Home Blog Page 2756

ಬೀದಿ ನಾಯಿಗಳ ಹಾವಳಿ ತಡೆಗೆ “ಆಪರೇಷನ್ ಡಾಗ್”

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಗಂಗಾವತಿ ನಗರಸಭೆ ಆಪರೇಷನ್ ಡಾಗ್ ಕಾರ್ಯಾಚರಣೆಯನ್ನು ಬುಧುವಾರದಿಂದ ಪ್ರಾರಂಭಿಸಿದೆ.

ನಗರದ ಡೈಲಿ ತರಕಾರಿ ಮಾರುಕಟ್ಟೆ, ಗಾಂಧಿವೃತ್ತ, ಮಹಾವೀರ ಸರ್ಕಲ್ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಕಾರ್ಯಚರಣೆ ನಡೆಸಿತು. ಬುಧವಾರ ಒಂದೇ ದಿನ ನೂರಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿಯಲಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುವುದು ಎಂದು ನಗರಸಭೆ ಕಮೀಷನರ್ ಅರವಿಂದ್ ಜಮಖಂಡಿಯವರು ತಿಳಿಸಿದ್ದಾರೆ.

ಇನ್ನೂ ಆಪರೇಷನ್ ಡಾಗ್ ಕಾರ್ಯಾಚರಣೆ ಸತತವಾಗಿ ಮೂರು ದಿನಗಳ ಕಾಲ ಮುಂದುವೆರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಶ್ವಾನಗಳನ್ನು ಹಿಡಿಯಲು ಶಿವಮೊಗ್ಗ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ..


ಸಾಕಿದ ನಾಯಿಗಳನ್ನು ಹೊರತುಪಡಿಸಿ, ಬೀದಿಗಳಲ್ಲಿ ಜನರಿಗೆ ತೊಂದರೆ ಕೊಡುತ್ತಿರುವ ನಾಯಿಗಳನ್ನು ಗುರುತಿಸಿ ಸೆರೆ ಹಿಡಿಯಲಾಗುತ್ತಿದೆ. ಅಲ್ಲದೇ ನುರಿತ ಕೆಲಸಗಾರದಿಂದ ನಾಯಿಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬೀಡಲಾಗುತ್ತಿದೆ. ಆಪರೇಷನ್ ಡಾಗ್ ಕಾರ್ಯಾಚರಣೆ ಗಂಗಾವತಿ ಸಾರ್ವಜನಿಕರ ದೂರಿನ ಮೇರೆ ಪ್ರಾರಂಭಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ.
-ಅರವಿಂದ್ ಜಮಖಂಡಿ, ಗಂಗಾವತಿ ನಗರಸಭೆ ಕಮೀಷನರ್.

ವಿಜಯಸಾಕ್ಷಿ ಇಂಪ್ಯಾಕ್ಟ್;
ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಗ್ರಾಮಕ್ಕೆ ಅಧಿಕಾರಿಗಳ ತಂಡ ದೌಡು

0

*ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಶಾಸಕ ದಡೇಸೂಗೂರು; ಗುಳದಾಳ (ಮಸಾರಿ ಕ್ಯಾಂಪ್) ಗ್ರಾಮಕ್ಕೆ ಬೆಳಕಾದ ಭರವಸೆ

ಬಿಯಸ್ಕೆ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ:“ರಸ್ತೆ ಮಾಡಿ ಕೊಡಿ, ಆಮೇಲೆ ಓಟ್ ಕೇಳೋಕೆ ಬನ್ನಿ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಸೆಪ್ಟೆಂಬರ್ 29 ರಂದು ಪ್ರಕಟಿಸಿದ್ದ ವಿಜಯಸಾಕ್ಷಿ ವಿಶೇಷ ವರದಿಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಗ್ರಾಮಕ್ಕೆ ಈಗ ರಸ್ತೆ ಭಾಗ್ಯ, ವಿದ್ಯುತ್ ಭಾಗ್ಯ ಒದಗಿ ಬಂದಿದ್ದು, ಇದು ವಿಜಯಸಾಕ್ಷಿ ಸ್ಪೆಷಲ್ ರಿಪೋರ್ಟ್‌ನ ಬಿಗ್ ಇಂಪ್ಯಾಕ್ಟ್.

ಹೌದು.. ಜಿಲ್ಲೆಯ ಗಂಗಾವತಿ
ತಾಲೂಕಿನ ಮಸಾರಿಕ್ಯಾಂಪ್ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೇ ಅಲ್ಲಿನ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಸವಿಸ್ತಾರವಾದ ವರದಿಯನ್ನು ವಿಜಯಸಾಕ್ಷಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಕ್ಷಣ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸಿ ಪರಿಹರಿಸಲು ಸೂಚಿಸಿದ್ದರು.

ಅವರ ಸೂಚನೆ ಮೇರೆಗೆ ಗಂಗಾವತಿ ತಹಶೀಲ್ದಾರ ಎಂ. ರೇಣುಕಾ , ತಾಲೂಕ ಪಂಚಾಯತ್ ಇಒ ಡಾ. ಮೋಹನ್, ಬಿಇಓ ಸೋಮಶೇಖರ್ ಗೌಡ ಅವರು ಬುಧವಾರ ಗುಳದಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಕಲ್ಪಿಸಲು ಇರುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಈ ತಂಡ ಸ್ಥಳಕ್ಕೆ ಭೇಟಿ ನೀಡಿತು.

ಮಸಾರಿಕ್ಯಾಂಪ್ (ಗುಳದಳ್ಳಿ) ಗ್ರಾಮಕ್ಕೆ ತುಂಗಭದ್ರಾ ಎಡದಂಡೆ ಕಾಲುವೆ ಮೇಲಿರುವ ರಸ್ತೆಯ ಮೂಲಕ ಮಾತ್ರ ಗ್ರಾಮಕ್ಕೆ ಪ್ರವೇಶಿಸಲು ಸಾಧ್ಯವಿದೆ. ಅದನ್ನು ಬಿಟ್ಟರೆ ಗ್ರಾಮಕ್ಕೆ ಬೇರೆ ದಾರಿಯಿಲ್ಲ. ಮಳೆಗಾಲ ಬಂದರೆ ಕಾಲುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿ ನಡೆದಾಡಲು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಜನರು ಬಹುತೇಕ ಬಾಹ್ಯ ಸಂಪರ್ಕ ಕಳೆದುಕೊಳ್ಳುವಂತಹ‌ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಇರುವ ಸಾಧ್ಯತೆಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ತಂಡ ತಿಳಿಸಿತು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಸೂಚನೆ ಅನುಸಾರ ನಾವೆಲ್ಲರೂ ಸಹ ಬಂದಿದ್ದೇವೆ. ಇನ್ನು ಈ ಬಗ್ಗೆ ಶಾಸಕರು ಸಹ ಮಾಹಿತಿ ನೀಡಿದ್ದು, ಪಿಎಂಜಿಎಸ್ವೈ ( ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ) ರಸ್ತೆಯನ್ನು ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕನಕಗಿರಿ ಶಾಸಕರು ಸಲ್ಲಿಸಿದ್ದಾರೆ. ಅನುಮೋದನೆ ಸಿಕ್ಕ ತಕ್ಷಣ ರಸ್ತೆ ನಿರ್ಮಾಣವಾಗುತ್ತೆ. ಗ್ರಾಮಸ್ಥರು ಆತಂಕಪಡುವ ಪ್ರಶ್ನೆ ಇಲ್ಲ..
-ಡಾ.ಮೋಹನ್ , ಇಒ ತಾಲೂಕ ಪಂಚಾಯತ್ ಗಂಗಾವತಿ.

ವಿಜಯಸಾಕ್ಷಿ ವರದಿ ನನ್ನ ಗಮನಕ್ಕೆ ಬಂದಿದೆ. ಈ ಹಿಂದೆಯೂ ನನ್ನ ಕ್ಷೇತ್ರದ ಜನರು ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳ ಬಳಿ ಚರ್ಚೆ ಮಾಡಿ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಹೇಳಿದ್ದೇನೆ. ಕಾಮಗಾರಿ ಅನುಮೋದನೆ ಸಿಕ್ಕ ತಕ್ಷಣವೇ ರಸ್ತೆ ನಿರ್ಮಾಣ ಮಾಡಲಾಗುವುದು ಗುಳದಾಳ ಜನರ ಜೊತೆ ನಾನೀದ್ದೇನೆ ಯೋಚನೆ ಬೇಡ.
-ಬಸವರಾಜ ದಡೇಸೂಗೂರು, ಕನಕಗಿರಿ ಶಾಸಕ.

