Home Blog Page 270

ಪ್ರತಿಯೊಂದು ರೂಪಾಯಿ ಅರ್ಹರಿಗೇ ತಲುಪಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದಿಂದ ಬಿಡುಗಡೆಯಾಗುವ ಪ್ರತಿಯೊಂದು ರೂಪಾಯಿಯೂ ಸಾರ್ವಜನಿಕರ ಹಿತಕ್ಕಾಗಿ ಸಮರ್ಪಕವಾಗಿ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅನುದಾನ ದುರ್ಬಳಕೆ ಅಥವಾ ಅಪವ್ಯಯವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸರ್ಕಾರದ ಯೋಜನೆಗಳ ಲಾಭ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಅನುದಾನದ ಕ್ರಿಯಾ ಯೋಜನೆ, ಜಿಲ್ಲಾ ವಲಯದಡಿ ವಲಯವಾರು ಅನುದಾನ ಹಂಚಿಕೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯತ್‌ನಲ್ಲಿ ಶೇ.60ರಷ್ಟು ಅನುದಾನವನ್ನು ವೇತನಕ್ಕಾಗಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ನೀಡಿದ ಅನುದಾನದಲ್ಲಿ ಶೇ.95ರಷ್ಟು ಮೊತ್ತವನ್ನು ವೇತನಕ್ಕಾಗಿ ಮೀಸಲಿಡಲು ಸಭೆಯಲ್ಲಿ ಅನುಮೋದನೆ ದೊರೆಯಿತು.

ಇಲಾಖಾವಾರು ರೂಪಿಸಲಾದ ಯೋಜನೆಗಳ ಕುರಿತು ಸುದೀರ್ಘ ಪರಿಶೀಲನೆ ನಡೆಸಿದ ಡಾ. ವೆಂಕಟೇಶ್, ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುವಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಭಾರತ್ ಜೋಡೋ ಯುವಕ ಮಂಡಳಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ನಿರ್ದೇಶಿಸಿದರು.

ಆರೋಗ್ಯ ಇಲಾಖೆಯ ಕಾರ್ಯವೈಖರಿ ಪರಿಶೀಲಿಸಿದ ಅವರು, ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ, ಅಗತ್ಯ ಔಷಧಗಳ ಸಮರ್ಪಕ ಖರೀದಿ ಹಾಗೂ ಲಭ್ಯತೆ ಖಚಿತಪಡಿಸಿಕೊಳ್ಳಬೇಕು ಎಂದರು. ಚೀನಾ ನಿರ್ಮಿತ ಬೆಡ್‌ಗಳ ಖರೀದಿಯನ್ನು ತಪ್ಪಿಸುವಂತೆ ಸೂಚಿಸಿದ ಅವರು, ಗುಣಮಟ್ಟದ ಔಷಧ ಖರೀದಿಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಆಯುಷ್ ಇಲಾಖೆಗೆ ಹಿಂದಿನ ಸಭೆಯಲ್ಲಿ ಔಷಧ ಖರೀದಿಗಾಗಿ ನೀಡಿದ್ದ ಅನುದಾನದ ಬಳಕೆ ಕುರಿತು ಮಾಹಿತಿ ಪಡೆದು, ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಸೂಚಿಸಿದರು. ಜಿಲ್ಲೆಯ ಎಲ್ಲ ಆರ್‌ಒ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಕೈಗೊಂಡು, ಲಿಂಕ್ ಯೋಜನೆಯ ಉದ್ದೇಶ ಯಶಸ್ವಿಯಾಗಬೇಕು ಎಂದು ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಆರ್‌ಎಫ್‌ಒಗಳು ವಿಬಿಜಿ ರಾಮ್‌ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸ್ಥಳೀಯ ಹವಾಮಾನಕ್ಕೆ ಹೊಂದುವ ಗಿಡಗಳನ್ನು ಬೆಳೆಸುವಂತೆ ಸೂಚಿಸಿದರು.

ಪ್ರತಿ ತಾಲೂಕಿನಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಬೇಕು. ಶಾಲಾ ಆವರಣಗಳಲ್ಲಿ ಕರಿಬೇವು, ನಿಂಬೆ, ನೆಲ್ಲಿ ಹಾಗೂ ಪಪ್ಪಾಯಿ ಗಿಡಗಳನ್ನು ಕಡ್ಡಾಯವಾಗಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಡಿಡಿಪಿಐ ಆರ್.ಎಸ್. ಬುರಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಸರ್ಕಾರದ ಯೋಜನೆಗಳು ಕಾಗದದಲ್ಲಷ್ಟೇ ಉಳಿಯಬಾರದು. ಸರ್ಕಾರದ ಪ್ರತಿಯೊಂದು ರೂಪಾಯಿ ಅರ್ಹ ಫಲಾನುಭವಿಗೆ ತಲುಪಬೇಕು. ಅನುದಾನದ ಸದ್ಬಳಕೆ, ಪಾರದರ್ಶಕತೆ ಹಾಗೂ ಗುಣಮಟ್ಟದ ಸೇವೆ ನೀಡುವಲ್ಲಿ ಅಧಿಕಾರಿಗಳು ಯಾವುದೇ ರಾಜಿ ಮಾಡಿಕೊಳ್ಳಬಾರದು. ನಿರ್ಲಕ್ಷ್ಯ ಕಂಡುಬಂದರೆ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.”

– ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

“ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನೀಡಿರುವ ಎಲ್ಲ ನಿರ್ದೇಶನಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲಾಗುವುದು. ಪ್ರತಿಯೊಂದು ಇಲಾಖೆಯ ಕಾರ್ಯಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಅನುದಾನದ ಸಮರ್ಪಕ ಬಳಕೆ ಹಾಗೂ ಜನಸೇವೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಬಿಸಿಎ ಅಂತಿಮ ಸೆಮಿಸ್ಟರ್‌ನಲ್ಲಿ ಮನೋರಮಾ ಕಾಲೇಜು ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಬಿಸಿಎ (ಆರನೇ ಸೆಮಿಸ್ಟರ್) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿ ಸಾಗರ ಅಗಡಿ 540 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ಪಿ. ವಿಜಯಕುಮಾರ 527 ಅಂಕಗಳೊಂದಿಗೆ ದ್ವಿತೀಯ, ಸ್ನೇಹಾ ಮಾಲಶೆಟ್ಟಿ 521 ಅಂಕಗಳೊಂದಿಗೆ ತೃತೀಯ ಹಾಗೂ ಸುಜಾತಾ ಒದ್ಸುಮಠ 519 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಸಂಯೋಜಕಿ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ, ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಗುಂಡಿಗಳ ಗೂಡಾದ ಜಕ್ಕಲಿ–ಅಬ್ಬಿಗೇರಿ ರಸ್ತೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಕ್ಕಲಿ–ಅಬ್ಬಿಗೇರಿ ಸಂಪರ್ಕ ರಸ್ತೆಯ ದುಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೇವಲ ಐದು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ಮರುಡಾಂಬರೀಕರಣ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಂದೊಮ್ಮೆ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ದ ಈ ಡಾಂಬರು ರಸ್ತೆ ಇದೀಗ ಗುಂಡಿಗಳು, ಜಲ್ಲಿಕಲ್ಲುಗಳು ಹಾಗೂ ಧೂಳಿನ ರಾಶಿಯಿಂದ ಕೂಡಿದೆ. ರಸ್ತೆಯುದ್ದಕ್ಕೂ ಡಾಂಬರು ಕಿತ್ತು ಹೋಗಿದ್ದು, ಅಲ್ಲಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.

ಜಕ್ಕಲಿ, ಅಬ್ಬಿಗೇರಿ ಸೇರಿದಂತೆ ಯರೇಬೇಲೇರಿ, ಕುರಡಗಿ, ಕಿರಟಗೇರಿ, ಹುಯಿಲಗೋಳ, ಚಿಕ್ಕೊಪ್ಪ, ಹಿರೇಕೊಪ್ಪ ಹಾಗೂ ಗದಗ ನಗರಕ್ಕೆ ತೆರಳುವ ನೂರಾರು ಜನರಿಗೆ ಇದೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರು ಪ್ರತಿನಿತ್ಯ ಈ ರಸ್ತೆಯನ್ನೇ ಅವಲಂಬಿಸಿದ್ದು, ರಸ್ತೆ ಹಾಳಾಗಿರುವುದರಿಂದ ಸಂಚಾರ ತೀವ್ರ ಸಮಸ್ಯೆಯಾಗಿದೆ.

ರಸ್ತೆಯ ಅವ್ಯವಸ್ಥೆಯಿಂದ ವಾಹನಗಳ ಬಿಡಿಭಾಗಗಳು ಹಾಳಾಗುತ್ತಿದ್ದು, ವಾಹನ ದುರಸ್ತಿಗೆ ಹೆಚ್ಚುವರಿ ಹಣ ಖರ್ಚು ಮಾಡುವಂತಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಅಪಘಾತಗಳ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ವರ್ಷಗಳಿಂದ ರಸ್ತೆ ದುರಸ್ತಿಯಾಗದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ಜಕ್ಕಲಿ–ಅಬ್ಬಿಗೇರಿ ರಸ್ತೆಯ ಮರುಡಾಂಬರೀಕರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಿದ್ದುಪಡಿಗಳ ಪಟ್ಟಿ

ರೋಗ ನಿಯಂತ್ರಣಕ್ಕೆ ಬೀಜೋಪಚಾರ ಅತ್ಯಗತ್ಯ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬೆಳೆಗಳಲ್ಲಿ ರೋಗಬಾಧೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಲು ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವುದು ಅತ್ಯಗತ್ಯ ಎಂದು ಕೃಷಿ ವಿಜ್ಞಾನಿ ಡಾ. ಸಿ.ಎಂ. ರಫಿ ಹೇಳಿದರು.

