Home Blog Page 3012

ಬಸ್ ತಡೆದು ಪ್ರತಿಭಟನೆ; ಕನ್ನಡಪರ ಹೋರಾಟಗಾರರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ನಗರಾದ್ಯಂತ ಕರ್ನಾಟಕ ಬಂದ್ ಕ್ಷಣ ಕ್ಷಣಕ್ಕೂ ತೀವ್ರತೆ ಪಡೆದುಕೊಳ್ಳುತ್ತಿದೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸುವಂತೆ ಆಗ್ರಹಸಿ ಪ್ರತಿಭಟನೆ ನಡೆಸುತ್ತಿದ್ದ ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೋಯ್ದಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರು, ದಿಢೀರನೇ ಡಿಸಿ ಕಚೇರಿಯ ಮುಂಭಾಗದಲದಲಿರುವ ಗದಗ-ಹುಬ್ಬಳ್ಳಿ ರಸ್ತೆ ಕಡೆ ಎದ್ದು ಬಂದು ಬಸ್ ತಡೆದಿದ್ದಾರೆ.

ಪೊಲೀಸರು ಎಷ್ಟೇ ಹೇಳಿದರು ಕೇಳದ ಕಾರ್ಯಕರ್ತರನ್ನು ಬಂಧಿಸಿ ಕೊನೆಗೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು.

ಟಿಪ್ಪುಸುಲ್ತಾನ್ ಸರ್ಕಲ್ ನಲ್ಲಿ ಹೈಡ್ರಾಮಾ; ಕೂದಲೆಳೆ ಅಂತರದಲ್ಲಿ ಪಾರಾದ ಕರವೇ ಕಾರ್ಯಕರ್ತರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತುರು ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರ ಪ್ರತಿಕೃತಿ ದಹಿಸಲು ಯತ್ನಿಸಿದರು. ಪ್ರತಿಕೃತಿ ದಹಿಸದಂತೆ ಪೊಲೀಸರು ತಡೆಯಲು ಯತ್ನಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ನೂಕು ನುಗ್ಗಲು ನಡೆಯಿತು.

ಕೈಯಲ್ಲಿದ್ದ ಪ್ರತಿಕೃತಿ ಕಸಿಯಲು ಯತ್ನಿಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತರು ಪರದಾಡಿದರು. ಕೆಲ ಹೊತ್ತು ಟಿಪ್ಪು ಸುಲ್ತಾನ್ ವೃತ್ತದಲ್ಲಿ ಹೈಡ್ರಾಮಾ ನಡೆಯಿತು. ಎಷ್ಟೇ ಪ್ರಯತ್ನಸಿದರು ಹಿಡಿದ ಹಠ ಬಿಡದ ಕರವೇ ಕಾರ್ಯಕರ್ತರು ಯತ್ನಾಳ ಅವರ ಪ್ರತಿಕೃತಿ ದಹಿಸಿದರು. ನಂತರ ಪೊಲೀಸರು ನೀರು ಸುರಿದು ಬೆಂಕಿ ನಂದಿಸಿದರು.

ಪ್ರತಿಕೃತಿ ದಹಿಸಲು ಪೆಟ್ರೋಲ್ ಸುರಿದ ಕಾರ್ಯಕರ್ತರು ಬೆಂಕಿ ಹಚ್ಚಿದರು. ಈ ವೇಳೆ ಒಮ್ಮೆಲೆ ಹೊತ್ತಿಕೊಂಡ ಬೆಂಕಿ ಆಳೆತ್ತರಕ್ಕೆ ದಗ್ಗಂತೆ ಉರಿಯಿತು. ಪಕ್ಕದಲ್ಲೇ ಇದ್ದ ಕಾರ್ಯಕರ್ತರು ದಢೀರ್ ಅಂತಾ ಹಿಂದೆ ಸರಿದಿದ್ದರಿಂದಾಗಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ. ಇದರಿಂದ ಕೊದಲೆಳೆ ಅಂತರದಲ್ಲಿ ಕರವೇ ಕಾರ್ಯಕರ್ತರು ಪಾರಾಗಿದ್ದಾರೆ.

ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಿಂಗನಗೌಡ ಮಾಲೀಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಕರವೇ ಮುಖಂಡರಾದ ಹನುಮಂತ ಪೂಜಾರ, ಬಸವರಾಜ ಮೇಟಿ, ವಿರುಪಾಕ್ಷಿ ಹಿತ್ತಲಮನಿ, ಆಶು ಜೂಲಗುಡ್ಡ, ನಾಗಪ್ಪ ಅಣ್ಣಿಗೇರಿ, ಮಹಾದೇವಿ ದೊಡ್ಡಗೌಡರ ಸೇರಿದಂತೆ ಅನೇಕರು ಇದ್ದರು.

ಜಿಲ್ಲೆಯಲ್ಲಿ ತೀವ್ರಗೊಂಡ ಹೋರಾಟ; ವಾಹನ ತಡೆದು ಕರವೇ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಮರಾಠಾ ಪ್ರಾಧಿಕಾರದ ಹೆಸರಲ್ಲಿ ಕನ್ನಡಿಗರನ್ನು ನಿಂದಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದರು, ವಾಹನ ಸಂಚಾರ ಎಂದಿನಂತೆ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಲಾರಿ ಅಡ್ಡಗಟ್ಟಿ ಚಾಲಕರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಪೊಲೀಸರ ಮಧ್ಯೆ ವಾಕ್ಸಮರ ನಡೆಯಿತು. ರಾಜ್ಯ ಸರ್ಕಾರ, ಮಹಾರಾಷ್ಟ್ರ ಪರವಾಗಿ ಕೆಲಸ ಮಾಡಬೇಡಿ. ಕನ್ನಡಿಗರ ಪರ ಕೆಲಸ ಮಾಡಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಇದರಿಂದ ಚೆನ್ನಮ್ಮ ವೃತ್ತದಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡೆತಡೆಯುಂಟಾಯಿತು. ಲಾರಿ ಮೇಲೆ ಕಲ್ಲು ತೂರಲು ಯತ್ನಿಸಿದ ಕಾರ್ಯಕರ್ತರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸಿದರು.

ಅಲ್ಲದೇ, ಡಿಫೋದಿಂದ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಗದಗ-ಡೋಣಿ ಬಸ್ ಹಿಂದಿರುಗಿಸಿದರು. ಡಿಪೋದಿಂದ ಯಾವುದೇ ಬಸ್ ಬಿಡಬಾರದು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಈಗಾಗಲೇ ತೆಗೆದಿರುವ ಹೋಟೆಲ್ಗಳನ್ನು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಕರವೇ ಕಾರ್ಯಕರ್ತರು ಯತ್ನಿಸಿದರು. ಅಂಗಡಿ ಮುಚ್ಚುವಂತೆ ಮನವಿ ಮಾಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿಬೇಡಿ. ಅವರಿಗೆ ಆಸಕ್ತಿ ಇದ್ದರೆ ಮುಚ್ಚುತ್ತಾರೆ ಎಂದರು.

ಇದರಿಂದ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಮಾಡುತ್ತಿರುವ ಹೋರಾಟ ತೀವ್ರತೆ ಪಡೆದುಕೊಂಡಂತಾಗಿದೆ.

ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಹೋರಾಟಗಾರರು; ಪೊಲೀಸರ ಜೊತೆಗೆ ಮಾತಿನ ಚಕಮಕಿ

0

ವಿಜಯಸಾಕ್ಷಿ ಸುದ್ದಿ, ಗದಗ

ಮರಾಠ ಅಬಿವೃದ್ಧಿ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿಂದು ಬೆಳ್ಳಂಬೆಳಗ್ಗೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಗದಗ-ಹುಬ್ಬಳ್ಳಿ ರಸ್ತೆ ತಡೆದು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು. ಈ ಮೂಲಕ ಪ್ರತಿಭಟನೆಯ ಕಾವು ಜೋರಾಗಿತ್ತು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ಕನ್ನಡಪರ ಹೊರಾಟಗಾರರು ತಮಟೆ ಭಾರಿಸಿ, ಘೋಷಣೆ ಕೂಗುವ ಮೂಲಕ ಕನ್ನಡ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮರಾಠ ಅಭಿವೃದ್ಧಿ ನಿಗಮ ಹಿಂಪಡೆಯುವಂತೆ ಆಗ್ರಹಿಸಿದ ಅವರು, ಬಾಯಿ ಬಾಯಿ ಬಡೆದುಕೊಂಡು ಬೊಬ್ಬೆ ಹೊಡೆದು ಹೋರಾಟ ನಡೆಸಿದರು.

