Home Blog Page 260

ಜನಾಂಗಕ್ಕೆ ಇತಿಹಾಸದ ಅರಿವು ಅಗತ್ಯ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಲು ದೊಡ್ಡದು. ಬಾಳೆಗೊಂದು ಗೊನೆಯಿರುವಂತೆ ಯುವಕರ ಬಾಳಿಗೊಂದು ಗುರಿಯಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‌ನಿಂದ ಸಂಘಟಿಸಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ, ಜನ ಜಾಗೃತಿ ಧರ್ಮ ಸಮಾರಂಭದ 3ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಮಾತ್ರ ಬೆಳೆಯುತ್ತಲೇ ಇವೆ. ದೈಹಿಕವಾಗಿ ನಾವೆಷ್ಟೇ ಸದೃಢವಾಗಿದ್ದರೂ ಮನಸ್ಸು ದೃಢವಾಗಿರದಿದ್ದರೆ ಯಾವ ಪ್ರಯೋಜನವು ಇಲ್ಲ. ಬೆಳೆಯುವ ಯುವ ಜನಾಂಗದಲ್ಲಿ ಕರ್ತವ್ಯಶೀಲತೆ ಮತ್ತು ಪ್ರಾಮಾಣಿಕತೆ ಬೆಳೆದು ಬರುವ ಅವಶ್ಯಕತೆಯಿದೆ. ಯುವ ಜನಾಂಗಕ್ಕೆ ಇತಿಹಾಸದ ಅರಿವು ಅಗತ್ಯ. ಯುವ ಜನಾಂಗ ಈ ರಾಷ್ಟ್ರದ ಅಮೂಲ್ಯ ಸಂಪತ್ತು. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಮಾಜ ಕಟ್ಟಿ ಬೆಳೆಸುವುದರಲ್ಲಿ ಯುವಕರು ಶ್ರಮಿಸುವ ಅವಶ್ಯಕತೆಯಿದೆ. ಯುವಾವಸ್ಥೆಯಲ್ಲಿ ಧರ್ಮಾಚರಣೆ ಪಾಲಿಸಿದರೆ ಜೀವನ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಯುವ ಸಾಹಿತಿ, ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಮಾತನಾಡಿ, ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಆ ಶಕ್ತಿಯನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೆ ಬಲು ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕೊಡುವ ಕೆಲಸ ಎಲ್ಲರೂ ಮಾಡಬೇಕಾಗಿದೆ. ವಿನಯವಿಲ್ಲದ ವಿದ್ಯೆ, ಪ್ರತಿಭೆಯಿಲ್ಲದ ವ್ಯಕ್ತಿಯ ಜೀವನ ವ್ಯರ್ಥ. ಕಾಯಕದ ಮೂಲಕ ಜೀವನದಲ್ಲಿ ಕಳಾ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಮಂಜುಳಾ ಲೋಕೇಶ್, ಟಿ.ಸಿ. ಓಹಿಲೇಶ್ವರ, ಜಿ.ಮಲ್ಲಿಕಾರ್ಜುನಯ್ಯ, ಗಂಗಾಧರ ಶಾಸ್ತ್ರಿಗಳು, ಸಿ.ವಿ. ಮಹದೇವಯ್ಯ, ಎಂ.ಎಸ್. ಉಮೇಶ್, ಹೆಚ್.ನೀಲೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿ.ನಾಗರಾಜು ಸೇರಿದಂತೆ ಹಲವಾರು ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗೌರವ ಗುರುರಕ್ಷೆ ಸ್ವೀಕರಿಸಿದರು.

ತೆವಡೆಹಳ್ಳಿ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಜಿ.ಎಸ್. ಸಿದ್ಧರಾಜು ಸ್ವಾಗತಿಸಿದರು. ಓಂಕಾರಸ್ವಾಮಿ ನಿರೂಪಿಸಿದರು. ಆರ್.ಶಿವಕುಮಾರ್ ಮತ್ತು ಕುಟುಂಬ ವರ್ಗದವರು ಪೂಜಾ ಸೇವೆಯನ್ನು ಸಲ್ಲಿಸಿದರು.

ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಂಸದ ಜಿ.ಎಸ್. ಬಸವರಾಜ ಮಾತನಾಡಿ, ಸುಖ-ಶಾಂತಿಯ ಬದುಕಿಗೆ ಧರ್ಮಾಚರಣೆಯೊಂದೇ ಮೂಲ. ಭಾರತೀಯ ಆದರ್ಶ ಸಂಸ್ಕೃತಿ ಸಭ್ಯತೆ ಜನ ಮರೆಯುತ್ತಿರುವುದರಿಂದ ಅನೇಕ ತಾಪತ್ರಯಗಳನ್ನು ಎದುರಿಸಬೇಕಾಗಿದೆ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಉತ್ಕೃಷ್ಟವಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದೆ ಎಂದರು.

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸಹಕಾರಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ 

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಉತ್ತಮ ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ಅವರು ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮೊದಲಿನಿಂದಲೂ ಸಿರಿಧಾನ್ಯಕ್ಕೆ ಬಳಕೆಯಿಂದ ಉತ್ತಮ ಆರೋಗ್ಯವಂತ ಬದುಕು ಸಾಗಿಸುತ್ತಿದ್ದರು. ಇಂದು ಆಧುನಿಕ ಭರಾಟೆಯಲ್ಲಿ ಸಿರಿಧಾನ್ಯ ಬಳಕೆ ಕಡಿಮೆಯಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಸಿರಿಧಾನ್ಯ ನಿತ್ಯ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.

ಗದಗ ಜಂಟಿ ಕೃಷಿ ಅಧಿಕಾರಿ ಚೇತನಾ ಪಾಟೀಲ ಮಾತನಾಡಿ, ಜನರ ಆರೋಗ್ಯ ಕಾಪಾಡುವಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಖಾದ್ಯಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಕಾರಿ ಎಂದರು.

ಗದಗ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ ಮಾತನಾಡಿ, ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಗೊರಲು ಇವುಗಳಲ್ಲಿ ಸಾಕಷ್ಟು ಪೋಷಕಾಂಶಗಳು ಅಡಕವಾಗಿರುವುದರಿಂದ ನಿತ್ಯ ಆಹಾರದಲ್ಲಿ ಬಳಸಿದಲ್ಲಿ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.

ಪ.ಪA ಆವರಣದಿಂದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿರಿಧಾನ್ಯಗಳ ಕುರಿತು ಜಾಥಾ ಹಮ್ಮಿಕೊಳ್ಳಲಾಯಿತು. ಎಸ್.ಎಂ. ನೀಲಗುಂದ, ಕೆ.ಎಲ್. ಕರಿಗೌಡರ, ಜೆಡಿಎ ಚೇತನಾ ಪಾಟೀಲ, ಡಿಡಿಎ ಜಿ.ಎಸ್. ಸ್ಪೂರ್ತಿ, ಎಡಿ ಮಲ್ಲಯ್ಯ ಕೊರವಣ್ಣವರ, ಎಸ್.ಸಿ. ಬಡ್ನಿ ಹಾಗೂ ಜಿಲ್ಲಾ ಕೃಷಿ ಇಲಾಖೆ ಸಿಬ್ಬಂದಿಗಳು ಇದ್ದರು.

ರೈತ ಸಂತೆಯಲ್ಲಿ ಕೃಷಿ ಉತ್ಪನ್ನಗಳಿಗೆ ಮನಸೋತ ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ಸಂತೆಯಲ್ಲಿ ಮಿಲ್ಕಿ ಮಶ್ರೂಮ್, ಬೇಲದ ಹಣ್ಣು, ತುಪ್ಪ, ಅವರೇಕಾಯಿ ತಿನಿಸು, ಅವರೆಕಾಯಿ ಬಿಡಿಸುವ ಯಂತ್ರ, ನಾಟಿ ಬೆಲ್ಲ, ಸೀಬೆ ಹಣ್ಣುಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನಸೋತರು.

ರೈತ ಸಂತೆ ಕಾರ್ಯಕ್ರಮದಲ್ಲಿ ರೈತರ ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಖುದ್ದಾಗಿ ಭೇಟಿ ನೀಡಿದ ಶಿವಕುಮಾರ್ ಅವರು ರೈತರೊಂದಿಗೆ ಮಾತುಕತೆ ನಡೆಸಿದರು. ಅವರ ಉತ್ಪನ್ನಗಳ ಮಾಹಿತಿ ಪಡೆದರು. ನಾಟಿ ಬೆಲ್ಲ ಸೇರಿದಂತೆ ಕೆಲವು ತಿನಿಸುಗಳನ್ನು ಸವಿದರು. ಖರೀದಿ ಮಾಡಿದರು.

