Home Blog Page 27

12 ವರ್ಷಗಳ ದೇಶೀಯ ಕ್ರಿಕೆಟ್ ಹೋರಾಟದ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಪಡೆದ ಆಲ್ ರೌಂಡರ್!

0

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, 15 ಸದಸ್ಯರ ಈ ತಂಡದಲ್ಲಿ ಏಕೈಕ ಹೊಸ ಮುಖವಾಗಿ ಮಧ್ಯಪ್ರದೇಶದ ಅನುಭವಿ ಆಫ್‌ಸ್ಪಿನ್ ಆಲ್‌ರೌಂಡರ್ ಸರಂಶ್ ಜೈನ್ ಸ್ಥಾನ ಪಡೆದಿದ್ದಾರೆ.

ಗಾಯದ ಸಮಸ್ಯೆಯಿಂದ ಮೊದಲ ಟೆಸ್ಟ್‌ಗೆ ಅಲಭ್ಯರಾಗಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಸರಂಶ್ ಅವರಿಗೆ ಅವಕಾಶ ನೀಡಲಾಗಿದೆ. ಈ ಆಯ್ಕೆಯೊಂದಿಗೆ ‘ಯಾರು ಈ ಸರಂಶ್ ಜೈನ್?’ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

33 ವರ್ಷದ ಸರಂಶ್ ಜೈನ್ 2014ರಲ್ಲಿ ಮಧ್ಯಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸುಮಾರು 12 ವರ್ಷಗಳ ಸತತ ಪರಿಶ್ರಮ, ಸ್ಥಿರ ಪ್ರದರ್ಶನ ಮತ್ತು ದೇಶೀಯ ಕ್ರಿಕೆಟ್‌ನಲ್ಲಿನ ಯಶಸ್ಸಿನ ಫಲವಾಗಿ ಇದೀಗ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇದುವರೆಗೆ ಸರಂಶ್ ಜೈನ್ 54 ಪ್ರಥಮ ದರ್ಜೆ ಪಂದ್ಯಗಳಲ್ಲಿ 2,223 ರನ್ ಗಳಿಸಿದ್ದು, 31.76 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಅವರ ಖಾತೆಯಲ್ಲಿ 2 ಶತಕ ಹಾಗೂ 14 ಅರ್ಧಶತಕಗಳಿವೆ. ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಅವರು 188 ವಿಕೆಟ್‌ಗಳನ್ನು ಕಬಳಿಸಿದ್ದು, 27.31ರ ಬೌಲಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 75 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಸಾಧನೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ದೇಶೀಯ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಸರಂಶ್ ಜೈನ್ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಈ ಅವಧಿಯಲ್ಲಿ 311 ರನ್ ಗಳಿಸುವುದರ ಜೊತೆಗೆ 44 ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದು ಭಾರತದ ಅತ್ಯಂತ ಯಶಸ್ವಿ ಆಫ್‌ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯವೇ ಅವರನ್ನು ಆಯ್ಕೆಗಾರರ ಗಮನ ಸೆಳೆಯುವಂತೆ ಮಾಡಿದೆ.

ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ಝೋನ್ ತಂಡ ಚಾಂಪಿಯನ್ ಪಟ್ಟಕ್ಕೇರಲು ಸರಂಶ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಇರಾನಿ ಟ್ರೋಫಿಯಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಮುಂಬೈ ವಿರುದ್ಧ 121 ರನ್ ನೀಡಿ 6 ವಿಕೆಟ್ ಪಡೆದು ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.

ಇತ್ತೀಚೆಗೆ ನಡೆದ ಇಂಡಿಯಾ ‘ಎ’ ತಂಡದ ಶ್ರೀಲಂಕಾ ಪ್ರವಾಸವೂ ಅವರ ರಾಷ್ಟ್ರೀಯ ತಂಡದ ಆಯ್ಕೆಗೆ ಪ್ರಮುಖ ಕಾರಣವಾಯಿತು. ಗಾಲೆಯಲ್ಲಿ ನಡೆದ ಶ್ರೀಲಂಕಾ ‘ಎ’ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯದಲ್ಲಿ ಅಜೇಯ 70 ರನ್ ಗಳಿಸಿದ್ದ ಅವರು, ಪಂದ್ಯದಲ್ಲಿ ಒಟ್ಟು 6 ವಿಕೆಟ್ ಕಬಳಿಸಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಮ್ಯಾಚ್ ವಿನ್ನರ್ ಆಗಿ ಮಿಂಚಿದ್ದರು. ಈ ಪ್ರದರ್ಶನವೇ ಅವರಿಗೆ ಭಾರತ ಟೆಸ್ಟ್ ತಂಡದ ಬಾಗಿಲು ತೆರೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಸರಂಶ್ ಜೈನ್ ಅವರಿಗೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ದೊರೆತಿದೆ. ಶ್ರೀಲಂಕಾ ಪ್ರವಾಸದಲ್ಲಿ ದೇಶೀಯ ಕ್ರಿಕೆಟ್‌ನ ಯಶಸ್ಸನ್ನು ಮುಂದುವರಿಸಿ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಹೊರಹೊಮ್ಮುವ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಟಾಲಿವುಡ್ ಜನಪ್ರಿಯ ಪೋಷಕ ನಟಿ ಪಾವಲ ಶಾಮಲ ಅನಾರೋಗ್ಯದಿಂದ ನಿಧನ

ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಮ್ಮ ಹಾಸ್ಯ ಅಭಿನಯದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಹಿರಿಯ ನಟಿ ಪಾವಲ ಶಾಮಲ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಪಾವಲ ಶಾಮಲ ಎಂದರೆ ತೆಲುಗು ಪ್ರೇಕ್ಷಕರಿಗೆ ನೆನಪಾಗುವುದು ಅವರ ಸಹಜ ಅಭಿನಯ, ಚುರುಕು ಸಂಭಾಷಣೆ ಮತ್ತು ವಿಭಿನ್ನ ಹಾಸ್ಯ ಶೈಲಿ. ರಂಗಭೂಮಿಯಲ್ಲಿ ಗುರುತಿಸಿಕೊಂಡ ಬಳಿಕ ಸಿನಿಮಾಗೆ ಬಂದ ಅವರು, 1984ರಲ್ಲಿ ‘ಚಾಲೆಂಜ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಶಾಮಲ, ತೆಲುಗು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳ ಭಾಗವಾಗಿದ್ದರು. ಸಣ್ಣ ಪಾತ್ರಗಳಲ್ಲಿಯೂ ತಮ್ಮದೇ ಆದ ಅಭಿನಯದ ಛಾಪು ಮೂಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಅವರ ಹಾಸ್ಯ ದೃಶ್ಯಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಮೀಮ್ ಸಂಸ್ಕೃತಿಯಲ್ಲೂ ಅವರ ಅಭಿನಯದ ಹಲವು ದೃಶ್ಯಗಳು ಸ್ಥಾನ ಪಡೆದಿವೆ.

ಆದರೆ ಪರದೆಯ ಮೇಲೆ ಜನರನ್ನು ನಗಿಸಿದ ಈ ಕಲಾವಿದೆಯ ನಿಜ ಜೀವನ ಮಾತ್ರ ನೋವುಗಳಿಂದ ಕೂಡಿತ್ತು. ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದ ಅವರು, ಮದುವೆಯ ನಂತರ ಪತಿಯನ್ನೂ ಕಳೆದುಕೊಂಡರು. ನಂತರ ಸಿನಿಮಾ ಮತ್ತು ನಾಟಕಗಳ ಮೂಲಕ ಜೀವನ ನಡೆಸುತ್ತಿದ್ದ ಅವರಿಗೆ ಅನಾರೋಗ್ಯ ದೊಡ್ಡ ಸವಾಲಾಯಿತು.

ಪಾರ್ಕಿನ್ಸನ್ ಕಾಯಿಲೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮಲ ಅವರಿಗೆ ಚಿಕಿತ್ಸೆ ಪಡೆಯುವುದೂ ಕಷ್ಟವಾಗಿತ್ತು. ಪುತ್ರಿಯ ಅನಾರೋಗ್ಯದ ಕಾರಣ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು.

ಈ ಪರಿಸ್ಥಿತಿಯಲ್ಲಿ ಚಿತ್ರರಂಗದ ಗಣ್ಯರು ಅವರ ನೆರವಿಗೆ ಬಂದಿದ್ದರು. ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ಹಲವು ನಟರು ಆರ್ಥಿಕ ಸಹಾಯ ಮಾಡಿದ್ದರು. ತೆಲಂಗಾಣ ಸರ್ಕಾರವೂ ಮಾಸಾಶನ ಹಾಗೂ ಮನೆ ನೀಡುವ ಘೋಷಣೆ ಮಾಡಿತ್ತು.

ಮೂರು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರರಂಗವನ್ನು ರಂಜಿಸಿದ ಪಾವಲ ಶಾಮಲ ಅವರ ನಿಧನದಿಂದ ಕಲಾ ಲೋಕ ಒಬ್ಬ ಪ್ರತಿಭಾವಂತ ಹಾಸ್ಯ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ಭಾರತ ತಂಡ ಪ್ರಕಟ: ಗಿಲ್ʼಗೆ ನಾಯಕತ್ವ, ಕೆ.ಎಲ್. ರಾಹುಲ್ ಉಪನಾಯಕ

0

ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಯುವ ಬ್ಯಾಟರ್ ಶುಭ್‌ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು, ಅನುಭವಿ ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ತಂಡದಲ್ಲಿ ಮಧ್ಯಪ್ರದೇಶದ ಯುವ ಆಫ್‌ಸ್ಪಿನ್ನರ್ ಸರಂಶ್ ಜೈನ್ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ವಾಷಿಂಗ್ಟನ್ ಸುಂದರ್ ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಮೊದಲ ಟೆಸ್ಟ್‌ಗೆ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸರಂಶ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನೊಂದೆಡೆ, ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ತಮಿಳುನಾಡಿನ ಪ್ರತಿಭಾವಂತ ಬ್ಯಾಟರ್ ಸಾಯಿ ಸುದರ್ಶನ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಅವರ ಅಂತಿಮ ಆಯ್ಕೆ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನೀಡುವ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರಲಿದೆ.

