Home Blog Page 3007

ಕೊರೊನಾ; ಜಿಲ್ಲೆಯಲ್ಲಿ ಶನಿವಾರ 28 ಜನರಿಗೆ ಸೋಂಕು, ಒಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಶನಿವಾರ 28 ಜನರಿಗೆ ಸೋಂಕು ತಗುಲಿದೆ. ಇಂದು ಕೂಡ ಕೋವಿಡ್ ನಿಂದಾಗಿ ಒಬ್ಬರು ಮೃತಪಟ್ಟ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದೆ. ಇದರಿಂದಾಗಿ ಇದುವರೆಗೂ ಕೋವಿಡ್ ನಿಂದಾಗಿ 292 ಜನ ಮೃತಪಟ್ಟಂತಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿ 85 ವರ್ಷದ ಮಹಿಳೆ ಜೂನ್ 10 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 19 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ಇಂದು 28 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25583 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -15, ಮುಂಡರಗಿ-02, ನರಗುಂದ-02, ರೋಣ-05, ಶಿರಹಟ್ಟಿ-04, ಹೊರಜಿಲ್ಲೆಯ-00 ಸೇರಿದಂತೆ 28 ಪ್ರಕರಣಗಳು ದೃಢಪಟ್ಟಿವೆ.

ಇಂದು 85 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24901 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 390 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 82 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಒಂದು ತಿಂಗಳಿಂದ ಎಟಿಎಂನಲ್ಲಿ ಬರುತ್ತಿವೆ ಹರಿದ ನೋಟುಗಳು!

ವಿಜಯಸಾಕ್ಷಿ ಸುದ್ದಿ, ಗದಗ

ಎಸ್ ಬಿಐ ಬ್ಯಾಂಕಿನ ಎಟಿಎಂನಲ್ಲಿ ಹರಿದ ನೋಟುಗಳು ಬರುತ್ತಿದ್ದು, ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ‌ ಗ್ರಾಮದ ಎಸ್ ಬಿಐ ಬ್ಯಾಂಕ್ ನ ಎಟಿಎಂನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಹರಿದ ನೋಟುಗಳು ಬರುತ್ತಿವೆ.

ಗರಿಷ್ಠ ಮುಖಬೆಲೆಯ ನೋಟುಗಳು ಕೂಡ ಇದೇ ರೀತಿ ಹರಿದಿವೆ. ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. ಪ್ರತಿ ಬಾರಿ ಹಣ ಡ್ರಾ ಮಾಡುವಾಗ ಒಂದು ಅಥವಾ ಎರಡು ಹರಿದ, ತೇಪೆ ಹಚ್ಚಿದ ನೋಟುಗಳು ಬರುತ್ತಿವೆ. ಇದರಿಂದಾಗಿ ಜನರು ಬೇಸರ ಆಕ್ರೋಶಗೊಂಡಿದ್ದಾರೆ.

ಬ್ಯಾಂಕಿಗೆ ಹೋಗಿ ಕ್ಯೂ ನಿಲ್ಲುವ ಬದಲಾಗಿ ಎಟಿಎಂಗೆ ಹೋಗಿ ಬೇಗನೆ ಹಣ ಪಡೆದರಾಯಿತು ಎಂದು ಜನರು ಎಟಿಎಂಗೆ ಹೋಗಿ ಹಣ ಪಡೆಯುತ್ತಿದ್ದರು. ಆದರೆ, ಅಲ್ಲಿ ಹರಿದ ನೋಟುಗಳು ಬರುತ್ತಿರುವುದರಿಂದ ಪುನಃ ಬ್ಯಾಂಕಿಗೆ ಹೋಗಿ ಕ್ಯೂ‌ ನಿಲ್ಲುವ ಪರಿಸ್ಥಿತಿ ಬಂದೋದಗಿದೆ.

