Home Blog Page 297

ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

0

ಮಂಗಳೂರು: ಜೇನುಕೃಷಿ ತರಬೇತಿ ನೀಡುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಭೀಕರ ಘಟನೆ ಮಂಗಳೂರಿನ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯನ್ನು ಜೇನುಕೃಷಿ ಕಲಿಸುವುದಾಗಿ ಹೇಳಿ ಆರೋಪಿ ಅಬ್ದುಲ್ ಗಫೂರ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಪೋಷಕರು ಮಗಳನ್ನು ಸುಮಾರು ಎರಡು ತಿಂಗಳ ಹಿಂದೆ ಆರೋಪಿಯ ಮನೆಗೆ ಬಿಟ್ಟು ಹೋಗಿದ್ದು,

ಈ ಅವಧಿಯಲ್ಲಿ ಡಿಸೆಂಬರ್ 2ರಿಂದ 19ರವರೆಗೆ ಸುಮಾರು 17 ದಿನಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ವಿಜಯ್​ ಹಜಾರೆ ಟ್ರೋಫಿ 2025: ದೆಹಲಿ, ಮುಂಬೈ ತಂಡ ಪ್ರಕಟ! ರೋಹಿತ್-ಕೊಹ್ಲಿಗೆ ಸ್ಥಾನ

0

ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ ಹಜಾರೆ ಟ್ರೋಫಿ ಟೂರ್ನಿಗಾಗಿ ಮುಂಬೈ ಹಾಗೂ ದೆಹಲಿ ತಂಡಗಳನ್ನು ಪ್ರಕಟಿಸಲಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.

ವಿರಾಟ್ ಕೊಹ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಲಿದ್ದರೆ, ರೋಹಿತ್ ಶರ್ಮಾ ಮುಂಬೈ ಪರವಾಗಿ ಆಡಲಿದ್ದಾರೆ. ದೆಹಲಿ ತಂಡದ ನಾಯಕನಾಗಿ ರಿಷಭ್ ಪಂತ್ ಅವರನ್ನು ನೇಮಿಸಲಾಗಿದೆ. ಇತ್ತ ರೋಹಿತ್ ಶರ್ಮಾ ಸೇರಿರುವ ಮುಂಬೈ ತಂಡದ ನಾಯಕತ್ವವನ್ನು ಶಾರ್ದೂಲ್ ಠಾಕೂರ್ ವಹಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದು 2010ರಲ್ಲಿ. ಆ ಸಂದರ್ಭದಲ್ಲಿ ದೆಹಲಿ ಪರ ಐದು ಪಂದ್ಯಗಳಲ್ಲಿ ಕಣಕ್ಕಿಳಿದ ಅವರು, 45.80 ಸರಾಸರಿಯಲ್ಲಿ 229 ರನ್ ಗಳಿಸಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು.

ಇನ್ನೊಂದೆಡೆ, ರೋಹಿತ್ ಶರ್ಮಾ 2019ರಲ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಮುಂಬೈ ಪರ ಎರಡು ಪಂದ್ಯಗಳಲ್ಲಿ ಆಡಿದ ಅವರು ಒಟ್ಟು 50 ರನ್ ಗಳಿಸಿದ್ದರು. ಅದರ ನಂತರ ದೇಶೀಯ ಏಕದಿನ ಟೂರ್ನಿಯಲ್ಲಿ ಅವರು ಕಣಕ್ಕಿಳಿದಿರಲಿಲ್ಲ.

ಈಗ ವಿರಾಟ್ ಕೊಹ್ಲಿ ಸುಮಾರು 15 ವರ್ಷಗಳ ಬಳಿಕ ಹಾಗೂ ರೋಹಿತ್ ಶರ್ಮಾ 7 ವರ್ಷಗಳ ನಂತರ ವಿಜಯ ಹಝಾರೆ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಇಬ್ಬರೂ ದಿಗ್ಗಜರು ಎರಡು ಪಂದ್ಯಗಳಲ್ಲಿ ಭಾಗವಹಿಸಲಿದ್ದು, ನಂತರ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸಲಿದ್ದಾರೆ.

ವಿಜಯ ಹಜಾರೆ ಟೂರ್ನಿಗೆ ದೆಹಲಿ ತಂಡ: ರಿಷಭ್ ಪಂತ್, ವಿರಾಟ್ ಕೊಹ್ಲಿ (ಎರಡು ಪಂದ್ಯಗಳಿಗೆ), ಇಶಾಂತ್ ಶರ್ಮಾ, ನವದೀಪ್ ಸೈನಿ, ಆಯುಷ್ ಬದೋನಿ, ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ದಹಿಯಾ, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ್ ತ್ಯಾಗಿ, ಸಿಮರ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರ, ಆಯುಷ್ ದೋಸೆಜ, ವೈಭವ್ ಕಡ್ಪಲ್, ರೋಹನ್ ರಾಣಾ, ಅನೂಜ್ ರಾವತ್ (ಮೀಸಲು ಆಟಗಾರ).

ವಿಜಯ ಹಜಾರೆ ಟೂರ್ನಿಗೆ ಮುಂಬೈ ತಂಡ: ರೋಹಿತ್ ಶರ್ಮಾ (ಎರಡು ಪಂದ್ಯಗಳಿಗೆ), ಶಾರ್ದೂಲ್ ಠಾಕೂರ್ (ನಾಯಕ), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಇಶಾನ್ ಮುಲ್ಚಂದಾನಿ, ಶಮ್ಸ್ ಮುಲಾನಿ, ಮುಶೀರ್ ಖಾನ್, ತನುಷ್ ಕೋಟ್ಯಾನ್, ಅಂಗ್‌ಕ್ರಿಶ್ ರಘುವಂಶಿ, ತುಷಾರ್ ದೇಶಪಾಂಡೆ, ಸರ್ಫರಾಝ್ ಖಾನ್, ಓಂಕಾರ್ ತರ್ಮಲೆ, ಸಿದ್ದೇಶ್ ಲಾಡ್, ಸಿಲ್ವಸ್ಟರ್ ಡಿಸೋಝ, ಚಿನ್ಮಯ್ ಸುತಾರೆ, ಸಾಯಿರಾಜ್ ಪಾಟೀಲ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಸೂರ್ಯನಾಶ್ ಶೆಡ್ಗೆ.

ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ಯಾವುದೇ ಕಾರಣಕ್ಕೂ ನುಗ್ಗೆಕಾಯಿ ಸೇವಿಸಬೇಡಿ..!

0

ನುಗ್ಗೆಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿರುವ ತರಕಾರಿಯಾಗಿದೆ. ಇದರಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿ ಲಭ್ಯವಿವೆ. ನಿಯಮಿತವಾಗಿ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಣೆ, ರೋಗನಿರೋಧಕ ಶಕ್ತಿ ವೃದ್ಧಿ ಹಾಗೂ ಉರಿಯೂತ ಸಮಸ್ಯೆಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.

ನುಗ್ಗೆಕಾಯಿ ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು, ಅದರ ವಿಶಿಷ್ಟ ರುಚಿ ಮತ್ತು ಆರೋಗ್ಯ ಪ್ರಯೋಜನಗಳ ಕಾರಣದಿಂದ ಕರಿ, ಸೂಪ್ ಹಾಗೂ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನುಗ್ಗೆ ಎಲೆಗಳು ಸಹ ನೈಸರ್ಗಿಕ ಪ್ರೋಟೀನ್‌ನ ಉತ್ತಮ ಮೂಲವಾಗಿವೆ.

ಆದರೆ, ಇಷ್ಟೊಂದು ಆರೋಗ್ಯ ಪ್ರಯೋಜನಗಳಿದ್ದರೂ ಕೂಡ, ನುಗ್ಗೆಕಾಯಿ ಎಲ್ಲರಿಗೂ ಒಳ್ಳೆಯದೇ ಎಂಬುದಿಲ್ಲ. ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇದರ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ.

ಯಾರು ನುಗ್ಗೆಕಾಯಿ ಸೇವನೆ ಮಾಡಬಾರದು?

  • ಗರ್ಭಿಣಿಯರು: ನುಗ್ಗೆಕಾಯಿ ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಗುಣ ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಅಸ್ವಸ್ಥತೆ ಅಥವಾ ತೊಂದರೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಿಣಿಯರು ಇದರ ಸೇವನೆಯನ್ನು ತಪ್ಪಿಸುವುದು ಒಳಿತು.

  • ಮುಟ್ಟಿನ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವವಾಗುವ ಮಹಿಳೆಯರು: ನುಗ್ಗೆಕಾಯಿಯ ಬಿಸಿ ಗುಣ ರಕ್ತಸ್ರಾವವನ್ನು ಹೆಚ್ಚಿಸಬಹುದು. ಇದರಿಂದ ದೌರ್ಬಲ್ಯ ಅಥವಾ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆ.

  • ಕಡಿಮೆ ರಕ್ತದೊತ್ತಡ ಹೊಂದಿರುವವರು: ನುಗ್ಗೆಕಾಯಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈಗಾಗಲೇ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಇದನ್ನು ಸೇವಿಸಿದರೆ ಸಮಸ್ಯೆ ಹೆಚ್ಚಾಗಬಹುದು.

  • ಮೂರ್ಛೆ ಅಥವಾ ಅತಿಯಾದ ಆಯಾಸ ಅನುಭವಿಸುವವರು: ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ನುಗ್ಗೆಕಾಯಿ ಸೇವನೆಯನ್ನು ಮಿತಗೊಳಿಸುವುದು ಉತ್ತಮ.

  • ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳಿರುವವರು: ನುಗ್ಗೆಕಾಯಿಯಲ್ಲಿ ನಾರಿನ ಅಂಶ ಹೆಚ್ಚಿರುವುದರಿಂದ ಕೆಲವರಲ್ಲಿ ಉಬ್ಬರ, ಆಮ್ಲೀಯತೆ ಅಥವಾ ಹೊಟ್ಟೆ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದ್ದರಿಂದ ಇಂತಹವರು ಇದರ ಸೇವನೆಯನ್ನು ಕಡಿಮೆ ಮಾಡಬೇಕು ಅಥವಾ ತಪ್ಪಿಸಬೇಕು.

ಆಧ್ಯಾತ್ಮಿಕ ಪ್ರವಚನದಿಂದ ಬದುಕಿಗೆ ನೆಮ್ಮದಿ: ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆಧ್ಯಾತ್ಮಿಕ ಪುರಾಣ-ಪ್ರವಚನಗಳು ಪ್ರತಿಯೊಬ್ಬರಿಗೂ ಜೀವನ ವಿಕಾಸಕ್ಕೆ ದಾರಿ ತೋರಬಲ್ಲವು. ಪ್ರವಚನ ಆಲಿಸುವುದರಿಂದ ಜೀವನದಲ್ಲಿ ನೆಮ್ಮದಿ ಲಭಿಸುವ ಮಾರ್ಗದರ್ಶನ ಸಿಗುತ್ತದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಪೂಜ್ಯ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಬೈರಾಪುರ ಗ್ರಾಮದಲ್ಲಿ ನೆಗಳೂರ ಸಂಸ್ಥಾನ ಹಿರೇಮಠದ ನೂತನ ಮಹಾರಥ ಲೋಕಾರ್ಪಣೆ ಹಾಗೂ ಜಾತ್ರಾಮಹೋತ್ಸವ ನಿಮಿತ್ತ ಜರುಗುತ್ತಿರುವ ಪರಿವರ್ತನೆಯೆಡೆಗೆ ಧರ್ಮಜಾಗೃತಿ ಪ್ರವಚನ ಕಾರ್ಯಕ್ರಮದ 9ನೇ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪ್ರವಚನ ಆಲಿಸುವುದರಿಂದ ನಮ್ಮ ಅಂತರಂಗ ಪರಿಶುದ್ಧವಾಗುತ್ತದೆ. ಅದಕ್ಕಾಗಿ ಮಹಾತ್ಮರೆಲ್ಲರೂ ಸಹ ಸಂಸಾರದಲ್ಲಿದ್ದುಕೊಂಡೇ ಸಂಸಾರದ ಕಡೆಗೆ ಒಲವು ಹೊಂದಿ ಆಧ್ಯಾತ್ಮದ ಮಹಾ ಬೆಳಕಲ್ಲಿ ನೆಮ್ಮದಿಯ ಬದುಕು ಸಾಗಿಸಿದರು. ಅಂತಹ ಬದುಕು ಎಲ್ಲರದ್ದಾಗಬೇಕು ಎಂದರು.

ಪ್ರವಚನಕಾರ ಡಾ. ಗುರುಮಹಾಂತಯ್ಯ ಶಾಸ್ತ್ರಿ ಮಾತನಾಡಿ, ಸಂತ ಮಹಾತ್ಮರ ಜೀವನಚರಿತ್ರೆ ಆಧಾರಿತ ಪ್ರವಚನ ಕೇಳುವುದರಿಂದ ಮನಸ್ಸಿಗೆ ಅಂಟಿದ ದುರಾಲೋಚನೆಗಳು ದೂರವಾಗಿ ಬದುಕು ಹಸನಾಗುವುದು. ಆ ನಿಟ್ಟಿನಲ್ಲಿ ನೆಗಳೂರಿನ ಶ್ರೀಗಳು ಕಳೆದ ಒಂದೂವರೆ ತಿಂಗಳಿನಿಂದ ಆಯ್ದ ಗ್ರಾಮಗಳಲ್ಲಿ ಪ್ರವಚನ ಆಯೋಜಿಸಿ ಸದ್ಭಕ್ತರನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸದ್ಭಾವನಾ ಪಾದಯಾತ್ರೆ, ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಅಭಿಯಾನ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು ಎಂದರು.

ಕಾರ್ಯಕ್ರಮದಲ್ಲಿ ಹಿರೇಮರಳಿಹಳ್ಳಿಯ ಷಣ್ಮುಖಪ್ಪ ಕಮ್ಮಾರ ತಬಲಾ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಬೈರಾಪುರ, ಇಚ್ಚಂಗಿ, ಕಲಿವಾಳ, ನೆಗಳೂರ ಗ್ರಾಮಸ್ಥರು ಭಾಗಿಯಾಗಿದ್ದರು.

ಕಾರು-ಸ್ಕೂಟಿ ಭೀಕರ ಅಪಘಾತ: ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಗಾಯ!

0

ಚಿಕ್ಕಬಳ್ಳಾಪುರ:- ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಚಿಕ್ಕಬಳ್ಳಾಪುರದ ಬೈಪಾಸ್​​ನಲ್ಲಿ ಜರುಗಿದೆ.

ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮತ್ತು ಇಬ್ಬರು ಮಕ್ಕಳಿಗೆ ಗಾಯವಾಗಿದೆ. ಸ್ಕೂಟಿ ಸವಾರ ಮುನಿಕೃಷ್ಣನ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಪತ್ನಿ ಮುನಿರತ್ನಮ್ಮ ಪ್ರಜ್ಞೆ ತಪ್ಪಿದ್ದು, ಮಕ್ಕಳಿಗೂ ಗಾಯಗಳಾಗಿವೆ.

ಕಾರಿನಲ್ಲಿದ್ದ ಯುವಕರು ಮದ್ಯ ಸೇವಿಸಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ಭೇಟಿ ನಂತರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬಾಳೆಹೊನ್ನೂರು ಶ್ರೀ ಜಗದ್ಗುರು ಪೀಠಕ್ಕೆ ಸಚಿವ ಪ್ರಹ್ಲಾದ ಜೋಶಿ ಭೇಟಿ

0

ಬಾಳೆಹೊನ್ನೂರು: ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಶನಿವಾರ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ನಂತರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ದರ್ಶನ ಮತ್ತು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಡಿ.ಎನ್. ಜೀವರಾಜ್, ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಬಾಲ್ಯ ವಿವಾಹ ತಡೆಗಟ್ಟಲು ಕಠಿಣ ಕ್ರಮ: ಜಿಲ್ಲಾಧಿಕಾರಿ ದಿವ್ಯ ಪ್ರಭು

