Home Blog Page 2757

ವಿದ್ಯುತ್ ಸ್ಪರ್ಷ ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ವಿದ್ಯುತ್ ಸ್ಪರ್ಷಿಸಿ ಓರ್ವ ಸಾವನ್ನಪ್ಪಿ ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ, ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪೂರ ಬಳಿ ನಡೆದಿದೆ.
ಗಂಗಪ್ಪ ಲಮಾಣಿ(30) ಮೃತ ದುರ್ದೈವಿಯಾಗಿದ್ದು, ರಮೇಶ್ ಲಮಾಣಿ(29)ಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರಮೇಶ್ ನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಲಿ ಕೆಲಸ ಮಾಡಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಷವಾದ ವೇಳೆ ಇವರಿಬ್ಬರೂ ಬೊಲೇರೋ ವಾಹನದ ಮೇಲ್ಭಾಗದಲ್ಲಿ ಕುಳಿತು ಹೋಗುತ್ತಿದ್ದರು. ಈ ವೇಳೆ ತೋಟಕ್ಕೆ ಹಾಕಿದ ವಿದ್ಯುತ್ ವೈರ್ ತಾಗಿ ಈ ದುರ್ಘಟನೆ ನಡೆದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಡೂಪ್ಲಿಕೇಟ್ ಕೀಟನಾಶಕ ಮಾರಾಟ: ವೀರಭದ್ರೇಶ್ವರ ಅಗ್ರೋದ ಪರವಾನಿಗೆ ಸಸ್ಪೆಂಡ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ತಾಲೂಕಿನ ಕಣವಿ ಗ್ರಾಮದ ಶ್ರೀವೀರಭದ್ರೇಶ್ವರ ಅಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆಗೆ ಇಂದು ಸಹಾಯಕ ಕೃಷಿ ನಿರ್ದೇಶಕ(ಜಾರಿದಳ) ಸಂತೋಷ ಪಟ್ಟದಕಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವೇಳೆ ಕೀಟನಾಶಕ ಪರವಾನಿಗೆಯಲ್ಲಿ ಅನುಮತಿಸದೇ ಇರುವ ಕೀಟನಾಶಕಗಳನ್ನು ದಾಸ್ತಾನು ಮತ್ತು ವಿತರಣೆ, ನೋಂದಾಯಿತವಲ್ಲದ ಕೀಟನಾಶಕಗಳನ್ನು ದಾಸ್ತಾನು ಮತ್ತು ವಿತರಣೆ ಹಾಗೂ ಕೀಟನಾಶಕಗಳ ದಾಸ್ತಾನು ಷರತ್ತುಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ.

ಹೀಗಾಗಿ ಕೀಟನಾಟಕ ಕಾಯ್ದೆ 1968 ಹಾಗೂ ಕೀಟನಾಶಕ ನಿಯಮಗಳು 1971 ರನ್ವಯ ಶ್ರೀವೀರಭದ್ರೇಶ್ವರ ಅಗ್ರೋ ಕೇಂದ್ರ ಕಣವಿ ಇವರ ಪರವಾನಿಗೆಯನ್ನು ಅಮಾನತ್ತಿನಲ್ಲಿಟ್ಟು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪಬ್ಜಿಗೆ ಬಾಲಕ ಬಲಿ; ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ: ಪಬ್ಜಿ ಗೇಮ್ ಗೆ ಮಾರುಹೋದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಿರೇಪೇಟೆಯಲ್ಲಿರುವ ಮನೆಯಲ್ಲಿ 17 ವರ್ಷದ ಕಾರ್ತಿಕ್ ಬಬಲಿ ನೇಣಿಗೆ ಕೊರಳೊಡ್ಡಿದ್ದಾನೆ.

ಆನ್ ಲೈನ್ ಕ್ಲಾಸ್ ನೆಪದಲ್ಲಿ ಕಾರ್ತಿಕ್ ಪಬ್ಜಿ ಆಡುತ್ತಿದ್ದ. ಇದನ್ನು ಗಮನಿಸಿದ ಕುಟುಂಬಸ್ಥರು ಗೇಮ್ ಆಡುವುದನ್ನು ಬಿಟ್ಟು ಓದಿನ ಕಡೆ ಗಮನ ನೀಡು ಎಂದು, ಮೊಬೈಲ್ ಕಸಿದುಕೊಂಡಿದ್ದರು.

