Home Blog Page 298

ಗರ್ಭಿಣಿ ಗೋಮಾತೆಗೆ ಸೀಮಂತ ಕಾರ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವು ದೇವರ ಸ್ವರೂಪ ಎಂಬ ಭಾವನೆ ಹಿಂದೂಗಳಲ್ಲಿದೆ. ಪ್ರತಿಯೊಬ್ಬ ರೈತರು ಗೋವಿಗೆ ವಿಶೇಷ ಸ್ಥಾನಮಾನ ಕೊಟ್ಟು ಅದನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಾರೆ. ದನಕರುಗಳು ರೈತರ ಜೀವನ ನಾಡಿಗಳಾಗಿವೆ. ಈ ನಿಟ್ಟಿನಲ್ಲಿ ಸಮೀಪದ ರಾಮಗಿರಿ ಗ್ರಾಮದ ರೈತ ಕುಟುಂಬ ಚೊಚ್ಚಲ ಹೆರಿಗೆಗೆ ಸಿದ್ಧವಾಗಿರುವ ಗೋವಿಗೆ ಶುಕ್ರವಾರ ಕುಟುಂಬಸ್ಥರೆಲ್ಲರೂ ಸೇರಿ ಸಿಂಗರಿಸಿ ಹಬ್ಬದಂತೆ ಗೋವಿಗೆ ಸೀಮಂತ ಮಾಡಿದ್ದಾರೆ.

ತುಂಬು ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ವಾಡಿಕೆ. ದಿನಗಳು ತುಂಬಿದ ವೇಳೆಯಲ್ಲಿ ಮಗಳಿಗೆ ಸೀಮಂತ ಕಾರ್ಯ ಮಾಡುವಂತೆ ಗೋವಿಗೂ ಸೀರೆ ಉಡಿಸಿ, ಸಿಂಗರಿಸಿ, ಸೋಬಾನೆ ಪದ ಹಾಡಿ, ಆರತಿ ಬೆಳಗಿ ಮನೆ ಮಗಳಿಗೆ ಆಶೀರ್ವದಿಸುವಂತೆ ತಾಲೂಕಿನ ರಾಮಗಿರಿ ಗ್ರಾಮದ ನಾಗರಾಜ ಮಡಿವಾಳರ ಮನೆಯಲ್ಲಿ ಗರ್ಭಿಣಿ ಆಕಳಿಗೆ ಸೀಮಂತದ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೆ ವಿವಿಧ ಭಕ್ಷ ಮಾಡಿ ಗ್ರಾಮಸ್ಥರಿಗೆ ಉಣಬಡಿಸಿ ಸಂಭ್ರಮಿಸಿದ್ದಾರೆ.

ರೈತ ನಾಗಾರಾಜ ಮಡಿವಾಳರ ಮಾತನಾಡಿ, ಭಾರತೀಯ ಸಂಸ್ಕೃತಿ-ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಕಾಮಧೇನು ಕಲ್ಪವೃಕ್ಷ ಎಂಬಂತೆ ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಅಮೃತ ತಳಿಯ ಗೋಮಾತೆ ಚೊಚ್ಚಲ ಕರುವಿಗೆ ಜನ್ಮ ನೀಡುತ್ತಿರುವುದರಿಂದ ಯಥಾವತ್ತಾಗಿ, ಪೂಜೆ ಪುನಸ್ಕಾರಗಳು ಎಲ್ಲ ಕಾರ್ಯ ಸಮರ್ಪಿಸಿ ಗೋಮಾತೆಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು.

ನಾಗರಾಜ ಮಡಿವಾಳರ ತಮ್ಮ ಮನೆಯಲ್ಲಿ ಗೋವು ಸಾಕಿದಾಗಿನಿಂದಲೂ ತಮ್ಮ ಮನೆಗೆ ಒಳ್ಳೆಯದಾಗಿದೆ ಎನ್ನುವ ನಂಬಿಕೆಯಿಂದ ಈ ಸಂಪ್ರದಾಯ ಹಬ್ಬದಂತೆ ಆಚರಿಸಿದರು. ಗೋಮಾತೆಗೆ ಆರತಿ ಬೆಳಗಿದ ಮುತ್ತೈದೆಯರು ಗೋವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನೂರಾರು ಜನರಿಗೆ ಕರಿಗಡಬು, ತುಪ್ಪ, ರೊಟ್ಟಿ, ಚಪಾತಿ, ಕಾಳು ಪಲ್ಲೆ ಸೇರಿದಂತೆ ಸವಿ ಭೋಜನ ಉಣಬಡಿಸಿದರು. ಈ ಅಪರೂಪದ ಕಾರ್ಯಕ್ರಮ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.

ಈ ವೇಳೆ ಈರಮ್ಮ ಮಡಿವಾಳರ, ಗುಡ್ಡಪ್ಪ ಬೇವಿನಮರದ, ಮಾರ್ತಾಂಡಪ್ಪ ಗಂಜಿಗಟ್ಟಿ, ಪರಸಪ್ಪ ಹುಣಸೀಮರದ, ನಬಿಸಾಬ್ ಅಣ್ಣಿಗೇರಿ, ಶಿವಾನಂದ, ಲಕ್ಷಣ ಯರಗುಪ್ಪಿ, ಎಸ್.ಬಿ. ಸುಂಕದ, ಹನಮಂತಪ್ಪ ಹುಣಶಿಮರದ ಸೇರಿದಂತೆ ಮನೆಯ ಸದಸ್ಯರೆಲ್ಲರೂ ಹಾಜರಿದ್ದರು.

ದಿವ್ಯಾಂಗ ದಂಪತಿ ಭೇಟಿ ಮಾಡಿ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ!

0

ಬೆಳಗಾವಿ: ರಾಯಬಾಗ ತಾಲ್ಲೂಕಿನ ಖನದಾಳ ಗ್ರಾಮದ ದಿವ್ಯಾಂಗ ದಂಪತಿ ಯಲ್ಲಪ್ಪ ನಾಯಿಕ ಮತ್ತು ಬಾಳವ್ವ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಮನವಿ ಮಾಡಲು ಬಂದಿದ್ದರು.

ಆದರೆ ಮೊದಲ ಬಾರಿ ಅವರು ಭೇಟಿ ನೀಡಿದಾಗ ಸಿಎಂ ಅವರು ದಂಪತಿಯನ್ನು ಗಮನಿಸದೇ ಹೋಗಿದರು. ಈ ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ, ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಯಲ್ಲಪ್ಪ ದಂಪತಿಯನ್ನು ಮತ್ತೆ ಕರೆಸಿಕೊಂಡು ಸಿಎಂ ಅವರು ಅವರ ವಿಚಾರವನ್ನು ಗಮನಿಸಿದರು.

ನಿವೇಶನ ಕೊಡಿಸುವುದಾಗಿ ಹಣ ಪಡೆದವರು ವಂಚನೆ ನಡೆಸಿರುವ ಕುರಿತು ನ್ಯಾಯ ಒದಗಿಸಲು ದಂಪತಿ ಮನವಿ ಮಾಡಿದ ಮೇಲೆ, ಸಿಎಂ ತಕ್ಷಣವೇ ಬೆಳಗಾವಿ ಎಸ್‌ಪಿಗೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಿಎಂ ಭೇಟಿಯಾದ ನಂತರ ಯಲ್ಲಪ್ಪ ದಂಪತಿ ಮಾಧ್ಯಮಗಳಿಗೆ ಧನ್ಯವಾದ ಸೂಚಿಸಿದ್ದಾರೆ.

ಬಿಕ್ಲು ಶಿವ ಕೊಲೆ ಪ್ರಕರಣ: ಬಂಧನ ಭೀತಿಯಲ್ಲಿ ಶಾಸಕ ಬೈರತಿ ಬಸವರಾಜ್ ನಾಪತ್ತೆ, ಪೊಲೀಸರಿಂದ ತಲಾಶ್!

