Home Blog Page 288

ಕಾವೇರಿ ನದಿಯಲ್ಲಿ ಈಜಲು ಹೋಗಿ ದುರಂತ: ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವು!

0

ಮಂಡ್ಯ:- ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ಜರುಗಿದೆ.

ಪ್ರಹ್ಲಾದ್ (21) ಮೃತಪಟ್ಟ ಯುವಕ. ಈತ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ. ಪ್ರಹ್ಲಾದ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದ. ಕಾವೇರಿ ನದಿಯಲ್ಲಿ ಈಜಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ನುರಿತ ಈಜುಗಾರರ ಸಹಾಯದಿಂದ ಯುವಕನ ಮೃತದೇಹವನ್ನು ಹೊರತೆಗೆಯಲಾಯಿತು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ: ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಹೊಂದುವುದು ಅವಶ್ಯಕ. ಈ ದಿಸೆಯಲ್ಲಿ ಪೋಷಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿಸುವುದಕ್ಕೆ ಅವರಿಗೆ ಗುಣಮಟ್ಟದ ಶಿಕ್ಷಣ ಸಿಗುವ ಅವಕಾಶವನ್ನು ಕಲ್ಪಿಸಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಅವರು ಶಿರಹಟ್ಟಿಯ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ದೈನಂದಿನ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು. ಅವರಿಗೆ ಮನೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಅಂದಾಗ ಮಕ್ಕಳು ಗುಣಮಟ್ಟದ ಶಿಕ್ಷಣ ಹೊಂದಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿಯೂ ಸಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಲು ಮುಂದಾಗಬೇಕೆಂದು ಹೇಳಿದರು.

ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಫಾದರ್ ಅಭಿನವ ಪಾಲ್, ಹುಬ್ಬಳ್ಳಿಯ ರಾಜು ಮಳಗೇರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಘಂಟಿ, ಅಜ್ಜು ಪಾಟೀಲ, ಮಾಬುಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ಮುತ್ತು ಮಜ್ಜಗಿ, ಅಕ್ಬರಸಾಬ ಯಾದಗಿರಿ, ಎಚ್.ಆರ್. ಬೆನಹಾಳ, ದೇವಪ್ಪ ಬಟ್ಟೂರ, ರಾಜಗೋಪಾಲ ಕಡ್ಲಿಕೊಪ್ಪ, ಸಂಸ್ಥೆಯ ಮುಖ್ಯಸ್ಥ ಎಸ್.ಎಸ್. ಸಾಮ್ರಾಟ್ ಮತ್ತು ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಾರಕ ಪೋಲಿಯೋವನ್ನು ತಡೆಗಟ್ಟಿ: ತಹಸೀಲ್ದಾರ ಕೆ.ರಾಘವೇಂದ್ರ ರಾವ್

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ದೇಶವನ್ನು ಪೋಲಿಯೋ ಮುಕ್ತವನ್ನಾಗಿಸಲು 1994ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಅಂಗವಿಕಲತೆಯೊಂದಿಗೆ ದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು ಎಂದು ತಹಸೀಲ್ದಾರ ಕೆ.ರಾಘವೇಂದ್ರ ರಾವ್ ಹೇಳಿದರು.

ಅವರು ರವಿವಾರ ಶಿರಹಟ್ಟಿಯ ತಾಲ್ಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೋಲಿಯೋ ದಿನದ ಅಂಗವಾಗಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಿಕೊಳ್ಳಬೇಕು. ಅಭಿಯಾನವನ್ನು ಯಶಸ್ವಿಗೊಳಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗಿದ್ದು, ಮಕ್ಕಳನ್ನು ಪೋಲಿಯೋದಿಂದ ರಕ್ಷಿಸುವುದಕ್ಕಾಗಿ ನಿರ್ಮಿಸಲಾದ ಬೂತ್‌ಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ಡಾ. ಪವನ ಫಾಯದೆ, ಹುರುಳಿಕುಪ್ಪಿ ಮುಂತಾದವರು ಉಪಸ್ಥಿತರಿದ್ದರು.

ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಪ್ರಥಮಾದ್ಯತೆಯಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಮಕ್ಕಳ ಸಾರಿಗೆ ಸುರಕ್ಷತೆಯೇ ಶಿಕ್ಷಣ ಸಂಸ್ಥೆಗಳ ಪ್ರಥಮಾದ್ಯತೆಯಾಗಿರಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸ್ಪಷ್ಟಪಡಿಸಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಮಕ್ಕಳ ಸುರಕ್ಷತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ ವಾಹನಗಳು ಸರ್ಕಾರದ ನಿಯಮಾವಳಿಗಳಂತೆ ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು. ಪ್ರತಿಯೊಂದು ಶಾಲಾ ಬಸ್‌ಗಳಲ್ಲಿ ಅಗತ್ಯ ದಾಖಲೆಗಳು, ವಾಹನದ ತಾಂತ್ರಿಕ ಸ್ಥಿತಿ, ನಿಯಮಿತ ಫಿಟ್ನೆಸ್ ಪ್ರಮಾಣಪತ್ರ, ವೇಗ ನಿಯಂತ್ರಕ ಸಾಧನ, ಅಗ್ನಿಶಾಮಕ ಉಪಕರಣಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಆದೇಶಿಸಿದರು.

ಶಾಲಾ ವಾಹನ ಚಾಲಕರಿಗೆ ಸೂಕ್ತ ಚಾಲನಾ ಪರವಾನಗಿ, ಅನುಭವ ಹಾಗೂ ಮಕ್ಕಳೊಂದಿಗೆ ಸ್ನೇಹಪರ ವರ್ತನೆ ಅಗತ್ಯವಿದೆ. ಶಾಲಾ ಬಸ್‌ಗಳಲ್ಲಿ ನಿರೀಕ್ಷಕರ (ಅಟೆಂಡರ್) ನೇಮಕ ಕಡ್ಡಾಯವಾಗಿದ್ದು, ಮಕ್ಕಳು ವಾಹನವನ್ನು ಏರುವ-ಇಳಿಯುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರಲ್ಲದೆ, ಯಾವುದೇ ರೀತಿಯ ಅತಿವೇಗ, ಮದ್ಯಪಾನ ಮಾಡಿ ಚಾಲನೆ ಅಥವಾ ನಿರ್ಲಕ್ಷ್ಯಕ್ಕೆ ಆಸ್ಪದವಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸ್ಪಷ್ಟಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಜಿಪಿಎಸ್ ವ್ಯವಸ್ಥೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಶಾಲಾ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಲೋಪ ಕಂಡುಬ ರದಲ್ಲಿ ಸಂಬಂಧಪಟ್ಟ ಶಾಲಾ ಆಡಳಿತದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರವಿ ದಂಡಿನ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿನ ಶಾಲಾ ವಾಹನಗಳ ಸಂಪೂರ್ಣ ಸುರಕ್ಷತೆಗೆ ಪ್ರಥಮಾದ್ಯತೆ ನೀಡಬೇಕಾಗಿದೆ. ಪ್ರತಿ ಮಗುವಿನ ಜೀವವೂ ಅತ್ಯಮೂಲ್ಯ. ನಿರ್ಲಕ್ಷ್ಯದ ವಾಹನ ಚಾಲನೆ ಹಾಗೂ ವರ್ತನೆ ಸಹಿಸಲಾಗದು. ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮ್ಮ ಸಂಸ್ಥೆಯಲ್ಲಿನ ಮಕ್ಕಳ ಆರೋಗ್ಯ ಹಾಗೂ ಸೂಕ್ತ ಸಾರಿಗೆ ಸುರಕ್ಷತೆಗೆ ಆದ್ಯತೆ ವಹಿಸುವ ಮೂಲಕ ನಾಡಿನ ಮುಂದಿನ ಪ್ರಜೆಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸೋಣ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಅವರುಗಳು ಮಕ್ಕಳ ಸುರಕ್ಷಿತ ಸಾರಿಗೆ ಕುರಿತು ಶಾಲಾ ಸಂಸ್ಥೆಯ ಮುಖ್ಯಸ್ಥರು ವಹಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಸಭೆಯಲ್ಲಿ ಪ್ರೊ. ಕೆ.ಎಚ್. ಬೇಲೂರು ಸೇರಿದಂತೆ ಶಿಕ್ಷಣ ಇಲಾಖೆ, ಸಾರಿಗೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಅಟೋಗಳ ಮೂಲಕ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಸಂದರ್ಭದಲ್ಲಿ ಅಟೋ ಚಾಲಕರು ನಿಗದಿತ ಸಂಖ್ಯೆಗೆ ಅಧಿಕ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಸುರಕ್ಷತೆಗೆ ಕ್ರಮ ವಹಿಸಿ ನಿಧಾನವಾಗಿ ಮಕ್ಕಳನ್ನು ಶಾಲೆಗಳಿಗೆ ತಲುಪಿಸುವ ಹಾಗೂ ಮನೆಗೆ ಕರೆದೊಯ್ಯುವ ಜವಾಬ್ದಾರಿ ವಾಹನ ಚಾಲಕರದ್ದಾಗಿರುತ್ತದೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದರು.

