Home Blog Page 3

ಶ್ರವಣ ನ್ಯೂನತೆಯುಳ್ಳ ಮಕ್ಕಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90ರಷ್ಟು ಫಲಿತಾಂಶ ನೀಡಿ, ಅತ್ತುತ್ತಮ ಸಾಧನೆಗೈಯುವ ಮೂಲಕ ಸಂಸ್ಥೆಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 10 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಫಲಿತಾಂಶ ಶೇ90ರಷ್ಟು ಆಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಬಸಪ್ಪ ಸಂಗಳದ ಪ್ರಕಟಣೆಗೆ ತಿಳಿಸಿದ್ದಾರೆ.

ನಿರ್ಮಲಾ ಬಸವರಾಜ ಸೋಮಗೊಂಡ ಶೇ. 65.64 ಅಂಕಗಳೊಂದಿಗೆ ಪ್ರಥಮ ಸ್ಥಾನ, ಮಕ್ತುಮಸಾಬ ಹಳೆಮಸೂತಿ ಶೇ. 64.94 ಅಂಕದೊಂದಿಗೆ ದ್ವಿತೀಯ ಸ್ಥಾನ, ಕುಬೇರ ಮಾಳೊತ್ತರ ಶೇ. 63.05 ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಹಾಲಕೆರೆಯ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಶಾಲೆಯ ಚೇರಮನ್ ಶರಣಪ್ಪ ಕೆ. ರೇವಡಿಯವರ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಲಯನ್ಸ್ ಕ್ಲಬ್‌ನಿಂದ ನೇತ್ರದಾನದ ಜಾಗೃತಿ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಲಕ್ಷ್ಮಣಸಾ ನಗರದ ನಿವಾಸಿ ಶ್ರೀಮತಿ ಕಸ್ತೂರಿಬಾಯಿ ಪುಂಡಲೀಕಸಾ ಬದಿ(79) ಗುರುವಾರ ನಿಧನರಾದರು. ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನವರು ಮೃತರ ನೇತ್ರಗಳನ್ನು ದಾನ ಮಾಡುವಂತೆ ಪ್ರೇರಣೆ ನೀಡಿದಾಗ, ಕುಟುಂಬದವರು ಸಹಕಾರ ನೀಡುವ ಮೂಲಕ ನೇತ್ರದಾನಕ್ಕೆ ಮುಂದಾದರು. ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ಸಿಬ್ಬಂದಿಗಳು ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು.

ಲಯನ್ಸ್ ಕ್ಲಬ್ ಸಾರ್ವಜನಿಕರಲ್ಲಿ ನೇತ್ರದಾನದ ಜಾಗೃತಿ ಮೂಡಿಸುತ್ತಿರುವ ಪರಿಣಾಮವಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದು ಈ ವರ್ಷದ 17ನೇ ನೇತ್ರದಾನವಾಗಿದೆ. ಮರಣದ ನಂತರ ಮೃತ ವ್ಯಕ್ತಿಯ ಕಣ್ಣುಗಳನ್ನು ಮಣ್ಣು ಮಾಡದೇ, ಬೆಂಕಿಯಲ್ಲಿ ಸುಡದೇ ದಾನ ಮಾಡಿದರೆ ಕಣ್ಣಿಲ್ಲದವರಿಗೆ ಈ ಕಣ್ಣುಗಳನ್ನು ಕಸಿ ಮಾಡಿಸಿಕೊಂಡ ಅಂಧರ ಬಾಳಿಗೆ ಬೆಳಕು ಮೂಡಬಲ್ಲದು. ಆದ್ದರಿಂದ ಮೃತರ ಕುಟುಂಬದವರು ನೇತ್ರದಾನಕ್ಕೆ ಮುಂದಾಗಬೇಕೆಂದು ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬದಿ ಕುಟುಂಬಸ್ಥರು, ಪದ್ಮಾನಂದ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ : ಆರ್.ಎಸ್. ಬುರಡಿ

ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬಲ್ಲರು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ ಪಾಲಕರ ಮನವೊಲಿಸಿ, ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಗೆ ಹಾಜಾರಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅವರು ಗದುಗಿನ ರಾಜೀವ ಗಾಂಧಿ ನಗರದ ಎಲ್ಲ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ಮಾಡಿ ಪಾಲಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
2024ರ ಎಸ್‌ಎಸ್‌ಎಲ್‌ಸಿ-1ರಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೊಧನೆ ತರಗತಿಗಳು ಎಲ್ಲ ಪ್ರೌಢಶಾಲೆಗಳಲ್ಲಿ ಪ್ರಾರಂಭಗೊಂಡಿದ್ದು, ಮಕ್ಕಳು ವರ್ಗಗಳಿಗೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಸದರಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ. ಬಾಗೇವಾಡಿ ಮಾತನಾಡಿ, ವಿಷಯ ಶಿಕ್ಷಕರಿಂದ ವಿಷಯವಾರು ಬೋಧನೆ ನಡೆಯುತ್ತಿದ್ದು, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳನ್ನು ಕೂಡಿಸಿಕೊಂಡು ಮನೆ-ಮನೆಗೆ ಭೇಟಿ ನೀಡಿ ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿರುವುದಕ್ಕೆ ಪಾಲಕರು ಹರ್ಷ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಶಿಕ್ಷಕರಾದ ವಾಯ್.ಎಸ್. ಬೊಮ್ಮನಾಳ, ಪಿ.ಎಸ್. ಕರೆಕುಲದ, ಎಂ.ಎಸ್. ಕುಚಬಾಳ, ಪಿ.ಎಚ್. ಕೊರವರ, ಎಂ.ವ್ಹಿ. ಕುಲಕರ್ಣಿ, ಎಂ.ಬಿ. ಹರ್ತಿ, ಎಂ.ಕೆ. ಬೇವಿನಕಟ್ಟಿ, ಬಸವರಾಜ ವೀರಾಪೂರ ಸೇರಿದಂತೆ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭಗೀರಥರ ಜೀವನಕಥೆ ಸ್ಪೂರ್ತಿದಾಯಕ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಗರ ಮಹಾಚಕ್ರವರ್ತಿ, ದಿಲೀಪ ಮಹಾಚಕ್ರವರ್ತಿ, ಸತ್ಯಹರಿಶ್ಚಂದ್ರ, ಶ್ರೀರಾಮಚಂದ್ರ ಹೀಗೆ ಬಹಳಷ್ಟು ದೈವಾಂಶ ಸಂಭೂತರು, ಮಹಾತ್ಮರು ಸಿಗುತ್ತಾರೆ. ಅವರಲ್ಲಿ ಭಗೀರಥ ಮಹರ್ಷಿಯ ಜೀವನಕಥೆ ಸ್ಪೂರ್ತಿದಾಯಕ ಎಂದು ಕಂದಾಯ ನಿರೀಕ್ಷಕ ಎಚ್.ಎಂ. ಸೀತಿಮನಿ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಭಗೀರಥ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಇಕ್ಷ್ವಾಕು ವಂಶದ ಪರಂಪರೆ ಅಂದರೆ ಸೂರ್ಯವಂಶದ ಕ್ಷತ್ರಿಯರು. ಈ ಭರತಖಂಡವನ್ನು ಆಳಿದವರಲ್ಲಿ ಅನೇಕ ಖ್ಯಾತನಾಮರಿದ್ದಾರೆ. ಲೋಕ ಕಲ್ಯಾಣಕ್ಕೆ ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಸ್.ಕೆ. ದೊಡ್ಡಣ್ಣವರ, ರಮೇಶ ಹಲಗಿ, ಅಡಿವೆಪ್ಪ ಮೇಣಸಗಿ, ವಿ.ಐ. ಮಡಿವಾಳರ, ಉದಯ ಮುದೇನಗುಡಿ, ಮಹಾದೇವ ಮ್ಯಾಗೇರಿ, ಎನ್.ಬಿ. ಬೇಲೇರಿ, ಕಾವ್ಯಾ ಅರವಟಗಿಮಠ, ಪಿ.ಜಿ. ರಾಂಪೂರ, ನೀಲಪ್ಪ ಚಳ್ಳಮರದ, ಫಕ್ಕೀರೇಶ ತಮ್ಮಣ್ಣವರ, ನಿಂಗಪ್ಪ ಮಡಿವಾಳರ, ಸಿ.ವಿ. ಹೊನವಾಡ, ಜೆ.ಡಿ. ಬಂಕಾಪೂರ ಸೇರಿದಂತೆ ಇತರರು ಇದ್ದರು.

`ದಶರಥ ನಂದನ ಶ್ರೀರಾಮ’ ನಾಟಕ ಪ್ರದರ್ಶನ ನಾಳೆ

0

ವಿಜಯಸಾಕ್ಷಿ ಸುದ್ದಿ, ಗದಗ : ಹಿರಿಯ ರಂಗಕರ್ಮಿ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರ ಭಕ್ತಿರಸ ಉಕ್ಕಿಸುವ ಸಂಭಾಷಣೆ,ಗಟ್ಟಿ ನಿದರ್ಶನ ಮತ್ತು ಇಂಪಾದ ಹಾಡುಗಳೊಂದಿಗೆ ಪ್ರಯೋಗಗೊಂಡು ಜನಮನ ಸೂರೆಗೊಂಡ ಗದಗ ಕಲಾವಿದರ `ದಶರಥ ನಂದನ ಶ್ರೀರಾಮ’ ನಾಟಕ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಶ್ರೀ ಶಂಕರಾಚಾರ್ಯ ಸೇವಾ ಸಮೀತಿಯವರ ಆಶ್ರಯದಲ್ಲಿ ಪ್ರಯೋಗಗೊಳ್ಳಲಿದೆ.

ಆದಿಗುರು ಶಂಕರಾಚಾರ್ಯರ ಉತ್ಸವದ ಅಂಗವಾಗಿ ಮೇ 18ರ ಸಂಜೆ 6 ಗಂಟೆಗೆ ಪ್ರಯೋಗಗೊಳ್ಳುವ ಈ ನಾಟಕ(ಸಂಗೀತ ರೂಪಕ)ದಲ್ಲಿ ರಂಗಕಲಾವಿದರಾದ ಮೌನೇಶ್ ಸಿ. ಬಡಿಗೇರ್(ನರೇಗಲ್ಲ)-ಶ್ರೀರಾಮನಾಗಿ, ಲಕ್ಷ್ಮಣ-ಉಜ್ವಲ್ ಕಬಾಡಿ, ಭರತ-ಶ್ವೇತಾ ಸುರೇಬಾನ, ಸೀತೆ- ಕೀರ್ತಿ ಗುಮಾಸ್ತೆ, ದಶರಥ-ಅಂದಾನಪ್ಪ ವಿಭೂತಿ, ವಿಶ್ವಾಮಿತ್ರ-ಮುರಲೀಧರ ಸಂಕನೂರ, ಕೈಕೇಯಿ- ಅನ್ವಿತಾ ಹುಯಿಲಗೋಳ, ಮಂಥರೆ-ರಕ್ಷಿತಾ ಕುಲಕರ್ಣಿ, ಅಹಲ್ಯೆ-ರಂಜಿತಾ ಕುಲಕರ್ಣಿ, ಶೂರ್ಪನಖಿ- ಅನಘಾ ಕುಲಕರ್ಣಿ, ರಾವಣ-ವಿಶ್ವನಾಥ್ ಬೇಂದ್ರೆ, ಶಬರಿ-ಸುರಭಿ ಮಹಾಶಬ್ದಿ, ವೇದವತಿ-ರಂಜಿತಾ ಕುಲಕರ್ಣಿ, ಅಗ್ನಿದೇವ-ಶ್ವೇತಾ ಸುರೇಬಾನ, ವಿಭೀಷಣ-ಅಮರೇಶ ರಾಮ್ ಪುರ, ಮಾರೀಚ-ಅನನ್ಯ ದೇಶಪಾಂಡೆ, ಬಾಲರಾಮ-ದೇವಾಂಸ್, ಬಾಲ ಲಕ್ಷ್ಮಣ-ಪ್ರಭು ಗೌಡ, ಲವ ಕುಶ- ಆರಾಧ್ಯ, ಅನನ್ಯಾ, ಹನುಮಂತ-ಅವನಿ ಕುಲಕರ್ಣಿ ಅಭಿನಯಿಸಲಿದ್ದಾರೆ. ರಂಗಾಸಕ್ತರು ವೀಕ್ಷಿಸಲು ಶಂಕರಾಚಾರ್ಯ ಸೇವಾ ಸಮೀತಿಯವರು ವಿನಂತಿಸಿದ್ದಾರೆ.

