Home Blog Page 261

ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿ.ವೈ.ವಿಜಯೇಂದ್ರ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಗೊಂದಲದ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿಚಾರ- ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಕುರಿತು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ.

ಅಪಪ್ರಚಾರದಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಭಕ್ತಾದಿಗಳಿಗೆ ಆದ ಮಾನಸಿಕ ಕಿರುಕುಳದ ಚರ್ಚೆಯೂ ಆಗಿದೆ ಎಂದರು. ಅರ್ಬನ್ ನಕ್ಸಲರ ಕೋರಿಕೆ ಮೇರೆಗೆ ಮುಖ್ಯಮಂತ್ರಿ ರಾತ್ರೋರಾತ್ರಿ ಎಸ್.ಐ.ಟಿ. ರಚಿಸಿದ್ದರು. ನಾವು ಕೂಡ ಧರ್ಮಸ್ಥಳ ಚಲೋ ಮೂಲಕ ಜಾಗೃತಿ, ಸರಕಾರದ ಬೇಜವಾಬ್ದಾರಿತನದ ರಾಜ್ಯದ ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಹಾದಿಬೀದಿಯಲ್ಲಿ ಹೋಗುವವರ ಮಾತು ಕೇಳಿ ಮುಖ್ಯಮಂತ್ರಿಗಳು ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ತೀರ್ಮಾನ ಮಾಡಿದ್ದಾರಲ್ಲವೇ? ಅಪಪ್ರಚಾರಕ್ಕೆ ಬೆಲೆ ಕಟ್ಟುವವರು ಯಾರು? ಹಿಂದೂ ಭಾವನೆಗೆ ಧಕ್ಕೆ ತಂದ ಮುಖ್ಯಮಂತ್ರಿಗಳು ಇವತ್ತಿಗೂ ಕ್ಷಮೆ ಯಾಚಿಸಿಲ್ಲ. ಬದಲಾಗಿ ತಾವು ಮಾಡಿದ್ದೇ ಸರಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಡಿ ಬುರುಡೆ ಗ್ಯಾಂಗ್ ನೆಪ ಮಾತ್ರ. ಷಡ್ಯಂತ್ರದ ಹಿಂದಿನ ದುಷ್ಟ ಶಕ್ತಿಗಳು ಯಾರೆಂದು ಬಯಲಾಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ಸಿನವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಸದನ ನಡೆಯುವಾಗ ದ್ವೇಷ ಭಾಷಣ ಸಂಬಂಧಿ ಮಸೂದೆ ತಂದು ಚರ್ಚೆಗೂ ಅವಕಾಶ ಕೊಡದೆ ಮಂಜೂರು ಮಾಡಿದ್ದಾರೆ. ಇದೊಂದು ದುಸ್ಸಾಹಸ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಬಿಜೆಪಿ, ಜೆಡಿಎಸ್, ಖಾಸಗಿ ವ್ಯಕ್ತಿಗಳು, ಮಾಧ್ಯಮದವರು ಟೀಕಿಸದಂತೆ ಮಸೂದೆ ತಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದರೆ ಒದ್ದು 9-10 ವರ್ಷ ಒಳಗೆ ಹಾಕುವ ಷಡ್ಯಂತ್ರವನ್ನು ಸರಕಾರ ಮಾಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡಿದ್ದರು. ಆ ಕರಾಳ ದಿನ ಮರುಕಳಿಸುವ ಕಾಯ್ದೆಯನ್ನು ಸರಕಾರ ತಂದಿದೆ ಎಂದರು. ಇದು ಅಸಹಿಷ್ಣುತೆಯ ಪ್ರತೀಕ. ಪ್ರಜಾಪ್ರಭುತ್ವದ ಕಗ್ಗೊಲೆ ಇದು ಎಂದು ಟೀಕಿಸಿದರು.

ಬಿಗ್‌ ಬಾಸ್‌ ಮನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈ ವಾರ ಇಬ್ಬರು ಸ್ಪರ್ಧಿಗಳಿಗೆ ವಿದಾಯ?

