Home Blog Page 3020

ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ – 18 ಜನ ದಹನ

ವಿಜಯಸಾಕ್ಷಿ ಸುದ್ದಿ, ಪುಣೆ

ಖಾಸಗಿ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 18 ಜನ ಸಜೀವವಾಗಿ ದಹನವಾಗಿರುವ ದುರ್ಘಟನೆ ನಗರದ ಘೋಟವಾಡ ಫಾಟಾ ಎಂಬಲ್ಲಿ ನಡೆದಿದೆ.

ಕಾರ್ಖಾನೆಯ ಒಳಗೆ ಇರುವವರನ್ನು ಹುಡುಕುವ ಮತ್ತು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಫ್ಯಾಕ್ಟರಿಯ ಒಳಗೆ 40ಕ್ಕೂ ಅಧಿಕ ಜನ ಕಾರ್ಮಿಕರು ಇದ್ದರು ಎಂದು ತಿಳಿದು ಬಂದಿದೆ.

ಕಾರ್ಖಾನೆಯಲ್ಲಿ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ 8 ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿವೆ. ಸದ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ 20 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಘಟನೆಯಲ್ಲಿ 18 ಜನ ಬಲಿಯಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಐವರು ಇನ್ನೂ ಸಿಕ್ಕಿಲ್ಲ. ಇಲ್ಲಿಯವರೆಗೆ ಪತ್ತೆಯಾಗದಿರುವ ಕಾರ್ಮಿಕರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಆಟಗಾರ ಈ ರೀತಿ ಜನರ ಮನಸ್ಸು ಗೆದ್ದ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕ್ರಿಕೆಟ್ ಸೇರಿದಂತೆ ಯಾವುದೇ ಆಟವಿರಲಿ. ಆಡುವ ವ್ಯಕ್ತಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುತ್ತಾರೆ. ಅವರಿಗೆ ಆ ಆಟಗಾರ ಯಾವಾಗಲೂ ರೋಲ್ ಮಾಡೆಲ್ ಆಗಿರುತ್ತಾರೆ. ಆದರೆ, ಇತ್ತೀಚೆಗೆ ಇಂತಹ ರೋಲ್ ಮಾಡೆಲ್ ಗಳಲ್ಲಿನ ಕೆಲವರು ಕೆಟ್ಟ ಚಟಕ್ಕೆ ಸಿಲುಕುತ್ತಿದ್ದಾರೆ. ಅವು ಬಹಿರಂಗವಾಗುತ್ತಿವೆ ಕೂಡ. ಆದರೆ, ಇಂತ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ತನ್ನ ಸಾಮರ್ಥ್ಯದ ಬಲದಿಂದ ಅವೆಲ್ಲವನ್ನು ಜಯಿಸಬಹುದು ಎಂಬುವುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.

ಬಾಂಗ್ಲಾದೇಶದ ರುಬೆಲ್ ಹೊಸೈನ್ ಇದಕ್ಕೆ ದೊಡ್ಡ ಉದಾಹರಣೆ. ಅವರು ಡಾಕಾ ಟಿ20 ಲೀಗ್‌ ನಲ್ಲಿ ಕೇವಲ 24 ಎಸೆತಗಳಲ್ಲಿ ಅಗ್ರ ಕ್ರಮಾಂಕದಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳನ್ನು ಬಲಿ ಪಡೆದು ಮಿಂಚಿದ್ದಾರೆ.

ಪಾರ್ಟೆಕ್ಸ್ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ಆಡಿದ ಬಲಗೈ ವೇಗದ ಬೌಲರ್ ರುಬೆಲ್ ಹೊಸೈನ್, ಇಂತಹ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ರುಬೆಲ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕಂಡು 167 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಾರ್ಟೆಕ್ಸ್ ಸ್ಪೋರ್ಟಿಂಗ್ ಕ್ಲಬ್‌ ತಂಡ, ರುಬೆಲ್ ಹೊಸೈನ್‌ ದಾಳಿಯ ಮುಂದೆ ಎದುರು ನಿಲ್ಲಲಿಲ್ಲ. ಅಲ್ಲದೇ, ಕೇವಲ 95 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋತಿದೆ.

