Home Blog Page 287

ಕಾವ್ಯಾ ಬೇಡ ಎಂದರೂ ಕೇಳದ ಗಿಲ್ಲಿ ನಟ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅಸಮಾಧಾನ

‘ಬಿಗ್ ಬಾಸ್ ಕನ್ನಡ ಸೀಸನ್ ೧೨’ ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವಿನ ಸಮೀಪತೆ ಇದೀಗ ಕಿರಿಕಿರಿ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಶೋ ಆರಂಭದಿಂದಲೂ ಇಬ್ಬರ ಆತ್ಮೀಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದು ಕಾವ್ಯಾ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಚ್ಚ ಸುದೀಪ್ ಈಗಾಗಲೇ ಸೂಚಿಸಿದ್ದರು.

ಡಿಸೆಂಬರ್ ೨೨ರ ಸಂಚಿಕೆಯಲ್ಲಿ ಗಿಲ್ಲಿ ನಟ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದು, ಕಾವ್ಯಾ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವ್ಯಾ ಬೇಡ ಎಂದರೂ ಕೂಡ ಗಿಲ್ಲಿ ಮುಗಿಬಿದ್ದು ಮಾತನಾಡಲು ಮುಂದಾದರು. ಈ ಹಿಂದೆ ಹಲವು ಬಾರಿ ಗಿಲ್ಲಿ ವರ್ತನೆಯಿಂದ ಕಿರಿಕಿರಿ ಆಗಿದೆ ಎಂದು ಕಾವ್ಯಾ ನೇರವಾಗಿಯೇ ಹೇಳಿದ್ದರು. “ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದರೂ ಗಿಲ್ಲಿ ಅರ್ಥ ಮಾಡಿಕೊಂಡಂತೆ ಕಾಣಿಸಲಿಲ್ಲ.

೮೬ನೇ ಸಂಚಿಕೆಯಲ್ಲಿ ಅಡುಗೆ ಮನೆಯಲ್ಲಿ ನಡೆದ ಘಟನೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ದಾಳಿಂಬೆ ಹಣ್ಣು ಬಿಡಿಸುತ್ತಿದ್ದ ಕಾವ್ಯಾ ಬಳಿ ಬಂದ ಗಿಲ್ಲಿ ತಮಾಷೆ ಆರಂಭಿಸಿದರು. ಕತ್ತರಿ ಹಿಡಿದು ಕೂದಲು ಕತ್ತರಿಸುವಂತೆ ನಟಿಸಿದ್ದು ಕಾವ್ಯಾ ಅವರಿಗೆ ಹಿಡಿಸಲಿಲ್ಲ. ಜೊತೆಗೆ ದಾಳಿಂಬೆ ಹಣ್ಣನ್ನು ಬಲವಂತವಾಗಿ ತೆಗೆದುಕೊಳ್ಳಲು ಯತ್ನಿಸಿದುದು ಕಾವ್ಯಾ ಅವರ ಕೋಪಕ್ಕೆ ಕಾರಣವಾಯಿತು.

ಇದರಿಂದ ಬೇಸರಗೊಂಡ ಕಾವ್ಯಾ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮಿಗೆ ತೆರಳಿದರು. ಅವರು ತುಂಬಾ ಮನನೊಂದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿತು. ನಂತರ ಗಿಲ್ಲಿ ಸಮಾಧಾನ ಮಾಡಲು ಪ್ರಯತ್ನಿಸಿದರೂ ಪರಿಸ್ಥಿತಿ ತಣ್ಣಗಾಗಲಿಲ್ಲ.

ಈ ವಾರ ಕಾವ್ಯಾ ಶೈವ ಕ್ಯಾಪ್ಟನ್ ಆಗಿದ್ದು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಆದರೆ ಗಿಲ್ಲಿ ನಟ ನಾಮಿನೇಷನ್ ಪಟ್ಟಿಯಲ್ಲಿ ಇದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯಾ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರವಾಗುತ್ತಿದೆ.

