Home Blog Page 3019

ಕುಣಿಕೇರಿ ಬಾಯ್ಸ್‌ಗೆ ಟೂರ್ನಮೆಂಟ್ ಕಪ್

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕ್ರೀಡೆಯಿಂದ ಹಲವು ಪ್ರಯೋಜನಗಳಿದ್ದು, ಆಟದಿಂದ ಅನಗತ್ಯ ವಿಚಾರಗಳನ್ನು ದೂರ ಮಾಡಲು ಸಾಧ್ಯ ಎಂದು ಡಿಎಸ್‌ಬಿ ಪಿಎಸ್ಐ ಅಮರೇಶ್ ಹುಬ್ಬಳ್ಳಿ ಹೇಳಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ.ಸಾಗರ ನಾಯಕ್ ಸ್ಮರಣಾರ್ಥ ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಡಿ ನಡೆದ ಎರಡು ದಿನಗಳ ಕ್ರಿಕೆಟ್ ಟೂರ್ನಮೆಂಟ್‌ನ ಸಮಾರೋಪ ಹಾಗೂ ಕಪ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರೀಡೆ ಅಂದಾಗ ಹುದ್ದೆ ಲೆಕ್ಕಕ್ಕೆ ಬರಲ್ಲ. ಕ್ರೀಡಾಂಗಣದಲ್ಲಿ ಎಲ್ಲರೂ ಸಮಾನರೇ. ಈ ಟೂರ್ನಮೆಂಟ್‌ನಲ್ಲಿ ಹಳ್ಳಿ ಹುಡುಗರ ಸಾಧನೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.
ಕೆಡಬ್ಲ್ಯೂಎಸ್‌ಸಿಯ ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್ ಮಾತನಾಡಿ, ಅಪಘಾತಗಳು ಅವಸರದಿಂದಲೇ ಸಂಭವಿಸುತ್ತವೆ. ಇಂಥ ಅಪಘಾತವೊಂದರಲ್ಲಿ ಅತ್ಯುತ್ತಮ ಕ್ರೀಡಾಪಟು ಸಾಗರ್ ನಾಯಕ್ ನಮ್ಮನ್ನಗಲಿದ್ದಾರೆ. ಅವರ ಸ್ಮರಣಾರ್ಥ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಭಾಗವಗಹಿಸಿರುವ ಕ್ರೀಡಾಪಟುಗಳು ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಕ್ಲಬ್‌ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಮೊಯುದ್ದೀನ್, ಕೆಇಬಿ ಗಿರೀಶ್, ಗಂಗಾಧರ ನೇವಾರ, ಗಿರೀಶ್ ಮುಂಡಾದ ಮಾತನಾಡಿದರು.
ಚಂದ್ರು, ಸಿದ್ದು ಹಾಗೂ ಸೂರಿ ನೇತೃತ್ವದಲ್ಲಿ ಟೂರ್ನಮೆಂಟ್ ಅಚ್ಚುಕಟ್ಟಾಗಿ ನಡೆಯಿತು. ಈರಣ್ಣ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ವಂದಿಸಿದರು.

ದಿ.ಸಾಗರ ನಾಯಕ್ ಸ್ಮರಣಾರ್ಥ ನಡೆದ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪೊಲೀಸ್, ಕೆಇಬಿ, ಕ್ಲಬ್‌ನ ಮೂರು ತಂಡಗಳು ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಕ್ಲಬ್‌ನ ಎ ತಂಡ ಹಾಗೂ ಕುಣಿಕೇರಿ ಬಾಯ್ಸ್ ತಂಡಗಳ ನಡುವೆ ನಡೆದ ಫೈನಲ್ ಮ್ಯಾಚ್‌ನಲ್ಲಿ ಕುಣಿಕೇರಿ ಬಾಯ್ಸ್ 17 ರನ್‌ಗಳಿಂದ ಕ್ಲಬ್‌ನ ಎ ತಂಡವನ್ನು ಮಣಿಸಿ, ಕಪ್ ಎತ್ತಿ ಹಿಡಿದರು. ಗ್ರಾಮೀಣ ಭಾಗದ ಪ್ರತಿಭೆಗಳೇ ತುಂಬಿರುವ ಕುಣಿಕೇರಿ ಬಾಯ್ಸ್ ತಂಡಕ್ಕೆ ಅಭಿನಂದನೆ ಮಹಾಪೂರವೇ ಹರಿದು ಬಂತು.

