ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ವತಿಯಿಂದ ಆಗಸ್ಟ್ 9, 10 ಮತ್ತು 11 ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ 38 ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ಪಾದಯಾತ್ರೆ ಆಯೋಜಿಸಲಾಗಿದ್ದು, ಬೈರಮಂಗಲದಿಂದ ಫ್ರೀಡಂ ಪಾರ್ಕ್‌ವರೆಗೆ ರೈತರೊಂದಿಗೆ ಹೆಜ್ಜೆ ಹಾಕುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ರೈತರು ಸಂಪೂರ್ಣವಾಗಿ ವಿರೋಧಿಸುತ್ತಿದ್ದರೂ ಸರ್ಕಾರ ಅವರ ಧ್ವನಿಗೆ ಸ್ಪಂದಿಸುತ್ತಿಲ್ಲ. ರೈತರ ಪರವಾಗಿ ನಿಲ್ಲುವುದು ಜೆಡಿಎಸ್‌ನ ಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ಹಿಂದೆ ಜುಲೈ 30, 31 ಮತ್ತು ಆಗಸ್ಟ್ 1 ರಂದು ಪಾದಯಾತ್ರೆ ಆಯೋಜಿಸಲಾಗಿತ್ತು. ಆದರೆ ಅಜ್ಜಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಆಗಸ್ಟ್ 9ರಿಂದ 11ರವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ರಾಮನಗರ ಜಿಲ್ಲೆಯ ಐದು ತಾಲ್ಲೂಕುಗಳ ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.