“ಯುದ್ಧದ ಮಾತು ಯಾರ ವಿರುದ್ಧವೂ ಅಲ್ಲ”: ವಿವಾದದ ನಡುವೆ ಕಿಚ್ಚ ಸುದೀಪ್ ಕ್ಲಾರಿಟಿ

ನಟ ಕಿಚ್ಚ ಸುದೀಪ್ ನೀಡಿದ್ದ “ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ” ಎಂಬ ಹೇಳಿಕೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ, ಇದೀಗ ಸುದೀಪ್ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಇಬ್ಬರ ಮಧ್ಯೆ ನೇರ ಮಾತಿನ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

ಈ ಕುರಿತು ಮಾತನಾಡಿದ ಕಿಚ್ಚ ಸುದೀಪ್, “ನಾನು ಹೇಳಿದ ಮಾತು ವಿವಾದ ಆಗಬೇಕಿದ್ದರೆ ಅದೇ ದಿನ ಅಥವಾ ಮರುದಿನವೇ ಎಲ್ಲರೂ ಪ್ರಶ್ನಿಸಬೇಕಿತ್ತು. ನೀವು ಯಾರಿಗೆ ಹೇಳಿದ್ರಿ ಎಂದು ನೇರವಾಗಿ ಕೇಳಬೇಕಿತ್ತು. ಆದರೆ ಹಾಗಾಗಲಿಲ್ಲ. ಹಾಗಾಗಿ ಇದು ಅನಾವಶ್ಯಕವಾಗಿ ದೊಡ್ಡದಾಗುತ್ತಿದೆ” ಎಂದು ಹೇಳಿದ್ದಾರೆ.

ಮಾರ್ಕ್ ಹಾಗೂ ೪೫ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ಹೇಳಿಕೆ ಶಿವರಾಜ್‌ಕುಮಾರ್ ಸಿನಿಮಾವನ್ನು ಉದ್ದೇಶಿಸಿದ್ದೇ ಎಂಬ ಅನುಮಾನಕ್ಕೆ ಉತ್ತರಿಸಿದ ಸುದೀಪ್, “ನಾನು ಮಾತನಾಡಿದ್ದು ಪೈರಸಿ ಬಗ್ಗೆ. ೪೫ ಸಿನಿಮಾ ಬಗ್ಗೆ ಅಲ್ಲ. ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು. ಅದರ ವಿರುದ್ಧ ಮಾತನಾಡುವ ಹಕ್ಕು ನನಗಿದೆ” ಎಂದು ಸ್ಪಷ್ಟಪಡಿಸಿದರು.

“ಕಮಲ್ ಹಾಸನ್ ವಿಚಾರ ಬಂದಾಗ ನಾನು ಶಿವಣ್ಣ ಪರ ನಿಂತಿದ್ದೇನೆ. ಅವರು ನಮ್ಮ ಹೆಮ್ಮೆ. ನನ್ನ ಮಾತು ನಿಮ್ಮ ಬಗ್ಗೆನಾ ಎಂದು ಶಿವಣ್ಣನಿಗೆ ಕೇಳಿದ್ರೆ ಅವರು ನಗುತ್ತಾರೆ” ಎಂದು ಸುದೀಪ್ ಹೇಳಿದರು.

ವಿಜಯಲಕ್ಷ್ಮೀ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನನಗೆ ನೇರವಾಗಿ ಹೇಳಿದ್ರೆ ಉತ್ತರ ಕೊಡ್ತೀನಿ. ನನ್ನ ಸಿನಿಮಾ ಕಾಪಾಡಿಕೊಳ್ಳುವುದು ನನ್ನ ಹೊಣೆ. ಜಿದ್ದಾಜಿದ್ದಿ ಮಾಡ್ತಿಲ್ಲ. ಪೈರಸಿ ಮಾಡುವವರನ್ನು ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇವೆ” ಎಂದು ಕಠಿಣ ಎಚ್ಚರಿಕೆ ನೀಡಿದರು.

ಒಟ್ಟಿನಲ್ಲಿ, ಕಿಚ್ಚ ಸುದೀಪ್ ತಮ್ಮ ಹೇಳಿಕೆಗಳನ್ನು ವೈಯಕ್ತಿಕ ಸಂಘರ್ಷವಾಗಿ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದು, ಈ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.

ಅಪಘಾತವಾಗಿ ಕೆಳಗೆ ಬಿದ್ದಿದ್ದ ವ್ಯಕ್ತಿ ಬಳಿ 80 ಸಾವಿರ ದೋಚಿದ್ದ ಇಬ್ಬರು ಖದೀಮರು ಅಂದರ್!