ಈ ಹರಿದ ನೋಟುಗಳ ಬದಲಾವಣೆಗಾಗಿ ಜನರು ಹತ್ತಾರು ಕಿ.ಮೀ ಕೂಡ ಸಂಚರಿಸಬೇಕು. ಹೀಗಾಗಿ ಜನರು ಸಾಕಷ್ಟು ಬಾರಿ ಬ್ಯಾಂಕ್ ನ ಸಿಬ್ಬಂದಿಗೆ ಹೇಳಿದರೂ ಅವರು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗ್ರಾಮೀಣ ಜನರಿಗಾಗುತ್ತಿರುವ ಈ ಸಮಸ್ಯೆಯನ್ನು ಕೂಡಲೇ ಸಂಬಂಧಿಸಿದವರು ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ರಾಹುಲ್ ಗಾಂಧಿಗೆ ವಿಶೇಷವಾಗಿ ವಿಷ್ ಮಾಡಿದ ರಮ್ಯಾ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನಟಿ ರಮ್ಯಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ರಾಹುಲ್ ಗಾಂಧಿಯ ಫೋಟೋ ಶೇರ್ ಮಾಡಿಕೊಂಡು, ಅದರ ಜೊತೆ ‘ಜಗತ್ತನ್ನು ಉತ್ತಮವಾಗಿಸುವ ಅದ್ಭುತ ವ್ಯಕ್ತಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ರೀತಿ ಬೇರೆ ಯಾರೂ ಇಲ್ಲ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ನಟಿ ರಮ್ಯಾಗೆ ಅಪಾರ ಗೌರವ. ಸಿನಿ ಲೋಕದಿಂದ ದೂರ ಹೋದ ಮೇಲೆ ರಮ್ಯಾ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದರು. ಆ ನಂತರ ಅವರು ರಾಹುಲ್ ಆಪ್ತ ವಲಯದಲ್ಲಿ ಒಬ್ಬರಾಗಿದ್ದರು.

ಇತ್ತೀಚೆಗಷ್ಟೇ ನಟಿ ರಮ್ಯಾ, ‘ನಿಮ್ಮನ್ನು ನಿರಾಸೆಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಸಿನಿಮಾ ಮತ್ತು ರಾಜಕೀಯದಲ್ಲಿ ನನ್ನ ಕಾಲ ಯಾವಾಗಲೋ ಮುಗಿದು ಹೋದ ಅಧ್ಯಾಯ ಎಂದು ಅಭಿಮಾನಿಗಳಿಗೆ ಹೇಳಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನೋಡುವ ಕನಸು ಇಂದಾದರೂ ನನಸಾಗುವುದೇ?

ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್‌

ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕಾದಾಟ ನೋಡಲು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಈ ಫೈಟ್ ನಡೆಯುತ್ತಿದ್ದು, ಮೊದಲ ದಿನ ಮಳೆಗೆ ಆಹುತಿಯಾಗಿದೆ. ಹೀಗಾಗಿ ಇಂದಾದರೂ ಪಂದ್ಯ ನಡೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಸದ್ಯ ಪಂದ್ಯ ಆರಂಭವಾಗುವ ಸಮಯ ಬಹಿರಂಗವಾಗಿದೆ. ಜೂ. 18ಕ್ಕೆ ಪ್ರಾರಂಭವಾಗಬೇಕಿದ್ದ ಪಂದ್ಯದ ಮೊದಲ ದಿನ ಮಳೆ ಸುರಿದ ಪರಿಣಾಮ ಆರಂಭವಾಗಲಿಲ್ಲ. ಹೀಗಾಗಿ ಎರಡನೇ ದಿನ ಪಂದ್ಯ ಶುರುವಾಗುವ ಎಲ್ಲ ಲಕ್ಷಣಗಳು ಇವೆ. ಜೂ. 19ರಂದು ಭಾರತ – ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಲಿದೆ. ಹೀಗಾಗಿ ಅದಕ್ಕೂ ಅರ್ಧ ಗಂಟೆ ಮೊದಲು ಟಾಸ್ ಆಗುವ ಸಾಧ್ಯತೆ ಇದೆ. ಬಳಿಕ ಪಂದ್ಯ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಸೌತಾಂಪ್ಟನ್‌ ನಲ್ಲಿ ಮಳೆ ಉತ್ತಮವಾಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪಂದ್ಯ ನಡೆಯುವ ಸಾಧ್ಯತೆ ಕೂಡ ಇದರ ಮೂಲಕ ಅಂದಾಜಿಸಬಹುದು.