ಗಾಯದ ಸಮಸ್ಯೆಯಿಂದ ಕೆಲಕಾಲ ಕ್ರಿಕೆಟ್‌ನಿಂದ ದೂರವಾಗಿದ್ದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿರುವುದು ಭಾರತಕ್ಕೆ ದೊಡ್ಡ ಬಲವಾಗಿದೆ. ಟೆನ್ನಿಸ್ ಎಲ್ಬೋ ಗಾಯದಿಂದ ಚೇತರಿಸಿಕೊಂಡಿರುವ ಜಡೇಜಾ ಅವರ ಮರಳುವಿಕೆಯಿಂದ ಸ್ಪಿನ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.

ಭಾರತ ಟೆಸ್ಟ್ ತಂಡ:

ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರಿಷಭ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್. ಬುಮ್ರಾ ಮತ್ತು ಸಾಯಿ ಸುದರ್ಶನ್ ಅವರ ಆಯ್ಕೆ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ.

ಸರಣಿ ವೇಳಾಪಟ್ಟಿ:

ಶ್ರೀಲಂಕಾ ಪ್ರವಾಸಕ್ಕಾಗಿ ಆಗಸ್ಟ್ 4ರಂದು ಕೊಲಂಬೋ ತಲುಪಲಿರುವ ಟೀಂ ಇಂಡಿಯಾ, ಮೊದಲ ಟೆಸ್ಟ್‌ಗೂ ಮುನ್ನ ಲಂಕಾ ಬೋರ್ಡ್ XI ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಬಳಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

  • ಆಗಸ್ಟ್ 7–10: ಲಂಕಾ ಬೋರ್ಡ್ XI ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ – ಎನ್‌ಸಿಸಿ ಮೈದಾನ, ಕೊಲಂಬೋ
  • ಆಗಸ್ಟ್ 15–19: ಮೊದಲ ಟೆಸ್ಟ್ – ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ
  • ಆಗಸ್ಟ್ 23–27: ಎರಡನೇ ಟೆಸ್ಟ್ – ಎಸ್‌ಎಸ್‌ಸಿ ಮೈದಾನ, ಕೊಲಂಬೋ

ಶ್ರೀಲಂಕಾ ಪ್ರವಾಸದ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸಲಿದೆ. ಸೆಪ್ಟೆಂಬರ್ 26ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಡೆಯಲಿವೆ.

ಪಾನ್ ಮಸಾಲಾ ಮೇಲಿನ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ʼಗೆ ಹೈಕೋರ್ಟ್ ಬ್ರೇಕ್!

ಬೆಂಗಳೂರು: ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕೇಂದ್ರದ ಆದೇಶವನ್ನು ಅನೂರ್ಜಿತಗೊಳಿಸಿದೆ.

ಪಾನ್ ಮಸಾಲಾ ತಯಾರಕರಾದ ಧಾರಿವಾಲ್ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ತೀರ್ಪು ಪ್ರಕಟಿಸಿತು.

ಕೇಂದ್ರ ಸರ್ಕಾರ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಿರುವ ಕ್ರಮ ಏಕಪಕ್ಷೀಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ, ತೆರಿಗೆ, ಸರ್‌ಚಾರ್ಜ್ ಅಥವಾ ಸೆಸ್ ವಿಧಿಸುವ ಅಧಿಕಾರ ಸಂಸತ್ತಿಗೆ ಇದೆ ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ಎತ್ತಿಹಿಡಿದಿದೆ.

2006ರ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ತೀರ್ಪು ನೀಡಿದ ಹೈಕೋರ್ಟ್, ಸೆಸ್ ವಿಧಿಸುವ ಅಧಿಕಾರವನ್ನು ಪ್ರಶ್ನಿಸಲು ಅವಕಾಶವಿಲ್ಲ. ಆದರೆ ನಿಜವಾದ ಉತ್ಪಾದನೆಯ ಬದಲಿಗೆ ಊಹಿಸಲಾದ ಉತ್ಪಾದನೆಯ ಆಧಾರದ ಮೇಲೆ ಸೆಸ್ ವಿಧಿಸುವುದು ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ.

