Home Blog Page 3019

ಒಂದೇ ಬಾರಿಗೆ ಹತ್ತು ಮಕ್ಕಳನ್ನು ಹೆತ್ತ ತಾಯಿ!

ವಿಜಯಸಾಕ್ಷಿ ಸುದ್ದಿ, ಸೌತ್ ಆಫ್ರಿಕಾ

ಇಲ್ಲಿಯವರೆಗೆ ನಾಲ್ಕೈದು ಮಕ್ಕಳಿಗೆ ತಾಯಿ ಒಟ್ಟಿಗೆ ಜನ್ಮ ನೀಡಿರುವ ಘಟನೆಯನ್ನು ನಾವು ಕಂಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಇಲ್ಲೊಬ್ಬರು ತಾಯಿ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ.

ಸೌತ್ ಆಫ್ರಿಕಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಏಕಕಾಲಕ್ಕೆ ಹತ್ತು ಕಂದಮ್ಮಗಳಿಗೆ ಮಹಿಳೆಯೊಬ್ಬರು ಜೀವ ನೀಡಿದ್ದಾರೆ. ಈ ಮೂಲಕ ಹೊಸ ಗಿನ್ನಿಸ್ ದಾಖಲೆಗೆ ಅವರು ಸಾಕ್ಷಿಯಾಗಿದ್ದಾರೆ. ಈ ಹಿಂದೆ ಮಲಿಯಾನ್ ಹಲೀಮಾ ಎಂಬ ಮೊರಕ್ಕೋದ ತಾಯಿ, ಒಂಭತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಈ ಯುವತಿ ಸರಿಗಟ್ಟಿದ್ದಾರೆ. ಇವರು ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಹಿಂದಿನ ಜನರು ಒಟ್ಟಾರೆ ಐದಾರು ಮಕ್ಕಳನ್ನು ಪಡೆಯುತ್ತಿದ್ದರು. ಸದ್ಯ ಈಗ ಒಂದಿಬ್ಬರು ಮಕ್ಕಳು ಆಸ್ತಿಯಾಗುತ್ತಿದ್ದಾರೆ. ಅಲ್ಲದೇ, ಅವಳಿ ಮಕ್ಕಳು ಆಗುತ್ತಿರುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ತ್ರಿವಳಿ ಮಕ್ಕಳು ಆಗುವುದೂ ಉಂಟು. ಆದರೆ, ಯಾರೂ ಊಹಿಸದಂತಹ ಘಟನೆಯೊಂದು ಸದ್ಯ ನಡೆದಿದೆ.

ಈ ಸುದ್ದಿ ಕೇಳುತ್ತಿದ್ದಂತೆ ನೆಟ್ಟಿಗರು ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ, ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೀವು ಈ ಮಹಿಳೆಯಾಗಿದ್ದರೆ, ಮಕ್ಕಳಿಗೆ ಜನ್ಮ ನೀಡಿದ ನಂತರ ಮೊದಲ ಕೆಲಸ ಏನು ಮಾಡುತ್ತಿದ್ದಿರಿ? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಅಪಘಾತ – 17 ಜನರ ಸಾವು, 24 ಜನ ಗಂಭೀರ ಗಾಯ!

ವಿಜಯಸಾಕ್ಷಿ ಸುದ್ದಿ, ಕಾನ್ಪುರ

ಬಸ್ ಹಾಗೂ ಜೆಸಿಬಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 17 ಜನರು ದುರಂತ ಸಾವು ಕಂಡ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ 24 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾನ್ಪುರ್ ಸಚೇಂದಿ ಬಳಿಯ ಕಿಸಾನ್ ನಗರ ಕಾಲುವೆ ಸಮೀಪ ಜೆಸಿಬಿ, ಶತಾಬ್ದಿ ಎಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ 17 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಲಾಲಾ ಲಜಪತ್ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ, ಪರಿಹಾರ ಕೂಡ ಘೋಷಣೆ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರೂ. 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ರೂ. 50 ಸಾವಿರ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ಮಧ್ಯೆ ಹೆಚ್ಚಾಗುತ್ತಿದೆ ಪ್ರಾಣಿಗಳ ಸಂತಾನ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೊರೊನಾ ಲಾಕ್‌ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯ ಪ್ರಾಣಿಗಳಿಗೆ ಜನರ ಕಾಟ ಇಲ್ಲದಂತಾಗಿದೆ. ಹೀಗಾಗಿ ಅವುಗಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿದೆ. ಹೀಗಾಗಿ ಅವುಗಳ ಸಂತಾನಾಭಿವೃದ್ಧಿ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲಿಯ ಪಿಲಿಕುಳ ಮೃಗಾಲಯದಲ್ಲಿ ಸಂತಸದ ಬೆಳವಣಿಗೆಯೊಂದು ನಡೆದಿದೆ.

ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಒಂದಾಗಿರುವ ಇಲ್ಲಿಯ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎಂಬ ಹುಲಿ, ಕಾಡು ಶ್ವಾನ ದೋಳ್, ರಿಯಾ ಜಾತಿಯ ಪಕ್ಷಿ, ಲಟಿಕ್ಯುಲೇಚಿಡ್ ಜಾತಿಯ ಹೆಬ್ಬಾವು, ಕಾಳಿಂಗ ಸರ್ಪ ತಮ್ಮ ಸಂತಾನ ಹೆಚ್ಚು ಮಾಡಿಕೊಂಡಿದೆ.

ಇದರಲ್ಲಿ 10 ವರ್ಷದ ರಾಣಿ ಹೆಸರಿನ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ದೋಳ್ ಜಾತಿಯ ಕಾಡುಶ್ವಾನ ಏಳು ಮರಿಗಳಿಗೆ ಜನ್ಮ ನೀಡಿದೆ. ಇನ್ನು ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ರಿಯಾ ಮೊಟ್ಟೆ ಇಟ್ಟಿದ್ದು, ರೆಟಿಕ್ಯುಲೇಟಿಡ್ ಜಾತಿಯ ಹೆಬ್ಬಾವು 20 ಮೊಟ್ಟೆ ಇಟ್ಟು ಕಾವು ಕೊಡುತ್ತಿದೆ. ಕಾಳಿಂಗ ಸರ್ಪ ಆರು ಮೊಟ್ಟೆ ಇಟ್ಟಿದ್ದು, ಕೃತಕ ಕಾವು ನೀಡಲಾಗುತ್ತಿದೆ.

ಪಿಲಿಕುಳದಲ್ಲಿ ಕೇವಲ ಜೈವಿಕ ಉದ್ಯಾನವನವೇ ಸುಮಾರು 150 ಎಕರೆ ಪ್ರದೇಶ ವ್ಯಾಪಿಸಿದೆ. ವಿವಿಧ ಪ್ರಭೇದದ 1,200ಕ್ಕೂ ಅಧಿಕ ಪ್ರಾಣಿ, ಪಕ್ಷಿ ಉರಗಗಳಿವೆ. ಇಲ್ಲಿ ಪ್ರಾಣಿ, ಪಕ್ಷಿಗಳಿಗೆ ನೈಸರ್ಗಿಕವಾದ ವಾತಾವರಣದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ. ಇದರ ಪರಿಣಾಮ ಇಲ್ಲಿಗೆ ತಂದ ಹೆಚ್ಚಿನ ಪ್ರಾಣಿ -ಪಕ್ಷಿಗಳು ಸಂತಾನಾಭಿವೃದ್ದಿ ಮಾಡುತ್ತಿವೆ.

ಸದ್ಯ ಈಗಿನ ಸಂತಾನಾಭಿವೃದ್ದಿಯಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಕಾಡುಶ್ವಾನಗಳ ಸಂಖ್ಯೆ 32ಕ್ಕೆ ಏರಿದೆ. ಕಾಳಿಂಗ ಸರ್ಪ 19 ಇವೆ. ಲಾಕ್‌ ಡೌನ್ ಮುಗಿದ ಬಳಿಕ ಪ್ರಾಣಿ ವಿನಿಮಯದಲ್ಲಿ ಚೆನ್ನೈಯ ವಂಡಲೂರು ಮೃಗಾಲಯದಿಂದ ಬಿಳಿ ಹುಲಿ ತರಿಸಲು ನಿರ್ಧರಿಸಲಾಗಿದೆ.

ಕಣ್ಣಿನಲ್ಲಿದ್ದ 9 ಸೆ.ಮೀ ಜೀವಂತ ಹುಳು ತೆಗೆದ ವೈದ್ಯರು!