ನಗರದ ಮುಳಗುಂದ ನಾಕಾದಲ್ಲಿ ಟೈರಿಗೆ ಬೆಂಕಿ ಹಚ್ಚಲು ಸಿದ್ಧತೆ ಮಾಡಿಕೊಂಡಿದ್ದ ಸಂಘಟನೆ ಕಾರ್ಯಕರ್ತರಿಂದ ನಗರಸಭೆ ಸಿಬ್ಬಂದಿಗಳಳು ಟೈರ್ ಗಳನ್ನು ವಶಕ್ಕೆ ಪಡೆದರು. ಗದಗ-ಹುಬ್ಬಳ್ಳಿ ರಸ್ತೆ ತಡೆ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಅದರಂತೆ ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಜಿಲ್ಲೆಯಲ್ಲಿ ಬಂದ್ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅಹಿತರ ಘಟನೆಗಳು ಸಂಭವಿಸದಂತೆ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನೂ ನಗರದಲ್ಲಿ ಬಸ್ ಸಂಚಾರ, ವಾಹನ ಓಡಾಟ, ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಜನಜೀವನ ಎಂದಿನಂತೆ ಇದೆ.

ರಾಜ್ಯಪಾಲರು ಈ ಸರಕಾರವನ್ನು ವಜಾಗೊಳಿಸಲಿ: ತಂಗಡಗಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರ ಅಧಿಕಾರ ಉಳಿಸಿಕೊಳ್ಳಲು ಸಮಯ ಪೋಲು ಮಾಡುತ್ತಿದೆಯೇ ವಿನಃ ಅಭಿವೃದ್ಧಿಯತ್ತ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಇಂಥ ಬೇಜವಾಬ್ದಾರಿ ಸರಕಾರವನ್ನು ರಾಜ್ಯಪಾಲರು ವಜಾಗೊಳಿಸಲಿ. ಸ್ಥಿರ ಸರಕಾರ ಆಡಳಿತ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಮೊದಲು ತಮ್ಮದನ್ನು ನೋಡಿಕೊಳ್ಳಲಿ. ಗೆದ್ದ ಪಕ್ಷವನ್ನು ಬಿಟ್ಟು ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋದ ಇವರು ಹೇಡಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲ ತೀರಿಸಲಾಗದೇ ಗೌರವದ ಕಾರಣಕ್ಕಾಗಿ ಅನ್ನದಾತ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ಸರಕಾರ ಮತ್ತು ಜನಪ್ರತಿನಿಧಿಗಳು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸಚಿವ ಬಿ.ಸಿ.ಪಾಟೀಲರಿಗೆ ಯಾವುದೇ ಜವಾಬ್ದಾರಿ ಇಲ್ಲ. ದಯಮಾಡಿ ಬಿಜೆಪಿ ಬಿ.ಸಿ.ಪಾಟೀಲರ ರಾಜೀನಾಮೆ ಪಡೆದು ಮನೆಗೆ ಕಳಿಸಲಿ ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಸರಕಾರ ಇದ್ದರೂ ಸತ್ತಂತಿದೆ. ಇಂಥ ಬೇಜವಾಬ್ದಾರಿ ಮಂತ್ರಿಗಳನ್ನು ಮಂತ್ರಿಮಂಡಲದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಜವಾಬ್ದಾರಿ ಆಡಳಿತ ನಡೆಸುತ್ತಿದ್ದಾರೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.