ಇಂಗ್ಲೆಂಡ್ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಶಫಾಲಿ ವರ್ಮಾ!

ವಿಜಯಸಾಕ್ಷಿ ಸುದ್ದಿ, ಲಂಡನ್

ಭಾರತೀಯ ಮಹಿಳೆಯರ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ 17ರ ವಯಸ್ಸಿನ ಭಾರತೀಯ ಮಹಿಳಾ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಶಫಾಲಿ, ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿ ಕೇವಲ 4 ರನ್‌ ಗಳಿಂದ ಶತಕ ವಂಚಿತರಾಗಿದ್ದಾರೆ. ಎರಡನೇ ಇನ್ನಿಂಗ್ಸ್ ನಲ್ಲಿಯೂ ಶಫಾಲಿ ವರ್ಮ ತಮ್ಮ ಶ್ರೇಷ್ಠ ಆಟ ಮುಂದುವರಿಸಿದ್ದಾರೆ. ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿಯೂ ಶಫಾಲಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತೀಯ ತಂಡದ ಪರವಾಗಿ ಮತ್ತೊಂದು ಸುಂದರ ಇನ್ನಿಂಗ್ಸ್ ಕಟ್ಟುವಲ್ಲಿ ಮುಂದಾಗಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಶಫಾಲಿ ಆರಂಭಿಕ ಜೊತೆಗಾರ್ತಿ ಸ್ಮೃತಿ ಮಂದಣ್ಣ ಜೊತೆಗೆ 167 ರನ್‌ ಗಳ ಬೃಹತ್ ಜೊತೆಯಾಟ ನೀಡಿದ್ದಾರೆ. ಈ ಸಂದರ್ಭದಲ್ಲಿ 152 ಎಸೆತಗಳನ್ನು ಎದುರಿಸಿದ್ದ ಶಫಾಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದು ತಮ್ಮ ಚೊಚ್ಚಲ ಪಂದ್ಯದಲ್ಲಿ ಒಟ್ಟು 187 ರನ್‌ ಗಳಿಸಿದ್ದರು. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ(177 ರನ್) ಹಾಗೂ ಮೂರನೇ ಸ್ಥಾನದಲ್ಲಿ 156 ರನ್‌ ಗಳಿಸಿದ (38 ಹಾಗೂ 118) ಲಾಲಾ ಅಮರನಾಥ್ ಇದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 396 ರನ್‌ ಗಳನ್ನು ಕಲೆ ಹಾಕಿತ್ತು. ಆ ನಂತರ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ ತಂಡ ಶಫಾಲಿ ಹಾಗೂ ಸ್ಮೃತಿ ಜೋಡಿ ನೀಡಿದ ಶ್ರೇಷ್ಠ ಜೊತೆಯಾಟದಿಂದ ಉತ್ತಮ ಆರಂಭ ಪಡೆದಿತ್ತು. ಆದರೆ, ಆ ನಂತರ ಈ ಜೋಡಿ ಬೇರ್ಪಡುತ್ತಿದ್ದಂತೆ ಹಠಾತ್ ಕುಸಿತ ಕಂಡಿತು.