ಕೇಂದ್ರ ಸರ್ಕಾರಕ್ಕೆ ತೆರಿಗೆ ಅಥವಾ ಸೆಸ್ ವಿಧಿಸುವ ಸಂಪೂರ್ಣ ಅಧಿಕಾರವಿದ್ದರೂ, ಈ ಪ್ರಕರಣದಲ್ಲಿ ಅದನ್ನು ಜಾರಿಗೊಳಿಸಿರುವ ವಿಧಾನ ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಕಾಯ್ದೆ ಮತ್ತು ಅದರ ನಿಯಮಗಳು ಸಮಾನತೆಯ ತತ್ವವನ್ನು ಉಲ್ಲಂಘಿಸುವಂತಿವೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಕಡಿಮೆ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳು ಮತ್ತು ಹೆಚ್ಚಿನ ಸಾಮರ್ಥ್ಯದ ಯಂತ್ರಗಳನ್ನು ಬಳಸುವ ಸಂಸ್ಥೆಗಳಿಗೆ ಒಂದೇ ರೀತಿಯ ಸೆಸ್ ವಿಧಿಸುವುದು ಸಮಂಜಸವಲ್ಲ. ಯಂತ್ರಗಳ ಊಹಾತ್ಮಕ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ತೆರಿಗೆ ವಿಧಿಸುವುದು ಅನಿಯಂತ್ರಿತ ವರ್ಗೀಕರಣಕ್ಕೆ ಕಾರಣವಾಗುತ್ತದೆ. ಹೀಗಾಗಿ, ಪಾನ್ ಮಸಾಲಾ ಪೌಚ್ ಪ್ಯಾಕಿಂಗ್ ಯಂತ್ರಗಳ ಸಂಭಾವ್ಯ ಉತ್ಪಾದನೆ ಆಧರಿಸಿ ಸೆಸ್ ವಿಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆದಾಗ್ಯೂ, ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮಾಡಿದ ಅವಲೋಕನಗಳಿಗೆ ಅನುಗುಣವಾಗಿ ಸೆಸ್ ವಿಧಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿದೆ.

ತೀರ್ಪಿನಲ್ಲಿ ಉದಾಹರಣೆಯೊಂದನ್ನು ಉಲ್ಲೇಖಿಸಿರುವ ನ್ಯಾಯಾಲಯ, ನಿಮಿಷಕ್ಕೆ 65 ಪೌಚ್ ಉತ್ಪಾದಿಸುವ ಸಾಮರ್ಥ್ಯದ ಯಂತ್ರವು ದಿನಕ್ಕೆ 8 ಗಂಟೆ ಕಾರ್ಯನಿರ್ವಹಿಸಿದರೆ 31,200 ಪೌಚ್ ಹಾಗೂ 25 ದಿನಗಳಲ್ಲಿ 7.80 ಲಕ್ಷ ಪೌಚ್ ಉತ್ಪಾದಿಸಬಹುದು. ಈ ಊಹಾತ್ಮಕ ಉತ್ಪಾದನೆ ಆಧರಿಸಿ ಸುಮಾರು ₹1.01 ಕೋಟಿ ಸೆಸ್ ಹಾಗೂ ಜಿಎಸ್‌ಟಿ ಸೇರಿ ಒಟ್ಟು ₹1.09 ಕೋಟಿ ತೆರಿಗೆ ವಿಧಿಸಲಾಗುತ್ತಿತ್ತು. ಈ ವಿಧಾನ ತಯಾರಕರ ಮೇಲೆ ಅಸಮಾನ ಮತ್ತು ಏಕಪಕ್ಷೀಯ ತೆರಿಗೆ ಹೊರೆ ಉಂಟುಮಾಡುತ್ತದೆ ಎಂದು ತಿಳಿಸಿದೆ.

ಸಾರ್ವಜನಿಕ ಆರೋಗ್ಯ ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಹಣಕಾಸು ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2025ರಲ್ಲಿ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆ ಜಾರಿಗೊಳಿಸಿತ್ತು. ಈ ಕಾಯ್ದೆಯಡಿ, ಪಾನ್ ಮಸಾಲಾ ಉತ್ಪಾದಕರ ಬಳಿ ಇರುವ ಯಂತ್ರಗಳ ಸಂಖ್ಯೆ ಹಾಗೂ ಅವುಗಳ ಸಂಭಾವ್ಯ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಸೆಸ್ ವಿಧಿಸಲಾಗುತ್ತಿತ್ತು.

ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ವಾದ ಮಂಡಿಸಿ, ಪಾನ್ ಮಸಾಲಾ ಉದ್ಯಮದಲ್ಲಿ ತೆರಿಗೆ ವಂಚನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆದಾಯ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೆ ಹೈಕೋರ್ಟ್, ಸೆಸ್ ಜಾರಿಯ ವಿಧಾನ ಸಂವಿಧಾನಬದ್ಧವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಕೇಂದ್ರದ ಆದೇಶವನ್ನು ಅನೂರ್ಜಿತಗೊಳಿಸಿದೆ.

ರೇಷನ್ ಜೊತೆ ಸಿನಿಮಾ ಟಿಕೆಟ್! 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ₹150 ಟಿಕೆಟ್ ಮಾರಾಟ; ರಾಜ್ಯದಲ್ಲಿ ಭಾರೀ ಚರ್ಚೆ

ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಆರಂಭಿಸಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜುಲೈ 31ರಂದು ಬಿಡುಗಡೆಯಾಗಲಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪ್ರೀಮಿಯರ್ ಶೋ ಟಿಕೆಟ್‌ಗಳನ್ನು ಹಾವೇರಿ ಸೇರಿದಂತೆ ರಾಜ್ಯದ ಸುಮಾರು 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗಿದೆ.

