Home Blog Page 262

Ashes 2025: 14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!

0

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ 14 ವರ್ಷಗಳ ಕನಸು ಇಂಗ್ಲೆಂಡ್ ತಂಡಕ್ಕೆ ಕೊನೆಗೂ ಈಡೇರಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನಲ್ಲಿ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 4 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ ಕೊನೆಗೂ ಟೆಸ್ಟ್ ಪಂದ್ಯ ಗೆದ್ದಿದ್ದು, ಇದಕ್ಕೂ ಮುನ್ನ 2011 ರಲ್ಲಿ ಮಾತ್ರ ಸಾಧ್ಯವಾಗಿತ್ತು. 2011 ರ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಇನ್ನುಂಗ್ಸ್ ಮತ್ತು 83 ರನ್ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಅಮೋಘ ಗೆಲುವಿನ ನಂತರ, ಆಸೀಸ್ ದೇಶದಲ್ಲಿ ಇಂಗ್ಲೆಂಡ್ ತಂಡ ಯಾವ ಟೆಸ್ಟ್ ಪಂದ್ಯದಲ್ಲಿಯೂ ಜಯ ಸಾಧಿಸಲಿಲ್ಲ.

ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ 18 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ್ದರೂ, 16 ಮ್ಯಾಚ್ಗಳಲ್ಲಿ ಸೋಲು ಅನುಭವಿಸಿದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. ಅಂದರೆ ಈ ಹಿಂದೆ ಇಂಗ್ಲೆಂಡ್ ತಂಡ ಆಸೀಸ್ ನ ತವರಿನಲ್ಲಿ ಗೆಲುವು ಕಾಣದಿರುವುದೇ ಅಚ್ಚರಿ.

ಇದೀಗ ಮೆಲ್ಬೋರ್ನ್ ಮೈದಾನದಲ್ಲಿ ಆತಿಥೇಯರನ್ನು 4 ವಿಕೆಟ್ ಅಂತರದಿಂದ ಸೋಲಿಸಿ, ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಪಿಚ್‌ನಲ್ಲಿ 14 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ.

ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಪುಂಡರು! ದೂರು ದಾಖಲು

0

ಬೆಂಗಳೂರು: ಬೆಂಗಳೂರು ಬಿಟಿಎಂ ಲೇ ಔಟ್ ನಲ್ಲಿ ತಡರಾತ್ರಿ ಯುವತಿಗೆ ಮೂವರು ಪುಂಡರು ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸುಮಾರು 2 ಕಿಲೋಮೀಟರ್ ರಸ್ತೆ ದೂರವರೆಗೂ ನಡೆದಿದ್ದು, ಯುವತಿಯನ್ನು ಒಂದೇ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಲಾಗಿದೆ.

ವೈರಲ್ ವಿಡಿಯೋದಲ್ಲಿ, ಮುಂದೆ ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ಬಂದ ಮೂವರು ಯುವಕರು ಒಂದೇ ಬೈಕ್‌ನಲ್ಲಿ ಹಿಂಬಾಲಿಸುತ್ತಿರುವುದು, ಮತ್ತು ಹೆಲ್ಮೆಟ್ ಕೂಡ ಧರಿಸದೇ ಅಡ್ಡಾದಿಡ್ಡಿ ಚಾಲನೆ ಮಾಡಿದ ಪುಂಡರು ಬೇಕು ಅಂತಲೇ ಯುವತಿಯ ಸ್ಕೂಟಿಯ ಮುಂದೆ ಹೋಗಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಾಲನೆ ಮಾಡಿದ್ದಾರೆ.

ಅಲ್ಲದೇ 2 ಕಿ.ಮೀ ಯುವತಿಯನ್ನು ಫಾಲೋ ಮಾಡಿದ್ದಾರೆ. ಇದೇ ವೇಳೆ ಹಿಂಬದಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಯುವತಿಗೆ ಕಿರುಕುಳ ನೀಡುತ್ತಿರುವ ವೀಡಿಯೋ ಸೆರೆ ಹಿಡಿದು ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸುದ್ದುಗುಂಟೆ ಪಾಳ್ಯ ಪೊಲೀಸರು ಈ ವೀಡಿಯೋಗೆ ಎಕ್ಸ್ನಲ್ಲಿ ಉತ್ತರಿಸಿದ್ದಾರೆ. ಕಿರುಕುಳ ನೀಡಿದ ಪುಂಡರ ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡೋದಾಗಿ ಉತ್ತರ ನೀಡಿದ್ದಾರೆ.