ಪಟ್ಟಣದ ಸಮೀಪದ ಚಿಕ್ಕಹಂದಿಗೋಳ ಹಾಗೂ ಕುರ್ತಕೋಟಿ ಗ್ರಾಮದ ರೈತರ ಜಮೀನುಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಹಾಗೂ ಗದಗ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹೆಸರು ಬೆಳೆಯಲ್ಲಿ ಕಾಣಿಸಿಕೊಂಡಿರುವ ಹಳದಿ ರೋಗವನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿಯೊಬ್ಬ ರೈತರೂ ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ನಡೆಸಬೇಕು. ಇದರಿಂದ ರೋಗಬಾಧೆ ನಿಯಂತ್ರಣವಾಗುವುದರ ಜೊತೆಗೆ ಉತ್ತಮ ಗುಣಮಟ್ಟದ ಇಳುವರಿಯನ್ನೂ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೈತರು ಬಿತ್ತನೆ ಆರಂಭಿಸುವ ಮೊದಲು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಂರಕ್ಷಣೆ ಹಾಗೂ ಬಿತ್ತನೆ ಪೂರ್ವ ಮುಂಜಾಗ್ರತಾ ಕ್ರಮಗಳ ಕುರಿತು ತಾಂತ್ರಿಕ ಮಾಹಿತಿ ಪಡೆದು ಕೃಷಿ ಚಟುವಟಿಕೆ ಕೈಗೊಂಡರೆ ನಷ್ಟವನ್ನು ತಪ್ಪಿಸಿ ಉತ್ತಮ ಉತ್ಪಾದನೆ ಸಾಧಿಸಬಹುದು ಎಂದು ಸಲಹೆ ನೀಡಿದರು.

ಪರಿಶೀಲನಾ ತಂಡದಲ್ಲಿ ಡಾ. ಸಂಗನಶೆಟ್ಟಿ, ಡಾ. ಪ್ರಭಾವತಿ, ಗದಗ ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ, ಎಂ.ಎಸ್. ಕುಲಕರ್ಣಿ, ಕೃಷಿ ಅಧಿಕಾರಿಗಳಾದ ಬಸವರಾಜೇಶ್ವರಿ ಸಜ್ಜನವರ, ರಾಜೇಶ್ವರಿ ಚಿನಿವಾಲರ ಹಾಗೂ ರೈತರು ಉಪಸ್ಥಿತರಿದ್ದರು.

ಪ್ರಜ್ಞಾವಂತರು ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು: ಕೃಷ್ಣೇಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರಜ್ಞಾವಂತ ನಾಗರಿಕರು ಧ್ವನಿಯೆತ್ತುವ ಮನೋಭಾವ ಬೆಳೆಸಿಕೊಳ್ಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಹಾಗೂ ನಾಗರಿಕರ ಕಲ್ಯಾಣ ಸಾಧ್ಯ ಎಂದು ಕಾಂಗ್ರೆಸ್ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೃಷ್ಣೇಗೌಡ ಎಚ್. ಪಾಟೀಲ ಹೇಳಿದರು.

ನಗರದ ಶಾರದ ವಿ.ಡಿ.ಎಸ್.ಟಿ.ಸಿ. ಕಾಲೇಜಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಪದವೀಧರ ಮತದಾರರ ನೋಂದಣಿ ಅಭಿಯಾನ ಕುರಿತ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರವು ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಪ್ರತಿಷ್ಠಿತ ಕ್ಷೇತ್ರವಾಗಿದೆ. ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ತಮ್ಮನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದರೆ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸಿ, ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ ಅವರು, ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸುವಂತೆ ಕೋರಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಹುಯಿಲಗೋಳ ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು. ಈ ಭಾಗದ ಶಾಸಕರಾದ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲ ಅವರು ಸಂಸ್ಥೆಯ ಅಭಿವೃದ್ಧಿಗೆ ನೀಡಿರುವ ಸಹಕಾರವನ್ನು ಸ್ಮರಿಸಿದರು.

ಸಭೆಯಲ್ಲಿ ನಿವೃತ್ತ ಪ್ರಾಚಾರ್ಯ ವಿ.ಎಸ್. ಕೊಳ್ಳಿ, ಉಮೇಶ್ ಹಿರೇಮಠ, ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಸೇರಿದಂತೆ ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬರ ಎದುರಿಸಲು ತುರ್ತು ಕ್ರಮಕ್ಕೆ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಜನರಿಗೆ ಉದ್ಯೋಗದ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ತುರ್ತು ಮತ್ತು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಗದಗ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶನಿವಾರ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಭಾನುವಾರ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲಿದ್ದು, ಗದಗ ಜಿಲ್ಲೆಯ ಸ್ಥಿತಿಯನ್ನು ವಿಶೇಷವಾಗಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿರುವುದರಿಂದ ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಶಾಸಕರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಸ್ಥಿತಿ ಪರಿಶೀಲನೆ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ವರದಿ ಆಧರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಸಮಸ್ಯೆ ಎದುರಾದ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬರದ ಪರಿಣಾಮವಾಗಿ ಗ್ರಾಮೀಣ ಜನರು ಉದ್ಯೋಗ ಅರಸಿ ವಲಸೆ ಹೋಗದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಲಭ್ಯವಿರುವ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಚಿವರು ಸೂಚಿಸಿದರು.