ವಿಜಯಸಾಕ್ಷಿ ಸುದ್ದಿ, ಉಡುಪಿ

ವೃದ್ಧೆಯೊಬ್ಬರ ಕಣ್ಣಿನಲ್ಲಿ ಇದ್ದ 9 ಸೆಂ.ಮೀ ಉದ್ದದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದಿರುವ ಘಟನೆ ಇಲ್ಲಿಯ ಪ್ರಸಾದ್ ನೇತ್ರಾಲಯದಲ್ಲಿ ನಡೆದಿದೆ. ಮಲ್ಪೆಯ 70 ವರ್ಷದ ವೃದ್ಧೆ‌ಯೊಬ್ಬರು ಕಣ್ಣು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಈ ವೃದ್ಧೆ ಪ್ರಸಾದ್ ನೇತ್ರಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಣ್ಣಿನ ಅಕ್ಷಿ ಪಟಲದಲ್ಲಿ ಸುತ್ತುತ್ತಿದ್ದ ಹುಳು ಗಮನಿಸಿದ ಡಾಕ್ಟರ್ ಕೃಷ್ಣ ಪ್ರಸಾದ್, ಹುಳವನ್ನು ನಿಷ್ಕ್ರೀಯಗೊಳಿಸುವ ಔಷಧಿ ನೀಡಿ ಕಳುಹಿಸಿದ್ದರು.
ಆದರೆ, ನಿನ್ನೆ ಮತ್ತೆ ವೃದ್ಧೆಯ ಕಣ್ಣಿನಲ್ಲಿ ವಿಪರೀತ ನೋವು ಹಾಗೂ ಉರಿ ಕಾಣಿಸಿಕೊಂಡಿದೆ. ಹೀಗಾಗಿ ಅವರು ಮತ್ತೆ ಆಸ್ಪತ್ರೆಗೆ ಬಂದಿದ್ದರು.

ಆಸ್ಪತ್ರೆಯಲ್ಲಿ ತುರ್ತಾಗಿ ಸ್ಪಂದಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಜೀವಂತ ಹುಳವನ್ನು ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ನೇತ್ರದ ಒಳ ಪದರದಿಂದ ಇದೇ ಮೊದಲ ಬಾರಿಗೆ ಜೀವಂತ ಹುಳುವುನ್ನು ತೆಗೆಯಲಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹುಳದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ರಾಜ್ಯದಲ್ಲಿ ಎರಡು ದಿನ ಭರ್ಜರಿ ಮಳೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಜೂನ್ 11 ಹಾಗೂ 12 ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.

ಉತ್ತರ ಒಳನಾಡಿನಲ್ಲಿ ಜೂನ್ 8 ರಿಂದ 11 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇಂದು ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಜೂನ್ 10 ಮತ್ತು11 ರಂದು ರಾಜ್ಯದ ಹಲವೆಡೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಿನಿಮಾ ರೂಪದಲ್ಲಿ ಬರಲಿದೆ ರೋಹಿಣಿ ಸಿಂಧೂರಿ ಜೀವನಗಾಥೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಐಎಎಸ್ ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರ ಜೀವನ ಸಾಧನೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ. ಅವರ ಜೀವನದ ಸಾಧಾನೆಗಳನ್ನೇ ಆಧರಿಸಿದ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಚಿತ್ರವನ್ನು ಕೃಷ್ಣ ಸ್ವರ್ಣಸಂದ್ರ ಅವರು ನಿರ್ಮಾಣ ಮಾಡಿ ನಿರ್ದೇಶಿಸಲಿದ್ದಾರೆ. ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರು ಸಿಂಧೂರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಾಕ್ ಡೌನ್ ಮುಗಿದ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ. ‘ಭಾರತ ಸಿಂಧೂರಿ’ ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ರೋಹಿನಿ ಸಿಂಧೂರಿ ಅವರು ಹುಟ್ಟಿ ಬೆಳೆದ ಆಂಧ್ರಪ್ರದೇಶ ಹಾಗೂ ಕರ್ತವ್ಯ ನಿರ್ವಹಿಸಿದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ರೋಹಿಣಿ ಸಿಂಧೂರಿಯವರು ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಕಾರ್ಯನಿರ್ವಹಿಸಿರುವುದರಿಂದ ಈ ಎಲ್ಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಅವರು ಅಧಿಕಾರವಧಿಯ ಸಾಧನೆಗಳನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.

ರೋಹಿಣಿ ಸಿಂಧೂರಿ ಅವರು ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರು ಹೊತ್ತಿದ್ದಾರೆ. ಇವರು ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಆಗಲಿದೆ. ಕಳೆದ ವರ್ಷ ಜೂ. 20ರಂದೇ ಈ ಚಿತ್ರದ ಟೈಟಲ್ ರಿಜಿಸ್ಟರ್ ಆಗಿದೆ.