ಮಿಥಾಲಿ ರಾಜ್, ಪೂನಮ್ ರಾವತ್ ಹಾಗೂ ಶಿಖಾ ಪಾಂಡೆ ಶೀಘ್ರವಾಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ಎರಡನೇ ದಿನದಂತ್ಯಕ್ಕೆ ಭಾರತ 187 ರನ್‌ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನವೂ ಈ ಕುಸಿತ ಕಂಡು 231 ರನ್‌ ಗಳಿಗೆ ಆಲೌಟ್‌ ಆಯಿತು. 165 ರನ್‌ ಗಳ ಮುನ್ನಡೆ ಪಡೆದ ಇಂಗ್ಲೆಂಡ್ ಭಾರತ ತಂಡಕ್ಕೆ ಫಾಲೋ ಆನ್ ಹೇರಿತು. ಹೀಗಾಗಿ ಭಾರತ ಮತ್ತೆ ಬ್ಯಾಟಿಂಗ್‌ಗೆ ಇಳಿದಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಜೊತೆಯಾಟಕ್ಕೆ ಸಾಕ್ಷಿಯಾಗಿದ್ದ ಸ್ಮೃತಿ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 8 ರನ್ ಗಳಿಗೆ ಔಟ್ ಆದರು. ನಂತರ ಬಂದ ದೀಪ್ತಿ ಶರ್ಮಾ ಜೊತೆಗೆ ಶಫಾಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಮಳೆಯಿಂದಾಗಿ ಮೂರನೇ ದಿನದಾಟ ಸ್ಥಗಿತವಾಗಿದ್ದು ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 83 ರನ್‌ ಗಳಿಗೆ 1 ವಿಕೆಟ್ ಕಳೆದುಕೊಂಡು 82 ರನ್‌ ಗಳ ಹಿನ್ನೆಡೆ ಅನುಭವಿಸಿದೆ. ಶಫಾಲಿ 55 ರನ್‌ ಗಳಿಸಿದ್ದರೆ ದೀಪ್ತಿ ಶರ್ಮಾ 18 ರನ್‌ ಗಳಿಸಿ ಆಡುತ್ತಿದ್ದಾರೆ.

ಶುರುವಾಗಿದೆ ಕೊರೊನಾ ಮೂರನೇ ಅಲೆಯ ಭೀತಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶದಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆ ಸಾಷ್ಟು ಸಾವು- ನೋವು ಸೃಷ್ಟಿ ಮಾಡಿದೆ. ಸದ್ಯ ಮೂರನೇ ಅಲೆಯ ಭಯ ಶುರುವಾಗಿದೆ. ಕೇಂದ್ರ ಸರ್ಕಾರದ ಪ್ರಮುಖ ವೈದ್ಯಕೀಯ ಸಲಹೆಗಾರರು ಸದ್ಯ ಈ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಮೂರನೇ ಅಲೆಯ ಭಯಾನಕತೆ ಕುರಿತು ಸಂಶೋಧನೆಗಳು ನಡೆಯುತ್ತಿವೆ.

ಒಂದು ಸಮೀಕ್ಷೆಯಂತೆ ಅಕ್ಟೋಬರ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಕೊರೊನಾ ವೈರಸ್ ನ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಶೇ. 85ರಷ್ಟು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವು ತಜ್ಞರು ಆಗಷ್ಟ್ ನಿಂದ ಸೆಪ್ಟೆಂಬರ್ ವೇಳೆಗೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂರನೆಯ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯ ತಜ್ಞರದ್ದಾಗಿದೆ. ಹೀಗಾಗಿ ಹಲವು ತಜ್ಞರು 18 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ಹಾಕದ ಕಾರಣಕ್ಕೆ ಅವರು ಸಾಕಷ್ಟು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್ ನ ಮೂರನೇ ಅಲೆಯ ಪ್ರಭಾವ ವಯಸ್ಕರಿಗೆ ಹೋಲಿಸಿದರೆ, ಮಕ್ಕಳ ಮೇಲೆ ತುಂಬಾ ಕಡಿಮೆ ಇರಲಿದೆ ಎಂದಿದೆ.

ಒಂದು ಕೆಜಿ ಮಾವಿಗೆ ಎರಡೂವರೆ ಲಕ್ಷ ರೂ!