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಾರತ ಸರ್ಕಾರವು ಮುಂದಿನ 10 ವರ್ಷಗಳಲ್ಲಿ ಇಡೀ ದೇಶವನ್ನು ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಅಭಿಯಾನ ಹಮ್ಮಿಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ, ಜಿಲ್ಲೆಗಳಿಗೆ ಸೂಚಿಸಿದೆ. ಧಾರವಾಡ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪೂರ್ವದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳನ್ನು ಬಾಲ್ಯ ವಿವಾಹ ಮುಕ್ತ ಗ್ರಾಮಗಳನ್ನಾಗಿ ಘೋಷಿಸಬೇಕು. ಅದಕ್ಕಾಗಿ ಹಮ್ಮಿಕೊಂಡಿರುವ 100 ದಿನಗಳ ಮಕ್ಕಳ ಜಾಗೃತಿ ಕಾರ್ಯಕ್ರಮಗಳು ಜಿಲ್ಲೆಯ ಪ್ರತಿ ಮನೆಗಳಿಗೆ ತಲುಪಬೇಕೆಂದು ಜಿಲ್ಲಾ ಬಾಲ್ಯ ವಿವಾಹ ನಿಷೇಧ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಶನಿವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ 1098 ಮತ್ತು 112 ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳನ್ನು ಹೊಂದಿರುವ ಬಾಲ್ಯ ವಿವಾಹ ನಿಯಂತ್ರಣ ಮತ್ತು ನಿಷೇಧ ಸಮಿತಿಗಳನ್ನು ರಚಿಸಿ ಸಕ್ರಿಯಗೊಳಿಸಲಾಗಿದೆ. ಕಳೆದ ವರ್ಷ ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗಿದ್ದು, ಮುಂದಿನ ವರ್ಷಕ್ಕೆ ಅದನ್ನು ಶೂನ್ಯಗೊಳಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕೆಂದು ಅವರು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬಾಲ್ಯ ವಿವಾಹಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಸರ್ವೋಚ್ಛ, ಉಚ್ಚ ನ್ಯಾಯಾಲಯಗಳು ನಿರ್ದೇಶಿಸಿವೆ. ಅದರಂತೆ ಇಡೀ ದೇಶದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಅಭಿಯಾನವನ್ನು ಆರಂಭಿಸಲಾಗಿದೆ. ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಕೈಜೋಡಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ವೇದಿಕೆಯಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್. ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಡಿವೈಎಸ್‌ಪಿ ವಿನೋದ ಮುಕ್ತೇದಾರ ಉಪಸ್ಥಿತರಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹ್ಮದ್‌ಅಲಿ ತಹಸೀಲ್ದಾರ ನಿರೂಪಿಸಿದರು. ಪ್ರಕಾಶ ಕೊಡ್ಲಿವಾಡ ವಂದಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕಿ ಡಾ. ಕಮಲಾ ಬೇಲೂರು ಹಾಗೂ ಎಲ್ಲ ತಾಲೂಕಿನ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಲ್ಯ ವಿವಾಹವನ್ನು ಹೋಗಲಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಿಳುವಳಿಕೆ ನೀಡಿದರೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಪ್ರತಿಯೊಂದು ಹಂತದಲ್ಲಿ ಜನರಿಗೆ ತಿಳುವಳಿಕೆಯನ್ನು ನೀಡಿ, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ನಾಗರಿಕರ ಕರ್ತವ್ಯ ಹಾಗೂ ಸಮಾಜದ ಜವಾಬ್ದಾರಿಯೂ ಹೌದು ಎಂದು ಡಿ.ಸಿ. ದಿವ್ಯ ಪ್ರಭು ಹೇಳಿದರು.

ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಕಲೆ, ಸಾಹಿತ್ಯ, ಸಂಸ್ಕೃತಿಯ ನೆಲೆಬೀಡಾದ ಗದಗ ಜಿಲ್ಲೆ ಕ್ರೀಡಾಕ್ಷೇತ್ರಕ್ಕೂ ಅಪಾರ ಕೊಡುಗೆಯನ್ನು ನೀಡಿದೆ. ಗದುಗಿನಿಂದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಾಕಿ, ಕ್ರಿಕೆಟ್, ಕುಸ್ತಿ, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಇಂತಹ ಗದಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಪ.ಪೂ ಕಾಲೇಜು ವಿದ್ಯಾರ್ಥಿಗಳ ಟೆನ್ನಿಕಾಯಿಟ್ ಪಂದ್ಯಾಟಗಳು ನಡೆಯುತ್ತಿರುವುದು ಸ್ವಾಗತಾರ್ಹ. ಗದಗ ಜಿಲ್ಲೆಯಿಂದ ಅನೇಕ ರಾಷ್ಟ್ರೀಯ ಮಟ್ಟದ ಟೆನ್ನಿಕಾಯಿಟ್ ಕ್ರೀಡಾಪಟುಗಳು ಹೊರಹೊಮ್ಮಲೆಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಆಶಿಸಿದರು.

ಅವರು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಪ.ಪೂ.ಶಿ ಇಲಾಖೆ ಬೋಧಕೇತರ ಸಂಘದ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ಗದುಗಿನ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನೆರವೇರಿದ ಕರ್ನಾಟಕ ರಾಜ್ಯ ಪ.ಪೂ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನ್ನಿಕಾಯಿಟ್ ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸರಕಾರದಿಂದ ಗದಗ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಗಳನ್ನು ಆಡಿಸಬಹುದಾದಂತಹ ಮಹಾತ್ಮ ಗಾಂಧಿ ಹಾಕಿ ಟರ್ಫ್ ಗ್ರೌಂಡ್, ಕ್ರಿಕೆಟ್ ನೆಟ್ ಪ್ರಾಕ್ಟಿಸ್ ಗ್ರೌಂಡ್, ನಾಲ್ಕು ಈಜುಕೊಳಗಳು ಈಗಾಗಲೇ ಕ್ರೀಡಾಪಟುಗಳಿಗೆ ಸದ್ಬಳಕೆಯಾಗುತ್ತಿದ್ದು, ಶೀಘ್ರದಲ್ಲಿಯೇ ಕಳಸಾಪೂರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್ ಕೋರ್ಟ್‌ನನ್ನು ಸಿದ್ಧಪಡಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಮಾತನಾಡಿ, ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮಾಡಲು ಸರ್ಕಾರವು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಸಮಾರಂಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಗಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗದಗ ಜಿ.ಪಂ ಮಾಜಿ ಅಧ್ಯಕ್ಷರುಗಳಾದ ವಾಸಣ್ಣ ಕುರುಡಗಿ, ಸಿದ್ದಲಿಂಗೇಶ ಪಾಟೀಲ, ಕ್ರೀಡಾ ವೀಕ್ಷಕರಾಗಿ ಆಗಮಿಸಿದ ಹಾಸನದ ಕೃಷ್ಣಪ್ಪ, ನಿರ್ಣಾಯಕರ ತಂಡದ ಮುಖ್ಯಸ್ಥರಾದ ನವೀನಕುಮಾರ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ್ದರು.

ಸಂಜನಾ ತೆಂಬದಮನಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಂ.ಸಿ. ಕಟ್ಟಿಮನಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ, ಪ್ರೊ. ಪ್ರಿಯಾಂಕ ಬೊಮ್ಮಾಯಿನವರ ನಿರೂಪಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ ವಂದಿಸಿದರು. ಪ.ಪೂ.ಶಿ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗ ಮಸನಾಯಿಕ, ಹಿರಿಯ ಪ್ರಾಚಾರ್ಯರಾದ ಜಿ.ಎನ್. ಕುರ್ತಕೋಟಿ, ಗಿರಿತಮ್ಮಣ್ಣವರ, ಜೆ.ಎ. ಶಿರಸಿ, ಹಾದಿಮನಿ, ಅಶೋಕ ಅಂಗಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳಿಂದ ಸುಮಾರು 300ಕ್ಕೂ ಹೆಚ್ಚು ಬಾಲಕ ಮತ್ತು ಬಾಲಕಿಯರ ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲೆಯ ಪ.ಪೂ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳಾದ ವಿ.ಎಂ. ಪಾಟೀಲ, ಬಿ.ವಿ. ಪಾಟೀಲ, ರಮಾಕಾಂತ ದೊಡ್ಡಮನಿ, ಶಶಿಧರ ಕುರಿ, ಕಿಶೋರ ನಾಗರಕಟ್ಟಿ, ಪೂರ್ಣಿಮಾ ಹೊಸಮನಿ, ವಾಯ್.ಎಸ್. ಮತ್ತೂರ, ಪ್ರಾ. ಹಾವೇರಿ, ಜಿಲ್ಲಾ ಕ್ರೀಡಾ ಸಂಚಾಲಕರಾದ ಎಚ್.ಎಸ್. ಶಿವಪ್ಪಯ್ಯನಮಠ, ವಾಯ್.ಎಸ್. ಹುನಗುಂದ, ಚೇಗರೆಡ್ಡಿ ಸೇರಿದಂತೆ ಉಪನ್ಯಾಸಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ.ಪೂ.ಶಿ ಇಲಾಖೆಯಲ್ಲಿ ಸಾಧನೆಗೈದ ಹಾಗೂ ಕ್ರೀಡಾಕೂಟಕ್ಕೆ ಸಹಾಯ-ಸಹಕಾರ ಸಲ್ಲಿಸಿದ ಮೇಜರ್ ಡಾ. ಪ್ರಾ. ಬಿ.ಎಸ್. ರಾಠೋಡ, ರಾಜೇಶ ಕುಲಕರ್ಣಿ, ಪ್ರಾ. ವಿ.ಎಸ್. ದಲಾಲಿ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ಗದಗ ಜಿಲ್ಲೆಯ ಪ.ಪೂ ಕಾಲೇಜು ವಿದ್ಯಾರ್ಥಿಗಳನ್ನು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ವಿಕಲಚೇತನ ಕ್ರೀಡಾಪಟುಗಳನ್ನು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಪ್ರಾಚಾರ್ಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಕೆ.ಎಚ್. ಪಾಟೀಲ ಸ್ಟೇಡಿಯಂನಲ್ಲಿ ಫುಟ್‌ಬಾಲ್ ಟರ್ಫ್ ಮೈದಾನ ಮತ್ತು ಫ್ಲಡ್‌ಲೈಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಎಲ್ಲ ಕ್ರೀಡಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಬೇಕೆಂದು ಸಚಿವ ಎಚ್.ಕೆ. ಪಾಟೀಲ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಒತ್ತಡ ಮುಕ್ತ ಜೀವನಕ್ಕೆ ಧ್ಯಾನ ಸಹಕಾರಿ: ಪ್ರಭುಲಿಂಗದೇವರು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಧ್ಯಾನವು ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ಒಂದು ಪದ್ಧತಿಯಾಗಿದ್ದು, ಇದು ಮನಸ್ಸಿನ ಏಕಾಗ್ರತೆ ಹಾಗೂ ಶಾಂತತೆಗೆ ಸಹಕಾರಿಯಾಗಿದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ಹೇಳಿದರು.

ಅವರು ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಅವ್ವ ಪ್ರತಿಷ್ಠಾನ, ನೆಹರು ಯುವ ಕೇಂದ್ರ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2ನೇ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾರತ ಪರಿಚಯಿಸಿದ ಧ್ಯಾನ ಹಾಗೂ ಯೋಗ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರೂ ನಿತ್ಯ ಯೋಗ, ಧ್ಯಾನವನ್ನು ಮಾಡುವುದರಿಂದ ಏಕಾಗ್ರತೆ ಹಾಗೂ ಮಾನಸಿಕ ಒತ್ತಡ ನಿವಾರಣೆಯಿಂದ ಮನಸ್ಸು ಉಲ್ಲಾಸಭರಿತವಾಗಿರಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ರುದ್ರಣ್ಣಾ ಗುಳಗುಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿತ್ಯ ಒಂದು ಗಂಟೆ ಧ್ಯಾನ ಹಾಗೂ ಯೋಗಾಭ್ಯಾಸ ಮಾಡುವುದರಿಂದ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಯೋಗ ಹಾಗೂ ಧ್ಯಾನ ಮಾಡುವುದು ಅವಶ್ಯಕ ಎಂದರು.

ಎಸ್.ಸಿ. ಬಡ್ನಿ, ಕೇಶವ ದೇವಾಂಗ್, ಶಿವಪ್ರಕಾಶ ಮಹಾಜನಶೆಟ್ಟಿ, ಡಾ. ಎಸ್.ಸಿ. ಚವಡಿ, ಮಂಜುನಾಥ ಮಾಗಡಿ, ದಶರಥ ಕೊಟೆಗೌಡ್ರ, ಪರಶುರಾಮ ವಂಟಕರ, ನಾಗರಾಜ ಸುರಣಗಿ, ವಿ.ಎಸ್. ನೀಲಗುಂದ, ಡಿ.ಎಸ್. ನೀಲಗುಂದ, ಮಂಜುನಾಥ ಮಟ್ಟಿ, ಪುನೀತ ಓಲೆಕಾರ, ಅನೂಪ ಕೆಂಚನಗೌಡರ, ಬಸವರಾಜ ಹಾರೋಗೇರಿ, ಗಿರೀಶ ಹುಲ್ಲೂರ, ರಾಜು ರಸಾಳಕರ, ಮಾಲಕ್ಕ ದಂದರಗಿ, ಶೈಲಾ ಆದಿ, ಶಶಿಕಲಾ ವಡಕಣ್ಣವರ, ಗೀತಾ ಜಾಧಾವ, ಶಾಂತಾ ಬೆನಕನ್ನವರ, ಹರ್ಷಲತಾ ದೇಶಪಾಂಡೆ, ಮಂಗಳಾ ನೀಲಗುಂದ, ನಾಗವೇಣಿ ನಾಯರ್, ಅಕ್ಕಮ್ಮಾ ನೀಲಗುಂದ, ಬ್ರಹ್ಮಕುಮಾರಿ ಶಿವಾನಿ ಅಕ್ಕ, ಶೋಭಾ ಪಾಟೀಲ, ಯೋಗ ಶಿಕ್ಷಕ ಪ್ರಕಾಶ ಮದ್ದಿನ ಇದ್ದರು.

ತಪ್ಪಿದ ಚಾಲಕನ ನಿಯಂತ್ರಣ: ರಸ್ತೆ ತಿರುವಿನಲ್ಲಿ ಪ್ರವಾಸಿ ಬಸ್ ಪಲ್ಟಿ, ಹಲವರಿಗೆ ಗಾಯ!

0

ಚಿಕ್ಕಮಗಳೂರು:- ಕಳಸ ತಾಲೂಕಿನ ಕಲ್ಮಕ್ಕಿ-ಕಂಚಿಗಾನೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ಸೊಂದು ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿರುವ ಘಟನೆ ಜರುಗಿದೆ.

ರಾಜಧಾನಿ ಬೆಂಗಳೂರಿನಿಂದ ಹೊರನಾಡಿಗೆ ಪ್ರವಾಸಕ್ಕೆಂದು ತೆರಳುತ್ತಿದ್ದ ಬಸ್ಸಿನಲ್ಲಿ ಸುಮಾರು 45ಕ್ಕೂ ಹೆಚ್ಚು ಪ್ರವಾಸಿಗರಿದ್ದರು. ಅಪಘಾತದ ತೀವ್ರತೆಗೆ ಇಬ್ಬರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ಹಲವು ಪ್ರವಾಸಿಗರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!