-ಕೆಆರ್ ಎಸ್ ಕಾರ್ಯಕರ್ತರು-ಪೊಲೀಸರ ನಡುವೆ ವಾಗ್ವಾದ

ಬಿಕ್ಕಟ್ಟು ತಂದಿಟ್ಟ ಹಲ್ಕಟ್ ಪದಪ್ರಯೋಗ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಸೈಕಲ್ ಜಾಥಾ ಮತ್ತು ಸಾರ್ವಜನಿಕ ಭಾಷಣದ ಪರವಾನಗಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪಿಎಸ್ಐ ಮಹಾಂತೇಶ ಮೇಟಿ ಬಳಸಿದ ಹಲ್ಕಟ್ ಎಂದ ಪದಪ್ರಯೋಗ ಕೆಆರ್ಎಸ್ ಕಾರ್ಯಕರ್ತರನ್ನು ಕೆರಳಿಸಿತು.

ನಗರದ ಅಶೋಕ ವೃತ್ತದಲ್ಲಿ ಗುರುವಾರ ವಾಗ್ವಾದದ ಘಟನೆ ನಡೆದಿದ್ದು, ಕೆಲ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರಡ್ಡಿ ಪೊಲೀಸರಿಗೆ ಪರವಾನಗಿ ಮಾಹಿತಿ ನೀಡಿದ ಬಳಿಕ ಸೈಕಲ್ ಜಾಥಾ ಮುಂದುವರಿಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕೃಷ್ಣರಡ್ಡಿ, ಪೊಲೀಸ್ ಭಾಷೆ ಎಲ್ಲ ಸಂದರ್ಭದಲ್ಲೂ ಒಂದೇ ಇರಬಾರದು. ಭಾಷಾ ಬಳಕೆ, ಪದ ಪ್ರಯೋಗ ನಮಗೂ ಚನ್ನಾಗಿ ಗೊತ್ತಿದೆ. ಜೈಲು ನಮಗೇನು ಹೊಸತಲ್ಲ. ಆದರೂ ಹಲ್ಕಟ್ ಪದ ಬಳಕೆ ಸರಿಯಾದುದಲ್ಲ. ಇದನ್ನೇ ಬೆಳೆಸುವ ಇಚ್ಛೆ ನಮಗಿಲ್ಲ ಎಂದರು.

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಬಿ.ಸಿ.ಪಾಟೀಲ್ ಅವರ ದುರಹಂಕಾರದ ಮಾತು, ಸಂವೇದನೆ ಇಲ್ಲದ ಮಾತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾಗಾದರೆ ಅವರು ಹೇಡಿನಾ? ಅಥವಾ ಅಂಥವರನ್ನು ನೇಮಿಸಿಕೊಂಡ ಮುಖ್ಯಮಂತ್ರಿಯ ಯೋಗ್ಯತೆ ಏನು? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರಡ್ಡಿ ಪ್ರಶ್ನಿಸಿದರು.

ರೈತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕಿಡಿ ಕಾರಿದ ಅವರು, ರೈತರ ಆತ್ಮಗೌರವಕ್ಕೆ ಧಕ್ಕೆ ತರುವಂಥ ಮಾತುಗಳು ಸರಿಯಲ್ಲ. ರೈತರು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂಬುದು ಶ್ರೀಮಂತ ಕುಟುಂಬದ ದರ್ಪಿಷ್ಟ ಸಚಿವರಿಗೆ ಏನು ಗೊತ್ತು? ಇಂಥವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಸಿಎಂ ಯಡಿಯೂರಪ್ಪ ಬಿ.ಸಿ.ಪಾಟೀಲ್ ರಿಂದ ಕೃಷಿ ಖಾತೆ ಹಿಂಪಡೆಯಬೇಕು. ಬೇರೆ ಖಾತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ನಮ್ಮ ಕೆಆರ್ಎಸ್ ಪಕ್ಷ ಸೈಕಲ್ ಯಾತ್ರೆ ನಡೆಸುತ್ತಿದ್ದು, ಎರಡನೇ ಹಂತದಲ್ಲಿ ಬೆಳಗಾವಿಯಿಂದ ಆರಂಭಗೊಂಡು ಬಳ್ಳಾರಿವರೆಗೆ ಸೈಕಲ್ ಯಾತ್ರೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ಗೆ ಪಕ್ಷವು ಬೆಂಬಲ ನೀಡಲ್ಲ. ಹೋರಾಟದ ಹಾದಿ ಸರಿಯಿದ್ದು, ಸರಕಾರ ಜಾತಿಗಳ ಓಲೈಕೆಗೆ ನಿಗಮ, ಮಂಡಳಿ, ಅಭಿವೃದ್ಧಿ ಪ್ರಾಧಿಕಾರದ ಗಿಮಿಕ್ ಬಿಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟು ಮುಚ್ಚುವಂತಿಲ್ಲ; ಎಸ್ಪಿ ಯತೀಶ್