Shreyas Iyer: 60 ದಿನಗಳ ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್!

0

ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ 60 ದಿನಗಳ ಬಳಿಕ ಮೈದಾನಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಗಾಯಗೊಂಡ ಬಳಿಕ ಅಕ್ಟೋಬರ್‌ನಲ್ಲಿ ಶಸ್ತ್ರಚಿಕಿತ್ಸೆಗಾಗಿ ಚಿಕಿತ್ಸೆ ಪಡೆದ ಅಯ್ಯರ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಮತ್ತು ಬೆಂಗಳೂರಿನ ಸಿಒಇ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಅಯ್ಯರ್ 2 ತಿಂಗಳ ಬಳಿಕ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವುದು, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರನ್ನು ಕಾಣುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತಿದೆ. ಅದಕ್ಕೂ ಮುನ್ನ ಅವರು ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಬಹುದಾದ ಸಾಧ್ಯತೆ ಇದೆ.

ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ  ವಿರುದ್ಧದ  ಮೂರನೇ ಏಕದಿನ  ಪಂದ್ಯದ  ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್​ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ  ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.

ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಅವರ ಪೆಕ್ಕೆಲುಬಿನ ಮೇಲ್ಭಾಗದ ಅಂಗದಲ್ಲಿ (ಗುಲ್ಮ) ಆಂತರಿಕ ರಕ್ತಸ್ರಾವವಾಗಿತ್ತು. ಇದರಿಂದಾಗಿ ಅವರು ಅಸ್ವಸ್ಥರಾಗಿದ್ದರು. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಅವರ ಗುಲ್ಮದ ಭಾಗವು ಛಿದ್ರವಾಗಿರುವುದು ಕಂಡು ಬಂದಿದೆ. ಹೀಗಾಗಿ ಅವರನ್ನು ಇಂಟರ್ವೆನ್ಷನಲ್ ಟ್ರಾನ್ಸ್-ಕ್ಯಾತಿಟರ್ ಎಂಬೋಲೈಸೇಶನ್‌ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಇಂದು ದೆಹಲಿಯಲ್ಲಿ CWC ಸಭೆ: ಸಿಎಂ ಸಿದ್ದರಾಮಯ್ಯ ಭಾಗಿ – ಚರ್ಚೆಯಾಗುತ್ತಾ ಅಧಿಕಾರ ಹಂಚಿಕೆ..?

0

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಇಂದು ದೆಹಲಿಯಲ್ಲಿ ನಡೆಯಲಿದ್ದು, ಈ ಉನ್ನತಮಟ್ಟದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಸಂಬಂಧ ಉಂಟಾಗಿರುವ ಗೊಂದಲಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಿಂದ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆಗಳು ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿವೆ.

ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಆದರೆ ಆಹ್ವಾನ ಇಲ್ಲದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಗೈರು ಹಾಜರಿಯಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಕುರಿತ ಗೊಂದಲಗಳನ್ನು ಹೈಕಮಾಂಡ್ ಮಟ್ಟದಲ್ಲಿ ಬಗೆಹರಿಸುವುದು ಕಷ್ಟಕರವಾಗಬಹುದು ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಪಕ್ಷದೊಳಗೆ ಕೇಳಿಬರುತ್ತಿವೆ.

ಇದರ ನಡುವೆಯೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲಾಗುವುದು ಎಂದು ನಿನ್ನೆ ದೆಹಲಿಗೆ ತೆರಳುವ ಮೊದಲು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಹೇಳಿಕೆ ರಾಜ್ಯ ಕಾಂಗ್ರೆಸ್ ಮುಖಂಡರಲ್ಲಿ ಸ್ವಲ್ಪ ಮಟ್ಟಿನ ಆಶಾಭಾವನೆಯನ್ನು ಮೂಡಿಸಿದೆ.