ಪ್ರಕಾಶ್ ಹೊಸಮನಿಯವರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಗದಗ-ಬೆಟಗೇರಿಗೆ ಧಾರವಾಡದ ಪ್ರಾದೇಶಿಕ ಕಾಲೇಜು ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ ಭೇಟಿ ನೀಡಿ, ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಫ್. ಶಿದ್ನೇಕೊಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್. ಕಲ್ಮನಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ : ಸಂಗಮೇಶ ಹಾದಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ಗದಗ ಜಿಲ್ಲಾ ಅಂಬಿಗರ ಸಮಾಜ ಬಾಂಧವರು ಹಾಗೂ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೇಹಾ ಹಿರೇಮಠ ಹತ್ಯೆಯ ನೆನಪು ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಇನ್ನೋರ್ವ ಯುವತಿಯ ಕೊಲೆ ನಡೆದಿದೆ. ಈ ಕೃತ್ಯದಿಂದ ಇಡೀ ಮಾನವ ಸಮಾಜ ತಲೆ ಬಾಗಿಸುವಂತೆ ಆಗಿದೆ. ಅವಳ ಹತ್ಯೆಯಿಂದ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಎಚ್ಚೆತ್ತು ಆರೋಪಿಯನ್ನು ಬಂಧಿಸಿ, ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳೆ ಪರಿಹಾರದ ಹಣ ಪಾವತಿಸಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ರೈತರಿಗೆ ಕಳೆದ ವರ್ಷ ತುಂಬಿದ ಬೆಳೆವಿಮಾ ಹಣ ಇದುವರೆಗೂ ಸಂದಾಯವಾಗಿಲ್ಲ. 7 ದಿನದ ಒಳಗೆ ಜಿಲ್ಲೆಯ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಮತ್ತು ವಿಮಾ ಪರಿಹಾರದ ಹಣ ಜಮಾ ಮಾಡಬೇಕು ಎಂದು ರೈತ ಹಿತಾಭಿವೃದ್ಧಿ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಹಿತಾಭಿವೃದ್ಧಿ ಸಂಘದ ಗದಗ ಜಿಲ್ಲಾಧ್ಯಕ್ಷ ಕರಬಸಯ್ಯ ನಾಲ್ವತ್ವಾಡಮಠ ಮಾತನಾಡಿ, ಪಕ್ಕದ ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ರೈತರಿಗೆ ಬೆಳೆ ವಿಮಾ ಪರಿಹಾರದ ಹಣವು ಜಮೆ ಆಗಿ ತಿಂಗಳಾದರೂ ನಮ್ಮ ಜಿಲ್ಲೆಯ ರೈತರಿಗೆ ಹಣ ಜಮಾ ಆಗಿಲ್ಲ. ಕಾರಣ ಕೇಳಿದರೆ ಎಫ್‌ಐಡಿ ಆಗಿಲ್ಲ, ಆಧಾರ್ ಕಾರ್ಡ್ ಸರಿಯಿಲ್ಲ ಎಂದು ಸುಳ್ಳು ಸಬೂಬು ಹೇಳುತ್ತಿದ್ದು, ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರೈತ ಹಿತಾಭಿವೃದ್ಧಿ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಜಂತ್ಲಿ, ರೈತ ಮುಖಂಡರಾದ ಬಸವರಾಜ ಕವಳಿಕಾಯಿ, ವಿ.ಎಚ್. ದೇಸಾಯಿಗೌಡ್ರ, ಬಸಪ್ಪ ಕಲಬಂಡಿ, ವಿರೂಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಮೋಹನ ಇಮರಾಪೂರ, ಮಲ್ಲಪ್ಪ ಬಳ್ಳಾರಿ, ಬಸವರಾಜ ಹುಬ್ಬಳ್ಳಿ, ನರಸಪ್ಪ ತುಕ್ಕಪ್ಪನವರ, ವಿರುಪಾಕ್ಷಪ್ಪ ಹೆಬ್ಬಳ್ಳಿ, ಕಳಕಪ್ಪ ರೇವಡಿ, ಪರಪ್ಪ ಕಮತರ, ಫಕ್ಕಿರಗೌಡ ಪಾಟೀಲ, ಮಂಜುನಾಥ ಕೋಳಿವಾಡ, ಸತೀಶ ಗಿಡ್ಡಹನಮಣ್ಣವರ, ಮುತ್ತಪ್ಪ ಜಡಿ, ಉಮೇಶ ಲಿಂಗರಡ್ಡಿ, ಬಸವರಾಜ ಮೊರಬದ, ಇಮಾಮ ಹುಸೇನ್ ಚಿನ್ನೂರ, ರುದ್ರಯ್ಯ ಹಿರೇಮಠ, ಈರಣ್ಣ ಗಡಗಿ, ವಿರುಪಾಕ್ಷಪ್ಪ ಕಳಸದ, ಮಂಜುನಾಥ ಹಿತ್ತಲಮನಿ, ಅಶೋಕ ಪೋರ್ಬಿ, ಮಂಜುನಾಥ ಕುಡಗಿ ಸೇರಿದಂತೆ ಇತರರಿದ್ದರು.

