Home Blog Page 266

ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ: ಟೆಸ್ಟ್ ರಿಪೋರ್ಟ್ ಸೇಫ್ – ದಿನೇಶ್ ಗುಂಡೂರಾವ್

0

ಬೆಂಗಳೂರು: ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ. ಲ್ಯಾಬ್ ಪರೀಕ್ಷಾ ವರದಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊಟ್ಟೆ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ರವಾನೆ ಮಾಡಲಾಗಿತ್ತು. ಇದೀಗ ವರದಿ ಲಭ್ಯವಾಗಿದ್ದು, ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿಲ್ಲ.

ಮೊಟ್ಟೆ ಸೇವನೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕುರಿತು ಎಫ್‌ಎಸ್‌ಎಸ್‌ಎಐ ಸಹ ಸ್ಪಷ್ಟನೆ ನೀಡಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ತಿಳಿಸಿದ್ದಾರೆ. ಇದೇ ವೇಳೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸೇವೆ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,

ಕಡಿಮೆ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವ ಕೇಂದ್ರಗಳಿಂದ ವೈದ್ಯರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು. ಸ್ಪೆಷಲಿಸ್ಟ್ ವೈದ್ಯರನ್ನು ಶಿಫ್ಟ್ ಮಾಡಿ, ಅವರ ಬದಲು ಇಬ್ಬರು ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಲಾಗುತ್ತದೆ. ಯಾವುದೇ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮುಚ್ಚುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಸ್ಪೆಷಲಿಸ್ಟ್ ವೈದ್ಯರ ವರ್ಗಾವಣೆ ನಂತರವೂ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಗಳ ಆರೋಗ್ಯ ಸೇವೆ ಮುಂದುವರಿಯಲಿದೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಮೈಸೂರಿನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ: ತನಿಖೆಗೆ ಸೂಚನೆ ನೀಡಿದ್ದೇನೆ – ಸಚಿವ ಪರಮೇಶ್ವರ್

0

ಬೆಂಗಳೂರು: ಮೈಸೂರು ಅರಮನೆಯ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟಗೊಂಡ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಲೂನು ಮಾರುತ್ತಿದ್ದ ವ್ಯಕ್ತಿಯ ಬಳಿ ಹೀಲಿಯಂ ಸಿಲಿಂಡರ್ ಇತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದರು. ಮೃತ ವ್ಯಕ್ತಿ ಉತ್ತರ ಪ್ರದೇಶ ಮೂಲದವನು ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಘಟನೆಯ ಬಗ್ಗೆ ವರದಿ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ನಾನು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಮೈಸೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ಸುರಕ್ಷತೆಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ನಡೆದ ಘಟನೆ ನಮಗೆಲ್ಲಾ ತಿಳಿದಿದೆ. ಹಾಗಾಗಿ ಕೆ ಸೂಕ್ಷ್ಮವಾಗಿ ಇರುವಂತೆ ಹೇಳಿದ್ದೇನೆ ಎಂದರು.

ಇಂತಹ ಅಪಾಯಕಾರಿ ಸಿಲಿಂಡರ್ ಜನನಿಬಿಡ ಪ್ರದೇಶಗಳಲ್ಲಿ ಬಳಕೆ ಮಾಡುವುದು ಸರಿಯೇ ಎಂಬ ಪ್ರಶ್ನೆಗೆ, ಅವನಿಗೆ ಸಿಲಿಂಡರ್ ಹೇಗೆ ಸಿಗ್ತು? ಹೀಲಿಯಂ ಹೇಗೆ ಸಿಕ್ಕಿದೆ ಎಂಬ ಬಗ್ಗೆ ವರದಿ ಕೇಳಿದ್ದೇನೆ. ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಐಜಿಗೂ ಸೂಚನೆ ನೀಡದ್ದೇನೆ. ಅವರು ಏನು ವರದಿ ನೀಡುತ್ತಾರೆ ನೋಡೋಣ ಎಂದರು.

