ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಾಯಕವಾಗಿವೆ. ಈ ಆಹಾರಗಳ ಲಾಭ, ಉಪಯುಕ್ತತೆ ಮತ್ತು ಬಳಕೆ ಕುರಿತಂತೆ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹಳ ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕಲಾಭವನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ನಮ್ಮಲ್ಲಿ ಪ್ರಚಲಿತವಿರುವ ಸಜ್ಜೆ, ನವಣೆ, ಸಾವೆ, ರಾಗಿ, ಹಾರಕ, ಬರಗು, ಕೊರಲೆ, ಊದಲು ಮುಂತಾದ ಸಿರಿಧಾನ್ಯಗಳು ನಾರಿನಂಶ ಮತ್ತು ಇತರೆ ಆರೋಗ್ಯ ಸಂಬಂಧಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಸದೃಢ ಆರೋಗ್ಯಕ್ಕಾಗಿ ಇವುಗಳ ಬಳಕೆಯ ಅವಶ್ಯಕತೆ ಇದೆ. ಸಿರಿಧಾನ್ಯಗಳನ್ನು ಸಾಧಾರಣ ಫಲವತ್ತತೆಯ ಭೂಮಿಯಲ್ಲಿ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲದೆ ಬೆಳೆಯಬಹುದಾಗಿದ್ದು, ಇನ್ನಿತರ ಪರಿಕರಗಳ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕಡಿಮೆ ಖರ್ಚಿನಲ್ಲಿ ಸುಲಭ ನಿರ್ವಹಣೆಯೊಂದಿಗೆ ಬೆಳೆಯಬಹುದಾದ ಸಿರಿಧಾನ್ಯಗಳು ಪ್ರಸ್ತುತ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಳಗೊಂಡಂತೆ ರೈತ ಸಮೂದಾಯಕ್ಕೆ ವರದಾನವಾಗಿವೆ. ಇವುಗಳ ವಿಸ್ತೀರ್ಣವನ್ನು ಹೆಚ್ಚಿಸುವುದರೊಂದಿಗೆ ಗ್ರಾಹಕರ ಬಳಕೆಗೆ ಸೂಕ್ತವಾಗುವಂತೆ ಸಂಸ್ಕರಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಈ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಧಾರವಾಡ ಶಹರದಲ್ಲಿ ಕೃಷಿ ಇಲಾಖೆಯಿಂದ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
`ಬೆಳೆ ಉತ್ಪಾದನೆಯಾಚೆಗಿನ ಕೃಷಿ-ರೈತರ ಸಬಲೀಕರಣ’ ಎಂಬ ವಾಕ್ಯದೊಂದಿಗೆ ಸಿರಿಧಾನ್ಯ ಬಳಕೆ ಕುರಿತು ಜಾಗೃತಿ ನಡಿಗೆಯ ಜಾಥಾ ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಿಂದ ಕೆ.ಸಿ.ಡಿ ವೃತ್ತದವರೆಗೆ ಆಯೋಜಿಸಲಾಗಿತ್ತು.
ಜನಜಾಗೃತಿ ಜಾಥಾ ನಡಿಗೆಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀಪಾದ ಕುಲಕರ್ಣಿ, ಉಪ ಕೃಷಿ ನಿರ್ದೇಶಕರಾದ ನಟರಾಜ ಟಿ.ಹೆಚ್, ಸಂದೀಪ ಜಿ.ಆರ್ ಸೇರಿದಂತೆ ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆಯ ಎಲ್ಲ ಅಧಿಕಾರಿ/ಸಿಬ್ಬಂದಿಗಳು ಹಾಗೂ ವಿವಿಧ ಕೃಷಿಯೇತರ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಭಾಗವಹಿಸಿದ್ದರು.
ಸಿರಿಧಾನ್ಯಗಳ ಸಾಗುವಳಿ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಗ್ರಾಹಕರ ಬಳಕೆ ಕುರಿತಂತೆ ಸಾಕಷ್ಟು ಮಾಹಿತಿಯನ್ನು ಮತ್ತು ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯ ಉತ್ಪನ್ನಗಳ ಕುರಿತು ಉತ್ಪಾದಕರು ಮತ್ತು ಬಳಕೆದಾರರು ಇಬ್ಬರಲ್ಲೂ ಸಾಕಷ್ಟು ತಿಳುವಳಿಕೆ ಮೂಡಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ದೊರೆತಿದೆ. ಸಿರಿಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರದ ಬಹುಮುಖ್ಯ ಭಾಗವಾಗಿದ್ದು, ಆಧುನಿಕ ಜೀವನ ಶೈಲಿಗೆ ತಕ್ಕಂತೆ ಹೊಸ ವಿಧದ ಖಾದ್ಯಗಳನ್ನು ತಯಾರಿಸುವದಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದರು.