ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಮಾನವಾಗಿ ಹೆಜ್ಜೆ ಇಡುತ್ತಿರುವ ದಳಪತಿ ವಿಜಯ್, ತಮ್ಮ ನಟನಾ ಪಯಣಕ್ಕೆ ‘ಜನ ನಾಯಗನ್’ ಮೂಲಕ ತೆರೆ ಎಳೆಯಲಿದ್ದಾರೆ ಎಂಬ ಮಾತು ಜೋರಾಗಿದೆ. ಈ ಸಿನಿಮಾ ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಎಂಬ ಚರ್ಚೆ ಕೂಡ ನಡೆಯುತ್ತಲೇ ಇದೆ. ಆದರೆ ಈಗ ಅದೇ ರಾಜಕೀಯ ಅಜೆಂಡಾಕ್ಕೆ ವಿದೇಶದಲ್ಲಿ ಅಡ್ಡಿ ಎದುರಾಗಿದೆ.
‘ಜನ ನಾಯಗನ್’ ಚಿತ್ರದ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮಲೇಷ್ಯಾದ ಕೌಲಾಲಂಪುರದಲ್ಲಿ ಆಯೋಜಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಜಯ್ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ರಾಜಕೀಯ ಸಂದೇಶ ನೀಡುವುದು ಹೊಸದಲ್ಲ. ಇದೇ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವೂ ರಾಜಕೀಯ ಅರ್ಥ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಇದಕ್ಕೆ ಮಲೇಷ್ಯಾ ಪೊಲೀಸರು ಸ್ಪಷ್ಟವಾಗಿ ಬ್ರೇಕ್ ಹಾಕಿದ್ದಾರೆ.
“ಕಾರ್ಯಕ್ರಮ ಸಂಪೂರ್ಣವಾಗಿ ಮನೋರಂಜನೆಗೆ ಸೀಮಿತವಾಗಿರಬೇಕು. ಯಾವುದೇ ರಾಜಕೀಯ ಹೇಳಿಕೆ, ಘೋಷಣೆ ಅಥವಾ ಭಾಷಣಕ್ಕೆ ಅವಕಾಶ ಇರುವುದಿಲ್ಲ” ಎಂದು ಮಲೇಷ್ಯಾ ಪೊಲೀಸರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಇದರಿಂದಾಗಿ ವಿಜಯ್ ಅವರು ವಿದೇಶದಲ್ಲಿ ತಮ್ಮ ರಾಜಕೀಯ ಅಜೆಂಡಾ ಪ್ರಚಾರ ಮಾಡುವ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.
‘ಜನ ನಾಯಗನ್’ ಸಿನಿಮಾ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಇದರ ನಂತರ ಅವರು ಸಂಪೂರ್ಣವಾಗಿ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಬಲವಾಗಿವೆ. ಎಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬಿಜು, ಪ್ರಿಯಾಮಣಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರಲಿದೆ.



