Home Blog Page 269

ಕಾರ್ಯ ನಿರ್ವಹಣೆಯಲ್ಲಿ ಮಾನವೀಯತೆಯಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ದ್ವಜಾರೋಹಣ ನೆರವೇರಿಸಿ, ಸಂವಿಧಾನದ ಮಹತ್ವ ಮತ್ತು ಸರ್ಕಾರಿ ನೌಕರರ ಕರ್ತವ್ಯಗಳ ಕುರಿತು ಮಹತ್ವದ ಸಂದೇಶ ನೀಡಿದರು.

ನಾವು ಕಾನೂನು ಹಾಕಿಕೊಂಡು ನಡೆಯುತ್ತಿರುವವರು. ನಾವು ಹೇಗೆ ಕಾನೂನಾತ್ಮಕವಾಗಿ ಬದುಕಬೇಕು ಎಂಬುದನ್ನು ಸಂವಿಧಾನ ನಮಗೆ ತಿಳಿಸುತ್ತದೆ. ವೇದಗಳಲ್ಲಿ ಜೀವನದ ಸಾರಾಂಶ ಇರುವಂತೆ, ಸಂವಿಧಾನದಲ್ಲೂ ನಮ್ಮ ಜೀವನದ ಮೌಲ್ಯಗಳು ಅಡಗಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ವ್ಯವಸ್ಥೆಯಲ್ಲಿ ಸರ್ಕಾರದ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಕಾರ್ಯಾಂಗದ ಮೇಲಿದೆ. ನಾವು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇವೆ. ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡು, ಸಾರ್ವಜನಿಕರಿಗೆ ಸಹಾಯ ಮಾಡಬೇಕು. ನೌಕರಿಯಲ್ಲಿ ಅಹಂ ಹಾಗೂ ಜಂಭ ಬೇಡ. ನಾಗರಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಪರಿಹಾರ ಒದಗಿಸುವ ಮನೋಭಾವ ಇರಬೇಕು ಎಂದು ಸಲಹೆ ನೀಡಿದರು.

ಕಾನೂನು ಜಾರಿ ಮಾಡುವವರು ನಾವೇ ಆಗಿರುವುದರಿಂದ, ಕಾನೂನಿಗೆ ಮಾನವೀಯತೆಯ ನೆಲೆ ಸೇರಿಸಿ ಕಾರ್ಯನಿರ್ವಹಿಸಬೇಕು. ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಜನಸೇವೆ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಮ್ಮಿ-ಡ್ಯಾಡಿ ಸಂಸ್ಕೃತಿಯನ್ನು ಹೊಡೆದೋಡಿಸಿ: ದಿಲೀಪ್ ವರ್ಣೇಕರ್

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತದ ಪ್ರತಿ ಮನೆಮನೆಯಲ್ಲಿಯೂ ಸ್ವದೇಶಿ ಮಂತ್ರ ರಿಂಗಣಿಸುತ್ತಿರಬೇಕು. ಇದರಿಂದ ಭಾರತದ ಉದ್ಧಾರವಾಗಲು ಸಾಧ್ಯ. ಇಲ್ಲವಾದರೆ ಎಲ್ಲವನ್ನೂ ಪರದೇಶಕ್ಕೆ ಕೊಟ್ಟು ಒಂದಿನ ನಾವು ಪಾಪರ್‌ಗಳಾಗಬೇಕಾಗುತ್ತದೆ ಎಂದು ಧರ್ಮ ಜಾಗರಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ದಿಲೀಪ್ ವರ್ಣೇಕರ್ ಹೇಳಿದರು.

ಪಟ್ಟಣದ ಹಿರೇಮಠ ಸಭಾಭವನದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸಲು ಹಿಂದೂಗಳೇ ಕಾರಣ. ನಮಗೆ ಒಬ್ಬರು-ಇಬ್ಬರು ಮಕ್ಕಳು ಸಾಕೆಂದು ನಿರ್ಧರಿಸುತ್ತ ಹೋದರೆ ಒಂದು ದಿನ ನಾವೇ ಈ ದೇಶದಲ್ಲಿ ಅಲ್ಪಸಂಖ್ಯಾತರಾಗಬೇಕಾಗುತ್ತದೆ. ಈ ಎಚ್ಚರಿಕೆ ಎಲ್ಲರಲ್ಲಿಯೂ ಇರಲಿ. ಆದ್ದರಿಂದ ಹಿಂದೂಗಳು ಕನಿಷ್ಠ ಮೂರು-ನಾಲ್ಕು ಮಕ್ಕಳನ್ನಾದರೂ ಪಡೆಯಬೇಕು. ಇದರಿಂದ ನಮ್ಮ ಹಿಂದೂಸ್ತಾನವನ್ನು ನಮ್ಮದನ್ನಾಗಿ ಉಳಿಸಿಕೊಳ್ಳಲು ಸಾಧ್ಯ ಎಂದರು.