0

ಮೈಸೂರು:- ರಸ್ತೆ ಅಪಘಾತವಾಗಿ ಬಿದ್ದಿದ್ದವನ ಮೊಬೈಲ್‌ನಿಂದ 80 ಸಾವಿರ ದೋಚಿದ್ದ ಖದೀಮರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಮೇಶ್ ಮತ್ತು ಮನು ಬಂಧಿತರು. ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಗಣೇಶ್ ಎಂಬ ವ್ಯಕ್ತಿ ಡಿಸೆಂಬರ್ 19ರಂದು ಮೈಸೂರು ತಾಲ್ಲೂಕಿನ ಕಡಕೊಳದ ಬಳಿ ಅಪಘಾತಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ರಮೇಶ್ ಮತ್ತು ಮನು ಎಂಬ ಇಬ್ಬರು ವ್ಯಕ್ತಿಗಳು ಗಣೇಶನ ಮೊಬೈಲ್ ವಶಕ್ಕೆ ಪಡೆದು ಯುಪಿಐ ಮೂಲಕ 80,000 ರೂ. ವರ್ಗಾವಣೆ ಮಾಡಿ ಪರಾರಿಯಾಗಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಮೇಲೆ ಗಣೇಶ್ ಅವರ ಸಹೋದರ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಪರಿಶೀಲನೆ ನಡೆಸಿ, ಮೈಸೂರಿನ ಮಹದೇವಪುರ ನಿವಾಸಿಗಳಾದ ರಮೇಶ್ ಮತ್ತು ಮನು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಬಂಧಿತರಿಂದ 80,000 ರೂ. ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಮುಡಾ ಹಗರಣ: ಇಂದು ಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟ, ಸಿಎಂ ಗೆ ಸಿಗುತ್ತಾ ರಿಲೀಫ್!

0

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಹತ್ವದ ಆದೇಶ ಪ್ರಕಟಿಸಲಿದೆ.

ಲೋಕಾಯುಕ್ತ ಸಲ್ಲಿಸಿರುವ ಬಿ-ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ನ್ಯಾಯಾಲಯ ಮೆಟ್ಟಿಲೇರಿದ್ದರು. ಡಿ.19 ರಂದು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಪ್ರಕರಣದ ಕೇಸ್ ಡೈರಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಬಿ-ರಿಪೋರ್ಟ್ ಸಂಬಂಧಿತ ಹೆಚ್ಚುವರಿ ವಾದ ಇದ್ದರೆ ಅದನ್ನೂ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಮತ್ತು ದೂರುದಾರರಿಗೆ ನಿರ್ದೇಶನ ನೀಡಲಾಗಿತ್ತು. ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅಂತಿಮ ವರದಿ ಸಿದ್ಧವಾಗಿದೆ, ಆದರೆ ಅನುಮತಿ ಸಿಗದ ಕಾರಣ ಸೀಲ್ಡ್ ಕವರ್‌ನಲ್ಲಿ ಸಲ್ಲಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಪ್ರಕರಣದ ಅಂತಿಮ ವರದಿ ಇನ್ನೂ ಎರಡು ವರ್ಷಗಳ ಕಾಲ ಸಲ್ಲಿಸಲಾಗುತ್ತಿಲ್ಲ, ತನಿಖಾಧಿಕಾರಿಯನ್ನು ಕೇಳಿ ಪರಿಶೀಲನೆ ಮಾಡಬೇಕೆಂದು ಆರೋಪಿಸಿದ್ದಾರೆ. ಇಂದು ಪ್ರಕಟವಾಗುವ ಆದೇಶದಿಂದ ಸಿಎಂ ಕುಟುಂಬಕ್ಕೆ ಬಿಗ್ ರಿಲೀಫ್ ಸಿಗಬಹುದು ಅಥವಾ ದೊಡ್ಡ ಸಂಕಷ್ಟ ಎದುರಾಗಬಹುದು.

ಕಲ್ಲಿನಿಂದ ಹೊಡೆದು ಪತ್ನಿ ಹತ್ಯೆ; ಸಿನಿಮೀಯ ರೀತಿ ಹೆಂಡ್ತಿ ಕೊಂದವ ಕೆಲವೇ ಕ್ಷಣಗಳಲ್ಲಿ ಅರೆಸ್ಟ್!

