ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಕೋವಿಡ್-19 ಕಾಲಘಟ್ಟದಲ್ಲಿ ಡಿಟಿಟಲ್ ತಂತ್ರಜ್ಞಾನ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಭವಿಷ್ಯದಲ್ಲಿ ಇನ್ನಷ್ಟು ತಂತ್ರಜ್ಞಾನ ಅಭಿವೃದ್ಧಿ ಯಾಗಲಿದೆ. ಹೀಗಾಗಿ ನಮ್ಮ ಮಾಹಿತಿ ಮಾಹಿತಿ ಹಾಗೂ ದತ್ತಾಂಶ ಸಂರಕ್ಷಿಸಿಕೊಳ್ಳಲು ಸೈಬರ್ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಆರಂಭವಾದ ಬೆಂಗಳೂರು ಟೆಕ್ ಸಮ್ಮೇಳನಕ್ಕೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾವಿದ್ದರೂ ಸೈಬರ್ ಭದ್ರತೆ ಹಾಗೂ ದತ್ತಾಂಶ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.
ಐದು ವರ್ಷದ ಹಿಂದೆ ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಲಾಯಿತು. ಈ ಕ್ಷೇತ್ರದಿಂದ ಜನರಿಗೆ ಹೆಚ್ಚಿನ ಲಾಭವಾಗುತ್ತಿದೆ. ಬಡ, ಮಧ್ಯಮ ವರ್ಗದ ಜತೆಗೆ ಮೇಲ್ವರ್ಗದವರಿಗೂ ಡಿಜಿಟಲ್ ಅನಿವಾರ್ಯವಾಗಿದೆ. ಒಂದೇ ಬಟನ್ ಕ್ಲಿಕ್ ನಿಂದ ರೈತರ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಸಬ್ಸಿಡಿ ಹಾಗೂ ಇತರ ಹಣಕಾಸನ್ನು ವರ್ಗಾಯಿಸಲಾಗಿದೆ. ಕಳೆದ ತಿಂಗಳು ದೇಶದಲ್ಲಿ 2 ಶತಕೋಟಿ ವಹಿವಾಟು ಡಿಜಿಟಲ್ ಮೂಲಕ ನಡೆದಿದೆ. ಇದನ್ನು ಗಮನಿಸಿದರೆ ನಮ್ಮಸರಕಾರ ತಂದಿರುವ ಯೋಜನೆ ಪ್ರತಿಯೊಬ್ಬರಿಗೂ ಅನುಕೋಲ ಮಾಡಿಕೊಟ್ಟಿದೆ. ತಂತ್ರಜ್ಞಾನದ ಹೊಸ ಸವಾಲುಗಳನ್ನು ಎದುರಿಸಿ ನವೀನ ಆವಿಷ್ಕಾರಕ್ಕೆ ಮುಂದಾಗಬೇಕು. ಜಾಗತಿಕ ಮಟ್ಟದಲ್ಲೂ ಭಾರತ ಹೆಚ್ಚಿನ ಸಾಧನೆ ಮಾಡಲು ವಿಫುಲ ಅವಕಾಶಗಳಿದ್ದು, ಇದನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಸರಕಾರ ಎಲ್ಲ ರೀತಿಯ ನೆರವು ಹಾಗೂ ಸಹಕಾರವನ್ನು ನೀಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಸಿ.ನಾರಾಯಣಗೌಡ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿ: ಪ್ರಧಾನಿ ಮೋದಿ
ಗದಗನಲ್ಲಿ ಬಡ್ಡಿ ಮಾಫಿಯಾ: ಗ್ರಾಪಂ ಮಾಜಿ ಅಧ್ಯಕ್ಷೆ ಆತ್ಮಹತ್ಯೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಡ್ಡಿ ಮಾಫಿಯಾಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಸಂಗವ್ವ ಮೆಣಸಿನಕಾಯಿ (45) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದವರು.
ಶ್ರೀಶೈಲಪ್ಪ ಚಕ್ರಣ್ಣವರ್ ಮತ್ತು ಈಕೆಯ ಪತ್ನಿ ಯಶೋಧಾ ಚಕ್ರಣ್ಣವರ ಮತ್ತು ಮಂಜುನಾಥ್ ಹಿರೇಮಠ ಎಂಬುವರು ಸಂಗವ್ವ ಮೆಣಸಿನಕಾಯಿ ಪತಿ ಈರಪ್ಪನಿಗೆ ಬಡ್ಡಿ ರೂಪದಲ್ಲಿ ಹಣ ನೀಡಿದ್ದರು. ಅದಕ್ಕಾಗಿ ಮೂರು ಎಕರೆ ಜಮೀನನ್ನು ಅಡ ಇಡಲಾಗಿತ್ತು. ಅಡ ಇಟ್ಟಿದ್ದ ಜಮೀನನ್ನು ಶ್ರೀಶೈಲಪ್ಪ ಚಕ್ರಣ್ಣವರ ಬೇರೆ ಯವರಿಗೆ ಮಾರಿದ್ದಾರೆ.
ಜಮೀನನ್ನು ಮೋಸದಿಂದ ಕಿತ್ತುಕೊಂಡಿದ್ದು, ಹಾಗೂ ಹಣ ಕೊಡುವಂತೆ ಬೆದರಿಕೆ ಹಾಕಿದ್ದರಿಂದ ನೊಂದಿದ್ದ ಸಂಗವ್ವ ಮೆಣಸಿನಕಾಯಿ ಶನಿವಾರ ಸೀಮೆ ಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರ ಗಾಯಗೊಂಡಿದ್ದ ಸಂಗವ್ವ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.
2015 ರಲ್ಲಿ ಮೃತ ಸಂಗವ್ವಳ ಪತಿ ಈರಪ್ಪನಿಗೆ ಶ್ರೀಶೈಲಪ್ಪ ಚಕ್ರಣ್ಣವರ ಸುಮಾರು 5 ಲಕ್ಷ ರೂ. ಬಡ್ಡಿ ಸಾಲ ಕೊಟ್ಟಿದ್ದರು. ಬಡ್ಡಿ ಸಾಲಕ್ಕೆ ಪ್ರತಿಯಾಗಿ ತಮ್ಮ ಹೊಲವನ್ನು ಕಬ್ಜಾಕ್ಕೆ ಪಡೆದಿದ್ದರು. ಕಬ್ಜಾಕ್ಕೆ ಪಡೆಯುವಾಗ ಸಹಿ ಮಾಡಿಸಿಕೊಂಡಿದ್ದನ್ನೇ ಬಳಸಿಕೊಂಡು 3 ಎಕರೆ ಜಮೀನನ್ನು ಬೇರೆಯವರಿಗೆ ಮಾರಿದ್ದಾರೆ. ಪಹಣಿ ಪತ್ರದಲ್ಲಿ ಬೇರೆಯವರ ಹೆಸರು ದಾಖಲಾಗಿದೆ.
ಬಡ್ಡಿ ವ್ಯವಹಾರ ದಲ್ಲಿ ಮೋಸ ಮಾಡಿ ಜಮೀನನ್ನು ಬೇರೆ ಯವರಿಗೆ ಮಾರಿದ್ದರಿಂದ ಬೇಸತ್ತ ಸಂಗವ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಮೃತಳ ಪತಿ ಈರಪ್ಪ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ.ಟಿ.ಬಿ.ಸೊಲಬಕ್ಕನವರ ನಿಧನ
ವಿಜಯಸಾಕ್ಷಿ ಸುದ್ದಿ ಹಾವೇರಿ
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ.ಟಿ.ಬಿ. ಸೊಲಬಕ್ಕನವರ (73) ಗುರುವಾರ ಬೆಳಗಿನ ಜಾವ ನಿಧನರಾದರು.
ಈಚೆಗೆ ಅನಾರೋಗ್ಯ ಕಾರಣದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಗುರುವಾರ ಬೆಳಗ್ಗೆ 2.40ರ ಸುಮಾರಿಗೆ ನಿಧನರಾದರು.
ಮೃತರು ಪತ್ನಿ ಸಾವಿತ್ರೆಮ್ಮ, ಪುತ್ರಿ ವೇದಾರಾಣಿ, ಪುತ್ರ ರಾಜಹರ್ಷ ಹಾಗೂ ಅಳಿಯ, ಉದ್ಯಮಿ ಪ್ರಕಾಶ ದಾಸನೂರ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಶಿಗ್ಗಾಂವಿಯ ರಾಕ್ ಗಾರ್ಡನ್ ಪಕ್ಕದಲ್ಲಿ ನೆರವೇರಲಿದೆ.
ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ: ಅಬ್ದುಲ್ ರಜಾಕ್ ನದಾಫ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕರ್ನಾಟಕದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಬರುವ ಸುಮಾರು ಅರ್ಧದಷ್ಟು ಪಿಂಜಾರ, ನದಾಫ ಇರುವ ಸಮುದಾಯಕ್ಕೆ ಆಂಧ್ರದಲ್ಲಿ ಈಚೆಗೆ ಮಾಡಿರುವಂತೆ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕ ಪಿಂಜಾರ್/ನದಾಫ/ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಅಬ್ದುಲ್‌ರಜಾಕ್ ನದಾಫ ಆಗ್ರಹಿಸಿದರು.
ಕೊಪ್ಪಳದ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಅರ್ಧದಷ್ಟು ಜನಸಂಖ್ಯೆ ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮಯದಾಯವಿದ್ದು, ಈವರೆಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ದೂರಿದರು.
ಅಲೆಮಾರಿ ಎಂದು ಗುರುತಿಸಿರುವ ಈ ಸಮುದಾಯದ ಜನರಿಗೆ ಸದ್ಯ ಪ್ರವರ್ಗ 1ಕ್ಕೆ ಮೀಸಲಾತಿ ಸೌಲಭ್ಯಗಳು ಎಲ್ಲ ಜಿಲ್ಲೆಯಲ್ಲಿ ಸಿಗುತ್ತಿಲ್ಲ. 2009-10ರಲ್ಲಿ ಡಾ.ಸಿ.ಎಸ್.ದ್ವಾರಕನಾಥ ಆಯೋಗವು ಸರಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಅಂಶ ಇದೆ. ವರದಿಯನ್ನಾಧರಿಸಿ ಈಗಾಗಲೇ ವಿಶ್ವಕರ್ಮ, ಲಂಬಾಣಿ, ಭೋವಿ, ಉಪ್ಪಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಆದರೆ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಹುಸೇನ್‌ಸಾಬ್ ನದಾಫ, ಸನ್ನೀಕ್ ಕುರಗೋಡ ಇದ್ದರು.
ಮರಾಠ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಕರವೇ ತೀವ್ರ ಖಂಡನೆ
ವಿಜಯಸಾಕ್ಷಿ ಸುದ್ದಿ ಗಂಗಾವತಿ
ರಾಜ್ಯ ಸರ್ಕಾರವು ಮರಾಠ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಸ್ಥಾಪನೆಗೆ ಅಸ್ತು ಎಂದಿರುವುದು ತೀವ್ರ ಖಂಡನೀಯವಾಗಿದೆ ಎಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮರಾಠರು ಕರ್ನಾಟಕದ ನಾಡು – ನುಡಿ , ನೆಲ – ಜಲ , ಭಾಷೆಯ ವಿಷಯದಲ್ಲಿ ಕನ್ನಡಿಗರ ವಿರುದ್ಧ ಧ್ವನಿ ಎತ್ತುವ ಮೂಲಕ ಗಡಿ ನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರದ ಜೊತೆಗೆ ಕೈಜೋಡಿಸುವ ಮೂಲಕ ಕನ್ನಡ ನಾಡಿಗೆ ತೀವ್ರವಾಗಿ ಅವಮಾನವೆಸಗಿರುತ್ತಾರೆ . ಇಂತಹ ಸಮಾಜದ ಅಭಿವೃದ್ಧಿಗಾಗಿ ನಮ್ಮ ರಾಜ್ಯ ಸರ್ಕಾರ ೫೦ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟು ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಸ್ತು ಎಂದಿರುವುದು ತೀವ್ರ ವಿಷಾದನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಸಂಘಟನೆಗಳು ಹುಟ್ಟಿಕೊಂಡಿರುವುದೇ ಕನ್ನಡಿಗರ ವಿರುದ್ಧ ಧ್ವನಿ ಎತ್ತಲು. ರಾಜ್ಯದ ಗಡಿ ವಿಷಯದಲ್ಲಿ ಮಹಾರಾಷ್ಟ್ರವು ಬೆಳಗಾವಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇಲ್ಲಿಯವರೆಗೆ ಹಿಂದಿನ ಸರ್ಕಾರಗಳು ವೊಟ್ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ಮೂಲೆಗುಂಪಾಗಿವೆ. ತಮ್ಮ ಸರ್ಕಾರವು ಕೂಡ ಇದೇ ದಾರಿ ಹಿಡಿದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಪ್ರತಿ ಬಾರಿ ನಮ್ಮ ಕನ್ನಡ ರಾಜ್ಯೋತ್ಸವ ದಿನದಂದು ಕಪ್ಪುಬಾವುಟ ಪ್ರದರ್ಶಿಸುವ ಇಂತಹ ಸಂಘಟನೆಗಳು ಹಾಗೂ ಸಮುದಾಯಕ್ಕೆ ನಮ್ಮ ರಾಜ್ಯದ ಅನುದಾನದ ಅವಶ್ಯಕತೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರಿಗೆ ಅವಮಾನ, ದಬ್ಬಾಳಿಕೆ, ದೌರ್ಜನ್ಯ ಎಲ್ಲವನ್ನು ಮರೆತು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದನ್ನು ಕೂಡಲೇ ರಾಜ್ಯ ಸರ್ಕಾರ ಇದೇ ನವೆಂಬರ್ -೨೭ ರೊಳಗೆ ಕೈಬಿಡಬೇಕು . ಇಲ್ಲವಾದಲ್ಲಿ ನಮ್ಮ ಕರವೇ ಸಂಘಟನೆಯು ರಾಜ್ಯಾಧ್ಯಂತ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪುಷ್ಕರಣಾ ಮಹೋತ್ಸವ ರದ್ದು
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಪ್ರತಿ ವರ್ಷ ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿದ್ದ ತುಂಗಭದ್ರಾ ಪುಷ್ಕರಣಾ ಮಹೋತ್ಸವ ಕಾರ್ಯಕ್ರಮವನ್ನು ಈ ವರ್ಷವೂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪುಷ್ಕರಣಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಅಖಿಲ ಕರ್ನಾಟಕ ಕಮ್ಮವಾರಿ ಸಂಘದ ಅಧ್ಯಕ್ಷ ಜಿ.ರಾಮಕೃಷ್ಣ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಪಿಎಸ್ಐಗಳ ವರ್ಗಾವಣೆ
ವಿಜಯಸಾಕ್ಷಿ ಸುದ್ದಿ ಕೊಪ್ಪಳ: ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 9 ಜನ ಪಿಎಸ್ಐಗಳನ್ನು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಂ.ನಂಜುಂಡಸ್ವಾಮಿ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.
ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಸರಳ.ಪಿ.ಅವರನ್ನು ಎಚ್.ಬಿ.ಹಳ್ಳಿ (ಅಪರಾಧ) ಪೊಲೀಸ್ ಠಾಣೆಗೆ, ಬಳ್ಳಾರಿ ಡಿಎಸ್ಎ ಘಟಕದ ಪಿಎಸ್ಐ ಶಿವಕುಮಾರ್ ನಾಯ್ಕ ಅವರನ್ನು ಕೊಪ್ಪಳ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣೆಗೆ, ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಅವರನ್ನು ಕುಷ್ಟಗಿ ಪೊಲೀಸ್ ಠಾಣೆಗೆ, ರಾಯಚೂರು ಜಿಲ್ಲೆಯ ನೇತಾಜಿನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಶೀಲಾ ಮೂಗನಗೌಡ್ರ ಅವರನ್ನು ಕೊಪ್ಪಳ ಜಿಲ್ಲೆಯ ಬೇವೂರು ಪೊಲೀಸ್ ಠಾಣೆಗೆವರ್ಗಾವಣೆ ಮಾಡಲಾಗಿದೆ.