ಜಲಜೀವನ ಮಿಷನ್ ಹಾಗೂ ವಿಬಿಜಿ ರಾಮ್‌ಜಿ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಕುಡಿಯುವ ನೀರಿನ ಕಾಮಗಾರಿಗಳನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು. ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂಗಾರು ಪೂರ್ವ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಶೇ.82ರಷ್ಟು ಬಿತ್ತನೆ ನಡೆದಿದ್ದರೂ ನಂತರ ಮಳೆ ಕೊರತೆಯಿಂದ ಹೆಸರು, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆ ಅತ್ಯಗತ್ಯವಾಗಿದ್ದು, ಸಾಲದ ಕಾರಣಕ್ಕೆ ಯಾರೂ ವಿಮೆಯಿಂದ ವಂಚಿತರಾಗಬಾರದು ಎಂದು ಸಚಿವರು ಹೇಳಿದರು.

ಕಟ್ ಬಾಕಿ ಹಾಗೂ ಒನ್‌ಟೈಮ್ ಸೆಟಲ್‌ಮೆಂಟ್ (ಒಟಿಎಸ್) ಮಾಡಿಕೊಂಡಿರುವ ರೈತರಿಗೆ ಹೊಸ ಖಾತೆ ತೆರೆಯುವ ಮೂಲಕ ಬೆಳೆ ವಿಮೆ ಕಂತು ಪಾವತಿಸಲು ಅವಕಾಶ ಕಲ್ಪಿಸುವಂತೆ ಲೀಡ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ಎಚ್.ಕೆ. ಪಾಟೀಲ್, ರೈತರು ಬೆಳೆ ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಬೆಳೆ ವಿಮೆಯಿಂದ ವಂಚಿತರಾಗಬಾರದು ಎಂದು ಆಗ್ರಹಿಸಿದರು. ಶಾಸಕರಾದ ಜಿ.ಎಸ್. ಪಾಟೀಲ್, ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ ಹಾಗೂ ಎಸ್.ವಿ. ಸಂಕನೂರ ಅವರು ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿ, ಜನವರಿಯಿಂದ ಜುಲೈ 17ರವರೆಗೆ ವಾಡಿಕೆ 229.5 ಮಿ.ಮೀ. ಮಳೆಗೆ ವಿರುದ್ಧವಾಗಿ 227.2 ಮಿ.ಮೀ. ಮಳೆಯಾಗಿದ್ದರೂ, ಜುಲೈ 1ರಿಂದ 17ರವರೆಗೆ ವಾಡಿಕೆ 36.4 ಮಿ.ಮೀ. ಮಳೆಗೆ ಕೇವಲ 21.6 ಮಿ.ಮೀ. ಮಳೆಯಾಗಿದ್ದು, ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.

2026-27ರ ಮುಂಗಾರು ಹಂಗಾಮಿನಲ್ಲಿ 3,13,719 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 2,57,401 ಹೆಕ್ಟೇರ್ (ಶೇ.82.05) ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 37,059 ಅರ್ಜಿಗಳ ಮೂಲಕ 38,388 ಹೆಕ್ಟೇರ್ ಪ್ರದೇಶ ವಿಮೆಗೆ ಒಳಪಡಿಸಲಾಗಿದೆ ಎಂದರು.

ಪ್ರವಾಹ ಮುನ್ನೆಚ್ಚರಿಕಾ ಕ್ರಮವಾಗಿ ಮಲಪ್ರಭಾ ಹಾಗೂ ತುಂಗಭದ್ರಾ ನದಿ ಪಾತ್ರದ 20 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಿ 43 ಕಾಳಜಿ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ತುರ್ತು ರಕ್ಷಣಾ ಕಾರ್ಯಕ್ಕಾಗಿ 51 ಈಜುಗಾರರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಮಳೆ ಹಾಗೂ ಸಿಡಿಲಿನಿಂದ ಮೃತಪಟ್ಟ ನಾಲ್ವರು ಸಂತ್ರಸ್ತರ ಕುಟುಂಬಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹20 ಲಕ್ಷ ಪರಿಹಾರ ವಿತರಿಸಲಾಗಿದ್ದು, ಭಾಗಶಃ ಹಾನಿಗೊಳಗಾದ 20 ಮನೆಗಳಿಗೆ ₹1.30 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

“ಗದಗ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಬರದಿಂದ ಜನರು ವಲಸೆ ಹೋಗದಂತೆ ಉದ್ಯೋಗಕ್ಕೂ ಮೊದಲ ಆದ್ಯತೆ ನೀಡಬೇಕು.”