ಏರೋ ಇಂಡಿಯಾ 2021: ಆಯೋಜನೆಗೆ ಪೂರ್ವಭಾವಿ ಸಭೆ

0

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಕೇಂದ್ರದ ರಕ್ಷಣಾ ಉತ್ಪನ್ನಗಳ ಇಲಾಖೆಯು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಇಂದು ಆಯೋಜಿಸಿದ್ದ 13ನೇ ಆವೃತ್ತಿಯ ಮೆಗಾ ಅಂತರರಾಷ್ಟ್ರೀಯ ಏರೋ ಶೋ- ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಯಭಾರಿಗಳ ದುಂಡು ಮೇಜಿನ ವರ್ಚುಯಲ್ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿ ಮಾತನಾಡಿದರು.
ಕಳೆದ ಹನ್ನೆರಡು ಏರ್‍ಶೋ ಆವೃತ್ತಿಗಳಿಗೆ ಕರ್ನಾಟಕ ಅತಿಥೇಯ ರಾಜ್ಯವಾಗಿ ಉತ್ತಮ ಅನುಭವವನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿಯೂ ಫೆಬ್ರವರಿ 3 ರಿಂದ 7, 2021 ರವರೆಗೆ ಆಯೋಜಿಸಿರುವ 13ನೇ ಆವೃತ್ತಿಯ ಮೆಗಾ ಅಂತರರಾಷ್ಟ್ರೀಯ ಏರೋ ಶೋ- ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಕರ್ನಾಟಕ ಅತಿಥೇಯ ರಾಜ್ಯವಾಗಿ ಈ ಬಾರಿಯೂ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.
ಕೋವಿಡ್ 19 ಸಾಂಕ್ರಾಮಿಕದ ನಡುವೆಯೂ ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಆಯೋಜಿಸುವುದು ಕರ್ನಾಟಕ ರಾಜ್ಯ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಒಂದು ಸವಾಲಿನ ವಿಷಯ. ಏರೋ ಇಂಡಿಯಾ 2021ರ ವೆಬ್‍ಸೈಟ್ ಪ್ರಾರಂಭವಾದ ಕೂಡಲೇ ವಸ್ತುಪ್ರದರ್ಶನಕ್ಕಾಗಿ ಈಗಾಗಲೇ ಆಸಕ್ತರು ಬಹುಪಾಲು ಸ್ಥಳವನ್ನು ಕಾಯ್ದಿರಿಸಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರ ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದ್ದು, ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ಎಲ್ಲ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಏರೋ ಇಂಡಿಯಾ 2021 ಕಾರ್ಯಕ್ರಮದಲ್ಲಿ ಭಾಗವಹಿಸುವ ಅಂತರರಾಷ್ಟ್ರೀಯ ಗಣ್ಯರು, ಅಧಿಕಾರಿ/ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಥರ್ಮಲ್ ಸ್ಕ್ರೀನಿಂಗ್, ಕಾ¯ಕಾಲಕ್ಕೆ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭಾರತದ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮಕ್ಕೆ ಕರ್ನಾಟಕ ರಾಜ್ಯ ಶೇ. 25 ರಷ್ಟು ಕೊಡುಗೆ ನೀಡುತ್ತಿದೆ. ಭಾರತದ ವೈಮಾನಿಕ ಸಂಬಂಧಿತ ರಫ್ತಿಗೆ ಶೇ.65% ರಷ್ಟು ಹಾಗೂ ರಕ್ಷಣಾ ವಲಯದ ಸೇವೆಗಳಿಗಾಗಿ ಹೆಲಿಕಾಪ್ಟರ್ ಮತ್ತು ವಿಮಾನÀ ಉತ್ಪಾದನೆಗೆ ಶೇ.67% ಕೊಡುಗೆ ನೀಡುತ್ತಿದೆ ಎಂದರು.
ರಾಷ್ಟ್ರದಲ್ಲಿ ಏರೋಸ್ಪೇಸ್ ನೀತಿಯನ್ನು ರೂಪಿಸಿದ ಮೊಟ್ಟಮೊದಲ ರಾಜ್ಯ ಕರ್ನಾಟಕ. ಹೆಚ್‍ಎಎಲ್, ಬೆಮೆಲ್, ಬಿಇಎಲ್ ನಂತಹ ಪ್ರಮುಖ ಸಾರ್ವಜನಿಕ ವಲಯದ ಘಟಕಗಳು ಬೆಂಗಳೂರಿನಲ್ಲಿ ಸ್ಥಾಪಿತಗೊಂಡಿವೆ. ಬೆಳಗಾವಿಯಲ್ಲಿ ಖಾಸಗಿ ಏರೋಸ್ಪೇಸ್ ಆರ್ಥಿಕ ವಲಯ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 1000 ಎಕರೆ ಪ್ರದೇಶದಲ್ಲಿ ಏರೋಸ್ಪೇಸ್ ಪಾರ್ಕ್, ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ಮತ್ತು ತುಮಕೂರು ಜಿಲ್ಲೆಯಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್‍ನ್ನು ಕರ್ನಾಟಕ ಒಳಗೊಂಡಿದೆ.