ಇನ್ನೊಂದೆಡೆ, ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ದೀರ್ಘ ಚರ್ಚೆ ನಡೆಸಿರುವುದು ಗಮನಾರ್ಹವಾಗಿದೆ. ಈ ಬೆಳವಣಿಗೆ ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ಕುರಿತಂತೆ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಗಾನವಿ ಆತ್ಮಹತ್ಯೆ ಕೇಸ್ʼ​ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!

0

ಬೆಂಗಳೂರು: ಬೆಂಗಳೂರು ಮೂಲದ ನವವಿವಾಹಿತೆ ಗಾನವಿ (26) ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಮಹತ್ವದ ತಿರುವು ಕಂಡುಬಂದಿದೆ. ಎರಡು ತಿಂಗಳ ಹಿಂದಷ್ಟೇ ಸೂರಜ್ ನನ್ನು ವಿವಾಹವಾಗಿದ್ದ ಗಾನವಿ ಆತ್ಮಹತ್ಯೆಗೆ ಯತ್ನಿಸಿ, ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಗಾನವಿಯ ಆತ್ಮಹತ್ಯೆಯ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಆತನ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.

ಗಂಡನೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಗಾನವಿ ಪೋಷಕರ ಮನೆಗೆ ಮರಳಿದ್ದರು. ಈ ವೇಳೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಬ್ರೈನ್ ಡೆಡ್ ಆಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದರ ನಡುವೆ, ಗಾನವಿಯ ಸಾವಿನ ಬಳಿಕ ಸೂರಜ್ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಅವರೊಂದಿಗೆ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು. ಇದೀಗ ಸೂರಜ್ ಮಹಾರಾಷ್ಟ್ರದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿಯನ್ನುಂಟುಮಾಡಿದೆ. ಪತ್ನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗಾನವಿಯ ಪೋಷಕರು ಹಾಗೂ ಸಂಬಂಧಿಕರಿಂದ ಎದುರಾದ ಆಕ್ರೋಶ ಮತ್ತು ಅವಮಾನವನ್ನು ತಾಳಲಾರದೆ ತಾಯಿ–ಮಗ ಈ ತೀವ್ರ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಾಹಿತಿಯಂತೆ, ಸೂರಜ್ ಮತ್ತು ಗಾನವಿ ವಿವಾಹದ ನಂತರ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದರು. ಆದರೆ ಅಲ್ಲಿಯೇ ದಂಪತಿಯ ನಡುವೆ ಕಲಹಗಳು ಉಂಟಾಗಿದ್ದು, ಗಾನವಿಯ ವಿವಾಹಪೂರ್ವ ಸಂಬಂಧದ ವಿಚಾರದಿಂದ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ.

ಈ ಕಾರಣಗಳಿಂದ ಹನಿಮೂನ್‌ನ್ನು ಮಧ್ಯದಲ್ಲೇ ಮೊಟಕುಗೊಳಿಸಿ ಗಾನವಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಶ್ರೀಲಂಕಾದಿಂದ ಹಿಂದಿರುಗಿದ ಬಳಿಕವೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

 ರಾಜ್ಯದಲ್ಲಿ ಮುಂದುವರೆದ ಒಣ ಹವೆ: ಬೆಂಗಳೂರಿನಲ್ಲಿ ಚಳಿಯೋ ಚಳಿ – ಹವಾಮಾನ ಇಲಾಖೆ

0

ಬೆಂಗಳೂರು: ಕರಾವಳಿ ಸೇರಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಚಳಿಯ ಜೊತೆಗೆ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತ ವಾತಾವರಣದೊಂದಿಗೆ ಮಂಜು ಆವರಿಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ವೇಳೆಯಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.

ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತೀವ್ರ ಚಳಿಯ ಪರಿಣಾಮವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಬೆಚ್ಚಗಿನ ಹೊದಿಕೆ ಬಳಸುವುದು ಮತ್ತು ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಂಜು ಮುಸುಕಿದ ವಾತಾವರಣ ಇರುವುದರಿಂದ ಮಕ್ಕಳು, ವೃದ್ಧರು ಹಾಗೂ ಅಸ್ವಸ್ಥರು ಹೆಚ್ಚಾಗಿ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣ ಮುಂದುವರಿದಿದ್ದು, ಇಂದೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಒಣಹವೆಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

“ಧುರಂಧರ್ ಯಶಸ್ಸಿನ ನಂತರ ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡ ಅಕ್ಷಯ್ ಖನ್ನಾ!

ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ **‘ಧುರಂಧರ್’**‌ನಲ್ಲಿ ರಣವೀರ್ ಸಿಂಗ್ ಹೀರೋ ಆಗಿ, ಅಕ್ಷಯ್ ಖನ್ನಾ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾದ ಬಿಡುಗಡೆ ನಂತರ, ರಣವೀರ್ ಅವರಿಗಿಂತಲೂ ಅಕ್ಷಯ್ ಖನ್ನಾ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.

ಅಕ್ಷಯ್ ಅವರ ಪೋಷಕ ಪಾತ್ರಗಳು ಮತ್ತು ವಿಲನ್ ಪಾತ್ರಗಳಲ್ಲಿ ಅವರ ಪ್ರದರ್ಶನ ಜನಪ್ರಿಯತೆ ಹೆಚ್ಚಿಸಿದೆ. ‘ಧುರಂಧರ್’ಗಾಗಿ ಅವರು ಪಡೆದ ಸಂಭಾವನೆ 2.5 ಕೋಟಿ ರೂಪಾಯಿ ಆಗಿತ್ತು. ಆದರೆ ಇದೀಗ ಅವರು 21 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿರುವ ಸುದ್ದಿ ಕೇಳಿ ಬಂದಿದೆ.

ಮೂಲ ಯೋಜನೆಯ ಪ್ರಕಾರ, ಅಕ್ಷಯ್ ಅವರು ‘ದೃಶ್ಯಂ 3’ ಚಿತ್ರದಲ್ಲಿ ನಟಿಸಬೇಕಾಗಿತ್ತು. ಆದರೆ, ದುಬಾರಿ ಸಂಭಾವನೆ ಮತ್ತು ಕೆಲವು ಪಾತ್ರ ಸಂಬಂಧಿತ ಬೇಡಿಕೆಗಳ ಕಾರಣದಿಂದ ಅವರು ಚಿತ್ರದ ತಂಡದಿಂದ ಹೊರನಡೆದಿದ್ದಾರೆ.

ಅಕ್ಷಯ್ ಖನ್ನಾ ತಂಡದಿಂದ ಹೊರನಡೆಯುವುದರಿಂದ ‘ದೃಶ್ಯಂ 3’ ನಿರ್ಮಾಪಕರಿಗೆ ಶಾಕ್ ಆಗಿದೆ. 21 ಕೋಟಿ ರೂಪಾಯಿ ನೀಡಲು ಬಜೆಟ್ ಸಾಧ್ಯವಾಗದ ಕಾರಣ ಮತ್ತು ವಿಗ್ ಸಂಬಂಧಿತ ವಿನಂತಿಗಳನ್ನು ನಿರಾಕರಿಸಿದ ಕಾರಣವೂ ಇದಕ್ಕೆ ಕಾರಣವಾಗಿದೆ.

ಈ ನಿರ್ಧಾರವು ಸಿನೆಮಾ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟಿಸಿತು, ಮತ್ತು ಅಕ್ಷಯ್ ಖನ್ನಾದ “ವಿಲನ್ ಪಾತ್ರದಲ್ಲಿ ಸೈ ಎನ್ ಮಾಡಿದ ಸ್ಟಾರ್” ಎಂಬ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.