– ಈಶ್ವರ ಬಿ. ಖಂಡ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು

ಗದಗ ಜಿಲ್ಲೆಯ ಬರ ಪರಿಸ್ಥಿತಿ

  • ಜುಲೈ ಮೊದಲ 17 ದಿನಗಳ ಮಳೆ ಕೊರತೆ: ಶೇ.41
  • ಬಿತ್ತನೆ ಪೂರ್ಣ: 2.57 ಲಕ್ಷ ಹೆಕ್ಟೇರ್ (82.05%)
  • ಬೆಳೆ ವಿಮೆ ಅರ್ಜಿಗಳು: 37,059
  • ವಿಮೆ ವ್ಯಾಪ್ತಿ: 38,388 ಹೆಕ್ಟೇರ್
  • ಸೂಕ್ಷ್ಮ ಪ್ರವಾಹ ಗ್ರಾಮಗಳು: 20
  • ಕಾಳಜಿ ಕೇಂದ್ರಗಳು: 43
  • ತುರ್ತು ಕಾರ್ಯಕ್ಕೆ ಸನ್ನದ್ಧ ಈಜುಗಾರರು: 51
  • ಸಿಡಿಲು/ಮಳೆ ಪರಿಹಾರ: 4 ಕುಟುಂಬಗಳಿಗೆ ₹20 ಲಕ್ಷ

ವಿಂಡ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ: ಕರ್ನಾಟಕ ರಕ್ಷಣಾ ವೇದಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಮುಳಗುಂದ–ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ರಸ್ತೆಗಳಲ್ಲಿ ಸಂಚರಿಸುತ್ತಿರುವ ಭಾರೀ ಗಾತ್ರದ ವಿಂಡ್ ಮಿಲ್ ಉಪಕರಣ ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗದಗ ಜಿಲ್ಲಾ ಘಟಕವು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಅವರಿಗೆ ಮನವಿ ಸಲ್ಲಿಸಿತು.

ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಗದಗ–ಮುಳಗುಂದ ರಸ್ತೆ ಇತ್ತೀಚೆಗೆ ಅಭಿವೃದ್ಧಿಗೊಂಡಿದ್ದು, ಲಕ್ಷ್ಮೇಶ್ವರವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಧ್ಯೆ ಭಾರೀ ಗಾತ್ರದ ವಿಂಡ್ ಮಿಲ್ ಕಂಬಗಳು ಹಾಗೂ ಬ್ಲೇಡ್‌ಗಳನ್ನು ಸಾಗಿಸುವ ವಾಹನಗಳ ಓಡಾಟದಿಂದ ರಸ್ತೆ ಹಾನಿಯಾಗುವುದರ ಜೊತೆಗೆ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಭಾರೀ ವಾಹನಗಳ ಸಂಚಾರದಿಂದ ರಸ್ತೆ ಮತ್ತಷ್ಟು ಹಾಳಾಗದಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಾನೂನುಬದ್ಧ ಕ್ರಮ ಕೈಗೊಂಡು ಈ ರಸ್ತೆಯಲ್ಲಿ ಅಂತಹ ವಾಹನಗಳ ಓಡಾಟಕ್ಕೆ ತಡೆ ವಿಧಿಸಬೇಕು ಎಂದು ಕರವೇ ಆಗ್ರಹಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾರುತಿ ಈಳಗೇರ, ಹನುಮಂತ ಪೂಜಾರ, ಬಸವರಾಜ ಮೇಟಿ, ಲಕ್ಷ್ಮೀ ಹಿತ್ತಲಮನಿ, ಹುಸೇನಸಾಬ ಕುಂಡಾಲಿ, ದಾವಲಸಾಬ ತಹಶೀಲ್ದಾರ, ರವಿ ಮಲ್ಲಾಡದ, ಮುಸ್ತಾಕ್ ದಾವಣಗೇರಿ, ಹುಸೇನ ಅಕ್ಕಿ, ರೂಪಾ ಅಬ್ಬಿಗೇರಿ, ಕಾಸೀಮಸಾಬ ವಾಲಿಕಾರ, ಇಸಾಕ್ ಅಹ್ಮದ್ ನದಾಫ್, ಸಿರಾಜ್ ಹೊಸಮನಿ, ಕು. ಎನ್. ರೇವಣ್ಣವರ, ಪ್ರಕಾಶ ಸೆಂದಿಖೇಡ, ಯೂನೂಸ್ ಗದಗ, ಪ್ರಶಾಂತ ನವಲಗುಂದ, ಶಂಭು ಹಿರೇಮಠ, ತೌಶೀಫ್ ಢಾಲಾಯತ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

“ಭಾರೀ ಗಾತ್ರದ ವಿಂಡ್ ವಾಹನಗಳ ಸಂಚಾರವನ್ನು ಕೂಡಲೇ ನಿಯಂತ್ರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಿ ಸಾವಿರಾರು ಕಾರ್ಯಕರ್ತರೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.”

