Home Blog Page 27

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಸೆ.14ರಂದು 22 ಕ್ಯಾರಟ್ ಚಿನ್ನದ ದರ ಎಷ್ಟಿದೆ?

0

ನವದೆಹಲಿ: ಗಣೇಶ ಚತುರ್ಥಿಯಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್ 14ರಂದು ಚಿನ್ನದ ದರ ಪ್ರತಿ ಗ್ರಾಂಗೆ ₹45ರಷ್ಟು ಕಡಿಮೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,41,250 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,54,090 ಇದೆ. 100 ಗ್ರಾಂ ಬೆಳ್ಳಿಯ ದರ ₹24,500ರಷ್ಟಿದೆ. ಬೆಂಗಳೂರಿನಲ್ಲೂ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,41,250 ಹಾಗೂ 100 ಗ್ರಾಂ ಬೆಳ್ಳಿಗೆ ₹24,500 ದರ ಇದೆ.

ಸೆಪ್ಟೆಂಬರ್ 14ರ ದರದಂತೆ 1 ಗ್ರಾಂ 24 ಕ್ಯಾರಟ್ ಚಿನ್ನ ₹15,409, 22 ಕ್ಯಾರಟ್ ಚಿನ್ನ ₹14,125 ಹಾಗೂ 18 ಕ್ಯಾರಟ್ ಚಿನ್ನ ₹11,557 ಇದೆ. 1 ಗ್ರಾಂ ಬೆಳ್ಳಿಯ ದರ ₹245ರಷ್ಟಿದೆ.

ವಿವಿಧ ನಗರಗಳ 22 ಕ್ಯಾರಟ್ ಚಿನ್ನದ ದರ ಗಮನಿಸಿದರೆ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ ಮತ್ತು ಭುವನೇಶ್ವರದಲ್ಲಿ ಪ್ರತಿ ಗ್ರಾಂಗೆ ₹14,125 ಇದೆ. ದೆಹಲಿ, ಜೈಪುರ ಹಾಗೂ ಲಖನೌನಲ್ಲಿ ₹14,140, ಅಹಮದಾಬಾದ್‌ನಲ್ಲಿ ₹14,130 ದರ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರತಿ ಗ್ರಾಂಗೆ 139.13 ಡಾಲರ್, ಅಂದರೆ ಸುಮಾರು ₹13,316ರಷ್ಟಿದೆ. ಸ್ಪಾಟ್ ಸಿಲ್ವರ್ ಪ್ರತಿ ಗ್ರಾಂಗೆ 2.057 ಡಾಲರ್, ಅಂದರೆ ಸುಮಾರು ₹196ರಷ್ಟಿದೆ.

ವಿದೇಶಗಳ 24 ಕ್ಯಾರಟ್ ಚಿನ್ನದ ದರದಲ್ಲೂ ವ್ಯತ್ಯಾಸವಿದೆ. ಮಲೇಷ್ಯಾದಲ್ಲಿ ಪ್ರತಿ ಗ್ರಾಂಗೆ ಸುಮಾರು ₹13,694, ದುಬೈನಲ್ಲಿ ₹13,653, ಅಮೆರಿಕದಲ್ಲಿ ₹13,733, ಸಿಂಗಾಪುರದಲ್ಲಿ ₹14,208, ಕತಾರ್‌ನಲ್ಲಿ ₹13,757, ಸೌದಿ ಅರೇಬಿಯಾದಲ್ಲಿ ₹13,736, ಓಮನ್‌ನಲ್ಲಿ ₹13,833 ಹಾಗೂ ಕುವೇತ್‌ನಲ್ಲಿ ₹13,512ರಷ್ಟಿದೆ.

ಬೆಳ್ಳಿ ದರದಲ್ಲಿ ನಗರವಾರು ವ್ಯತ್ಯಾಸವಿದ್ದು, ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ ₹245, ಚೆನ್ನೈನಲ್ಲಿ ₹250, ಮುಂಬೈ ಮತ್ತು ದೆಹಲಿಯಲ್ಲಿ ₹245, ಕೋಲ್ಕತಾದಲ್ಲಿ ₹245, ಕೇರಳದಲ್ಲಿ ₹250, ಅಹಮದಾಬಾದ್‌ನಲ್ಲಿ ₹245, ಜೈಪುರದಲ್ಲಿ ₹245, ಲಖನೌನಲ್ಲಿ ₹245, ಭುವನೇಶ್ವರದಲ್ಲಿ ₹250 ಹಾಗೂ ಪುಣೆಯಲ್ಲಿ ₹245 ಇದೆ.