ರುಬೆಲ್ ಹೊಸೈನ್ 4 ಓವರ್ ಗಳಲ್ಲಿ 30 ರನ್ ನೀಡಿ ಪ್ರಮುಖ 4 ವಿಕೆಟ್ ಗಳನ್ನು ಕಿತ್ತುಕೊಂಡಿದ್ದಾರೆ. ಇಬ್ಬರು ಉತ್ತಮ ಬ್ಯಾಟ್ಸಮನ್ ಗಳನ್ನು ಶೂನ್ಯಕ್ಕೆ ಫವಲಿಯನ್ ಗೆ ಅಟ್ಟುವಲ್ಲಿ ಹೊಸೈನ್ ಯಶಸ್ವಿಯಾಗಿದ್ದಾರೆ. ಓರ್ವ ಬ್ಯಾಟ್ಸಮನ್ 10 ರನ್ ಗೆ ಔಟ್ ಆದರೆ, ಮತ್ತೊಬ್ಬ ಆಟಗಾರ 10ಕ್ಕೂ ಕಡಿಮೆ ರನ್ ಹೊಡೆಯಲು ವಿಫಲರಾಗುವಂತೆ ಹೊಸೈನ್ ಮಾರಕ ದಾಳಿ ನಡೆಸಿದ್ದಾರೆ.

31 ವರ್ಷದ ಬಾಂಗ್ಲಾದೇಶದ ವೇಗದ ಬೌಲರ್ ಹೊಸೈನ್, ವಿವಾದಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದ್ದಾರೆ. ಅವರ ಮೇಲೆ ಅತ್ಯಾಚಾರದ ಗಂಭೀರ ಆರೋಪ ಇದೆ. ಅತ್ಯಾಚಾರದ ಆರೋಪದಡಿಯಲ್ಲಿ ಅವರು 3 ದಿನಗಳ ಕಾಲ ಜೈಲು ಸೇರಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವರನ್ನು ಬಾಂಗ್ಲಾದೇಶದ 2015ರ ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಲಾಯಿತು. ಅಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ ಗೆದ್ದ ನಂತರ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಕೈಬಿಡಲಾಯಿತು. ಸದ್ಯ ಅಂಗಳದಲ್ಲಿ ಮಿಂಚುವುದನ್ನು ಮಾತ್ರ ಅವರು ಬಿಡುತ್ತಿಲ್ಲ.

ಒಲಂಪಿಕ್ಸ್ ನಲ್ಲಿ ಆಡುತ್ತಿಲ್ಲ ಸೈನಾ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಭಾರತೀಯ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಒಲಂಪಿಕ್ಸ್ ನಿಂದ ಹೊರಗೆ ಬಿದ್ದಿದ್ದು, ಭಾರತೀಯರಿಗೆ ನಿರಾಸೆ ಮೂಡಿಸಿದೆ. ಜೂನ್ 15ಕ್ಕೆ ಟೋಕಿಯೋ‌ ಒಲಿಂಪಿಕ್ಸ್ 2021ರ ಅರ್ಹತೆಗೆ ಕೊನೆಯ ದಿನಾಂಕ ಮುಗಿಯಲಿದೆ. ಆದರೆ, ಇದರ ಮಧ್ಯೆ ಯಾವುದೇ ಅರ್ಹತಾ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್ ಗೆ ಸಂಬಂಧಿಸಿದಂತೆ ಯಾವುದೇ ಅರ್ಹತಾ ಪಂದ್ಯಗಳು ನಡೆಯುತ್ತಿಲ್ಲ. ಜೂ.15ಕ್ಕೆ ಅರ್ಹತೆಗೆ ಕೊನೆಯ ಕೊನೆಯ ದಿನ ಮುಗಿಯಲಿದೆ. ಲಂಡನ್ ಒಲಿಂಪಿಕ್ಸ್ ನಲ್ಲಿ‌ ಕಂಚಿನ ಪದಕ ವಿಜೇತ ಸೈನಾ ನೆಹ್ವಾಲ್ ಗೆ ಇದರಿಂದಾಗಿ ತುಂಬಾ ನಿರಾಸೆಯಾಗಿದೆ. ಭಾರತೀಯರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭಾರತಕ್ಕೆ ಪದಕದ ಭರವಸೆ ಮೂಡಿಸುವ ಆಟಗಾರರೆ ಇಲ್ಲವಾಯಿತಲ್ಲ ಎಂಬುವುದು ನೂರು ಕೋಟಿ ಜನರ ಸದ್ಯದ ಬೇಸರವಾಗಿದೆ.

