Home Blog Page 286

ಕಂಟ್ರೋಲ್ ತಪ್ಪಿ ಅಂಗಡಿ ಶಟರ್‌ಗೆ ಕಾರ್ ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

0

ಗದಗ: ನಗರದ ಮುಳಗುಂದ ರಸ್ತೆಯ ನೌಕರರ ಭವನದ ಬಳಿ ಕಾರೊಂದು ನಿಯಂತ್ರಣ ತಪ್ಪಿ ಅಂಗಡಿ ಶಟರ್‌ಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.

ಕಾರನ್ನು ಮೊಹಮ್ಮದ್ ಮಾಜ್ ಪಾಮಡಿ ಎಂಬಾತನು ಚಲಾಯಿಸುತ್ತಿದ್ದ ಎನ್ನಲಾಗಿದೆ. ಅತಿ ವೇಗವಾಗಿ ಕಾರ್ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಧೋಬಿ ಘಾಟ್‌ನಿಂದ ಮುಳಗುಂದ ನಾಕಾ ಕಡೆಗೆ ತೆರಳುತ್ತಿದ್ದ ಕಾರು ಏಕಾಏಕಿ ಕಂಟ್ರೋಲ್ ತಪ್ಪಿ ಮಳಿಗೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ದೃಶ್ಯಗಳು ಮಳಿಗೆಗಳಿಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದ್ದು, ಅಪಘಾತದ ನಂತರ ಚಾಲಕ ಕಾರಿನಿಂದ ಇಳಿದು ತನ್ನ ಮೊಬೈಲ್ ಗಾಗಿ ಕಾರಿನ ಹಿಂದಿನ ಡೋರ್ ಮುರಿಯುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರ್ ಡಿಕ್ಕಿಯ ರಭಸಕ್ಕೆ ಮಳಿಗೆಗಳ ಕಂಬಿ ಹಾಗೂ ಶಟರ್‌ಗೆ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಚಾಲಕನಿಗೆ ಯಾವುದೇ ಗಾಯಗಳಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆ ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ: ಶಾಸಕ ಪ್ರದೀಪ್ ಈಶ್ವರ್

0

ಚಿಕ್ಕಬಳ್ಳಾಪುರ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಸ್ಥಾನ ಸಿಗುವ ಬಗ್ಗೆ ನಿರೀಕ್ಷೆ ಇದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್,

ಚಿಕ್ಕಬಳ್ಳಾಪುರದ ಎಲ್ಲಾ ಶಾಸಕರೂ ಒಟ್ಟಾಗಿ ಇದ್ದೇವೆ. ನನಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯ ಎಲ್ಲಾ ಶಾಸಕರೂ ಸ್ವಾಗತಿಸುತ್ತಾರೆ. ಸಚಿವ ಎಂ.ಸಿ. ಸುಧಾಕರ್ ಸಾಹೇಬರು ಕೂಡ ಸ್ವಾಗತಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ನನ್ನನ್ನು ಬಿಟ್ಟು ಬೇರೆ ಶಾಸಕರಿಗೆ ಸಚಿವ ಸ್ಥಾನ ಸಿಕ್ಕರೂ ನಾನೂ ಸ್ವಾಗತಿಸುತ್ತೇನೆ. ಯೂತ್ ಕೋಟಾ ಹಾಗೂ ಸಮುದಾಯದ ಕೋಟಾದಡಿ ಸಚಿವ ಸ್ಥಾನ ನೀಡಲು ಅವಕಾಶವಿದೆ ಎಂದು ಅವರು ಹೇಳಿದರು.

ನಾನು ಸದಾ ಜನರ ಜೊತೆ ಇದ್ದೇನೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ದರಕಾಸ್ತು ಕಮಿಟಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ಕಳೆದ 15 ವರ್ಷಗಳಿಂದ ಕಮಿಟಿ ಮೀಟಿಂಗ್ ನಡೆದಿರಲಿಲ್ಲ. ಇದೀಗ ನಾನು ದರಕಾಸ್ತು ಕಮಿಟಿ ಅಧ್ಯಕ್ಷನಾಗಿರುವ ಕಾರಣ ಇಂದು ಸಭೆ ನಡೆಸಲಾಗಿದೆ ಎಂದು ಹೇಳಿದರು.

‘ಜೈಲರ್ 2’ನಲ್ಲಿ ಈ ಬಾರಿ ಕೇವಲ ಅತಿಥಿ ಪಾತ್ರವಲ್ಲ: ಶಿವರಾಜ್‌ ಕುಮಾರ್

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ೨೦೨೩ರ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿತ್ತು. ಈ ಸಿನಿಮಾದಲ್ಲಿನ ಅತಿಥಿ ಪಾತ್ರಗಳೇ ಪ್ರಮುಖ ಆಕರ್ಷಣೆಯಾಗಿದ್ದವು. ಅದರಲ್ಲೂ ನಟ ಶಿವರಾಜ್ ಕುಮಾರ್ ಅಭಿನಯಿಸಿದ್ದ ನರಸಿಂಹ ಪಾತ್ರ ತಮಿಳುನಾಡಿನ ಪ್ರೇಕ್ಷಕರ ಮನಗೆದ್ದಿತ್ತು.

‘ಜೈಲರ್’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಅವರಿಗೆ ತಮಿಳುನಾಡಿನಲ್ಲಿ ಹೊಸ ಅಭಿಮಾನಿ ವರ್ಗ ನಿರ್ಮಾಣವಾಗಿತ್ತು. ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣ ಹಂತದಲ್ಲಿದ್ದು, ಈ ಭಾಗದಲ್ಲಿಯೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಅವರು ಸ್ವತಃ ಬಹಿರಂಗಪಡಿಸಿದ್ದಾರೆ.

‘45’ ಸಿನಿಮಾದ ಪ್ರಚಾರದ ವೇಳೆ ಮಾತನಾಡಿದ ಶಿವರಾಜ್ ಕುಮಾರ್, “‘ಜೈಲರ್ ೨’ನಲ್ಲಿ ನನ್ನ ಪಾತ್ರ ಕೇವಲ ಅತಿಥಿ ಪಾತ್ರ ಮಾತ್ರವಲ್ಲ. ಮೊದಲ ಭಾಗದಲ್ಲಿ ನನ್ನ ಪಾತ್ರ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಲಿದೆ. ಈ ಬಾರಿ ಪಾತ್ರಕ್ಕೆ ಇನ್ನಷ್ಟು ತೂಕ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನೂ ಚಿತ್ರೀಕರಣದ ಬಗ್ಗೆ ಮಾತನಾಡಿದ ಅವರು, “ಈಗಾಗಲೇ ಒಂದು ದಿನ ಚಿತ್ರೀಕರಣ ಮಾಡಿದ್ದೇನೆ. ಜನವರಿಯಲ್ಲಿ ಸುಮಾರು ನಾಲ್ಕು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ. ‘ಜೈಲರ್’ ಒಂದು ಯೂನಿವರ್ಸಲ್ ಕಂಟೆಂಟ್ ಸಿನಿಮಾ. ನಿರ್ದೇಶಕ ನೆಲ್ಸನ್ ರಜನೀಕಾಂತ್ ಅವರನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಅವರ ವಯಸ್ಸನ್ನೂ ಶಕ್ತಿಯಾಗಿ ಪರಿವರ್ತಿಸಿದ್ದಾರೆ” ಎಂದು ಹೇಳಿದರು.

‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಶಿವರಾಜ್ ಕುಮಾರ್ ಜೊತೆಗೆ ಮೋಹನ್ಲಾಲ್ ಹಾಗೂ ಜಾಕಿ ಶ್ರಾಫ್ ಗೆಳೆಯರ ಪಾತ್ರದಲ್ಲಿ ನಟಿಸಿದ್ದರು. ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮತ್ತು ಸುನಿಲ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಿಲನ್ ಪಾತ್ರದಲ್ಲಿ ವಿನಾಯಗನ್ ಅಭಿನಯವೂ ಗಮನ ಸೆಳೆದಿತ್ತು.

ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ನಂದಮೂರಿ ಬಾಲಕೃಷ್ಣ ಕೂಡ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ. ‘ಜೈಲರ್ ೨’ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ದಾವಣಗೆರೆ| ಷೇರು ಮಾರುಕಟ್ಟೆ ನೆಪದಲ್ಲಿ 76.48 ಲಕ್ಷ ರೂ. ಸೈಬರ್ ವಂಚನೆ; FIR ದಾಖಲು!

0

ದಾವಣಗೆರೆ: ನಗರದ ವಿನಾಯಕ ಬಡಾವಣೆಯ ನಿವಾಸಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 76.48 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂಬ ಆಸೆ ತೋರಿಸಿ ವಂಚಕರು ಈ ಕೃತ್ಯ ಎಸಗಿದ್ದಾರೆ. ವಂಚಕನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾನೆ.

ವಂಚಕನ ಮಾತು ನಂಬಿದ ವ್ಯಕ್ತಿ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಹಣವನ್ನು ವಾಪಸ್ ಪಡೆಯಲು ಯತ್ನಿಸಿದಾಗ ಯಾವುದೇ ಹಣ ಬಾರದೇ ಇದ್ದುದರಿಂದ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.

ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ತಿಳಿಸಿದ ಕಿಚ್ಚನ ಆಪ್ತ ರಾಜು ಗೌಡ

ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ದರ್ಶನ್ ಅಭಿಮಾನಿಗಳ ಆಕ್ರೋಶದ ನಡುವೆಯೇ, ಈ ಹೇಳಿಕೆಯ ಹಿಂದಿನ ನಿಜವಾದ ಉದ್ದೇಶವನ್ನು ಸುದೀಪ್ ಅವರ ಆಪ್ತ ರಾಜು ಗೌಡ ಬಹಿರಂಗಪಡಿಸಿದ್ದಾರೆ.

ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡುವಾಗ ಪೈರಸಿ ವಿರುದ್ಧದ ಆತಂಕವೇ ಪ್ರಮುಖ ಕಾರಣವಾಗಿತ್ತು ಎಂದು ರಾಜು ಗೌಡ ತಿಳಿಸಿದ್ದಾರೆ. “ಸುದೀಪ್ ಅವರಿಗೆ ಫೋನ್ ಮೂಲಕ ಈ ಬಾರಿ ಭಾರಿ ಪೈರಸಿ ಸಂಚು ರೂಪುಗೊಂಡಿದೆ ಎಂಬ ಮಾಹಿತಿ ಬಂದಿತ್ತು. ಸುದೀಪ್ ಅಭಿಮಾನಿಗಳ ಹೆಸರಲ್ಲಿ ನಕಲಿ ಸಂಘಗಳನ್ನು ಮಾಡಿ ಅಪಪ್ರಚಾರ ನಡೆಯುತ್ತಿದೆ. ಅದನ್ನು ತಡೆಯುವ ಸಲುವಾಗಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದಲೇ ಅವರು ಮಾತನಾಡಿದ್ದಾರೆ” ಎಂದು ಹೇಳಿದ್ದಾರೆ.

‘ನಾವೆಲ್ಲರೂ ಯುದ್ಧಕ್ಕೆ ಸಿದ್ಧ’ ಎಂಬ ಹೇಳಿಕೆ ಯಾವುದೇ ಸ್ಟಾರ್ ನಟರ ವಿರುದ್ಧವಲ್ಲ ಎಂದು ರಾಜು ಗೌಡ ಸ್ಪಷ್ಟಪಡಿಸಿದ್ದಾರೆ. “ಇಲ್ಲಿ ನಡೆಯುತ್ತಿರುವ ಚರ್ಚೆಯೇ ಬೇರೆ, ಸುದೀಪ್ ಅವರು ಹೇಳಿದ್ದು ಬೇರೆ. ಪೈರಸಿ ವಿರುದ್ಧದ ಹೋರಾಟದ ಬಗ್ಗೆ ಅವರು ಮಾತನಾಡಿದ್ದಾರೆ. ಯಾವುದೇ ಸಿನಿಮಾ ಅಥವಾ ನಟರ ವಿರುದ್ಧ ಹೇಳಿಕೆ ನೀಡಿಲ್ಲ” ಎಂದಿದ್ದಾರೆ.

ದರ್ಶನ್ ವಿರುದ್ಧ ಸುದೀಪ್ ಮಾತನಾಡಿದ್ದಾರೆ ಎನ್ನುವುದು ಸುಳ್ಳು ಎಂದು ರಾಜು ಗೌಡ ಹೇಳಿದ್ದಾರೆ. “ಅಂಥ ಸಂದರ್ಭವೇ ಇಲ್ಲ. ಯಾರಿಗೆ ತಟ್ಟಬೇಕೋ ತಟ್ಟುತ್ತೆ ಎಂಬ ಮಾತು ಪೈರಸಿ ಮಾಡುವವರಿಗಾಗಿ. ಪೈಲ್ವಾನ್ ಸಿನಿಮಾ ಸಮಯದಲ್ಲಿ ಪೈರಸಿ ನಿರ್ಮಾಪಕರನ್ನು ಕಣ್ಣೀರು ಹಾಕುವ ಸ್ಥಿತಿಗೆ ತಂದಿತ್ತು. ಅದರಿಂದ ಪಾಠ ಕಲಿಯಬೇಕು ಎಂಬುದೇ ಸುದೀಪ್ ಉದ್ದೇಶ” ಎಂದು ತಿಳಿಸಿದ್ದಾರೆ.

ಇನ್ನೂ ಸುದೀಪ್ ಅಭಿಮಾನಿಗಳ ಹೆಸರಲ್ಲಿ ಅಪಪ್ರಚಾರ ಮಾಡುವವರ ಬಗ್ಗೆ ರಾಜು ಗೌಡ ಕಿಡಿಕಾರಿದ್ದಾರೆ. “ಅಂಥವರು ಸುದೀಪ್ ಫ್ಯಾನ್ಸ್ ಅಲ್ಲ. ನಿಜವಾದ ಅಭಿಮಾನಿಗಳು ಸುಳ್ಳು ಸುದ್ದಿ ಹರಡುವುದಿಲ್ಲ. ಮಾಸ್ ಆಗಿ ಸುದೀಪಣ್ಣನ ಜೊತೆಗೆ ನಿಂತಿರುತ್ತಾರೆ. ಇಂಥವರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇವೆ” ಎಂದು ಹೇಳಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಜು ಗೌಡ, “ಅವರು ಸ್ಪಷ್ಟವಾಗಿ ಯಾರ ಹೆಸರನ್ನಾದರೂ ಹೇಳಿ ಮಾತನಾಡಿದ್ದರೆ ಉತ್ತರ ಕೊಡುತ್ತಾರೆ. ಪೈರಸಿ ಎಲ್ಲ ಸ್ಟಾರ್ ನಟರಿಗೂ ಸಮಸ್ಯೆ. ಹೀಗಾಗಿ ಅನಾವಶ್ಯಕವಾಗಿ ವಿವಾದ ಮಾಡಬಾರದು ಎಂಬುದೇ ಸುದೀಪ್ ಮಾತಿನ ಅರ್ಥ” ಎಂದು ತಿಳಿಸಿದ್ದಾರೆ.

ಬೆಂಗಳೂರಿಗರಿಗೆ ಮುಗಿಯದ ಪವರ್ ಸಮಸ್ಯೆ: 4 ದಿನ ಇರಲ್ಲ ಕರೆಂಟ್, ಇಂದು ಈ ಏರಿಯಾಗಳಿಗೆ ತೊಂದರೆ!

0

ಬೆಂಗಳೂರು:- ರಾಜಧಾನಿ ಬೆಂಗಳೂರು ಮಂದಿಗೆ ಕಳೆದ ಕೆಲವು ದಿನಗಳಿಂದ ಪವರ್ ಸಮಸ್ಯೆ ಬಿಟ್ಟು ಬಿಡದೇ ಕಾಡುತ್ತಿದೆ. ಕಾಮಗಾರಿ ನೆಪದಲ್ಲಿ ಬೆಸ್ಕಾಂ ಪವರ್ ಕಟ್ ಮಾಡುತ್ತಿದ್ದು, ಈ ಸಮಸ್ಯೆ ಇನ್ನೂ ಸ್ವಲ್ಪ ದಿನ ಮುಂದುವರಿಯಲಿದೆ.