ಪೋಲಿಯೋ ವಿರುದ್ಧದ ಗೆಲುವನ್ನು ಮುಂದುವರೆಸೋಣ: ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ, ನೆರೆ ದೇಶಗಳಲ್ಲಿ ಪೋಲಿಯೋ ಇನ್ನೂ ಜೀವಂತ ಇರುವುದರಿಂದ ನಮ್ಮ ದೇಶದಲ್ಲಿಯೂ ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ನಮ್ಮ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ದುಂಡಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಜರುಗಿದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಿಗೆ ಎರಡು ಪೋಲಿಯೋ ಹನಿ ಹಾಕಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೋಲಿಯೋ ವಿರುದ್ಧ ಭಾರತವು ಸಾಧಿಸಿರುವ ಗೆಲುವನ್ನು ನಾವೆಲ್ಲರೂ ಮುಂದುವರಿಸಲು ಕೈಜೋಡಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿಯಲ್ಲಿ ನಮ್ಮ ಜಿಲ್ಲೆಯ ಎಲ್ಲಾ ತಾಯಂದಿರು ಐದು ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಬಂದು ತಪ್ಪದೇ ಪೋಲಿಯೋ ಹನಿ ಹಾಕಿಸಿಕೊಳ್ಳಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡ್ರ, ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಜೇಂದ್ರ, ಜಿಲ್ಲಾ ಐ.ಎಮ್.ಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಡಾ. ಅರುಂಧತಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ, ಡಾ. ಶೇಖರ ಸಜ್ಜನ, ರೂಪಸೇನ ಚವ್ಹಾಣ, ಸುರೇಶ್ ಕುಂಬಾರ, ರಾಜೇಂದ್ರ ಗಡಾದ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೆಶಕಿ ಹಾಗೂ ರಾಜ್ಯ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ. ನಂದಿನಿ ಬಿ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಅಭಿಯಾನದ ರೂಪದಲ್ಲಿ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಲಾಗುತ್ತಿದೆ. ಶಾಶ್ವತ ಅಂಗವಿಕಲತೆ ತರಬಲ್ಲ ಪೋಲಿಯೋವನ್ನು ಲಸಿಕೆಯ ಮೂಲಕ ಪ್ರತಿರೋಧಿಸೋಣ ಎಂದು ತಿಳಿಸಿದರು.

ಸಂತರ ದಾರಿಯಲ್ಲಿ ನಡೆದರೆ ಬದುಕು ಸಾರ್ಥಕ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು ಮತ್ತು ಆಚರಣೆ ಮುಖ್ಯ. ಚಿಂತೆ ಚಿಂತನಗೊಂಡಾಗ ಬಾಳು ವಿಕಾಸಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲಾಗದು. ಶ್ರದ್ಧಾವಂತರಾದ ಭಾರತೀಯರು ಮಣ್ಣು, ನೀರು, ಗಾಳಿ, ಬೆಂಕಿ, ಕಲ್ಲುಗಳಲ್ಲಿ ದೇವರನ್ನು ಕಂಡು ಪೂಜಿಸಿದವರು. ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ. ನಂಬಿಕೆ ವಿಶ್ವಾಸಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಮನಸ್ಸೆಂಬ ಚಂಚಲ ಅಲೆಗಳ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವಾಗಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಮನುಷ್ಯನಿಗೆ ಏನೆಲ್ಲ ಸೌಲಭ್ಯಗಳಿದ್ದರೂ ಬದುಕು ಹರ್ಷದಾಯಕವಾಗಿಲ್ಲ. ಜ್ಯೋತಿ ಉರಿದು ಬೆಳಕು ಕೊಡುವಂತೆ ಸಂತ ಮಹಾಂತರು ಬದುಕಿ ಬಾಳುವ ಜನ ಸಮುದಾಯಕ್ಕೆ ಆದರ್ಶ ವಿಚಾರ ಧಾರೆಗಳನ್ನು ಕೊಟ್ಟಿದ್ದಾರೆ. ಅವರು ತೋರಿದ ದಾರಿಯಲ್ಲಿ ನಡೆದರೆ ಸಾಕು, ಜೀವನ ಸಾರ್ಥಕಗೊಳ್ಳುತ್ತದೆ ಎಂದರು.