ಇದರಿಂದ ಬೇಸರಗೊಂಡ ಕಾರ್ತಿಕ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಮ್ಮ-ಮಗುವನ್ನು ಹಳ್ಳದ ನೀರಿನಿಂದ ರಕ್ಷಿಸಿದ ಜನ; ಮೈ ಜುಮ್ಮೆನಿಸುವ ವಿಡಿಯೊ ಮೊಬೈಲ್ ನಲ್ಲಿ ಸೆರೆ!!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನಿನ್ನೆ ರಾತ್ರಿಯಿಂದ ಬೆಳಗಿನವರೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಅವಾಂತರಗಳು ನಡೆದಿರುವ ಬಗ್ಗೆ ವರದಿಯಾಗುತ್ತಿವೆ. ಸತತ ಮಳೆಯಿಂದ ಅಳವಂಡಿ ಮತ್ತು ಕಂಪ್ಲಿ ಮಾರ್ಗ ಸಂಪರ್ಕಿಸುವ ಹಳ್ಳ ತುಂಬಿ ಹರಿಯುತ್ತಿದೆ.

ಎರಡು ಗ್ರಾಮಗಳ ಜನರಿಗೆ ಹಳ್ಳದ ದಾರಿ‌ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಆದರೆ ಸತತ ಮಳೆಯಿಂದ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದು, ಜನರು ಅಪಾಯವನ್ನು ಲೆಕ್ಕಿಸದೇ ಸಂಚರಿಸುತ್ತಿದ್ದಾರೆ. ತಾಯಿಯೊಬ್ಬರು ಮಗುಸಮೇತ ಹಳ್ಳದ ಮತ್ತೊಂದು ಬದಿಗೆ ಹೋಗಬೇಕಿತ್ತು.

ಆದರೆ ಹರಿಯುತ್ತಿರುವ ಹಳ್ಳದ ನೀರನ್ನು‌ ಕಂಡು‌ ದಿಕ್ಕು ತೋಚದಂತಾಗಿ‌ ನಿಂತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಪತಿ ಮಡದಿಯನ್ನು ಎತ್ತಿಕೊಂಡರೆ, ಮಗುವನ್ನು ಎತ್ತಿಕೊಂಡು ದಡಕ್ಕೆ ತಲುಪಿಸಿದ್ದಾರೆ.

ಹಳ್ಳದಲ್ಲಿ ಹೋಗುವಾಗ‌ ಮಗು ಹೊತ್ತಿದ್ದ ವ್ಯಕ್ತಿ ಆಯತಪ್ಪಿದ ಕ್ಷಣದ ವಿಡಿಯೊ ಮೈ‌ ಜುಮ್ಮೆನಿಸುವಂತಿದೆ. ಈ ಸ್ಥಳದಲ್ಲಿ ಎತ್ತರದ ಸೇತುವೆ ಹಾಗೂ ರಸ್ತೆ‌ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಮಳೆಯಿಂದ ರಾತ್ರಿಯಿಡೀ ಗ್ರಾಮಸ್ಥರ ಪರದಾಟ; ಸ್ಥಳಕ್ಕೆ ಬಂದ ತಹಸೀಲ್ದಾರ್ ಗೆ ಮುತ್ತಿಗೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಮಳೆಯಿಂದ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಪರಿಸ್ಥಿತಿ ಅವಲೋಕಿಸಲು ಬಂದ ತಹಸೀಲ್ದಾರ್ ಕಾರ್ ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ತಾಲೂಕಿನ ಹೊಸಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ರಾತ್ರಿಯಿಡೀ ಸುರಿದ ಮಳೆಗೆ ಹೊಸ ಬೂದಿಹಾಳದ ಮನೆಗಳಿಗೆ ನೀರು‌ ನುಗ್ಗಿ ರಾತ್ರಿಯಿಡೀ ಗ್ರಾಮಸ್ಥರು ಒರಡಾಡಿದ್ದಾರೆ‌. ಬೆಳಿಗ್ಗೆ ಪರಿಸ್ಥಿತಿ ಅರಿಯಲು ಬಂದ ನರಗುಂದ ತಹಸೀಲ್ದಾರ್ ಎ ಎಚ್ ಮಹೇಂದ್ರ ಅವರ ಕಾರ್ ಗೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಮುತ್ತಿಗೆ ಹಾಕಿದರು.