ಕೊಪ್ಪಳಕ್ಕೆ 4.50 ಕೋಟಿ ರೂ.ವೆಚ್ಚದಡಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ರಾಜ್ಯದ ಕೊಪ್ಪಳ ಸೇರಿದಂತೆ ವಿವಿಧ ನಾಲ್ಕು ಸ್ಥಳಗಳಲ್ಲಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣ ಮಾಡಲು ಕೇಂದ್ರ ಸರಕಾರ 19.50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧೋದ್ದೇಶ ಭವನ ನಿರ್ಮಾಣಕ್ಕೆ 4.50 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಪ್ರಾಧಿಕಾರ ನವೆಂಬರ್ 5ರಂದು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣಕ್ಕೆ ಬಿಡುಗಡೆಯಾದ ಹಣ ಹಾಗೂ ಸ್ಥಳಗಳ ಪಟ್ಟಿ ನೀಡಿದೆ.

ಕೈಗಾರಿಕಾ‌ ಕಂಪನಿಗಳಿಂದ ರಸ್ತೆ ಹಾಳು; ಸರಿಪಡಿಸಲು ರೈತರ ಗಡುವು

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೆಲೆಯೂರಿರುವ ನಾನಾ ಕೈಗಾರಿಕಾ ಕಂಪನಿಗಳ ವಾಹನಗಳ ಓಡಾಟದಿಂದ ರಸ್ತೆಗಳು ಹೊಂಡಗಳಂತಾಗಿದ್ದು, ಅನೇಕ ಅಪಘಾತಗಳು ಸಂಭವಿಸಿ ಸುಮಾರು ಏಳೆಂಟು‌ ಜನ ಮೃತಪಟ್ಟಿದ್ದಾರೆ. 8-10 ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ಗ್ರಾಮಸ್ಥರ ಸಮೇತ ರೈತ ಸಂಘಟನೆಗಳು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ನಾಗರಾಜ ಚಳ್ಳೊಳ್ಳಿ ಎಚ್ಚರಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,
ಭಾರಿಗಾತ್ರದ ವಾಹನ ಓಡಾಡಿ ರಸ್ತೆಗಳು ಕೆಟ್ಟಿವೆ. ಈ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಸಂಗನಗೌಡ ಪೊಲೀಸ್ ಪಾಟೀಲ ಮಾತನಾಡಿ,
ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮದಿಂದ ಎನ್.ಹೆಚ್ . – 50 ರಿಂದ ಹಿರೇಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಲಾಚನಕೆರಿ, ಕುಣಿಕೇರಿ, ಕುಣಿಕೇರಿ ತಾಂಡ, ಹಾಲವರ್ತಿ, ಗವಿಮಠ ರಸ್ತೆ, ಆಲ್ಲನಗರ, ಗಿಣಿಗೇರಿ, ಕನಕಾಪುರ ಹಾಗೂ ಹ್ಯಾಟಿ-ಮುಂಡರಗಿ ಈ ಹಳ್ಳಿಗಳ ರಸ್ತೆಗಳ ಮೇಲೆ ಭಾರಿಗಾತ್ರದ ವಾಹನಗಳು ಕಾರ್ಖಾನೆಗಳಿಗೆ 35 ರಿಂದ 45 ಟನ್‌ಗಳವರೆಗೆ ಮೈನ್ಸ್ ಮತ್ತು ಕೋಕ್‌ಗಳನ್ನು ಹೇರಿಕೊಂಡು ಹೋಗುವುದರಿಂದ ರಸ್ತೆಗಳು ಹಾಳಾಗಿವೆ. ಹಳ್ಳಿಗಳಿಗೆ ಬಸ್‌ಗಳ ಸಂಚಾರವಿಲ್ಲದೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಶಾಸಕರಿಗೆ, ಸಂಸದರಿಗೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಹನುಮಂತಪ್ಪ‌ ಬೆಣಕಲ್, ಎಪಿಎಂಸಿ ಸದಸ್ಯರು, ಭರಮಣ್ಣ ಸಿಂಗಟಾಲೂರ , ಬಾಳಪ್ಪ ಕುಂಬಾರ ಕೊಡದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಡುಗೆ ಭಟ್ಟನ ಹೊತ್ತೊಯ್ದು ಕೊಂದು ತಿಂದ ಚಿರತೆ!

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ದೇವಸ್ಥಾನದ ಅಡುಗೆ ಭಟ್ಟನನ್ನು ರಾತ್ರಿ ಹೊತ್ತೊಯ್ದ ಚಿರತೆ ಪೀಸ್ ಪೀಸ್ ಮಾಡಿ ತಿಂದು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಗುರುವಾರ ನಸುಕಿನ ವೇಳೆ ಜರುಗಿದೆ.
ಆನೆಗೊಂದಿ ಬಳಿಯ ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ‌ ಹುಲಗೇಶ್ ಈರಪ್ಪ ಮಡ್ಡೇರ್ ನಿದ್ದೆಯಲ್ಲಿದ್ದಾಗ‌ ಬೇಟೆಗೆ ಹೊಂಚು ಹಾಕಿದ ಚಿರತೆ ಸದ್ದು‌ ಮಾಡದೇ ಹುಲಗೇಶ್‌ನನ್ನು ಸುಮಾರು ಒಂದು ಕಿ.ಮೀ ದೂರದ ಕಾಡುಪೋದೆಯೊಳಗೆ ಹೊತ್ತೊಯ್ದು ಚಿಂದಿ ಚಿಂದಿ ಮಾಡಿ ತಿಂದು ಬಿಸಾಕಿ ಪರಾರಿಯಾಗಿದೆ.
ಈ ಘಟನೆ ಬೆಳಕಿಗೆ‌ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ‌ ಬಿದ್ದಿದ್ದಾರೆ. ಈ ಭಾಗದಲ್ಲಿ ಚಿರತೆ, ಕರಡಿ ಹಾವಳಿ ವಿಪರೀತವಾಗಿದ್ದು ಅರಣ್ಯ ಇಲಾಖೆ ತುರ್ತು‌ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಚಿರತೆ ಹಿಡಿಯಲು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಅಬಕಾರಿ ಪೊಲೀಸರ ದಾಳಿ: ಗಾಂಜಾ ವಶ, ಆರೋಪಿ‌ ಶಿವನಗೌಡ ಪರಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳ ಮಧ್ಯ ಬೆಳೆದಿದ್ದ ಸುಮಾರು ‌16 ಸಾವಿರ ರೂ, ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಬಿ ಎಸ್ ಬೇಲೇರಿ‌ ಗ್ರಾಮದ ಶಿವನಗೌಡ ಕೃಷ್ಣೆಗೌಡರ ಎಂಬುವರು ಜಮೀನಿನಲ್ಲಿ ಗಾಂಜಾ ಬೆಳೆದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅಬಕಾರಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದ್ದು, ಆರೋಪಿ ಶಿವನಗೌಡ ಪರಾರಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶ್ರೀಶೈಲ ಅಕ್ಕಿ, ಎಚ್ ಪಿ ನಾಯಕ್, ಸಿಬ್ಬಂದಿಗಳಾದ ಬಿ ಎಮ್ ನಿಡಗುಂದಿ, ಬಸವರಾಜ್ ಬಿರಾದಾರ್, ಲೋಹಿತ್ ಮೇಟಿ, ಪರಶುರಾಮ ರಾಥೋಡ್, ಚಂದ್ರು ರಾಥೋಡ್, ಗುರುರಾಜ್, ಚಾಲಕರಾದ ಶೇಖಪ್ಪ, ಮಾಬುಸಾಬ್ ಇದ್ದರು.

ಕೊಪ್ಪಳ ಜಿಲ್ಲೆಯಲ್ಲಿ ಇಲಿಜ್ವರ!; 6 ಪ್ರಕರಣ ಪತ್ತೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಈ ದಿನಗಳಲ್ಲಿ ಈಗ ಇಲಿಜ್ವರವೂ ಕಾಲಿಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಲಿಜ್ವರದ ಒಟ್ಟು ಆರು ಪ್ರಕರಣಗಳು ಖಚಿತವಾಗಿದ್ದು, ಇದರಲ್ಲಿ ಕೊಪ್ಪಳ ತಾಲೂಕಿನಲ್ಲಿ ಐದು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿವೆ.