ಅಂಜಲಿ ಕೊಲೆಗೆ ಪೊಲೀಸರೇ ಕಾರಣ : ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ : ಅಂಜಲಿ ಕೊಲೆ ಬೆದರಿಕೆ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದುಗಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾಳ ಮಾದರಿಯಲ್ಲಿಯೇ ಕೊಲೆ ಮಾಡುವುದಾಗಿ ಆರೋಪಿ ಹೇಳಿದ್ದಾನೆ. ಈ ಬಗ್ಗೆ ಅಂಜಲಿ ಮನೆಯವರು ದೂರನ್ನೂ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ ಈ ಕೊಲೆಯನ್ನು ತಪ್ಪಿಸಬಹುದಿತ್ತು. ಈ ಕೊಲೆಗೆ ಪರೋಕ್ಷವಾಗಿ ಪೊಲೀಸರು ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಪೊಲೀಸರು ಇಸ್ಪೀಟು, ಮಟಕಾ, ಕ್ಲಬ್, ಮರಳು ವ್ಯವಹಾರಗಳ ದಂಧೆಯಲ್ಲಿ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಹಾಗೂ ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ರಾಜ್ಯದಲ್ಲಿ ಗೂಂಡಾಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನರ, ಹೆಣ್ಣುಮಕ್ಕಳ ಪ್ರಾಣಕ್ಕೂ ಸುರಕ್ಷತೆ ಇಲ್ಲ. ರಾಜ್ಯದಲ್ಲಿ ಭಯದ ವಾತಾವರಣ, ಗೂಂಡಾ ವಾತಾವರಣವಿದೆ. ನೇಹಾ ಪ್ರಕರಣದಲ್ಲಿ ನಾವು ರಾಜಕೀಯ ಮಾಡಿಲ್ಲ. ಹಾಡುಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ಕೊಲೆ ಆದರೆ ಸುಮ್ಮನೆ ಕುಳಿತುಕೊಳ್ಳಬೇಕಾ, ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿದ್ದರೆ ಸುಮ್ಮನೆ ಕೂರುತ್ತಿದ್ದರಾ ಎಂದು ಪ್ರಶ್ನಿಸಿದರು.

ಒಂದು ಕಡೆ ಸಾವಿರ ವಿದ್ಯಾರ್ಥಿಗಳ ಮಧ್ಯೆ ನೇಹಾ ಕೊಲೆ ಆಗುತ್ತಾಳೆ. ಮತ್ತೊಂದು ಕಡೆ ಅಂಜಲಿ ಮನೆ ಹೊಕ್ಕು ಕೊಲೆ ಮಾಡುತ್ತಾರೆ ಅಂದರೆ, ಇದು ಗೂಂಡಾ ರಾಜ್ಯ ಅಲ್ಲದೆ ಇನ್ನೇನು? ಇಷ್ಟೆಲ್ಲಾ ಆದರೂ ಸಿಎಂ ಹಾಗೂ ಗೃಹ ಸಚಿವರು ಏನು ಆಗಿಲ್ಲ ಎನ್ನುವ ರೀತಿಯಲ್ಲಿದ್ದಾರೆ. ಇದರ ಬಗ್ಗೆ ಸಣ್ಣ ಪರಿಶೀಲನೆ ಸಹ ಮಾಡಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿ.ಪ ಸದಸ್ಯ ಎಸ್.ವಿ ಸಂಕನೂರ, ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ವಕ್ತಾರ ಎಂ.ಎಂ. ಹಿರೇಮಠ ಇದ್ದರು.