0

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ ಎದುರಾಗಿದೆ.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಹಾಗೂ ತನಿಖೆಗೆ ನೀಡಿದ್ದ ತಡೆ ತೆರವು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಬೈರತಿ ಬಸವರಾಜ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಂಧನ ಭೀತಿ ಹಿನ್ನೆಲೆಯಲ್ಲಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

2025ರ ಜುಲೈ 15ರಂದು ರಾತ್ರಿ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸೂರು ಲೇಕ್ ಬಳಿ ರೌಡಿಶೀಟರ್ ಬಿಕ್ಲು ಶಿವನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಿಕ್ಲು ಶಿವನ ತಾಯಿ ನೀಡಿದ್ದ ದೂರಿನಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಸೇರಿ ಹಲವರ ಹೆಸರು ಉಲ್ಲೇಖಿಸಲಾಗಿತ್ತು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಎ5 ಆರೋಪಿಯಾಗಿ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ, ಆರೋಪಿಗಳು ನನಗೆ ಪರಿಚಯವೇ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದರು.

ಆದರೆ ಇತ್ತೀಚೆಗೆ ಹೈಕೋರ್ಟ್ ಬಲವಂತದ ಕ್ರಮಕ್ಕೆ ನೀಡಿದ್ದ ತಡೆ ತೆರವುಗೊಳಿಸಿದ ನಂತರ, ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ತೆರಳಿದ್ದ ಅವರು, ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಸಿಐಡಿ ತಂಡ, ಅವರು ಉಳಿದುಕೊಂಡಿದ್ದ ಸ್ಥಳದ ಸಿಸಿಟಿವಿ ದೃಶ್ಯಾವಳಿ, ಸಂಚಾರ ಮಾರ್ಗಗಳು ಹಾಗೂ ರಾಜ್ಯಕ್ಕೆ ಸಂಪರ್ಕಿಸುವ ಟೋಲ್‌ಗೇಟ್‌ಗಳ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದೆ. ತನಿಖೆ ವೇಳೆ ಬೈರತಿ ಬಸವರಾಜ್ ಗೋವಾ ಅಥವಾ ಮಹಾರಾಷ್ಟ್ರಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದ್ದು, ಕೊನೆಯದಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಅವರ ಲೈವ್ ಲೊಕೇಶನ್ ಪತ್ತೆಯಾಗಿತ್ತು. ಆನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಸಿಐಡಿ ತನಿಖೆಯಲ್ಲಿ ಆರೋಪಿಗಳೊಂದಿಗೆ ಬೈರತಿ ಬಸವರಾಜ್ ಸಂಪರ್ಕದಲ್ಲಿದ್ದ ಮಾಹಿತಿ ಹಾಗೂ ಕೆಲ ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವ ಶಂಕೆಯೂ ವ್ಯಕ್ತವಾಗಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಬಂಧನವಾಗುವ ಸಾಧ್ಯತೆ ಇದೆ.

ಬೆಂಗಳೂರು| ನಾಳೆಯಿಂದ ರಾಜ್ಯದಾದ್ಯಂತ ಡಿ. 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ!

0

ಬೆಂಗಳೂರು:- ದೇಶವನ್ನು ಪೋಲಿಯೋ ಮುಕ್ತವಾಗಿಸುವ ಉದ್ದೇಶದಿಂದ ಕರ್ನಾಟಕದಾದ್ಯಂತ ಡಿಸೆಂಬರ್ 21ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ–2025ಕ್ಕೆ ಚಾಲನೆ ನೀಡಲಾಗಿದೆ.

ಈ ಅಭಿಯಾನದಡಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ಕರ್ನಾಟಕ ಆರೋಗ್ಯ ಇಲಾಖೆ ಪೋಷಕರಿಗೆ ಮನವಿ ಮಾಡಿದೆ. ಪೋಲಿಯೋ ಒಂದು ಗಂಭೀರ ಹಾಗೂ ಮಾರಕ ರೋಗವಾಗಿದ್ದು, ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ಇಲ್ಲದಿದ್ದರೂ ಲಸಿಕೆ ಮೂಲಕ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ. “ಎರಡು ಹನಿ ಲಸಿಕೆ ಮಗುವಿನ ಭವಿಷ್ಯ” ಎಂಬ ಘೋಷವಾಕ್ಯದೊಂದಿಗೆ ಸರ್ಕಾರ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ.

ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಬಸ್ ನಿಲ್ದಾಣ, ರೈಲು ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪೋಲಿಯೋ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲ ದಿನ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದರೊಂದಿಗೆ, ನಂತರದ ಎರಡು ದಿನಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ನೀಡಲಿದ್ದಾರೆ.

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಐದು ನಿಗಮಗಳ ಮೂಲಕ ಒಟ್ಟು 11,34,988 ಮಕ್ಕಳಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಟ್ವೀಟ್ ಮಾಡಿದ್ದು, ಡಿಸೆಂಬರ್ 21ರಿಂದ 24ರವರೆಗೆ ಅಭಿಯಾನ ನಡೆಯಲಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಪೋಷಕರಿಗೆ ಮನವಿ ಮಾಡಿದೆ. ಜೀವದ ಎರಡು ಹನಿಗಳ ಮೂಲಕ ಪೋಲಿಯೋ ವಿರುದ್ಧ ವಿಜಯ ಸಾಧಿಸುವುದನ್ನು ಮುಂದುವರಿಸೋಣ ಎಂದು ಮನವಿ ಮಾಡಿದೆ.

ರೈಲ್ವೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನ; ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ!

0

ಶಿವಮೊಗ್ಗ:- ಜಿಲ್ಲೆಯ ಸಾಗರ ತಾಲೂಕಿನ ಚಂದ್ರಮಾವಿನ ಕೊಪ್ಪಲು ಸಮೀಪ ತಾಳಗುಪ್ಪದಿಂದ ಮೈಸೂರಿನತ್ತ ಸಾಗುತ್ತಿದ್ದ ರೈಲ್ವೇ ಹಳಿಗೆ ಜಿಗಿದು ವ್ಯಕ್ತಿಯೊಬ್ಬರು ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ರೈಲು ಸ್ಥಳಕ್ಕೆ ಸಮೀಪಿಸುತ್ತಿದ್ದಂತೆ ಹಳಿಗಳ ಮೇಲೆ ಜಿಗಿದ ವ್ಯಕ್ತಿಯನ್ನು ಗಮನಿಸಿದ ಲೋಕೋ ಪೈಲಟ್ ಸಮಯಪ್ರಜ್ಞೆ ಪ್ರದರ್ಶಿಸಿ ತಕ್ಷಣವೇ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಪರಿಣಾಮ ದೊಡ್ಡ ಅನಾಹುತ ತಪ್ಪಿದೆ.

ನಂತರ ಲೋಕೋ ಪೈಲಟ್ ರೈಲಿನಿಂದ ಇಳಿದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಸ್ಥಳದಲ್ಲಿದ್ದ ಖಾಸಗಿ ಆಂಬ್ಯುಲೆನ್ಸ್ ಮಾಲೀಕ ಗಂಗಾಧರ್ ಅವರ ಸಹಕಾರದಿಂದ ಗಾಯಾಳುವನ್ನು ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮನರೇಗಾ ಮರುನಾಮಕರಣಕ್ಕೆ ವಿರೋಧ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಮನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿ ಕೇಂದ್ರ ಸರಕಾರ ಗಾಂಧೀಜಿ ವಿರುದ್ಧ ತನ್ನ ದ್ವೇಷವನ್ನು ಹೊರಹಾಕಿದ್ದಲ್ಲದೆ ಬಡ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಇದು ದ್ವೇಷ ರಾಜಕಾರಣದ ಭಾಗ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ, ವಕೀಲ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 20 ವರ್ಷಗಳಿಂದ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸಿದೆ. ಆದರೆ ಈಗಿನ ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿರುವ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಿ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಯೋಜನೆ (ವಿಬಿ ಜಿ-ರಾಮ್-ಜಿ) ಎಂದು ಮರುನಾಮಕರಣ ಮಾಡಿ, ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡಿದೆ.

ಈ ಬದಲಾವಣೆಯಿಂದ ಸುಮಾರು 1 ಕೋಟಿಗೂ ಅಧಿಕ ಬಡ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ. ಕೇಂದ್ರ ಸರ್ಕಾರದ ಈ ಧೋರಣೆ ಅಮಾನವೀಯವಾಗಿದೆ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಪ್ರಥಮ ಬಾರಿಗೆ ಅಧಿವೇಶನ ವೀಕ್ಷಣೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಪ್ರಥಮ ಬಾರಿಗೆ ಬೆಳಗಾವಿ ಚಳಿಗಾಲದ ಅಧಿವೇಶನ ವೀಕ್ಷಣೆ ಮಾಡಲು ತೆರಳಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಮಹಿಳಾ ಮುಖಂಡರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಅಧಿವೇಶನ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು, ಮುಂದೆ ಮಹಿಳೆಯರಿಗೆ ಇಲ್ಲೇ ಕುಳಿತು ಮಾತನಾಡುವ ಅವಕಾಶ ಸಿಗುತ್ತದೆ. ಶೇ. 33 ಮೀಸಲು ಬಂದರೆ 75 ಮಹಿಳಾ ಶಾಸಕರು ಸದನದಲ್ಲಿ ಇರುತ್ತೀರಿ, ಮಹಿಳಾ ಕಾಂಗ್ರೆಸ್‌ನ ವಿನೂತನ ಕಾರ್ಯ ಮೆಚ್ಚುವಂಥದ್ದು. ಸರಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ಕೆಲಸ ಜೊತೆಗೆ ಸರಕಾರದ ಸಾಧನೆ ವಿವರಿಸುವ ಕೆಲಸ ಮಾಡಿ ಎಂದರು.

ಈ ವೇಳೆ ವೀಕ್ಷಣೆಗೆ ತೆರಳಲು ಅವಕಾಶ ಮಾಡಿಕೊಟ್ಟ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿಯಾಗಿ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ವಿನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ನೀಡಿದರು. ಡಿಸಿಸಿ ಸದಸ್ಯೆ ಸುಮಂಗಲಾ ನಾಯಕ, ಡಿಎಂಸಿ ಸದಸ್ಯೆ ದೀಪಾ ರಾಠೋಡ, ಆರೋಗ್ಯ ಇಲಾಖೆ ಡಿಐಎಂಸಿ ಸದಸ್ಯೆ ರೇಷ್ಮಾ ಖಾಜಾವಲಿ, ಕಾರಟಗಿ ಬ್ಲಾಕ್ ಅಧ್ಯಕ್ಷೆ ಸೌಮ್ಯ ಕಂದಗಲ್, ಕುಷ್ಟಗಿ ಬ್ಲಾಕ್ ಅಧ್ಯಕ್ಷೆ ಶಕುಂತಲಾ ಹಿರೇಮಠ, ಗ್ಯಾರಂಟಿ ಸದಸ್ಯರಾದ ಪದ್ಮಾ ಬಸ್ತಿ, ರೇಣುಕಮ್ಮ ಕಾರಟಗಿ, ತಾವರಗೇರಾ, ಪ.ಪಂ ಸದಸ್ಯೆ ಬೇಬಿ ರೇಖಾ, ಭಾಗ್ಯನಗರ ಪ.ಪಂ ಸದಸ್ಯೆ ಸವಿತಾ ಗೋರಂಟ್ಲಿ, ಆಶ್ರಯ ಸಮಿತಿ ಸದಸ್ಯರಾದ ಕಾವೇರಿ ರ‍್ಯಾಗಿ, ಶಿಲ್ಪಾ, ಮಹಿಳಾ ಕಾಂಗ್ರೆಸ್ ಮುಖಂಡರಾದ ಸೌಭಾಗ್ಯ ಗೊರವರ, ರೇಣುಕಾ ಪುರದ, ಯಶೋಧಾ ಮರಡಿ, ಗಂಗಮ್ಮ ನಾಯಕ, ಚನ್ನಮ್ಮ, ಪ್ರಮೀಳಾ, ಅನಿತಾ ಇತರರು ಇದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಮಾತನಾಡಿ, ನಾವೆಲ್ಲ ಸಂಘಟಿತರಾಗಿ ಮುಂದೆ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಬರುವಂತೆ ಮಾಡಬೇಕಿದೆ. ಜಿಲ್ಲೆಯ ಐದೂ ವಿಧಾನಸಭೆಯಲ್ಲಿ ನಮ್ಮ ಶಾಸಕರು ಇರಬೇಕು. ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಮ್ಮ ಗುರಿಯಾಗಿದ್ದು, ಹೆಚ್ಚಿನ ಸ್ಥಾನ ಗೆಲ್ಲುವಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ. ಈಗಾಗಲೇ ಸಾಕಷ್ಟು ಮಹಿಳೆಯರಿಗೆ ಸ್ಥಳೀಯ ನಾಮ ನಿರ್ದೇಶನಗಳಲ್ಲಿ ಅವಕಾಶ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ರಾಜ್ಯಮಟ್ಟದ ಅವಕಾಶಗಳೂ ಸಿಗುತ್ತದೆ ಎಂದರು.

ಖಾಸಗಿ ಶಾಲಾ ವಾಹನಗಳ ತನಿಖೆ ನಡೆಸಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿರುವ ಖಾಸಗಿ ಶಾಲಾ ವಾಹನಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಲ್ಲದೆ, ನಿಯಮ ಉಲ್ಲಂಘಿಸುವ ಶಾಲಾ ಆಡಳಿತ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶನಿವಾರ ಶಿರಹಟ್ಟಿಯಲ್ಲಿ ಕರವೇ ತಾಲೂಕಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾ ಗೌರವಾಧ್ಯಕ್ಷ ಅಶೋಕ ಹುಬ್ಬಳ್ಳಿ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ಮಾಬುಸಾಬ ಢಾಲಾಯತ, ಶಿರಹಟ್ಟಿ ತಾಲೂಕಿನಾದ್ಯಂತ ಸಾಕಷ್ಟು ಖಾಸಗಿ ಶಾಲೆಗಳಿದ್ದು, ಪ್ರತಿಯೊಂದು ಶಾಲೆಗಳು ವಾಹನವನ್ನು ಹೊಂದಿವೆ. ಆ ಶಾಲಾ ವಾಹನದಲ್ಲಿಯೇ ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವುದು ಮತ್ತು ಬಿಟ್ಟು ಬರುವ ಕೆಲಸ ಮಾಡುತ್ತಿದ್ದು, ಶಾಲಾ ಆಡಳಿತ ಮಂಡಳಿಯವರು ಬೇಜವಾಬ್ದಾರಿತನವನ್ನು ತೋರುತ್ತಿರುವುದು ಸ್ಪಷ್ಟವಾಗಿದೆ. ಇಂತಹ ಘಟನೆಗಳಿಗೆ ಶಾಲಾ ವಾಹನದಲ್ಲಿ ಆಸನಗಳಿದ್ದಷ್ಟು ಮಕ್ಕಳನ್ನು ಕೂಡಿಸದೇ ಮಿತಿಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲಾ ವಾಹನದಲ್ಲಿ ತುಂಬುತ್ತಿರುವುದು, ವಾಹನಗಳಿಗೆ ಇನ್ಸುರೆನ್ಸ್ ಇಲ್ಲದಿರುವುದು ಕಾರಣ.

ಎಷ್ಟೋ ವಾಹನಗಳು ಸುಸ್ಥಿತಿಯಲ್ಲಿರುವುದಿಲ್ಲ. ಅಂತಹ ವಾಹನಗಳು ಕಂಡುಬಂದಲ್ಲಿ ಅವುಗಳನ್ನು ಸೀಜ್ ಮಾಡಬೇಕು. ಮಕ್ಕಳ ಹಿತದೃಷ್ಟಿಯಿಂದ ಪ್ರತಿಯೊಂದು ಖಾಸಗಿ ಶಾಲಾ ವಾಹನಗಳನ್ನು ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ ಆಡಳಿತ ಮಂಡಳಿಯವರ ಮೇಲೆಯೂ ಸಹ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಹುಬ್ಬಳ್ಳಿ, ಪವನ ಕುರಿ, ಎಂ.ಬಿ. ಹೆಸರೂರ, ಪ್ರಶಾಂತ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬಿಪಿಎಲ್‌ನಿಂದ ಎಪಿಎಲ್ ಆಗಿರುವ ಪಡಿತರ ಚೀಟಿಗಳನ್ನು ಬಿಪಿಎಲ್‌ಗೆ ಬದಲಾಯಿಸುವ ಕಾರ್ಯಕ್ಕೆ ಮುಂದಾಗಬೇಕು. ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.

ನಗರದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಪಂಚ ಗ್ಯಾರಂಟಿ ಕಚೇರಿಯಲ್ಲಿ ಶನಿವಾರ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಪಡಿತರ ಚೀಟಿ ವಿಶೇಷ ಸಭೆಯನ್ನು ಜರುಗಿಸಿ ಮಾತನಾಡಿದರು.

ಅನ್ನಭಾಗ್ಯ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಮಾಜದ ಕಟ್ಟಕಡೆಯ ಕುಟುಂಬದ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಸಹಕಾರಿಯಾಗಿದೆ. ಈ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿಯೇ ತಲುಪುವಂತಾಗಲು ಸಂಬಂಧಿತ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿ ನಿರ್ದೇಶನದ ಮೇರೆಗೆ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾದವರನ್ನು ಗುರುತಿಸಿ ಪಟ್ಟಿ ಮಾಡಬೇಕು. ಎಎವೈ (ಅಂತ್ಯೋದಯ ಅನ್ನ ಯೋಜನೆ)/ ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾವಣೆಯಾಗಿರುವ ಪಡಿತರ ಚೀಟಿಗಳನ್ನು ಎಎವೈ/ ಬಿಪಿಎಲ್‌ಗೆ ಬದಲಾಯಿಸಬೇಕಾದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗಳ ಮಾಹಿತಿಗಾಗಿ ತಹಸೀಲ್ದಾರ ಕಚೇರಿಯಲ್ಲಿ ಇರುವ ಆಹಾರ ವಿಭಾಗಕ್ಕೆ ಹಾಗೂ ಗದಗ-ಬೆಟಗೇರಿ ಶಹರದಲ್ಲಿ ಬರುವ ಪಡಿತರ ಚೀಟಿಗಳ ಮಾಹಿತಿಗಾಗಿ ಗದಗ-ಬೆಟಗೇರಿ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರವಿರುವ ಸಹಾಯಕ ನಿರ್ದೇಶಕ ಕಾರ್ಯಾಲಯ ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸಾವಿತ್ರಿ ಹೂಗಾರ, ಮಲ್ಲು ಬಾರ್ಕೇಕರ, ಸಂಗಮೇಶ ಕರಕಲಮಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಬಸವರಾಜ ಕಡೆಮನಿ, ಆಹಾರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾದ ಕೃಷ್ಣಗೌಡ ಪಾಟೀಲ ಮಾತನಾಡಿ, ಗದಗ ಮತಕ್ಷೇತ್ರದಲ್ಲಿರುವ ಬಡ ಕುಟುಂಬದವರನ್ನು ಗುರುತಿಸಿ ಪಟ್ಟಿ ಮಾಡಿ ಅವರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬಿಪಿಎಲ್ ಕಾರ್ಡ್ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳ ಸೂಕ್ತ ಪರಿಶೀಲನೆ ನಡೆಸಿ ನಿಗದಿತ ಅವಧಿಯಲ್ಲಿಯೇ ವಿಲೇವಾರಿ ಮಾಡಿ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಗತ್ಯ ದಾಖಲೆಗಳು
ಏಪ್ರಿಲ್-2022ರಿಂದ 2025ರವರೆಗೆ (3 ವರ್ಷಗಳ ಬ್ಯಾಂಕ್ ಸ್ಟೇಟ್‌ಮೆಂಟ್) ಕುಟುಂಬದಲ್ಲಿ ಯಾರಾದರೂ ಸರಕಾರಿ/ ಅರೆಸರ್ಕಾರಿ/ ಸಂಸ್ಥೆ/ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಕುಟುಂಬ ಸದಸ್ಯರ ಜಿಎಸ್‌ಟಿ/ ಇನ್‌ಕಂ ಟ್ಯಾಕ್ಸ್ ತುಂಬುವ ಬಗ್ಗೆ ಮಾಹಿತಿ, ಕುಟುಂಬಕ್ಕೆ ಇರುವ ಜಮೀನಿನ ಮಾಹಿತಿ, ರೇಶನ್ ಕಾರ್ಡ್ ಝೆರಾಕ್ಸ್ ಪ್ರತಿ, ಕುಟುಂಬದ ಎಲ್ಲರ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ — ಎಲ್ಲ ದಾಖಲಾತಿಗಳೊಂದಿಗೆ ನೇರವಾಗಿ ಪಡಿತರ ಚೀಟಿದಾರರು ಲಿಖಿತವಾಗಿ ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗಳ ಮಾಹಿತಿಗಾಗಿ ತಹಸೀಲ್ದಾರ ಕಚೇರಿ, ಗದಗ-ಬೆಟಗೇರಿ ನಗರದ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರ ಇರುವ ಸಹಾಯಕ ನಿರ್ದೇಶಕ ಕಾರ್ಯಾಲಯಕ್ಕೆ ಭೇಟಿ ನೀಡಬೇಕು.

ಕ್ಷೇತ್ರದ ಅಭಿವೃದ್ಧಿ ಕುರಿತು ಶಾಸಕ ಡಾ. ಲಮಾಣಿ ಪ್ರಸ್ತಾಪ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಮತ್ತು ನಿರ್ಲಕ್ಷ್ಯಕ್ಕೊಳಗಾದ ಗ್ರಾಮೀಣ ಭಾಗದ ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣ, ಆರೋಗ್ಯ, ಆಡಳಿತ ವ್ಯವಸ್ಥೆ ಸರಿಪಡಿಸಬೇಕು ಎಂಬಿತ್ಯಾದಿ ಕ್ಷೇತ್ರದ ಅಭಿವೃದ್ಧಿ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರದ ಗಮನ ಸೆಳೆದರು.

ಶಿರಹಟ್ಟಿ ಮತಕ್ಷೇತ್ರದಲ್ಲಿ ಬರುವ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ನೀಡಬೇಕಾದ ಸಾಮಗ್ರಿಗಳನ್ನು ಒದಗಿಸಿಲ್ಲ. ವಸತಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಡೆಸ್ಕ್, ಬೆಡ್, ಪ್ರಯೋಗಾಲಯ ಸಾಮಗ್ರಿಗಳು, ನರ್ಸಿಂಗ್ ಕಿಟ್ ಪೂರೈಕೆಯಾಗಿಲ್ಲ. 5 ವಸತಿ ಶಾಲೆಗಳ ಪೈಕಿ ಎರಡು ವಿದ್ಯಾರ್ಥಿನಿಯರ ವಸತಿ ಶಾಲೆಗಳಿದ್ದು, ಅಲ್ಲಿ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇಲ್ಲ. ಮುಂಡರಗಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿದೆ. ಅಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಭದ್ರತೆ ಇಲ್ಲ. ಕೂಡಲೇ ಸ್ಥಳಾಂತರ ಮಾಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಶಾಸಕರ ಪ್ರಶ್ನೆಗೆ ಉತ್ತರಿಸಿ, ಈ ಕುರಿತಂತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

2023–24ರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಸೇರಿದಂತೆ 37 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಯೋಜನೆಯ ಕಾಮಗಾರಿಯನ್ನು ತ್ವರಿತಗೊಳಿಸಿ ಜನರ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಕೂಡಲೇ ಇದರ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದರು.

error: Content is protected !!