ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸೋಲು ನಾಳೆಯ ಗೆಲವಿಗೆ ಮುನ್ನುಡಿಯಾಗುತ್ತದೆ. ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವದು ಮುಖ್ಯ ಎಂದು ನಿವೃತ್ತ ಪ್ರಾಚಾರ್ಯ ಉಮೇಶ ಹಿರೇಮಠ ಹೇಳಿದರು.
ಅವರು ಗದುಗಿನ ಎಸ್.ಎಸ್.ಕೆ ಶ್ರೀ ಜಗದಂಬಾ ಶಿಕ್ಷಣ ಕೇಂದ್ರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಪಠ್ಯದ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿಯೂ ಸಹ ಆಸಕ್ತಿ ಹೊಂದಬೇಕು. ಇದರಿಂದಾಗಿ ಬೌದ್ಧಿಕ ಬೆಳವಣಿಗೆಯೊಂದಿಗೆ ದೈಹಿಕ ಬೆಳವಣಿಗೆಯೂ ಆಗಿ ಆರೋಗ್ಯದಲ್ಲಿ ಸದೃಢತೆಯನ್ನು ಹೊಂದಬಹುದಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಕೆ ಜಗದಂಬಾ ಶಿಕ್ಷಣ ಕೇಂದ್ರದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ, ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭಾನ್ವಿತರಾಗಬೇಕು ಎಂದರು.
ವೇದಿಕೆಯ ಮೇಲೆ ಶಾಲೆಯ ಚೇರಮನ್ ಶ್ರೀನಿವಾಸ ಖಟವಟೆ, ಉಪಚೇರಮನ್ ವಿಶ್ವನಾಥ ಖಟವಟೆ, ಆಡಳಿತ ಮಂಡಳಿಯ ಸದಸ್ಯರಾದ ಮಾರುತಿ ಪವಾರ ಉಪಸ್ಥಿತರಿದ್ದರು.