ಏಷ್ಯಾಕಪ್ ಟ್ರೋಫಿ ವಿವಾದ ಮತ್ತೆ ಸದ್ದು: ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದೆ ಡ್ರೆಸ್ಸಿಂಗ್ ರೂಮ್ʼನಲ್ಲೇ ಉಳಿದ ಭಾರತ ತಂಡ

0

ದುಬೈ: ಏಷ್ಯಾಕಪ್ ಟ್ರೋಫಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಪುರುಷರ ಏಷ್ಯಾಕಪ್ ಫೈನಲ್ ಬಳಿಕ ನಡೆದಿದ್ದ ಹೈಡ್ರಾಮಾ ಇದೀಗ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲೂ ಮರುಕಳಿಸಿದೆ.

ಭಾನುವಾರ ನಡೆದ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 72 ರನ್‌ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ದಾಖಲೆಯ ಎಂಟನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿದೆ. ಆದರೆ ಪಂದ್ಯ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಭಾರತೀಯ ಕಾಲಮಾನ ರಾತ್ರಿ 11:20ರ ಸುಮಾರಿಗೆ ಪಂದ್ಯ ಮುಕ್ತಾಯಗೊಂಡರೂ, ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯರಾತ್ರಿ 12:05ರ ವೇಳೆಗೆ ಆರಂಭವಾಯಿತು. ನಿರೂಪಕ ಹಾಗೂ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಫರ್ವೀಜ್ ಮಹರೂಫ್ ಮೊದಲು ರನ್ನರ್-ಅಪ್ ಶ್ರೀಲಂಕಾ ತಂಡವನ್ನು ವೇದಿಕೆಗೆ ಆಹ್ವಾನಿಸಿದರು.

ಈ ವೇಳೆ ಮೊಹ್ಸಿನ್ ನಖ್ವಿ ಶ್ರೀಲಂಕಾ ತಂಡಕ್ಕೆ ಚೆಕ್ ಹಸ್ತಾಂತರಿಸಿದರು. ಶ್ರೀಲಂಕಾ ಕ್ರಿಕೆಟ್‌ನ ಮಧ್ಯಂತರ ಮುಖ್ಯಸ್ಥ ಎರಾನ್ ವಿಕ್ರಮರತ್ನೆ ಆಟಗಾರರಿಗೆ ಪದಕಗಳನ್ನು ವಿತರಿಸಿದರು. ಇದಾದ ಬಳಿಕ ಭಾರತ ತಂಡ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ಆದರೆ ಭಾರತ ತಂಡ ವೇದಿಕೆಗೆ ಬರುವ ಮುನ್ನವೇ ನಿರೂಪಕರು ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡಿದೆ ಎಂದು ಏಕಾಏಕಿ ಘೋಷಿಸಿದರು. ಇದರಿಂದಾಗಿ ಇಡೀ ಬೆಳವಣಿಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು.

ಈ ವೇಳೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಅವರು ನಂದಿನಿ ಶರ್ಮಾಗೆ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ನೀಡಿ ತಂಡವನ್ನು ಅಭಿನಂದಿಸಿದರು. ಬಳಿಕ ಭಾರತ ತಂಡದ ಆಟಗಾರ್ತಿಯರು ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು.

ಮಾಹಿತಿಯ ಪ್ರಕಾರ, ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಭಾರತ ತಂಡಕ್ಕೆ ಟ್ರೋಫಿ ಕೊಡಿಸುವಂತೆ ಬಿಸಿಸಿಐ ಮನವಿ ಮಾಡಿತ್ತು. ಆದರೆ ಮೊಹ್ಸಿನ್ ನಖ್ವಿ ತಾವೇ ಟ್ರೋಫಿ ಹಸ್ತಾಂತರಿಸುವುದಾಗಿ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವೇದಿಕೆಗೆ ತೆರಳದೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಉಳಿದುಕೊಂಡಿತು.

ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡು ಬಹುತೇಕ ಎಲ್ಲರೂ ಕ್ರೀಡಾಂಗಣದಿಂದ ನಿರ್ಗಮಿಸಿದ ಬಳಿಕ, ಭಾರತ ತಂಡದ ಆಟಗಾರ್ತಿಯರು ಹಾಗೂ ಕೋಚಿಂಗ್ ಸ್ಟಾಫ್ ಖಾಲಿ ಸ್ಟೇಡಿಯಂನಲ್ಲಿ ಒಟ್ಟಾಗಿ ನಿಂತು ಗ್ರೂಪ್ ಫೋಟೋ ತೆಗೆಸಿಕೊಂಡರು. ಈ ಫೋಟೋಗಳನ್ನು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಯಿತು.