ದೂರದರ್ಶನದಲ್ಲಿ ಬರುವ ಜಾಹೀರಾತುಗಳನ್ನು ನೋಡಿ ನಾವೇನಾದರೂ ವಿದೇಶಿ ವಸ್ತುಗಳ ಖರೀದಿಗೆ ಮುಗಿಬಿದ್ದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಯುತ್ತದೆ. ಆದ್ದರಿಂದ ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬಳಸುವತ್ತ ಹೆಚ್ಚಿನ ಗಮನ ನೀಡಬೇಕು. ನಮ್ಮ ದೇಶವನ್ನು ಶ್ರೀಮಂತಿಕೆಯ ರಾಷ್ಟ್ರ ಮಾಡಬೇಕು. ಮಹಿಳೆಯರು ಕ್ರಿಯಾಶೀಲರಾದರೆ ಹಿಂದೂ ಸಮಾಜವನ್ನು ಕಟ್ಟಲು ಯಾವುದೇ ತೊಂದರೆಯಿಲ್ಲ. ಜಗತ್ತಿನ 40 ದೇಶಗಳಲ್ಲಿ ಸಂಘದ ಶಾಖೆಗಳಿವೆ. ಹಿಂದೂಗಳನ್ನು ಒಟ್ಟುಗೂಡಿಸಲು ಹೋರಾಡಿ ಯಶಸ್ವಿಯಾದವರು ಡಾ. ಹೆಡಗೆವಾರರು ಎಂದು ಹೇಳಿದರು.

ಬೇರೆ ಧರ್ಮದವರು ಯಾರೇ ಭಾರತವನ್ನು ಆಳಿದರೂ ಅವರಿಗೆ ಭಾರತವನ್ನು ತಮ್ಮ ಧರ್ಮದ ದೇಶವನ್ನಾಗಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಹಿಂದುತ್ವ ಈ ದೇಶದಲ್ಲಿ ಅಷ್ಟೊಂದು ಗಟ್ಟಿಯಾಗಿದೆ. ಮಮ್ಮಿ-ಡ್ಯಾಡಿ ಸಂಸ್ಕೃತಿಯನ್ನು ಹೊಡೆದೋಡಿಸಿ ಅಪ್ಪ-ಅಮ್ಮ ಸಂಸ್ಕೃತಿಯನ್ನು ಜಾರಿಗೆ ತಂದರೆ ದೇಶದ ಸಂಸ್ಕೃತಿ ಇನ್ನಷ್ಟು ಹೆಚ್ಚುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಸಂಘದ ನೂರು ವರ್ಷಗಳ ಕಾರ್ಯಕ್ರಮ ಶ್ಲಾಘನೀಯ. ಮುಖ್ಯ ವಕ್ತಾರರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಹಿಂಸೆಯಿಂದ ದೂರವಿದ್ದು ಅಹಿಂಸೆಯಿಂದ ಜೀವನ ನಡೆಸುವವನೇ ನಿಜವಾದ ಹಿಂದೂ. ಯಾರೇ ಈ ದೇಶವನ್ನು ನಾಶ ಮಾಡಲು, ಮತಾಂತರ ಮಾಡಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಭಾರತೀಯರು ಭೋಗ ಜೀವಿಗಳಲ್ಲ, ಅವರು ತ್ಯಾಗ ಜೀವಿಗಳು ಮತ್ತು ಯೋಗ ಜೀವಿಗಳು. ಮನುಸ್ಮೃತಿ ಆಗಿನ ಕಾಲಕ್ಕೆ ಸೂಕ್ತವಾಗಿತ್ತು. ಅದರಲ್ಲಿನ ಅನೇಕ ಉತ್ತಮೋತ್ತಮ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಸುಮ್ಮನೆ ಅದನ್ನು ಟೀಕಿಸುವುದು ಬೇಡ ಎಂದರು.

ಕಾರ್ಯಕ್ರಮದಲ್ಲಿ ರವಿ ದಂಡಿ, ಉಮೇಶ ಪಾಟೀಲ, ಆರ್.ಜಿ. ಪಾಟೀಲ, ಉಮೇಶ ಸಂಗನಾಳಮಠ, ಮುತ್ತಣ್ಣ ಪಲ್ಲೇದ, ರಾಜಶೇಖರ ವಂಕಲಕುಂಟಿ, ಹೇಮಗಿರೀಶ ಹಾವನಾಳ, ಸುತ್ತಲಿನ ಗ್ರಾಮಗಳ ಪ್ರಮುಖರನೇಕರು ಪಾಲ್ಗೊಂಡಿದ್ದರು. ಗೀತಾ ಭೋಪಳಾಪೂರ ಪ್ರಾರ್ಥಿಸಿದರು. ಜಗದೀಶ ಸಂಕನಗೌಡ್ರ ಸ್ವಾಗತಿಸಿದರು. ಅರ್ಚನಾ ಕೊಂಡಿ ಸಮಿತಿಯ ಸದಸ್ಯರನ್ನು ಪರಿಚಯಿಸಿದರು. ಸಮಿತಿ ಅಧ್ಯಕ್ಷ ಬಸವರಾಜ ವಂಕಲಕುಂಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಘುನಾಥ ಕೊಂಡಿ ನಿರೂಪಿಸಿದರು. ಡಾ. ಆರ್.ಕೆ. ಗಚ್ಚಿನಮಠ ವಂದಿಸಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೂ ಸಹ ಸಂಘದ ಧೋರಣೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಂಘವು ಜಾತಿ-ಜಾತಿಗಳಲ್ಲಿನ ವ್ಯತ್ಯಾಸವನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿದೆ. ಹಿಂದೂ ಧರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಸ್ವಾಮಿ ವಿವೇಕಾನಂದರು ವಿಶ್ವಧರ್ಮಸಮ್ಮೇಳನದಲ್ಲಿ ಮಾತನಾಡಿ ಹಿಂದೂ ಧರ್ಮದ ಪ್ರತಿಪಾದನೆ ಮಾಡಿದ್ದು ಇದಕ್ಕೆ ಕಾರಣ. ಇನ್ನಾದರೂ ನಾವು ಒಗ್ಗಟ್ಟಾಗದಿದ್ದರೆ ಬಿಕ್ಕಟ್ಟನ್ನು ಸೃಷ್ಟಿಸಿ ಹಿಂದೂ ರಾಷ್ಟ್ರವನ್ನು ಛಿದ್ರಛಿದ್ರ ಮಾಡಲು ದುಷ್ಟ ಶಕ್ತಿಗಳು ಕಾಯುತ್ತಿವೆ. ಅದಕ್ಕಾಗಿ ಹಿಂದೂಗಳೆಲ್ಲರೂ ಎಚ್ಚರವಾಗಿರಬೇಕೆಂದು ದಿಲೀಪ್ ಹೇಳಿದರು.

ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿ ಸೂಸೈಡ್; ವರದಕ್ಷಣಿ ಕಿರುಕುಳ ಕಾರಣವಾ?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಯಡಿಯೂರಿನಲ್ಲಿ ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೀರ್ತಿ ಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗಂಡನ ಹಾಗೂ ಅವರ ಕುಟುಂಬಸ್ಥರ ವರದಕ್ಷಿಣೆ ಕಿರುಕುಳದಿಂದ ಕೀರ್ತಿ ಸಾವಿಗೆ ಶರಣಾಗಿದ್ದಾಳೆ ಎಂದು ಕೀರ್ತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತಕೀರ್ತಿ ಶ್ರೀ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವಳು. 2023 ರ ನವೆಂಬರ್‌ನಲ್ಲಿ ಗುರುಪ್ರಸಾದ್ ಅವರೊಂದಿಗೆ ಮದುವೆಯಾಗಿದ್ದರು. ಕುಟುಂಬದವರ ಆರೋಪದ ಪ್ರಕಾರ, ಮದುವೆಗೆ ಸುಮಾರು 35 ಲಕ್ಷ ರೂ. ವೆಚ್ಚದ 400 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ. ನಗದು ನೀಡಲಾಗಿತ್ತು. ಆದರೂ, ಕೀರ್ತಿ ಶ್ರೀ ಮೇಲೆ ಗಂಡನ ಮತ್ತು ಅವರ ಮನೆಯವರು ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೀರ್ತಿ ಶ್ರೀ ತಂದೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ತನಿಖೆ ನಡೆಸಲು ವಿನಂತಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾವಣಗೆರೆ| 2028ಕ್ಕೆ ಸಿಎಂ ಆಗುವ ಹಗಲು ಕನಸು ಕಾಣ್ತಿದ್ದಾರೆ ಕುಮಾರಸ್ವಾಮಿ; ಜಮೀರ್ ವ್ಯಂಗ್ಯ

0

ದಾವಣಗೆರೆ:- ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣ್ತಾರೆ ಎಂದು ಹೇಳುವ ಮೂಲಕ 2028 ಕ್ಕೆ ನಾನೇ ಸಿಎಂ ಆಗ್ತೀನಿ ಎಂಬ ಹೆಚ್‌ಡಿಕೆ ಹೇಳಿಕೆಗೆ ಜಮೀರ್ ಅಹಮದ್ ಟಾಂಗ್‌ ಕೊಟ್ಟಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣುತ್ತಾರೆ. 2013, 2019 ಹಾಗೂ 2023 ರಲ್ಲಿ ನಾವೇ ಬರುತ್ತೇವೆ ಅಂದ್ರು ಬರಲಿಲ್ಲ. ಜೆಡಿಎಸ್‌ನಲ್ಲಿ ಸಿದರಾಮಯ್ಯ ಇದ್ದಾಗ 59 ಸೀಟ್‌ ಗೆದ್ದಿದ್ದರು. ಅದನ್ನು ಕೂಡ ಕುಮಾರಸ್ವಾಮಿ ರೀಚ್ ಆಗಲಿಲ್ಲ. 2023ರ ಚುನಾವಣೆಯಲ್ಲಿ 19ಕ್ಕೆ ಬಂದ್ರು, ಅವರು ಸಿಎಂ ಆಗುವ ಹಗಲುಗನಸು ಕಾಣುತ್ತಾರೆ.