‘ಉಂಡು ಹೋದ, ಕೊಂಡು ಹೋದ’ವನ ಬಂಧನ! ಫೇಸ್ಬುಕ್ ಮೂಲಕ ಪರಿಚಯ, ಮದುವೆಯಾಗುವ ಭರವಸೆ ನೀಡಿ ಟೀಚರಿಗೆ ಮೋಸ ಮಾಡಿದ್ದ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಫೇಸ್‌ ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯೊಂದಿಗೆ ಸಲಿಗೆ ಬೆಳಿಸಿಕೊಂಡಿದ್ದ ಆಸಾಮಿಯೊಬ್ಬ ಖಾಸಗಿ ಶಾಲೆಯ ಟೀಚರಮ್ಮನಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಗ್ರಾಮವೊಂದರ ಯುವತಿ, ಮುಂಡರಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ ಕೊಡಮಗ್ಗಿ ಗ್ರಾಮದ ನೇತಾಜಿ ಹನಮಂತಪ್ಪ ಮದ್ದನೇರ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿದ್ದಾನೆ.

ಇಬ್ಬರೂ ಆಗಾಗ ಮೆಸೇಜ್ ಹಾಗೂ ಕಾಲ್ ಮಾಡುತ್ತ ಮಾತನಾಡುತ್ತಿದ್ದರು. ಒಂದು ಬಾರಿ ಹುಬ್ಬಳ್ಳಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅಷ್ಟಕ್ಕೇ ನಿಲ್ಲದ ಇವರ ಮಾತು-ಕತೆ ಮುಂಡರಗಿಯ ಖಾಸಗಿ ಶಾಲೆಯವರೆಗೂ ಮುಂದುವರೆದಿದೆ. ಆಗ ನೇತಾಜಿ ಟೀಚರಮ್ಮನನ್ನು ಮದುವೆಯಾಗುವ ಭರವಸೆ ನೀಡಿ, ನಂಬಿಸಿದ್ದಾನೆ. ಮುಂದೆ ಕುಟುಂಬದ ಸದಸ್ಯರ ಆರೋಗ್ಯ ಸರಿ ಇಲ್ಲ, ಚಿಕಿತ್ಸೆ ಕೊಡಿಸಲು ಒಂದಿಷ್ಟು ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿದ್ದ ಟೀಚರಮ್ಮ, 2019ರ ಸೆಪ್ಟೆಂಬರ್ 20 ರಂದು ಲಕ್ಷಗಟ್ಟಲೆ ಹಣ ಹಾಕಿದ್ದಾರೆ. ಅಷ್ಟೇ ಅಲ್ಲ, ಆಗಾಗ ಬೇರೆ ಬೇರೆ ಕೆಲಸಕ್ಕೆ ದುಡ್ಡು ಬೇಕಿತ್ತು ಎಂದು ಬರೋಬ್ಬರಿ ರೂ. 7 ಲಕ್ಷ ವಸೂಲಿ ಮಾಡಿದ್ದಾನೆ.

