೆದುರೇ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ಪತಿ ಸುರೇಶ್ ಆಘಾತಕ್ಕೊಳಗಾಗಿದ್ದು, ಸ್ಥಳದಲ್ಲಿ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

ರಾಮಮಂದಿರ ಸ್ಫೋಟ ಸಂಚು: ಹರಿಹರ ಶಂಕಿತ ಉಗ್ರನ ವಿಚಾರಣೆಗೆ ಎನ್‌ಐಎ ಎಂಟ್ರಿ

0

ಬೆಂಗಳೂರು: ಅಯೋಧ್ಯೆಯ ರಾಮಮಂದಿರ ಸ್ಫೋಟ ಸಂಚು ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಸುಹೇಲ್ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಶುಕ್ರವಾರ ಹರಿಹರಕ್ಕೆ ಆಗಮಿಸಿದ ಎನ್‌ಐಎ ವಿಶೇಷ ತಂಡವು ಶಂಕಿತ ಉಗ್ರ ಸುಹೇಲ್‌ನನ್ನು ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿ, ಆತನ ಉಗ್ರ ಚಟುವಟಿಕೆಗಳು, ಸಂಪರ್ಕ ಜಾಲ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕಿದೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಮಾಹಿತಿ ನೀಡಿರುವಂತೆ, ವಿಚಾರಣೆ ವೇಳೆ ಸುಹೇಲ್‌ನ ಸಾಮಾಜಿಕ ಜಾಲತಾಣಗಳ ಖಾತೆಗಳು, ಸಂಶಯಾಸ್ಪದ ಇಂಟರ್‌ನೆಟ್ ಚಟುವಟಿಕೆಗಳು, ಬ್ಯಾಂಕ್ ಖಾತೆಗಳ ವಹಿವಾಟು ಹಾಗೂ ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬನ್ನಿಕೋಡು ಗ್ರಾಮದ ಗುಟ್ಯಪ್ಪ ಎಂಬುವವರ ಮನೆಯಲ್ಲಿ ತಂಗಿದ್ದ ಸುಹೇಲ್, ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ 10 ಮಂದಿಯ ತಂಡದಲ್ಲಿದ್ದ. ಆದರೆ ಆ ತಂಡದಲ್ಲಿ ಆತನೇ ಅತ್ಯಂತ ಸಕ್ರಿಯವಾಗಿ ವರ್ತಿಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸ್ಥಳೀಯ ಪೊಲೀಸರು ಹಾಗೂ ಎನ್‌ಐಎ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ ಸುಹೇಲ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಸುಹೇಲ್‌ನ ಅಂತಾರಾಷ್ಟ್ರೀಯ ಉಗ್ರ ಸಂಪರ್ಕ, ದೇಶದ್ರೋಹಿ ಸಂಚು, ಹಣಕಾಸು ಮೂಲಗಳು ಹಾಗೂ ಸಹಚರರ ಜಾಲದ ಕುರಿತು ಆಳವಾದ ತನಿಖೆ ಮುಂದುವರಿದಿದೆ. ಈಗಾಗಲೇ ಹಲವು ಮಹತ್ವದ ಹಾಗೂ ರಹಸ್ಯ ಮಾಹಿತಿಗಳು ಅಧಿಕಾರಿಗಳ ಕೈ ಸೇರಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಹಾಗೂ ರಾಜ್ಯದ ಇತರ ಭಾಗಗಳಲ್ಲೂ ತನಿಖೆ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಗದಗ ಮಠದಲ್ಲಿ ಹೈಡ್ರಾಮಾ: ಶ್ರೀಗಳ ಜೀವ ಬೆದರಿಕೆ ಆರೋಪಕ್ಕೆ ಟ್ರಸ್ಟಿಗಳ ಸ್ಫೋಟಕ ಆರೋಪ

0

ಗದಗ: ವೀರೇಶ್ವರ ಪುಣ್ಯಾಶ್ರಮ ಹಾಗೂ ಪುಟ್ಟರಾಜ ಗವಾಯಿಗಳ ಮಠದಲ್ಲಿ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಮಾಡಿದ್ದ ಆರೋಪಕ್ಕೆ ಮಠದ ಟ್ರಸ್ಟಿಗಳು ತೀವ್ರ ತಿರುಗೇಟು ನೀಡಿದ್ದಾರೆ. ಜೀವ ಬೆದರಿಕೆ ಆರೋಪವನ್ನು ಸಂಪೂರ್ಣ ತಳ್ಳಿಹಾಕಿರುವ ಟ್ರಸ್ಟಿಗಳು, ಪೀಠಾಧಿಪತಿಯವರ ವಿರುದ್ಧವೇ ಜಮೀನು ಮಾರಾಟ, ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಬಹಿರಂಗಪಡಿಸಿದ್ದಾರೆ.

ಟ್ರಸ್ಟಿಗಳಾದ ವಸಂತಗೌಡ, ಶಿವರುದ್ರಪ್ಪ ಇಟಗಿ ಹಾಗೂ ಪ್ರಕಾಶ್ ಬಸರಿಗಿಡದ ಮಾತನಾಡಿ, ನಾವು ಗೂಂಡಾಗಳಲ್ಲ, ರೌಡಿಗಳಲ್ಲ. ನಾಲ್ಕು ದಶಕಗಳಿಂದ ಮಠಕ್ಕೆ ಸೇವೆ ಸಲ್ಲಿಸಿರುವ ಭಕ್ತರು. ಶ್ರೀಗಳು ಯಾರದ್ದೋ ಒತ್ತಡಕ್ಕೆ ಒಳಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಸ್ಟಿ ಶಿವರುದ್ರಪ್ಪ ಇಟಗಿ, ನಾನು ಶ್ರೀಗಳಿಂದ 10 ಲಕ್ಷ ರೂಪಾಯಿ ಹಣ ಕೇಳಿಲ್ಲ. ಬದಲಿಗೆ ನಾನೇ ಮಠಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದೇನೆ. ಮಠದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸಿದ್ದಕ್ಕೆ ನನ್ನ ಧ್ವನಿ ಅಡಗಿಸುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪೀಠಾಧಿಪತಿ ಕಲ್ಲಯ್ಯಜ್ಜನವರು, ತಾವು ಅಧಿಕಾರ ವಹಿಸಿಕೊಂಡಾಗ ಮಠಕ್ಕೆ 59 ಲಕ್ಷ ರೂಪಾಯಿ ಸಾಲವಿತ್ತು. ಅದನ್ನು ತೀರಿಸಿ ನಾಲ್ಕು ಕೋಟಿ ರೂಪಾಯಿ ಬ್ಯಾಂಕ್ ಠೇವಣಿ ನಿರ್ಮಿಸಿದ್ದೇನೆ. ಮಠದ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದ್ದರೂ ಟ್ರಸ್ಟಿಗಳು ಅಪಪ್ರಚಾರ ನಡೆಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು.

 

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಸ್ಟಿಗಳು, ಮಠದ ಶಿಕ್ಷಣ ಸಂಸ್ಥೆಗೆ ಸೇರಿದ 11 ಗುಂಟೆ ಬೆಲೆಬಾಳುವ ಜಮೀನನ್ನು ಶ್ರೀಗಳೇ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಸಂಸ್ಥೆಯ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸತ್ಯ ಸಾಬೀತುಪಡಿಸಲು ಗದ್ದಿಗೆ ಮುಟ್ಟಿ ಆಣೆ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.

ಟ್ರಸ್ಟಿ ಪ್ರಕಾಶ್ ಬಸರಿಗಿಡದ ಮಾತನಾಡಿ, ನಮ್ಮ ಕುಟುಂಬವೇ ಮಠಕ್ಕೆ ಜಮೀನು ದಾನ ಮಾಡಿದೆ. ನಮ್ಮ ಅಜ್ಜನ ಗದ್ದುಗೆ ಬಳಿ ಬಾವಿ ನಿರ್ಮಿಸಲು ಯತ್ನಿಸಿದ್ದನ್ನು ವಿರೋಧಿಸಿದ್ದಕ್ಕೆ ನಮ್ಮ ವಿರುದ್ಧ ದೂರು ನೀಡಲಾಗಿದೆ. ವಾಸ್ತವವಾಗಿ ಶ್ರೀಗಳಿಂದಲೇ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.

ಪೀಠಾಧಿಪತಿ ಮತ್ತು ಟ್ರಸ್ಟಿಗಳ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ವೀರೇಶ್ವರ ಮಠದ ಆಡಳಿತ ವಿವಾದ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಕೆಂಪೇಗೌಡ ಜಯಂತಿಗೆ ಬೆಂಗಳೂರು ಹಸಿರಾಗಿಸಲು ಮಹಾ ಯೋಜನೆ..! BDA ನಿಂದ ಬೃಹತ್ ಅಭಿಯಾನ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇಂದು ಭರ್ಜರಿ ಹಸಿರು ಅಭಿಯಾನ ಆರಂಭಗೊಂಡಿದ್ದು, ಒಂದೇ ದಿನದಲ್ಲಿ 15 ಲಕ್ಷ ಸಸಿ ನೆಡುವ ಬೃಹತ್ ಗುರಿ ನಿಗದಿಪಡಿಸಲಾಗಿದೆ.

ಗಿಡ ನೆಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಉದ್ದೇಶದೊಂದಿಗೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026–30ರ ಅಂಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಅಭಿಯಾನವನ್ನು ಕೈಗೊಂಡಿದೆ. ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು ಹಾಗೂ ಉದ್ಯಾನವನಗಳನ್ನು ಒಳಗೊಂಡಂತೆ ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ ನಡೆಯುತ್ತಿದೆ.

ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ವಿಂಗಡಿಸಲಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಈ ಹಸಿರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಕೇವಲ 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸಸಿ ನೆಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಈ ವೇಳೆ ಕೃಷ್ಣಪಥ ರಸ್ತೆಯ ಲೋಕಾರ್ಪಣೆ ಕೂಡ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡರ 7 ಪುರಜ್ಯೋತಿಗಳನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ಕೆಂಪೇಗೌಡರ ಜಯಂತಿಯ ದಿನವೇ ಈ ಮಹತ್ವಾಕಾಂಕ್ಷಿ ಹಸಿರು ಅಭಿಯಾನ ಆರಂಭವಾಗಿದ್ದು, ಬೆಂಗಳೂರನ್ನು ಹಸಿರಾಗಿಸುವ ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇತ್ತ ಸದಾಶಿವನಗರದಲ್ಲಿಯೂ ಕೆಂಪೇಗೌಡ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಅಶ್ವಥ್ ನಾರಾಯಣ್ ಭಾಗವಹಿಸಿ, ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ..! ಬಿಎಂಆರ್‌ಸಿಎಲ್‌ನಿಂದ ವಿಶೇಷ ಜಾಗೃತಿ ಅಭಿಯಾನ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ.

2024ರಿಂದ ಇಲ್ಲಿವರೆಗೆ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 9 ಘಟನೆಗಳು ವರದಿಯಾಗಿದ್ದು, ಅವುಗಳಲ್ಲಿ ಸುಮಾರು 5 ಮಂದಿ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮೆಟ್ರೋ ನಿಲ್ದಾಣಗಳು ಆತ್ಮಹತ್ಯೆ ಪ್ರವೃತ್ತಿಯ “ಹಾಟ್‌ಸ್ಪಾಟ್” ಆಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದರ ಜೊತೆಗೆ ಪ್ರಯಾಣಿಕರು ಕೂಡ ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪರಿಸ್ಥಿತಿಯನ್ನು ತಡೆಯಲು ಬಿಎಂಆರ್‌ಸಿಎಲ್ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದು, ಕೆಲವು ನಿಲ್ದಾಣಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಜೊತೆಗೆ ಮಾನಸಿಕ ಆರೋಗ್ಯ ಜಾಗೃತಿಗಾಗಿ ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಲಾಗಿದೆ.

ಬಿಎಂಆರ್‌ಸಿಎಲ್ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಡಿಸ್ಪ್ಲೇಗಳು ಮತ್ತು ಸೈನ್‌ಬೋರ್ಡ್‌ಗಳನ್ನು ಅಳವಡಿಸಿದ್ದು, “ಯೋಚನೆ ಬೇಡ, ಚಿಂತೆ ಬಿಡಿ, ಮಾತಾಡಿ, ದಣಿವಾಗುವುದು ಸಹಜ, ಸಹಾಯ ಕೇಳುವುದು ಸಹಜ” ಎಂಬ ಸಂದೇಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಅದೇ ವೇಳೆ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದ್ದು, ಮಾನಸಿಕ ಒತ್ತಡದಲ್ಲಿರುವವರು ಅಥವಾ ದುಡುಕಿನ ನಿರ್ಧಾರಗಳ ಆಲೋಚನೆ ಹೊಂದಿರುವವರು ತಕ್ಷಣ ಸಂಪರ್ಕಿಸಿ ಉಚಿತ ಸಮಾಲೋಚನೆ ಹಾಗೂ ನೆರವು ಪಡೆಯುವಂತೆ ಮನವಿ ಮಾಡಲಾಗಿದೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇಂತಹ ಘಟನೆಗಳನ್ನು ತಡೆಯಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಗದಗದಲ್ಲಿ ಮೀಟರ್ ಬಡ್ಡಿ ದಂಧೆ ಅಟ್ಟಹಾಸ..! ಸಾಲದ ಹಣ ಕೊಡಲಿಲ್ಲವೆಂದು ಮಹಿಳೆಯರನ್ನು ಕೂಡಿ ಹಾಕಿ ಹಲ್ಲೆ?

0

ಗದಗ: ಗದಗ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮತ್ತೆ ಬೆಳಕಿಗೆ ಬಂದಿದೆ.

ಸಾಲದ ವಾರದ ಬಡ್ಡಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರನ್ನು ಮನೆಯೊಳಗೆ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನರಗುಂದ ತಾಲೂಕಿನ ಶಿರೋಳ ಗ್ರಾಮದ ಘಟನೆ ಇದಾಗಿದ್ದು, ಸಂತ್ರಸ್ತ ಮಹಿಳೆಯರಾದ ಬಸವಣ್ಣೆಮ್ಮ ಅಂಗಡಿ ಮತ್ತು ಮಹಾದೇವಿ ಮಠದ ಅವರು ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಕಣ್ಣೀರು ಸುರಿಸಿದ್ದಾರೆ.

ಆರೋಪಗಳ ಪ್ರಕಾರ, ಅದೇ ಗ್ರಾಮದ ಸಿದ್ದಯ್ಯ ಹೊಸಮನಿ ಹಾಗೂ ಆತನ ಪುತ್ರ ವಿನೋದ್ ಹೊಸಮನಿ ಎಂಬವರು ಈ ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿದ್ದು, ಮಹಾದೇವಿ ಮಠದ ಅವರಿಗೆ ₹1.50 ಲಕ್ಷ ಸಾಲ ನೀಡಿ ವಾರಕ್ಕೆ ₹4,500 ಬಡ್ಡಿ ವಸೂಲಿ ಮಾಡುತ್ತಿದ್ದರೆ, ಬಸವಣ್ಣೆಮ್ಮ ಅವರಿಗೆ ₹3 ಲಕ್ಷ ಸಾಲ ನೀಡಿ ವಾರಕ್ಕೆ ₹9,000 ಬಡ್ಡಿ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ.

ಕಳೆದ ಕೆಲವು ತಿಂಗಳಿಂದ ಆರ್ಥಿಕ ಸಂಕಷ್ಟದಿಂದಾಗಿ ಬಡ್ಡಿ ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಮನೆಯೊಳಗೆ ಎಳೆದುಕೊಂಡು ಹೋಗಿ, ಬಾಗಿಲು ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಮಹಿಳೆಯರು ನರಗುಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೂ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಬಳಿಕ ಅವರು ಗದಗ ಎಸ್ಪಿ ಕಚೇರಿಗೆ ತೆರಳಿ ರಕ್ಷಣೆ ಮತ್ತು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ವಿರುದ್ಧ ಈ ಹಿಂದೆಯೂ ಹಲವು ದಾಳಿಗಳು ನಡೆದಿದ್ದರೂ ಗ್ರಾಮೀಣ ಭಾಗಗಳಲ್ಲಿ ಇಂತಹ ದಂಧೆಗಳು ಮುಂದುವರಿಯುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಸದ್ಯ ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.