ಉದಾಸಿ ಅಂತ್ಯಕ್ರಿಯೆಗೆ ಆಗಮಿಸದಿರಲು ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಹಿರಿಯ ನಾಯಕ, ಹಾನಗಲ್ ಕ್ಷೇತ್ರದ ಶಾಸಕ ಹಾಗೂ ಲೋಕೋಪಯೋಗಿ ಇಲಾಖೆ ಮಾಜಿ ಸಚಿವ ಸಿ.ಎಂ. ಉದಾಸಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬಸ್ಥರು ಮತ್ತು ಅತ್ಯಾಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಂತ್ಯಕ್ರಿಯೆಗೆ ಆಗಮಿಸದೇ, ತಾವು ಇರುವ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಂದೆಯವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಾನಗಲ್‌ನಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋವಿಡ್ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.

ನಾಡಿನುದ್ದಕ್ಕೂ ಸಿ.ಎಂ. ಉದಾಸಿ ಅವರು ಪಕ್ಷಾತೀತವಾಗಿ ಲಕ್ಷಾಂತರ ಅಭಿಮಾನಿಗಳು, ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಅಗಲಿಕೆಯಿಂದ ಎಲ್ಲರಿಗೂ ದುಃಖವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗದಗ ಮತ್ತು ಹಾವೇರಿಯಲ್ಲಿ ಪ್ರತ್ಯೇಕವಾಗಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗುತ್ತಿದ್ದು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ; ಎರಡಂಕಿಗಿಳಿದ ಪಾಸಿಟಿವ್ ಸಂಖ್ಯೆ; ಜಿಲ್ಲೆಯ ಜನರಿಗೆ ಸಂತಸದ ಸುದ್ದಿ, ನರಗುಂದ ಸೋಂಕು ಮುಕ್ತ!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಮಂಗಳವಾರ ನೆಮ್ಮದಿ ತಂದಿದೆ. ಸತತ ನಾಲ್ಕನೇ ದಿನಗಳ ನಂತರ ಇದೇ‌ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ನೂರರ ಒಳಗೆ ಬಂದಿದೆ.
ಇವತ್ತಿನ ವರದಿಯಲ್ಲಿ ನರಗುಂದ ತಾಲೂಕು ಸೋಂಕು ‌ಮುಕ್ತವಾಗಿದೆ.

ಕಳೆದ ಶುಕ್ರವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖದತ್ತ ಸಾಗಿದ್ದು, ಮಂಗಳವಾರ ಕೇವಲ 78 ಜನರಿಗೆ ಮಾತ್ರ ಸೋಂಕು ತಗುಲಿದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಜಿಲ್ಲೆಯ ಜನ ನಿರಾಳರಾದಂತಾಗಿದೆ.

ಇಂದು 78 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 78 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25013 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -32, ಮುಂಡರಗಿ-13, ನರಗುಂದ-00, ರೋಣ-10, ಶಿರಹಟ್ಟಿ-21, ಹೊರಜಿಲ್ಲೆಯ-02 ಸೇರಿದಂತೆ 78 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 277 ಕ್ಕೇರಿದೆ.

ಗದಗ ತಾಲೂಕಿನ ದುಂದೂರು ನಿವಾಸಿ 86 ವರ್ಷದ ವ್ಯಕ್ತಿ ಮೇ-31 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -06 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಅಸೂಟಿ ಗ್ರಾಮದ ನಿವಾಸಿ 70 ವರ್ಷದ ವ್ಯಕ್ತಿ ಜೂನ್- 03 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 07 ರಂದೇ ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 285 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23391 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1345 ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 120 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಿಎಂ ಉದಾಸಿ ನಿಧನ; ಸಿಎಂ ಯಡಿಯೂರಪ್ಪ ಸಂತಾಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಇಂದು ನಿಧನರಾಗಿದ್ದು, ಅವರಿಗೆ ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 81 ವರ್ಷದ ಸಿ.ಎಂ. ಉದಾಸಿ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಚಿಕಿತ್ಸೆ ಪಡೆಯುತ್ತಿದ್ದರು. ಆರು ಬಾರಿ ಶಾಸಕರಾಗಿ ಗೆದ್ದಿದ್ದ ಉದಾಸಿ 2013 ಮತ್ತು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಾಸಕರ ಅಂತ್ಯಕ್ರಿಯೆ ಹಾನಗಲ್ ನಲ್ಲಿ ಬುಧವಾರ ನಡೆಯಲಿದೆ ಎಂದು ಉದಾಸಿ ಪುತ್ರ ಶಿವಕುಮಾರ್ ಉದಾಸಿ ತಿಳಿಸಿದ್ದಾರೆ.

ಹಿರಿಯ ಶಾಸಕ ಸಿ.ಎಂ.ಉದಾಸಿ ಅವರ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿ.ಎಂ ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಬೆಲೆ ಕಳೆದುಕೊಂಡ ಹೂವು; ಹೊಲವೆಲ್ಲ ಹರಗಿದ ರೈತ!

ಲಾಕ್‌ಡೌನ್ ಹಿನ್ನೆಲೆ ಶುಭಕಾರ್ಯಗಳಿಲ್ಲದೆ ಹೂವುಗಳಿಗೆ ಬೇಡಿಕೆಯಿಲ್ಲ!

ವಿಜಯಸಾಕ್ಷಿ ಸುದ್ದಿ, ಗದಗ

ಹೂವಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣಕ್ಕೆ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ಹೂವಿನ ಬೆಳೆಯನ್ನೇ ಹರಗಿರುವ ಘಟನೆ ನಡೆದಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಮುಳುಗಿದ್ದಾರೆ. ತಾಲೂಕಿನ ಸಂಭಾಪುರ ಗ್ರಾಮದ ರೈತ ಕಿರಣಗೌಡ ಬಂಡಿ ಎಂಬುವರು ತಮ್ಮ ಮೂರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಸೇವಂತಿ ಹೂವಿನ ಬೆಳೆಯನ್ನು ಹರಗಿದ್ದಾರೆ.

ಕಳೆದ ಬಾರಿಯೂ ಹೂವಿಗೆ ಭರ್ಜರಿ ಬೆಲೆ ಸಿಗುತ್ತದೆ ಎಂಬ ಸಮಯದಲ್ಲಿಯೇ ಲಾಕ್‌ಡೌನ್ ಜಾರಿಯಾಗಿತ್ತು. ಆದರೆ, ಈ ಬಾರಿ ಹಾಗಾಗುವುದಿಲ್ಲ. ಕಳೆದ ಬಾರಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಈ ಬಾರಿ ಹೆಚ್ಚಿನ ಶುಭ ಕಾರ್ಯಗಳು ನಡೆಯಲಿದ್ದು, ಭರ್ಜರಿ ಲಾಭ ಸಿಗಬಹುದು ಎಂದು ರೈತರು ಹೆಚ್ಚು ಖರ್ಚು ಮಾಡಿ ಹೂವು ಬೆಳೆದಿದ್ದರು. ಆದರೆ, ಈ ಸಮಯದಲ್ಲಿಯೂ ಲಾಕ್‌ಡೌನ್ ಜಾರಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.

ಪರಿಹಾರ ಆಳಿನ ಖರ್ಚಿಗೂ ಸಾಲದು

ಈ ರೈತ 3 ಲಕ್ಷ ರೂ. ಖರ್ಚು ಮಾಡಿ ಹೂವು ಬೆಳೆ ಬೆಳೆದಿದ್ದರು. ಆದರೆ, ಅವರ ಹೂವು ಕೇಳುವವರೇ ಇಲ್ಲದಾಗಿದೆ. ಹೀಗಾಗಿ ಬೇಸರಗೊಂಡು ಹೂವಿನ ಬೆಳೆಯನ್ನೇ ಹರಗಿದ್ದಾರೆ. ಸರ್ಕಾರ ಹೂವು ಬೆಳೆಗಾರರ ನಷ್ಟ ತುಂಬಲು ಪರಿಹಾರ ಘೋಷಿಸಿದೆಯಾದರೂ ಅದು ನೀಡುವ 10 ಸಾವಿರ ರೂ. ಪರಿಹಾರ ಆಳಿನ ಖರ್ಚಿಗೂ ಆಗುವುದಿಲ್ಲ. ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ಹೀಗಾಗಿ ಸರ್ಕಾರೂ ಎಕರೆಗೆ ಸುಮಾರು 70 ಸಾವಿರ ರೂ.ಗಳಷ್ಟಾದರೂ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

error: Content is protected !!