ಬೆಂಗಳೂರು: ಪತಿಯ ಪೋಷಕರನ್ನು ಪಿಶಾಚಿಗಳು, ಮೂರ್ಖರು ಹಾಗೂ ದುಷ್ಟರು ಎಂದು ನಿಂದಿಸಿದ್ದಲ್ಲದೆ, ಹೆತ್ತ ಮಗಳನ್ನು ಹಲವು ತಿಂಗಳುಗಳ ಕಾಲ ದೂರವಿಟ್ಟಿದ್ದ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯೊಬ್ಬರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ವಿಚ್ಛೇದನ ಕೋರಿ ಪತಿ ಅರ್ಜಿ ಸಲ್ಲಿಸಿದ ನಂತರ ಗಂಡ ಮತ್ತು ಮಗಳ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದ ಪತ್ನಿಯ ಮನವಿಯನ್ನು ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಪತಿ ಮತ್ತು ಮಗುವನ್ನು ತ್ಯಜಿಸಿದ ಬಳಿಕ ನಡೆದ ಹಲವು ಸುತ್ತಿನ ರಾಜಿ ಸಂಧಾನ ಸಭೆಗಳಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಪತಿಯೊಂದಿಗೆ ತೆರಳಲು ಪತ್ನಿ ಮುಂದಾಗಿಲ್ಲ. ಅಲ್ಲದೆ, ಮಗು ತನ್ನ ವಶಕ್ಕೆ ಪಡೆಯಲು ಸಹ ಯಾವುದೇ ಪ್ರಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವಿಚ್ಛೇದನ ಮಂಜೂರು ಮಾಡಿರುವ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿಚ್ಛೇದನ ಮಂಜೂರು ಮಾಡಿರುವುದನ್ನು ರದ್ದುಗೊಳಿಸುವುದು ಹಾಗೂ ಮಗಳ ಮೇಲಿನ ಪಾಲನೆಯ ಹಕ್ಕು ತನ್ನಿಗೆ ನೀಡಬೇಕು ಎಂದು ಕೋರಿ ಸಹಾಯಕ ಪ್ರಾಧ್ಯಾಪಕಿ (ಪತ್ನಿ) ಸಲ್ಲಿಸಿದ್ದ ಅರ್ಜಿ ಹಾಗೂ ಪತಿ ಸಲ್ಲಿಸಿದ್ದ ಪ್ರತಿಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಕೆ.ವಿ. ಅವಿಂದ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ, ಪತ್ನಿ ಸಾರ್ವಜನಿಕವಾಗಿ ಪತಿಯನ್ನು ಆಶ್ಲೀಲ ಭಾಷೆಯಲ್ಲಿ ನಿಂದಿಸಿರುವುದು ಹಾಗೂ ಪತಿಯ ಪೋಷಕರನ್ನು ‘ಪಿಶಾಚಿಗಳು’ ಎಂದು ಉಲ್ಲೇಖಿಸಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. ಅಲ್ಲದೆ, ದಂಪತಿ 2014ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದೂ ದಾಖಲೆಗಳಿಂದ ತಿಳಿದುಬಂದಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪತ್ನಿಯ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪತ್ನಿ ಪತಿಯಿಂದ ದೂರವಾದ ನಂತರ ನಡೆದ ಹಲವು ರಾಜಿ ಸಂಧಾನ ಸಭೆಗಳಲ್ಲಿ ಪತಿಯೊಂದಿಗೆ ಹಿಂದಿರುಗಲು ನಿರಾಕರಿಸಿದ್ದಲ್ಲದೆ, ಮಗುವಿನ ಪಾಲನೆ ವಹಿಸಿಕೊಳ್ಳುವುದಕ್ಕೂ ನಿರಾಸಕ್ತಿ ತೋರಿಸಿದ್ದಾಳೆ. ಆದರೆ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುತ್ತಿದ್ದಂತೆಯೇ ಮಗುವಿನ ಪಾಲನೆಯ ಹಕ್ಕು ಕೋರಿರುವುದು ಪತ್ನಿಯ ನಡೆಯಲ್ಲಿ ಪ್ರಾಮಾಣಿಕತೆ ಕೊರತೆಯಿದೆ ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಗು ಜನಿಸಿದ ದಿನದಿಂದ ಸರಿಯಾಗಿ ನೋಡಿಕೊಳ್ಳದೆ, ಎರಡು ವರ್ಷ ವಯಸ್ಸಿನಲ್ಲಿಯೇ ಮಗುವನ್ನು ತ್ಯಜಿಸಿರುವ ಪತ್ನಿ, ಇದೀಗ ಮಗು 13 ವರ್ಷ ವಯಸ್ಸಿಗೆ ಬಂದ ಬಳಿಕ ಪಾಲನೆಯ ಹಕ್ಕು ಕೇಳುತ್ತಿರುವುದು ಸಮಂಜಸವಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಸ್ತುತ ಮಗು ಪತಿಯ ಪೋಷಕರೊಂದಿಗೆ ವಾಸಿಸುತ್ತಿದ್ದು, ಅವರು ಮಗುವನ್ನು ನೋಡಿಕೊಳ್ಳಲು ಅಸಮರ್ಥರು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರಗಳನ್ನು ಪತ್ನಿ ಸಲ್ಲಿಸಿಲ್ಲ. ಆದ್ದರಿಂದ ಮಗು ಪತಿಯ ಪೋಷಕರೊಂದಿಗೆ ಇರುವುದರಲ್ಲಿ ಯಾವುದೇ ದೋಷವಿಲ್ಲ. ಮಗುವಿನ ಪೋಷಣೆಯನ್ನು ತಂದೆ ವಹಿಸಿಕೊಳ್ಳುವುದರಿಂದ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆದರೆ, ಪತ್ನಿಗೆ ಮಾಸಿಕ ನಿರ್ವಹಣಾ ವೆಚ್ಚವಾಗಿ 20 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.