ಬಿಗ್ ಬಾಸ್ ಮನೆಯೊಳಗೆ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಘೋಷಣೆ ಮಾಡಿದ್ದು, ಮನೆಯ ವಾತಾವರಣವೇ ತಿರುಗಿಬಿದ್ದಿದೆ.

ಕಳೆದ ಎರಡು ವಾರಗಳಿಂದ ಯಾವುದೇ ಎಲಿಮಿನೇಷನ್ ಇರಲಿಲ್ಲ. ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್‌ಗೆ ಕಳಿಸಿ ಟ್ವಿಸ್ಟ್ ನೀಡಲಾಗಿತ್ತು. ನಂತರ ಚೈತ್ರಾ ಮತ್ತು ರಜತ್ ಎಲಿಮಿನೇಟ್ ಆದರು. ಆದರೆ, ಅವರು ಅತಿಥಿಗಳು ಎಂದು ಕಿಚ್ಚ ಸುದೀಪ್ ತಿಳಿಸಿ, ಮನೆಮಂದಿಗೆ ಮತ್ತೊಮ್ಮೆ ಶಾಕ್ ನೀಡಿದ್ದರು.

ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ನಿರ್ದೇಶಕ ಪ್ರೇಮ್ ಮತ್ತು ರೀಷ್ಮಾ ನಾಣಯ್ಯ ಅತಿಥಿಗಳಾಗಿ ಆಗಮಿಸಿದ್ದು, ಸ್ಪರ್ಧಿಗಳೊಂದಿಗೆ ಎಂಜಾಯ್ ಮಾಡಿದ್ದಾರೆ. “ಯಾರನ್ನ ಉಳಿಸಬೇಕು, ಯಾರನ್ನ ಹೊರಗೆ ಕಳಿಸಬೇಕು ಅಂತೀರೋ ಅವರನ್ನು ಕರ್ಕೊಂಡು ಹೋಗ್ತೀವಿ” ಎಂದು ಪ್ರೇಮ್ ಪ್ರಶ್ನಿಸಿದ್ದು, ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಿಸಿದೆ.

ಇನ್ನೂ ಬಿಗ್ ಬಾಸ್ ಸ್ಪಷ್ಟಪಡಿಸಿದ್ದು, ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿಗಳಿಗೆ ವಿದಾಯ ಹೇಳುವ ಅವಕಾಶವೂ ಇರುವುದಿಲ್ಲ. ಸ್ಪಂದನಾ, ಧ್ರುವಂತ್, ಸೂರಜ್ ಮತ್ತು ರಾಷಿಕಾ ನಾಮಿನೇಷನ್‌ನಲ್ಲಿ ಇದ್ದು, ಯಾರು ಮನೆಗೆ ವಿದಾಯ ಹೇಳುತ್ತಾರೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