ದಿನದರ್ಶಿಕೆ ಬಿಡುಗಡೆಗೊಳಿಸಿದ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ ಮಾತನಾಡಿ, ಸತ್ಕಾರ್ಯಗಳ ಮೂಲಕ ಮನುಷ್ಯ ಮುನ್ನಡೆದಾಗ ಎಲ್ಲೆಡೆ ಶಾಂತಿ-ಸಮಾಧಾನ ನೆಲೆಗೊಳ್ಳಲು ಸಾಧ್ಯ. ಸತ್ಯ ಶುದ್ಧ ಕಾಯಕದಿಂದ ಬದುಕಿಗೆ ನಿಜವಾದ ಬೆಲೆ ಬರುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳ ಶ್ರಮ ಸಂಚಾರ ಮತ್ತು ಬೋಧಾಮೃತ ನಮ್ಮೆಲ್ಲರ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಡಾ. ಎಸ್.ಪರಮೇಶ, ಟಿ.ಬಿ. ಹರೀಶ, ಎನ್.ಬಿ. ಪ್ರದೀಪಕುಮಾರ, ನಿಖಿಲ ರಾಜಣ್ಣ, ಸಿ.ಪಿ. ವಿಜಯ, ಎನ್.ಸಿ. ಸಚಿನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೆ.ಬಿ. ಜಯಣ್ಣ, ಕೆ.ಜಿ. ಜಗದೀಶ ಮತ್ತು ಶಂಕರ್ ಮೋಹನ್ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯರು, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.

ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಆರ್. ಸದಾಶಿವಯ್ಯ ಸ್ವಾಗತಿಸಿದರು. ಸಹಕಾರ್ಯದರ್ಶಿ ಜಿ.ಎಸ್. ಸಿದ್ಧರಾಜು ನಿರೂಪಣೆ ಮಾಡಿದರು.

ಸಮಾರಂಭ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಮಾತನಾಡಿ, ಸಂಘರ್ಷದಿಂದ ಕೂಡಿದ ಮನುಷ್ಯನ ಬಾಳಿಗೆ ನೆಮ್ಮದಿ, ಶಾಂತಿ ದೊರಕಲು ಆಧ್ಯಾತ್ಮ ಚಿಂತನಗಳು ಅವಶ್ಯಕ. ಭಾರತೀಯ ಉತ್ಕೃಷ್ಟ ಸಂಸ್ಕೃತಿಯನ್ನು ನಾಡಿನ ಮಠಗಳು ಬೆಳೆಸುತ್ತಾ ಬಂದಿವೆ. ಶ್ರೀ ರಂಭಾಪುರಿ ಪೀಠದ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ದೂರದೃಷ್ಟಿ ಮತ್ತು ವಿಶಾಲ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತಿವೆ. ಇಂದಿನ ಜಗದ್ಗುರುಗಳು ನಿರಂತರ ಶ್ರಮಿಸಿ ನಾಡು-ನುಡಿ-ಧರ್ಮ ಕಟ್ಟಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಸಂತೋಷ ಉಂಟುಮಾಡುತ್ತದೆ ಎಂದರು.

ಬಿಹಾರ ಸಿಎಂ ನಿತೀಶ್‌ಕುಮಾರ್ ಕ್ಷಮೆ ಕೇಳಲಿ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳಾ ವೈದ್ಯೆಯೊಬ್ಬರ ಹಿಜಾಬ್‌ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಎಳೆದಿದ್ದು ಅತ್ಯಂತ ಖಂಡನೀಯ. ಈ ಕೃತ್ಯವು ಮಹಿಳೆಯರಿಗೆ ಮಾಡಿದ ಅವಮಾನವಾಗಿದ್ದು, ಸಿಎಂ ಬೇಷರತ್ತಾಗಿ ಕ್ಷಮೆ ಯಾಚಿಸಬೇಕೆಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ, ವಕೀಲರಾದ ದಾವಲಸಾಬ ತಾಳಿಕೋಟಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ನಂಬಿಕೆ, ಘನತೆ ಮತ್ತು ಸ್ವಾಭಿಮಾನವನ್ನು ಪ್ರತಿನಿಧಿಸುತ್ತದೆ. ಸಾರ್ವಜನಿಕವಾಗಿ ಮಹಿಳೆಯ ಮುಸುಕನ್ನು ತೆಗೆದುಹಾಕುವುದು, ಧಾರ್ಮಿಕ ಉಡುಪನ್ನು ಅವಮಾನಿಸುವುದು ಅವರ ನೈಜ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ.