ಕೊಪ್ಪಳ ತಾಲೂಕಿನ ಹೊಸಳ್ಳಿಯಲ್ಲಿ ಎರಡು, ಹೊಸಲಿಂಗಾಪುರ, ಕೆರೆಹಳ್ಳಿ ಹಾಗೂ ನರೇಗಲ್ ಗ್ರಾಮಗಳಲ್ಲಿ ತಲಾ ಒಂದು ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಒಂದು ಇಲಿಜ್ವರ ಪ್ರಕರಣ ಪತ್ತೆಯಾಗಿವೆ.
ಹಾಗಾಗಿ ಜಿಲ್ಲಾ ಆರೋಗ್ಯ‌ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಕೋರಿದ್ದು, ವಹಿಸಬೇಕಾದ ಮುನ್ನೆಚ್ಚರಿಕೆ, ಇಲಿಜ್ವರದ ಗುಣಲಕ್ಷಣಗಳನ್ನು ತಿಳಿಸಿದೆ.

ಇಲಿಜ್ವರ ಪತ್ತೆಯಾಗಿರುವುದು ಸತ್ಯ. ಲೆಫ್ಟೋಸ್ವೈರೋಸಿಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಇಲಿಜ್ವರ ಎಂದಾಕ್ಷಣ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯ‌ ಇಲ್ಲ. ವಿಶೇಷವಾಗಿ ಕಾಮಾಲೆ ಜ್ವರದ ಗುಣಲಕ್ಷಣ ಇರುವವರು ನಿರ್ಲಕ್ಷ್ಯ ಮಾಡುವಂತಿಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ವಾಸಿಯಾಗುವ ಕಾಯಿಲೆ ಇದು.
-ಡಾ.ಲಿಂಗರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕೊಪ್ಪಳ.

 

ಹುಣಸಗಿ ಪೊಲೀಸರ ಕಾರ್ಯಾಚರಣೆ: ಚಾಲಾಕಿ ಬೈಕ್ ಕಳ್ಳನ ಬಂಧನ, 25 ಬೈಕ್ ಜಪ್ತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಾದಗಿರಿ

ಮನೆ ಮುಂದೆ, ಅಂಗಡಿ ಮುಂದೆ ‌ನಿಲ್ಲಿಸುತ್ತಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಚಾಲಾಕಿ ಬೈಕ್ ಕಳ್ಳನನ್ನು ಹುಣಸಗಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಹಲವು ತಿಂಗಳಿನಿಂದ ಪೊಲೀಸರಿಗೆ ತಲೆನೋವಾಗಿದ್ದ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಮೇನಳ್ಳಿ ಗ್ರಾಮದ ಚಾಲಾಕಿ ಕಳ್ಳ ಮೌನೇಶ್ ಅಲಿಯಾಸ್ ಪಿಂಟ್ಯಾ ಜಗನ್ನಾಥ್ ಬಡಿಗೇರ ಎಂಬಾತನನ್ನು ಪೊಲೀಸರು ಕದ್ದ ಬೈಕ್ ಸಮೇತ ಹೆಡಮುರಿ ಕಟ್ಟಿದ್ದಾರೆ.

ಬಂಧಿತ ಮೌನೇಶ್ ಅಲಿಯಾಸ್ ಪಿಂಟ್ಯಾನಿಂದ 9 ಲಕ್ಷ 48 ಸಾವಿರ ರೂ, ಮೌಲ್ಯದ ಒಟ್ಟು 25 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.

ಯಾದಗಿರಿ ಎಸ್ಪಿ ಖುಷಿಕೇಶ್ ಸೋನಾವಣೆ, ಡಿಎಸ್ಪಿ ವೆಂಕಟೇಶ ಅವರ ಮಾರ್ಗದರ್ಶನಲ್ಲಿ, ಹುಣಸಗಿ ಸಿಪಿಐ ದೌಲತ್ ಎನ್ ಕೆ, ಪಿಎಸ್ಐ ಬಾಪುಗೌಡ ಪಾಟೀಲ್, ಎಎಸ್ಐಗಳಾದ ಮಾಣಿಕ್ ರೆಡ್ಡಿ, ಮೌನೇಶ್, ಸಿಬ್ಬಂದಿಗಳಾದ ಮಡಿವಾಳಪ್ಪ, ಬಸವರಾಜ್, ಹಣಮಂತ, ವೆಂಕಟರಮಣ, ಕೆಂಚಪ್ಪ, ಸುನೀಲ್, ಮಂಜುನಾಥ್, ಲಿಂಗನಗೌಡ್, ರಮೇಶ್, ಅಜರುದ್ದೀನ್ ಪಟೇಲ್, ಸುರೇಶ್ ಹಾಗೂ ರಾಮನಗೌಡ ಈ ಕಾರ್ಯಾಚರಣೆಯಲ್ಲಿ ಇದ್ದರು. ಬೈಕ್ ಕಳ್ಳತನದ ಆರೋಪಿಯ ಈ ಕಾರ್ಯಾಚರಣೆಯಿಂದಾಗಿ ಸಿಬ್ಬಂದಿಗಳಿಗೆ ಎಸ್ಪಿ ಅವರು ಬಹುಮಾನ ಘೋಷಿಸಲಾಗಿದೆ.

ಕೊಪ್ಪಳದಲ್ಲಿ ಕರಡಿ ದಾಳಿ; ಇಬ್ಬರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಮೆಕ್ಕೆಜೋಳ ಕಾಯಲು ಹೊಲಕ್ಕೆ ಹೋಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಕರಡಿ ದಾಳಿ ಮಾಡಿದ ಘಟನೆ ರವಿವಾರ ರಾತ್ರಿ ಗಂಗಾವತಿ ತಾಲೂಕಿನ ಬಂಡ್ರಾಳದಲ್ಲಿ ನಡೆದಿದೆ. ಗಾಯಾಳುಗಳನ್ನು ಮಲ್ಲಪ್ಪ ಜಲ್ಲಿ (30) ಮತ್ತು ದುರ್ಗಪ್ಪ ಜಲ್ಲಿ (60) ಎಂದು ಗುರುತಿಸಲಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆಂಚುರಿ ಸ್ಟಾರ್ ಶಿವಣ್ಣ ಈಗ ಅಶ್ವತ್ಥಾಮ!