ಇಂದು ಕೆಪಿಟಿಸಿಎಲ್, ಪ್ರಮುಖ ಪ್ರಸರಣ ಮಾರ್ಗಗಳು ಮತ್ತು ಸಬ್‍ಸ್ಟೇಷನ್‍ಗಳಲ್ಲಿ ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ದಕ್ಷಿಣ, ಪಶ್ಚಿಮ ಮತ್ತು ಉತ್ತರದ 80 ಕ್ಕೂ ಹೆಚ್ಚು ನೆರೆಹೊರೆಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಅಲ್ಲದೇ ಡಿಸೆಂಬರ್ 25 ರಿಂದ ನಾಲ್ಕು ದಿನ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಇಂದು ಎಲ್ಲೆಲ್ಲಿ ಪವರ್ ಕಟ್:

ಯಡ್ವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್, ಮಾಯಸಂದ್ರ, ದಾಸನಾಪುರ, ಬಲ್ಲೂರು, ಕಬಳಿಪುರ, ಚಿಕ್ಕನಹಳ್ಳಿ, ಇಂಡಿಬೆಲೆ, ಹಾರೋಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಆನೇಕಲ್ ಟೌನ್, ಕಾವಲುಹೊಸಹಳ್ಳಿ, ಗೌರೇನಹಳ್ಳಿ, ಹಲ್ದೇನಹಳ್ಳಿ, ಹೊಂಪಲಗಟ್ಟಾ, ಚೂಡೇನಹಳ್ಳಿ, ಹೊನ್ನಕಲಶಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಗದಗದಲ್ಲಿ ಭ್ರಷ್ಟ ಜಿಪಂ ಅಧಿಕಾರಿ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ!

0

ಗದಗ: ಗದಗ ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲಿನ ಲೋಕಾಯುಕ್ತ ದಾಳಿ ಮುಂದುವರಿದಿದೆ.

ಅದರಂತೆ ಇಂದು ಬೆಳ್ಳಂ ಬೆಳಗ್ಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಸ್.ಎಂ. ಕಾಂಬಳೆ ಅವರ ನರಗುಂದ ಪಟ್ಟಣದ ರಾಣಿ ಚೆನ್ನಮ್ಮ ನಗರದಲ್ಲಿರುವ ಮನೆ,‌ ಕಸಬಾ ಪೇಟೆಯಲ್ಲಿ ಇರುವ ಅವರ ಸಹೋದರನ ಮನೆ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯತ್ ಕಚೇರಿ ಸೇರಿದಂತೆ ಮೂರು ಸ್ಥಳಗಳಲ್ಲಿ ಈ ದಾಳಿ ನಡೆಸಲಾಗಿದೆ.

ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಲ್ಲೇಶ್ ಟಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ ರೆಡ್ಡಿ ಹಾಗೂ ಸಿಪಿಐ ಮಲ್ಲಿಕಾರ್ಜುನ ಬಿರಾದಾರ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ದಾಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾಗಿದೆ.

ಕಾವ್ಯಾ ಬೇಡ ಎಂದರೂ ಕೇಳದ ಗಿಲ್ಲಿ ನಟ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅಸಮಾಧಾನ

‘ಬಿಗ್ ಬಾಸ್ ಕನ್ನಡ ಸೀಸನ್ ೧೨’ ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವಿನ ಸಮೀಪತೆ ಇದೀಗ ಕಿರಿಕಿರಿ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಶೋ ಆರಂಭದಿಂದಲೂ ಇಬ್ಬರ ಆತ್ಮೀಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದು ಕಾವ್ಯಾ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಚ್ಚ ಸುದೀಪ್ ಈಗಾಗಲೇ ಸೂಚಿಸಿದ್ದರು.

ಡಿಸೆಂಬರ್ ೨೨ರ ಸಂಚಿಕೆಯಲ್ಲಿ ಗಿಲ್ಲಿ ನಟ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದು, ಕಾವ್ಯಾ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವ್ಯಾ ಬೇಡ ಎಂದರೂ ಕೂಡ ಗಿಲ್ಲಿ ಮುಗಿಬಿದ್ದು ಮಾತನಾಡಲು ಮುಂದಾದರು. ಈ ಹಿಂದೆ ಹಲವು ಬಾರಿ ಗಿಲ್ಲಿ ವರ್ತನೆಯಿಂದ ಕಿರಿಕಿರಿ ಆಗಿದೆ ಎಂದು ಕಾವ್ಯಾ ನೇರವಾಗಿಯೇ ಹೇಳಿದ್ದರು. “ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದರೂ ಗಿಲ್ಲಿ ಅರ್ಥ ಮಾಡಿಕೊಂಡಂತೆ ಕಾಣಿಸಲಿಲ್ಲ.

೮೬ನೇ ಸಂಚಿಕೆಯಲ್ಲಿ ಅಡುಗೆ ಮನೆಯಲ್ಲಿ ನಡೆದ ಘಟನೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ದಾಳಿಂಬೆ ಹಣ್ಣು ಬಿಡಿಸುತ್ತಿದ್ದ ಕಾವ್ಯಾ ಬಳಿ ಬಂದ ಗಿಲ್ಲಿ ತಮಾಷೆ ಆರಂಭಿಸಿದರು. ಕತ್ತರಿ ಹಿಡಿದು ಕೂದಲು ಕತ್ತರಿಸುವಂತೆ ನಟಿಸಿದ್ದು ಕಾವ್ಯಾ ಅವರಿಗೆ ಹಿಡಿಸಲಿಲ್ಲ. ಜೊತೆಗೆ ದಾಳಿಂಬೆ ಹಣ್ಣನ್ನು ಬಲವಂತವಾಗಿ ತೆಗೆದುಕೊಳ್ಳಲು ಯತ್ನಿಸಿದುದು ಕಾವ್ಯಾ ಅವರ ಕೋಪಕ್ಕೆ ಕಾರಣವಾಯಿತು.

ಇದರಿಂದ ಬೇಸರಗೊಂಡ ಕಾವ್ಯಾ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮಿಗೆ ತೆರಳಿದರು. ಅವರು ತುಂಬಾ ಮನನೊಂದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿತು. ನಂತರ ಗಿಲ್ಲಿ ಸಮಾಧಾನ ಮಾಡಲು ಪ್ರಯತ್ನಿಸಿದರೂ ಪರಿಸ್ಥಿತಿ ತಣ್ಣಗಾಗಲಿಲ್ಲ.

ಈ ವಾರ ಕಾವ್ಯಾ ಶೈವ ಕ್ಯಾಪ್ಟನ್ ಆಗಿದ್ದು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಆದರೆ ಗಿಲ್ಲಿ ನಟ ನಾಮಿನೇಷನ್ ಪಟ್ಟಿಯಲ್ಲಿ ಇದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯಾ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರವಾಗುತ್ತಿದೆ.

“ಯುದ್ಧದ ಮಾತು ಯಾರ ವಿರುದ್ಧವೂ ಅಲ್ಲ”: ವಿವಾದದ ನಡುವೆ ಕಿಚ್ಚ ಸುದೀಪ್ ಕ್ಲಾರಿಟಿ

ನಟ ಕಿಚ್ಚ ಸುದೀಪ್ ನೀಡಿದ್ದ “ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ” ಎಂಬ ಹೇಳಿಕೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ, ಇದೀಗ ಸುದೀಪ್ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಇಬ್ಬರ ಮಧ್ಯೆ ನೇರ ಮಾತಿನ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

ಈ ಕುರಿತು ಮಾತನಾಡಿದ ಕಿಚ್ಚ ಸುದೀಪ್, “ನಾನು ಹೇಳಿದ ಮಾತು ವಿವಾದ ಆಗಬೇಕಿದ್ದರೆ ಅದೇ ದಿನ ಅಥವಾ ಮರುದಿನವೇ ಎಲ್ಲರೂ ಪ್ರಶ್ನಿಸಬೇಕಿತ್ತು. ನೀವು ಯಾರಿಗೆ ಹೇಳಿದ್ರಿ ಎಂದು ನೇರವಾಗಿ ಕೇಳಬೇಕಿತ್ತು. ಆದರೆ ಹಾಗಾಗಲಿಲ್ಲ. ಹಾಗಾಗಿ ಇದು ಅನಾವಶ್ಯಕವಾಗಿ ದೊಡ್ಡದಾಗುತ್ತಿದೆ” ಎಂದು ಹೇಳಿದ್ದಾರೆ.