ಈ ದೇಶದ ಸಂಸ್ಕೃತಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುವುದಾಗಿದೆ. ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯಪುರದಲ್ಲಿ ತೀವ್ರಗೊಂಡ ಚಳಿ: ಶಾಲೆ ಸಮಯ ಬದಲಾವಣೆ, ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತಿಲ್ಲ!

0

ವಿಜಯಪುರ:- ವಿಜಯಪುರದಲ್ಲಿ ಡಿಸೆಂಬರ್​​ 22ರಂತೆ ರಾಜ್ಯದ ಇತರೆ ಪ್ರದೇಶಗಳಿಗಿಂತ ಚಳಿ ಹೆಚ್ಚು ಪ್ರಮಾಣದಲ್ಲಿದೆ.

ದಾಖಲೆ ಮಟ್ಟದ ತಾಪಮಾನದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕೆ. ಆನಂದ ಡಿಸೆಂಬರ್ 31ರವರೆಗೆ ಎಲ್ಲಾ ಶಾಲೆಗಳ ಆರಂಭ ಸಮಯ ಬೆಳಿಗ್ಗೆ 10 ಗಂಟೆಗೆ ಬದಲಾವಣೆ ಮಾಡುವಂತೆ ಆದೇಶ ಜಾರಿ ಮಾಡಿದ್ದಾರೆ. ಆದರೆ ಎರಡು ದಿನವಾದರೂ ಅನೇಕ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಈ ಆದೇಶ ಪಾಲನೆ ಮಾಡುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತೀವ್ರ ಚಳಿಯು ಮಕ್ಕಳ, ವೃದ್ಧರ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುವವರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಆದೇಶ ಪಾಲನೆಯಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು ಎಂದು ಅವರು ಚಿಂತೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 1,939 ಸರ್ಕಾರಿ, 347 ಅನುದಾನಿತ ಮತ್ತು 1,158 ಖಾಸಗಿ ಶಾಲೆಗಳಿದ್ದು, ವಿದ್ಯಾಥಿಗಳಿಗೆ ತೀವ್ರ ಚಳಿ ನಡುವೆ ಸುರಕ್ಷಿತ ಆರಂಭಿಕ ಸಮಯ ನೀಡುವುದು ಅಗತ್ಯವಾಗಿದೆ.

ಡಿಡಿಪಿಐ ವೀರಯ್ಯ ಸಾಲೀಮಠರಂತೆ, ಆದೇಶ ತಕ್ಷಣವೇ ಪಾಲನೆಗೆ ತರುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಆದ್ದರಿಂದ ಎಲ್ಲಾ ಶಾಲೆಗಳು ಡಿಸಿ ಆದೇಶದಂತೆ ಬೆಳಿಗ್ಗೆ 10 ಗಂಟೆಗೆ ಆರಂಭಿಸುವುದು ಅಗತ್ಯವೆಂದು ಪೋಷಕರು ಮತ್ತು ಅಧಿಕಾರಿಗಳು ಒಪ್ಪಿದ್ದಾರೆ.

ಕೊಪ್ಪಳ| ಮೊದಲನೇ ಮಹಡಿಯಿಂದ ಬಿದ್ದ ಐದು ವರ್ಷದ ಬಾಲಕ ಬದುಕಿದ್ದೇ ಪವಾಡ!

0

ಕೊಪ್ಪಳ:- ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಐದು ವರ್ಷ ಬಾಲಕ ಮನೆಯ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವಂತಹ ಘಟನೆ ಜರುಗಿದೆ.

ಸಾವು ಗೆದ್ದುಬಂದ ಬಾಲಕನನ್ನು ಮಹಮ್ಮದ್ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಐದು ವರ್ಷದ ಬಾಲಕ ಮಹಮ್ಮದ್ ಹ್ಯಾರಿಸ್ ನಿನ್ನೆ ಮಧ್ಯಾಹ್ನ ಮೊದಲನೇ ಮಹಡಿಯಲ್ಲಿ ಪೇಪರ್​ನಿಂದ ಪಾರಿವಾಳ ಮಾಡಿ ಆಟವಾಡುತ್ತಿದ್ದ. ಅದನ್ನು ಗಾಳಿ ತೂರಿ ಹಿಡಿಯಲು ಹೋದಾಗ ಮೊದಲನೇ ಮಹಡಿಯಿಂದ ಕೆಳಗಡೆ ಬಿದ್ದಿದ್ದಾನೆ. ಮಹಮ್ಮದ್ ಕೆಳಗಡೆ ಬಿಳ್ಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಮನೆಯ ಕೆಳಗಡೆ ಮಹಮ್ಮದ್ ಹ್ಯಾರಿಸ್ ಸಹೋದರಿ ಕೂಡ ಆಟವಾಡುತ್ತಿದ್ದು, ಮಹಮ್ಮದ್ ಬಿದ್ದ ತಕ್ಷಣ ಮೇಲೆ ಎತ್ತಿದ್ದಾಳೆ. ಒಳಗಡೆಯಿಂದ ಪೋಷಕರು ಕಿರುಚುತ್ತಾ ಓಡೋಡಿ ಬಂದಿದ್ದಾರೆ. ಕೆಳಗಡೆ ಬಿದ್ದ ಮಗುವನ್ನ ಕೂಡಲೇ ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಹಮ್ಮದ್​​ಗೆ 2 ಗಂಟೆಯೊಳಗೆ ಆಪರೇಷನ್ ಮಾಡಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಪರಿಸರ ಉಳಿಸಲು ಸಾರ್ವಜನಿಕರ ಸಹಕಾರ ಮುಖ್ಯ: ಶಿವಕುಮಾರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಡಂಬಳ: ಜನತೆಯ ಸಹಕಾರ ಇದ್ದಾಗ ಪರಿಸರವನ್ನು ಉಳಿಸಿ-ಬೆಳೆಸಿ, ಅರಣ್ಯ ಅಪಾರವಾಗಿ ಬೆಳೆಯಲು ಸಾಧ್ಯ ಎಂದು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ನುಡಿದರು.

ಡಂಬಳ ಹೋಬಳಿಯ ಡೋಣಿ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗದಗ ಪ್ರಾದೇಶಿಕ ವಿಭಾಗ, ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ವಾಲಿಬಾಲ್ ಪಂದ್ಯಾವಳಿ, ಕಾಡ್ಗಿಚ್ಚು ತಡೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ರಾಜ್ಯದ 7 ಕೋಟಿ ಕನ್ನಡಿಗರು ಕಪ್ಪತ್ತಗುಡ್ಡದತ್ತ ನೋಡುತ್ತಿದ್ದಾರೆ. ಕಪ್ಪತ್ತಗುಡ್ಡದ ಸಸ್ಯ ಸಂಪತ್ತನ್ನು ಸುತ್ತಮುತ್ತಲಿನ ಗ್ರಾಮಸ್ಥರು ರಕ್ಷಕರಂತೆ ಕಾಪಾಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡರ, ಎಸ್.ಸಿ ಘಟಕದ ಅಧ್ಯಕ್ಷ ಸೋಮಣ್ಣ ಹೈತಾಪುರ, ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಭರಮಪ್ಪ ಕಿಲಾರಿ ಮಾತನಾಡಿ, ಗಿಡಗಳ, ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ವಾಲಿಬಾಲ್ ಕ್ರೀಡಾಕೂಟದ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿರಿಯ ಅರಣ್ಯ ಅಧಿಕಾರಿಗಳ, ಈ ಭಾಗದ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಮತ್ತು ಸಿಬ್ಬಂದಿ ವರ್ಗದವರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಯುವ ಕವಿ, ಲೇಖಕ ಸಿದ್ದು ಸತ್ಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಂಬಳ ಹೋಬಳಿಯ ಗ್ರಾಮಗಳ 485 ಕುರಿ ಕಾಯುವವರಿಗೆ ಹೊಟ್ಟೆ ಚೀಲ, ಬ್ಯಾಟರಿ, ಸ್ಟೀಲ್ ನೀರಿನ ಬಾಟಲ್ ವಿತರಿಸಲಾಯಿತು. ಕೃಷಿಯಲ್ಲಿ ಅರಣ್ಯ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 35ಕ್ಕೂ ಅಧಿಕ ಸಾಧಕರಿಗೆ, ಯೋಗಸನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಂಡರಗಿ ತಾಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಕಪ್ಪತ್ತಗುಡ್ಡದಿಂದ ಆಗುವ ಪರಿಸರದ ಲಾಭಗಳ ಕುರಿತಾದ ಮಾಹಿತಿ ಬೋರ್ಡ್ ವಿತರಿಸಲಾಯಿತು. ಬೈಕ್, ಕಾರ್‌ಗಳಿಗೆ ಕಪ್ಪತ್ತಗುಡ್ಡದ ಹೆಸರಿನಲ್ಲಿ ಪ್ರಾಣಿಗಳ ಭಾವಚಿತ್ರವುಳ್ಳ ಸ್ಟಿಕ್ಕರ್, ಭಿತ್ತಿಪತ್ರ ವಿತರಣೆ ಮಾಡಲಾಯಿತು. ಖ್ಯಾತ ಕಲಾವಿದ ನಿಂಗಪ್ಪ ಗುಡ್ಡದ ಸಂಗಡಿಗರು ಕಪ್ಪತ್ತಗುಡ್ಡದ ಕುರಿತು ಜಾನಪದ ಹಾಡುಗಳನ್ನು ಹಾಡಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ವೇ.ಮೂ. ಕುಮಾರಸ್ವಾಮಿ ಮಠದ, ಗ್ಯಾರಂಟಿ ಸಮಿತಿ ಸದಸ್ಯರಾದ ರಾಮಣ್ಣ ಮೇಗಲಮನಿ, ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಅಳವಂಡಿ, ಲಕ್ಷ್ಮೀ ಸೊಗಟಿ, ಕಾಶಪ್ಪ ಅಳವಂಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ ಪವಾರ, ಗೌಸಿದ್ಧಯ್ಯ ಹಳ್ಳಿಕೇರಿಮಠ, ನಿಂಗನಗೌಡ ಹರ್ತಿ, ಹನಮಪ್ಪ ಗೋಡಿ, ಕಾಶಪ್ಪ ಹೊನ್ನೂರ, ಸಿದ್ಧನಗೌಡ ಪಾಟೀಲ, ಸತ್ಯಪ್ಪ ಚಲವಾದಿ, ಮಹಾದೇವಪ್ಪ ಗುಂಜಿ, ಭರಮಗೌಡ ಪಾಟೀಲ, ಈಶಪ್ಪ ಓಲಿ, ಮಳ್ಳಪ್ಪ ಜೋಂಡಿ ಸೇರಿದಂತೆ ಯುವಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. ಅರಣ್ಯಾಧಿಕಾರಿ ಮೈಲಾರಪ್ಪ ಮಡಿವಾಳರ ವಂದಿಸಿದರು.

ಮುಂಡರಗಿ ಆರ್‌ಎಫ್‌ಒ ಮಂಜುನಾಥ ಆರ್.ಮೇಗಲಮನಿ ಮಾತನಾಡಿ, ಮೌಢ್ಯ, ಕಂದಾಚಾರಕ್ಕೆ ಒಳಗಾಗಿ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಸರಕಾರಿ ಆಸ್ತಿ ಎಂದು ಭಾವಿಸದೆ ನಮ್ಮೆಲ್ಲರ ಆಸ್ತಿ ಎಂದು ಭಾವಿಸಿ ಕಾಪಾಡಬೇಕು. 400ಕ್ಕೂ ಹೆಚ್ಚು ಔಷಧೀಯ ಸಸ್ಯ ಸಂಪತ್ತು, 23ಕ್ಕೂ ಹೆಚ್ಚು ವನ್ಯಪ್ರಾಣಿಗಳ ಸಂಪತ್ತನ್ನು ಕಪ್ಪತ್ತಗುಡ್ಡ ಹೊಂದಿದ್ದು, ಇವುಗಳೆಲ್ಲವೂ ನಮ್ಮ ಸಂಪತ್ತು ಎಂದು ಉಳಿಸಿ ಬೆಳೆಸಬೇಕಾಗಿದೆ. ಇದನ್ನು ಉಳಿಸಿದರೆ ನಮ್ಮ ನಿಮ್ಮೆಲ್ಲರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಅತ್ಯಮೂಲ್ಯ ಸಂಪತ್ತನ್ನು ಉಳಿಸಲು ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು.

error: Content is protected !!