ಬಿಎಸ್ಕೆ
ವಿಜಯಸಾಕ್ಷಿ ವಿಶೇಷ ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ಒಂದಿಲ್ಲೊಂದು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಈಗ ಅಶ್ವತ್ಥಾಮನಾಗಿ ತೆರೆ ಮೇಲೆ ಬರಲಿದ್ದಾರೆ.
ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳ ಟ್ರೆಂಡ್ ಹೆಚ್ಚುತ್ತಿದೆ. ಬಿಗ್ ಬಜೆಟ್ ಹೊಂದಿರುವ ಇಂಥ ಸಿನಿಮಾಗಳು ಗೆದ್ದದ್ದೇ ಹೆಚ್ಚು. ಬಹಳ ವರ್ಷಗಳ ನಂತರ ಡಾ.ಶಿವಣ್ಣ ಈಗ ಪೌರಾಣಿಕ ಕತೆಯ ಸಿನಿಮಾದಲ್ಲಿ ನಟಿಸಲು ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ.
ಶಿವ ಮೆಚ್ಚಿದ ಕಣ್ಣಪ್ಪ, ಗಂಡುಗಲಿ‌ ಕುಮಾರರಾಮ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಐತಿಹಾಸಿಕ, ಪೌರಾಣಿಕ‌ ಕಥಾಹಂದರದಲ್ಲಿ ಪ್ರವೇಶಿಸಿರುವ ಅನುಭವದ ಆ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ‌ ಅಷ್ಟೇನೂ ಸದ್ದು ಮಾಡಿರಲಿಲ್ಲ.
ಫ್ಯಾಂಟಸಿ‌ ಕಥೆಯಾಧಾರಿತ ಮಿ.ಪುಟ್ಸಾಮಿ ಸಿನಿಮಾ ಸಹ ಶಿವಣ್ಣನಿಗೆ ಒಳ್ಳೇ ಹೆಸರು ತಂದುಕೊಟ್ಟಿತ್ತು. ಈಗ ಮತ್ತೇ ಪುರಾಣ ಹಿನ್ನೆಲೆಯ ಸಿನಿಮಾದಲ್ಲಿ ಶಿವಣ್ಣ ನಟಿಸಲು ಒಪ್ಪಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ.
ಚಿತ್ರಕ್ಕೆ ಅಶ್ವತ್ಥಾಮ ಹೆಸರನ್ನು ಫೈನಲ್ ಮಾಡಲಾಗಿದೆ. ರಾಜ್ಯೋತ್ಸವದ ದಿನ ಚಿತ್ರದ ಮೊದಲ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ‌ ಹರಿದಾಡುತ್ತಿದೆ. ಚಕ್ರವ್ಯೂಹದಲ್ಲಿ ಸಿಲುಕಿರುವ ಅಭಿಮನ್ಯುವಿನಂತೆ ಮದ್ಯದಲ್ಲಿರುವ ಶಿವಣ್ಣನ ಸುತ್ತ ಧನಸು, ಬಂದೂಕು, ಪಿಸ್ತೂಲು, ಮಚ್ಚು, ಕುಡಗೋಲು.. ವಿವಿಧ ಆಯುಧಗಳು ಸುತ್ತುವರಿದಿವೆ. ಈ ಪೋಸ್ಟರ್ ನೋಡಿದರೆ ಇದು ಪೌರಣಿಕ ಕಥೆಯೋ, ಕ್ರೈಂ ಬೇಸ್ಡ್ ಸ್ಟೋರಿಯೊ? ಎಂಬ ಪ್ರಶ್ನೆಗಳು ಸುಳಿದಾಡುತ್ತವೆ. ಯಾಕೆಂದರೆ ಅಶ್ವತ್ಥಾಮನನ್ನು‌ ನಿರ್ದೇಶಿಸುತ್ತಿರೋದು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್. ಪುಷ್ಕರ‌ ಮಲ್ಲಿಕಾರ್ಜುನಯ್ಯ ಚಿತ್ರ ನಿರ್ಮಾಣಕ್ಕೆ‌ ಒಲವು ತೋರಿದ್ದಾರೆ.
ಇದು ಮಹಾಭಾರತದ ದ್ರೋಣಾಚಾರ್ಯ ಪುತ್ರ ಅಶ್ವತ್ಥಾಮನ ಕಥೆಯೋ? ಅಥವಾ ‌ಈಗಿನ‌ ವ್ಯವಸ್ಥೆಯ ಅಶ್ವತ್ಥಾಮನ ಸ್ಥಿತಿಯ ಕಾಲ್ಪನಿಕ ಕತೆಯೊ? ಎಂಬುದನ್ನು ಅರಿಯಲು ಇನ್ನು ಕೆಲ ತಿಂಗಳು ಕಾಯಲೇಬೇಕು.

ಸಿದ್ದರಾಮಯ್ಯ ಬಿಜೆಪಿಗೆ‌ ಬಂದ್ರೆ ಸ್ವಾಗತ: ಪಾಟೀಲ

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ನೋಡಿಕೊಳ್ಳಲಿ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮತ್ತೊಬ್ಬರ ತಾಟಿನ ನೊಣ ತೆಗೆಯೋದು ಬೇಡ. ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಮೊದಲು ತಮ್ಮ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಮೊದಲು ಸರಿ ಮಾಡಿಕೊಳ್ಳಲಿ. ಡಿಕೆ ಶಿವಕುಮಾರ ಮತ್ತು ನಿಮ್ಮ ನಡುವಿನ ಕಚ್ಚಾಟ ಮುಗಿಸಿಕೊಳ್ಳಿ
ನಮ್ಮನ್ನು ಅನರ್ಹ ಮಾಡಲು ಮುಂದಾಗಿದ್ದ ನಿಮಗೆ ನಮ್ಮ ಬಗ್ಗೆ ಕಾಳಜಿ ಏಕೆ ಎಂದು ಬಿ.ಸಿ.ಪಾಟೀಲ ಪ್ರಶ್ನಿಸಿದರು.
ಬಿಜೆಪಿಯವರ ಬಗ್ಗೆ ಸಿದ್ದರಾಮಯ್ಯನವರಿಗೆ ಅಷ್ಟು ಚಿಂತೆ ಏಕೆ? ಸಿದ್ದರಾಮಯ್ಯನವರಿಗೆ ಬಿಜೆಪಿಗೆ ಬರಲು ಅಷ್ಟು ಆಸಕ್ತಿ ಇದ್ದರೆ ನಾವು ಸ್ವಾಗತಸ್ತಿವಿ ಎಂದರು.
ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು.

error: Content is protected !!