ದೇವೇಗೌಡ್ರು ನೂರು ವರ್ಷ ಅರೋಗ್ಯವಾಗಿ ಇರಲಿ. ನಾನು ಈಗ ಕಾಂಗ್ರೆಸ್‌ನಲ್ಲಿ ಇರಬಹುದು, ಆದರೆ ಅವರು ನನ್ನ ರಾಜಕೀಯ ಗುರುಗಳು. ಇನ್ನೂ, ಪ್ರಾದೇಶಿಕ ಪಕ್ಷಕ್ಕೆ ಅಷ್ಟೋ ಇಷ್ಟೋ ಶಕ್ತಿ ಇದೆ. ಬಿಜೆಪಿ ಸೇರಿ ಅದನ್ನು ಕೂಡ ಕಳ್ಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿದ್ರೆ ಏನು ಆಗುತ್ತೆ ಅಂತಾ ಮುಂದೆ ನೋಡೋಣ ಎಂದಿದ್ದಾರೆ.

ದುಡಿದು ತಿನ್ನುವ ರೂಢಿಯನ್ನು ಬೆಳೆಸಿಕೊಳ್ಳಿ: ಅಕ್ಕಿಮಠದ ಗುರುಲಿಂಗ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಮತ್ತು ಅವಿದ್ಯಾವಂತರಿಗಿಂತ ವಿದ್ಯಾವಂತರಲ್ಲಿಯೇ ಕೌಟುಂಬಿಕ ಕಲಹಗಳು, ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಬೆಲೆಬಾಳುವ ನಾಯಿಯನ್ನು ಸಾಕುವ ಜನ, ತಂದೆ-ತಾಯಿಯನ್ನು ಸಾಕದಿರುವುದು ನೋವಿನ ಸಂಗತಿ ಎಂದು ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.

ಭಾನುವಾರ ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ, ಶರಣಶ್ರೀ ಪ್ರಶಸ್ತಿ ಪ್ರದಾನ, ಭಕ್ತಿ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಗುರು-ಹಿರಿಯರನ್ನು ಗೌರವ, ಶ್ರದ್ಧೆಯಿಂದ ಕಾಣುವುದು ಇಂದಿನ ಅಗತ್ಯವಾಗಿದೆ. ಇಂದು ಅತಿಯಾದ ಮೊಬೈಲ್ ಬಳಕೆಯು ನಮಗೆ ಹೆಚ್ಚು ತೊಂದರೆದಾಯಕವಾಗಿದ್ದು, ದುಡಿದು ತಿನ್ನುವ ರೂಢಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿವಶಾಂತವೀರ ಶರಣರು ಮಾತನಾಡಿ, ಶ್ರೀಮಠದ ಜಾತ್ರೆ ಮನುಷ್ಯನ ಬದುಕನ್ನು ಖಾತ್ರಿಪಡಿಸುವ ಜಾತ್ರೆಯಾಗಿದೆ. ಇಲ್ಲಿ ಭಕ್ತ ಹಿತಚಿಂತನೆ ಮೂಲಕ ಜನರಲ್ಲಿ ಸದ್ಭಾವನೆ, ಸದ್ವಿಚಾರ ಬೆಳೆಸುವುದಾಗಿದೆ. ಸಮಾಜಮುಖಿಯಾಗಿ ಕಾರ್ಯಚಟುವಟಿಕೆ ಆಯೋಜಿಸುವುದು ಅವುಗಳ ಸದುಪಯೋಗ ಪಡೆದುಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದಾಗಿದೆ ಎಂದರು.

ಶರಣಶ್ರೀ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಮಾತನಾಡಿ, ರೈತ ಬೆಳೆಗಳನ್ನು ಬೆಳೆಯಲು ಕೇವಲ ಬೆವರು ಸುರಿಸುವುದಷ್ಟೇ ಅಲ್ಲ, ರಕ್ತವನ್ನೂ ಸುರಿಸುತ್ತಾನೆ ಎಂಬುದನ್ನು ಮನಗಾಣಬೇಕಾಗಿದೆ. ಬಿಸಿಲು-ಚಳಿ-ಮಳೆ ಎನ್ನದೇ ನಿರಂತರವಾಗಿ ದುಡಿದು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಅವಕಾಶ ಸಮಾಜ, ಸರ್ಕಾರ ನೀಡಿಲ್ಲ. ರೈತರು ಋತುಮಾನಾಧಾರಿತ ಬೆಳೆ ಪದ್ಧತಿಯನ್ನು ರೂಢಿಸಿಕೊಂಡು ಸಮಾಜದಲ್ಲಿ ಯಾರಿಗೂ ಕಡಿಮೆ ಇರದ ರೀತಿಯಲ್ಲಿ ಜೀವನ ಮಟ್ಟವನ್ನು ರೂಪಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ನೂತನವಾಗಿ ಶ್ರೀಮಠದಲ್ಲಿ ಹರಕೆಯ ತೇರನ್ನು ಲೋಕಾರ್ಪಣೆಗೊಳಿಸಲಾಯಿತು. 36 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬಳೂಟಗಿಯ ಹಿರೇಮಠದ ಶಿವಕುಮಾರ ಸ್ವಾಮೀಜಿ, ರಬಕವಿಯ ಗುರುಸಿದ್ಧ ಸ್ವಾಮೀಜಿ, ಕಂಪಸಾಗರ ಅಭಿನವ ನಾಗಭೂಷಣ ಸ್ವಾಮೀಜಿ, ಹೆಬ್ಬಾಳದ ಪ್ರಕಾಶ ಶರಣರು, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ ಇದ್ದರು.

