Home Blog Page 296

Indian Railway: ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ! ಡಿಸೆಂಬರ್ 26ರಿಂದ ಟಿಕೆಟ್ ಬೆಲೆ ಹೆಚ್ಚಳ!

0

ನವದೆಹಲಿ: ಮುಂದಿನ ದಿನಗಳಲ್ಲಿ ರೈಲು ಪ್ರಯಾಣ ತುಸು ದುಬಾರಿಯಾಗಲಿದೆ. ದೂರ ಪ್ರಯಾಣದ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ ನಿರ್ಧರಿಸಿದೆ. ಉಪನಗರ (ಸಬರ್ಬನ್) ರೈಲುಗಳ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರಿಷ್ಕೃತ ದರಗಳು ಡಿಸೆಂಬರ್ 26ರಿಂದ ಜಾರಿಗೆ ಬರಲಿವೆ.

ವರದಿಗಳ ಪ್ರಕಾರ, 215 ಕಿಲೋಮೀಟರ್ ವರೆಗಿನ ಸಾಮಾನ್ಯ ವರ್ಗ (ಜನರಲ್ ಕ್ಲಾಸ್) ಪ್ರಯಾಣಿಕರ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ 215 ಕಿಲೋಮೀಟರ್ ಮೀರಿದ ಪ್ರಯಾಣಕ್ಕೆ ಪ್ರತೀ ಕಿಲೋಮೀಟರ್‌ಗೆ 1 ಪೈಸೆಯಷ್ಟು ದರ ಏರಿಕೆ ಮಾಡಲಾಗಿದೆ. ಅಂದರೆ ಪ್ರತೀ 100 ಕಿಲೋಮೀಟರ್ ಹೆಚ್ಚುವರಿ ದೂರಕ್ಕೆ 1 ರೂಪಾಯಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ.

ಇನ್ನೂ ಎಸಿ ಕೋಚ್‌ಗಳ ಟಿಕೆಟ್ ದರವನ್ನು ಪ್ರತೀ ಕಿಲೋಮೀಟರ್‌ಗೆ 2 ಪೈಸೆಯಷ್ಟು ಹೆಚ್ಚಿಸಲಾಗಿದೆ. ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಲ್ಲಿನ ನಾನ್-ಎಸಿ ಕೋಚ್‌ಗಳಿಗೂ ಇದೇ ಪ್ರಮಾಣದ ದರ ಏರಿಕೆ ಜಾರಿಯಾಗಲಿದೆ. ಈ ಕೋಚ್‌ಗಳಲ್ಲಿ ಪ್ರತೀ 50 ಕಿಲೋಮೀಟರ್ ದೂರಕ್ಕೆ 1 ರೂಪಾಯಿ ಹೆಚ್ಚುವರಿ ಶುಲ್ಕ ಸೇರಲಿದೆ.

ಈ ಪರಿಷ್ಕೃತ ದರದ ಬಳಿಕವೂ ಭಾರತದಲ್ಲಿ ರೈಲು ಪ್ರಯಾಣ ಇತರೆ ಸಾರಿಗೆ ವ್ಯವಸ್ಥೆಗಳಿಗಿಂತ ಕಡಿಮೆ ವೆಚ್ಚದಲ್ಲೇ ಇರುತ್ತದೆ ಎಂದು ರೈಲ್ವೆ ತಿಳಿಸಿದೆ. ಈ ಅಲ್ಪ ದರ ಏರಿಕೆಯಿಂದ ಭಾರತೀಯ ರೈಲ್ವೆಗೆ ವಾರ್ಷಿಕವಾಗಿ ಸುಮಾರು 600 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ಲಭ್ಯವಾಗುವ ನಿರೀಕ್ಷೆಯಿದೆ.

ಪ್ರತಿಪಕ್ಷ, ರೈತರನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಯಂತ್ರಣ ಕಾನೂನು: ಬಸವರಾಜ ಬೊಮ್ಮಾಯಿ

0

ಗದಗ: ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ರೈತರು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಯಾವ ಇಲಾಖೆಯಲ್ಲಿಯೂ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಜನರು ಇದನ್ನು ವಿರೋಧ ಮಾಡಬಾರದು ಎಂದು ದ್ವೇಷ ಭಾಷಣದ ವಿರುದ್ಧ ಕಾನೂನು ಮಾಡಿದ್ದಾರೆ.

ಕಾಂಗ್ರೆಸ್‌ ನವರೇ ಹೆಚ್ಚು ದ್ವೇಷ ಭಾಷಣ ಮಾಡಿದ್ದಾರೆ. ಈಗಾಗಲೇ ದ್ವೇಷ ಭಾಷಣ ಮಾಡುವುದನ್ನು ನಿಯಂತ್ರಿಸಲು ಬಿಎನ್‌ಎಸ್ ಕಾನೂನಿದೆ. ಇವರು ವಿರೋಧ ಪಕ್ಷ, ರೈತರನ್ನು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ಈ ಕಾನೂನು ತಂದಿದ್ದಾರೆ ಎಂದು ಹೇಳಿದರು.

ಜಿ. ರಾಮ್ ಜಿ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ ರಾಮ್ ಜಿ ವಿಧೇಯಕದ ಬಗ್ಗೆ ಸಂಸತ್ತಿನಲ್ಲಿ ಸುಮಾರು ಹದಿನೈದು ಗಂಟೆಗಳಿಗಿಂತ ಸುದೀರ್ಘವಾಗಿ ಚರ್ಚೆಯಾಗಿದೆ. ಪ್ರಮುಖವಾಗಿ ಹದಿನೈದು ಇಪ್ಪತ್ತು ವರ್ಷದಿಂದ ಇದ್ದ ಕಾನೂನು ಇವತ್ತಿನ ಗ್ರಾಮೀಣ ಪರಿಸ್ಥಿತಿ ಬಹಳ ಬದಲಾಗಿದೆ.

ಅದರ ಅನುಗುಣವಾಗಿ ಬದಲಾವಣೆ ಮಾಡಾಲಾಗಿದೆ. ಭ್ರಷ್ಟಾಚಾರ ಹೆಚ್ಚಾಗಿತ್ತು. ಯೋಜನೆ ದುರುಪಯೋಗ ಆಗುತ್ತಿರುವ ಆರೋಪ ಇತ್ತು. ತಾಂತ್ರಿಕವಾಗಿ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಸೋರಿಕೆ ತಡೆಯಲಾಗಿದೆ. ಆಸ್ತಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಈ ಯೋಜನೆ ಬಳಕೆ ಆಗಬೇಕೆಂದು ಬದಲಾವಣೆ ತಂದಿದ್ದಾರೆ.

ಪ್ರತಿ ವರ್ಷ ಒಂದು ಲಕ್ಷ ಹನ್ನೊಂದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದು ಒಳ್ಳೆಯ ಉದ್ದೇಶಕ್ಕೆ ಆಗಬೇಕು. ಬಹಳಷ್ಟು ರಾಜ್ಯಗಳಲ್ಲಿ ದುರುಪಯೋಗ ಆಗುತ್ತಿತ್ತು. ನೋಂದಣಿ ಅಥವಾ ಉದ್ಯೋಗದ ದಿನಗಳನ್ನು ಕಡಿಮೆ ಮಾಡಿಲ್ಲ. 25 ದಿನ ಹೆಚ್ಚಿಗೆ ಮಾಡಲಾಗಿದೆ. ಆದ್ದರಿಂದ ಇದೊಂದು ಪ್ರಗತಿಪರವಾಗಿದೆ. ವಿರೋಧ ಪಕ್ಷಗಳು ಇದನ್ನು ವಿರೋಧ ಮಾಡಲು ವಿರೋಧಿಸುತ್ತಿವೆ ಎಂದು ಹೇಳಿದರು.

ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ.ನಗದು ಬಹುಮಾನ ಘೋಷಿಸಲಾಗಿದ್ದು, ಕರ್ನಾಟಕದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲುವರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಅವರು ಇಂದು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿಗೆ ಭಾಜನರಾಗಿರುವ ಕ್ರೀಡಾ ಸಾಧಕರಿಗೆ ಅಭಿನಂದಿಸಿದ ಮುಖ್ಯಮಂತ್ರಿಗಳು, 1958 ರಲ್ಲಿ ಪ್ರಾರಂಭವಾದ ಒಲಂಪಿಕ್ಸ್ ಸಂಸ್ಥೆ ಇಲ್ಲಿಯವರೆಗೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದೆ.

ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್ ಅವರು ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡ ನಂತರ ಸಂಸ್ಥೆಯು ಹೆಚ್ಚು ಕ್ರಿಯಾಶೀಲ ವಾಗಿದೆ. ನನ್ನ ಅವಧಿಯಲ್ಲಿಯೇ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನೂ ನಾನೇ ನೆರವೇರಿಸಿದ್ದೇನೆ.

ಇಡೀ ದೇಶದಲ್ಲಿಯೇ ಆಂಧ್ರ ಮತ್ತು ಕೇರಳ ರಾಜ್ಯದಂತೆ ಕರ್ನಾಟಕದಲ್ಲಿಯೂ ಸಂಸ್ಥೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

 

ಅಪೆಕ್ಸ್ ಬ್ಯಾಂಕ್ ಚುನಾವಣೆ ಹಿನ್ನೆಲೆ ರಾಜಣ್ಣ–ಡಿಕೆಶಿ ಭೇಟಿ: ಎನ್.ಎಸ್. ಬೋಸರಾಜು ಸ್ಪಷ್ಟನೆ

0

ರಾಯಚೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹಕಾರಿ ಅಪೆಕ್ಸ್ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಸಣ್ಣ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ನಗರದ ಕೆಇಬಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಕೆ.ಎನ್. ರಾಜಣ್ಣ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕರು ಎಂದು ಹೇಳಿದರು.

ಅವರು ಸಚಿವರಾಗಿದ್ದಷ್ಟೇ ಅಲ್ಲದೆ, ಅಪೆಕ್ಸ್ ಬ್ಯಾಂಕ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದೆ. ಬ್ಯಾಂಕ್‌ನಲ್ಲಿ ಅವರದೇ ತಂಡ ಇರುವ ಕಾರಣದಿಂದ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವ ಉದ್ದೇಶದಿಂದ ಈ ಇಬ್ಬರ ಭೇಟಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ವಿರೋಧ ಪಕ್ಷಗಳು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಬೋಸರಾಜು, ಈ ಕುರಿತು ಮುಖ್ಯಮಂತ್ರಿ ಸದನದಲ್ಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಕಾಂಗ್ರೆಸ್ ಬದ್ಧವಾಗಿದ್ದು, ಎಲ್ಲರೂ ಅದರಂತೆ ನಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೃಹಲಕ್ಷ್ಮಿಯರಿಗೆ ಸಚಿವೆ ಹೆಬ್ಬಾಳ್ಕರ್ ಶುಭಸುದ್ದಿ: ಸೋಮವಾರದಿಂದ ಶನಿವಾರದ ಒಳಗೆ ಸಿಗಲಿದೆ 24ನೇ ಕಂತಿನ ಹಣ

0

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ವಿಚಾರ ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಯೋಜನೆಯ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ.

ಸೋಮವಾರದಿಂದ ಶನಿವಾರದ ಒಳಗೆ ಗೃಹಲಕ್ಷ್ಮೀ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಸಚಿವೆ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಮುಂದಿನ ವಾರ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು.

ಇನ್ನೂ ಮೃತಪಟ್ಟವರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ತಪ್ಪಾಗಿ ಜಮೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವೆ, ಈ ವಿಷಯವಾಗಿ ಮುಖ್ಯ ಕಾರ್ಯದರ್ಶಿ (CS) ನೇತೃತ್ವದಲ್ಲಿ ಎರಡು ಬಾರಿ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಮೃತಪಟ್ಟವರ ಖಾತೆಗೆ ಹಣ ಜಮೆಯಾಗಿದೆಯೇ ಎಂಬುದು ತಕ್ಷಣ ಪತ್ತೆಯಾಗುವುದಿಲ್ಲ. ಇದಕ್ಕಾಗಿ ಹೊಸ ಸಾಫ್ಟ್‌ವೇರ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡಲಿದ್ದು, ಈ ಮೂಲಕ ಸತ್ತವರ ಖಾತೆಗೆ ಹಣ ಜಮೆಯಾಗುವುದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ತಪ್ಪಾಗಿ ಸಂದಾಯವಾಗಿರುವ ಹಣವನ್ನು ವಾಪಸ್ ಪಡೆಯುವ ಹೊಣೆಗಾರಿಕೆಯನ್ನು ಕೆಲ ಬ್ಯಾಂಕ್‌ಗಳಿಗೆ ನೀಡಲಾಗಿದ್ದು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್‌ಗಳಿಗೆ ನೋಟಿಸ್ ನೀಡಿದ್ದು, ಪತ್ರವೂ ಬರೆದಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮಂಡ್ಯ: ಬೈಕ್‌’ಗೆ ಅಪರಿಚಿತ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