ರೈತರೊಬ್ಬರು ಬೇಲ್ದಣ್ಣಿನ ಜ್ಯೂಸ್ ಮಾಡಿ ತಂದು ಕೊಟ್ಟಾಗ, ಸಂತೋಷಗೊಂಡ ಶಿವಕುಮಾರ್ ಅವರು, “ಬೇಲ್ದಣ್ಣು ಎಂದರೆ ನನಗೆ ಪಂಚಪ್ರಾಣ. ಬೇಲದ ಹಣ್ಣುಗಳನ್ನು ನಮ್ಮ ಮನೆಗೂ ಕಳುಹಿಸಿಕೊಡಿ, ಮನೆಯಲ್ಲಿ ಎಲ್ಲರೂ ಸವಿಯುತ್ತೇವೆ” ಎಂದು ಹೇಳಿದರು.

ಇನ್ನು ಕೃಷಿ ವಿವಿ ಅವರು ಕಂಡು ಹಿಡಿದಿರುವ ಅವರೆಕಾಯಿ ಬಿಡಿಸುವ ಯಂತ್ರವನ್ನು ಪರಿಶೀಲಿಸಿದ ಶಿವಕುಮಾರ್ ಅವರು ಅಲ್ಲೇ ನಿಂತು ಅವರೆಕಾಯಿ ಬಿಡಿಸುವ ಯಂತ್ರದ ಚಮತ್ಕಾರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ನಾಗಮಂಗಲ ತಾಲ್ಲೂಕಿನ ರೈತರು ಸೇರಿ ಸಾವಯವ ಪದ್ಧತಿ ಮೂಲಕ ಬೆಳೆದ ವಿವಿಧ ರೀತಿಯ ಅಣಬೆಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವುದನ್ನು ಪರಿಶೀಲಿಸಿದರು. ಮಿಲ್ಕಿ ಮಶ್ರೂಮ್, ಬಟನ್ ಮಶ್ರೂಮ್ ಹಾಗೂ ಆಯಿಸ್ಟರ್ ಮಶ್ರೂಮ್ ಗಳನ್ನು ಖರೀದಿ ಮಾಡಿದರು.ಮತ್ತೊಬ್ಬರು ತಂದು ಕೊಟ್ಟ ನಾಟಿ ಹಸುವಿನ ತುಪ್ಪವನ್ನು ಬಹಳ ಸಂತೋಷದಿಂದ ಸ್ವೀಕರಿಸಿದರು. ಬೇಕಾದಾಗ ತರಿಸಿಕೊಳ್ಳುವುದಾಗಿ ಹೇಳಿ ಅವರ ಫೋನ್ ನಂಬರ್ ಕೂಡ ಪಡೆದರು.

ಜನವರಿ 5 ರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ: CM ಸಿದ್ದರಾಮಯ್ಯ

0

ನವದೆಹಲಿ: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಲಾಗಿದ್ದು ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಸರ್ಕಾರಿ ಜಮೀನು ಒತ್ತುವರಿ ತೆರವು:
ಮಾನವೀಯತೆಯಿಂದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಬೆಂಗಳೂರಿನ ಯಲಹಂಕದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ ನ ವಸತಿಗಳನ್ನು ನೆಲಸಮಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಆ ಪ್ರದೇಶ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಪ್ರದೇಶವಾಗಿದ್ದು, ಅದು ಜನವಸತಿಗೆ ಸೂಕ್ತವಾದ ಪ್ರದೇಶವಲ್ಲ.

ಆದ್ದರಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನೆಲೆಸಿದ್ದವರಿಗೆ ನೋಟೀಸ್ ನೀಡಿ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ಸರ್ಕಾರದ ಸೂಚನೆಗೆ ಮಣಿಯದೇ ಇದ್ದ ಕಾರಣ, ಒತ್ತುವರಿಯನ್ನು ತೆರವುಗೊಳಿಸ ಲಾಗಿದೆ. ಬಹುತೇಕ ಜನರು ವಲಸಿಗರಾಗಿದ್ದು, ಮಾನವೀಯತೆಯ ದೃಷ್ಟಿಯಿಂದ ನಿರಾಶ್ರಿತರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