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಇಲ್ಲೊಬ್ಬ ರೈತ ಬೆಳೆದ ಮಾವು ಒಂದು ಕೆಜಿಗೆ ಬರೋಬ್ಬರಿ ರೂ. 2.5 ಲಕ್ಷ. ನೀವು ನಂಬದಿದ್ದರೂ ಈ ಸಂಗತಿ ಮಾತ್ರ ಸತ್ಯ.

ಇದು ವಿಶೇಷ ತಳಿಯ ಮಾವು. ಮಧ್ಯ ಪ್ರದೇಶದ ಜಬಲ್ ಪುರನಲ್ಲಿ ರೈತರೊಬ್ಬರು ಈ ಮಾವು ಬೆಳೆದಿದ್ದಾರೆ. ಈ ಮಾವಿಗೆ ಭಾರಿ ಬೇಡಿಕೆ ಇರುವುದರಿಂದಾಗಿ ತೋಟದ ರಕ್ಷಣೆಗಾಗಿ ಮೂವರು ಗಾರ್ಡ್ ಗಳೊಂದಿಗೆ 9 ನಾಯಿಗಳನ್ನು ನೇಮಿಸಲಾಗಿದೆ. ಈ ಮಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಭಾರೀ ಬೇಡಿಕೆ ಹಾಗೂ ಹೆಚ್ಚಿನ ದರ ಇರುವ ಕಾರಣ ಮಾವು ಬೆಳೆದ ತೋಟಕ್ಕೆ ಸೆಕ್ಯೂರಿಟಿ ಹೆಚ್ಚಿಸಲಾಗಿದೆ.

ಸಂಕಲ್ಪ್ ಎಂಬ ರೈತ ಈ ವಿಶೇಷ ಮಾವು ಬೆಳೆದ ರೈತ. ಈ ಮಾವಿನ ಹಣ್ಣುಗಳಿಗೆ ಟಾಯಿಯೋ ನೋ ಟಮೈಂಗೋ ಮತ್ತು ಎಗ್ ಆಫ್ ಸನ್ ಎಂದು ಹೆಸರಿಸಲಾಗಿದೆ. ಕಳೆದ ವರ್ಷ ಈ ಮಾವಿನ ಬಗ್ಗೆ ವಿಶೇಷ ಚರ್ಚೆಗಳು ನಡೆದಿದ್ದವು. ಹಾಗಾಗಿ ಈ ಬಾರಿ ಮಾವುಗಳ ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ರೈತ ಹೇಳಿದ್ದಾರೆ.

ಈ ಮಾವು ಪೂರ್ಣ ಹಣ್ಣು ಆದ ನಂತರ ತಿಳಿ ಕೆಂಪು ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗುತ್ತದೆ. ಒಂದು ಮಾವು ಸುಮಾರು 900 ಗ್ರಾಂ ತೂಕ ಹೊಂದಿರುತ್ತದೆ. ಇದರಲ್ಲಿ ನಾರಿನಾಂಶ ಇರಲ್ಲ, ತುಂಬಾ ರುಚಿಯಾಗಿರುತ್ತದೆ. ಜಪಾನಿನಲ್ಲಿ ವಿಶೇಷ ಮತ್ತು ಸಂರಕ್ಷಿತ ವಾತಾವರಣದಲ್ಲಿ ಈ ಮಾವು ಬೆಳೆಯುತ್ತಾರೆ. ಆದರೆ, ರೈತ ಸಂಕಲ್ಪ್ ತಮ್ಮ ಬಂಜರು ಭೂಮಿಯಲ್ಲಿ ಈ ಮಾವು ಬೆಳೆದು ಯಶಸ್ವಿಯಾಗಿದ್ದಾರೆ.