0

ಬೆಂಗಳೂರು:- ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬಳಿ ಸೋಮವಾರ ಸಂಜೆ ವ್ಯಕ್ತಿಯೊಬ್ಬ ಪತ್ನಿಯನ್ನು ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ ಘಟನೆ ನಡೆದಿದೆ.

ಯಲಹಂಕದ ಬೊಮ್ಮಸಂದ್ರದ ಬಳಿ ವಾಸವಿದ್ದ ಅನಂತ್ (64) ತನ್ನ ಪತ್ನಿ ಗಾಯತ್ರಿ (50) ಅವರನ್ನು ಸೈಟ್ ನೋಡಲು ಕರೆದುಕೊಂಡು ಹೋಗಿ, ಅಲ್ಲಿಯೇ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಗಾಯತ್ರಿ ಅಪಘಾತಕ್ಕೆ ಒಳಗಾಗಿದ್ದಾರೆ ಎಂಬಂತೆ ನಾಟಕವಾಡಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಆದರೆ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಚಿಕ್ಕಜಾಲ ಟ್ರಾಫಿಕ್ ಸಬ್‌ ಇನ್ಸ್‌ಪೆಕ್ಟರ್‌ಗೆ ಇದು ಅಪಘಾತವಲ್ಲ ಎಂಬ ಅನುಮಾನ ಬಂದು, ಗಾಯಗಳ ಸ್ವರೂಪ ಪರಿಶೀಲಿಸಿದಾಗ ಕೊಲೆ ಎಂಬುದು ದೃಢಪಟ್ಟಿದೆ. ತಕ್ಷಣ ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯಾದ ಅನಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿ ಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಚಳಿಯ ಜೊತೆ ಮಂಜು ಕವಿದ ವಾತಾವರಣ; ರಾಜ್ಯದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್- ಇಂದಿನ ಹವಾಮಾನ ಹೀಗಿದೆ!

0

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಶೀತದಲೆ ತೀವ್ರವಾಗಿ ಕಾಡುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಚಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲೂ ಚಳಿಯ ಪ್ರಭಾವ ಹೆಚ್ಚಾಗಿದ್ದು, ಇಂದು ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ವಿಜಯಪುರದಲ್ಲಿ 6.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ 20 ವರ್ಷಗಳಲ್ಲಿ ಮೂರನೇ ಅತಿ ಕಡಿಮೆ ತಾಪಮಾನವಾಗಿದೆ. ಆದರೆ ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಇಂದು ಉತ್ತರ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇದ್ದರೆ, ಇಂದು ಕಲಬುರಗಿ ಹಾಗೂ ಬೀದರ್‌ಗೆ ಮಾತ್ರ ಎಚ್ಚರಿಕೆ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣದಲ್ಲಿ ತೀವ್ರ ಏರುಪೇರು ಕಂಡುಬರುತ್ತಿದ್ದು, ಚಳಿ ಹಾಗೂ ಮಂಜಿನ ವಾತಾವರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಬೆಚ್ಚನೆಯ ಉಡುಪು ಧರಿಸುವುದು ಹಾಗೂ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಇಂದು ಬೆಂಗಳೂರಿನ ಕನಿಷ್ಠ ತಾಪಮಾನ 15°C ಹಾಗೂ ಗರಿಷ್ಠ 27°C ಇರಲಿದೆ ಎಂದು ತಿಳಿಸಲಾಗಿದೆ. ತೀವ್ರ ಚಳಿಯ ಪರಿಣಾಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಬಿಸಿ ಆಹಾರ ಸೇವನೆ, ಬೆಚ್ಚಗಿನ ಹೊದಿಕೆ ಬಳಕೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಒಣಹವೆಯ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ–ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಒಣಹವೆ ಮುಂದುವರಿಯಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಇಂದೂ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ದುರಂತ: ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವು!

0

ಮಂಡ್ಯ:- ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ಜರುಗಿದೆ.