ಮದುವೆ ಆಗ್ತಾನಲ್ಲ, ಏನೋ ಕಷ್ಟ ಇದೆ ಎಂದು ನಂಬಿದ್ದ ಟೀಚರಮ್ಮ ಮಾತ್ರ ಕೇಳಿದಾಗೆಲ್ಲ ಹಣ ಕಳುಹಿಸಿದ್ದಾರೆ. ತಮ್ಮ ಬಳಿ ಇಲ್ಲದಾಗ ತನ್ನ ಸಹೋದ್ಯೋಗಿಗಳ ಬಳಿ ಸಾಲ ಮಾಡಿ ದುಡ್ಡು ಕೊಟ್ಟಿದ್ದಾರೆ.
ಅಷ್ಟಾದ ಮೇಲೂ ದುಡ್ಡು ಕೇಳುತ್ತಲೇ ಇದ್ದ ಈತನ ಬಗ್ಗೆ ಶಿಕ್ಷಕಿಗೆ ಅನುಮಾನ ಬಂದು, ಹಣ ಕೊಡುವುದನ್ನು ನಿಲ್ಲಿಸಿದ್ದಾರೆ. ಕೊಟ್ಟಿರುವ ಹಣ ವಾಪಸ್ ಕೇಳಲು ಹೋದರೆ ಆತ ಸ್ಪಂದಿಸುತ್ತಲೇ ಇರಲಿಲ್ಲ. ಆಗ ಟೀಚರಮ್ಮಗೆ ತಾವು ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ಪೊಲೀಸ್ ಠಾಣೆಯ ಮೆಟ್ಟಲೇರಿ, ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಮುಂಡರಗಿ ಠಾಣೆಯ ಇನ್‌ಸ್ಪೆಕ್ಟರ್ ಸುನೀಲಕುಮಾರ ಸವದಿ, ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಸಿದ್ದಾರೆ.

12 ಸಾವಿರದ ಗಡಿಗೆ ಬಂದು ನಿಂತ ಸೋಂಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂದು ರಾಜ್ಯದಲ್ಲಿ 11,958 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 340 ಜನ ಬಲಿಯಾಗಿದ್ದಾರೆ. ಸೋಂಕಿನ ಖಚಿತ ಪ್ರಮಾಣ ಶೇ.9.08ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 2.84ಕ್ಕೆ ಇಳಿಕೆ ಕಂಡಿದೆ. ಅಲ್ಲದೇ, ಇಂದು ರಾಜ್ಯದಲ್ಲಿ 27,299 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 2,38,824 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ 31,290 ಜನ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 2,70,481 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದು ಎರಡು ಸಾವಿರಕ್ಕೂ ಕಡಿಮೆ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ನಗರದಲ್ಲಿ 1,992 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 199 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದು 5 ಜಿಲ್ಲೆಗಳಲ್ಲಿ ಕೊರೊನಾ ಪ್ರಕಣಗಳ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೆಂಗಳೂರು, ಹಾಸನ ಮತ್ತು ಮೈಸೂರಿನಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿವೆ.
ಇಂದು ಬಾಗಲಕೋಟೆ 112, ಬಳ್ಳಾರಿ ,267 ಬೆಳಗಾವಿ 355, ಬೆಂಗಳೂರು ಗ್ರಾಮಾಂತರ 292, ಬೆಂಗಳೂರು ನಗರ 1,992, ಬೀದರ್ 13, ಚಾಮರಾಜನಗರ 209, ಚಿಕ್ಕಬಳ್ಳಾಪುರ 282, ಚಿಕ್ಕಮಗಳೂರು 365, ಚಿತ್ರದುರ್ಗ 294, ದಕ್ಷಿಣ ಕನ್ನಡ 408, ದಾವಣಗೆರೆ 380, ಧಾರವಾಡ 313, ಗದಗ 141, ಹಾಸನ 1,108, ಹಾವೇರಿ 179, ಕಲಬುರಗಿ 67, ಕೊಡಗು 230, ಕೋಲಾರ 298, ಕೊಪ್ಪಳ 155, ಮಂಡ್ಯ 597, ಮೈಸೂರು 1,213, ರಾಯಚೂರು 64, ರಾಮನಗರ 48, ಶಿವಮೊಗ್ಗ 1,224, ತುಮಕೂರು 420, ಉಡುಪಿ 394, ಉತ್ತರ ಕನ್ನಡ 364, ವಿಜಯಪುರ 137 ಮತ್ತು ಯಾದಗಿರಿಯಲ್ಲಿ 37 ಹೊಸ ಪ್ರಕರಣಗಳು ವರದಿಯಾಗಿವೆ.