ಸಾಮಾನ್ಯವಾಗಿ ಪ್ರಶಸ್ತಿ ಪ್ರದಾನ ಸಮಾರಂಭದ ಕೊನೆಯಲ್ಲಿ ವಿಜೇತ ತಂಡದ ನಾಯಕಿಯ ಸಂದರ್ಶನ ನಡೆಯುತ್ತದೆ. ಆದರೆ ಈ ಬಾರಿ ಪಂದ್ಯ ಮುಗಿದ ತಕ್ಷಣವೇ ಬ್ರಾಡ್‌ಕಾಸ್ಟರ್‌ಗಳು ಹರ್ಮನ್‌ಪ್ರೀತ್ ಕೌರ್ ಅವರ ಸಂದರ್ಶನ ನಡೆಸಿದ್ದರು. ಇನ್ನು ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐ ತೆಗೆದುಕೊಂಡ ಅಧಿಕೃತ ನಿಲುವು ಎಂದು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ 2025ರ ಸೆಪ್ಟೆಂಬರ್ 28ರಂದು ಇದೇ ದುಬೈ ಮೈದಾನದಲ್ಲಿ ನಡೆದ ಪುರುಷರ ಏಷ್ಯಾಕಪ್ ಫೈನಲ್ ಬಳಿಕವೂ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಇಂತಹದ್ದೇ ವಿವಾದ ಉಂಟಾಗಿತ್ತು. ಆ ಸಂದರ್ಭದಲ್ಲಿ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಕ್ಕಟ್ಟು ನಿರ್ಮಾಣವಾಗಿತ್ತು.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟ್ರೋಫಿ ಸ್ವೀಕರಿಸದೆ ವೇದಿಕೆಯಲ್ಲಿ ಸಂಭ್ರಮಿಸಿತ್ತು. ಬಳಿಕ ಏಷ್ಯಾಕಪ್ ಟ್ರೋಫಿಯನ್ನು ಕ್ರೀಡಾಂಗಣದಿಂದ ಎಸಿಸಿ ಕಚೇರಿಗೆ ಕೊಂಡೊಯ್ಯಲಾಗಿತ್ತು ಎಂಬ ವರದಿಗಳಿದ್ದವು. ಇದೀಗ ಮಹಿಳಾ ತಂಡದ ಏಷ್ಯಾಕಪ್ ಗೆಲುವಿನ ಬಳಿಕವೂ ಇದೇ ರೀತಿಯ ಬೆಳವಣಿಗೆ ನಡೆದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 

ಗಣೇಶ ಚತುರ್ಥಿ 2026: ಬಸವನಗುಡಿ ದೊಡ್ಡ ಗಣಪತಿ ದೇಗುಲದಲ್ಲಿ ಭಕ್ತರ ದಂಡು; 1,000 ಲೀಟರ್ ಹಾಲಿನ ಅಭಿಷೇಕ

0

ಬೆಂಗಳೂರು: ಐತಿಹಾಸಿಕ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೊಡ್ಡ ಗಣಪತಿಯ ದರ್ಶನ ಪಡೆದರು.

ಗಣೇಶ ಚತುರ್ಥಿ ಪ್ರಯುಕ್ತ ಬೆಳಗ್ಗೆ 2.30ರಿಂದ ದೇವರಿಗೆ ವಿಶೇಷ ಅಭಿಷೇಕ ಕಾರ್ಯಕ್ರಮಗಳು ಆರಂಭವಾದವು. ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ಪ್ರಕಾರ, ಗಣಪತಿಗೆ 1,000 ಲೀಟರ್ ಹಾಲಿನ ಅಭಿಷೇಕ ನೆರವೇರಿಸಲಾಯಿತು.

ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ನೆರವೇರಿತು. ಬಳಿಕ ರಾತ್ರಿ 12 ಗಂಟೆಯವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಭಕ್ತರು, ಗಣೇಶ ಚತುರ್ಥಿಯಂದು ದೊಡ್ಡ ಗಣಪತಿಯ ದರ್ಶನ ಪಡೆದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಇನ್ನು ಸೆ.15ರಂದು ಸಂಜೆ 6 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಗಣೇಶ ಚತುರ್ಥಿ ವ್ರತದ ಮಹತ್ವವೇನು?; ಈ ದಿನ ವ್ರತ ಕಥೆ ಓದುವುದು ಏಕೆ ಮುಖ್ಯ?