ಪೈರಸಿ ವಿವಾದಕ್ಕೆ ಸಂಯಮದ ಉತ್ತರ: ವಿರೋಧಿಗಳನ್ನೂ ಗೆದ್ದ ಕಿಚ್ಚ ಸುದೀಪ್ ದೊಡ್ಡತನ

ನಟ ಸುದೀಪ್ ಕೇವಲ ಒಳ್ಳೆಯ ನಟ ಮಾತ್ರವಲ್ಲ, ಜವಾಬ್ದಾರಿಯುತ ಮತ್ತು ಸೆನ್ಸಿಬಲ್ ವ್ಯಕ್ತಿಯೂ ಹೌದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಪೈರಸಿ ಕುರಿತು ಅವರು ಮಾತನಾಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಆ ವಿವಾದಕ್ಕೆ ತುಪ್ಪ ಸುರಿದು ಅದನ್ನು ಕಾಡ್ಗಿಚ್ಚಾಗಿಸಲು ಪ್ರಯತ್ನಿಸಿದರೂ, ಸುದೀಪ್ ಅದನ್ನೆಲ್ಲ ಜಾಣ್ಮೆಯಿಂದಲೇ ನಿಭಾಯಿಸಿದರು. ಹೇಳಿಕೆಯ ನಂತರ ನೀಡಿದ ಪ್ರತಿಯೊಂದು ಸಂದರ್ಶನದಲ್ಲೂ ಅವರು ಜವಾಬ್ದಾರಿಯುತವಾಗಿ ಮಾತನಾಡಿ, ವಿವಾದ ಹೆಚ್ಚಾಗದಂತೆ ತಡೆದರು.

ಹುಬ್ಬಳ್ಳಿಯಲ್ಲಿ ಪೈರಸಿ ವಿರುದ್ಧ ಮಾತನಾಡಿದ್ದನ್ನು ಕೆಲವರು ವೈಯಕ್ತಿಕವಾಗಿ ಪರಿಗಣಿಸಿ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ವಿರುದ್ಧ ಟೀಕೆ ನಡೆಸಿದರು. ದರ್ಶನ್ ಅಭಿಮಾನಿಗಳಿಂದ ಪೋಸ್ಟ್‌ಗಳು ಹರಿದಾಡಿದವು. ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ಹಾಗೂ ದರ್ಶನ್ ಆಪ್ತ ಧನ್ವೀರ್ ಅವರ ಟ್ವೀಟ್‌ಗಳು ವಿವಾದಕ್ಕೆ ಇನ್ನಷ್ಟು ಇಂಧನ ನೀಡಿದವು. ಇದಕ್ಕೆ ಸುದೀಪ್ ಆಪ್ತ ವಿನಯ್ ಕೂಡ ಪ್ರತಿಕ್ರಿಯಿಸಿದ್ದರು.

ಈ ಎಲ್ಲದರ ನಡುವೆ, ಸುದೀಪ್ ತಮ್ಮ ವಿರುದ್ಧ ಮಾತನಾಡಿದ ಯುವ ನಟರ ಬಗ್ಗೆಯೂ ಕೋಪವಿಲ್ಲದೆ, ಪ್ರೀತಿ ಮತ್ತು ಗೌರವದಿಂದಲೇ ಮಾತನಾಡಿದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಧನ್ವೀರ್ ಹಾಗೂ ವಿನಯ್ ಇಬ್ಬರೂ ತಮ್ಮಿಗೆ ಒಂದೇ, ಅವರು ಚಿತ್ರರಂಗದ ಯುವ ನಟರು ಎಂದರು. ಧನ್ವೀರ್ ಅವರ ಕೆಲಸ ಮತ್ತು ನಡವಳಿಕೆಯನ್ನು ತಾವು ಮೆಚ್ಚಿಕೊಳ್ಳುತ್ತೇನೆ ಎಂದು ಹೇಳಿದರು.

ಮುಂದುವರೆದು, “ಒಬ್ಬ ಹೀರೋ ಜೊತೆಗೆ ನಿಲ್ಲಬೇಕು ಅಂದರೆ ನಿಯತ್ತು, ಲಾಯಲ್ಟಿ ಮತ್ತು ಪ್ರೀತಿ ಇರಬೇಕು. ನಮ್ಮ ಹೀರೋ ಜೊತೆ ನಿಂತುಕೊಳ್ಳಬೇಕು ಎಂಬ ಅವರ ಹಠ ನನಗೆ ಇಷ್ಟವಾಯಿತು” ಎಂದು ಹೇಳುವ ಮೂಲಕ ಪರೋಕ್ಷವಾಗಿ ಟೀಕೆ ಮಾಡಿದವರ ಬಗ್ಗೆಯೂ ಸುದೀಪ್ ಪ್ರಶಂಸಾತ್ಮಕ ಮಾತುಗಳನ್ನೇ ಆಡಿದರು.

ಸುದೀಪ್ ಅವರ ಈ ಸಂಯಮಿತ, ತೂಕದ ಮಾತುಗಳನ್ನು ದರ್ಶನ್ ಅಭಿಮಾನಿಗಳೂ ಸೇರಿದಂತೆ ಅನೇಕರು ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ನಡವಳಿಕೆ ಮತ್ತು ಮಾತಿನ ಮೂಲಕ ವಿರೋಧಿಗಳ ಮನವನ್ನೂ ಗೆದ್ದ ಕಿಚ್ಚ ಸುದೀಪ್ ಮತ್ತೊಮ್ಮೆ ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ.

ಟಿಕೆಟ್ ದರದಲ್ಲಿ ಏಕರೂಪತೆ ತರಲು ಆಂಧ್ರ ಸರ್ಕಾರ ನಿರ್ಧಾರ

ಹೊಸ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಟಿಕೆಟ್ ದರ ಏರಿಕೆಗೆ ಜನ ಬೇಸರ ವ್ಯಕ್ತಪಡಿಸುತ್ತಿದ್ದರು. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡಲು ಆದೇಶ ಬಂದರೂ, ನ್ಯಾಯಾಲಯ ಅದಕ್ಕೆ ತಡೆ ನೀಡಿತು. ಇದೀಗ ಆಂಧ್ರ ಪ್ರದೇಶದಲ್ಲಿ ಕೂಡ ಇದೇ ಸಮಸ್ಯೆ ಗಮನಕ್ಕೆ ಬಂದಿದೆ.

ಪ್ರತಿ ದೊಡ್ಡ ಬಜೆಟ್ ಚಿತ್ರ ಬಿಡುಗಡೆ ವೇಳೆಗೆ ಟಿಕೆಟ್ ದರ ಏರಿಕೆ ಆಗುತ್ತಿತ್ತು. ಆದರೆ ಈ ಕ್ರಮವು ಸಣ್ಣ ಚಿತ್ರಗಳಿಗೆ ಹಾನಿ ಉಂಟುಮಾಡುತ್ತಿತ್ತು, ಮತ್ತು ಸಿನಿಮಾಪ್ರೇಮಿಗಳು ಮಾತ್ರವಲ್ಲ, ಚಿತ್ರರಂಗದ ಕೆಲವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದರು.

ಆಂಧ್ರ ಸಿನಿಮಾ ಸಚಿವ ಕಂಡುಲ ದುರ್ಗೇಶ್ ಸಭೆ ನಡೆಸಿ ಪ್ರಮುಖ ಅಧಿಕಾರಿಗಳು ಮತ್ತು ತೆಲುಗು ಚಿತ್ರರಂಗದ ಕೆಲವು ಪ್ರತಿನಿಧಿಗಳನ್ನು ಭೇಟಿಯಾಗಿ, ಟಿಕೆಟ್ ದರಗಳನ್ನು ಪ್ರೇಕ್ಷಕರಿಗೂ ಮತ್ತು ಚಿತ್ರರಂಗಕ್ಕೂ ಸಮನ್ವಯವಾಗಿ ನೋಡಿಕೊಳ್ಳುವಂತೆ ನಿರ್ಧರಿಸಿದ್ದಾರೆ.

ಈ ನಿರ್ಧಾರವು ಸಣ್ಣ ಚಿತ್ರಗಳಿಗೆ ನ್ಯಾಯ ನೀಡಲು, ಟಿಕೆಟ್ ದರದ ಹೆಚ್ಚಳದ ಅಸಮತೋಲನವನ್ನು ತಡೆಯಲು, ಮತ್ತು ಎಲ್ಲಾ ಸಿನಿಮಾಗಳಿಗೆ ಸಮಾನ ಅವಕಾಶ ನೀಡಲು ಸಹಾಯ ಮಾಡಲಿದೆ.

ಫಾಕ್ಸ್‌ಕಾನ್ ಹೂಡಿಕೆಗಳೇ ಮೇಕ್ ಇನ್ ಇಂಡಿಯಾ ಯಶಸ್ಸಿನ ಸಾಕ್ಷಿ: ಪ್ರಲ್ಹಾದ್ ಜೋಶಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಕಿಡಿಕಾರಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲಿ ಫಾಕ್ಸ್‌ಕಾನ್‌ನಂತಹ ಜಾಗತಿಕ ಮಟ್ಟದ ಕಂಪನಿಗಳು ಹೂಡಿಕೆ ಮಾಡುತ್ತಿರುವುದು ಯೋಜನೆಯ ಯಶಸ್ಸಿಗೆ ಸ್ಪಷ್ಟ ಸಾಕ್ಷಿ ಎಂದರು.

ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಘಟಕ ಸ್ಥಾಪನೆಗಾಗಿ ಭೂಮಿ ಹಂಚಿಕೆಯಾಗಿದ್ದದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆದಿದ್ದು, ಈ ಸತ್ಯವನ್ನು ಕಾಂಗ್ರೆಸ್ ಮರೆತಿದೆ. ಪ್ರಧಾನಿ ಮೋದಿ ಪರಿಚಯಿಸಿದ ಪಿಎಲ್‌ಐ (PLI) ಯೋಜನೆಯ ನೇರ ಲಾಭ ಪಡೆದಿರುವ ಕಂಪನಿಗಳಲ್ಲಿ ಫಾಕ್ಸ್‌ಕಾನ್ ಪ್ರಮುಖವಾಗಿದೆ. ಈ ಯೋಜನೆಯಡಿ 14,065 ಕೋಟಿ ರೂ. ಹೂಡಿಕೆ ಆಕರ್ಷಿಸಲ್ಪಟ್ಟಿದ್ದು, ಅಕ್ಟೋಬರ್ 2025ರ ವೇಳೆಗೆ 1.32 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಜೋಶಿ ತಿಳಿಸಿದ್ದಾರೆ.

ಭಾರತ ಈಗ ದೇಶೀಯವಾಗಿ ಚಿಪ್‌ಗಳು, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪ-ಮಾಡ್ಯೂಲ್‌ಗಳ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸುತ್ತಿದೆ. 2014-15ರಲ್ಲಿ ಕೇವಲ 0.18 ಲಕ್ಷ ಕೋಟಿ ರೂ. ಇದ್ದ ಮೊಬೈಲ್ ಫೋನ್ ಉತ್ಪಾದನೆ ಇಂದು 5.5 ಲಕ್ಷ ಕೋಟಿ ರೂ.ಗೆ ಏರಿದ್ದು, ಇದು 28 ಪಟ್ಟು ಹೆಚ್ಚಳವಾಗಿದೆ. ರಫ್ತು ಕೂಡ 0.01 ಲಕ್ಷ ಕೋಟಿ ರೂ.ನಿಂದ 2 ಲಕ್ಷ ಕೋಟಿ ರೂ.ಗೆ ಬೆಳೆಯಿದ್ದು, 127 ಪಟ್ಟು ಏರಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಹಿಂದೆ ಭಾರತದಲ್ಲಿ ಫೋನ್‌ಗಳನ್ನು “ತಯಾರಿಸಲಾಗುವುದಿಲ್ಲ, ಕೇವಲ ಜೋಡಿಸಲಾಗುತ್ತದೆ” ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಇಂದು ದೇಶದ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕಗಳೇ ತಕ್ಕ ಉತ್ತರ ನೀಡಿವೆ ಎಂದು ಜೋಶಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸುಧಾರಣೆಗಳನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹತಾಶೆಯನ್ನು ಮಾತ್ರ ತೋರಿಸುತ್ತದೆ. ಭಾರತದ ಉತ್ಪಾದನಾ ಬೆಳವಣಿಗೆ ನಿರ್ಣಾಯಕ ನಾಯಕತ್ವದ ಫಲಿತಾಂಶವಾಗಿದ್ದು, ಇದು ಮೇಕ್ ಇನ್ ಇಂಡಿಯಾ ಯೋಜನೆಯ ಸ್ಪಷ್ಟ ಸಾಧನೆಯೇ ಆಗಿದೆ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

error: Content is protected !!