– ಹನಮಂತಪ್ಪ ಎಚ್. ಅಬ್ಬಿಗೇರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

ಕಾದಂಬರಿಯನ್ನು ನೇಯ್ಗೆಯಂತೆ ಹಣೆದ ಸಂಗೀತಮಯ ರಂಗಕಾವ್ಯ ‘ಸ್ವಾತಂತ್ರ್ಯದ ಓಟ’

‘ಸ್ವಾತಂತ್ರ್ಯದ ಓಟ’ ನಾಟಕವನ್ನು ನಮ್ಮ ಗಜೇಂದ್ರಗಡದಲ್ಲಿ ಪ್ರದರ್ಶಿಸಬೇಕೆಂಬುದು ಬಹಳ ದಿನಗಳ ನನ್ನ ಕನಸಾಗಿತ್ತು. ಆದರೆ ವೈಯಕ್ತಿಕ ಕೆಲಸಗಳ ಒತ್ತಡದಿಂದ ಅದು ಸಾಧ್ಯವಾಗಲಿಲ್ಲ. ಈ ನಾಟಕವನ್ನು ನೋಡುವ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ, ಗದಗ ನಗರದ ರಂಗಪರಿಸರದ ಗೆಳೆಯರು, ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜುಲೈ 15ರಂದು ಶ್ರೀ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಾಟಕ ಆಯೋಜಿಸಿದ್ದರಿಂದ, ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಿತು.

ಶಿವಮೊಗ್ಗ ರಂಗಾಯಣದ ಈ ಪ್ರಸ್ತುತಿಯನ್ನು ನಟರಾಜ್ ಹೊನ್ನವಳ್ಳಿ ನಿರ್ದೇಶಿಸಿದ್ದು, ಸಲ್ಮಾ ದಂಡಿನ ಸಹ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ. ಬೋಳುವಾರು ಮಹಮದ್ ಕುಂಞ ಅವರ ಮಹತ್ವದ ಕಾದಂಬರಿಯನ್ನು ಮಂಜುನಾಥ ಗೋಮರದಹಳ್ಳಿ ಪರಿಣಾಮಕಾರಿಯಾಗಿ ರಂಗರೂಪಕ್ಕೆ ತಂದಿದ್ದಾರೆ.

ಸಾವಿರಕ್ಕೂ ಹೆಚ್ಚು ಪುಟಗಳ ಕಾದಂಬರಿಯನ್ನು ಬಿಗಿಯಾದ ರಂಗಪಠ್ಯವಾಗಿ ರೂಪಿಸುವುದು ಸುಲಭದ ಕೆಲಸವಲ್ಲ. ಆದರೆ ಈ ತಂಡ ಅದನ್ನು ಯಶಸ್ವಿಯಾಗಿ ಸಾಧಿಸಿದೆ. ಕಥೆಯ ಆತ್ಮಕ್ಕೆ ಧಕ್ಕೆಯಾಗದಂತೆ, ಅದರ ತಾತ್ವಿಕತೆಯನ್ನು ಉಳಿಸಿಕೊಂಡೇ ರಂಗಭಾಷೆಗೆ ಅನುವಾದಿಸಿರುವುದು ಈ ನಾಟಕದ ದೊಡ್ಡ ಸಾಧನೆ.

ಈ ರಂಗಪ್ರಯೋಗದ ಜೀವಾಳ ಸಂಗೀತ. ಗದಗ ಜಿಲ್ಲೆಯ ಅಬ್ಬಿಗೇರಿಯ ಪ್ರತಿಭಾವಂತ ಸಂಗೀತ ನಿರ್ದೇಶಕ ರಾಘವ ಕಮ್ಮಾರ ಅವರ ಸಂಗೀತ ಸಂಯೋಜನೆ ಮತ್ತು ಗಾಯನ ಇಡೀ ನಾಟಕಕ್ಕೆ ಹೊಸ ಎತ್ತರ ನೀಡಿದೆ. ಸೂಫಿ ಸಂತರ ತತ್ತ್ವಪದಗಳು, ಕಬೀರ್ ಮತ್ತು ರವೀಂದ್ರನಾಥ ಠಾಗೋರ್ ಅವರ ಕಾವ್ಯದ ಸಾಲುಗಳು, ಬೋಡೆ ರಿಯಾಜ್ ಅವರ ಗಜಲ್‌ಗಳು ಕಥೆಯೊಳಗೆ ಸಹಜವಾಗಿ ಬೆರೆತು ಪ್ರೇಕ್ಷಕರನ್ನು ಮತ್ತೊಂದು ಅನುಭವಲೋಕಕ್ಕೆ ಕರೆದೊಯ್ಯುತ್ತವೆ.

ಉತ್ತರ ಕರ್ನಾಟಕದ ಸಾಂಸ್ಕೃತಿಕ ಗುರುತಾದ ಹೆಜ್ಜೆ ಮೇಳವನ್ನು ಬಳಸಿರುವ ರೀತಿ ವಿಶೇಷವಾಗಿ ಮನಸೆಳೆಯುತ್ತದೆ. ರಂಗದ ಮೇಲೆ ಹೆಜ್ಜೆ ಮೇಳ ಆರಂಭವಾದ ಕ್ಷಣವೇ ಎದ್ದು ಕುಣಿಯಬೇಕೆನಿಸುವಷ್ಟು ಜೀವಂತಿಕೆಯನ್ನು ಸಂಗೀತ ನೀಡುತ್ತದೆ.

ನಾಟಕವು ದೇಶ ವಿಭಜನೆಯ ಕಥೆಯನ್ನು ಮಾತ್ರ ಹೇಳುವುದಿಲ್ಲ. ವಿಭಜನೆಯಿಂದ ಒಡೆದ ಮಾನವ ಸಂಬಂಧಗಳು, ಧರ್ಮಾಂಧತೆಯ ನಡುವೆ ಉಳಿಯುವ ಮನುಷ್ಯತ್ವ ಮತ್ತು ಪ್ರೀತಿಯ ಹುಡುಕಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಕರಾಚಿಯಿಂದ ಮುತ್ತುಪ್ಪಾಡಿಯವರೆಗೆ ಚಾಂದ್ ಅಲಿಯ ಪಯಣವು ಭೌಗೋಳಿಕ ಗಡಿಗಳಾಚೆಗೆ ಮನುಷ್ಯನ ಅಂತರಂಗದ ಹುಡುಕಾಟವಾಗುತ್ತದೆ.

ನಾಟಕದುದ್ದಕ್ಕೂ ಮೂವರು ಕಲಾವಿದರು ಚಾಂದ್ ಅಲಿಯ ವಿವಿಧ ಆಯಾಮಗಳನ್ನು ಪ್ರತಿನಿಧಿಸುವ ರೀತಿ ನಿರ್ದೇಶಕರ ಕಲ್ಪನಾಶಕ್ತಿಗೆ ಸಾಕ್ಷಿಯಾಗಿದೆ. ಬಿರ್ಲಾ ಹೌಸ್ ದೃಶ್ಯ ಹಾಗೂ ಗಾಂಧೀಜಿಯ ಹತ್ಯೆಯ ನಿರೂಪಣೆ ಅತ್ಯಂತ ಸಾಂಕೇತಿಕವಾಗಿ ಮೂಡಿಬಂದಿದ್ದು, ಹಿಂಸೆಯನ್ನು ತೋರಿಸದೇ ಅದರ ನೋವನ್ನು ಪ್ರೇಕ್ಷಕರ ಮನಸ್ಸಿಗೆ ತಲುಪಿಸುತ್ತದೆ.

ಸಹನಾ ಪಿಂಜಾರ ಅವರ ವೇಷಭೂಷಣ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಹಾಗೂ ಎಲ್ಲಾ ಕಲಾವಿದರ ಸಹಜ ಅಭಿನಯ ನಾಟಕವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಿವೆ. ಆರಂಭದಲ್ಲಿ ನಾಟಕ ನಿಧಾನವಾಗಿ ಸಾಗಿದಂತೆ ಭಾಸವಾದರೂ, ನಂತರ ಮೂರೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಈ ಲೇಖನದಲ್ಲಿ ನಾನು ನಾಟಕದ ಕಥೆಯನ್ನು ವಿಶ್ಲೇಷಿಸಿಲ್ಲ. ಒಬ್ಬ ಪ್ರೇಕ್ಷಕನಾಗಿ ನನಗಾದ ಅನುಭವವನ್ನು ಮಾತ್ರ ಹಂಚಿಕೊಂಡಿದ್ದೇನೆ. ‘ಸ್ವಾತಂತ್ರ್ಯದ ಓಟ’ ಕೇವಲ ಒಂದು ನಾಟಕವಲ್ಲ; ಅದು ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆಗೆ ಉತ್ತರ ಹುಡುಕುವ ಮಾನವೀಯ ಚಿಂತನೆಯ ರಂಗಯಾನ. ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ, ಅನುಭವಿಸಲೇಬೇಕಾದ ಅಪರೂಪದ ರಂಗಪ್ರಯೋಗ.

ಇಂತಹ ಮಹತ್ವದ ಪ್ರಯೋಗವನ್ನು ಯಶಸ್ವಿಯಾಗಿ ರಂಗಕ್ಕೇರಿಸಿದ ಶಿವಮೊಗ್ಗ ರಂಗಾಯಣ, ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಸಹ ನಿರ್ದೇಶಕಿ ಸಲ್ಮಾ ದಂಡಿನ, ಕೃತಿಕಾರ ಬೋಳುವಾರು ಮಹಮದ್ ಕುಂಞ, ರಂಗರೂಪಾಂತರಕಾರ ಮಂಜುನಾಥ ಗೋಮರದಹಳ್ಳಿ, ಸಂಗೀತ ನಿರ್ದೇಶಕ ರಾಘವ ಕಮ್ಮಾರ ಹಾಗೂ ಇಡೀ ರಂಗತಂಡ ಅಭಿನಂದನೆಗೆ ಅರ್ಹರು.

ಈ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಪರಮಪೂಜ್ಯ ಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಕೃತಜ್ಞತೆಗಳು. ನಾಟಕ ಆಯೋಜನೆಗೆ ಶ್ರಮಿಸಿದ ಜಿ.ಬಿ. ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗದಗದ ಕಲಾಪ್ರೇಮಿಗಳು ಹಾಗೂ ಎಲ್ಲ ಸಂಘಟಕರಿಗೂ ಅಭಿನಂದನೆಗಳು.

ಇಂತಹ ಗುಣಮಟ್ಟದ ನಾಟಕಗಳು ರಾಜ್ಯದ ಮೂಲೆಮೂಲೆಗೂ ತಲುಪಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಇಂತಹ ರಂಗಪ್ರಯೋಗಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ರಾಜ್ಯದ ವಿವಿಧ ನಗರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ನನ್ನ ಮನವಿ.