0

ಗಣೇಶ ಚತುರ್ಥಿಯನ್ನು ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ.

ಈ ದಿನ ಭಕ್ತರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ, ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ವ್ರತವನ್ನೂ ಆಚರಿಸುತ್ತಾರೆ.

ಧಾರ್ಮಿಕ ನಂಬಿಕೆಯ ಪ್ರಕಾರ, ಗಣೇಶನನ್ನು ಭಕ್ತಿಯಿಂದ ಪೂಜಿಸಿ ವ್ರತ ಆಚರಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗಿ ಸುಖ, ಸಮೃದ್ಧಿ ಮತ್ತು ಸೌಭಾಗ್ಯ ದೊರೆಯುತ್ತದೆ. ಶಾಸ್ತ್ರಗಳಲ್ಲೂ ಗಣೇಶ ಚತುರ್ಥಿ ವ್ರತಕ್ಕೆ ವಿಶೇಷ ಮಹತ್ವ ನೀಡಲಾಗಿದೆ.

ವ್ರತದ ಸಂದರ್ಭದಲ್ಲಿ ಗಣೇಶ ಚತುರ್ಥಿ ವ್ರತ ಕಥೆಯನ್ನು ಓದುವುದು ಅಥವಾ ಕೇಳುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಗಣೇಶ ಪುರಾಣದಲ್ಲಿ ಈ ವ್ರತದ ಮಹಿಮೆ ಮತ್ತು ಕಥೆಯ ಕುರಿತು ಉಲ್ಲೇಖವಿದೆ. ವ್ರತ ಕಥೆಯನ್ನು ಭಕ್ತಿಯಿಂದ ಪಠಿಸುವುದರಿಂದ ವ್ರತದ ಪೂರ್ಣ ಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಗಣೇಶನನ್ನು ‘ವಿಘ್ನಹರ್ತ’ ಎಂದು ಕರೆಯಲಾಗುತ್ತದೆ. ಅಂದರೆ ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸುವ ದೇವರು ಎಂಬ ನಂಬಿಕೆ. ಹೀಗಾಗಿ ಯಾವುದೇ ಶುಭ ಕಾರ್ಯ ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸುವ ಸಂಪ್ರದಾಯ ಹಲವು ಕಡೆಗಳಲ್ಲಿ ಇದೆ.

ಗಣೇಶ ಚತುರ್ಥಿಯಂದು ಭಕ್ತರು ತಮ್ಮ ಸಾಮರ್ಥ್ಯ ಹಾಗೂ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಉಪವಾಸ ಆಚರಿಸುತ್ತಾರೆ. ಬಳಿಕ ಗಣೇಶನಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದ ನಂತರ ವ್ರತ ಮುಕ್ತಾಯಗೊಳಿಸುವ ಪದ್ಧತಿಯೂ ಇದೆ. ವ್ರತದ ಆಚರಣೆಯ ವಿಧಾನ ಪ್ರದೇಶ ಹಾಗೂ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗಬಹುದು.

ಗಣೇಶ ಚತುರ್ಥಿ ವ್ರತದ ಉದ್ದೇಶ ಕೇವಲ ಉಪವಾಸ ಮಾಡುವುದಲ್ಲ. ಭಕ್ತಿ, ಶ್ರದ್ಧೆ ಹಾಗೂ ಗಣೇಶನ ಸ್ಮರಣೆಯೊಂದಿಗೆ ದಿನವನ್ನು ಕಳೆಯುವುದು ಈ ಆಚರಣೆಯ ಪ್ರಮುಖ ಭಾಗವಾಗಿದೆ. ವ್ರತ ಕಥೆಯನ್ನು ಓದುವುದು ಅಥವಾ ಕೇಳುವುದರಿಂದ ಗಣೇಶನ ಮಹಿಮೆ ಹಾಗೂ ವ್ರತದ ಧಾರ್ಮಿಕ ಮಹತ್ವವನ್ನು ತಿಳಿದುಕೊಳ್ಳಬಹುದು ಎಂಬ ನಂಬಿಕೆಯಿದೆ.

ಸೌದಿ ಪೈಪ್‌ಲೈನ್ ಮೇಲೆ ಡ್ರೋನ್ ದಾಳಿ; ಕಚ್ಚಾ ತೈಲ ಬೆಲೆ ಶೇ.3ಕ್ಕೂ ಹೆಚ್ಚು ಏರಿಕೆ!