ಅಷ್ಟೇ ಅಲ್ಲದೇ ಅಲ್ಲಿಗೆ ಬಂದ ಜಿಪಂ ಅಧ್ಯಕ್ಷ ರಾಜುಗೌಡ ಅವರನ್ನೂ ಸಹ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗಷ್ಟೇ ಹೊಸ ಬೂದಿಹಾಳ ಗ್ರಾಮಕ್ಕೆ ಗ್ರಾಮಸ್ಥರೆಲ್ಲರೂ ಸ್ಥಳಾಂತರವಾಗಿದ್ದರು. ಆದರೆ ಅಲ್ಲಿಗೂ ಮಳೆ ನೀರು ನುಗ್ಗಿ ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು.

ಇನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು, ನೀರು ಬರದಂತೆ ತಡೆಗೋಡೆ ನಿರ್ಮಾಣ ‌ಮಾಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಹಾಗೂ ಜಿಪಂ ಅಧ್ಯಕ್ಷ ರಾಜುಗೌಡರಿಗೆ ಒತ್ತಾಯ ಮಾಡಿದರು. ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ‌ ತಹಸೀಲ್ದರ್ ಅವರ ಕಾರನ್ನು ಗ್ರಾಮಸ್ಥರು ಬಿಟ್ಟರು.

ತಾತ್ಕಾಲಿಕವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತಹಸೀಲ್ದಾರ್ ಅವರ ಸೂಚನೆ ಮೇರೆಗೆ ಆರಂಭ ಮಾಡಲಾಗಿದೆ.

ಮಳೆ ಅವಾಂತರ; ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್-ಕುಸಿದು ಬಿದ್ದ ಮನೆ ಗೋಡೆ, ಕುಟುಂಬ ಪಾರು

ಹೊರತೆಗೆಯಲು ಜೀವದ ಹಂಗು ತೊರೆದ ರೈತರ ಹರಸಾಹಸ!

ಗಾಢನಿದ್ರೆಯಲ್ಲಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬುಧವಾರ ರಾತ್ರಿಯಿಂದಲೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ನಾನಾ ಕಡೆ ಅವಘಡಗಳು ಸಂಭವಿಸಿದ ವರದಿಗಳು ಗೋಚರಿಸಿವೆ.

ಮಳೆ ಆರ್ಭಟಕ್ಕೆ ತತ್ತರಿಸಿರೋ ಜನ ತತ್ತರಿಸಿದ್ದು, ಕೊಪ್ಪಳ ತಾಲೂಕಿನ ಭೈರಾಪುರ ಹಳ್ಳ ತುಂಬಿ ಹರಿಯುತ್ತಿದ್ದು, ನಿಲೋಗಿಪುರದ ರೈತರೊಬ್ಬರ ಟ್ರ್ಯಾಕ್ಟರ್ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್ಟರ್‌ನ್ನು ಜೆಸಿಬಿ ಮೂಲಕ ಮೇಲೆತ್ತಲು ರೈತರು ಜೀವದ ಹಂಗು ತೊರೆದು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಟ್ರ್ಯಾಕ್ಟರ್‌ನ್ನು ಮೇಲೆತ್ತಲಾಗಿದೆ. ಬೈರಾಪುರ ಹಳ್ಳ ತಯಂಬಿ ಹರಿಯುತ್ತಿರುವುದರಿಂದ ಕೊಪ್ಪಳ ತಾಲೂಕು ಬೊಚನಹಳ್ಳಿ- ನಿಲೋಗಿಪುರ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಇದರಿಂದಾಗಿ ರೈತರು ತಮ್ಮ ಹೊಲಗಳಿಗೆ ತೆರಳಲು ಪರದಾಡುತ್ತಿದ್ದಾರೆ.

ಮನೆ ಗೋಡೆ ಕುಸಿತ

ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದು ಇಡೀ ಕುಟುಂಬ ಪ್ರಾಣಾಪಾಯದಿಂದ ಪಾರಾದ‌ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಹಪುರದಲ್ಲಿ ನಡೆದಿದೆ. ಶಹಪುರದ ಕಳಕೇಶ್ ಚೌಡ್ಕಿ ಎಂಬುವವರ ಮನೆ ಗೋಡೆ ಕುಸಿದಿದ್ದು, ರಾತ್ರಿ ಗಾಢನಿದ್ರೆಯಲ್ಲಿದ್ದ ಕುಟುಂಬ ಗೋಡೆ ಕುಸಿವ ಸದ್ದು ಕೇಳಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಮನೆಯ ಪರಿಕರ‌ ಮುಗುಚಿದ್ದನ್ನ ಬಿಟ್ಟರೆ ಅದೃಷ್ಟವಶಾತ್ ಜೀವಹಾನಿ ಇಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವಂತೆ ಕುಟುಂಬಸ್ಥರ ಮನವಿ ಮಾಡಿಕೊಂಡಿದ್ದಾರೆ.