ಜಗದ್ಗುರುಗಳ ಜೊತೆ ನಟಿ ಪಲ್ಲವಿ ಮತ್ತಿಘಟ್ಟ 1 ಗಂಟೆ ಮಾತುಕತೆ ಸುಳ್ಳು: ಮಠ ಕೊಟ್ಟ ಸ್ಪಷ್ಟನೆ ಏನು?

0

ಚಿಕ್ಕಮಗಳೂರು: ಶೃಂಗೇರಿಗೆ ಭೇಟಿ ನೀಡಿದ್ದ ಕಿರುತೆರೆ ನಟಿಯೊಬ್ಬರು ಮಠದ ಹಿರಿಯ ಸ್ವಾಮೀಜಿಗಳೊಂದಿಗೆ ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದ ಸುದ್ದಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ನಟಿಯ ಫೋಟೋ ಸಹಿತ ಮುಖಪುಟದಲ್ಲೇ ಸುದ್ದಿ ಪ್ರಕಟವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕನ್ನಡದ ಖ್ಯಾತ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ಆಶೀರ್ವಾದ ಪಡೆದಿದ್ದಾರೆ ಎಂಬ ಶೀರ್ಷಿಕೆಯಡಿ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿಯಲ್ಲಿ, ಕಳೆದ ಒಂದು ತಿಂಗಳಲ್ಲೇ ಇದು ನಟಿಯ ಎರಡನೇ ಶೃಂಗೇರಿ ಭೇಟಿ ಆಗಿದ್ದು, ಈ ಬಾರಿ ಮಠದಲ್ಲೇ ವಾಸ್ತವ್ಯ ಮಾಡಿಕೊಂಡು ಮರುದಿನ ಶೃಂಗೇರಿ ಮಠದ ಹಿರಿಯ ಸ್ವಾಮೀಜಿಗಳನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ. ಡಿಸೆಂಬರ್ 20, 2025ರಂದು ‘ಲೋಕ ಧ್ವನಿ’ ಎಂಬ ಇ-ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಮಠ ಪ್ರಕಟಣೆಯಲ್ಲಿ ತಿಳಿಸಿದೆ. ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಯವರು ಇತ್ತೀಚಿನ ವರ್ಷಗಳಲ್ಲಿ ಭಕ್ತರಿಗೆ ಕೇವಲ ದರ್ಶನ ನೀಡುತ್ತಿದ್ದು, ಯಾರೊಂದಿಗೂ ದೀರ್ಘಕಾಲ ಮಾತುಕತೆ ನಡೆಸುತ್ತಿಲ್ಲ ಎಂದು ಮಠ ಸ್ಪಷ್ಟಪಡಿಸಿದೆ.

ಪಲ್ಲವಿ ಮತ್ತಿಘಟ್ಟ ಅವರು ಇತರ ಭಕ್ತರಂತೆ ದರ್ಶನ ಪಡೆದಿರಬಹುದೇ ವಿನಃ ಪತ್ರಿಕೆಯಲ್ಲಿ ಹೇಳಿರುವಂತೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಸತ್ಯವಲ್ಲ ಎಂದು ಮಠ ಹೇಳಿದೆ. ಮುಂದಿನ ದಿನಗಳಲ್ಲಿ ಮಠ ಹಾಗೂ ಜಗದ್ಗುರುಗಳ ಕುರಿತು ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಶೃಂಗೇರಿಗೆ ಪ್ರತಿದಿನ ಸಾವಿರಾರು ಭಕ್ತರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಚಿತ್ರರಂಗದವರು ಭೇಟಿ ನೀಡುತ್ತಾರೆ. ಹೀಗಿರುವಾಗ ಕಿರುತೆರೆ ನಟಿಯೊಬ್ಬರ ಭೇಟಿಯನ್ನು ಮಾತ್ರ ಈ ರೀತಿ ವೈಭವೀಕರಿಸಿ ಸುದ್ದಿ ಮಾಡಿರುವುದೇಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಹಿಂದೆ ಯಾವುದಾದರೂ ಉದ್ದೇಶ ಅಥವಾ ಷಡ್ಯಂತ್ರ ಇರಬಹುದೇ ಎಂಬ ಅನುಮಾನಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ: ರಾಜ್ಯದ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವುದಿಲ್ಲ-ಸಿಎಂ ಸಿದ್ದರಾಮಯ್ಯ