2017ರಲ್ಲಿ ಜಪಾನ್ ಈ ಮಾವುಗಳನ್ನು 3600 ಡಾಲರ್ ನೀಡಿ ಖರೀದಿಸಿತ್ತು. ಒಟ್ಟು ನಾಲ್ಕು ಎಕರೆಯಲ್ಲಿ ಮಾವಿನ ಸಸಿ ನಡೆಲಾಗಿದೆ. ಆದರೆ, ಕೆಲವು ಮಾವುಗಳನ್ನು ಸಸಿ ಮಟ್ಟದಲ್ಲಿಯೇ ನಾಶವಾಗಿವೆ. ಅಲ್ಲದೇ, 14 ಹೈಬ್ರಿಡ್ ಹಾಗೂ 6 ವಿದೇಶಿ ತಳಿಯ ಮಾವಿನ ಗಿಡ ನಮ್ಮ ತೋಟದಲ್ಲಿ ಇವೆ ಎಂದು ರೈತ ಹೇಳಿದ್ದಾರೆ.

ಬೆಳಗಾವಿಯಲ್ಲಿ ಭಾರಿ ಮಳೆ; ಜಿಲ್ಲೆಯಲ್ಲಿ ಹೈ ಅಲರ್ಟ್, ಗ್ರಾಮಸ್ಥರಿಗೆ ಎಚ್ಚರಿಕೆ!

ವಿಜಯಸಾಕ್ಷಿ ಸುದ್ದಿ, ನರಗುಂದ

ರಾಜ್ಯದಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಮಳೆ ವಿಪರೀತವಾಗಿ ಸುರಿಯುತ್ತಿರುವ ಪರಿಣಾಮ ಜಿಲ್ಲಾಡಳಿತವು ಜಿಲ್ಲೆಯ ಹಲವು ಗ್ರಾಮಗಳ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಲಕಮಾಪುರ ಗ್ರಾಮದಲ್ಲಿ ಸಭೆ ನಡೆಸಿದೆ. ನರಗುಂದ ತಹಸೀಲ್ದಾರ್ ಎ.ಡಿ. ಅಮರವಾಡಗಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಲಾಗಿದೆ.

ಬೆಳಗಾವಿ ಜಿಲ್ಲೆ ಹಾಗೂ ಮಲಪ್ರಭಾ ನದಿ ಜಲಾನಯನ ಪ್ರದೇಶದಲ್ಲಿ ವಿಪರೀತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ, ನೀರಿನ ಹರಿವು ಹೆಚ್ಚಾಗಿ ನವಿಲು ತೀರ್ಥ ಡ್ಯಾಂ ನಿಂದ ನೀರು ಹರಿಬಿಟ್ಟರೆ ಲಕಮಾಪುರ ಗ್ರಾಮ ನಡುಗಡ್ಡೆಯಾಗುತ್ತದೆ. ಹೀಗಾಗಿ ತಾಲೂಕು ಆಡಳಿತ ಮಾಹಿತಿ ನೀಡಿದ ತಕ್ಷಣ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.

ಒಂದು ವೇಳೆ ಪ್ರಾವಹ ಉಂಟಾದರೆ ಲಕಮಾಪುರ ಗ್ರಾಮದ ಜನರು ಬೆಳ್ಳೇರಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಬರುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ. ಈ ಕುರಿತು ತಹಸೀಲ್ದಾರ್ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ತಾಪಂ ಇಓ, ನರಗುಂದ ಸಿಪಿಐ ಭಾಗವಹಿಸಿದ್ದರು.

ಈ ಹಿಂದೆಯೂ ಹಲವು ಬಾರಿ ಈ ಗ್ರಾಮ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿತ್ತು. ಇಡೀ ಗ್ರಾಮದ ಸುತ್ತಮುತ್ತ ನೀರು ಆವರಿಸಿ ಗ್ರಾಮ ನಡುಗಡ್ಡೆಯಂತಾಗಿತ್ತು. ಹೀಗಾಗಿ ತಾಲೂಕು ಆಡಳಿತ ಈ ಬಾರಿ ಎಚ್ಚರಿಕೆ ವಹಿಸಿದೆ. ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಈ ಗ್ರಾಮವೇ ಮೊದಲಿಗೆ ತೊಂದರೆ ಅನುಭವಿಸುವುದು.

ಖ್ಯಾತ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ

ವಿಜಯಸಾಕ್ಷಿ ಸುದ್ದಿ, ಚಂಡೀಗಢ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಅಥ್ಲೆಟಿಕ್ ಮಿಲ್ಖಾ ಸಿಂಗ್ ಅವರು ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರ ಪತ್ನಿ ಕೊರೋನಾದಿಂದ ಸಾವನ್ನಪ್ಪಿದ್ದರು.
ಇತ್ತೀಚೆಗೆ ಮಿಲ್ಖಾ ಸಿಂಗ್ ಅವರ ಪತ್ನಿ ಹಾಗೂ ಭಾರತದ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್ (85) ಅವರು ಕೋವಿಡ್ ಗೆ ಬಲಿಯಾಗಿದ್ದರು.

ಪತ್ನಿ ಮೃತಪಟ್ಟ ಐದು ದಿನಗಳ ಅಂತರದಲ್ಲಿ ಮಿಲ್ಖಾಸಿಂಗ್ ಸಹ ಮೃತಪಟ್ಟಿದ್ದಾರೆ.
1935 ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿರುವ ಗೋವಿಂದಪುರದಲ್ಲಿ ಮಿಲ್ಖಾ ಸಿಂಗ್ ಜನಿಸಿದರು. ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ವೇಳೆ ನಡೆದ ಕೋಮು ಗಲಭೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರು. ಆಗ ಇವರಿಗೆ ಕೇವಲ 12 ವರ್ಷ ವಯಸ್ಸು, ಅಂದು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ ಅವರು ಮುಂದೆ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದರು.

1958ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಚಿನ್ನ, 1958ರ ಕಾಮನ್ ವೆಲ್ತ್ ನಲ್ಲಿ ಮಿಲ್ಖಾ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಇದು ಸ್ವತಂತ್ರ ಭಾರತದಲ್ಲಿ ಭಾರತಕ್ಕೆ ಕಾಮನ್ ವೆಲ್ತ್ನಲ್ಲಿ ಬಂದ ಮೊಟ್ಟ ಮೊದಲ ಸ್ವರ್ಣಪದಕವಾಗಿತ್ತು. ಇವರ ಸಾಧನೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ನೀಡಿದೆ. ಪ್ರಧಾನಿ ಮೋದಿ ಸೇರಿ ಇತರ ಗಣ್ಯರು ಮಿಲ್ಖಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಧಾರಾಕಾರ ಮಳೆಗೆ ಮತ್ತೊಂದು ಬಲಿ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗಾವಿಯಲ್ಲಿ ಕೂಡ ಕಳೆದ ಕೆಲವು ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದೆ. ಈ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯ ಮಾರ್ಕಂಡೆಯ ನದಿಯ ಪ್ರವಾಹದಲ್ಲಿ ರೈತರೊಬ್ಬರು ಕೊಚ್ಚಿ ಹೋಗಿದ್ದಾರೆ. ಕಾಕತಿ ಗ್ರಾಮದ ಸಿದ್ರಾಯಿ ದೊಡ್ಡರಾಮಾ ಸುತಗಟ್ಟಿ (65) ಕೊಚ್ಚಿ ಹೋದ ರೈತ.

ಈ ರೈತ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಕೃಷಿ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನದಿಯ ಸೇತುವೆ ಬಳಿ ಕೈ ಕಾಲು ತೊಳೆದುಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ರೈತ ಕೊಚ್ಚಿ ಹೋಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಳಗಾವಿ ಎಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರಾಕಾರ ಮಳೆ ಮತ್ತು ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಕಾರ್ಯಾಚರಣೆ ಅರ್ಧದಲ್ಲಿಯೇ ಅಧಿಕಾರಿಗಳು ಮೊಟಕುಗೊಳಿಸಿದ್ದಾರೆ. ಮತ್ತೆ ಇಂದು ಬೆಳಿಗ್ಗೆ ಶೋಧ ಕಾರ್ಯ ನಡೆಯಲಿದೆ.

error: Content is protected !!