“ಪ್ರತಿಕ್ರಿಯಿಸಿದ್ರೆ ನಾವು ಚೀಪ್ ಆಗ್ತೀವಿ”: ಟ್ರೋಲ್‌ಗಳಿಗೆ ಕಿಚ್ಚನ ಖಡಕ್ ಉತ್ತರ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪೂರಕವಾಗಿರುವಷ್ಟೇ ಅಪಾಯಕಾರಿಯಾಗಿಯೂ ಪರಿಣಮಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ಸೆಲೆಬ್ರಿಟಿಗಳು ಮಾತ್ರವಲ್ಲ, ಅವರ ಕುಟುಂಬಸ್ಥರನ್ನೂ ಗುರಿಯಾಗಿಸಿಕೊಂಡು ದುರುಳರು ಅಶ್ಲೀಲ ಸಂದೇಶಗಳು, ಕೊಳಕು ಭಾಷೆ ಹಾಗೂ ನೆಗೆಟಿವ್ ಟ್ರೋಲ್‌ಗಳಿಗೆ ಇಳಿಯುತ್ತಿದ್ದಾರೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಹಾಗೂ ಪತ್ನಿಯನ್ನು ಟಾರ್ಗೆಟ್ ಮಾಡಿ ಕೆಟ್ಟ ಮೆಸೇಜ್‌ಗಳು ಹರಿದಾಡಿದ್ದವು. ಈ ಬಗ್ಗೆ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಕಿತ್ತೊಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅದಕ್ಕೆ ಪ್ರತಿಕ್ರಿಯಿಸಿದರೆ ನಾವೇ ಚೀಪ್ ಆಗ್ತೀವಿ. ನೆಗೆಟಿವ್ ಟ್ರೋಲ್ ಮಾಡುವವರ ಬಗ್ಗೆ ಮಾತಾಡಿ ನನ್ನ ಸಮಯವನ್ನು ಯಾಕೆ ವ್ಯರ್ಥ ಮಾಡಿಕೊಳ್ಳಲಿ ಎಂದು ಸುದೀಪ್ ಹೇಳಿದ್ದಾರೆ. ಸೆಲೆಬ್ರೇಷನ್, ಕನ್ನಡ ನಾಡಿನ ಜನರ ಪ್ರೀತಿ ಮತ್ತು ತಾಯಂದಿರ ಮೆಚ್ಚುಗೆ ಬಗ್ಗೆ ಮಾತನಾಡೋಣ ಎಂದಿದ್ದಾರೆ.

ನನ್ನ ಮಗಳು ನಾನು ಎದುರಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಎದುರಿಸಬಲ್ಲಳು, ನನ್ನಿಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂಬ ನಂಬಿಕೆ ನನಗಿದೆ. ಕನ್ನಡ ಇಂಡಸ್ಟ್ರಿ ಅವಳನ್ನು ಸ್ವಾಗತಿಸಿದೆ, ಅವಳು ಹಾಡಿರುವ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹುಲಿ ದಾಳಿಗೆ ವಾಚರ್ ಬಲಿ: ಪರಿಹಾರ ಹಾಗೂ ಉದ್ಯೋಗಕ್ಕೆ ಕುಟುಂಬಸ್ಥರ ಒತ್ತಾಯ

0

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿಗೆ ವಾಚರ್ ಬಲಿಯಾದ ಘಟನೆ ಸಂಬಂಧ ಮೃತನ ಕುಟುಂಬಸ್ಥರು ಸೂಕ್ತ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದಾರೆ.

ಹುಲಿ ದಾಳಿಗೆ ಬಲಿಯಾದ ವಾಚರ್ ಸಣ್ಣಹೈದ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ನಿರಾಕರಿಸಿದ್ದು, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಪ್ರಭಾಕರ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಳಿಕ ಅರಣ್ಯ ಇಲಾಖೆ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರದ ಭರವಸೆ ನೀಡಲಾಗಿದ್ದರೂ, ಕುಟುಂಬಸ್ಥರು ಇದಕ್ಕೆ ಒಪ್ಪದೇ, ಪರಿಹಾರದ ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಉದ್ಯೋಗ ಹಾಗೂ ಶಾಶ್ವತ ಪರಿಹಾರ ಘೋಷಿಸುವವರೆಗೆ ಮೃತದೇಹವನ್ನು ಪಡೆಯುವುದಿಲ್ಲ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ವೈದ್ಯರ ವಿಲೀನಕ್ಕೆ ಆರೋಗ್ಯ ಇಲಾಖೆ ಪ್ಲ್ಯಾನ್: ಆರೋಗ್ಯ ಕೇಂದ್ರಗಳಿಂದ ತಾಲೂಕಾಸ್ಪತ್ರೆಗಳಿಗೆ ವರ್ಗಾಯಿಸಲು ಸಿದ್ಧತೆ