ಪ್ರಹ್ಲಾದ್ (21) ಮೃತಪಟ್ಟ ಯುವಕ. ಈತ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ. ಪ್ರಹ್ಲಾದ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದ. ಕಾವೇರಿ ನದಿಯಲ್ಲಿ ಈಜಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ನುರಿತ ಈಜುಗಾರರ ಸಹಾಯದಿಂದ ಯುವಕನ ಮೃತದೇಹವನ್ನು ಹೊರತೆಗೆಯಲಾಯಿತು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ: ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಹೊಂದುವುದು ಅವಶ್ಯಕ. ಈ ದಿಸೆಯಲ್ಲಿ ಪೋಷಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿಸುವುದಕ್ಕೆ ಅವರಿಗೆ ಗುಣಮಟ್ಟದ ಶಿಕ್ಷಣ ಸಿಗುವ ಅವಕಾಶವನ್ನು ಕಲ್ಪಿಸಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಅವರು ಶಿರಹಟ್ಟಿಯ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ದೈನಂದಿನ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು. ಅವರಿಗೆ ಮನೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಅಂದಾಗ ಮಕ್ಕಳು ಗುಣಮಟ್ಟದ ಶಿಕ್ಷಣ ಹೊಂದಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿಯೂ ಸಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಲು ಮುಂದಾಗಬೇಕೆಂದು ಹೇಳಿದರು.

ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಫಾದರ್ ಅಭಿನವ ಪಾಲ್, ಹುಬ್ಬಳ್ಳಿಯ ರಾಜು ಮಳಗೇರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಘಂಟಿ, ಅಜ್ಜು ಪಾಟೀಲ, ಮಾಬುಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ಮುತ್ತು ಮಜ್ಜಗಿ, ಅಕ್ಬರಸಾಬ ಯಾದಗಿರಿ, ಎಚ್.ಆರ್. ಬೆನಹಾಳ, ದೇವಪ್ಪ ಬಟ್ಟೂರ, ರಾಜಗೋಪಾಲ ಕಡ್ಲಿಕೊಪ್ಪ, ಸಂಸ್ಥೆಯ ಮುಖ್ಯಸ್ಥ ಎಸ್.ಎಸ್. ಸಾಮ್ರಾಟ್ ಮತ್ತು ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಾರಕ ಪೋಲಿಯೋವನ್ನು ತಡೆಗಟ್ಟಿ: ತಹಸೀಲ್ದಾರ ಕೆ.ರಾಘವೇಂದ್ರ ರಾವ್

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ದೇಶವನ್ನು ಪೋಲಿಯೋ ಮುಕ್ತವನ್ನಾಗಿಸಲು 1994ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಅಂಗವಿಕಲತೆಯೊಂದಿಗೆ ದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು ಎಂದು ತಹಸೀಲ್ದಾರ ಕೆ.ರಾಘವೇಂದ್ರ ರಾವ್ ಹೇಳಿದರು.

ಅವರು ರವಿವಾರ ಶಿರಹಟ್ಟಿಯ ತಾಲ್ಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೋಲಿಯೋ ದಿನದ ಅಂಗವಾಗಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಿಕೊಳ್ಳಬೇಕು. ಅಭಿಯಾನವನ್ನು ಯಶಸ್ವಿಗೊಳಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗಿದ್ದು, ಮಕ್ಕಳನ್ನು ಪೋಲಿಯೋದಿಂದ ರಕ್ಷಿಸುವುದಕ್ಕಾಗಿ ನಿರ್ಮಿಸಲಾದ ಬೂತ್‌ಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ಡಾ. ಪವನ ಫಾಯದೆ, ಹುರುಳಿಕುಪ್ಪಿ ಮುಂತಾದವರು ಉಪಸ್ಥಿತರಿದ್ದರು.

ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಪ್ರಥಮಾದ್ಯತೆಯಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಮಕ್ಕಳ ಸಾರಿಗೆ ಸುರಕ್ಷತೆಯೇ ಶಿಕ್ಷಣ ಸಂಸ್ಥೆಗಳ ಪ್ರಥಮಾದ್ಯತೆಯಾಗಿರಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸ್ಪಷ್ಟಪಡಿಸಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಮಕ್ಕಳ ಸುರಕ್ಷತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ ವಾಹನಗಳು ಸರ್ಕಾರದ ನಿಯಮಾವಳಿಗಳಂತೆ ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು. ಪ್ರತಿಯೊಂದು ಶಾಲಾ ಬಸ್‌ಗಳಲ್ಲಿ ಅಗತ್ಯ ದಾಖಲೆಗಳು, ವಾಹನದ ತಾಂತ್ರಿಕ ಸ್ಥಿತಿ, ನಿಯಮಿತ ಫಿಟ್ನೆಸ್ ಪ್ರಮಾಣಪತ್ರ, ವೇಗ ನಿಯಂತ್ರಕ ಸಾಧನ, ಅಗ್ನಿಶಾಮಕ ಉಪಕರಣಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಆದೇಶಿಸಿದರು.

ಶಾಲಾ ವಾಹನ ಚಾಲಕರಿಗೆ ಸೂಕ್ತ ಚಾಲನಾ ಪರವಾನಗಿ, ಅನುಭವ ಹಾಗೂ ಮಕ್ಕಳೊಂದಿಗೆ ಸ್ನೇಹಪರ ವರ್ತನೆ ಅಗತ್ಯವಿದೆ. ಶಾಲಾ ಬಸ್‌ಗಳಲ್ಲಿ ನಿರೀಕ್ಷಕರ (ಅಟೆಂಡರ್) ನೇಮಕ ಕಡ್ಡಾಯವಾಗಿದ್ದು, ಮಕ್ಕಳು ವಾಹನವನ್ನು ಏರುವ-ಇಳಿಯುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರಲ್ಲದೆ, ಯಾವುದೇ ರೀತಿಯ ಅತಿವೇಗ, ಮದ್ಯಪಾನ ಮಾಡಿ ಚಾಲನೆ ಅಥವಾ ನಿರ್ಲಕ್ಷ್ಯಕ್ಕೆ ಆಸ್ಪದವಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸ್ಪಷ್ಟಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಜಿಪಿಎಸ್ ವ್ಯವಸ್ಥೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಶಾಲಾ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಲೋಪ ಕಂಡುಬ ರದಲ್ಲಿ ಸಂಬಂಧಪಟ್ಟ ಶಾಲಾ ಆಡಳಿತದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರವಿ ದಂಡಿನ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿನ ಶಾಲಾ ವಾಹನಗಳ ಸಂಪೂರ್ಣ ಸುರಕ್ಷತೆಗೆ ಪ್ರಥಮಾದ್ಯತೆ ನೀಡಬೇಕಾಗಿದೆ. ಪ್ರತಿ ಮಗುವಿನ ಜೀವವೂ ಅತ್ಯಮೂಲ್ಯ. ನಿರ್ಲಕ್ಷ್ಯದ ವಾಹನ ಚಾಲನೆ ಹಾಗೂ ವರ್ತನೆ ಸಹಿಸಲಾಗದು. ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮ್ಮ ಸಂಸ್ಥೆಯಲ್ಲಿನ ಮಕ್ಕಳ ಆರೋಗ್ಯ ಹಾಗೂ ಸೂಕ್ತ ಸಾರಿಗೆ ಸುರಕ್ಷತೆಗೆ ಆದ್ಯತೆ ವಹಿಸುವ ಮೂಲಕ ನಾಡಿನ ಮುಂದಿನ ಪ್ರಜೆಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸೋಣ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಅವರುಗಳು ಮಕ್ಕಳ ಸುರಕ್ಷಿತ ಸಾರಿಗೆ ಕುರಿತು ಶಾಲಾ ಸಂಸ್ಥೆಯ ಮುಖ್ಯಸ್ಥರು ವಹಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಸಭೆಯಲ್ಲಿ ಪ್ರೊ. ಕೆ.ಎಚ್. ಬೇಲೂರು ಸೇರಿದಂತೆ ಶಿಕ್ಷಣ ಇಲಾಖೆ, ಸಾರಿಗೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಅಟೋಗಳ ಮೂಲಕ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಸಂದರ್ಭದಲ್ಲಿ ಅಟೋ ಚಾಲಕರು ನಿಗದಿತ ಸಂಖ್ಯೆಗೆ ಅಧಿಕ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಸುರಕ್ಷತೆಗೆ ಕ್ರಮ ವಹಿಸಿ ನಿಧಾನವಾಗಿ ಮಕ್ಕಳನ್ನು ಶಾಲೆಗಳಿಗೆ ತಲುಪಿಸುವ ಹಾಗೂ ಮನೆಗೆ ಕರೆದೊಯ್ಯುವ ಜವಾಬ್ದಾರಿ ವಾಹನ ಚಾಲಕರದ್ದಾಗಿರುತ್ತದೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದರು.

error: Content is protected !!