0

ವಿಜಯಸಾಕ್ಷಿ ಸುದ್ದಿ, ಗದಗ

ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿ.5 ರಂದು ಶನಿವಾರ ಕರ್ನಾಟಕ ಬಂದ್ ಘೋಷಿಸಿದ್ದು, ಬಂದ್ ಬಗ್ಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ವಿಜಯಸಾಕ್ಷಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ ನಡೆಯಲಿದೆ. ಯಾರೂ ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಬಾರದು. ಯಾವುದೇ ರಸ್ತೆ ತಡೆ ಮಾಡಬಾರದು. ಯಾವುದೇ ತರಹದ ವಾಹನಗಳನ್ನು ತೆಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಿದ್ದರೆ ಸಲ್ಲಿಸಬಹುದು. ಆದರೆ, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದರೆ ಮತ್ತು ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಸಚಿವ ಬಿ.ಸಿ.ಪಾಟೀಲ್ ಗೆ ಬಾರ್ಗಳಿಂದಲೂ ಮಾಮೂಲಿ ಫಿಕ್ಸ್: ತಂಗಡಗಿ ಆರೋಪ

-ಕೊರೋನಾ ಹೆಸರಿನಲ್ಲಿ ಕೇಂದ್ರ-ರಾಜ್ಯ ಸರಕಾರ ಕೋಟಿ ಕೋಟಿ ಲೂಟಿ: ಹಿಟ್ನಾಳ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತು ಬರುವುದಿಲ್ಲ. ಬದಲಾಗಿ ತಮ್ಮ ಕಮಾಯಿ ಗಿಟ್ಟಿಸಿಕೊಳ್ಳಲು ಕೊಪ್ಪಳಕ್ಕೆ ಬಂದು ಸಭೆಯ ಹೆಸರಿನಲ್ಲಿ ವಂತಿಗೆ ಪಡೆಯುತ್ತಾರೆ. ಜಿಲ್ಲೆಯ ಬಾರ್ಗಳಿಂದ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ಗೆ ಮಾಮೂಲಿ ಫಿಕ್ಸ್ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

ನಗರದ ಮೇಘರಾಜ ಕಲ್ಯಾಣಮಂಟಪದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಿದೆ. ಇವಿಎಂಗಳ ಮುಖಾಂತರ ಮೋಸದಿಂದ ಚುನಾವಣೆ ಗೆಲ್ಲುವ ಬಿಜೆಪಿಗೆ ಬುದ್ದಿ ಕಲಿಸಬೇಕಿದೆ. ರಾಜ್ಯದಲ್ಲಿ ಸರಕಾರವೇ ಇಲ್ಲ. ಇದ್ದರೂ ಸತ್ತಂತಿದೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೇ ಮಂತ್ರಿ ಯನ್ನು ತೆಗೆಯಲು ಮನವಿ ಮಾಡಿದ್ದಾರೆ. ಇದುವರೆಗೆ ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ಮಾಡಿದಂತಹ ಯಾವುದೇ ಯೋಜನೆಗಳನ್ನು ಬಿಜೆಪಿಯವರು ಮಾಡಿಲ್ಲ. ಲವ್ ಜೆಹಾದ್, ಗೋ ಹತ್ಯೆ ಬಿಟ್ರೆ ಬೇರೆ ಏನಿಲ್ಲ. ಯಾವ ಜಾತಿಯವರು ಯಾರನ್ನಾದರೂ ಕಾನೂನು ನಿಗದಿಪಡಿಸಿರುವ ವಯೋಮಾನದವರು ಮದುವೆಯಾದರೆ ಬಿಜೆಪಿಯವರದೇನು ದೊಡ್ಡಸ್ತಿಕೆ? ಬಿಜೆಪಿಯವರು ಬೀದಿಗೆ ಬಿದ್ದ ರೈತರ ಪರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳಲು ನಿತ್ಯ ಸರ್ಕಸ್ ಮಾಡುತ್ತಿದ್ದಾರೆ ಬಿಜೆಪಿ ನಾಯಕರು ಎಂದು ಕಿಡಿ ಕಾರಿದರು.