ಇನ್ನು ಬೇವೂರು ಪೊಲೀಸ್ ಠಾಣೆಯ ಪಿಎಸ್ಐ ಶಂಕ್ರಪ್ಪ ಎಲ್. ಅವರನ್ನು ಕೊಪ್ಪಳ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ, ಬೇವೂರು ಠಾಣೆಗೆ ಆದೇಶದಲ್ಲಿದ್ದ ಪಿಎಸ್ಐ ಟಿ.ಜಿ.ನಾಗರಾಜ್ ಅವರನ್ನು ಚಿಗಟೇರಿ ಪೊಲೀಸ್ ಠಾಣೆಗೆ, ಕನಕಗಿರಿ ಪೊಲೀಸ್ ಠಾಣೆ ಪಿಎಸ್ಐ ಎಚ್.ಎಸ್.ಪ್ರಶಾಂತ ಅವರನ್ನು ಹಲವಾಗಲು ಪೊಲೀಸ್ ಠಾಣೆಗೆ, ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್ ಅವರನ್ನು ಬಳ್ಳಾರಿ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ ಹಾಗೂ ಕೊಪ್ಪಳ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಡಿ.ಸುರೇಶ್ ಅವರನ್ನು ಕನಕಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮೊಬೈಲ್‌ನಲ್ಲಿ ಸೆರೆಯಾದವು ನಡುರಸ್ತೆಯಲ್ಲಿ ಓಡಾಡುತ್ತಿರುವ ಕರಡಿಗಳು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನಡು ರಸ್ತೆಯಲ್ಲೇ ಕರಡಿಗಳು ಓಡಾಡುತ್ತಿರುವ ದೃಶ್ಯವನ್ನು ಸೋಮವಾರ ರಾತ್ರಿ ಕಾರಲ್ಲಿ ಹೊರಟಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತವರಗೇರಾ ವ್ಯಾಪ್ತಿಯ ಕನ್ನಾಳ ಗ್ರಾಮದ ಸುತ್ತ ಮುತ್ತಲಿನಲ್ಲಿ ಗ್ರಾಮಗಳ ನಡು ರಸ್ತೆಯ ಮದ್ಯ ಓಡಾಡುತ್ತಿದ್ದ ಕರಡಿಗಳನ್ನು ಕಾರಿನಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದ ಮೂಲಕ ಕಾರಿನಲ್ಲಿ ಕುಳಿತುಕೊಂಡು ಕ್ಯಾಮೆರಾದಿಂದ ಕರಡಿಗಳು ಓಡಾಡುವುದನ್ನು ಸೆರೆ ಹಿಡಿದಿದ್ದಾರೆ.
ಕನ್ನಾಳ ಗ್ರಾಮಕ್ಕೆ ತೆರಳುತ್ತಿರುವಾಗ ಕಾರು ವಾಹನ ಸವಾರರು ನಡುರಸ್ತೆಯಲ್ಲಿ ನಡೆದಾಡುತ್ತಿದ್ದ ಕರಡಿಗಳನ್ನು ಸೆರೆ ಹಿಡಿದಿದ್ದಾರೆ. ಆದರೆ ಕನ್ನಾಳ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಗೆ ತೆರಳಬೇಕೆಂದರೆ ಸುತ್ತಲೂ ದಟ್ಟ ಅರಣ್ಯ ಪ್ರದೇಶದ ಕಾಡು ಇದ್ದು ಗ್ರಾಮದ ಸುತ್ತ ಬೆಟ್ಟಗುಡ್ಡ ಇರುವುದರಿಂದ ಇಲ್ಲಿ ಚಿರತೆ, ಕರಡಿಗಳು ಸಾಕಷ್ಟು ಇರುವುದರಿಂದ ಅರಣ್ಯ ಪ್ರದೇಶದ ಅಧಿಕಾರಿಗಳು ಇದುವರೆಗೂ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಂಡಿಲ್ಲ. ಯಾವುದೇ ನಾಮ ಫಲಕಗಳನ್ನು ಅಳವಡಿಸಿಲ್ಲ. ಇಲ್ಲಿ ಕರಡಿ ಚಿರತೆ ಹಾಗೂ ಹೆಬ್ಬಾವು ಊಸರವಳ್ಳಿ ಸೇರಿದಂತೆ ನಾನಾ ಕಾಡುಪ್ರಾಣಿಗಳು ಇವೆ ಎಂದು ತಿಳಿಸಿದ್ದಾರೆ.
ಚಿರತೆ ಮತ್ತು ಕರಡಿಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆ ಪ್ರದೇಶದವರು ಯಾವುದೇ ಅಪಾಯವಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ನಾಮಫಲಕಗಳನ್ನು ಹಾಕಿ, ಕರಡಿಗಳನ್ನು ಸೆರೆ ಹಿಡಿಯಲು ಮುಂದಾಗಬೇಕು ಎಂದು ಅರಣ್ಯ ಇಲಾಖೆಯವರಿಗೆ ಆಗ್ರಹಿಸಿದ್ದಾರೆ.
ಗಣಿತ ಅಂದ್ರೆ ಬಾಲಕಿ ನಯನಾಗೆ ಥಕಧಿಮಿತ
-ಫಟಾಫಟ್ ಲೆಕ್ಕ, ಹೇಳೋದೆಲ್ಲ ಪಕ್ಕ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈ ಬಾಲಕಿಯ ಟ್ಯಾಲೆಂಟ್ ನೋಡಿ ನಿಮಗೆ ಅಚ್ಚರಿ ಆಗುತ್ತೆ, ಗಣಿತದಲ್ಲಂತೂ ಮಾಸ್ಟರ್ ಮೈಂಡ್ ಏನೇ ಲೆಕ್ಕ ಕೇಳಿದ್ರೂ ಥಟ್ ಅಂತ ಉತ್ತರಿಸುತ್ತಾಳೆ 1000 ವರೆಗಿನ ಮಗ್ಗಿಗಳನ್ನು ನಿರರ್ಗಳವಾಗಿ ಹೇಳುತ್ತಾಳೆ.
