Home Blog Page 264

ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ: ನಮ್ಮ ಮೆಟ್ರೋದಲ್ಲಿ ದುರ್ವರ್ತನೆ ತೋರಿದ ವ್ಯಕ್ತಿ ವಿರುದ್ಧ NCR ದಾಖಲು!

0

ಬೆಂಗಳೂರು:- ಕಾಮುಕನೊಬ್ಬ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ, ಖಾಸಗಿ ಅಂಗಾಗ ಮುಟ್ಟಿ ಕಿರುಕುಳ ನೀಡಿರುವ ಘಟನೆ ಮೆಜಸ್ಟಿಕ್‌ನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಜರುಗಿದೆ.

ಸಂತ್ರಸ್ತೆ ಯುವತಿ ಮೆಟ್ರೋದಲ್ಲಿ ವಿಧಾನಸೌಧದಿಂದ ಸಂಚರಿಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ. ಇಷ್ಟೇ ಅಲ್ಲದೇ ಏನೂ ತಿಳಿದೇ ಇಲ್ಲ ಎನ್ನುವಂತೆ ಆಕೆಯ ಮುಂದೆಯೇ ನಿಂತು ಕೆಟ್ಟದಾಗಿ ನಗುವ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.

ರೈಲು ಕೆಂಪೇಗೌಡ ನಿಲ್ದಾಣಕ್ಕೆ ತಲುಪಿದಾಗ ಯುವತಿಯು ಮುತ್ತಪ್ಪನ ಅಸಭ್ಯ ವರ್ತನೆ ಬಗ್ಗೆ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಮೆಟ್ರೋ ಭದ್ರತಾ ಸಿಬ್ಬಂದಿ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಭ್ಯ ವರ್ತನೆ ಅಡಿಯಲ್ಲಿ ಎನ್‌ಸಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸತ್ಯದ ತಳಹದಿಯಲ್ಲಿ ಸೈದ್ಧಾಂತಿಕ ನಿಲುವು ಗಟ್ಟಿಗೊಳ್ಳಲಿ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಮಾನವ ಜೀವನ ನಿರರ್ಥಕ. ವೀರಶೈವರು, ಲಿಂಗಾಯತರು ಒಂದಾಗಿ ಬಾಳಿದರೆ ಧರ್ಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಮಾನವ ಜೀವನ ನಿರರ್ಥಕವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಎಲ್ಲರನ್ನು ಉದ್ಧರಿಸಿದ್ದಾರೆ. ವೀರಶೈವ ಧರ್ಮ ವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಆದರೆ ಆ ಧರ್ಮ ವೃಕ್ಷದ ಹೂ-ಹಣ್ಣುಗಳಂತೆ ಬಸವಾದಿ ಶಿವಶರಣರಿದ್ದಾರೆ. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವು ಗಟ್ಟಿಗೊಳ್ಳಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯಲಾರದ್ದಕ್ಕೆ ಅನೇಕ ಆಂತರಿಕ ನೋವುಗಳನ್ನು ಅನುಭವಿಸಬೇಕಾಗಿದೆ ಎಂದ ಶ್ರೀಗಳು, ತುಮಕೂರಿನ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಉತ್ತಮ ಕಾರ್ಯ ಕೈಗೊಂಡು ಜನ ಸಮುದಾಯದಲ್ಲಿ ಧರ್ಮ ಶ್ರದ್ಧೆ ಬೆಳೆಸುತ್ತಿರುವುದಕ್ಕೆ ತಮ್ಮ ಹರುಷ ವ್ಯಕ್ತಪಡಿಸಿದರು.

ವಿನಯ ಬಿದಿರೆ ಅವರು ಧರ್ಮ ಮತ್ತು ರಾಷ್ಟ್ರ ಭಕ್ತಿ ಕುರಿತು ಉಪನ್ಯಾಸ ನೀಡಿದರು. ಹೆಚ್.ಎನ್. ಚಂದ್ರಶೇಖರ್, ವಿ.ಎಸ್. ಶಶಿಧರ್, ಟಿ.ಎ. ದಕ್ಷಿಣಾಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನವೀನ ನಾಯಕ, ತೋಂಟಾರಾಧ್ಯ, ಬಿ.ಹೆಚ್. ಪಂಚಾಕ್ಷರಯ್ಯ, ಗುರು ರೇಣುಕಾರಾಧ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವವನ್ನು ವಹಿಸಿ ಮಾತನಾಡಿದರು. ಟಿ.ಆರ್. ಸದಾಶಿವಯ್ಯ ಸ್ವಾಗತಿಸಿದರು. ಟಿ.ಎಸ್. ಕರುಣಾರಾಧ್ಯರು ನಿರೂಪಿಸಿದರು. ರಶ್ಮಿ ಮತ್ತು ಮಧು ಕುಟುಂಬ ವರ್ಗದವರು ಪೂಜಾ ಸೇವೆ ಸಲ್ಲಿಸಿದರು.

ಧನುರ್ಮಾಸದ ಅಂಗವಾಗಿ ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ವಿಜ್ಞಾನ, ನಾಗರಿಕತೆ ಮತ್ತು ರಾಜಕೀಯ ಸಬಲ ಸಂಘರ್ಷದಲ್ಲಿ ಧರ್ಮ ಸಂಸ್ಕೃತಿ ನಾಶಗೊಳ್ಳಬಾರದು. ನೀತಿಯಿಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ, ಮಿತಿಯಿಲ್ಲದ ಜೀವನ, ಸೀಮಾತೀತವಾದ ಸ್ವಾತಂತ್ರ್ಯ ಇವು ರಾಷ್ಟ್ರ ವಿಘಾತಕಗಳೆಂಬ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ವಾಣಿಯನ್ನು ನಾವೆಲ್ಲರೂ ಗಮನಿಸಬೇಕಾಗಿದೆ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಶ್ರೇಯಸ್ಸು ವೀರಶೈವ ಲಿಂಗಾಯತ ಧರ್ಮಕ್ಕೆ ಇದೆ ಎಂದ ಅವರು, ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ಯಾವತ್ತೂ ರಾಜಕೀಯ ಬೆರೆಸಬಾರದೆಂದರು.

 

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಫಾತೀಮಾ ಖವಾಸ್

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕಠಿಣ ಪರಿಶ್ರಮದಿಂದ ಯಶಸ್ಸು ಹೊಂದಲು ಸಾಧ್ಯ ಎಂದು ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಗುರು ಫಾತೀಮಾ ಖವಾಸ್ ಹೇಳಿದರು.

ಅವರು ಪಟ್ಟಣದ ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮುಳಗುಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪ್ರೌಢಶಾಲಾ ವಿಭಾಗದಲ್ಲಿ ಸಾಧನೆಗೈದ ಹಿನ್ನೆಲೆ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಅದನ್ನು ಈ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ಮುಂದಿನ ಹಂತದ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ. ಕಠಿಣ ಪರಿಶ್ರಮ, ಸತತ ಪ್ರಯತ್ನ, ಛಲ, ಗುರಿಗಳನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುಟ್ಟ ಎಂದು ಹೇಳಿದರು.

ಸಾಧನೆಗೈದ ವಿದ್ಯಾರ್ಥಿಗಳಾದ ಪ್ರಣತಿ ಅರಳಿ, ತಸ್ಲಿಂಬಾನು ಮುಲ್ಲಾ, ಗೀತಾ ಬಂಗಿ, ಬದ್ರುನಿಸಾ ಯಳವತ್ತಿ, ಅದಿತಿ ಕೆರಕನ್ನವರ, ಭುವನೇಶ್ವರಿ ಮಲ್ಲರೆಡ್ಡಿ, ಮಿಜಬಾ ದುರ್ಗಿಗುಡಿ, ಅನುಷಾ ಪಾಟೀಲ, ಅಮಿರಸುಹೇಲ್ ಸದರಭಾವಿ, ಶಿಕ್ಷಕಿಯರಾದ ಉಮಾ ಬ್ಯಾಳಿ, ಆಸಮಾ ಸೌದತ್ತಿ, ಶಿವಲಿಂಗಪ್ಪ ಕೊಂಡಿಕೊಪ್ಪ, ಪೂಜಾ ಮ್ಯಾಗೇರಿ, ಗೀತಾ ಕುಲಕರ್ಣಿ ಇದ್ದರು.

ಬಿಕ್ಲು ಶಿವ ಕೊಲೆ ಕೇಸ್| ಬೈರತಿ ಬಸವರಾಜ್‌ಗೆ ತಾತ್ಕಾಲಿಕ ರಿಲೀಫ್; ಮಧ್ಯಂತರ ಜಾಮೀನು ಮಂಜೂರು!

0

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಬಂಧನವಾದರೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದಲ್ಲಿ ಬೈರತಿ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಬೈರತಿ ಬಸವರಾಜ್ ಅವರ ಪಾತ್ರದ ಕುರಿತು ಯಾವುದೇ ಉಲ್ಲೇಖ ಇಲ್ಲ. ದೂರು ಹಾಗೂ ಎಫ್‌ಐಆರ್‌ನಲ್ಲಿಯೂ ಅವರ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಲಾಯಿತು.