0

ದಾವಣಗೆರೆ: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಹಿರಿಯೂರು ಬಸ್ ಅಪಘಾತ: ತನಿಖೆ ನಡೆಸಲಾಗುವುದು

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಅಪಘಾತದಲ್ಲಿ ಟ್ರಕ್ ಚಾಲನ ತಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಕಾಂಗ್ರೆಸ್ ನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಇಂದು ನವದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.

ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಶವವಾಗಿ ಪತ್ತೆ! ಕೊಲೆ ಶಂಕೆ

0

ದೊಡ್ಡಬಳ್ಳಾಪುರ: ಕಾಣೆಯಾಗಿದ್ದ ಪ್ರಥಮ ಪಿಯುಸಿ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಾಧು ಮಠ ಗ್ರಾಮದ ಬಳಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ನಿಶಾಂಕ್ ಎಂದು ಗುರುತಿಸಲಾಗಿದ್ದು, ರಸ್ತೆ ಬದಿಯ ಮೋರಿ ಒಂದರಲ್ಲಿ ಬೈಕ್ ಸಮೇತ ಬಾಲಕನ ಶವ ಪತ್ತೆಯಾಗಿದೆ.

 ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಡಿಸೆಂಬರ್ 15ರಂದು ನಿಶಾಂಕ್ ಕಾಣೆಯಾಗಿದ್ದು, ಡಿಸೆಂಬರ್ 16ರಂದು ಅವರ ನಾಪತ್ತೆ ಕುರಿತು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಿಶಾಂಕ್ ಪಕ್ಕದ ಗ್ರಾಮದ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಯುವತಿ ಕಡೆಯವರಿಂದ ನಿಶಾಂಕ್‌ಗೆ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತೆಂದು ತಿಳಿದುಬಂದಿದೆ. ಇದೀಗ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಪ್ರೀತಿಸುತ್ತಿದ್ದ ಯುವತಿಯ ಕಡೆಯವರಿಂದಲೇ ಕೊಲೆ ಮಾಡಿರುವ ಶಂಕೆಯನ್ನು ಮೃತನ ಪೋಷಕರು ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಚಿಕ್ಕಬಳ್ಳಾಪುರ ದುರಂತ: ಮೃತರ ಕುಟುಂಬದವರಿಗೆ ಸಿಎಂ ತಲಾ 5 ಲಕ್ಷ ಪರಿಹಾರ ಘೋಷಣೆ

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗೇಟ್‌ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆಗೆ ಸಂಬಂಧಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ. ಪರಿಹಾರ ವಿತರಣೆಗೆ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಟಿಪ್ಪರ್ ಲಾರಿ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತರನ್ನು ಮನೋಜ್, ನರಸಿಂಹಮೂರ್ತಿ, ನಂದೀಶ್ ಮತ್ತು ಅರುಣ್ ಎಂದು ಗುರುತಿಸಲಾಗಿದೆ. ಎಲ್ಲರೂ ಅಜ್ಜವಾರ ಗ್ರಾಮದ ನಿವಾಸಿಗಳಾಗಿದ್ದು, ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಈ ದುರ್ಘಟನೆಯ ವಿಚಾರವನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಪ್ರದೀಪ್ ಈಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರು. ನಂತರ ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಪೈಕಿ ನರಸಿಂಹ ಅವರ ವಿವಾಹ ಕೆಲ ತಿಂಗಳ ಹಿಂದೆ ನಡೆದಿದ್ದು, ಮದುವೆಯಾದ ಆರು ತಿಂಗಳೊಳಗೇ ಅವರು ವಿಧಿಯಾಟಕ್ಕೆ ಗಂಡನನ್ನು ಕಳೆದುಕೊಂಡಿದ್ದಾರೆ.

