ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೂಡ ಲಾಕ್ ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಅನಾವಶ್ಯಕವಾಗಿ ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ನಗರದ ಮುಳಗುಂದ ನಾಕಾ ಹತ್ತಿರ ಪೊಲೀಸರು ಹೀಗೆ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅನವಶ್ಯಕವಾಗಿ ಬೈಕ್ ನಲ್ಲಿ ಸುತ್ತಾಡುತ್ತಿರುವವರ ಬೈಕ್ ಸೀಜ್ ಮಾಡಿ ದೂರು ದಾಖಲಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ಸದ್ಯ ಈ ದೃಶ್ಯ ಸಾಮಾನ್ಯವಾಗಿದ್ದು, ಜಿಲ್ಲೆ ಕೂಡ ಹೊರತಾಗಿಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇಲ್ಲಿಯ ನಗರ ಸಮುದಾಯ ಆಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದೆ. ಜನ ವ್ಯಾಕ್ಸಿನ್ ಗಾಗಿ ಮುಗಿ ಬಿದ್ದಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿದ್ದಾರೆ. ಜನರ ಈ ದೃಶ್ಯ ಕಂಡು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಆರೋಗ್ಯ ಸಿಬ್ಬಂದಿ, ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ದಯವಿಟ್ಟು ಎಂದು ಕೈ ಮುಗಿದು ಮನವಿ ಮಾಡಿದ್ದಾರೆ. ಆದರೆ, ಜನರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ದಿನ ನಿತ್ಯ ಸಾವು – ನೋವುಗಳು ಹೆಚ್ಚಾಗಿ ಸಂಭವಿಸುತ್ತಿರುವುದರಿಂದ ಏನೇ ಆದರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಜನರು ಪಟ್ಟು ಹಿಡಿದಂತೆ ವರ್ತಿಸುತ್ತಿದ್ದಾರೆ. ಇಷ್ಟೊಂದು ಭಯ ಹೊಕ್ಕರೂ ಜನರಿಗೆ ಮಾತ್ರ ಬುದ್ಧಿ ಬರುತ್ತಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಭೂಮಿಯ ಮೇಲೆ ಕೊರೊನಾ ಇದೆ ಎಂದು ನವಜೋಡಿಯೊಂದು ಆಕಾಶದಲ್ಲಿ ಮದುವೆಯಾಗಿರುವ ವಿಶೇಷ ಘಟನೆ ನಡೆದಿದೆ. ಮಧುರೈ ನಿವಾಸಿಗಳಾದ ರಾಕೇಶ್, ಧೀಕ್ಷಣಾ ಎಂಬ ಜೋಡಿಯೇ ಈ ರೀತಿಯ ವಿಶೇಷ ಮದುವೆಯಾಗಿದೆ.
ಮದುವೆಗಾಗಿಯೇ ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದರು. 2 ಗಂಟೆಗಳ ಕಾಲ ಬಾಡಿಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿದ್ದಾರೆ. ಅಲ್ಲದೇ, ವಿಮಾನದಲ್ಲಿ ಹೆಚ್ಚು ಜನರನ್ನು ಕೂಡಿಸುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.
130 ಜನ ಸಂಬಂಧಿಕರನ್ನು ಸೇರಿಸಿ ಮದುವೆಯಾಗಿದ್ದಾರೆ. ವಿಮಾನವು ಮಧುರೈನಿಂದ ತೂತುಕಡಿಗೆ ಸಂಚರಿಸುವ ಸಂದರ್ಭದಲ್ಲಿ ಮದುವೆ ನಡೆದಿದೆ. ಸದ್ಯ ಈ ಮದುವೆಯ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲಲಿ ವೈರಲ್ ಆಗಿದೆ.
ಕೊರೊನಾ ಬಂದಿದೆ ಎಂಬ ಕಾರಣಕ್ಕೆ ಇಲ್ಲೊಬ್ಬ ವ್ಯಕ್ತಿ ಅತ್ತೆ ಹಾಗೂ ಮಾವನನ್ನು ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಅಳಿಯ ಮನೆಗೆ ಸೇರಿಸಲು ಒಪ್ಪದೇ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದು ಕಳಿಸಿದ್ದಾನೆ.
ಅರೆಚಾಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರು ಸಿದ್ದಮ್ಮರನ್ನು ಹೋಂ ಐಸೋಲೇಷನ್ ನಲ್ಲಿ ಇರುವಂತೆ ಸೂಚಿಸಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ದಮ್ಮ ಅವರನ್ನು ಮನೆಗೆ ಬಿಡಲು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಮ್ಮ ಅವರ ಅಳಿಯ ಮುತ್ತೇಗೌಡ, ಆಕೆಗೆ ಕೊರೊನಾ ಪಾಸಿಟಿವ್ ಬಂದಿದೆ. ಮನೆಗೆ ಸೇರಿಸಿಕೊಳ್ಳುವುದಿಲ್ಲ. ಆಕೆಯನ್ನು ಕರೆದುಕೊಂಡು ಹೋಗಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರೇಗಿದ್ದಾನೆ. ಮುತ್ತೇಗೌಡನನ್ನು ಸಿದ್ದಮ್ಮ ಅವರು ಮನೆಯ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಅಳಿಯ, ಅತ್ತೆಯ ಮನೆಯಲ್ಲಿಯೇ ಇದ್ದು, ಅವರಿಗೆ ಬೇಡ ಎಂದು ಹೇಳಿದ್ದಾನೆ. ಸದ್ಯ ಸಿದ್ದಮ್ಮ ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ನಾಟಿ ಕೋಳಿಗೆ ಜಿಲ್ಲೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಕೊರೊನಾ ಸೋಂಕಿತರು ನಾಟಿ ಕೋಳಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಸಂದೇಶ ಹರಿದಾಡುತ್ತಿರುವುದರಿಂದಾಗಿ ನಾಟಿ ಕೋಳಿ ಖರೀದಿಸಲು ಜನ ಮುಗಿ ಬೀಳುತ್ತಿದ್ದಾರೆ.
ರೋಗ ನಿರೋಧಕ ಶಕ್ತಿ ವೃದ್ಧಿಸಲು ನಾಟಿ ಕೋಳಿ ಸಹಕಾರಿ ಎಂಬ ಸಲಹೆಯನ್ನು ವೈದ್ಯರು ಹೇಳಿದ್ದಾರೆ ಎಂಬ ಸಂದೇಶಗಳು ಹರಿದಾಡುತ್ತಿದ್ದು, ಜನ ನಾಟಿ ಕೋಳಿ ಹುಡುಕಾಡಿ ಖರೀದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸದ್ಯ ಜಿಲ್ಲೆಯ ರೋಣ ಪಟ್ಟಣದಲ್ಲಿ ನಾಟಿ ಕೋಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಹಳ್ಳಿಗಳಿಂದ ಬೆಳ್ಳಂ ಬೆಳಿಗ್ಗೆ ಪಟ್ಟಣಕ್ಕೆ ಬಂದು ಜನರು, ನಾಟಿ ಕೋಳಿ ಖರೀದಿಸುತ್ತಿದ್ದಾರೆ. ತಾವು ಸಾಕಿದ್ದ ನಾಟಿ ಕೋಳಿಗಳನ್ನೆಲ್ಲ ಅವರು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನರು ಕೂಡ ಮುಗಿಬಿದ್ದು ನಾಟಿ ಕೋಳಿ ಖರೀದಿಸುತ್ತಿದ್ದಾರೆ.