“ಈ ಬಾರಿ ಮುಲಾಜೇ ಇಲ್ಲ, ಸಿಕ್ಕರೆ ಕಠಿಣ ಕ್ರಮ: ಪೈರಸಿಗೆ ಕಿಚ್ಚನ ಎಚ್ಚರಿಕೆ

ಡಿ.25ರಂದು ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದರೂ, ಪೈರಸಿ ಸಮಸ್ಯೆ ಮತ್ತೆ ತಲೆದೋರಿದೆ. ಎರಡು ದಿನಗಳಲ್ಲೇ 9 ಸಾವಿರಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ತೆಗೆಸಿರುವುದು ಚಿತ್ರತಂಡಕ್ಕೆ ಶಾಕ್ ನೀಡಿದೆ.

ಈ ಬಗ್ಗೆ ಮಾತನಾಡಿದ ಸುದೀಪ್, “ಟೀಕೆಗಳಿಗೆ ಉತ್ತರ ಕೊಡೋಕೆ ನಾನು ಬಂದಿಲ್ಲ. ಇಂಟಲಿಜೆನ್ಸ್ ಅಂದ್ರೆ ಸಿಲ್ಲಿ ಆಗಿ ಮಾತಾಡೋದಲ್ಲ. ನಮಗೂ ಒಂದು ಇಂಟಲಿಜೆನ್ಸ್ ಇದೆ” ಎಂದು ತಿರುಗೇಟು ನೀಡಿದ್ದಾರೆ.

ಸಿನಿಮಾ ರಕ್ಷಿಸಿಕೊಳ್ಳುವ ಬಗ್ಗೆ ಮಾಹಿತಿ ಬಂದ ತಕ್ಷಣವೇ 48 ಗಂಟೆಗಳ ಮುಂಚೆಯೇ ಪೈರಸಿ ಬಗ್ಗೆ ವಾರ್ನ್ ಮಾಡಿದ್ದೆ ಎಂದು ಹೇಳಿದ ಸುದೀಪ್, ಆ ಮಾತು ತಪ್ಪಾಗಿ ಹರಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿನ ಅನುಭವಗಳಿಂದ ಪಾಠ ಕಲಿತಿರುವ ಚಿತ್ರತಂಡ, ಈ ಬಾರಿ ಪೈರಸಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಕೋಟಿ ಕೋಟಿ ಬಜೆಟ್ ಹಾಕಿ ಮಾಡಿದ ಸಿನಿಮಾಗಳಿಗೆ ಪೈರಸಿ ದೊಡ್ಡ ಅನ್ಯಾಯ ಎಂದು ಸುದೀಪ್ ಮತ್ತೆ ಒತ್ತಿ ಹೇಳಿದ್ದಾರೆ.

ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿ.ವೈ.ವಿಜಯೇಂದ್ರ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಗೊಂದಲದ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರ- ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಕುರಿತು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ.

ಅಪಪ್ರಚಾರದಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಭಕ್ತಾದಿಗಳಿಗೆ ಆದ ಮಾನಸಿಕ ಕಿರುಕುಳದ ಚರ್ಚೆಯೂ ಆಗಿದೆ ಎಂದರು. ಅರ್ಬನ್ ನಕ್ಸಲರ ಕೋರಿಕೆ ಮೇರೆಗೆ ಮುಖ್ಯಮಂತ್ರಿ ರಾತ್ರೋರಾತ್ರಿ ಎಸ್.ಐ.ಟಿ. ರಚಿಸಿದ್ದರು. ನಾವು ಕೂಡ ಧರ್ಮಸ್ಥಳ ಚಲೋ ಮೂಲಕ ಜಾಗೃತಿ, ಸರಕಾರದ ಬೇಜವಾಬ್ದಾರಿತನದ ರಾಜ್ಯದ ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಹಾದಿಬೀದಿಯಲ್ಲಿ ಹೋಗುವವರ ಮಾತು ಕೇಳಿ ಮುಖ್ಯಮಂತ್ರಿಗಳು ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ತೀರ್ಮಾನ ಮಾಡಿದ್ದಾರಲ್ಲವೇ? ಅಪಪ್ರಚಾರಕ್ಕೆ ಬೆಲೆ ಕಟ್ಟುವವರು ಯಾರು? ಹಿಂದೂ ಭಾವನೆಗೆ ಧಕ್ಕೆ ತಂದ ಮುಖ್ಯಮಂತ್ರಿಗಳು ಇವತ್ತಿಗೂ ಕ್ಷಮೆ ಯಾಚಿಸಿಲ್ಲ. ಬದಲಾಗಿ ತಾವು ಮಾಡಿದ್ದೇ ಸರಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಡಿ ಬುರುಡೆ ಗ್ಯಾಂಗ್ ನೆಪ ಮಾತ್ರ. ಷಡ್ಯಂತ್ರದ ಹಿಂದಿನ ದುಷ್ಟ ಶಕ್ತಿಗಳು ಯಾರೆಂದು ಬಯಲಾಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ಸಿನವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಸದನ ನಡೆಯುವಾಗ ದ್ವೇಷ ಭಾಷಣ ಸಂಬಂಧಿ ಮಸೂದೆ ತಂದು ಚರ್ಚೆಗೂ ಅವಕಾಶ ಕೊಡದೆ ಮಂಜೂರು ಮಾಡಿದ್ದಾರೆ. ಇದೊಂದು ದುಸ್ಸಾಹಸ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಬಿಜೆಪಿ, ಜೆಡಿಎಸ್, ಖಾಸಗಿ ವ್ಯಕ್ತಿಗಳು, ಮಾಧ್ಯಮದವರು ಟೀಕಿಸದಂತೆ ಮಸೂದೆ ತಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದರೆ ಒದ್ದು 9-10 ವರ್ಷ ಒಳಗೆ ಹಾಕುವ ಷಡ್ಯಂತ್ರವನ್ನು ಸರಕಾರ ಮಾಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡಿದ್ದರು. ಆ ಕರಾಳ ದಿನ ಮರುಕಳಿಸುವ ಕಾಯ್ದೆಯನ್ನು ಸರಕಾರ ತಂದಿದೆ ಎಂದರು. ಇದು ಅಸಹಿಷ್ಣುತೆಯ ಪ್ರತೀಕ. ಪ್ರಜಾಪ್ರಭುತ್ವದ ಕಗ್ಗೊಲೆ ಇದು ಎಂದು ಟೀಕಿಸಿದರು.

ಬಿಗ್‌ ಬಾಸ್‌ ಮನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈ ವಾರ ಇಬ್ಬರು ಸ್ಪರ್ಧಿಗಳಿಗೆ ವಿದಾಯ?

ಬಿಗ್ ಬಾಸ್ ಮನೆಯೊಳಗೆ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಘೋಷಣೆ ಮಾಡಿದ್ದು, ಮನೆಯ ವಾತಾವರಣವೇ ತಿರುಗಿಬಿದ್ದಿದೆ.

ಕಳೆದ ಎರಡು ವಾರಗಳಿಂದ ಯಾವುದೇ ಎಲಿಮಿನೇಷನ್ ಇರಲಿಲ್ಲ. ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್‌ಗೆ ಕಳಿಸಿ ಟ್ವಿಸ್ಟ್ ನೀಡಲಾಗಿತ್ತು. ನಂತರ ಚೈತ್ರಾ ಮತ್ತು ರಜತ್ ಎಲಿಮಿನೇಟ್ ಆದರು. ಆದರೆ, ಅವರು ಅತಿಥಿಗಳು ಎಂದು ಕಿಚ್ಚ ಸುದೀಪ್ ತಿಳಿಸಿ, ಮನೆಮಂದಿಗೆ ಮತ್ತೊಮ್ಮೆ ಶಾಕ್ ನೀಡಿದ್ದರು.

ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ನಿರ್ದೇಶಕ ಪ್ರೇಮ್ ಮತ್ತು ರೀಷ್ಮಾ ನಾಣಯ್ಯ ಅತಿಥಿಗಳಾಗಿ ಆಗಮಿಸಿದ್ದು, ಸ್ಪರ್ಧಿಗಳೊಂದಿಗೆ ಎಂಜಾಯ್ ಮಾಡಿದ್ದಾರೆ. “ಯಾರನ್ನ ಉಳಿಸಬೇಕು, ಯಾರನ್ನ ಹೊರಗೆ ಕಳಿಸಬೇಕು ಅಂತೀರೋ ಅವರನ್ನು ಕರ್ಕೊಂಡು ಹೋಗ್ತೀವಿ” ಎಂದು ಪ್ರೇಮ್ ಪ್ರಶ್ನಿಸಿದ್ದು, ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಿಸಿದೆ.