0

ಮಂಡ್ಯ: ಮದ್ದೂರು ತಾಲ್ಲೂಕಿನ ತೊರೆಶೆಟ್ಟಹಳ್ಳಿ ಬಳಿ ಶನಿವಾರ ತಡರಾತ್ರಿ ನಡೆದ ಅಪಘಾತದಲ್ಲಿ ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ನಿವಾಸಿ ಭೈರವ (29) ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ನಂತರ ಮೃತ ಯುವಕನ ಶವವನ್ನು ಮದ್ದೂರು ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕೆಸ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣವನ್ನು ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲು ಮಾಡಲಾಗಿದೆ ಮತ್ತು ತನಿಖೆ ಆರಂಭಿಸಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಟ್ರ್ಯಾಕ್ಟರ್-ಬೈಕ್ ನಡುವೆ ಅಪಘಾತ: ನವವಿವಾಹಿತೆ ಸಾವು, ಪತಿಗೆ ಗಂಭೀರ ಗಾಯ

0

ಚಿಕ್ಕಬಳ್ಳಾಪುರ: ಶನಿವಾರ ಚಿನ್ನೇಪಳ್ಳಿ ಕ್ರಾಸ್‌ನ ಆರ್‌ಎಸ್ ಕಲ್ಯಾಣ ಮಂಟಪದ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್​​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಹಿಂಬದಿಯಲ್ಲಿ ಕುಳಿತ ನವವಿವಾಹಿತೆ ವರ್ಷಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸವಾರ ಸುರೇಂದ್ರ ಗಂಭೀರ ಗಾಯಗೊಂಡಿದ್ದಾರೆ.

ಮೃತ ವರ್ಷಿಣಿ ಬಾಗೇಪಳ್ಳಿ ತಾಲ್ಲೂಕಿನ ಚೆಂಚುರಾಯನಪಳ್ಳಿ ಗ್ರಾಮದವರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಅವರು ಸುರೇಂದ್ರ ಅವರೊಂದಿಗೆ ಮದುವೆಯಾಗಿದ್ದರು. ಅಪಘಾತದಲ್ಲಿ ಗಾಯಗೊಂಡ ಸುರೇಂದ್ರರನ್ನು ತಕ್ಷಣವೇ ಬಾಗೇಪಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಬಾಗೇಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

ಯಾವುದೇ ಅಭಿವೃದ್ಧಿ ಜೀವ ತೆಗೆಯುವಂತಿರಬಾರದು: ಬಿ.ಕೆ. ಪಟ್ಟಣಶೆಟ್ಟಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲಾ ಕೇಂದ್ರ, ಭಾಗ್ಯನಗರದ 1.5 ಲಕ್ಷ ಜನರ ಜೀವ, ಆರೋಗ್ಯ ಕಾಳಜಿ ಇಲ್ಲದೆ ಸರ್ಕಾರ 54 ಸಾವಿರ ಕೋಟಿ ವೆಚ್ಚ ಮಾಡಿ ಬಲ್ಡೋಟಾ ವಿಸ್ತರಣೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದು ಎನ್.ಕೆ.ಪಿ.ಎಂ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯ 51ನೇ ದಿನದ ಹೋರಾಟಕ್ಕೆ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಈಗಿರುವ ಪೆಲೆಟ್ ಒಂದು ಘಟಕದಿಂದ ಆಗುತ್ತಿರುವ ಅನಾಹುತವೇ ದೊಡ್ಡದು. ಮತ್ತೆ ಸ್ಟೀಲ್-ವಿದ್ಯುತ್ ಉತ್ಪಾದನೆಗಾಗಿ ವಿಸ್ತರಣೆ ಮಾಡಲು ಮುಂದಾಗಿದ್ದು ಸರಿಯಲ್ಲ. ಕೈಗಾರಿಕೆಗಳು ಜನವಸತಿ ಇದ್ದ ಕಡೆ ಇರಕೂಡದು. ವಿಷಾನಿಲ ಉಗುಳಿ ಮಾಲಿನ್ಯ ಮಾಡುವ ಕಾರ್ಖಾನೆಗಳಂತೂ ಜನವಸತಿಯಿಂದ ದೂರವಿದ್ದು, ಬಫರ್ ವಲಯ ಇಟ್ಟುಕೊಂಡು 15-20 ಕಿ.ಮೀ. ದೂರವಿರಬೇಕು. ನಾವ್ಯಾರೂ ಕೈಗಾರಿಕಾ ವಿರೋಧಿಗಳಲ್ಲ. ಅಭಿವೃದ್ಧಿ ಕೃಷಿಯಿಂದಾದರಷ್ಟೇ ದೇಶದ ಜಿ.ಡಿ.ಪಿ ಸ್ಥಿರವಾಗಿರುತ್ತದೆ. ಕೈಗಾರಿಕೆಗಳಿಂದ ಆಗುವ ಅಭಿವೃದ್ಧಿ ಯಾವಾಗಲೂ ಬಿದ್ದು ಹೋಗಬಹುದು. ಕಾರ್ಖಾನೆ ಸ್ಥಾಪನೆಗಾಗಿ, ಜನವಸತಿಗಾಗಿ ಭೂಮಿ ಅನಗತ್ಯವಾಗಿ ಬಳಕೆಯಾಗುತ್ತಿದೆ. ಇದು ಭವಿಷ್ಯದ ಕೃಷಿಗೆ ಎದುರಾಗುವ ಅಪಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಶಾಲಾ ಶಿಕ್ಷಕರಾದ ಉದಯಕುಮಾರ್ ಎಂ.ಕೆ, ಮಲ್ಲಪ್ಪ ಕಿನ್ನಾಳ, ಶಿಕ್ಷಕಿ ವಿಜೇತಾ ಎಂ, ಬಿಂದಿಯಾ ಬಿ, ವೆಂಕಟಲಕ್ಷಿ**, ಸವಿತಾ ಸಾಕ್ರೆ, ಲಕ್ಷಿ** ವಿಜಯಮುದ್ರಿ, ಜ್ಯೋತಿ, ಪುಷ್ಪಲತಾ ಏಳುಭಾವಿ, ಸಾಹಿತಿ ಎ.ಎಂ. ಮದರಿ, ಜಿ.ಬಿ. ಪಾಟೀಲ್, ರವಿ ಕಾಂತನವರ, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತಿ** ಬಸಾಪುರ, ಮಂಜುನಾಥ ಕವಲೂರು, ಸುಂಕಮ್ಮ ಪಡಚಿಂತಿ ಹಾಗೂ ಎನ್.ಕೆ.ಪಿ.ಎಂ ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಎನ್.ಕೆ.ಪಿ.ಎಂ ಹೈಸ್ಕೂಲ್ ವಿದ್ಯಾರ್ಥಿಗಳಾದ ದೀಪಕ್, ವೈಷ್ಣವಿ, ಆದಿಲ್, ಸುಮಯ್ಯ, ಇವರುಗಳು ಚಿಪ್ಕೋ, ಕೈಗಾ, ಅಪ್ಪಿಕೋ, ನರ್ಮದಾ, ಸೈಲೆಂಟ್ ವ್ಯಾಲಿ ಚಳವಳಿ ಮತ್ತು ಸಾಲುಮರದ ತಿಮ್ಮಕ್ಕ ಅವರನ್ನು ಉದಾಹರಿಸಿ ಭಾಷಣ ಮಾಡಿದರು. ಶಿಕ್ಷಕರಾದ ಬಿ.ಎಂ. ನಿತಿನ್ ಶರ್ಮಾ, ರಂಗಮ್ಮ ಮಾತನಾಡಿ, ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಈ ಕಾರ್ಖಾನೆಗಳು ಜೀವ ತೆಗೆಯುವಾಗಲೂ ಎಚ್ಚರಿಕೆ ವಹಿಸದಿದ್ದರೆ ಭವಿಷ್ಯ ಭಯಂಕರವಾಗಿದೆ. ನಾವಲ್ಲದೆ ಎಲ್ಲಾ ತಿಳಿದವರು, ಪ್ರಜ್ಞಾವಂತ ಜನರು ಮುಂದೆ ಬಂದು ಪ್ರತಿರೋಧ ತೋರಲಿ ಎಂದರು.

ಅಗ್ನಿ ಅವಘಡಗಳ ಜಾಗೃತಿ ಅಣಕು ಪ್ರದರ್ಶನ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ 2025-2026ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಹಾತಲಗೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿಗಳಾದ ವಿ.ಎಸ್. ಠಕ್ಕೇಕರ ಹಾಗೂ ಸಿಬ್ಬಂದಿ ವರ್ಗದವರಿಂದ ಅಗ್ನಿ ಅವಘಡ ಮತ್ತು ಅವುಗಳ ತುರ್ತು ನಿರ್ವಹಣೆ ಕುರಿತು ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು. ಹಾತಲಗೇರಿ ಗ್ರಾಮದ ಅಸಂಖ್ಯಾತ ಜನರು, ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಮಾರಂಭದ ಸದುಪಯೋಗ ಪಡೆದರು.

ಸಾಯಂಕಾಲ ಗದಗಿನ ನ್ಯಾಯವಾದಿಗಳಾದ ಎಂ.ಜಿ. ಮುಲ್ಲಾ ಕಾನೂನು ಅರಿವು-ನೆರವು ವಿಷಯದ ಕುರಿತು ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಇರುವ ವಿವಿಧ ಕಾನೂನುಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಿ.ಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಣ್ಣ ಹೂವಣ್ಣವರ ಮಾತನಾಡಿ, ಶಿಬಿರದ ಉದ್ದೇಶಗಳನ್ನು ತಿಳಿಸಿದರು. ಜಾನಪದ ಕಲಾವಿದ ಶಿವಪ್ಪ ಡೊಳ್ಳಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ರಂಜಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಸದಸ್ಯರಾದ ಈರಪ್ಪ ಸತ್ಯಪ್ಪ ಬೇಲೇರಿ, ವಿಠ್ಠಲ ಬೆಂತೂರ, ಮಾಜಿ ಸೈನಿಕ ಅಜ್ಜಪ್ಪ ಅಬ್ಬಿಗೇರಿ, ಯುವ ಮುಖಂಡ ಸಂತೋಷ ಪೂಜಾರ, ಗೋವಿಂದಗೌಡ ಪಾಟೀಲ, ಪುರುಷೋತ್ತಮ ಪೂಜಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಆರ.ಎಸ್. ಹಿರೇಮಠ ಸ್ವಾಗತಿಸಿದರು. ಕುಮಾರ ನಾಗೇಶ ತಾಳಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಅಧಿಕಾರಿ ಪ್ರೊ. ಎಂ.ಬಿ. ಶಿರುಂದ ವಂದಿಸಿದರು.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಆರೋಪಿಗಳಿಗೆ ಬಿಗ್ ಶಾಕ್: ಕಾಮುಕರಿಗೆ ಗಡಿಪಾರು ಶಿಕ್ಷೆ!

0

ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ದೊಡ್ಡ ಹೊಡೆತ ಎದುರಾಗಿದೆ. ಗ್ಯಾಂಗ್ ರೇಪ್ ಪ್ರಕರಣದ ಏಳು ಮಂದಿ ಪ್ರಮುಖ ಆರೋಪಿಗಳನ್ನು ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ಉಪವಿಭಾಗದ ಅಧಿಕಾರಿಗಳಿಂದ ಗಡಿಪಾರು ಆದೇಶ ಹೊರಡಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

A1 ಅಪ್ತಾಬ್ ಮಖಬೂಲ ಅಹ್ಮದ್, A2 ಮದರಸಾಬ್ ಮಹ್ಮದ್ ಸಾಧಿಕ್, A3 ಮಹ್ಮದ್ ಸಾಧಿಕ್ ಬಾಬುಸಾಬ್, A4 ರಿಯಾಜ್ ಅಬ್ದುಲ್ ರಫಿಕ್, A5 ಸಮೀವುಲ್ಲಾ ಅಬ್ದುಲ್ ವಾಹೀದ್, A6 ಶೋಹಿಬ್ ನಿಯಾಜ್ ಅಹ್ಮದ್, A7 ತೌಸೀಪ್ ಅಹ್ಮದ್ ಗಡಿಪಾರುಗೊಂಡ ಆರೋಪಿಗಳು.

ಗಡಿಪಾರು ಅವಧಿಯಲ್ಲಿ ಆರೋಪಿಗಳು ಪ್ರತಿನಿತ್ಯ ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ಹಾಜರಾತಿ ಹಾಕುವಂತೆ ಷರತ್ತು ವಿಧಿಸಲಾಗಿದೆ. ಈ ಪ್ರಕರಣವು 2024ರ ಜನವರಿ 11ರಂದು ಹಾನಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದೆ. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಆರೋಪಿಗಳು ರೋಡ್ ಶೋ ನಡೆಸಿದ್ದ ಹಿನ್ನೆಲೆಯಲ್ಲಿ ಕೂಡ ಪೊಲೀಸರ ಕ್ರಮಕ್ಕೆ ಕಾರಣವಾಗಿದೆ.

error: Content is protected !!