ನಾಟಿ ಕೋಳಿ ಮಾರಾಟಗಾರರ ಕೋಳಿಗಳು ಚೌಕಾಸಿ ಇಲ್ಲದೆ, ಬೆಳಿಗ್ಗೆ 8 ಗಂಟೆಯೊಳಗೆ ಮರಾಟವಾಗುತ್ತಿವೆ. ಇದರಿಂದಾಗಿ ನಾಟಿ ಕೋಳಿ ವ್ಯಾಪಾರಸ್ಥರು ಫುಲ್ ಖುಷಿ ಆಗುತ್ತಿದ್ದಾರೆ. ಇಲ್ಲಿಯವರೆಗೆ ಒಂದು ನಾಟಿ ಕೋಳಿ ರೂ. 250ಕ್ಕೆ ಮಾರಾಟವಾಗುತ್ತಿದ್ದವು. ಸದ್ಯ ಅದರ ದರ ರೂ. 400ರಷ್ಟಾಗಿದೆ. ದರ ಎಷ್ಟೇ ಆದರೂ ಜನರು ಮಾತ್ರ ಚೌಕಾಸಿ ಮಾಡದೆ ನಾಟಿ ಕೋಳಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ನಾಟಿ ಕೋಳಿ ಮಾಂಸದಲ್ಲಿ ಪ್ರೊಟೀನ್ ವಿಟಮಿನ್ ಅಂಶ ಹೆಚ್ಚಳವಾಗಿರುತ್ತದೆ. ದೇಹದ ಮಾಂಸ – ಖಂಡಗಳು ಗಟ್ಟಿಯಾಗಿ ಕೊರೊನಾ ವಿರುದ್ಧ ಹೋರಾಟ ಮಾಡಲು ನಾಟಿ ಕೋಳಿ ಸಹಕಾರಿಯಾಗಿವೆ ಎಂಬ ವೈದ್ಯರ ಸಂದೇಶ ಹರಿದಾಡುತ್ತಿವೆ.
ಕೃಷ್ಣಮೃಗ ಬೇಟಿಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ತಾಲೂಕಿನ ಕಣಗಿನಹಾಳ ಗ್ರಾಮದ ಹೊರವಲಯದಲ್ಲಿ ಒಂದು ಹೆಣ್ಣು, ಹಾಗೂ ಗಂಡು ಕೃಷ್ಣ ಮೃಗ ಬೇಟಿಯಾಡಿದ್ದ ಖದೀಮರು, ಮಾಂಸ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಪಡೆದ ಗದಗ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ.
ಬಂಧಿತರನ್ನು ರಾಮಚಂದ್ರಪ್ಪ ಹನಮಪ್ಪ ಹರಣಶಿಕಾರಿ ಹಾಗೂ ಮಲ್ಲಿಕಾರ್ಜುನ ಕಾಯಪ್ಪ ಹಾತಲಗೇರಿ ಎನ್ನಲಾಗಿದೆ. ಇನ್ನೊಬ್ಬ ಪ್ರಮುಖ ಆರೋಪಿ ಸುರೇಶ ರಾಮಪ್ಪ ದೊಡ್ಡಮನಿ ಪರಾರಿಯಾಗಿದ್ದಾನೆ.
ಬಂಧಿತರಿಂದ ಇನ್ನೂ ಮಾರಾಟವಾಗದೇ ಉಳಿದಿದ್ದ ಒಂದು ಕೃಷ್ಣ ಮೃಗದ ಕಳೇಬರ ವಶಪಡಿಸಿಕೊಳ್ಳಲಾಗಿದೆ.
ಆರ್ ಎಫ್ಒ ರಾಜು ಗೊಂದಕರ್, ಡಿವೈಆರ್ ಎಫ್ಒ ಗಳಾದ ಆರ್ ವೈ ಕಂಬಳಿ, ಎಮ್ ಎಸ್ ನಾಗಮ್ಮನವರ್, ಬಿಂಕದಕಟ್ಟಿಯ ಅರಣ್ಯರಕ್ಷಕರಾದ ಬಸವರಾಜ್ ಅಂಗಡಿ, ಅಮೀನಸಾಬ್ ಬಳೂಟಗಿ, ಗ್ರಾಮೀಣ ಠಾಣೆಯ ಮುಖ್ಯ ಪೇದೆ ಚೌಡರ್ ಹಾಗೂ ಬೂದಿಹಾಳ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಹಾಗೂ ಪೊಲೀಸರ ಕಾರ್ಯಕ್ಕೆ ಡಿಸಿಎಫ್ ಸೂರ್ಯಸೇನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಾಸ್ಟರ್ ಮೈಂಡ್ ಪರಾರಿ
ಪ್ರಕರಣದ ಪ್ರಮುಖ ಆರೋಪಿ ಸುರೇಶ್ ರಾಮಪ್ಪ ದೊಡ್ಡಮನಿ ಪರಾರಿಯಾಗಿದ್ದಾನೆ. ಕಣಗಿನಹಾಳ ಗ್ರಾಮದ ಬಲ್ಲ ಮೂಲಗಳ ಪ್ರಕಾರ ಜಿಂಕೆ, ಕೃಷ್ಣ ಮೃಗ ಬೇಟಿಯಾಡಿ ಮಾಂಸ ಮಾರಾಟ ಮಾಡೋದನ್ನು ದಂದೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಯಾರೂ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಕರುನಾಡಲ್ಲಿ ಮರಣ ಮೃದಂಗವನ್ನು ಭಾರಿಸುತ್ತಿರುವ ಕೊರೊನಾ ವೈರಸ್ ನಿಂದ ರಾಜ್ಯದ ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿಯೇ ಕೊರೊನಾ ಸೊಂಕಿತರ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿರುವ ಕಾರಣ, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿರುವ ಈ ಸಂದರ್ಭದಲ್ಲಿ, ಮಾಜಿ ಶಾಸಕರಾದ ಟಿ.ಎಚ್.ಸುರೇಶಬಾಬು ಅವರು ಕ್ಷೇತ್ರದ ಜನರ ಆತಂಕವನ್ನು ದೂರ ಮಾಡಲು ತಮ್ಮ ಸ್ವಂತ ಹಣದಿಂದ ಎಸ್.ಬಿ.ಫೌಂಡೇಷನ್ ನೇತೃತ್ವದಲ್ಲಿ ತಮ್ಮ ಕ್ಷೇತ್ರದ ಕಂಪ್ಲಿ ಪಟ್ಟಣದಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ೫೦ ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹಾಗೂ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಜಿಗಳು ಉದ್ಘಾಟಿಸಿದರು.
ಕಂಪ್ಲಿ ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಪ್ರಾರಂಭಿಸಿರುವ ಈ ಆಸ್ಪತ್ರೆಗೆ ಎಸ್.ಬಿ.ಫೌಂಡೇಷನ್ ವತಿಯಿಂದ ನುರಿತ ವೈದ್ಯರು ಹಾಗೂ ಶುಶ್ರುಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಔಷದ ಉಪಚಾರ ಹಾಗೂ ಉಚಿತ ಊಟ-ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಒಂದು ರೂಪಾಯಿ ಖರ್ಚಿಲ್ಲದೆ ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗುವ ವರೆಗಿನ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮಾಜಿ ಶಾಸಕ ಸುರೇಶಬಾಬು ಅವರ ಎಸ್.ಬಿ.ಪೌಂಡೇಷನ್ ನಿಂದ ಭರಿಸಲಾಗುವುದು. ಮಾಜಿ ಶಾಸಕರೊಬ್ಬರು ಇಂತಹ ದಿಟ್ಟ ಹೆಜ್ಜೆಯನ್ನಿಡುವ ಮೂಲಕ ಜನರ ಸೇವೆ ಮಾಡುತ್ತಿರುವುದು ರಾಜ್ಯದಲ್ಲಿ ಇದೆ ಮೊದಲು ಎಂದೆ ಹೇಳಬಹುದು.
ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ ೧೫೦೦ ರಿಂದ ೨೦೦೦ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಅಲ್ಲದೇ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್ ಮತ್ತು ಆಕ್ಸಿಜನ್ ಸರಿಯಾದ ಸಮಯಕ್ಕೆ ದೊರಕದ ಕಾರಣ ಜನರು ಸಂಕಷ್ಟಕ್ಕೊಳಗಾಗಿರುವ ಇಂತಹ ಕಠಿಣ ಮತ್ತು ಆತಂಕದ ಸಮಯದಲ್ಲಿ ಕಂಪ್ಲಿ ಮಾಜಿ ಶಾಸಕ ಟಿ. ಎಚ್. ಸುರೇಶಬಾಬು ಅವರು ಎಸ್ ಬಿ ಫೌಂಡೇಶನ್ ವತಿಯಿಂದ ತಮ್ಮ ತಂದೆಯವರಾದ ರೇಲ್ವೆ ಬಾಬು ಅವರ ಸ್ಮರಣಾರ್ಥ ಕಂಪ್ಲಿಯಲ್ಲಿ ೫೦ ಹಾಸಿಗೆಯ ಹಾಗೂ ೧೦ ಆಕ್ಸಿಜನ್ ಬೆಡ್ ಸೌಕರ್ಯ ಹೊಂದಿರುವ ಕೋವಿಡ್ ಆಸ್ಪತ್ರೆಯನ್ನು ಕಂಪ್ಲಿ ಭಾಗದ ಜನತೆಗೆ ಅರ್ಪಿಸಿದ್ದಾರೆ.
ಐವತ್ತು ಹಾಸಿಗೆಯ ಈ ಆಸ್ಪತ್ರೆಯನ್ನು ಮುಂದೆ ಅವಶ್ಯಕತೆ ಬಿದ್ದರೆ, ೨೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನು ಸುರೇಶಬಾಬು ಅವರು ಹೊಂದಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಜಿಂದಾಲ್ ನಲ್ಲಿ ಕೊರೊನಾ ಸೋಂಕಿತರಿಗೆ ೩೦೦ ಹಾಸಿಗೆಯ ಆಸ್ಪತ್ರೆಯನ್ನು ಹಾಗೂ ಆಕ್ಸಿಜನ್ ಸೇರಿದಂತೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿ ಆಸ್ಪತ್ರೆಯನ್ನು ಪ್ರಾರಂಭಿಸಿರುವ ಬೆನ್ನಲ್ಲೇ ಜಿಲ್ಲೆಯ ಕಂಪ್ಲಿ ಮತ್ತು ಕುರಗೋಡು ಪಟ್ಟಣಗಳಲ್ಲಿ ಈ ಆಸ್ಪತ್ರೆಗಳು ಪ್ರಾರಂಭವಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.
ಮುಂಬರುವ ದಿನಗಳಲ್ಲಿ ಕಂಪ್ಲಿ ಕ್ಷೇತ್ರದ ಕುರಗೋಡು ಪಟ್ಟಣದಲ್ಲಿ ಮಾಜಿ ಶಾಸಕರು ಇದೇ ತರಹದ ಆಸ್ಪತ್ರೆ ಪ್ರಾರಂಭಿಸಲು ಯೋಜನೆಯನ್ನು ರೂಪಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಯೋಜನೆಯೂ ಜಾರಿಗೆ ಬರಲಿದೆ.
ಈಗ ಕೊರೊನಾ ಮಹಾಮಾರಿಯಿಂದ ಜಿಲ್ಲೆಯ ಜನರು ತತ್ತಿರಸಿಹೋಗಿದ್ದಾರೆ. ಶ್ರೀಮಂತರು ದುಡ್ಡು ತೆಗೆದುಕೊಂಡು ರಾಜ್ಯದ ದೊಡ್ಡ, ದೊಡ್ಡ ಆಸ್ಪತ್ರೆಗಳಿಗೆ ಅಲೆದರೂ ಬೆಡ್ ಸಿಗದ ಗಂಭೀರ ಪರಸ್ಥಿತಿ ಇದೆ. ಇನ್ನೂ ಬಡವರ ಪಾಡು ಆ ಭಗವಂತನೇ ಬಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಅವರ ಈ ಮಹತ್ವದ ಕಾರ್ಯದಿಂದ ಕ್ಷೇತ್ರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ಕೊರೊನಾ ರೋಗವನ್ನು ನಾವು ಗೆದ್ದು ಬರಬಹುದು ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಮಾಜಿ ಶಾಸಕ ಸುರೇಶಬಾಬು ಅವರು “ಕಾಯಕವೇ ಕೈಲಾಸ” ವೆಂದು ಸಾರಿದ ಅಣ್ಣ ಬಸವಣ್ಣವರ ವಚನದಂತೆ ಹಾಗೂ ಅಂಬೇಡ್ಕರ್ ಮತ್ತು ಮದರ ತೆರೇಸಾ ಅವರ ಆಸೆಯದಂತೆ ಜನ ಸೇವೆಯಲ್ಲಿಯೇ ಕೈಲಾಸನ್ನು ಹಾಗೂ ಮಾಡುವ ಕಾರ್ಯದಲ್ಲಿ ತೃಪ್ತಿಯನ್ನು ಕಾಣುವ ಆಸೆಯನ್ನು ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಸಣ್ಣ ಪಕೀರಪ್ಪ, ತಹಸೀಲ್ದಾರ್ ಗೌಸಿಯಾ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ರಾಧಿಕಾ ಮುಂತಾದವರು ಉಪಸ್ಥಿತರಿದ್ದರು.