ಇನ್ನೂ ಬಿಗ್ ಬಾಸ್ ಸ್ಪಷ್ಟಪಡಿಸಿದ್ದು, ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿಗಳಿಗೆ ವಿದಾಯ ಹೇಳುವ ಅವಕಾಶವೂ ಇರುವುದಿಲ್ಲ. ಸ್ಪಂದನಾ, ಧ್ರುವಂತ್, ಸೂರಜ್ ಮತ್ತು ರಾಷಿಕಾ ನಾಮಿನೇಷನ್‌ನಲ್ಲಿ ಇದ್ದು, ಯಾರು ಮನೆಗೆ ವಿದಾಯ ಹೇಳುತ್ತಾರೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

“ಪ್ರತಿಕ್ರಿಯಿಸಿದ್ರೆ ನಾವು ಚೀಪ್ ಆಗ್ತೀವಿ”: ಟ್ರೋಲ್‌ಗಳಿಗೆ ಕಿಚ್ಚನ ಖಡಕ್ ಉತ್ತರ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪೂರಕವಾಗಿರುವಷ್ಟೇ ಅಪಾಯಕಾರಿಯಾಗಿಯೂ ಪರಿಣಮಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ಸೆಲೆಬ್ರಿಟಿಗಳು ಮಾತ್ರವಲ್ಲ, ಅವರ ಕುಟುಂಬಸ್ಥರನ್ನೂ ಗುರಿಯಾಗಿಸಿಕೊಂಡು ದುರುಳರು ಅಶ್ಲೀಲ ಸಂದೇಶಗಳು, ಕೊಳಕು ಭಾಷೆ ಹಾಗೂ ನೆಗೆಟಿವ್ ಟ್ರೋಲ್‌ಗಳಿಗೆ ಇಳಿಯುತ್ತಿದ್ದಾರೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಹಾಗೂ ಪತ್ನಿಯನ್ನು ಟಾರ್ಗೆಟ್ ಮಾಡಿ ಕೆಟ್ಟ ಮೆಸೇಜ್‌ಗಳು ಹರಿದಾಡಿದ್ದವು. ಈ ಬಗ್ಗೆ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಕಿತ್ತೊಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅದಕ್ಕೆ ಪ್ರತಿಕ್ರಿಯಿಸಿದರೆ ನಾವೇ ಚೀಪ್ ಆಗ್ತೀವಿ. ನೆಗೆಟಿವ್ ಟ್ರೋಲ್ ಮಾಡುವವರ ಬಗ್ಗೆ ಮಾತಾಡಿ ನನ್ನ ಸಮಯವನ್ನು ಯಾಕೆ ವ್ಯರ್ಥ ಮಾಡಿಕೊಳ್ಳಲಿ ಎಂದು ಸುದೀಪ್ ಹೇಳಿದ್ದಾರೆ. ಸೆಲೆಬ್ರೇಷನ್, ಕನ್ನಡ ನಾಡಿನ ಜನರ ಪ್ರೀತಿ ಮತ್ತು ತಾಯಂದಿರ ಮೆಚ್ಚುಗೆ ಬಗ್ಗೆ ಮಾತನಾಡೋಣ ಎಂದಿದ್ದಾರೆ.

ನನ್ನ ಮಗಳು ನಾನು ಎದುರಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಎದುರಿಸಬಲ್ಲಳು, ನನ್ನಿಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂಬ ನಂಬಿಕೆ ನನಗಿದೆ. ಕನ್ನಡ ಇಂಡಸ್ಟ್ರಿ ಅವಳನ್ನು ಸ್ವಾಗತಿಸಿದೆ, ಅವಳು ಹಾಡಿರುವ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹುಲಿ ದಾಳಿಗೆ ವಾಚರ್ ಬಲಿ: ಪರಿಹಾರ ಹಾಗೂ ಉದ್ಯೋಗಕ್ಕೆ ಕುಟುಂಬಸ್ಥರ ಒತ್ತಾಯ

0

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿಗೆ ವಾಚರ್ ಬಲಿಯಾದ ಘಟನೆ ಸಂಬಂಧ ಮೃತನ ಕುಟುಂಬಸ್ಥರು ಸೂಕ್ತ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದಾರೆ.

ಹುಲಿ ದಾಳಿಗೆ ಬಲಿಯಾದ ವಾಚರ್ ಸಣ್ಣಹೈದ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ನಿರಾಕರಿಸಿದ್ದು, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಪ್ರಭಾಕರ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಳಿಕ ಅರಣ್ಯ ಇಲಾಖೆ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರದ ಭರವಸೆ ನೀಡಲಾಗಿದ್ದರೂ, ಕುಟುಂಬಸ್ಥರು ಇದಕ್ಕೆ ಒಪ್ಪದೇ, ಪರಿಹಾರದ ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಉದ್ಯೋಗ ಹಾಗೂ ಶಾಶ್ವತ ಪರಿಹಾರ ಘೋಷಿಸುವವರೆಗೆ ಮೃತದೇಹವನ್ನು ಪಡೆಯುವುದಿಲ್ಲ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ವೈದ್ಯರ ವಿಲೀನಕ್ಕೆ ಆರೋಗ್ಯ ಇಲಾಖೆ ಪ್ಲ್ಯಾನ್: ಆರೋಗ್ಯ ಕೇಂದ್ರಗಳಿಂದ ತಾಲೂಕಾಸ್ಪತ್ರೆಗಳಿಗೆ ವರ್ಗಾಯಿಸಲು ಸಿದ್ಧತೆ

0

ಬೆಂಗಳೂರು: ಶಿಕ್ಷಕರ ಕೊರತೆ ನಿವಾರಣೆಗೆ ಸರ್ಕಾರಿ ಶಾಲೆಗಳ ವಿಲೀನಕ್ಕೆ ಮುಂದಾಗಿದ್ದ ಶಿಕ್ಷಣ ಇಲಾಖೆ ಬಳಿಕ ಇದೀಗ ಆರೋಗ್ಯ ಇಲಾಖೆ ಕೂಡ ವೈದ್ಯರ ವಿಲೀನ ಪ್ರಕ್ರಿಯೆಗೆ ಕೈ ಹಾಕಿದೆ. ರಾಜ್ಯದ ಸುಮಾರು 270 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದ್ದು, ಇದರಿಂದ ಗ್ರಾಮೀಣ ಜನರಿಗೆ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ 270ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿವೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಆಸ್ಪತ್ರೆಗಳು ಪ್ರಮುಖ ಆಸರೆಯಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಯ ಪ್ರಮಾಣ ಕಡಿಮೆಯಾಗಿರುವುದನ್ನು ಇಲಾಖೆ ಗಮನಿಸಿದೆ.

ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು (ಅನಸ್ತೇಶಿಯಾ), ಮಕ್ಕಳ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಬಂದಿದೆ. ಈ ಸಂಬಂಧ ಎಲ್ಲ ಆಸ್ಪತ್ರೆಗಳ ಮಾಸಿಕ ಹೆರಿಗೆ ವರದಿಯನ್ನು ಈಗಾಗಲೇ ಸಂಗ್ರಹಿಸಿ ಪರಿಶೀಲನೆ ನಡೆಸಲಾಗಿದೆ.

ಇದರಿಂದ ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರು, ಹೆರಿಗೆ ವೈದ್ಯರು ಮತ್ತು ಅನಸ್ತೇಶಿಯಾ ತಜ್ಞರ ಲಭ್ಯತೆ ಅನುಮಾನವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಆರೋಗ್ಯ ಇಲಾಖೆ ಈಗಾಗಲೇ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿದ್ದು, ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್‌ಗಳು ಹಾಗೂ ಜನರಲ್ ಮೆಡಿಸಿನ್ ವೈದ್ಯರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಡಿಮೆ ಕಾರ್ಯಕ್ಷಮತೆಯ ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ಸೇವೆ ಒಗ್ಗೂಡಿಸುವ ಯೋಜನೆ ರೂಪಿಸಲಾಗಿದೆ.

ಈ ಕ್ರಮದಿಂದ ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ಬಲಪಡಿಸುವ ಉದ್ದೇಶ ಇದ್ದರೂ, ಗ್ರಾಮೀಣ ಭಾಗದ ಜನರಿಗೆ ಸಮೀಪದ ಆರೋಗ್ಯ ಸೇವೆ ಕಡಿಮೆಯಾಗುವ ಭೀತಿ ಎದುರಾಗಿದೆ.

error: Content is protected !!