0

ಬೆಂಗಳೂರು: ಶಿಕ್ಷಕರ ಕೊರತೆ ನಿವಾರಣೆಗೆ ಸರ್ಕಾರಿ ಶಾಲೆಗಳ ವಿಲೀನಕ್ಕೆ ಮುಂದಾಗಿದ್ದ ಶಿಕ್ಷಣ ಇಲಾಖೆ ಬಳಿಕ ಇದೀಗ ಆರೋಗ್ಯ ಇಲಾಖೆ ಕೂಡ ವೈದ್ಯರ ವಿಲೀನ ಪ್ರಕ್ರಿಯೆಗೆ ಕೈ ಹಾಕಿದೆ. ರಾಜ್ಯದ ಸುಮಾರು 270 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದ್ದು, ಇದರಿಂದ ಗ್ರಾಮೀಣ ಜನರಿಗೆ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ 270ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿವೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಆಸ್ಪತ್ರೆಗಳು ಪ್ರಮುಖ ಆಸರೆಯಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಯ ಪ್ರಮಾಣ ಕಡಿಮೆಯಾಗಿರುವುದನ್ನು ಇಲಾಖೆ ಗಮನಿಸಿದೆ.

ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು (ಅನಸ್ತೇಶಿಯಾ), ಮಕ್ಕಳ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಬಂದಿದೆ. ಈ ಸಂಬಂಧ ಎಲ್ಲ ಆಸ್ಪತ್ರೆಗಳ ಮಾಸಿಕ ಹೆರಿಗೆ ವರದಿಯನ್ನು ಈಗಾಗಲೇ ಸಂಗ್ರಹಿಸಿ ಪರಿಶೀಲನೆ ನಡೆಸಲಾಗಿದೆ.

ಇದರಿಂದ ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರು, ಹೆರಿಗೆ ವೈದ್ಯರು ಮತ್ತು ಅನಸ್ತೇಶಿಯಾ ತಜ್ಞರ ಲಭ್ಯತೆ ಅನುಮಾನವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಆರೋಗ್ಯ ಇಲಾಖೆ ಈಗಾಗಲೇ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿದ್ದು, ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್‌ಗಳು ಹಾಗೂ ಜನರಲ್ ಮೆಡಿಸಿನ್ ವೈದ್ಯರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಡಿಮೆ ಕಾರ್ಯಕ್ಷಮತೆಯ ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ಸೇವೆ ಒಗ್ಗೂಡಿಸುವ ಯೋಜನೆ ರೂಪಿಸಲಾಗಿದೆ.

ಈ ಕ್ರಮದಿಂದ ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ಬಲಪಡಿಸುವ ಉದ್ದೇಶ ಇದ್ದರೂ, ಗ್ರಾಮೀಣ ಭಾಗದ ಜನರಿಗೆ ಸಮೀಪದ ಆರೋಗ್ಯ ಸೇವೆ ಕಡಿಮೆಯಾಗುವ ಭೀತಿ ಎದುರಾಗಿದೆ.

ವಿದ್ಯುತ್ ವ್ಯತ್ಯಯದಿಂದ ರೋಗಿಗಳ ಪರದಾಟ: ಮೊಬೈಲ್ ಟಾರ್ಚ್ ಬೆಳಕಲ್ಲೇ ಚಿಕಿತ್ಸೆ

0

ಗದಗ: ವಿದ್ಯುತ್ ವ್ಯತ್ಯಯದಿಂದಾಗಿ ಗದಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣವಾಗಿ ಕಗ್ಗತ್ತಲಲ್ಲಿ ಮುಳುಗಿದ್ದು, ರೋಗಿಗಳು ತೀವ್ರ ಪರದಾಟ ಅನುಭವಿಸಿದ ಘಟನೆ ಇಂದು ನಡೆದಿದೆ.

ಮೇಂಟೆನನ್ಸ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗದಗ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಆದರೆ ಈ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೇ ಇಲ್ಲ. ಯುಪಿಎಸ್ ವ್ಯವಸ್ಥೆ ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.

ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ಮೊಬೈಲ್ ಟಾರ್ಚ್ ಲೈಟ್ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಔಷಧಿ ವಿತರಣೆಗೂ ಸಹ ಮೊಬೈಲ್ ಟಾರ್ಚ್ ಬೆಳಕಿನ ಅವಲಂಬನೆ ಮಾಡಬೇಕಾಯಿತು. ಇದರಿಂದ ಔಷಧಿ ವ್ಯತ್ಯಾಸ ಆಗುವ ಭೀತಿ ವ್ಯಕ್ತವಾಗಿತ್ತು.

ಇನ್ನು ವಿದ್ಯುತ್ ವ್ಯತ್ಯಯದ ಕಾರಣ ಲ್ಯಾಬ್ ಪರೀಕ್ಷೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಫ್ರೀಜಿಂಗ್ ಅಗತ್ಯವಿರುವ ಚುಚ್ಚುಮದ್ದುಗಳು ಹಾಳಾಗುವ ಆತಂಕವೂ ಎದುರಾಗಿದೆ.

ಸರ್ಕಾರ ಗ್ಯಾರಂಟಿ ಕೋಡೋ ಭರದಲ್ಲಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಕಡೆಗಣಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.ಆಸ್ಪತ್ರೆಯಲ್ಲಿ ಕೂಡಲೇ ಜನರೇಟರ್ ಹಾಗೂ ಯುಪಿಎಸ್ ವ್ಯವಸ್ಥೆ ಅಳವಡಿಸಿ, ರೋಗಿಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಕ್ಕಳ ಕಳ್ಳರು ಎಂಬ ಶಂಕೆ: ಮಹಿಳೆಯರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

0

ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಕ್ಕಳ ಕಳ್ಳರು ಎಂಬ ಶಂಕೆ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ಪಿನ್ ಹಾಗೂ ಸೂಜಿ ದಾರ ಮಾರಾಟಕ್ಕಾಗಿ ಗ್ರಾಮಕ್ಕೆ ಬಂದಿದ್ದ ಮಹಿಳೆಯರು, ಜೊತೆಗೆ ಆಯುರ್ವೇದಿಕ್ ಪೌಡರ್ ಮಾರಾಟಕ್ಕೂ ಮುಂದಾಗಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ವೇಳೆ ಮಹಿಳೆಯರು ಚೂರ್ಣ ಎರಚಿ ಮಕ್ಕಳ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗ್ರಾಮಸ್ಥರು ಮಹಿಳೆಯರನ್ನು ಬಸ್ ನಿಲ್ದಾಣದಲ್ಲಿ ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡು, ನಂತರ ಹಲ್ಲೆ ನಡೆಸಿದ್ದಾರೆ. ಬಳಿಕ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.ಘಟನೆಯ ಕುರಿತು ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮಹಿಳೆಯರನ್ನು ವಿಚಾರಣೆ ನಡೆಸುತ್ತಿದ್ದಾರೆ.

 ಮಾನ್ಯ ಹತ್ಯೆ ಪ್ರಕರಣ: ಕರ್ತವ್ಯಲೋಪ ಆರೋಪ – ಗ್ರಾಮ ಪಂಚಾಯತ್ ಪಿಡಿಒ ಅಮಾನತು

0

ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಆರೋಪದಡಿ ಬೆಳಗಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ ಗಿರಿಯಪ್ಪನವರ ರನ್ನು ಅಮಾನತು ಮಾಡಲಾಗಿದೆ.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಮಾನತು ಆದೇಶ ಹೊರಡಿಸಿದ್ದಾರೆ. ಗರ್ಭಿಣಿ ಮಹಿಳೆಯ ಶವಸಂಸ್ಕಾರದ ಸಂದರ್ಭದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಿಡಿಒ ನಾಗರಾಜ ಗಿರಿಯಪ್ಪನವರ ಭಾಗವಹಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಅಲ್ಲದೇ, ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯರನ್ನು ಕರೆಯಿಸಿ ಸಭೆ ನಡೆಸದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಯಾವುದೇ ಠರಾವು ಪಾಸ್ ಮಾಡಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಶವಸಂಸ್ಕಾರದ ವೇಳೆ ಪೊಲೀಸರು ಪಂಚಾಯತ್ ಸಿಬ್ಬಂದಿಯ ಸಹಾಯವನ್ನು ಕೇಳಿದರೂ ಅದಕ್ಕೂ ಸ್ಪಂದಿಸದೇ, ಶಿಷ್ಟಾಚಾರ ಪಾಲನೆ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಕೂಡ ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಲಾಗಿತ್ತು.

ಮನೆ ಕಳೆದುಕೊಂಡವರಿಗೆ ವಸತಿ ನಿಗಮದಿಂದ ಹಂಚಿಕೆ ಮಾಡಲಾಗುತ್ತಿದೆ: ಡಿಕೆ ಶಿವಕುಮಾರ್

0

ಬೆಂಗಳೂರು: ಮನೆ ಕಳೆದುಕೊಂಡವರಿಗೆ ವಸತಿ ನಿಗಮದಿಂದ ಹಂಚಿಕೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾರನ್ನೂ ಮನೆ ಕಳೆದುಕೊಳ್ಳುವಂತೆ ಮಾಡಿಲ್ಲ. ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ.

ನಾವು ಬುಲ್ಡೋಜರ್ ರಾಜಕಾರಣವನ್ನು ಪಾಲಿಸುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಯಲ್ಲೇ ತೆರವು ಕಾರ್ಯ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ನಮ್ಮ ಪಕ್ಷದ ನಾಯಕರಿಗೂ ತಿಳಿಸಲಾಗಿದೆ. ಇಲ್ಲಿನ ಸ್ಥಿತಿಗತಿಗಳನ್ನು ಅರಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಇನ್ನೂ ಕೋಗಿಲು ಲೇಔಟ್ ಬಳಿ ಕೆಲವು ಜನರು ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗವನ್ನು ಕಸದ ವಿಲೇವಾರಿಗೆ ಮೀಸಲಿಟ್ಟ 5 ಎಕರೆ ಪ್ರದೇಶವಾಗಿದ್ದು, ಅಕ್ರಮ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

Ashes 2025: 14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!

0

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ 14 ವರ್ಷಗಳ ಕನಸು ಇಂಗ್ಲೆಂಡ್ ತಂಡಕ್ಕೆ ಕೊನೆಗೂ ಈಡೇರಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನಲ್ಲಿ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 4 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ ಕೊನೆಗೂ ಟೆಸ್ಟ್ ಪಂದ್ಯ ಗೆದ್ದಿದ್ದು, ಇದಕ್ಕೂ ಮುನ್ನ 2011 ರಲ್ಲಿ ಮಾತ್ರ ಸಾಧ್ಯವಾಗಿತ್ತು. 2011 ರ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಇನ್ನುಂಗ್ಸ್ ಮತ್ತು 83 ರನ್ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಅಮೋಘ ಗೆಲುವಿನ ನಂತರ, ಆಸೀಸ್ ದೇಶದಲ್ಲಿ ಇಂಗ್ಲೆಂಡ್ ತಂಡ ಯಾವ ಟೆಸ್ಟ್ ಪಂದ್ಯದಲ್ಲಿಯೂ ಜಯ ಸಾಧಿಸಲಿಲ್ಲ.

ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ 18 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ್ದರೂ, 16 ಮ್ಯಾಚ್ಗಳಲ್ಲಿ ಸೋಲು ಅನುಭವಿಸಿದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. ಅಂದರೆ ಈ ಹಿಂದೆ ಇಂಗ್ಲೆಂಡ್ ತಂಡ ಆಸೀಸ್ ನ ತವರಿನಲ್ಲಿ ಗೆಲುವು ಕಾಣದಿರುವುದೇ ಅಚ್ಚರಿ.

ಇದೀಗ ಮೆಲ್ಬೋರ್ನ್ ಮೈದಾನದಲ್ಲಿ ಆತಿಥೇಯರನ್ನು 4 ವಿಕೆಟ್ ಅಂತರದಿಂದ ಸೋಲಿಸಿ, ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಪಿಚ್‌ನಲ್ಲಿ 14 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ.

error: Content is protected !!