ಈಜಲು ಹೋಗಿ ಕಾಲುವೆಯಲ್ಲಿ ಮುಳುಗಿ ಬಾಲಕರಿಬ್ಬರ ದುರ್ಮರಣ

0

ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಚುಂಚನೂರ ಗ್ರಾಮದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ಗ್ರಾಮಸ್ಥರು ಮತ್ತು ಪೊಲೀಸರ ಶೋಧ ಕಾರ್ಯದ ಮೂಲಕ ಅವರ ದೇಹವನ್ನು ಹೊರತೆಗೆಯಲಾಗಿದೆ.

ಮೃತ ಬಾಲಕರು ಹತ್ತು ವರ್ಷದ ಬಸವರಾಜ್ ಸೋಮನವರ್ ಮತ್ತು ಹನುಮಂತ ಹಗೆದ್ ಎಂದು ಗುರುತಿಸಲಾಗಿದೆ. ಇಬ್ಬರು ಕಾಲುವೆಯಲ್ಲಿ ಈಜಲು ಹೋಗಿರುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಿದ್ದಾರೆ.

ಘಟನೆ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳೀಯರು ಶೋಧ ನಡೆಸಿ ಬಾಲಕರ ಮೃತ ದೇಹವನ್ನು ಹೊರತೆಗೆಯಲು ಸಹಕರಿಸಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಚಿಕಿತ್ಸೆ ಫಲಿಸದೇ ಸಾವು!

0

ಬೆಂಗಳೂರು: ಅರ್ಧದಲ್ಲೇ ಹನಿಮೂನ್‌ ಪ್ರವಾಸದಿಂದ ವಾಪಸ್ಸಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಧು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ನವವಧುವನ್ನು ಗಾನವಿ (26) ಎಂದು ಗುರುತಿಸಲಾಗಿದೆ. ಮದುವೆಯಾಗಿ ಎರಡು ತಿಂಗಳು ಕೂಡ ಪೂರ್ಣಗೊಳ್ಳುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.

ಅಕ್ಟೋಬರ್ 29ರಂದು ಗಾನವಿ ಮತ್ತು ಸೂರಜ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ವಿವಾಹ ಸ್ವಾಗತ ಸಮಾರಂಭ ನಡೆಸಲಾಗಿತ್ತು. ಮದುವೆಯ ಬಳಿಕ ಕಳೆದ ಹತ್ತು ದಿನಗಳ ಹಿಂದೆ ದಂಪತಿ ಹನಿಮೂನ್‌ಗೆಂದು ಶ್ರೀಲಂಕಾಗೆ ತೆರಳಿದ್ದರು. ಆದರೆ ಡಿಸೆಂಬರ್ 21ರಂದು ಹನಿಮೂನ್‌ ಮುಗಿಸದೇ ಅರ್ಧದಲ್ಲೇ ಇಬ್ಬರೂ ಶ್ರೀಲಂಕಾದಿಂದ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

ಹನಿಮೂನ್‌ ಸಂದರ್ಭದಲ್ಲೇ ದಂಪತಿಯ ನಡುವೆ ಜಗಳ ಉಂಟಾಗಿದ್ದು, ಡಿಸೆಂಬರ್ 22ರಂದು ಗಾನವಿಯನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು ಮಧ್ಯಾಹ್ನ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಮನೆಯವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ವೇಳೆ ಗಾನವಿ ಬ್ರೈನ್‌ ಡೆಡ್‌ ಸ್ಥಿತಿಗೆ ತಲುಪಿರುವುದಾಗಿ ವೈದ್ಯರು ತಿಳಿಸಿ, ವೆಂಟಿಲೇಟರ್‌ನಲ್ಲಿ ಇರಿಸಿದ್ದರು. ಆದರೆ ಡಿಸೆಂಬರ್ 25ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಗಾನವಿ ಸಾವನ್ನಪ್ಪಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಗಾನವಿ ಕುಟುಂಬಸ್ಥರು ಸೂರಜ್‌ ಮತ್ತು ಅವರ ಕುಟುಂಬದ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂರಜ್‌ ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದಾರೆ.

ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಮತ್ತಿಕೆರೆ ಗ್ರಾಮಸ್ಥರು

0

ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಚಿರತೆ ಹಾವಳಿಯಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಹಲವು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜಮೀನಿಗೆ ತೆರಳಲು ಹಾಗೂ ಹೊರಗೆ ಓಡಾಡಲು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು.

ಇದೀಗ ಚಿರತೆ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳು ಇರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಉಳಿದ ಚಿರತೆಗಳನ್ನೂ ಕೂಡ ಶೀಘ್ರವಾಗಿ ಸೆರೆಹಿಡಿದು ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕು ಎಂದು ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮತ್ತೊಂದು ಭೀಕರ ಮರ್ಡರ್: ಕತ್ತು ಕೊಯ್ದು ಜಯದೇವ ಆಸ್ಪತ್ರೆಯ ಸ್ಟಾಫ್ ನರ್ಸ್ ಹತ್ಯೆ!

0

ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್‌ನ್ನು ಆಕೆಯ ಪ್ರಿಯಕರ ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಸುಧಾಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಮತಾ (39) ಮದುವೆಯಾಗದೆ ಒಂಟಿಯಾಗಿ ವಾಸಿಸುತ್ತಿದ್ದರು. ಅವರು ಕುಮಾರಸ್ವಾಮಿ ಲೇಔಟ್‌ನಲ್ಲಿ ಸ್ನೇಹಿತೆಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡಿದ್ದು, ಡಿಸೆಂಬರ್ 24ರಂದು ಸ್ನೇಹಿತೆ ಊರಿಗೆ ತೆರಳಿದ್ದ ಕಾರಣ ಮಮತಾ ಆ ದಿನ ರಾತ್ರಿ ಒಬ್ಬರೇ ಮನೆಯಲ್ಲಿದ್ದರು.

ಈ ಸಂದರ್ಭವನ್ನು ಬಳಸಿಕೊಂಡು ಮನೆಗೆ ನುಗ್ಗಿದ ಪ್ರಿಯಕರ ಸುಧಾಕರ್, ಮಮತಾಳ ಕತ್ತು ಕತ್ತರಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 25ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಹತ್ಯೆಯ ವಿಷಯ ಬೆಳಕಿಗೆ ಬಂದಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸ್ ತನಿಖೆಯ ಪ್ರಕಾರ, ಸುಧಾಕರ್ ಮತ್ತು ಮಮತಾ ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು. ಮಮತಾ ತನ್ನಿಗಿಂತ ವಯಸ್ಸಿನಲ್ಲಿ ಹಿರಿಯವಳೆಂಬ ವಿಚಾರ ಸುಧಾಕರ್‌ಗೆ ಆರಂಭದಲ್ಲಿ ತಿಳಿದಿರಲಿಲ್ಲ. ಇತ್ತೀಚೆಗೆ ಸುಧಾಕರ್ ಕುಟುಂಬಸ್ಥರು ಅವನಿಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ ಕೋಪಗೊಂಡು ತನ್ನನ್ನೇ ಮದುವೆಯಾಗಬೇಕೆಂದು ಒತ್ತಾಯಿಸಿದ್ದರು.

ಅಷ್ಟೇ ಅಲ್ಲದೆ, ಸುಧಾಕರ್ ಬೇರೆ ಮದುವೆಯಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡು ಅವನ ಹಾಗೂ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಒತ್ತಡದಿಂದ ಆತಂಕಕ್ಕೊಳಗಾದ ಸುಧಾಕರ್, ಮಮತಾಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 24ರಂದು ಮಮತಾ ಒಬ್ಬರೇ ಇದ್ದ ಸಂದರ್ಭ ಮನೆಗೆ ತೆರಳಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!