ಇದೇ ವೇಳೆ, ಎಸ್‌ಪಿಪಿ ಜಗದೀಶ್ ವಿದೇಶಕ್ಕೆ ತೆರಳಿರುವುದರಿಂದ ವಿಚಾರಣೆ ಮುಂದೂಡಲು ಸರ್ಕಾರಿ ವಕೀಲರು ಮನವಿ ಸಲ್ಲಿಸಿದರು. ಬೈರತಿ ಪರ ವಕೀಲರು, ರಾಜಕೀಯ ಕಾರಣಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ. ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ. ಸಿಐಡಿಗೆ ತನಿಖೆ ವರ್ಗಾವಣೆಗೊಂಡ ಬಳಿಕ ಬಂಧನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ವಾದ–ಪ್ರತಿವಾದ ಆಲಿಸಿದ ಹೈಕೋರ್ಟ್, ಬೈರತಿ ಬಸವರಾಜ್‌ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ತನಿಖೆಗೆ ಸಂಪೂರ್ಣ ಸಹಕರಿಸಬೇಕು ಎಂದು ಸೂಚನೆ ನೀಡಿದೆ.

ಸಿಐಡಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಲಾಗಿದೆ. ಇನ್ನೊಂದೆಡೆ, ಇದೇ ಪ್ರಕರಣದಲ್ಲಿ ಎ1 ಜಗದೀಶ್ ಅಲಿಯಾಸ್ ಜಗ್ಗ ಸೇರಿ 18 ಆರೋಪಿಗಳ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಮಂಡ್ಯ: ಕ್ವಾರೆಯ ಪ್ರಪಾತಕ್ಕೆ ಟಿಪ್ಪರ್ ಬಿದ್ದು ಚಾಲಕ ಸಾವು!

0

ಮಂಡ್ಯ:- ಜಿಲ್ಲೆಯ ನಾಗಮಂಗಲ ತಾಲೂಕಿನ ಜಟಕ ಗೇಟ್ ಬಳಿಯ ಕ್ವಾರೆಯೊಂದರಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರಪಾತಕ್ಕೆ ಬಿದ್ದು ಟಿಪ್ಪರ್ ಚಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ.

ಕಾಂತ ಹಾಗೂ ರವಿ ಎಂಬುವವರು ಸೇರಿ ಕ್ವಾರೆ ನಡೆಸುತ್ತಿದ್ದರು. ಗಣಿಗಾರಿಕೆ ಮಾಡಿ ಆ ಸ್ಥಳ ಪ್ರಪಾತದಂತೆ ಆಗಿತ್ತು. ನಿನ್ನೆ ಮಧ್ಯರಾತ್ರಿ ಟಿಪ್ಪರ್ ಚಲಿಸುವ ವೇಳೆ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದಲ್ಲಿ ನೀರು ಇದ್ದ ಕಾರಣ ಟಿಪ್ಪರ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಈ ವೇಳೆ ಚಾಲಕ ಲಕ್ಷ್ಮಣ್ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಳಿಕ ಅಗ್ನಿಶಾಮದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ಲಕ್ಷ್ಮಣ್ ಮೃತ ದೇಹವನ್ನು ಮೇಲೆತ್ತಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಅಭಿವೃದ್ಧಿ ಕಾರ್ಯಕ್ಕೆ ಸಂಘಟನೆಗಳು ಕೈಜೋಡಿಸಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಾಮಾಜಿಕ ಸಂಘಟನೆಗಳು ಕೈಜೋಡಿಸಿದಲ್ಲಿ ಆ ಕಾರ್ಯಗಳು ಯಶಸ್ವಿಗೊಳ್ಳುವವು ಎಂಬುದಕ್ಕೆ ಗದುಗಿನ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘವೇ ಉದಾಹರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಗುರುವಾರ ಗದುಗಿನ ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘ ಕಳಸಾಪೂರ, ಪಂಚವಟಿ ನಾಗರಕಟ್ಟೆ ಹತ್ತಿರ ಗದಗ ನಗರಸಭೆಯ ವಾರ್ಡ್ ನಂ. 34ರಲ್ಲಿ ಸಿ.ಸಿ ರಸ್ತೆ ಒಳಚರಂಡಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ನಂತರ ಜರುಗಿದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಇಂಡೋರ್ ಸ್ಟೇಡಿಯಂ ಬಡಾವಣೆಯ ಉದ್ಯಾನವನದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಕಾರಣ ನಗರದ ಸರ್ವ ಪದಾಧಿಕಾರಿಗಳು ಪಂಚವಟಿ ನಾಗರಕಟ್ಟೆ ಉದ್ಯಾನವನ ಗದಗ ನಗರದಲ್ಲಿಯೇ ಮಾದರಿಯಾಗಿ ನಿರ್ಮಾಣ ಮಾಡಲು ನಗರಸಭೆಯೊಂದಿಗೆ ಕೈಜೋಡಿಸಿ ಕಾಮಗಾರಿ ಮಾಡಿಸಿಕೊಳ್ಳಲು ಹೇಳಿದರು.

ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಮಾತನಾಡಿ, ನಮ್ಮ ಸಂಘದ ಉದ್ಘಾಟನೆಯ ಸಂದರ್ಭದಲ್ಲಿ ಸಚಿವರು ಹೇಳಿದಂತೆ ಇಂಡೋರ್ ಸ್ಟೇಡಿಯಂ ಬಡಾವಣೆಯ ಪ್ರಮುಖ ಎರಡು ಬೇಡಿಕೆಗಳನ್ನು ಈಡೇರಿಸಿದ ನಂತರವೇ ಸಂಘದ ನಾಗರಿಕರ ಸನ್ಮಾನ ಸ್ವೀಕರಿಸುವುದಾಗಿ ಹೇಳಿದ್ದರು. ಅದರಂತೆ ಎರಡು ಕಾಮಗಾರಿಗಳನ್ನು ಕೈಗೊಂಡಿದ್ದು, ಅವರು ನಮ್ಮೆಲ್ಲರ ಅಭಿಮಾನದ ದ್ಯೋತಕವಾಗಿ ಸನ್ಮಾನ ಸ್ವೀಕರಿಸಿದ್ದು ಸಂಘಕ್ಕೆ ಹಾಗೂ ಬಡಾವಣೆಯ ನಾಗರಿಕರಿಗೆ ಸಂತೋಷವನ್ನುಂಟುಮಾಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರಾದ ವಿದ್ಯಾವತಿ ಗಡಗಿ ವಹಿಸಿದ್ದರು. ಗದಗ ತಾಲುಕಾ ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಶೋಕ್ ಮಂದಾಲಿ, ನಗರಸಭೆಯ ಮುಖ್ಯ ಅಭಿಯಂತರ ಲಕ್ಷ್ಮಣ ಜೋಗದಂಡಕರ, ಸಂಘದ ಉಪಾಧ್ಯಕ್ಷ ಶಿವಾನಂದ ಪಲ್ಲೇದ, ಡಾ. ಡಿ.ಬಿ. ಚೆನ್ನಶೆಟ್ಟರ, ಜಗದೀಶ್, ವೀರಯ್ಯ ಹಿರೇಮಠ, ವಿ.ಎಸ್. ಶಿವಕಾಳಿಮಠ, ರಾಚಯ್ಯ ಕರವೀರಮಠ, ಅಮರನಾಥ ಗಡಗಿ, ಎಸ್.ವೈ. ಯಾಳಗಿಶೆಟ್ರು, ಡಾ. ರವಿ, ನಂದಿ, ಬಸವರಾಜ ಬೇಲೇರಿ, ಮಂಜುನಾಥ ಗಜಾಕೊಶ, ಶ್ರೀನಿವಾಸ, ಬಸವಂತಪ್ಪ ಕವಲೂರ, ಹಬೀಬ, ಡಿ.ಎಸ್. ಕಮತರ, ಮಂಜುನಾಥ ಚಿಕ್ಕನಗೌಡ್ರ, ಸಿದ್ದರಾಮೇಶ ಹಿರೇಮಠ, ಅನಿಲ್ ಗೌಳಿ, ಸುಭಾಸ್ ಗಡಾದ, ಶಿವಕುಮಾರ ರಾಠೋಡ, ಹೊಳೆಯಪ್ಪಗೌಡ ಪಾಟೀಲ, ನಿಂಗರಾಜ ಗೊಲ್ಲರ, ಸಿದ್ದರಾಮೇಶ ಹಿರೇಮಠ, ನೀಲಕಂಠಯ್ಯ ಕಳ್ಳಿಮಠ ಸೇರಿದಂತೆ ನಗರದ ಸಮಸ್ತ ನಾಗರಿಕರು ಭಾಗವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಹೆಚ್.ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವೀಂದ್ರ ನಂದಿ ಸ್ವಾಗತಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಅಶೋಕ ಮಾಳೆಕೊಪ್ಪ ವಂದಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಈ ಬಡಾವಣೆಯಲ್ಲಿ ವಿದ್ಯಾವಂತರು, ಸರ್ಕಾರಿ ನೌಕರರು, ಪ್ರಜ್ಞಾವಂತರು ಹೆಚ್ಚಾಗಿ ವಾಸವಾಗಿದ್ದು, ಇವರೆಲ್ಲರೂ ಸಂಘಟಿತರಾಗಿ ಒಂದು ಸಂಘಟನೆಯ ಮೂಲಕ ಸಮಾಜಮುಖಿ, ಜನಮುಖಿ ಕಾರ್ಯ ಕೈಗೊಂಡಿರುವುದು ಅಭಿನಂದನೀಯ. ಈ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸುವ ಮೂಲಕ ಜನಪರ ಕಾರ್ಯಗಳನ್ನು ಬೆಂಬಲಿಸಬೇಕು ಎಂದರು.

ನಿವೃತ್ತ ನೌಕರರ ಸಂಘ ಅಸ್ತಿತ್ವಕ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಗಳ ನಿವೃತ್ತ ನೌಕರರ ಗದಗ ಸಂಘವನ್ನು ಸ್ಥಾಪಿಸಲಾಗಿದೆ.

ಸಂಘದ ಗೌರವ ಅಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ದೇವಪ್ಪ ಗಾಳೆಪ್ಪ ಜೋಗಣ್ಣವರ, ಅಧ್ಯಕ್ಷರಾಗಿ ಹನಮಪ್ಪ ಎಚ್.ದೊಡ್ಡಮನಿ, ಉಪಾಧ್ಯಕ್ಷರಾಗಿ ಬಸವಪ್ಪ ಎ.ದೊಡ್ಡಮನಿ, ಬಸಪ್ಪ ಜಿ.ಕೆಂಗಾರಕರ, ಪರಸಪ್ಪ ಎನ್.ಜಿಗಳೂರ, ಕಾರ್ಯದರ್ಶಿಯಾಗಿ ಹನಮಂತಪ್ಪ ಸಿ.ಕೊಪ್ಪಳ, ಖಜಾಂಚಿಯಾಗಿ ಬಸವರಾಜ ಕೆ.ಹೊಸಮನಿ, ಆಡಳಿತ ಮಂಡಳಿಯ ಸದಸ್ಯರಾಗಿ ಮಂಜಪ್ಪ ಎಚ್.ಸಾಲಿ, ತಾರಕೇಶ್ವರ ಎಚ್.ಕಜ್ಜರಿ, ಅಶೋಕ ಬೆಣಗಿ ಹಾಗೂ ಸಹ ಕಾರ್ಯದರ್ಶಿಯಾಗಿ ಆನಂದ ಅವರನ್ನು ಆಯ್ಕೆ ಮಾಡಲಾಗಿದೆ.

ಸರ್ಕಾರದ ಸೌಲಭ್ಯ ಒದಗಿಸುವ, ಶೈಕ್ಷಣಿಕ, ಸ್ವಯಂ ಉದ್ಯೋಗ, ಟೇಲರಿಂಗ್, ಕಸೂತಿ, ಗೃಹಕೈಗಾರಿಕೆ, ಬಡಿಗತನ, ಕಂಪ್ಯೂಟರ್ ಸೆಂಟರ್, ಇಂಟರ್‌ನೆಟ್ ಸೆಂಟರ್ ಸ್ಥಾಪಿಸುವುದು ಹಾಗೂ ಸ್ವಯಂ ಉದ್ಯೋಗ ಮಾಹಿತಿ ಕೇಂದ್ರ ಹೀಗೆ ಸಮಾಜಮುಖಿ ಮತ್ತು ಜನಮುಖಿಯಾಗಿ ಕಾರ್ಯ ಮಾಡುವ ಉದ್ದೇಶವನ್ನು ಸಂಘವು ಹೊಂದಿದೆ ಎಂದು ಕಾರ್ಯದರ್ಶಿ ಎಚ್.ಸಿ. ಕೊಪ್ಪಳ ತಿಳಿಸಿದ್ದಾರೆ.

ಯಶಸ್ಸಿನ ಮೇರು ಶಿಖರ ಉತ್ಕರ್ಷಾ ಪಾಟೀಲ

ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಇನ್ನರ್ ವ್ಹೀಲ್ ಕ್ಲಬ್ 317ರ ಜಿಲ್ಲಾ ಚೇರಮನ್ ಆಗಿದ್ದು, ಇವರು ತಾಯಿಯ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಶಿಸ್ತುಬದ್ಧ ಜೀವನದ ಅಡಿಪಾಯದಲ್ಲಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿದ್ದಾರೆ. ಐದು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿ ವಿಜಯಮಾಲಾ ರಾಮರಾವ್ ಹಲಗೇಕರ ಅವರ ಆರೈಕೆಯಲ್ಲಿ ಬೆಳೆದಿದ್ದಾರೆ. ಕೊಲ್ಲಾಪುರದಲ್ಲಿ ಹುಟ್ಟಿ ಬೆಳಗಾವಿಯಲ್ಲಿ ಬೆಳೆದ ಇವರು, ಸೇಂಟ್ ಜೋಸೆಫ್ ಕಾಲೇಜ್‌ನಲ್ಲಿ ಶಿಕ್ಷಣವನ್ನು ಪಡೆದು, ಮರಾಠ ಮಂಡಲ ಪಾಲಿಟೆಕ್ನಿಕ್ ಕಾಲೇಜಿನಿಂದ ಎಲೆಕ್ಟ್ರಾನಿಕ್ ಮತ್ತು ದೂರ ಸಂಪರ್ಕ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿದ್ದಾರೆ.

ಬಾಲ್ಯದಿಂದಲೇ ಉತ್ತಮ ಕ್ರೀಡಾಪಟುವಾಗಿದ್ದು, ಶಾರ್ಟ್ ಪುಟ್, ಡಿಸ್ಕಸ್ ಥ್ರೋ, ಜಾವೆಲಿನ್ ಥ್ರೋ ಮುಂತಾದ ಆಟಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿರಂತರವಾಗಿ ಮೂರು ವರ್ಷಗಳ ಕಾಲ ಫುಟ್ಬಾಲ್ ಹಾಗೂ ಥ್ರೋ ಬಾಲ್ ತಂಡದ ನಾಯಕಿಯಾಗಿದ್ದು, ಬಾಲ್ಯದಿಂದಲೇ ಉತ್ಸಾಹಭರಿತವಾದ ಮತ್ತು ಕ್ರಿಯಾಶೀಲ ಬದುಕನ್ನು ಕಳೆದಿದ್ದಾರೆ.

ಪ್ರಸ್ತುತ ಮಾರ್ವೆಲಸ್ ಗ್ರೂಪ್ ಆಫ್ ಕಂಪೆನಿಗಳ ಮುಖ್ಯ ಪ್ರವರ್ತಕರಲ್ಲಿ ಒಬ್ಬರಾಗಿದ್ದು, ಮಾನವ ಸಂಪನ್ಮೂಲ ಮತ್ತು ಆಡಳಿತ ನಿರ್ದೇಶಕಿಯಾಗಿ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಅವರ ಶಿಸ್ತುಬದ್ಧ ಬೆಂಬಲದೊಂದಿಗೆ ಮಾರ್ವೆಲಸ್ ಗ್ರೂಪ್ ಈಗ ಶ್ರೇಷ್ಠತೆ ಮತ್ತು ಯಶಸ್ಸಿನ ಹೊಸ ಶಿಖರವನ್ನು ತಲುಪಿದೆ.

2002ರಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ್ನು ಪ್ರವೇಶಿಸಿದ ಇವರು, 2016-17ರಲ್ಲಿ ಕೊಲ್ಲಾಪುರ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ಅವಧಿಯಲ್ಲಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ಅವುಗಳಲ್ಲಿ ಹ್ಯಾಪಿ ಸ್ಕೂಲ್ ಯೋಜನೆ ತುಂಬಾ ಮೆಚ್ಚುಗೆಯನ್ನು ಪಡೆದಿದೆ. 2017-18ರಲ್ಲಿ ಜಿಲ್ಲಾ ವಲಯದ ಸಾಕ್ಷರತಾ ಕ್ಲಬ್ ಸಂಯೋಜಕರಾಗಿದ್ದ ಇವರು ಜಿಲ್ಲಾ ಸಂಪಾದಕಿಯಾಗಿ ಕರೋನಾ ಸಮಯದಲ್ಲಿ ಕೈಗೊಂಡ ಕಾರ್ಯಗಳು, ಜಿಲ್ಲಾ ಐಎಸ್‌ಓ ಆದಾಗ ಮಕ್ಕಳು ಮತ್ತು ಮಾನಸಿಕ ಅಸ್ವಸ್ಥ ಮಹಿಳೆಯರಿಗಾಗಿ ಕೈಗೊಂಡ ಕಾರ್ಯಗಳು, ಕೊಲ್ಲಾಪುರದ ಜಿಲ್ಲಾ ಸಮ್ಮೇಳನದ ಅಂಗವಾಗಿ ಜಿಲ್ಲಾ ಆಸ್ಪತ್ರೆಗೆ ಇ- ಅಂಬ್ಯುಲೆನ್ಸ್ ನೀಡಿದ್ದು, ಜಿಲ್ಲಾ ಇಎಸ್‌ಓ ಆದಾಗ ಜೈಪುರ ಪಾದಯಾತ್ರೆ ಯೋಜನೆಗೆ 1 ಲಕ್ಷ ರೂ ನೀಡಿದ್ದು, ಜಿಲ್ಲಾ ಉಪಾಧ್ಯಕ್ಷರಾದಾಗ 25 ವ್ಹೀಲ್ ಚೇರ್‌ಗಳನ್ನು ನೀಡಿದ್ದು ಹೀಗೆ ಇವರು ಕೈಗೊಂಡ ಅನೇಕ ಕಾರ್ಯಗಳು ಶ್ಲಾಘನೀಯವಾಗಿವೆ.

ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3170ಗೆ ಪ್ರವೇಶಿಸಿದ ಮೊದಲ ಮಹಿಳೆಯಾದ ಇವರು ಅಲ್ಲಿಯೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆ ಮತ್ತು ಕೆಲಸಗಳನ್ನು ಗುರುತಿಸಿ ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಸಾಮಾಜಿಕ ಕೊಡುಗೆಗಳಿಗಾಗಿ ಸಿಎಸ್‌ಐಬಿಆರ್ ಮ್ಯಾನೇಜ್ಮೆಂಟ್ ಕಂಪನಿಯಿಂದ ಕಿಂಗ್ ಮೇಕರ್' ಪ್ರಶಸ್ತಿ, ಕೊಲ್ಲಾಪುರದ ಪ್ರೆಸ್ ಕೌನ್ಸಿಲ್‌ನಿಂದ ಸನ್ಮಾನ್ ಕರ್ತುತ್ವಾಚ’ ಪ್ರಶಸ್ತಿ, ಐಟಿಐ ಇಂಜಿನಿಯರಿಂಗ್ ಕೌನ್ಸಿಲ್‌ನಿಂದ ಬೆಸ್ಟ್ ಬಿಸಿನೆಸ್ ವುಮೆನ್' ಪ್ರಶಸ್ತಿ, ಸ್ಪೀಡ್ ನ್ಯೂಸ್ ಲೈವ್ 24ದಿಂದ ಐಕಾನ್ ವಿಮೆನ್-2020′ ಪ್ರಶಸ್ತಿ, ರೇಡಿಯೋ ಸಿಟಿ 95 ಎಫ್‌ಎಂದಿಂದ ನಾರಿ ಸನ್ಮಾನ-2020' ಪ್ರಶಸ್ತಿ, ಮಹಾರಾಷ್ಟ್ರ ಇಂಡಸ್ಟ್ರಿಯಲ್ ಸಂಸ್ಥೆಯಿ**ಂದ** ಮಹಿಳಾ ವಿಭಾಗದಲ್ಲಿ ಪ್ರೈಡ್ ಆಫ್ ಮಹಾರಾಷ್ಟ್ರ ಅವಾರ್ಡ್-2021′ ಪ್ರಶಸ್ತಿ, ಅಖಿಲ ಭಾರತ ಮಹಿಳಾ ಮರಾಠಾ ಮಂಡಲದಿಂದ ತೇಜಸ್ವಿನಿ ಪುರಸ್ಕಾರ', ಚೇತನ್ ವಿಕಾಸ್ ಸ್ಕೂಲ್ ಆಫ್ ಕೊಲ್ಲಾಪುರ‌ದಿಂದ 'ಆದರ್ಶ ಪಾಲಕ' ಪ್ರಶಸ್ತಿ, ಮೌಂಟ್ ಅಬುದಲ್ಲಿ ನಡೆದ ಬ್ರಹ್ಮಕುಮಾರಿ ಶಿವ ಶಕ್ತಿ ನಾಯಕತ್ವ ವಿಧಾನ ವಿಚಾರ ಸಂಕೀರಣದಲ್ಲಿ ಶಿವಶಕ್ತಿ ನಾಯಕತ್ವ’ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

ಇನ್ನರ್‌ವ್ಹೀಲ್ ಕ್ಲಬ್ ಅಲ್ಲದೇ ದ ನ್ಯೂ ಎಜ್ಯುಕೇಶನ್ ಸೊಸೈಟಿಯ ಸದಸ್ಯರಾಗಿ, ಪ್ರಿನ್ಸೆಸ್ ಪದ್ಮರಾಜೆ ಬಾಲಕಿಯರ ಶಾಲೆ ಮತ್ತು ಕಾಲೇಜಿನ ಅಧ್ಯಕ್ಷರಾಗಿ, ಕೊಲ್ಲಾಪುರದ ಮಾತೃಶ್ರೀ ವೃದ್ಧಾಶ್ರಮದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅಷ್ಟೇ ಅಲ್ಲದೆ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿ ಯಶಸ್ಸಿನ ಹಿಂದೆ ಹೋರಾಟದ ಒಂದು ಕಾಣದ ಅಧ್ಯಾಯವಿರುತ್ತದೆ. ಮಿತಿಯನ್ನು ಪರೀಕ್ಷಿಸುವ ಅನೇಕ ಸವಾಲುಗಳನ್ನು ಎದುರಿಸಿ ಸಾಧಿಸಿದ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿರುತ್ತದೆ. ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಅವರ ಪಯಣವು ಇಂತಹ ಒಂದು ಸಾಧನೆಗೆ ಮಾದರಿಯಾಗಿದೆ. ಜಿಲ್ಲಾ 317 ಚೇರಮನ್‌ರಾದ ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಇವರಿಗೆ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಸ್ವಾಗತವನ್ನು ಕೋರುತ್ತೇವೆ.

  • ವೀಣಾ ಕಾವೇರಿ.
    ಸಂಪಾದಕರು,
    ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ.

ಹೊಸವರ್ಷಕ್ಕೆ ಕ್ಷಣಗಣನೆ: ಬೆಂಗಳೂರು ಕಮಿಷನರ್ ಸಿಟಿ ರೌಂಡ್ಸ್, ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಕಟ್ಟುನಿಟ್ಟಿನ ರೂಲ್ಸ್!

0

ಬೆಂಗಳೂರು: ಹೊಸವರ್ಷ 2026ರ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ ನಗರದಲ್ಲಿ ಭದ್ರತೆ ಕಠಿಣಗೊಂಡಿದೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ನಗರದ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ಮಾಡಿ ಪರಿಶೀಲನೆ ನಡೆಸಿ, ನಂತರ ಆಯುಕ್ತರ ಕಚೇರಿಯಲ್ಲಿ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಆಯುಕ್ತರು, ನ್ಯೂ ಇಯರ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸುಮಾರು 30 ಅಂಶಗಳ ಮಾರ್ಗಸೂಚಿ ನೀಡಲಾಗಿದೆ. ಕ್ಲೌಡ್ ಕಂಟ್ರೋಲ್, ಏಜ್ ಲಿಮಿಟ್, ಕಾರ್ಯಾವಧಿ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು, ಶಬ್ದ ಮಾಲಿನ್ಯ ನಿಯಂತ್ರಣ, ಮಹಿಳೆಯರ ಸುರಕ್ಷತೆ ಸೇರಿದಂತೆ ಹಲವು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಬೌನ್ಸರ್‌ಗಳ ವರ್ತನೆ ಬಗ್ಗೆ ಬಂದಿರುವ ದೂರುಗಳ ಕುರಿತು ಮಾಲೀಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಎಂಟ್ರಿ–ಎಕ್ಸಿಟ್ ವ್ಯವಸ್ಥೆ, ಫೈರ್ ಸೇಫ್ಟಿ, ಪಾರ್ಕಿಂಗ್ ವ್ಯವಸ್ಥೆ, ಎಮರ್ಜೆನ್ಸಿ ಸಂಪರ್ಕ ಸಂಖ್ಯೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ. ರೇವ್ ಪಾರ್ಟಿ ಅಥವಾ ಅಕ್ರಮ ಪಾರ್ಟಿಗಳಿಗೆ ಅವಕಾಶ ಇರಬಾರದು, ಪಟಾಕಿ ಹಾಗೂ ಆಯುಧಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನರು ಹೋಗಿ ಬರುವ ವೇಳೆ ಸರತಿ ಸಾಲು ವ್ಯವಸ್ಥೆ ಕಡ್ಡಾಯವಾಗಿದ್ದು, ಮ್ಯಾನೇಜರ್‌ಗಳು ಹಾಗೂ ಸಿಬ್ಬಂದಿ ಮದ್ಯಪಾನ ಮಾಡಿರಬಾರದು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಹೆಚ್ಚು ಸಮಯ ಓಪನ್ ಮಾಡಲು ಮನವಿ ಬಂದರೂ, ರಾತ್ರಿ 1 ಗಂಟೆಗೆ ಕ್ಲೋಸ್ ಕಡ್ಡಾಯ ಎಂದು ಹೇಳಲಾಗಿದೆ. ಹೊಸವರ್ಷವನ್ನು ಜವಾಬ್ದಾರಿಯಿಂದ ಆಚರಿಸುವಂತೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ: ನಿವೃತ್ತ ಪ್ರಾಚಾರ್ಯ ಉಮೇಶ ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸೋಲು ನಾಳೆಯ ಗೆಲವಿಗೆ ಮುನ್ನುಡಿಯಾಗುತ್ತದೆ. ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವದು ಮುಖ್ಯ ಎಂದು ನಿವೃತ್ತ ಪ್ರಾಚಾರ್ಯ ಉಮೇಶ ಹಿರೇಮಠ ಹೇಳಿದರು.

ಅವರು ಗದುಗಿನ ಎಸ್.ಎಸ್.ಕೆ ಶ್ರೀ ಜಗದಂಬಾ ಶಿಕ್ಷಣ ಕೇಂದ್ರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಪಠ್ಯದ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿಯೂ ಸಹ ಆಸಕ್ತಿ ಹೊಂದಬೇಕು. ಇದರಿಂದಾಗಿ ಬೌದ್ಧಿಕ ಬೆಳವಣಿಗೆಯೊಂದಿಗೆ ದೈಹಿಕ ಬೆಳವಣಿಗೆಯೂ ಆಗಿ ಆರೋಗ್ಯದಲ್ಲಿ ಸದೃಢತೆಯನ್ನು ಹೊಂದಬಹುದಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಕೆ ಜಗದಂಬಾ ಶಿಕ್ಷಣ ಕೇಂದ್ರದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ, ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭಾನ್ವಿತರಾಗಬೇಕು ಎಂದರು.

ವೇದಿಕೆಯ ಮೇಲೆ ಶಾಲೆಯ ಚೇರಮನ್ ಶ್ರೀನಿವಾಸ ಖಟವಟೆ, ಉಪಚೇರಮನ್ ವಿಶ್ವನಾಥ ಖಟವಟೆ, ಆಡಳಿತ ಮಂಡಳಿಯ ಸದಸ್ಯರಾದ ಮಾರುತಿ ಪವಾರ ಉಪಸ್ಥಿತರಿದ್ದರು.

error: Content is protected !!