0

ರಿಯಾದ್: ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ ತೈಲ ಸಾಗಿಸುತ್ತಿದ್ದ ಸೌದಿ ಅರೇಬಿಯಾದ ಈಸ್ಟ್-ವೆಸ್ಟ್ ಪೈಪ್‌ಲೈನ್ ಮೇಲೆ ಡ್ರೋನ್ ದಾಳಿ ನಡೆದಿದೆ.

ದಾಳಿಯ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್‌ಲೈನ್ ಕಾರ್ಯಾಚರಣೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ. ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿರುವ ಪೈಪ್‌ಲೈನ್ ಮೇಲೆ ಇರಾಕ್ ಮೂಲದಿಂದ ಬಂದ ಹಲವು ಡ್ರೋನ್‌ಗಳು ದಾಳಿ ನಡೆಸಿವೆ ಎನ್ನಲಾಗಿದೆ. ದಾಳಿಯಿಂದ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸುರಕ್ಷತಾ ಪರಿಶೀಲನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೈಪ್‌ಲೈನ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಸುಮಾರು 50ರಿಂದ 70 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಪೈಪ್‌ಲೈನ್, ಗಲ್ಫ್ ಮೂಲಕ ತೈಲ ಸಾಗಣೆಗೆ ಪ್ರಮುಖ ಪರ್ಯಾಯ ಮಾರ್ಗವಾಗಿದೆ.

ದಾಳಿಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ಕಂಡುಬಂದಿದೆ. ಡಬ್ಲ್ಯುಟಿಐ ಮತ್ತು ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇ.3ಕ್ಕೂ ಹೆಚ್ಚು ಏರಿಕೆಯಾಗಿದ್ದು, ಬ್ರೆಂಟ್ ದರ ಪ್ರತಿ ಬ್ಯಾರೆಲ್‌ಗೆ ಸುಮಾರು 108 ಡಾಲರ್‌ಗೆ ತಲುಪಿದೆ.

ಪೈಪ್‌ಲೈನ್ ಸ್ಥಗಿತ ದೀರ್ಘಕಾಲ ಮುಂದುವರಿದರೆ ಜಾಗತಿಕ ತೈಲ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ತೈಲ ಸಂಸ್ಕರಣಾಗಾರಗಳು ಪರ್ಯಾಯ ಕಚ್ಚಾ ತೈಲ ಪೂರೈಕೆ ಮಾರ್ಗಗಳ ಕುರಿತು ಪರಿಶೀಲನೆ ನಡೆಸುತ್ತಿವೆ.

ತೈಲ ಲಭ್ಯತೆ ಮತ್ತು ಸಾಗಣೆ ವೆಚ್ಚದ ಮೇಲೆ ಪರಿಣಾಮ ಬಿದ್ದರೆ, ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಅನಿಶ್ಚಿತತೆ ಉಂಟಾಗುವ ಸಾಧ್ಯತೆ ಇದೆ.

Gadaga: ಪ್ಲಾಸ್ಟಿಕ್ ಪೈಪ್, ಕಿರಾಣಿ ಸಾಮಗ್ರಿ ಸಂಗ್ರಹಿಸಿದ್ದ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

0

ಗಜೇಂದ್ರಗಡ: ಪಟ್ಟಣದ ಜವಳಿ ಪ್ಲಾಟ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಪೈಪ್ ಹಾಗೂ ಕಿರಾಣಿ ಸಾಮಗ್ರಿ ಸಂಗ್ರಹಿಸಿಟ್ಟಿದ್ದ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಮಹೇಶ್ ಪಾಟೀಲ್ ಅವರಿಗೆ ಸೇರಿದ ಗೋಡೌನ್‌ನಲ್ಲಿ ಪ್ಲಾಸ್ಟಿಕ್ ಪೈಪ್‌ಗಳು ಹಾಗೂ ಕಿರಾಣಿ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗೋಡೌನ್‌ನಲ್ಲಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಹಾಗೂ ಪೈಪ್‌ಗಳಿಗೆ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಇಡೀ ಗೋಡೌನ್‌ಗೆ ವ್ಯಾಪಿಸಿದೆ.

ಬೆಂಕಿಯ ತೀವ್ರತೆಗೆ ದಟ್ಟ ಕಪ್ಪು ಹೊಗೆ ಆವರಿಸಿದ್ದು, ಇಡೀ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗೋಡೌನ್‌ನಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಕಿರಾಣಿ ಸ್ಟಾಕ್ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲಾಗಿದೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಸೇರಿದಂತೆ ವಿವಿಧ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಬೆಂಕಿ ಅವಘಡದ ನಿಖರ ಕಾರಣ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಮನೆ ಫ್ರೆಶ್ ಆಗಿರಲಿ ಅಂತ ರೂಮ್ ಫ್ರೆಶ್ನರ್ ಬಳಸುತ್ತೀರಾ? ಆದರೆ ಪದೇ ಪದೇ ಬಳಸಿದ್ರೆ ಏನಾಗುತ್ತೆ ಗೊತ್ತಾ?