ಗ್ರಾ.ಪಂ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಿದೆ. ಒಂದೇ ವಾರ್ಡಿನಲ್ಲಿ ಇಬ್ಬರು ಮೂವರು ನಿಲ್ಲದೇ ಗೆಲ್ಲುವ ಕೆಲಸ ಮಾಡಬೇಕಿದೆ. ಅಂದಾಗ ದುಷ್ಟ ಬಿಜೆಪಿಯನ್ನು ದೂರ ಮಾಡಲು ಸಾಧ್ಯ. ನಿಷ್ಟಾವಂತ ಕಾಂಗ್ರೆಸ್ ಬೆಂಬಲಿಗರು ಬಿಜೆಪಿಯ ಆಮಿಷಕ್ಕೆ ಒಳಗಾಗುವುದಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಬೆಂಬಲಿತರಿಗೆ ತಕ್ಕ ಶಾಸ್ತಿ ಕಲಿಸೋಣ ಎಂದು ಕರೆ ನೀಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಲಂಚ ಹೊಡೆಯುವುದರಲ್ಲಿ ರಾಜ್ಯ ಕೇಂದ್ರ ಸರಕಾರ ಒಬ್ಬರಿಗಿಂತ ಒಬ್ಬರು ನಾ ಮೇಲು, ನೀ ಮೇಲು ಎಂಬಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮ ರೂಪಿಸುವಲ್ಲಿ ಬಿಜೆಪಿ ನಾಯಕರು ಶೂನ್ಯವಾಗಿದ್ದಾರೆ ಎಂದು ದೂರಿದರು.

ಬಿಜೆಪಿಯವರು ಭಾಷಣ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿರುವಾಗ ಲಾಠಿ ಬೀಸುವ ಕೆಲಸ ಮಾಡಲಾಗಿದೆ. ಮೋದಿಯವರು ಬಿಹಾರ ರಾಜ್ಯಕ್ಕೆ ಉಚಿತವಾಗಿ ಕೊರೋನಾ ಲಸಿಕೆ ಕೊಡುವ ಮಾತನಾಡುತ್ತಾರೆ. ಹಾಗಾದರೆ ಕರ್ನಾಟಕದವರು ಭಾರತೀಯರಲ್ಲವೇ? ಎಂದು ಅವರು ಪ್ರಶ್ನಿಸಿದರು.

ಕೊರೋನಾ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಎಲ್ಲವನ್ನೂ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಲಾಗಿದೆ. ಕೊರೋನಾ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕೋಟಿ ಕೋಟಿ ಲೂಟಿ ಮಾಡಿದೆ. ಕಾಂಗ್ರೆಸ್ ಮಾತ್ರ ಪ್ರತಿಯೊಂದು ಸಮಾಜವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಪಕ್ಷ. ನೀರಾವರಿ ಯೋಜನೆ, ಆಸ್ಪತ್ರೆ, ಶೈಕ್ಷಣಿಕ ಎಲ್ಲ ಕ್ಷೇತ್ರದಲ್ಲಿ ಮೂರೂವರೆ ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಬಿಜೆಪಿ ಏನನ್ನು ಮಾಡಿಲ್ಲ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಚುನಾವಣೆ. ಒಳ್ಳೆಯರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಪಂ ಸದಸ್ಯರಾದ ಗೂಳಪ್ಪ ಹಲಗೇರಿ, ಜಿಪಂ ಮಾಜಿ ಸದಸ್ಯ ಜನಾರ್ಧನ ಹುಲಗಿ, ತಾಪಂ ಅಧ್ಯಕ್ಷ ಬಾಲಚಂದ್ರ, ನಗರಸಭೆ ಸದಸ್ಯರಾದ ಗುರು ಹಲಗೇರಿ, ಅಕ್ಬರ್ ಪಾಷಾ ಪಲ್ಟಾನ್ ಮತ್ತಿತರರು ಇದ್ದರು.

ಚಿಕ್ಕೋಡಿ/ಗೋಕಾಕ ಪ್ರತ್ಯೇಕ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವೆ: ಸಚಿವ ರಮೇಶ್ ಜಾರಕಿಹೊಳಿ

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಅತ್ಯಂತ ಅವಶ್ಯಕವಿದೆ. ಚಿಕ್ಕೋಡಿ ಅಥವಾ ಗೋಕಾಕ ತಾಲೂಕಿನವರು ಯಾರಾದರೂ ಒಬ್ಬರು ಹಿಂದಕ್ಕೆ ಸರಿದರೆ ಇವೆರಡರಲ್ಲಿ ಒಂದನ್ನು ಸಲೀಸಾಗಿ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯವರಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆಗೊಳಿಸಿ ಚಿಕ್ಕೋಡಿ-ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಚಿಕ್ಕೋಡಿ-ಗೋಕಾಕ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಕೈಬಿಡಲಾಯಿತು ಎಂದು ತಿಳಿಸಿದರು.

ಪ್ರತ್ಯೆಕ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡುವೆ ಎಂದು ಸಚಿವ ರಮೇಶ್ ಜಾರಕಿಹೋಳಿ ಭರವಸೆ ನೀಡಿದರು.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿತ್ತು. ಇದು ರಾಜಕೀಯ ತಿರುವು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

ಈ ಸಂದರ್ಭದಲ್ಲಿ ಬಿ.ಆರ್.ಸಂಗಪ್ಪಗೋಳ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ಮುಂತಾದವರು ಇದ್ದರು.

ನಡುರಾತ್ರಿಯಲ್ಲಿ ಯುವಕನ ಹತ್ಯೆ; ಕೊಲೆ ಪಾತಕರು ಪರಾರಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿನ ಹೊರವಲಯದಲ್ಲಿ ಮಧ್ಯರಾತ್ರಿ ಯುವಕನೊರ್ವನನ್ನು ದುಷ್ಕರ್ಮಿಗಳು ಭೀಕರ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಹಳೆಹುಬ್ಬಳ್ಳಿಯ ನಿವಾಸಿ ಶಾರುಖ್ ಸೌದಾಗರ್ ಎಂದು ಗುರುತಿಸಲಾಗಿದೆ.
ಯುವಕನ ಮೇಲೆ ಮನಸ್ಸೊ ಇಚ್ಚೆ ದಾಳಿ ನಡೆಸಿರುವ
ದುಷ್ಕರ್ಮಿಗಳು ತೊಡೆ ಹಾಗೂ ಬೆನ್ನು ಮೂಳೆ ಮುರಿಯುವಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾರುಖ್ ನ ಮೃತ ದೇಹ ಎಸೆದಿದ್ದಾರೆ.

ಕೆಲ ಮೂಲಗಳ ಪ್ರಕಾರ ನಟೋರಿಯಸ್ ಹಂತಕ ರೌಡಿಶೀಟರ್ ಸಲೀಂ ಬಳ್ಳಾರಿಯೇ ಈ ಕೊಲೆಯ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ. ಸಲೀಂ ಮೇಲೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಲಾಕ್ ಡೌನ್ ವೇಳೆ ಹೋಟೆಲ್ ತಿಂಡಿ ಕೊಡುವಂತೆ ಮಧ್ಯರಾತ್ರಿ ಪಿಡಿಸಿದ್ದ ಸಲೀಂನಿಗೆ ಸ್ಥಳೀಯರು ಧರ್ಮದೇಟು ನೀಡಿ ಕಸಬಾ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಜಾಮೀನಿನ ಮೇಲೆ‌ ಹೊರಬಂದ ಸಲೀಂ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆಂದು ತಿಳಿದು ಬಂದಿದೆ.

ಕೊಲೆಯಾಗಿರುವ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಗಾರದಲ್ಲಿ ಮೃತ ಯುವಕನ ಶವವನ್ನು ಇರಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

error: Content is protected !!