ನೇಹಾ ಕೊಲೆ ಆದಾಗ ಬರಲಿಲ್ಲ, ತನಿಖೆ ಚುರುಕುಗೊಳಿಸಲಿಲ್ಲ. ಅಂಜಲಿ ಕೊಲೆ ಆದಾಗಲೂ ಉದಾಸೀನ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆದರೂ ತಿರುಗಿ ನೋಡಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ದಲಿತ ಮಹಿಳೆಯನ್ನು ವಿವಸ್ತçಗೊಳಿಸಿದರೂ ನೋಡಲಲಿಲ್ಲ.

ಕಾಂಗ್ರೆಸ್ ಸರ್ಕಾರ ಯಾರ ಪರವಾಗಿದೆ, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಗೃಹ ಸಚಿವರನ್ನುದ್ದೇಶಿಸಿ ಬಸವರಾಜ ಬೊಮ್ಮಾಯಿ ಪ್ರಶ್ನೆಗಳ ಸುರಿಮಳೆಗೈದರು.

RMSS ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಹುಲಕೋಟಿಯ RMSS ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆಯ ಅಂಗವಾಗಿ ಸ್ಟಾರ್ ಹೆಲ್ತ್ ಅಕಾಡೆಮಿ ವತಿಯಿಂದ ಪ್ರಥಮ ಚಿಕಿತ್ಸಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸ್ಟಾರ್ ಹೆಲ್ತ್ ಅಕಾಡೆಮಿಯ ಶಶಿಕುಮಾರ ಎಚ್.ಎಸ್., ತುರ್ತು ವೈದ್ಯಕೀಯ ಸೇವೆಯ ಕುರಿತು ಸವಿವರ ಮಾಹಿತಿ ನೀಡಿದರು. ಕಾರ್ಡಿಯಾಕ್ ಅರೆಸ್ಟ್ ಮತ್ತು ಹೃದಯಾಘಾತಕ್ಕಿರುವ ವ್ಯತ್ಯಾಸ, ಹಾವು ಕಡಿತಕ್ಕೆ ಒಳಪಟ್ಟ ವ್ಯಕ್ತಿ, ವಿಷ ಸೇವಿಸಿದ ವ್ಯಕ್ತಿಯ ದೇಹದಿಂದ ವಿಷವನ್ನ ಹೊರತೆಗೆಯಲು ಪ್ರಥಮವಾಗಿ ಹೇಗೆ ಚಿಕಿತ್ಸಿಸಬೇಕು ಎಂದು ಸವಿವರವಾಗಿ ಅರ್ಥೈಸಿದರು. ಸಿಬ್ಬಂದಿಗಳಾದ ರವಿಕುಮಾರ, ವಿವೇಕ ಪ್ರಥಮ ಚಿಕಿತ್ಸೆಯ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಆರ್. ನಾಗನೂರ ತಮ್ಮ ಅನುಭವವನ್ನು ಹಂಚಿಕೊಂಡರು.

ಸಹಾಯಕ ಪ್ರಾಧ್ಯಾಪಕ ಸ್ಟೀಫನ್ ಜಾನ್, ವಿದ್ಯಾಧರ ಗೌರಮ್ಮ ಕಾರ್ಯಾಗಾರದ ಕುರಿತು ಅಭಿನಂದನೆ ವ್ಯಕ್ತಪಡಿಸಿದರು. RMSS ಕಾಲೇಜಿನ ಪ್ರಾಂಶುಪಾಲ ಬಸಯ್ಯ ಹಿರೇಮಠ, ಸಹ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿದ್ದರು.

error: Content is protected !!