ಗದಗ ಶಹರ ಠಾಣೆಯ ಕಾರ್ಯಾಚರಣೆ; ಕ್ರಿಕೆಟ್ ಬುಕ್ಕಿ ಸೇರಿ ಐವರ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಶಹರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಬುಕ್ಕಿ ಸೇರಿದಂತೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಿದ್ದಾರೆ. ದಾಳಿ ವೇಳೆ 1 ಲಕ್ಷ 55 ಸಾವಿರ ನಗದು, 6 ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ನಗರದ ಕಳಸಾಪೂರ ರಸ್ತೆಯ ರಿಂಗ್ ರೋಡ್ ಬಳಿಯ ಬಾಲಾಜಿ ನಗರದಲ್ಲಿ ಬೆಟ್ಟಿಂಗ್ ದಂಧೆ ನಡೆದಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಪಿ. ವಿ. ಸಾಲಿಮಠ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೈಕ್ ಗಳ ನಡುವೆ ಡಿಕ್ಕಿ, ಉಪನ್ಯಾಸಕ ಸೇರಿ ಇಬ್ಬರ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ‌ ಹುಯಿಲಗೋಳ ಬಳಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಗಳು, ಬಾಹುಬಲಿ ಅಂಬೋಜಿ(38), ಪ್ರಭು ಅಂಕದ(48) ಎಂದು ತಿಳಿದುಬಂದಿದೆ.

ಬಾಹುಬಲಿ, ಹುಯಿಲಗೋಳ ನಿವಾಸಿ, ಪ್ರಭು ಅಂಕದ, ಹಿರೆವಡ್ಡಟ್ಟಿ ನಿವಾಸಿಗಳಾಗಿದ್ದು, ಬಾಹುಬಲಿ, ಹುಯಿಲಗೋಳ ಖಾಸಗಿ ಸ್ಕೂಲ್ ಬಸ್ ಚಾಲಕನಾಗಿದ್ದರೆ, ಪ್ರಭು ಅಂಕದ ಹೊಳೆಆಲೂರ ಖಾಸಗಿ ಕಾಲೇಜ್ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಳೆ ಬರುತ್ತದೆಂದು ವೇಗವಾಗಿ ಬರುವ ವೇಳೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ, ಪ್ರಲ್ಹಾದ, ಪಿಎಸ್ಐ ಕಮಲಾ ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆ;
ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಿ ಎಂದ ಸುಂದರೇಶ್‌ಬಾಬು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಳವಡಿಸಿರುವ ಬ್ಯಾನರ್, ಪೋಸ್ಟರ್ ಹಾಗೂ ಹೋರ್ಡಿಂಗ್ಸ್‌ಗಳನ್ನು ಶೀಘ್ರವೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ-2020 ಕರಡು ಮತಗಟ್ಟೆ ಯಾದಿ ಕುರಿತು ರಾಜಕೀಯ ಮುಖಂಡರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣೆ ಆಯೋಗ ಸೂಚಿಸುವ ನಿರ್ದೇಶನಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಸಾರವಾಗಿ ವಿಡಿಯೋ ವೀಕ್ಷಣಾ ದಳ, ಸಂಚಾರಿ ವಿಚಕ್ಷಣಾ ದಳಗಳನ್ನು ನೇಮಿಸಿ ನಿಗಾ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 15743 ಪದವೀಧರರ ಮತದಾರರಿದ್ದು, 28 ಮತದಾನ ಕೇಂದ್ರಗಳಿವೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕಾಲಾವಕಾಶವಿದ್ದು, ಅರ್ಹ ಪದವೀಧರರು ಮತದಾರರು ಸಂಬಂಧಿಸಿದ ಕಛೇರಿಗಳಿಗೆ ಅರ್ಜಿ ಸಲ್ಲಿಸಬಹುದು. 80 ವರ್ಷ ಮೇಲ್ಪಟ್ಟವರು ಹಾಗೂ ಕೋವಿಡ್ ಶಂಕಿತ ಮತ್ತು ಸೋಂಕಿತ ಪದವೀಧರ ಮತದಾರರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ನಿಗದಿತ ಅರ್ಜಿ ನಮೂನೆಯಲ್ಲಿ ನೋಡಲ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕೋವಿಡ್ ನಿರ್ವಹಣೆಯ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ವಿವಿಧ ನಿಗಮ, ಮಂಡಳಿಗಳು, ಸ್ಥಳೀಯ ಪ್ರಾಧಿಕಾರ, ಸಂಸ್ಥೆಗಳ ಅಧ್ಯಕ್ಷರಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ನಿಯಮಾನುಸಾರ ಹಿಂಪಡೆಯಬೇಕು. ಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ವಶಕ್ಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಹಸೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಸೂಚನೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಜೆಡಿಎಸ್ ಪ್ರತಿನಿಧಿ ರಮೇಶ್ ಕಲಬುರ್ಗಿ, ಚುನಾವಣಾ ಆರ್.ಪಿ.ಜಾಧವ್, ಬಹುಜನ ಸಮಾಜ ಪಕ್ಷದ ಪ್ರತಿನಿಧಿ ಎಂ.ಕೆ.ತಳಗಡೆ, ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ನಗರಸಭೆ ಮುಖ್ಯ ಯೋಜನಾಧಿಕಾರಿ ಎಸ್.ಎನ್.ರುದ್ರೇಶ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಎಚ್‌ಒ ಡಾ.ಸತೀಶ್ ಬಸರೀಗಿಡದ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರು ಸಭೆಯಲ್ಲಿ ಇದ್ದರು.


ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅಧಿಸೂಚನೆ ಅಕ್ಟೋಬರ್ 1 ರಂದು ಪ್ರಕಟವಾಗಲಿದ್ದು, ಅ.8 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅ.9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ.12 ಕೊನೆಯ ದಿನವಾಗಿದೆ. ಅ.28 ರಂದು ಮತದಾನ ನಡೆಯಲಿದೆ. ನವೆಂಬರ್ 2 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ನ.5 ಕ್ಕೆ ಚುನಾವಣೆ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಮಹತ್ವದ ಆದೇಶ; ಕಪ್ಪತಗುಡ್ಡ ವನ್ಯಜೀವಿಧಾಮ ವ್ಯಾಪ್ತಿಯ 14 ಕ್ರಷರ್ ಬಂದ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡ ವನ್ಯಜೀವಿ ಧಾಮ ವ್ಯಾಪ್ತಿ 1 ಕಿ.ಮೀ. ಸುತ್ತಲಿನ 14 ಜಲ್ಲಿ ಕ್ರಷರ್ ಬಂದ್ ಮಾಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ.
ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಬರುವ 14 ಜಲ್ಲಿ ಕ್ರಶರ್ ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಆಗಸ್ಟ್ 31ರಂದು ಕೇಂದ್ರ ಪರಿಸರ ಸಚಿವಾಲಯ, ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೂಲಕ ಕ್ರಶರ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.


ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ಪೈಕಿ ಹಾಲಿ ಸಚಿವರು, ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು ಸಹ ಬೇನಾಮಿ ಹೆಸರಿನಡಿ ಗಣಿಗಾರಿಕೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಉದ್ಯಮಿಗಳು ಕೂಡ ಇದ್ದಾರೆ. ಕ್ವಾರಿಯಲ್ಲಿ ಶಕ್ತಿಶಾಲಿ ಜಿಲೆಟಿನ್ ಸ್ಫೋಟ ನಡೆಸಲಾಗುತ್ತಿದೆ. ಹೆಚ್ಚಾಗಿ ಪಾಸ್ ರಹಿತವಾಗಿ ಕಡಿಯನ್ನು ಟಿಪ್ಪರ ಮೂಲಕ ಸಾಗಿಸಲಾಗುತ್ತದೆ. ಈ ಉದ್ಯಮಿಗಳು ಸರ್ಕಾರಕ್ಕೆ ವಂಚಿಸಿರುವ ಪ್ರಕರಣದ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಕೇವಲ ಒಂದು ಕಿ.ಮೀ ವ್ಯಾಪ್ತಿಗೆ ಮಾತ್ರ ಸೀಮಿತನಾ.? ;
ಕಪ್ಪತಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಪ್ರದೇಶದ ಗಡಿಯಿಂದ ಕನಿಷ್ಠ ೦.5 ಕಿ.ಮೀನಿಂದ ಗರಿಷ್ಠ 6 ಕಿ.ಮೀ ವ್ಯಾಪ್ತಿವರೆಗೆ ಕರಿಕಲ್ಲು ಗಣಿಗಾರಿಕೆ, ಕ್ವಾರಿ ಹಾಗೂ ಇನ್ನಿತರ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು 2019 ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ. ನಿಯಮ ಹೀಗಿರುವಾಗ ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ. ವ್ಯಾಪ್ತಿಗೆ ಬರುವ ಕಲ್ಲಿನ ಕ್ವಾರಿ ಸ್ಥಗಿತಗೊಳಿಸಲು ಗಣಿ ಇಲಾಖೆ ನೋಟಿಷ್ ನೀಡಿದ್ದು, ಯಾವ ಪರುಷಾರ್ಥಕ್ಕೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆಯನ್ನು ಗಣಿ ಇಲಾಖೆ ಗಾಳಿಗೆ ತೂರಿದೆ ಎಂದು ಹಲವು ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿಸದ ಉದಾಸಿ ಪ್ರಯತ್ನ
ಕಪ್ಪತಗುಡ್ಡ ವನ್ಯಜೀವಿಧಾಮಯ ಬ್ಲಾಕ್ -೪ನ್ನು ವನ್ಯಜೀವಿಧಾಮ ಅಧಿಸೂಚನೆಯಿಂದ ಹೊರಗಿಡುವಂತೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದರು. ಶಿರಹಟ್ಟಿ ತಾಲೂಕಿನ 31ಜಲ್ಲಿ ಕ್ರಶರ್ ಉದ್ಯಮ ಉಳಿಸುವ ಸಂಬಂಧ ಸಂಸದರು ಕೇಂದ್ರ ಸಚಿವರ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದ್ದರು. ಅಲ್ಲದೇ ಗದಗ ಜಿಲ್ಲೆಗೆ ಯಾವುದೇ ರೀತಿಯಿಂದಲೂ ಸಂಬಂಧ ಇಲ್ಲದ ಹಾವೇರಿ ಜಿಲ್ಲೆ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬ್ಲಾಕ್ 3 ಮತ್ತು 4 ಎರಡನ್ನೂ ವನ್ಯಜೀವಿಧಾಮ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಶಾಸಕ, ಸಂಸದರ ಪ್ರಯತ್ನದ ಹೊರತಾಗಿಯೂ ಬ್ಲಾಕ್ 4 ವ್ಯಾಪ್ತಿಯ 14 ಕ್ರಶರ್ ಸ್ಥಗಿತಕ್ಕೆ ಕೇಂದ್ರ ಪರಿಸರ ಸಚಿವಾಲಯ ಆದೇಶಿಸಿರುವುದು ಪರಿಸರವಾದಿಗಳ ಸಂಭ್ರಮಕ್ಕೆ ಕಾರಣವಾಗಿದೆ.


ವಿಜಯಸಾಕ್ಷಿ ಎಚ್ಚರಿಸಿತ್ತು
ಕಪ್ಪತಗುಡ್ಡ ವನ್ಯಜೀವಿಧಾಮ ವ್ಯಾಪ್ತಿಯ ಬ್ಲಾಕ್ -4 ರಲ್ಲಿ ನಿಯಮ ಮೀರಿ ಕಲ್ಲು ಗಣಿಕಾರಿಗೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆ ರಕ್ಷಿಸುವ ಸಂಬಂಧ ಸಂಸದರು ಬ್ಲಾಕ್ -4 ನ್ನು ವನ್ಯಜೀವಿಧಾಮ ವ್ಯಾಪ್ತಿಯಿಂದ ಹೊರಗಿಡುವಂತೆ ಪತ್ರ ಬರೆದಿದ್ದು, ಶಿರಹಟ್ಟಿ ತಾಲೂಕಿನ 38 ಜಲ್ಲಿ ಕ್ರಶರ್ ಗಳು ಹಾಲಿ, ಮಾಜಿ ಜನಪ್ರತಿನಿಧಿಗಳ ಒಡೆತನದಲ್ಲಿರುವ ಕುರಿತು ಸರಣಿ ವರದಿ ಪ್ರಕಟಿಸಿ, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು.

error: Content is protected !!