ಹೌದು! ಕೊಪ್ಪಳದ ಪೊಲೀಸಪ್ಪನ ಮಗಳೊಬ್ಬಳು ಇಡೀ ಪೊಲೀಸ್ ಇಲಾಖೆ ಹಾಗೂ ಕೊಪ್ಪಳದ ಜನರ ಗಮನ ಸೆಳೆಯುತ್ತಿದ್ದಾಳೆ. ಹೆಸರು ನಯಾನ, ಪೊಲೀಸ್ ಗೋಸಲಪ್ಪ ಗೂಳಿ ಎಂಬುವವರ ಮಗಳು. ಸದ್ಯ 3ನೇ ತರಗತಿಯಲಿ ಓದುತ್ತಿದ್ದ ಈ ಬಾಲಕಿ ಕ್ಯಾಲ್ಕುಲೇಟರ್ ಇದ್ದಂತೆ ಗುಣಕಾರ, ಸಂಕಲನ, ವ್ಯವಕಲನ, ಭಾಗಕಾರ ಲೆಕ್ಕಗಳನ್ನು ಹಾಗೂ ಎರಡರ ಮಗ್ಗಿಗಳನ್ನು ಫಟ್ ಫಟ್ ಅಂತಾ ಹೇಳುತ್ತಾಳೆ.
ಮುನಿರಾಬಾದ್ ಐ ಆರ್ ಬಿ ಪೊಲೀಸ್ ಗೋಸಲಪ್ಪರ ಅವರ ಈ ಪೋರಿಯ ಗಣಿತವನ್ನು ಕಂಡು ಎಲ್ಲರು ಆಚ್ಚರಿ ಪಡುತ್ತಾರೆ. ನಿಜಕ್ಕೂ ಈ ಬಾಲಕಿಯ ಮೆಮೊರಿ ಅದ್ಭುತ.
ಪಶು ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ: ಕಳೆದ ನಾಲ್ಕು ವರ್ಷಗಳಿಂದ ಪಶು ವೈದ್ಯರು ಇಲ್ಲದೇ ಜಾನುವಾರುಗಳು ಸಾವನ್ನಪ್ಪುತ್ತಿದ್ದ ಕೂಡಲೇ ಪಶು ವೈದ್ಯರನ್ನು ನಿಯೋಜಿಸುವಂತೆ ಒತ್ತಾಯಿಸಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕರವೇ ಹಾಗೂ ಶ್ರೀರಾಮಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗ್ರಾಮದ ಬಜಾರ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಈಗಾಗಲೇ ವೈದ್ಯರ ನೇಮಕಗೊಳಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಇದುವರೆಗೂ ಪಶು ವೈದ್ಯರ ನೇಮಕ ಮಾಡಿಲ್ಲ. ಇದರಿಂದಾಗಿ ರೈತರಿಗೆ ಸಮಸ್ಯೆ ಆಗಿದ್ದು,ಅನಾರೋಗ್ಯ ಕ್ಕೀಡಾದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪತ್ತಿವೆ. ಇದನ್ನು ಮನಗಂಡು ಅಧಿಕಾರಿಗಳು ವೈದ್ಯರ ನೇಮಕಗೊಳಿಸಬೇಕು. ಇನ್ನೂ ಹದಿನೈದು ದಿನಗಳಲ್ಲಿ ಶಿಗ್ಲಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕಗೊಳಸದೇ ಇದ್ದರೆ ತಹಸೀಲ್ದಾರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ್ ಅಮರಾಪೂರ, ಉಪಾಧ್ಯಕ್ಷ ಸುರೇಶ್, ಶಿಗ್ಲಿ ಗ್ರಾಮ ಘಟಕದ ಲುಕಮಾನ್ ಬೆಟಗೇರಿ, ಶ್ರೀರಾಮಸೇನಾ ಅಧ್ಯಕ್ಷ ಸಾಗರ ಅರಳಿಹಳ್ಳಿ, ಮಾಂತೇಶ್ ಅಡರಕಟ್ಟಿ ಸೇರಿದಂತೆ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.