₹150 ಮೌಲ್ಯದ ಟಿಕೆಟ್‌ಗಳನ್ನು ಒಂದೊಂದು ಅಂಗಡಿಗೆ 50ರಿಂದ 150ರವರೆಗೆ ಹಂಚಿಕೆ ಮಾಡಲಾಗಿದ್ದು, ಪಡಿತರ ಪಡೆಯಲು ಬರುವ ಗ್ರಾಹಕರಿಗೆ ಟಿಕೆಟ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈ ಕ್ರಮದ ಬಗ್ಗೆ ಗೊಂದಲ ಮತ್ತು ಅಸಮಾಧಾನ ವ್ಯಕ್ತವಾಗಿದ್ದು, ಕೆಲವರು ಪಡಿತರದ ಮೇಲೆ ಪರಿಣಾಮ ಬೀಳಬಹುದೆಂಬ ಆತಂಕದಿಂದ ಟಿಕೆಟ್ ಖರೀದಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

ಬರಗಾಲ, ಬೆಳೆ ನಷ್ಟ ಹಾಗೂ ಬೆಲೆ ಏರಿಕೆಯ ನಡುವೆಯೇ ಪಡಿತರ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡುತ್ತಿರುವ ಕ್ರಮವನ್ನು ಹಲವರು ಪ್ರಶ್ನಿಸಿದ್ದು, ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಪ್ರಚಾರದ ವೇದಿಕೆಯಾಗಿ ಬಳಸಲಾಗುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಹಕರೊಂದಿಗೆ ವಿವಾದ ಉಂಟಾಗುವ ಭೀತಿಯಿಂದ ಟಿಕೆಟ್ ಮಾರಾಟಕ್ಕೆ ಹಿಂದೇಟು ಹಾಕುತ್ತಿರುವುದಾಗಿ ತಿಳಿದುಬಂದಿದೆ.

ಆದರೆ ಈ ಆರೋಪಗಳನ್ನು ಆಹಾರ ಇಲಾಖೆ ತಳ್ಳಿ ಹಾಕಿದೆ. ಉಪನಿರ್ದೇಶಕ ಮಂಜುನಾಥ ಡಿ.ಜೆ. ಮಾತನಾಡಿ, ಚಿತ್ರವು ನ್ಯಾಯಬೆಲೆ ಅಂಗಡಿಗಳು ಹಾಗೂ ಅನ್ನಭಾಗ್ಯ ಯೋಜನೆ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಯಾರ ಮೇಲೂ ಟಿಕೆಟ್ ಖರೀದಿಸಲು ಯಾವುದೇ ಒತ್ತಡ ಹೇರಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರದ ಪೋಸ್ಟರ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಬಿಡುಗಡೆ ಮಾಡಿದ್ದು, ಇಲಾಖೆಯ ಆಯುಕ್ತರ ಸೂಚನೆಯಂತೆ ಪ್ರೀಮಿಯರ್ ಶೋ ಕುರಿತು ಮಾಹಿತಿ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಜುಲೈ 31ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ನವೀನ್ ಸಜ್ಜು, ಕೃಷ್ಣಪ್ಪ ಹಾಗೂ ರುದ್ರೇಗೌಡ ಅಭಿನಯಿಸಿದ್ದಾರೆ. ಜಯಶಂಕರ್ ಟಾಕೀಸ್ ನಿರ್ಮಾಣದ ಈ ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ನಿರ್ದೇಶನ, ಅನಂತ್ ಆರ್ಯನ್ ಸಂಗೀತ ನೀಡಿದ್ದು, ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್ ನಿರ್ಮಾಪಕರಾಗಿದ್ದಾರೆ.

ರಾಮ್ ಚರಣ್‌ಗೆ ಯಶಸ್ವಿ ಮಣಿಕಟ್ಟು ಶಸ್ತ್ರಚಿಕಿತ್ಸೆ! ಚಿರಂಜೀವಿಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಮತ್ತೆ ನೆರವಿಗೆ

ಮಣಿಕಟ್ಟಿನ ತೀವ್ರ ಗಾಯದಿಂದ ಬಳಲುತ್ತಿದ್ದ ನಟ ರಾಮ್ ಚರಣ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕೋಯಂಬತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ನಡೆದ ಈ ವಿಶೇಷ ಸರ್ಜರಿಗಾಗಿ ಅಮೆರಿಕದ ಖ್ಯಾತ ಹ್ಯಾಂಡ್ ಮತ್ತು ರಿಸ್ಟ್ ಸರ್ಜನ್ ಡಾ. ಅಲೆಹಾಂಡ್ರೋ ಬಾಡಿಯಾ ಅವರನ್ನು ವಿಶೇಷವಾಗಿ ಭಾರತಕ್ಕೆ ಕರೆಸಿಕೊಳ್ಳಲಾಗಿತ್ತು.

‘ಪೆದ್ದಿ’ ಚಿತ್ರದ ಪ್ರಚಾರದ ವೇಳೆಯೇ ರಾಮ್ ಚರಣ್ ಕೈಗೆ ಬ್ಯಾಂಡೇಜ್ ಧರಿಸಿ ಕಾಣಿಸಿಕೊಂಡಿದ್ದರು. ಮಣಿಕಟ್ಟಿನ ಸಮಸ್ಯೆ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವೆಂದು ಸೂಚಿಸಿದ್ದರು.

ಶಸ್ತ್ರಚಿಕಿತ್ಸೆಗೆ ವಿಶ್ವಪ್ರಸಿದ್ಧ ಆರ್ಥೋಪೆಡಿಕ್ ತಜ್ಞ ಡಾ. ಎಸ್. ರಾಜಶೇಖರನ್ ನೇತೃತ್ವ ವಹಿಸಿದ್ದರು. ಈ ಹಿಂದೆ ಚಿರಂಜೀವಿ ಅವರ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದ ಅನುಭವ ಹೊಂದಿರುವ ಅವರು, ಮತ್ತೊಮ್ಮೆ ಮೆಗಾ ಕುಟುಂಬದ ವಿಶ್ವಾಸ ಉಳಿಸಿಕೊಂಡಿದ್ದಾರೆ.

ಅಮೆರಿಕದ ಮಿಯಾಮಿಯಿಂದ ಆಗಮಿಸಿದ ಡಾ. ಅಲೆಹಾಂಡ್ರೋ ಬಾಡಿಯಾ, ಡಾ. ಪ್ರವೀಣ್ ಭಾರದ್ವಾಜ್ ಹಾಗೂ ತಜ್ಞರ ತಂಡದ ಸಹಯೋಗದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೈ ಮತ್ತು ಮಣಿಕಟ್ಟು ಗಾಯಗಳ ಚಿಕಿತ್ಸೆಯಲ್ಲಿ ಬಾಡಿಯಾ ವಿಶ್ವದ ಪ್ರಮುಖ ತಜ್ಞರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.

ಸರ್ಜರಿ ಸಮಯದಲ್ಲಿ ಚಿರಂಜೀವಿ, ಸುರೇಖಾ ಮತ್ತು ಉಪಾಸನಾ ಆಸ್ಪತ್ರೆಯಲ್ಲೇ ಇದ್ದು ರಾಮ್ ಚರಣ್‌ಗೆ ಮಾನಸಿಕ ಧೈರ್ಯ ತುಂಬಿದರು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ಸಲಹೆಯಂತೆ ಕೆಲವು ದಿನ ವಿಶ್ರಾಂತಿ ಪಡೆದ ಬಳಿಕ ಹೈದರಾಬಾದ್‌ಗೆ ಮರಳಲಿದ್ದಾರೆ. ರಾಮ್ ಚರಣ್ ಶೀಘ್ರ ಗುಣಮುಖರಾಗಿ ಮತ್ತೆ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ! ಪತ್ನಿಗೆ ನೇಣು ಹಾಕಿ ವಿಡಿಯೋ ಕಾಲ್‌ನಲ್ಲಿ ತೋರಿಸಿದ ಪತಿ

0

ಬಾಗಲಕೋಟೆ: ಪತ್ನಿಗೆ ನೇಣು ಹಾಕಿ ಆಕೆ ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ಅತ್ತೆ–ಮಾವನಿಗೆ ವಿಡಿಯೋ ಕಾಲ್‌ ಮೂಲಕ ತೋರಿಸಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಭಾಗ್ಯಶ್ರೀ ಜಿಗಳೂರು (23) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪ್ರವೀಣ್ ಜಿಗಳೂರು ಹತ್ಯೆ ಆರೋಪಿಯಾಗಿದ್ದಾನೆ.

ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದ ಪ್ರವೀಣ್, ಆಕೆಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಬಳಿಕ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನೇಣು ಬಿಗಿದ ಬಳಿಕ ಆಕೆ ಒದ್ದಾಡುತ್ತಿದ್ದ ದೃಶ್ಯವನ್ನು ವಿಡಿಯೋ ಕಾಲ್‌ನಲ್ಲಿ ಅತ್ತೆ–ಮಾವನಿಗೆ ತೋರಿಸಿದ್ದಾನೆ. ಅಲ್ಲದೇ ಘಟನೆ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ವಿಡಿಯೋದಲ್ಲಿ ನೇಣು ಕುಣಿಕೆಯ ಹಿಂಭಾಗದಲ್ಲಿ ಮದುವೆ ಸಂದರ್ಭದಲ್ಲಿ ಬರೆದಿದ್ದ ದಂಪತಿಯ ಹೆಸರುಗಳು ಕೂಡ ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾಗ್ಯಶ್ರೀ ಹಾಗೂ ಪ್ರವೀಣ್ ನಡುವೆ ಜಗಳವಾಗಿದ್ದ ಹಿನ್ನೆಲೆಯಲ್ಲಿ ಆಕೆ ಎರಡು ತಿಂಗಳ ಹಿಂದೆ ಮಹಾಲಿಂಗಪುರದಲ್ಲಿರುವ ತವರು ಮನೆಗೆ ತೆರಳಿದ್ದಳು. ಬಳಿಕ ಜುಲೈ 27ರಂದು ಚೆನ್ನಾಗಿ ಜೀವನ ನಡೆಸೋಣ ಎಂದು ಹೇಳಿ ಪ್ರವೀಣ್ ಆಕೆಯನ್ನು ಗಲಗಲಿಗೆ ಕರೆತಂದಿದ್ದ. ಅದೇ ದಿನ ಸಂಜೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಘಟನೆ ಮಾಹಿತಿ ತಿಳಿದು ಬೀಳಗಿ ಪೊಲೀಸರು ಹಾಗೂ ಎಸ್‌ಪಿ ಸಿದ್ದಾರ್ಥ್ ಗೋಯೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದ ಬಸ್ ಅಪಘಾತ; 39 ಯಾತ್ರಿಕರಿಗೆ ಗಾಯ!

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಮರನಾಥ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ಬಸ್ ಅಪಘಾತಕ್ಕೀಡಾಗಿ 39 ಯಾತ್ರಿಕರು ಗಾಯಗೊಂಡಿದ್ದಾರೆ.

ಬಾಬಾ ಬರ್ಫಾನಿ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ.

ಅಪಘಾತದ ವೇಳೆ ಬಸ್ ಸಿಂಧ್ ನದಿಗೆ ಬೀಳುವ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಬಸ್ ನದಿಗೆ ಉರುಳಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಮನೆಯೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಘಟನೆ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು, ಜಮ್ಮು-ಕಾಶ್ಮೀರ ಪೊಲೀಸರು, ಐಟಿಬಿಪಿ, ಸಿಆರ್‌ಪಿಎಫ್ ಹಾಗೂ ಭಾರತೀಯ ಸೇನೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಗಾಯಗೊಂಡ ಯಾತ್ರಿಕರನ್ನು ಸಮೀಪದ ಆಸ್ಪತ್ರೆಗಳು ಹಾಗೂ ಶ್ರೀನಗರದ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗಂಡೇರ್‌ಬಾಲ್ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗಾಯಗೊಂಡ ಭಕ್ತರಿಗೆ ಅಗತ್ಯ ನೆರವು ಹಾಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆ ಜುಲೈ 2ರಂದು ಆರಂಭವಾಗಿದ್ದು, ಇದುವರೆಗೆ 4.15 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಹಿಮಲಿಂಗದ ದರ್ಶನ ಪಡೆದಿದ್ದಾರೆ. 57 ದಿನಗಳ ಕಾಲ ನಡೆಯುವ ಯಾತ್ರೆ ಆಗಸ್ಟ್ 28ರಂದು ಮುಕ್ತಾಯಗೊಳ್ಳಲಿದೆ.

Assam Flood: ಪ್ರವಾಹ ಪರಿಸ್ಥಿತಿ ಸುಧಾರಣೆ, ಆದರೂ ಲಕ್ಷಾಂತರ ಜನರು ಸಂಕಷ್ಟದಲ್ಲಿ!

0

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.

ಆದರೂ ರಾಜ್ಯದ 6 ಜಿಲ್ಲೆಗಳ 4.45 ಲಕ್ಷಕ್ಕೂ ಹೆಚ್ಚು ಜನರು ಇನ್ನೂ ಪ್ರವಾಹ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ASDMA ಬಿಡುಗಡೆ ಮಾಡಿರುವ ವರದಿ ಪ್ರಕಾರ, ಶಿವಸಾಗರ್, ಗೋಲಾಘಾಟ್, ಚರೈದಿಯೋ, ಜೋರ್ಹಾಟ್, ನಾಗಾಂವ್ ಹಾಗೂ ಕಾಮರೂಪ್  ಜಿಲ್ಲೆಗಳ ಒಟ್ಟು 4,45,495 ಮಂದಿ ಪ್ರವಾಹದಿಂದ ಬಾಧಿತರಾಗಿದ್ದಾರೆ.

ಗೋಲಾಘಾಟ್ ಜಿಲ್ಲೆಯ ನುಮಾಲಿಗಢದಲ್ಲಿ ಧನಸಿರಿ ನದಿ ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ ಭಾನುವಾರ ರಾಜ್ಯದ 5 ಜಿಲ್ಲೆಗಳ 5.24 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

ಈ ವರ್ಷದ ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 68ಕ್ಕೆ ಸ್ಥಿರವಾಗಿದೆ.

ಚರೈದಿಯೋ ಜಿಲ್ಲೆಯಲ್ಲಿ ಹೆಚ್ಚು ಹಾನಿ:

ಪ್ರವಾಹದಿಂದ ಚರೈದಿಯೋ ಜಿಲ್ಲೆ ಅತಿ ಹೆಚ್ಚು ಬಾಧಿತವಾಗಿದ್ದು, ಇಲ್ಲಿ 1,88,404 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳಿಕ ಶಿವಸಾಗರ್ ಜಿಲ್ಲೆಯಲ್ಲಿ 1,44,461 ಮಂದಿ ಹಾಗೂ ಜೋರ್ಹಾಟ್ ಜಿಲ್ಲೆಯಲ್ಲಿ 74,458 ಮಂದಿ ಪ್ರವಾಹದ ಪರಿಣಾಮ ಎದುರಿಸುತ್ತಿದ್ದಾರೆ.

90 ಪರಿಹಾರ ಶಿಬಿರಗಳಲ್ಲಿ 28 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ:

ಪ್ರಸ್ತುತ ರಾಜ್ಯದಲ್ಲಿ 90 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹದಿಂದ ಸ್ಥಳಾಂತರಗೊಂಡ 28,695 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಇದರ ಜೊತೆಗೆ 94 ಪರಿಹಾರ ವಿತರಣಾ ಕೇಂದ್ರಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Karnataka Dam Water Level: ಯಾವ ಜಲಾಶಯದಲ್ಲಿ ಎಷ್ಟು ನೀರು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟದಲ್ಲಿ ವಿಭಿನ್ನ ಚಿತ್ರಣ ಕಂಡುಬರುತ್ತಿದೆ.

ಉತ್ತರ ಕರ್ನಾಟಕದ ಕೃಷ್ಣಾ ನದಿ ಪಾತ್ರದ ಜಲಾಶಯಗಳು ಭರ್ತಿಯ ಹಂತ ತಲುಪಿದ್ದರೆ, ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.

ಆಲಮಟ್ಟಿ ಜಲಾಶಯ ಭರ್ತಿಗೆ ಕೆಲವೇ ಹಂತ ಬಾಕಿ:

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಭರ್ತಿಯ ಹಂತ ತಲುಪಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.30 ಮೀಟರ್
  • ಒಳಹರಿವು: 55,685 ಕ್ಯೂಸೆಕ್
  • ಹೊರಹರಿವು: 21,113 ಕ್ಯೂಸೆಕ್

ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

ಬಸವಸಾಗರ ಜಲಾಶಯದಲ್ಲೂ ಹೆಚ್ಚಿದ ನೀರಿನ ಮಟ್ಟ:

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯವೂ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ: 492.20 ಮೀಟರ್
  • ಒಳಹರಿವು: 25,000 ಕ್ಯೂಸೆಕ್
  • ಹೊರಹರಿವು: 20,500 ಕ್ಯೂಸೆಕ್

ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ.

ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಭಾರಿ ಕುಸಿತ:

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.

  • ಗರಿಷ್ಠ ಸಾಮರ್ಥ್ಯ: 37 ಟಿಎಂಸಿ
  • ಇಂದಿನ ಸಂಗ್ರಹ: 23.753 ಟಿಎಂಸಿ
  • ಒಳಹರಿವು: 6,390 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ಸಂಗ್ರಹ: 35.943 ಟಿಎಂಸಿ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಳಹರಿವು ಪ್ರಮಾಣವೂ ಕಡಿಮೆಯಾಗಿದೆ.

ಕಬಿನಿ ಜಲಾಶಯದಲ್ಲೂ ನೀರಿನ ಕೊರತೆ:

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿಯೂ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ.

  • ಇಂದಿನ ನೀರಿನ ಮಟ್ಟ: 75.28 ಅಡಿ
  • ಕಳೆದ ವರ್ಷ ಇದೇ ದಿನ: 81.97 ಅಡಿ
  • ಇಂದಿನ ಸಂಗ್ರಹ: 14.42 ಟಿಎಂಸಿ
  • ಕಳೆದ ವರ್ಷ ಸಂಗ್ರಹ: 18.22 ಟಿಎಂಸಿ
  • ಒಳಹರಿವು: 3,594 ಕ್ಯೂಸೆಕ್

ಕಳೆದ ವರ್ಷ ಇದೇ ಅವಧಿಯಲ್ಲಿ ಹೆಚ್ಚಿನ ಒಳಹರಿವು ದಾಖಲಾಗಿದ್ದರೆ, ಈ ಬಾರಿ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.

ಕೆಆರ್‌ಎಸ್‌ನಲ್ಲಿ ಇನ್ನೂ 100 ಅಡಿ ತಲುಪದ ನೀರಿನ ಮಟ್ಟ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಲ್ಲೂ ನೀರಿನ ಮಟ್ಟ ನಿರೀಕ್ಷಿತ ಮಟ್ಟಕ್ಕೆ ಏರಿಕೆಯಾಗಿಲ್ಲ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 91.80 ಅಡಿ
  • ಸಂಗ್ರಹ: 17.039 ಟಿಎಂಸಿ
  • ಒಳಹರಿವು: 2,552 ಕ್ಯೂಸೆಕ್
  • ಹೊರಹರಿವು: 1,745 ಕ್ಯೂಸೆಕ್

ಒಟ್ಟಾರೆ, ಕೃಷ್ಣಾ ನದಿ ಪಾತ್ರದ ಜಲಾಶಯಗಳಲ್ಲಿ ಉತ್ತಮ ನೀರಿನ ಸ್ಥಿತಿ ಕಂಡುಬರುತ್ತಿದ್ದರೆ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲು ಇನ್ನಷ್ಟು ಮಳೆಯ ಅಗತ್ಯವಿದೆ. ರಾಜ್ಯದ ಜಲಾಶಯಗಳ ಸ್ಥಿತಿ ಮಳೆಯ ಪ್ರಮಾಣದ ಮೇಲೆ ಅವಲಂಬಿತವಾಗಿದೆ.