ಕುಟುಂಬಸ್ಥರಿಗೆಲ್ಲ ಕೊರೊನಾ ಬರುತ್ತದೆ ಎಂಬ ಕಾರಣಕ್ಕೆ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಈ ಘಟನೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಾಂತೇಶ್ ಪ್ರಭುದೇವ ಕುದರಿ(37) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಶಿಕ್ಷಕ ಗದಗ ತಾಲೂಕಿನ ಕುರ್ತಕೋಟಿ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಶಿಕ್ಷಕ ಮಹಾಂತೇಶ್ ಅವರಿಗೆ ಕಳೆದ ಒಂದು ವಾರದ ಹಿಂದೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಅಲ್ಲದೇ, ಅವರು ಸೋಂಕಿನಿಂದ ಗುಣಮುಖರಾಗಿದ್ದರು ಕೂಡ. ಅವರ ವರದಿ ನೆಗೆಟಿವ್ ಕೂಡ ಬಂದಿತ್ತು. ಆದರೆ, ಶಿಕ್ಷಕರು ಮಾತ್ರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಕೊರೊನಾ ಪಾಸಿಟಿವ್ ಆಗಿದ್ದರಿಂದಾಗಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ನರೇಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮಹಾಂತೇಶ್ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನೆಗೆಟಿವ್ ಬಂದಿದ್ದರಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು ಎಂದು ನರೇಗಲ್ ಪಿಎಸ್ ಐ ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಹೀಗಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ. ಆದಷ್ಟು ಸಂಭ್ರಮದ ಕಾರ್ಯಕ್ರಮಗಳಿಂದ ದೂರ ಇರಿ ಎಂದಿದ್ದಾರೆ.
ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ ಎಂದು ಜನರಿಗೆ ಕಿವಿ ಮಾತು ಹೇಳಿದ್ದಾರೆ. ಹೀಗಾಗಿ ಜನರು ಮದುವೆ ಕಾರ್ಯಕ್ರಮಗಳನ್ನು ಮುಂದೂಡಿದರೆ ಒಳ್ಳೆಯದು. ಒಂದು ವೇಳೆ ನಡೆದರೂ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ ಎಂದು ಹೇಳಿದ್ದಾರೆ.
ಮೆಹಂದಿ ಕಾರ್ಯಕ್ರಮ ಆಯೋಜಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ನಿಮ್ಮ ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಿಸಲು ಅವಕಾಶ ಕೊಡಬೇಡಿ. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಮೇ. 10ರಂದು ಘೋಷಣೆಯಾಗಿದ್ದ ಲಾಕ್ ಡೌನ್ ಅಂತ್ಯವಾಗಬೇಕಿತ್ತು. ಆದರೆ, ಕೊರೊನಾ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಇನ್ನೂ 14 ದಿನ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಈ ಲಾಕ್ ಡೌನ್ ನ್ನು ಕಠಿಣಗೊಳಿಸಲಾಗಿದೆ.
ಇಂದಿನಿಂದ ಜೂ. 7ರ ವರೆಗೆ ಬೆಳಿಗ್ಗೆ 6ರ ವರೆಗೆ 2ನೇ ಹಂತದ ಲಾಕ್ಡೌನನ್ ಜಾರಿಯಲ್ಲಿರಲಿದೆ. ವಿಮಾನ ಮತ್ತು ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ಇದೆ. ದಿನಸಿ ಖರೀದಿಗೆ ಬೆಳಿಗ್ಗೆ 10ರವರೆಗೆ ಅವಕಾಶ ನೀಡಲಾಗಿದೆಯಾದರೂ ಆಯಾ ಜಿಲ್ಲೆಯಲ್ಲಿ ಕೆಲವು ಬದಲಾವಣೆಗಳಾಗಿವೆ. ಧಾರವಾಡ ಜಿಲ್ಲೆಯಲ್ಲಿ ಇಂದು ಮಾತ್ರ ದಿನಸಿ ಖರೀದಿಗೆ ಅನುಮತಿ ಇದ್ದು, ನಾಳೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಇನ್ನುಳಿದಂತೆ ವಿವಿಧ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಡಳಿತ ಬೇರೆ ಬೇರೆ ನಿರ್ಧಾರ ಕೈಗೊಂಡಿವೆ. ಕೆಲವು ಜಿಲ್ಲೆಗಳಲ್ಲಿ ವಾರದಲ್ಲಿ ಎರಡು ದಿನ ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ.