Home Blog Page 29

ಅಧಿವೇಶನದ ಆರಂಭದ ದಿನವೇ ಗದ್ದಲ: ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು?

0

ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನದ ಆರಂಭವೇ ಗದ್ದಲ, ಘೋಷಣೆ, ಎಳೆದಾಟ ಮತ್ತು ಹೈಡ್ರಾಮಾದಿಂದ ಸುದ್ದಿಯಾಯ್ತು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ಸದನದಿಂದ ಹೊರಟ ಕ್ಷಣದಿಂದಲೇ ರಾಜಕೀಯ ವಾತಾವರಣ ಉದ್ವಿಗ್ನಗೊಂಡಿತು.

ರಾಜ್ಯಪಾಲರು ಹೊರಟಾಗ ಕಾಂಗ್ರೆಸ್ ನಾಯಕರು ಸದನದೊಳಗೆ ಘೋಷಣೆಗಳನ್ನು ಕೂಗುತ್ತಿದ್ದರು. ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಐವಾನ್ ಡಿಸೋಜಾ ಹಾಗೂ ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಹೆಚ್.ಸಿ. ಬಾಲಕೃಷ್ಣ ಈ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ತೀವ್ರಗೊಂಡಾಗ ಮಾರ್ಷಲ್ಗಳು ಬಿ.ಕೆ. ಹರಿಪ್ರಸಾದ್ ಅವರನ್ನು ಬಲವಂತವಾಗಿ ಪಕ್ಕಕ್ಕೆ ಎಳೆದೊಯ್ಯುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಇದರಿಂದ ಕೋಪಗೊಂಡ ಹರಿಪ್ರಸಾದ್ ಹಾಗೂ ಹೆಚ್.ಸಿ. ಬಾಲಕೃಷ್ಣ ಮತ್ತೆ ಹಿಂದಿರುಗಿ ಮಾರ್ಷಲ್ ಹಿಡಿದು ಎಳೆದಾಡಿದ್ದು, ಸದನದೊಳಗೆ ಗದ್ದಲ ಮತ್ತಷ್ಟು ಉಗ್ರಗೊಂಡಿತು.

ಈ ಗೊಂದಲದ ನಡುವೆ ಬಿ.ಕೆ. ಹರಿಪ್ರಸಾದ್ ಅವರ ಬಟ್ಟೆ ಹರಿದಿದ್ದು, “ಬಿಜೆಪಿಯವರೇ ಬಟ್ಟೆ ಎಳೆದು ಹರಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ‘ಕೇಂದ್ರ’ ಮಾಡ್ತಿದೆ; ಸಚಿವ ರಾಮಲಿಂಗಾ ರೆಡ್ಡಿ

0

ರಾಮನಗರ:- ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಅಧಿವೇಶನದಲ್ಲಿ ಕೇವಲ 5 ನಿಮಿಷ ಏನೋ ಓದಿ ಹೋಗಿದ್ದಾರೆ. ಸ್ವಲ್ಪ ಗೊಂದಲ ಆಯ್ತು, ರಾಮನಗರದಲ್ಲಿ ಮೀಟಿಂಗ್ ಇದ್ದ ಕಾರಣ ನಾನು ಈ ಕಡೆ ಬಂದೆ. ಸ್ವಾತಂತ್ರ‍್ಯ ಬಂದಾಗಲಿಂದಲೂ ಅಧಿಕಾರದಲ್ಲಿರೋ ಸರ್ಕಾರ ರೆಡಿ ಮಾಡಿಕೊಡುವ ಭಾಷಣವನ್ನೇ ರಾಜ್ಯ ಪಾಲರು ಓದುತ್ತಾರೆ. ಎಲ್ಲಾ ರಾಜ್ಯಗಳಲ್ಲೂ ಈ ಸಂಪ್ರದಾಯ ಇದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಗವರ್ನರ್ ಕೂಡಾ ಕಾನೂನು ಚೌಕಟ್ಟಿನಲ್ಲಿ ಅವರ ಕೆಲಸ ಮಾಡಬೇಕು ಎಂದರು.

ರಾಜ್ಯಪಾಲರು ಸ್ವತಂತ್ರವಾಗಿ ಕೆಲಸ ಮಾಡಲು ಬಿಜೆಪಿ ಬಿಡುತ್ತಿಲ್ಲ. ಕೇಂದ್ರಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯೂ ತಾಳ ಹಾಕುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿಯವರು ಸುಳ್ಳುಗಾರರು, ಅವರಿಗೆ ಕಾನೂನು, ಸಂವಿಧಾನದ ಅರಿವಿಲ್ಲ. ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ. ಅವರು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಸರ್ಕಾರದ ಭಾಷಣ ಓದದೇ ಹೋಗಿರೋದು ತಪ್ಪು. ಹಿಂದೆಯೂ ರಾಜ್ಯಪಾಲರ ವಿರುದ್ಧ ಬಿಜೆಪಿ ಘೋಷಣೆ ಕೂಗಿದ್ದರು. ಸ್ಪೀಕರ್ ವಿರುದ್ಧ ಘೋಷಣೆ ಕೂಗಿ ಪತ್ರ ಎಸೆದಿದ್ದರು. ಇಂತಹ ಬಿಜೆಪಿಯವರಿಂದ ನಾವು ನೀತಿ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

ಗದಗ| ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಐತಿಹಾಸಿಕ ಲಕ್ಕುಂಡಿಯಲ್ಲಿ ಜಮೀನು ಬೆಲೆ ದುಬಾರಿ!

0

ಗದಗ:- ಚಿನ್ನದ ನಿಧಿ ಪತ್ತೆ ಹಾಗೂ ಸರ್ಕಾರದ ಉತ್ಖನನ ಕಾರ್ಯ ಆರಂಭವಾದ ಬಳಿಕ ಐತಿಹಾಸಿಕ ಲಕ್ಕುಂಡಿಯಲ್ಲಿ ಜನರ ಬದುಕು ಬಂಗಾರವಾಗಿದ್ದು, ಜಮೀನಿನ ಬೆಲೆಗಳು ಆಕಾಶಕ್ಕೇರಿವೆ.

ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿರುವ ಜಮೀನುಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಈ ಹಿಂದೆ ಎಕರೆಗೆ 30–40 ಲಕ್ಷ ರೂಪಾಯಿಗಳಷ್ಟಿದ್ದ ಜಮೀನಿನ ಬೆಲೆ ಇದೀಗ ಒಂದು ಕೋಟಿಗೆ ಏರಿಕೆಯಾಗಿದೆ. ಇದರಿಂದ ರೈತರ ಜಮೀನುಗಳಿಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ.

ಉತ್ಖನನ ಕಾರ್ಯದಲ್ಲಿ ಇದುವರೆಗೆ ಅನೇಕ ಅಪರೂಪದ ಹಾಗೂ ಪ್ರಾಚೀನ ವಸ್ತುಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗಳು ಭೂಮಿಯ ಬೆಲೆ ಏರಿಕೆಗೆ ಕಾರಣವಾಗಿವೆ. ಜನವರಿ 10ರಂದು ಲಕ್ಕುಂಡಿಯಲ್ಲಿ ಮನೆಗೆ ಪಾಯ ತೋಡುವ ವೇಳೆ ಬಂಗಾರದ ನಿಧಿ ಪತ್ತೆಯಾದ ನಂತರ ಲಕ್ಕುಂಡಿ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಪ್ರಸ್ತುತ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ಮುಂದುವರಿದಿದ್ದು, ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆ ತ್ರಿ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಲಕ್ಕುಂಡಿಯಲ್ಲಿ ಭೂಮಿ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಪರಿಣಾಮವಾಗಿ, ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಲಕ್ಕುಂಡಿಯ ಜಮೀನಿನ ಬೆಲೆ ಎರಡು ರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ರೈತರು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಅಗೌರವ; ಕಾಂಗ್ರೆಸ್ ನಡೆ ಗೂಂಡಾಗಿರಿ- ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

0

ಬೆಂಗಳೂರು:- ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಇದನ್ನು ‘ಕರಾಳ ದಿನ’ ಎಂದು ಕರೆದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಸಲ್ಲಿಸಿ ಹೊರಟಿದ್ದು ತಪ್ಪೇನೂ ಇಲ್ಲ. ರಾಜ್ಯಪಾಲರಿಗೆ ಭಾಷಣವನ್ನು ಓದದೇ ಹೊರಡುವ ಅಧಿಕಾರವೂ ಸಂವಿಧಾನದಲ್ಲೇ ಇದೆ. ಕಾಂಗ್ರೆಸ್ ಶಾಸಕರು ಅಗೌರವ ತೋರಿದ್ದು ಗೂಂಡಾಗಿರಿ ಎಂದು ಆರೋಪಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅಶೋಕ್, ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದ್ದು, ಹೈಕಮಾಂಡ್ ನಾಯಕರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು!

0

ಪುತ್ತೂರು: ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ನೀಡಿದ್ದ ಆರೋಪದ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ನಿವಾಸಿ ಮತ್ತು ಕಾಂಗ್ರೆಸ್ ಮುಖಂಡ ಅಮಳ ರಾಮಚಂದ್ರ ದೂರು ನೀಡಿದ್ದು, ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ. ಭಾಷಣವನ್ನು ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಜನವರಿ 12 ರಂದು ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರಿನಲ್ಲಿ ವಿವಾದಾತ್ಮಕ ಭಾಷಣ ನಡೆದಿದೆ ಎಂಬ ಆರೋಪ ಇದೆ. ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ (IPC) ಅಡಿ ಗಂಭೀರ ಸೆಕ್ಷನ್‌ಗಳು 196, 299, 302, 353(2), 3(5) ಒಳಗೊಂಡಿವೆ.

Gold Rate Today| ಗೋಲ್ಡ್ ಪ್ರಿಯರಿಗೆ ಶುಭ ಸುದ್ದಿ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ!

0

ಗೋಲ್ಡ್ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿದ್ದು, ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ನಿನ್ನೆ ಭರ್ಜರಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿದಿದೆ. ಗ್ರಾಮ್​ಗೆ 45 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯೂ ಐದು ರೂ ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 32,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 32,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 22ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,431 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,145 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,573 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,431 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,145 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಗದಗ| 7ನೇ ದಿನದ ಲಕ್ಕುಂಡಿ ಉತ್ಖನನ; ಅಪರೂಪದ ತಾಮ್ರ ರೂಪದ ಲೋಹ ಪತ್ತೆ!

0

ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ 7ನೇ ದಿನದ ಉತ್ಖನನ ವೇಳೆ ಅಪರೂಪದ ತಾಮ್ರ ರೂಪದ ಲೋಹ ಪತ್ತೆಯಾಗಿದೆ.

ಕುತೂಹಲ ಮೂಡಿಸಿರುವ ಈ ಲೋಹವನ್ನು ಉತ್ಖನನ ಮೇಲ್ವಿಚಾರಕರು ಪರಿಶೀಲನೆ ನಡೆಸಿದರು. ಸ್ಥಳೀಯ ಸಿಬ್ಬಂದಿ ಲೋಹವನ್ನು ಪ್ಲಾಸ್ಟಿಕ್ ಚಿಕ್ಕ ಪ್ಯಾಕೆಟ್‌ನಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ಈ ಉತ್ಖನನ ಕಾರ್ಯವು ನೈಜ ಲಕ್ಕುಂಡಿ ಸ್ಥಳದ ಪತ್ತೆಯನ್ನು ಪಡೆಯಲು ಮುಂದುವರೆದಿದ್ದು, ಹುದುಗಿ ಹೋಗಿದ್ದ ಐತಿಹಾಸಿಕ ಸ್ಥಳಗಳನ್ನು ಸ್ಮರಣೆ ಮಾಡಲು ಅವಕಾಶ ನೀಡಲಿದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ಖನನ ವೇಳೆ ಪುರಾತನ ಕಾಲದ ಮೆಟಲ್ ವಸ್ತುಗಳು, ಶಿಲೆ ಮತ್ತು ಇತರ ಐತಿಹಾಸಿಕ ವಸ್ತುಗಳ ಪತ್ತೆ ಕೂಡ ಸಂಭವಿಸಿದೆ.

ಸುಮಾರು 35 ಕಾರ್ಮಿಕರಿಂದ ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೂಕ್ಷ್ಮವಾಗಿ ನಡೆಸಲಾಗುತ್ತಿರುವ ಉತ್ಖನನ ಕಾರ್ಯವನ್ನು ಪುರಾತತ್ವ ಇಲಾಖೆ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಹಳೆಯ ರಾಜಮಹಾರಾಜರ ಕಾಲದ ವೈಭವವನ್ನು, ಚಿನ್ನ, ವಜ್ರ, ಹವಳ, ಮುತ್ತು ಸೇರಿದಂತೆ ಪ್ರಾಚೀನ ಕಾಲದ ಐತಿಹಾಸಿಕ ವಸ್ತುಗಳ ಪತ್ತೆ ಮಾಡಲು ಶ್ರದ್ಧೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಜನರಲ್ಲಿ ಈ ಉತ್ಖನನದಲ್ಲಿ ಏನು ಪತ್ತೆಯಾಗಲಿದೆ ಎಂಬ ಕುತೂಹಲ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪುರಾತನ ವಸ್ತು ಪತ್ತೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬೆಂಗಳೂರು| ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್; 4.5 ಲಕ್ಷ ವಸೂಲಿ, 1 ಕೋಟಿ ಬೇಡಿಕೆ; ಸಿಸಿಬಿಯಿಂದ ಮಹಿಳೆ ಅರೆಸ್ಟ್

0

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಈಗಾಗಲೇ ಸ್ವಾಮೀಜಿಯಿಂದ 4.5 ಲಕ್ಷ ರೂ. ವಸೂಲಿ ಮಾಡಿಕೊಂಡಿದ್ದು, ನಂತರ 1 ಕೋಟಿ ರೂ. ನೀಡುವಂತೆ ಒತ್ತಡ ಹೇರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ್ದ ಸ್ಪೂರ್ತಿ, ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು. ಬಳಿಕ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕಿದ್ದಾಳೆ ಎಂಬ ಆರೋಪ ಇದೆ. ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ 4.5 ಲಕ್ಷ ರೂ. ಪಡೆದರೂ, ನಂತರ ತನ್ನ ಸಹಚರರ ಜೊತೆಗೂಡಿ ಮತ್ತೆ ಹಣಕ್ಕಾಗಿ ಬೆದರಿಕೆ ಮುಂದುವರಿಸಿದ್ದಾಳೆ ಎನ್ನಲಾಗಿದೆ.

ಪುನಃ ಪುನಃ ಹಣ ಬೇಡಿಕೆ ಹಾಗೂ ಬೆದರಿಕೆಗಳಿಂದ ಆತಂಕಗೊಂಡ ಸ್ವಾಮೀಜಿ ಸಿಸಿಬಿ ಪೊಲೀಸರನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸ್ಪೂರ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರಿದಿದೆ.

ಗಮನಾರ್ಹವಾಗಿ, ಇದೇ ಸ್ವಾಮೀಜಿ ವಿರುದ್ಧ ಎರಡು ವರ್ಷಗಳ ಹಿಂದೆ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಆ ವೇಳೆ 6 ಕೋಟಿ ರೂ. ಬೇಡಿಕೆ ಇಟ್ಟಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಮ್ಮೆ ಬ್ಲ್ಯಾಕ್‌ಮೇಲ್ ಕಾಟ ಎದುರಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದು, ತಮಗೆ ಸಂಬಂಧಿಸಿದ ಯಾವುದೇ ಫೋಟೋಗಳು ಅಥವಾ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಟೈರ್ ಸ್ಫೋಟದಿಂದ ಭೀಕರ ಅಪಘಾತ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಾವು

0

ನಂದ್ಯಾಲ್: ಖಾಸಗಿ ಬಸ್ಸೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಜರುಗಿದೆ.

ಈ ಅಪಘಾತ ಬೆಳಗಿನ ಜಾವ 1.30 ರ ಸುಮಾರಿಗೆ ಸಂಭವಿಸಿದೆ. ಆಂಧ್ರಪ್ರದೇಶದ ನೆಲ್ಲೂರಿನಿಂದ ತೆಲಂಗಾಣದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಬಸ್‌ನ ಬಲಭಾಗದ ಟೈರ್ ಸ್ಫೋಟಗೊಂಡಿತ್ತು. ಇದರಿಂದ ಚಾಲಕನ ನಿಯಂತ್ರಣ ತಪ್ಪಿ, ಬಸ್ ರಸ್ತೆ ವಿಭಜಕವನ್ನು ದಾಟಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಬೈಕ್‌ಗಳನ್ನು ಸಾಗಿಸುತ್ತಿತ್ತು. ಡಿಕ್ಕಿಯ ತೀವ್ರತೆಯಿಂದ ಬಸ್ ಮತ್ತು ಲಾರಿ ಎರಡೂ ಬೆಂಕಿಗೆ ಆಹುತಿಯಾಗಿವೆ.

ಸ್ಥಳೀಯ ನಿವಾಸಿಗಳು, ಬಸ್ ಕ್ಲೀನರ್ ಹಾಗೂ ಕಂಡಕ್ಟರ್ ಕಿಟಕಿಗಳನ್ನು ಒಡೆದು ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಶ್ರಮಿಸಿದ್ದಾರೆ. ಆದರೂ ಬಸ್ ಚಾಲಕ, ಟ್ರಕ್ ಚಾಲಕ ಹಾಗೂ ಲಾರಿ ಕ್ಲೀನರ್ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಒಟ್ಟು 36 ಪ್ರಯಾಣಿಕರಲ್ಲಿ ನಾಲ್ವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಆರ್ ಪುರದ ಬಜಾಜ್ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ!

0

ಬೆಂಗಳೂರು:- ಕೆ.ಆರ್ ಪುರದ ಟಿ.ಸಿ ಪಾಳ್ಯ ಸಿಗ್ನಲ್ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಜಾಜ್ ಶೋರೂಂಗೆ ಬೆಂಕಿ ಹೊತ್ತಿಕೊಂಡು 13 ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ನಿನ್ನೆ ರಾತ್ರಿ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ತಿದ್ದಂತೆಯೇ ಶೋರೂಂ ಸಿಬ್ಬಂದಿ ಓಡಿ ಹೊರಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಶೋರೂಂನಲ್ಲಿದ್ದ 13 ಎಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಕರಕಲಾಗಿವೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ.

error: Content is protected !!