ಚರಂಡಿಗೆ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಬರೋಬ್ಬರಿ 250 ಲೀಟರ್ ಹಾಲನ್ನು ಚರಂಡಿಗೆ ಸುರಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಲಕ್ಕವ್ವನಹಳ್ಳಿ ಬಿಎಂಸಿ‌ ಕೇಂದ್ರದ ಹತ್ತಿರ ಈ ಘಟನೆ ನಡೆದಿದೆ. ಹಾಲಿನಲ್ಲಿ ಶೇ. 3.5ರಷ್ಟು ಕೊಬ್ಬಿನಾಂಶ ಕಡಿಮೆ ಇದೆ ಎಂದು ಹೇಳಿದ ಅಧಿಕಾರಿಗಳು. ಅಲ್ಲದೇ, ಹಲವು ರೈತರನ್ನು ಕೊಬ್ಬಿನಾಂಶ ಕಡಿಮೆ ಇದೆ ಎಂದು ಅಧಿಕಾರಿಗಳು ಮರಳಿ ಕಳುಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷ ಪೂರ್ತಿ ಲಾಭಗಳಿಸಿ ಈಗ ನಮ್ಮ ಹಾಲನ್ನು ಅಧಿಕಾರಿಗಳು ಮರಳಿ ಕಳುಹಿಸುತ್ತಿದ್ದಾರೆ. ನೈಸರ್ಗಿಕದಲ್ಲಿ ಆಗುತ್ತಿರುವ ಬದಲಾವಣೆಯಿಂದ ಕೊಬ್ಬಿನಾಂಶ ಕಡಿಮೆ ಆಗುತ್ತಿದೆ. ಇದಕ್ಕೆ ರೈತರನ್ನು ಹೊಣೆ ಮಾಡಿ, ಹಾಲು ಖರೀದಿಸದೆ ಅಧಿಕಾರಿಗಳು ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ರೈತರು ಬದುಕುವುದೇ ದುಸ್ತರ ಎನ್ನುವಂತಾಗಿದೆ. ಈ ಪರಿಸ್ಥಿತಿ ಇರುವಾಗ ಅಧಿಕಾರಿಗಳು ಈ ರೀತಿ ವರ್ತಿಸಿದರೆ, ರೈತರು ಹಾಗೂ ಬಡವರ ಪರಿಸ್ಥಿತಿ ಏನಾಗಬೇಕು? ಅಧಿಕಾರಿಗಳು ಇದೇ ರೀತಿ ತಮ್ಮ ವರ್ತನೆ ಮುಂದುವರೆಸಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.

ಈ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಹಾಲು ಖರೀದಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರೈತರಾಗಿರುವ ಸುಂದರ್ ಹಾಗೂ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ; ನರಗುಂದ, ರೋಣ ತಾಲೂಕಿನಲ್ಲಿ ಭಾರಿ ಇಳಿಮುಖ, ಸೋಂಕು ಮುಕ್ತದತ್ತ ದಾಪುಗಾಲು!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಸತತ ನಾಲ್ಕನೇ ದಿನವೂ ಶುಭ ಸುದ್ದಿ ಸಿಕ್ಕಿದೆ. ಹೌದು ಶುಕ್ರವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಮುಖದತ್ತ ಸಾಗಿದ್ದು, ಸೋಮವಾರ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇದರಿಂದಾಗಿ ಜಿಲ್ಲೆಯ ಜನ ಒಂದಿಷ್ಟು ನಿರಾಳರಾದಂತಾಗಿದೆ. ಅದರಲ್ಲೂ ನರಗುಂದ ಹಾಗೂ ರೋಣ ತಾಲೂಕಿನಲ್ಲಿ ಸೋಂಕು ಭಾರಿ ಇಳಿಮುಖವಾಗಿದೆ.