ಮಾರ್ಕ್ ಹಾಗೂ ೪೫ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ಹೇಳಿಕೆ ಶಿವರಾಜ್‌ಕುಮಾರ್ ಸಿನಿಮಾವನ್ನು ಉದ್ದೇಶಿಸಿದ್ದೇ ಎಂಬ ಅನುಮಾನಕ್ಕೆ ಉತ್ತರಿಸಿದ ಸುದೀಪ್, “ನಾನು ಮಾತನಾಡಿದ್ದು ಪೈರಸಿ ಬಗ್ಗೆ. ೪೫ ಸಿನಿಮಾ ಬಗ್ಗೆ ಅಲ್ಲ. ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು. ಅದರ ವಿರುದ್ಧ ಮಾತನಾಡುವ ಹಕ್ಕು ನನಗಿದೆ” ಎಂದು ಸ್ಪಷ್ಟಪಡಿಸಿದರು.

“ಕಮಲ್ ಹಾಸನ್ ವಿಚಾರ ಬಂದಾಗ ನಾನು ಶಿವಣ್ಣ ಪರ ನಿಂತಿದ್ದೇನೆ. ಅವರು ನಮ್ಮ ಹೆಮ್ಮೆ. ನನ್ನ ಮಾತು ನಿಮ್ಮ ಬಗ್ಗೆನಾ ಎಂದು ಶಿವಣ್ಣನಿಗೆ ಕೇಳಿದ್ರೆ ಅವರು ನಗುತ್ತಾರೆ” ಎಂದು ಸುದೀಪ್ ಹೇಳಿದರು.

ವಿಜಯಲಕ್ಷ್ಮೀ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನನಗೆ ನೇರವಾಗಿ ಹೇಳಿದ್ರೆ ಉತ್ತರ ಕೊಡ್ತೀನಿ. ನನ್ನ ಸಿನಿಮಾ ಕಾಪಾಡಿಕೊಳ್ಳುವುದು ನನ್ನ ಹೊಣೆ. ಜಿದ್ದಾಜಿದ್ದಿ ಮಾಡ್ತಿಲ್ಲ. ಪೈರಸಿ ಮಾಡುವವರನ್ನು ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇವೆ” ಎಂದು ಕಠಿಣ ಎಚ್ಚರಿಕೆ ನೀಡಿದರು.

ಒಟ್ಟಿನಲ್ಲಿ, ಕಿಚ್ಚ ಸುದೀಪ್ ತಮ್ಮ ಹೇಳಿಕೆಗಳನ್ನು ವೈಯಕ್ತಿಕ ಸಂಘರ್ಷವಾಗಿ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದು, ಈ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.

ಅಪಘಾತವಾಗಿ ಕೆಳಗೆ ಬಿದ್ದಿದ್ದ ವ್ಯಕ್ತಿ ಬಳಿ 80 ಸಾವಿರ ದೋಚಿದ್ದ ಇಬ್ಬರು ಖದೀಮರು ಅಂದರ್!

0

ಮೈಸೂರು:- ರಸ್ತೆ ಅಪಘಾತವಾಗಿ ಬಿದ್ದಿದ್ದವನ ಮೊಬೈಲ್‌ನಿಂದ 80 ಸಾವಿರ ದೋಚಿದ್ದ ಖದೀಮರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಮೇಶ್ ಮತ್ತು ಮನು ಬಂಧಿತರು. ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಗಣೇಶ್ ಎಂಬ ವ್ಯಕ್ತಿ ಡಿಸೆಂಬರ್ 19ರಂದು ಮೈಸೂರು ತಾಲ್ಲೂಕಿನ ಕಡಕೊಳದ ಬಳಿ ಅಪಘಾತಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ರಮೇಶ್ ಮತ್ತು ಮನು ಎಂಬ ಇಬ್ಬರು ವ್ಯಕ್ತಿಗಳು ಗಣೇಶನ ಮೊಬೈಲ್ ವಶಕ್ಕೆ ಪಡೆದು ಯುಪಿಐ ಮೂಲಕ 80,000 ರೂ. ವರ್ಗಾವಣೆ ಮಾಡಿ ಪರಾರಿಯಾಗಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಮೇಲೆ ಗಣೇಶ್ ಅವರ ಸಹೋದರ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಪರಿಶೀಲನೆ ನಡೆಸಿ, ಮೈಸೂರಿನ ಮಹದೇವಪುರ ನಿವಾಸಿಗಳಾದ ರಮೇಶ್ ಮತ್ತು ಮನು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಬಂಧಿತರಿಂದ 80,000 ರೂ. ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

error: Content is protected !!