ಪ್ರಾದೇಶಿಕ ನಾಗರಿಕ ವಿಮಾನಯಾನ ಸೌಲಭ್ಯಗಳು ಮತ್ತು ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ಸ್ಥಾಪನೆಗೆ ವಿಶೇಷ ಸಹಾಯಧನವನ್ನು ಹೂಡಿಕೆದಾರರಿಗೆ ಕರ್ನಾಟಕ ಒದಗಿಸುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮಾತನಾಡಿ, ಅತಿಥಿ ದೇವೋಭವ ಎಂಬ ಮಾತಿನಲ್ಲಿ ನಂಬಿಕೆ ಇರುವವರು ನಾವು. ಶಾಂತಿಗಾಗಿ ರಕ್ಷಣಾ ಇಲಾಖೆಯನ್ನು ಇನ್ನಷ್ಟು ಸಬಲಗೊಳಿಸಲು ಪೂರಕವಾಗಿ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳುವುದೇ ನಮ್ಮ ಉದ್ದೇಶ.
ಭಾರತವು ಅತಿ ದೊಡ್ಡ ರಕ್ಷಣಾ ಉತ್ಪಾದನಾ ವಲಯವನ್ನು ಹೊಂದಿದೆ. ಏರೋ ಇಂಡಿಯಾ 2021 ಮೂಲಕ ಭಾರತ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮದಲ್ಲಿ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎನ್ನುವುದು ನಮ್ಮ ಆಶಯ.
ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಕ್ರಿಯ ಭಾಗವಹಿಸುವಿಕೆಯಿಂದ ಭಾರತವನ್ನು ರಕ್ಷಣಾ ಉತ್ಪನ್ನಗಳ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ 19ರ ಹಿನ್ನೆಲೆಯಲ್ಲಿ ಸಂಪರ್ಕ ರಹಿತ ವ್ಯವಹಾರವನ್ನು ಖಾತ್ರಿಪಡಿಸಲು ಎಲ್ಲ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್, ವಿವಿಧ ದೇಶಗಳ ರಾಯಭಾರಿಗಳು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exclusive…ಬ್ಯಾಂಕ್ ದರೋಡೆಕೋರರ ಬಂಧನ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಈಚೆಗೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಬ್ಯಾಂಕ್‌ಗೆ ಕನ್ನ ಹಾಕಿದ್ದು, ಜಿಲ್ಲೆಯಲ್ಲಿ ಇದುವರೆಗೂ ನಡೆದ ದೊಡ್ಡ ದರೋಡೆ ಎಂಬ ಕುಖ್ಯಾತಿ ಹೊಂದಿತ್ತು.
ಸೆಪ್ಟೆಂಬರ್ 23ರಂದು ಬೇವೂರಿನ ಗ್ರಾಮೀಣ ಬ್ಯಾಂಕ್‌ಗೆ ಕನ್ನ ಹಾಕಿದ್ದ ಖದೀಮರು, 3.76 ಕೆಜಿ ಬಂಗಾರ, 21.75 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ 4 ವಿಶೇಷ ತನಿಖಾ ತಂಡ ರಚಿಸಿದ್ದ ಎಸ್ಪಿ ಜಿ.ಸಂಗೀತಾ ಅವರು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದರು.
ಮಹಾರಾಷ್ಟ್ರ ಮೂಲದ ದರೋಡೆಕೋರರು ಪೊಲೀಸ್ ಬಲೆಗೆ ಬಿದ್ದಿದ್ದು, ನಗದು ಹಾಗೂ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಈ ಕುರಿತ ಸಮಗ್ರ ಮಾಹಿತಿಯನ್ನು ಅಕ್ಟೋಬರ್ 8ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗುವುದು ಎಂದು ಎಸ್ಪಿ ಜಿ.ಸಂಗೀತಾ ವಿಜಯಸಾಕ್ಷಿಗೆ ತಿಳಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷನ ಮೇಲೆ ಹಲ್ಲೆ; ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ವಿಜಯಪುರ: ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಜಿಲ್ಲೆಯ ಸಿಂದಗಿಯಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮೇಲೆ ದುಷ್ಕರ್ಮಿಗಳಿಂದ ಮಾರಾಣಾಂತಿಕ ಹಲ್ಲೆ ನಡೆದಿದೆ.

ಸೋಮವಾರ ರಾತ್ರಿ ಸಿಂಧಗಿ ಪಟ್ಟಣದ ಹೊರವಲಯದ ಅರ್ಪಿತಾ ಧಾಬಾ ದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕೆಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿವೆ. ರವಿಕಾಂತ ಮೇಲೆ ತಲವಾರ್ ನಿಂದ, ಧಾಬಾ ಸುತ್ತಲೂ ಓಡಾಡಿಸಿರುವ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಹಲ್ಲೆ ನಂತರ ದುಷ್ಕರ್ಮಿಗಳು ಬೈಕ್ ಮೇಲೆ ಪರಾರಿ ಅಗಿದ್ದಾರೆ. ಘಟನೆಯಲ್ಲಿ ರವಿಕಾಂತ ಎಡಗೈಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಬಲೇಶ್ವರ ಗ್ರಾಮದ ಅನಿಲ್, ರಾಂಪೂರ ಪಿ.ಎ ಗ್ರಾಮದ ಯುವರಾಜ ಸೇರಿದಂತೆ ನಾಲ್ವರ ಮೇಲೆ ಸಿಂಧಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣದ ವ್ಯವಹಾರವೇ ಈ ಹಲ್ಲೆಗೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ; ಸ್ಥಳೀಯರಿಂದ ಹಗ್ಗದಿಂದ ರಕ್ಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಆಗಿದ್ದರೂ ಅವಾಂತರ ಮಾತ್ರ ನಿಂತಿಲ್ಲ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಓಡಿಸಿ, ಕೊಚ್ಚಿ ಹೋಗುತ್ತಿದ್ದ ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕೊಪ್ಪಳ ತಾಲೂಕು ಶಿವಪುರ ಗ್ರಾಮದ ಹಳ್ಳದಲ್ಲಿ ಘಟನೆ ನಡೆದಿದೆ.

ಶಿವುಪುರ ಮತ್ತು ಹುಲಗಿ ನಡುವೆ ಹರಿಯೋ ಹಳ್ಳ ರಭಸವಾಗಿ ಹರಿಯುತ್ತಿದೆ. ಈ ನೀರಿನಲ್ಲೇ ಬೈಕ್ ಓಡಿಸಿದ್ದು, ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ. ಬೈಕ್ ಸವಾರ ಹಳ್ಳದಲ್ಲಿದ್ದ ಗಿಡ ಹಿಡಿದುಕೊಂಡು ನಿಂತು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ನೋಡಿರುವ ಸ್ಥಳೀಯರು ಹಗ್ಗದ ಮೂಲಕ ಬೈಕ್ ಸವಾರರನ್ನು ರಕ್ಷಿಸಿದ್ದು, ವಿಡಿಯೋ ವೈರಲ್ ಆಗಿದೆ.

ವಿದೇಶಿಗರ ಹಾಟ್ ಸ್ಪಾಟ್: ವಿರುಪಾಪುರ ರೇಸಾರ್ಟ್ ತೆರವು ಕಾರ್ಯಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ವಿದೇಶಿಗರ ಹಾಟ್ ಸ್ಪಾಟ್ ವಿರುಪಾಪುರ ಗಡ್ಡಿಯಲ್ಲಿ ಉಳಿದಿದ್ದ ಏಕೈಕ ರೆಸಾರ್ಟ್ ನೆಲಸಮಗೊಂಡಿದೆ. ಲಕ್ಷ್ಮಿ ಗೋಲ್ಡನ್ ಬೀಚ್ ರೆಸಾರ್ಟ್ ನೆಲಸಮವಾಗಿದ್ದು, ಕೊಪ್ಪಳ ಜಿಲ್ಲಾಡಳಿತದಿಂದ ರೆಸಾರ್ಟ್ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.

ಕಳೆದ 6 ತಿಂಗಳ ಹಿಂದೆ ಇಲ್ಲಿನ ಎಲ್ಲ ರೆಸಾರ್ಟ್‌ಗಳನ್ನು ಜಿಲ್ಲಾಡಳಿತ ತೆರವು ಮಾಡಿತ್ತು. ಲಕ್ಷ್ಮೀ ಗೋಲ್ಡನ್ ಬೀಚ್ ರೆಸಾರ್ಟ್ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ರೆಸಾರ್ಟ್ ಮಾಲೀಕರಿಗೆ ‌ಸೋಲಾಗಿತ್ತು

ಈ ಹಿನ್ನೆಲೆಯಲ್ಲಿ ಗುರುವಾರದಿಂದ ರೆಸಾರ್ಟ್ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ರೇಸಾರ್ಟ್‌ನ ಮಾಲೀಕರು ಈ ರೀತಿ ನೆಲಸಮ ಮಾಡುವುದಾಗಿದ್ದರೆ ಪರವಾನಗಿ ಏಕೆ ಕೊಡಬೇಕಿತ್ತು? ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ ನಾವು ಸಾಯಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಕ್-ಟಾಟಾ ಏಸ್ ಢಿಕ್ಕಿ; ಮೂವರ ಸಾವು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬೈಕ್ ಮತ್ತು ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಶುಕ್ರವಾರ ಯಲಬುರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

ಗುರುವಾರ ಸಂಜೆ ಯಲಬುರ್ಗಾ ತಾಲೂಕಿನ ಬೇವೂರಿನಿಂದ ಚಿಕ್ಕ ಮ್ಯಾಗೇರಿಗೆ ಬೈಕ್ ಮೇಲೆ ಮೂವರು ತೆರಳುತ್ತಿದ್ದು ಅಪಘಾತ ನಡೆದ ತಕ್ಷಣ ಮೂವರಿಗೂ ಗಂಭೀರ ಗಾಯಗಳಾಗಿದ್ದು ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೂವರು ಮೃತಪಟ್ಟರು.

ಮೃತರನ್ನು ಬೈರಾಪುರ ಗ್ರಾಮದ ಈರಣ್ಣ ಸಿಂಧೋಗಿ (26), ಚಿಕ್ಕಮ್ಯಾಗೇರಿ ಗ್ರಾಮದ ಹನುಮಪ್ಪ ಉಪ್ಪಾರ್ (26) ಮತ್ತು ಧರ್ಮಪ್ಪ ಹೊಸಳ್ಳಿ (55) ಎಂದು ಗುರುತಿಸಲಾಗಿದೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯಕರನೊಂದಿಗೆ‌ ಸೇರಿ ಪತಿಯ ಹತ್ಯೆ ಮಾಡಿದ ಪತ್ನಿ: ಶವದೊಂದಿಗೆ ರಾತ್ರಿಯಿಡೀ ಮಲಗಿದ್ದ ಲಲಿತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕಬಲಾಯತಕಟ್ಟಿ ತಾಂಡಾದಲ್ಲಿ ನಡೆದಿದೆ.

ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಕೊಲೆಯಾದ ದುರ್ದೈವಿಯಾಗಿದ್ದು, ಲಕ್ಷ್ಮಣ್ಣನ ಪತ್ನಿ ಲಲಿತಾ, ಆಕೆಯ ಪ್ರಿಯಕರ ಸೋಮಪ್ಪ ಲಮಾಣಿ ಜೊತೆ ಸೇರಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಲಲಿತಾ, ಸೋಮಪ್ಪ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಷಯ ತಿಳಿದ ಪತಿ ಲಕ್ಷ್ಮಣ ಪತ್ನಿ ಲಲಿತಾ ಜೊತೆಗೆ ನಿತ್ಯವೂ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದರಿಂದ ಬೇಸತ್ತು ಲಲಿತಾ ಹಾಗೂ ಪ್ರಿಯಕರ ಸೋಮಪ್ಪ ಲಕ್ಷ್ಮಣನನ್ನು ಕೊಲೆ ಮಾಡಿದ್ದಾರೆ. ಗೋವಾದ ಕಲ್ಲಂಗುಟನಲ್ಲಿ ದಂಪತಿಗಳು ಮೀನು ಮಾರಾಟ ಮಾಡುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ತಾಂಡಾಗೆ ವಾಪಾಸಾಗಿದ್ದರು. ಕೊಲೆಮಾಡಿದ ನಂತರ ಲಲಿತಾ ಎಂದಿನಂತೆ ಇದ್ದು, ಶವದೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ.

ಮುಂಜಾನೆ ಬಾಯಿ ಬಡಿದುಕೊಂಡು, ಜನರನ್ನು ಸೇರಿಸಿದ್ದಾಳೆ. ಬಂದ ಜನ ಕುತ್ತಿಗೆಯ ಮೇಲಿನ ಗುರುತು ನೋಡಿ ಪೊಲೀಸರಿಗೆ ಮಾಹಿತಿ ‌ನೀಡಿದ್ದಾರೆ.

ಕುತ್ತಿಗೆಗೆ ಬಿಗಿದಿದ್ದ ಹಗ್ಗ ವನ್ನು ಲಲಿತಾ ಹಾಗೂ ಸೋಮಪ್ಪ ಸುಟ್ಟು ಹಾಕಿದ್ದು, ಸಾಕ್ಷ್ಯ ನಾಶ ಮಾಡಿದ್ದಾರೆ. ರಾತ್ರಿಯೇ ಲಲಿತಾ ಹಾಗೂ ಸೋಮಪ್ಪರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಂದರ್-ಬಾಹರ್: ಸರಕಾರಿ ನೌಕರ ಸೇರಿ ಆರು ಜನರ ಬಂಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡದ ಶರಣಬಸವೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಬಯಲು ಜಾಗೆಯಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ, ಸಾರಿಗೆ ಸಂಸ್ಥೆಯ ನೌಕರ ಸೇರಿದಂತೆ ಆರು ಜನರನ್ನು ಗಜೇಂದ್ರಗಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಗಜೇಂದ್ರಗಡ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಸಂಸ್ಥೆಯ ಚಾಲಕ ಹನಮಂತಪ್ಪ ಭೀಮಪ್ಪ ಜಿಗಳೂರು ಸೇರಿದಂತೆ ಇವರ ಜೊತೆ ಜೂಜಾಟದಲ್ಲಿ ತೊಡಗಿದ್ದ, ಶಿವಪ್ಪ ಕಳಕಪ್ಪ ತಳವಾರ, ಮಹಾಂತೇಶ್ ಶರಣಪ್ಪ ರೊಟ್ಟಿ, ಶಿವಯೋಗಿ ವೀರಭದ್ರಪ್ಪ ಜಿಗಳೂರು, ಪರಶುರಾಮಪ್ಪ ಭೀಮಪ್ಪ ಆಡಿನ, ಸಿದ್ದಯ್ಯ ಶರಣಯ್ಯ ಕಾರಡಗಿಮಠ ಇವರನ್ನು ಬಂಧಿಸಿದ್ದು, ಬಂಧಿತರಿಂದ ಗಜೇಂದ್ರಗಡ ಪೊಲೀಸರು ಕೇವಲ 2,600 ಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ.

ಇವರೆಲ್ಲರೂ ನಾಗೇಂದ್ರಗಡ ಗ್ರಾಮದವರಾಗಿದ್ದು, ಘಟನೆ ಸೆ.26 ರಂದೇ ನಡೆದಿತ್ತು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!