-ಆರ್.ಕೆ. ಬಾಗವಾನ, ಶಿಕ್ಷಕರು, ಗೋಗೇರಿ

ನೇತ್ರದಾನದ ಮೂಲಕ ಮಾನವೀಯತೆ ಮೆರೆದ ಪಾರ್ವತಿಬಾಯಿ ಚವ್ಹಾಣ ಕುಟುಂಬ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವೀರಸಾವರ್ಕರ ರಸ್ತೆಯ ಮರಾಠಾ ಮಂಡಳದ ಸಮೀಪದ ಚಂದ್ರಮಹಲ್ ನಿವಾಸಿ ಶ್ರೀಮತಿ ಪಾರ್ವತಿಬಾಯಿ ಮೋಹನಲಾಲ ಚವ್ಹಾಣ (98) ಅವರು ಜುಲೈ 16ರಂದು ನಿಧನರಾದರು.

ಮೃತರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು. ಪಾರ್ವತಿಬಾಯಿ ಅವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಕುಟುಂಬಸ್ಥರನ್ನು ಸಂಪರ್ಕಿಸಿ ನೇತ್ರದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಕುಟುಂಬಸ್ಥರು ಉದಾರ ಮನಸ್ಸಿನಿಂದ ನೇತ್ರದಾನಕ್ಕೆ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ನೇತ್ರಗಳನ್ನು ಸಂಗ್ರಹಿಸಿ ಯಶಸ್ವಿಯಾಗಿ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿತು.

98 ವರ್ಷಗಳ ಸಾರ್ಥಕ ಬದುಕು ನಡೆಸಿದ ಪಾರ್ವತಿಬಾಯಿ ಅವರು ಸಾವಿನಲ್ಲೂ ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾಗುವ ಮಾನವೀಯ ಕಾರ್ಯಕ್ಕೆ ಕುಟುಂಬಸ್ಥರು ಕೈಜೋಡಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ರಮೇಶ ಶಿಗ್ಲಿ, ರೇಣುಕಾಪ್ರಸಾದ ಹಿರೇಮಠ, ಅಶ್ವಥ್ ಸುಲಾಖೆ, ರಾಜಣ್ಣ ಮಲ್ಲಾಡದ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಮೊಬೈಲ್‌ನಿಂದ ದೂರವಿರಿ, ಪುಸ್ತಕಕ್ಕೆ ಹತ್ತಿರವಿರಿ: ಬುಡ್ಡಿ ಬಸವರಾಜ್

0
ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಮೊಬೈಲ್‌ಗಿಂತ ಪುಸ್ತಕವೇ ಉತ್ತಮ ಸಂಗಾತಿ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ಓದಿನತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಬುಡ್ಡಿ ಬಸವರಾಜ್ ಹೇಳಿದರು.
ತಾಲೂಕಿನ ಕೆಚ್ಚಿನಬಂಡಿ ಗ್ರಾಮದಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಕೂಲಿ ಮಾಡಿ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತಿದ್ದಾರೆ. ಅವರ ಕಷ್ಟವನ್ನು ಅರಿತು ವಿದ್ಯಾರ್ಥಿಗಳು ಸಂಸ್ಕಾರ, ಶಿಸ್ತು ಬೆಳೆಸಿಕೊಂಡು ಶಿಕ್ಷಕರು ಹೇಳುವ ಪಾಠದತ್ತ ಗಮನ ಹರಿಸಬೇಕು. ಸರ್ಕಾರಿ ಶಾಲೆಗಳ ಉಳಿವು-ಬೆಳವಣಿಗೆ ಗ್ರಾಮೀಣ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಹೇಳಿದರು.
ಪತ್ರಕರ್ತ ಸಿ. ಶಿವಾನಂದ್ ಮಾತನಾಡಿ, ಯಾವುದೇ ಸ್ವಾರ್ಥವಿಲ್ಲದೆ ಜನಸೇವಾ ಟ್ರಸ್ಟ್ ಕೈಗೊಂಡಿರುವ ಶಿಕ್ಷಣ ಸೇವೆ ಮಾದರಿಯಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉಮಾಪತಿ ಶೆಟ್ಟರ್ ಮಾತನಾಡಿ, ಉಚಿತ ನೋಟ್‌ಬುಕ್ ವಿತರಣೆಯಂತಹ ಕಾರ್ಯಕ್ರಮಗಳು ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಸ ಉತ್ತೇಜನ ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆರು ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ 98 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಭಾವಿಕಟ್ಟಿ, ಕಾರ್ಯದರ್ಶಿ ರಾಜಾಹುಲಿ, ಕೋಡಿಹಳ್ಳಿ ಮಂಜುನಾಥ, ಟಿ. ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ವಿ. ಅಶೋಕ್, ಶಿವಕುಮಾರ್, ದುರುಗಪ್ಪ, ಕೆಇಬಿ ಮಲ್ಲೇಶ್, ವಿರೂಪಾಕ್ಷಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಮಲ್ಲೇಶ್ ವಂದಿಸಿದರು.