ಬೆಂಗಳೂರಿನ ಗಾಯಕ ಕಡುಬಗೆರೆಯ ಮುನಿರಾಜು ಹಾಗೂ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿತು. ಹನುಮಂತ ಅಲ್ಕೋಡ ಹಾಗೂ ತಂಡದಿಂದ ಭಕ್ತಿ ಸಂಗೀತ ಜರುಗಿತು. ಬಿ.ವೈ. ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಸವಿತಾ ಶಿವಕುಮಾರ ಸ್ವಾಗತಿಸಿ, ನಿರೂಪಿಸಿದರು. ಶಿವಲಿಂಗ ಶಾಸ್ತ್ರಿಗಳು ಸಿದ್ದಾಪುರ ನಿರೂಪಿಸಿದರು.

ಶರಣರ ಮಠ ಹಾಗೂ ನವಲಗುಂದದ ಸಿದ್ಧಲಿಂಗನಗೌಡ ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ಸಹಯೋಗದಲ್ಲಿ ಕೃಷಿ ಸಾಧಕಿ ರಾಯಚೂರಿನ ಕವಿತಾ ಮಿಶ್ರಾ, ಜಾನಪದ ಕಲಾವಿದ ಕಡುಬಗೆರೆ ಮುನಿರಾಜ, ಐಐಟಿ ಸಂಶೋಧನಾರ್ಥಿ ಅನ್ನಪೂರ್ಣ ಬಸಯ್ಯ ಬಳೂಲಮಠರಿಗೆ ಅವರಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ಉಡಚಮ್ಮದೇವಿ ಗುಡಿ ಓಣಿಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ವಾಸುದೇವ ಎಸ್. ಲಕ್ಷ್ಮೇಶ್ವರ, ಮಂಜುನಾಥ ಸುಣಗಾರ, ಪ್ರಕಾಶ ಪೂಜಾರ, ರವಿಕುಮಾರ ಸವಣೂರ, ಕುಮಾರ ಪೂಜಾರ, ಅರ್ಜುನ ಪೂಜಾರ, ಶ್ರೀಧರ ಸುಣಗಾರ, ನೀಲಕಂಠ ಗುಡಿಸಾಗರ, ಚಾಮರಾಜ ಪೂಜಾರ, ಶ್ರೀಕಾಂತ ಪೂಜಾರ, ಪರಶುರಾಮ ಹಿತ್ತಲಮನಿ, ಉಮಣ್ಣ ಪೂಜಾರ, ರಾಮಣ್ಣ ಲಕ್ಷ್ಮೇಶ್ವರ, ಪ್ರವೀಣ ಲಕ್ಕಣ್ಣವರ, ಸಂಜು ಪೂಜಾರ, ಮಂಜುನಾಥ ಪೂಜಾರ, ಪ್ರಶಾಂತ ಲಕ್ಕಣ್ಣವರ, ಪ್ರಸನ್ನ ಲಕ್ಕಣ್ಣವರ, ಮಹೇಶ ಪೂಜಾರ, ಮಂಜುನಾಥ ಪೂಜಾರ, ಶ್ರೀಕಾಂತ ಪೂಜಾರ, ಗೋಪಾಲ ಲಕ್ಷ್ಮೇಶ್ವರ, ಮಲ್ಲೇಶ ಲಕ್ಷ್ಮೇಶ್ವರ, ಶಿವಾನಂದ ಲಕ್ಷ್ಮೇಶ್ವರ, ಬಸವರಾಜ ಜಿಗಳೂರ, ಮಧುಸೂದನ ಪೂಜಾರ, ಪುಷ್ಪಾ ಪೂಜಾರ, ಲಕ್ಷ್ಮಿ ಪೂಜಾರ, ನಾಗವ್ವ ಜಿಗಳೂರ, ಪ್ರೇಮಾ ಲಕ್ಷ್ಮೇಶ್ವರ, ಪಾರವ್ವ ಪೂಜಾರ, ಅನ್ನಪೂರ್ಣ ಸವಣೂರ, ರತ್ನಾ ಲಕ್ಷ್ಮೇಶ್ವರ, ಲಕ್ಷ್ಮಿ ಲಕ್ಷ್ಮೇಶ್ವರ, ಲಕ್ಷ್ಮಿ ಪೂಜಾರ, ಚನ್ನಮ್ಮ ಪೂಜಾರ, ಮಹಾದೇವಿ ಹಿರೇಮಠ, ಶೋಭಾ ಬಾರಕೇರ, ಲಲಿತಾ ಲಕ್ಷ್ಮೇಶ್ವರ, ಸುಜಾತಾ ಸುಣಗಾರ, ರೇಣುಕಾ ಪೂಜಾರ, ಗೌರಮ್ಮ ಮರಿನಾಯಕರ, ಮಂಗಳಾ ಲಕ್ಕಣ್ಣವರ, ಲಕ್ಷ್ಮಿ ಪಾ.ಪೂಜಾರ, ಗೀತಾ ಶಿ.ಪೂಜಾರ, ಲಲಿತಾ ಪೂಜಾರ, ಸುವರ್ಣ ಪೂಜಾರ, ಕಮಲವ್ವ ಪೂಜಾರ, ಗಿರಿಜಾ ಪೂಜಾರ, ಶೋಭಾ ಹಿತ್ತಲಮನಿ, ಶರಣಮ್ಮ ಪೂಜಾರ, ಶಶಿಕಲಾ ಉ.ಪೂಜಾರ ಉಪಸ್ಥಿತರಿದ್ದರು.

ಗದಗ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್‌ ಅವರಿಗೆ ರಾಜ್ಯಪಾಲರಿಂದ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದಕ್ಕಾಗಿ ಗದಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಳಗಾವಿ ವಿಭಾಗ ಮಟ್ಟದಲ್ಲಿ ಅತ್ಯುತ್ತಮ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಇವರನ್ನು ಆಯ್ಕೆ ಮಾಡಲಾಗಿದ್ದು, ರವಿವಾರ ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಡಾ. ದುರಗೇಶ್ ಕೆ.ಆರ್ ಅವರು ತಮ್ಮ ಸೇವಾವಧಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ, ಶಿಸ್ತಿನಿಂದ ಹಾಗೂ ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮತದಾರರ ಜಾಗೃತಿ, ಶಾಂತಿಯುತ ಚುನಾವಣೆ ಹಾಗೂ ಸುಸೂತ್ರ ನಿರ್ವಹಣೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಚುನಾವಣಾ ಆಯೋಗವು ಈ ಗೌರವ ನೀಡಿದೆ. ಗದಗ ಜಿಲ್ಲೆಯಿಂದ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿರುವುದು ಜಿಲ್ಲೆಯ ಆಡಳಿತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.

ಕ್ರೀಡೆ ಉತ್ತಮ ಆರೋಗ್ಯಕ್ಕೆ ದಾರಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮೀಣ ಭಾಗದ ಕ್ರೀಡಾಪಟುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯಿಂದ ಬರುವ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಬಿಜೆಪಿ ಮುಖಂಡ ಆನಂದಗೌಡ ಎಚ್.ಪಾಟೀಲ್ ಹೇಳಿದರು.

ಡಂಬಳ ಗ್ರಾಮದ ಎಪಿಎಮ್‌ಸಿ ಆವರಣದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ 286ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಳಿ ಮತ್ತು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮುಕ್ತ ಹಾರ್ಡ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ವಿರೋಧ ಪಕ್ಷದ ಮುಖಂಡ ಹೇಮಗೀರಶ ಹಾವಿನಾಳ ಮಾತನಾಡಿ, ಜೀವನದಲ್ಲಿ ಯುವಕರು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿರಬೇಕಾದರೆ ಕ್ರೀಡೆಗೆ ಆದ್ಯತೆ ನೀಡಿ. ಕ್ರಿಕೆಟ್ ದೇಶದ ಮತ್ತು ವಿಶ್ವದ ಪ್ರಸಿದ್ಧ ಆಟವಾಗಿದೆ. ಗ್ರಾಮೀಣ ಹಳೆ ಕ್ರೀಡಾಪಟುಗಳು ಪ್ರಾಥಮಿಕ, ಹೈಸ್ಕೂಲ್, ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪ್ರಾವೀಣ್ಯತೆ ಹೊಂದಿದವರಿಗೆ ಪ್ರೋತ್ಸಾಹ ನೀಡಿದರೆ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಹೇಳಿದರು.

ಡಂಬಳ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ನಮ್ಮ ಸ್ಥಳೀಯ ಆಟಗಳಿಗೆ ಆದ್ಯತೆ ನೀಡಬೇಕು. ಮೊಬೈಲ್‌ನಿಂದಾಗಿ ದೈಹಿಕ ಆರೋಗ್ಯ ಹಾಳಾಗುತ್ತಿದೆ. ಇದರಿಂದ ಹೊರಬರಬೇಕು ಎಂದು ಹೇಳಿದರು.