0

ಮನೆ, ಆಫೀಸ್ ಅಥವಾ ಕಾರಿನಲ್ಲಿ ಸ್ವಲ್ಪ ವಾಸನೆ ಬಂದರೂ ಸಾಕು, ರೂಮ್ ಫ್ರೆಶ್ನರ್ ಸ್ಪ್ರೇ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಕ್ಷಣಮಾತ್ರಕ್ಕೆ ಆಹ್ಲಾದಕರ ಪರಿಮಳ ಸಿಗುತ್ತದೆಯಾದರೂ, ಇದರಲ್ಲಿರುವ ರಾಸಾಯನಿಕಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ರೂಮ್ ಫ್ರೆಶ್ನರ್‌ನಲ್ಲಿ ಏನಿರುತ್ತೆ?
ಗಾಳಿಯನ್ನು ತಾಜಾಗೊಳಿಸುವ ಸುಗಂಧ ರಾಸಾಯನಿಕಗಳು ಇದರಲ್ಲಿ ಇರುತ್ತವೆ. ಸ್ಪ್ರೇ ಮಾಡಿದಾಗ ಈ ಕಣಗಳು ಗಾಳಿಯಲ್ಲಿ ಕೆಲ ಕಾಲ ಉಳಿದು, ಉಸಿರಾಟದ ಮೂಲಕ ದೇಹ ಪ್ರವೇಶಿಸುತ್ತವೆ. ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಆಗಬಹುದಾದ ಅಡ್ಡ ಪರಿಣಾಮಗಳು

  • ಕಣ್ಣು, ಮೂಗು, ಗಂಟಲಿಗೆ ಕಿರಿಕಿರಿ
  • ತಲೆನೋವು, ತಲೆತಿರುಗುವಿಕೆ
  • ಮಕ್ಕಳು-ವೃದ್ಧರಿಗೆ ಉಸಿರಾಟದ ತೊಂದರೆ
  • ಅಸ್ವಸ್ಥತೆ

ಅತಿಯಾದ ಬಳಕೆ ಎಷ್ಟು ಅಪಾಯಕಾರಿ?
ಅಸ್ತಮಾ, ಅಲರ್ಜಿ ಇರುವವರಲ್ಲಿ ಬಲವಾದ ಸ್ಪ್ರೇ ವಾಸನೆ ಕೆಮ್ಮು, ಎದೆ ಬಿಗಿತ, ಉಸಿರಾಟದ ತೊಂದರೆ ಹೆಚ್ಚಿಸಬಹುದು. ಮುಚ್ಚಿದ, ಚಿಕ್ಕ ಕೋಣೆಗಳಲ್ಲಿ ರಾಸಾಯನಿಕ ಕಣಗಳು ಹೆಚ್ಚು ಹೊತ್ತು ಗಾಳಿಯಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ಪ್ರೇ ಮಾಡಿದ ಬಳಿಕ ಕಿಟಕಿ-ಬಾಗಿಲು ತೆರೆದಿಡುವುದು ಉತ್ತಮ.

ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

  • ಅತಿಯಾದ ಬಳಕೆ ಬೇಡ
  • ಮುಖ, ಕಣ್ಣು, ಚರ್ಮದ ಮೇಲೆ ನೇರ ಸಿಂಪಡಣೆ ಮಾಡಬಾರದು
  • ಅಡುಗೆ ಮನೆ ಮತ್ತು ಮಕ್ಕಳ ಸುತ್ತಮುತ್ತ ಬಳಸುವಾಗ ಎಚ್ಚರ ಅಗತ್ಯ
  • ಬಳಕೆಯ ಬಳಿಕ ಕೆಮ್ಮು, ಕಣ್ಣಿನ ಕಿರಿಕಿರಿ, ತಲೆನೋವು ಅಥವಾ ಉಸಿರಾಟದ ತೊಂದರೆ ಕಂಡರೆ ತಕ್ಷಣ ಬಳಕೆ ನಿಲ್ಲಿಸಿ

ಪದೇ ಪದೇ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಕಿಟಕಿ ತೆರೆಯುವುದು, ಮನೆ ಸ್ವಚ್ಛವಾಗಿಟ್ಟುಕೊಳ್ಳುವುದೇ ವಾಸನೆ ನಿವಾರಣೆಗೆ ಸುರಕ್ಷಿತ ಮಾರ್ಗ.

ಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಡಿಕೆಶಿ!

0

ರಾಮನಗರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಕನಕಪುರಕ್ಕೆ ಆಗಮಿಸಿದ್ದು, ಮಾರ್ಗಮಧ್ಯೆ ಬಿಸಿಎಂ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಬೆಂಗಳೂರಿನಿಂದ ಕನಕಪುರಕ್ಕೆ ತೆರಳುತ್ತಿದ್ದ ವೇಳೆ ಯಾವುದೇ ಪೂರ್ವ ಸೂಚನೆ ನೀಡದೆ ಹಾಸ್ಟೆಲ್‌ಗೆ ಭೇಟಿ ನೀಡಿದ ಸಿಎಂ, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಹಾಸ್ಟೆಲ್‌ನಲ್ಲಿ ಊಟ, ವಸತಿ ಸೇರಿದಂತೆ ವಿವಿಧ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು.

ಬಳಿಕ ಹಾಸ್ಟೆಲ್‌ನಲ್ಲೇ ವಿದ್ಯಾರ್ಥಿಗಳೊಂದಿಗೆ ಮುದ್ದೆ ಊಟ ಸವಿದರು. ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳು ಹಾಗೂ ಹಾಸ್ಟೆಲ್‌ನಲ್ಲಿನ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು.

ಇಂದು ಕನಕಪುರದಲ್ಲಿ ಕುಟುಂಬದ ಖಾಸಗಿ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಕನಕಪುರದ ನಿವಾಸದಲ್ಲಿ ವಾಸ್ತವ್ಯ ಹೂಡಿದರು.

ಈ ವೇಳೆ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ; ರಸ್ತೆಗೆ ಬಿದ್ದ ಸವಾರರ ಮೇಲೆ ಬಸ್ ಹರಿದು ಇಬ್ಬರು ಸಾವು

0

ಚಿಕ್ಕಮಗಳೂರು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ರಸ್ತೆಗೆ ಬಿದ್ದ ಸವಾರರ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಹಳೇಹಟ್ಟಿ ಗೇಟ್ ಬಳಿ ನಡೆದಿದೆ.

ಮೃತರನ್ನು ಮೂಲತಃ ರಾಜಸ್ಥಾನ ಮೂಲದವರು ಎಂದು ಗುರುತಿಸಲಾಗಿದ್ದು, ಅವರ ಹೆಸರು ಹಾಗೂ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಮೃತರ ಗುರುತು ಪತ್ತೆಹಚ್ಚಲು ಮಾಹಿತಿ ಕಲೆಹಾಕುತ್ತಿದ್ದಾರೆ.

ಕಡೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಮತ್ತೊಂದು ಬೈಕ್ ನಡುವೆ ಹಳೇಹಟ್ಟಿ ಗೇಟ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಸರ್ಕಾರಿ ಬಸ್ ರಸ್ತೆ ಮೇಲೆ ಬಿದ್ದಿದ್ದ ಸವಾರರ ಮೇಲೆ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮತ್ತೊಂದು ಬೈಕ್‌ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಖರಾಯಪಟ್ಟಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗಣೇಶ ಹಬ್ಬದ ಖರೀದಿಗೆ ಕೆಆರ್ ಮಾರ್ಕೆಟ್‌ನಲ್ಲಿ ಜನವೋ ಜನ; ಹೂವು-ಹಣ್ಣುಗಳ ಬೆಲೆ ಏರಿಕೆ!

0

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.

ನಗರದ ಕೆಆರ್ ಮಾರ್ಕೆಟ್‌ನಲ್ಲಿ ಹೂವು, ಹಣ್ಣು ಹಾಗೂ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಹೂವು, ತೋರಣ ಸೇರಿದಂತೆ ಹಲವು ವಸ್ತುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ಸಿದ್ಧತೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಸೇವಂತಿಗೆ ಹೂವು ಕೆ.ಜಿ.ಗೆ ₹350, ತಾವರೆ ಹೂವು ಜೋಡಿಗೆ ₹50 ಹಾಗೂ ಬಟನ್ ಗುಲಾಬಿ ಕೆ.ಜಿ.ಗೆ ₹350 ಇದೆ. ಮಿಕ್ಸ್ ಹೂವು ಕೆ.ಜಿ.ಗೆ ₹300ರಿಂದ ₹400ರ ವರೆಗೆ ಮಾರಾಟವಾಗುತ್ತಿದೆ.

ಕನಕಾಂಬರ ಮೊಳಕ್ಕೆ ₹50 ಹಾಗೂ ಕೆ.ಜಿ.ಗೆ ₹2,000, ಮಲ್ಲಿಗೆ ಮೊಳಕ್ಕೆ ₹50 ಹಾಗೂ ಕೆ.ಜಿ.ಗೆ ₹1,000 ದರವಿದೆ. ತುಳಸಿ ತೋರಣ ಮೊಳಕ್ಕೆ ₹60, ಮಾವಿನ ಎಲೆ ಕಟ್ಟು ₹10ರಿಂದ ₹30 ಹಾಗೂ ಬಾಳೆ ದಿಂಡು ಜೋಡಿಗೆ ₹50ರಿಂದ ₹80ರ ವರೆಗೆ ಇದೆ.

ಹಣ್ಣುಗಳ ದರ ಎಷ್ಟು?

ಸೇಬು ಕೆ.ಜಿ.ಗೆ ₹200ರಿಂದ ₹300, ದಾಳಿಂಬೆ ₹100ರಿಂದ ₹250, ಸಪೋಟ ₹150ರಿಂದ ₹200 ಹಾಗೂ ದ್ರಾಕ್ಷಿ ₹120ರಿಂದ ₹150ರ ವರೆಗೆ ಮಾರಾಟವಾಗುತ್ತಿದೆ.

ಮೂಸಂಬಿ ಹಾಗೂ ಕಿತ್ತಳೆ ಕೆ.ಜಿ.ಗೆ ₹80ರಿಂದ ₹100 ಮತ್ತು ಬಾಳೆಹಣ್ಣು ₹80ರಿಂದ ₹150ರ ವರೆಗೆ ಇದೆ.

ತರಕಾರಿ ದರವೂ ಹೀಗಿದೆ

ಈರುಳ್ಳಿ ಕೆ.ಜಿ.ಗೆ ₹60ರಿಂದ ₹70, ಹಸಿಮೆಣಸಿನಕಾಯಿ ₹40ರಿಂದ ₹60, ಬೀಟ್‌ರೂಟ್ ₹50ರಿಂದ ₹60 ಹಾಗೂ ಬೆಳ್ಳುಳ್ಳಿ ₹200ರಿಂದ ₹250ರ ವರೆಗೆ ಇದೆ.

ನಿಂಬೆಹಣ್ಣು ಒಂದಕ್ಕೆ ₹8ರಿಂದ ₹15, ನುಗ್ಗೆಕಾಯಿ ಒಂದಕ್ಕೆ ₹10ರಿಂದ ₹15, ಕ್ಯಾಪ್ಸಿಕಂ ಕೆ.ಜಿ.ಗೆ ₹50ರಿಂದ ₹70 ಹಾಗೂ ಬಟಾಣಿ ₹140ರಿಂದ ₹160ರ ವರೆಗೆ ಮಾರಾಟವಾಗುತ್ತಿದೆ.

ದಿನಸಿ ವಸ್ತುಗಳ ದರ

ಬೆಲ್ಲ ಕೆ.ಜಿ.ಗೆ ₹50ರಿಂದ ₹55, ತೊಗರಿಬೇಳೆ ₹160ರಿಂದ ₹170, ಹುರಿಗಡಲೆ ₹150ರಿಂದ ₹180 ಹಾಗೂ ಕಡಲೆಬೀಜ ₹100ರಿಂದ ₹140ರ ವರೆಗೆ ಇದೆ.

ಸಕ್ಕರೆ ಕೆ.ಜಿ.ಗೆ ₹60ರಿಂದ ₹80, ಚಿರೋಟಿ ರವೆ ₹90ರಿಂದ ₹100, ಮೈದಾ ಹಿಟ್ಟು ₹45ರಿಂದ ₹50 ಹಾಗೂ ಕಡಲೆಕಾಳು ₹90ರಿಂದ ₹100ರ ವರೆಗೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ ಲೀಟರ್‌ಗೆ ₹190ರಿಂದ ₹210ರ ವರೆಗೆ ಇದ್ದು, ದರವು ಆಯಾ ಬ್ರ್ಯಾಂಡ್‌ಗಳನ್ನು ಅವಲಂಬಿಸಿದೆ.

ಒಟ್ಟಾರೆ, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಮಾತ್ರ ಯಾವುದೇ ಕೊರತೆಯಾಗಿಲ್ಲ.