ಗೋಣಿಬಸಪ್ಪ ಕೊರ್ಲಹಳ್ಳಿ, ಡಿಎಸ್‌ಎಸ್ ಸಂಚಾಲಕ ಸೋಮಣ್ಣ ಹೈತಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಡಿಎಸ್‌ಎಸ್ ಸಂಚಾಲಕ ದುರಗಪ್ಪ ಹರಿಜನ, ಮಲ್ಲಪ್ಪ ಮಠದ, ಕುಬೇರಪ್ಪ ಕೆ.ಬಂಡಿ, ಮಹೇಶ ಗುಡ್ಡದ, ಬಂದುಸಾಬ ಜಲಾಲನವರ, ಕೆ.ಎನ್. ದೊಡ್ಡಮನಿ, ಪ್ರಕಾಶ ಕೋತಂಬ್ರಿ, ನಿಂಗಪ್ಪ ಮಾದರ, ದುರಗಪ್ಪ ಮಾದರ, ಹಾಲಪ್ಪ ತಾಮ್ರಗುಂಡಿ, ಮರಿಯಪ್ಪ ಸಿದ್ದಣ್ಣವರ, ಯಮನೂರ ದೊಡ್ಡಮನಿ, ದೇವಪ್ಪ ತಳಗೇರಿ, ಮುತ್ತಪ್ಪ ತಳಗೇರಿ, ದೇವಪ್ಪ ತಳಗೇರಿ, ಮುತ್ತಪ್ಪ ದೊಡ್ಡಮನಿ, ವೆಂಕಪ್ಪ ತಳಗೇರಿ, ದುರಗಪ್ಪ ಹರಿಜನ ಪಾಲ್ಗೊಂಡಿದ್ದರು. ಲಕ್ಷ್ಮಣ ದೊಡ್ಡಮನಿ ನಿರೂಪಿಸಿ ವಂದಿಸಿದರು.

ಪುನೀತ್‌ರೆಡ್ಡಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಪುನೀತ್‌ರೆಡ್ಡಿ ಎನ್.ಎ ಜ.23ರಂದು ಹೈದ್ರಾಬಾದ್‌ನಲ್ಲಿ ನಡೆದ ಸೌತ್ ಇಂಡಿಯಾ ಸೈನ್ಸ್ ಫೆಸ್ಟ್ (ಎಸ್‌ಐಎಸ್‌ಎಫ್) ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ, ಇಸ್ರೋ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಭಾರತ ಸ್ಕೌಟ್ ಮತ್ತು ಗೈಡ್ಸ್, ಆರ್ಯಭಟ, ಡ್ರೋಮ್, ಇಂಟರ್ನ್ಯಾಷನಲ್ ಲಯನ್ಸ್, ಭಾರತ ಸೇವಾದಳ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಮತ್ತು ಕಲೆಗಳ ಪ್ರಗತಿ ಸಂಸ್ಥೆ ಸಹಯೋಗದಲ್ಲಿ ಕಳೆದ ವರ್ಷ ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ್ದಾನೆ.

ರಾಜ್ಯಪಾಲರಾದ ಥಾವರಚಂದ ಗೆಹಲೋಟ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದರು. ಗದಗ ಜಿಲ್ಲಾಡಳಿತದಿಂದಲೂ ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಗದಗನಲ್ಲಿ ನಡೆದ ಗದಗ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ `ಬಾಲ ಶರಣಸಿರಿ’ ಪ್ರಶಸ್ತಿ ನೀಡಲಾಗಿದೆ. ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯ ಎನ್.ಕೆ. ಹತ್ತಿಕಾಳ, ವಿಜ್ಞಾನ ಶಿಕ್ಷಕಿ ಎಸ್.ಡಿ. ಕರೆಗೌಡ್ರ ಮತ್ತು ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.

ನಿಮ್ಮ ಆರೋಗ್ಯಕ್ಕೆ ನಮ್ಮ ಆದ್ಯತೆ: ಸಚಿವ ಎಚ್.ಕೆ. ಪಾಟೀಲ್‌

0

ವಿಜಯಸಾಕ್ಷಿ ಸುದ್ದಿ, ಗದಗ: ಒಂದು ವರ್ಷದ ಅವಧಿಯಲ್ಲಿ ಇಲ್ಲಿನ ಕುಟುಂಬಗಳ ಆರೋಗ್ಯದಲ್ಲಿ ಸ್ಪಷ್ಟ ಸುಧಾರಣೆ ಆಗಬೇಕು ಎಂಬುದು ನಮ್ಮ ಗುರಿ. ಜನರ ಆರೋಗ್ಯದ ಕಾಳಜಿ ಈ ‘ನಮ್ಮ ಕ್ಲೀನಿಕ್’ಗಳ ಮೂಲಕ ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಡೋರಗಲ್ಲಿ, ಕುರಹಟ್ಟಿ ಪೇಟೆ, ಹಮಾಲರ ಕಾಲೋನಿ ಹಾಗೂ ಆಶ್ರಯ ಕಾಲೊನಿಯಲ್ಲಿ ಸ್ಥಾಪಿಸಲಾದ ನೂತನ ‘ನಮ್ಮ ಕ್ಲೀನಿಕ್’ಗಳನ್ನು ರವಿವಾರ ಉದ್ಘಾಟಿಸಿ ಸಚಿವರು ಮಾತನಾಡಿದರು.

ಗದಗ ನಗರದ ಆರೋಗ್ಯ ಜಾಲವನ್ನು ಗಣನೀಯವಾಗಿ ವಿಸ್ತರಿಸಲಾಗುತ್ತಿದೆ. ಪ್ರತಿ ಕ್ಲಿನಿಕ್ ಮೂಲಕ ಸುಮಾರು 3 ಸಾವಿರ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಬಡ ಜನರ ಆರೋಗ್ಯ ಸುಧಾರಣೆಯಲ್ಲಿ ‘ನಮ್ಮ ಕ್ಲೀನಿಕ್’ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ತಿಳಿಸಿದರು.

ಸ್ಥಳೀಯ ನಾಗರಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ ಸಚಿವರು, ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಿಮ್ಮ ಆರೋಗ್ಯ, ನಮ್ಮ ಆದ್ಯತೆ ಎಂಬ ಧ್ಯೇಯವಾಕ್ಯದೊಂದಿಗೆ ಗದಗ ನಗರದಲ್ಲಿ ಸರ್ಕಾರದ ‘ನಮ್ಮ ಕ್ಲೀನಿಕ್’ ಯೋಜನೆ ಯಶಸ್ವಿಯಾಗಿ ಜನಸಾಮಾನ್ಯರ ಆರೋಗ್ಯ ಸೇವೆಗೆ ಹೊಸ ಆಯಾಮ ನೀಡಲಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21 ‘ನಮ್ಮ ಕ್ಲಿನಿಕ್’ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಗದಗ ನಗರದಲ್ಲೇ 7 ಕ್ಲಿನಿಕ್‌ಗಳು ಸೇವೆ ನೀಡುತ್ತಿವೆ. ಪ್ರತಿ 15 ಸಾವಿರ ಜನರಿಗೆ ಒಂದು ಕ್ಲಿನಿಕ್ ಸ್ಥಾಪಿಸುವ ಗುರಿಯೊಂದಿಗೆ ಈ ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಪ್ರತಿ ಕ್ಲಿನಿಕ್‌ನಲ್ಲಿ ನಾಲ್ವರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ಮೂಲಭೂತ ಆರೋಗ್ಯ ಪರೀಕ್ಷೆಗಳು ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ನಡೆಯುತ್ತಿದೆ. ವಾರಕ್ಕೊಮ್ಮೆ ಸಾರ್ವಜನಿಕರಿಗೆ ಯೋಗಾಭ್ಯಾಸವನ್ನು ಆಯೋಜಿಸಲಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಈ ಎಲ್ಲಾ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಕೃಷ್ಣ ಪರಾಪುರ, ಯುವರಾಜ ಬಳ್ಳಾರಿ, ಮರ್ಕಾಂಡಪ್ಪ ಹಾದಿಮನಿ, ದುರಗೇಶ್ ವಿಭೂತಿ, ಪೌರಾಯುಕ್ತ ರಾಜಾರಾಮ್ ಪವಾರ, ಡಾ. ವೆಂಕಟೇಶ ರಾಠೋಡ್, ಡಾ. ಗಡಾದ, ಡಾ. ಪ್ರೀತಂ ಖೋತ್, ಎಲ್.ಕೆ. ಜೂಲಕಟ್ಟಿ, ಡಾ. ಗಿರಡ್ಡಿ, ಅ. ಮಹಮ್ಮದ್ ಮುಸ್ತಾಪ, ಶಾಕೀರ್ ಕಾತರಕಿ, ಉಸ್ಮಾನ್ ಮಾಳೊಕೊಪ್ಪ, ವಿತೇಂದ್ರಸಿಂಗ್ ರಜಪೂತ್ ಇದ್ದರು.

“ಸರ್ಕಾರದ ಉದ್ದೇಶ ಜನಸಾಮಾನ್ಯರಿಗೆ ಮನೆಬಾಗಿಲಿನಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದಾಗಿದೆ. ‘ನಮ್ಮ ಕ್ಲೀನಿಕ್’ ಯೋಜನೆಯ ಮೂಲಕ ನಗರದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತಕ್ಷಣದ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾದ ಈ ಕ್ಲೀನಿಕ್‌ಗಳಿಂದ ಸಣ್ಣಪುಟ್ಟ ರೋಗಗಳಿಗೆ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಮೂಲಭೂತ ಆರೋಗ್ಯ ಪರೀಕ್ಷೆಗಳು ಸುಲಭವಾಗಿ ಲಭ್ಯವಾಗಲಿವೆ”

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

error: Content is protected !!