ಇಂದು 141 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 141 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 24934 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -81, ಮುಂಡರಗಿ-21, ನರಗುಂದ-01, ರೋಣ-05, ಶಿರಹಟ್ಟಿ-30, ಹೊರಜಿಲ್ಲೆಯ-03 ಸೇರಿದಂತೆ 141 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 275 ಕ್ಕೇರಿದೆ.

ಗದಗ ತಾಲೂಕಿನ ಹೊಂಬಳ ನಿವಾಸಿ 88 ವರ್ಷದ ವ್ಯಕ್ತಿ ಜೂನ್- 04 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -06 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹೊಂಬಳ ನಿವಾಸಿ 78 ವರ್ಷದ ಮಹಿಳೆ ಮೇ-22 ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 06 ರಂದೇ ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 301 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23106 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1554 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 150 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬಿಜೆಪಿ ಮುಖಂಡರಿಂದ ಪೊಲೀಸರಿಗೆ ಎನರ್ಜಿ ಡ್ರಿಂಕ್ಸ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಬಿಜೆಪಿಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ನೇತೃತ್ವದಲ್ಲಿ ಗೋಕುಲ್ ಪೊಲಿಸ್ ಠಾಣೆ ಸಿಬ್ಬಂದಿಗಳಿಗೆ ಇಮ್ಯುನಿಟಿ ಎನರ್ಜಿ ಡ್ರಿಂಕ್ಸ್ ವಿತರಣೆ ಮಾಡಲಾಯಿತು.

ಇಂದು ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ immuity booster ಪಾನೀಯ ಬಾಟಲನ್ನು ಠಾಣೆಯ ಇನ್ಸ್‌ಪೆಕ್ಟರ್ ಕಾಲಿಮಿರ್ಚಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ವಿನಯ್ ಸಜ್ಜನರ, ಮನೋಹರ್ ಭಾಂಡಗೆ, ಅಶೋಕ ವಾಲಿಕರ, ಆನಂದ ವಿಶ್ವನಾಥಮಠ, ಮುರಗೇಶ ಶೆಟ್ಟರ, ಗುರುನಾಥ ವಾಲ್ಮೀಕಿ, ಶ್ರೀಕಾಂತ ಪಾಟೀಲ್, ಶ್ರೀಧರ ಗಡಾದ ಸೇರಿದಂತೆ ಅನೇಕರು ಇದ್ದರು.

ಜಿಲ್ಲೆಯಲ್ಲಿ ಜೂ. 14ರ ವರೆಗೂ ಲಾಕ್ ಡೌನ್ ತೆರುವು ಇಲ್ಲ; ಜಿಲ್ಲಾಧಿಕಾರಿ

ವಿಜಯ ಸಾಕ್ಷಿ ಸುದ್ದಿ ಗದಗ

ಜಿಲ್ಲೆಯಲ್ಲಿ ಜೂ. 14ರ ವರೆಗೆ ಅನ್ ಲಾಕ್ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರದ ಆದೇಶದಂತೆ ಜೂ. 14 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಬೆಳಿಗ್ಗೆ 6 ಯಿಂದ 10 ಗಂಟೆಯವರೆಗೆ ಅಗತ್ಯ ಖರೀದಿಗೆ ಅವಕಾಶ ನೀಡಲಾಗುವುದು. ಆಹಾರ ಸಾಮಗ್ರಿ, ಹಾಲು, ದಿನಸಿ, ಮಾಂಸ ಮತ್ತು ಮೀನಿನ ಮಳಿಗೆಗಳು, ಮದ್ಯ ಮಾರಾಟ ಮಳಿಗೆಗಳಲ್ಲಿ ಕೇವಲ ಪಾರ್ಸೆಲ್ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ರೈತರಿಗೆ ಅಗತ್ಯವಿರುವ ಬೀಜ,ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ಖರೀದಿಗಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ತಳ್ಳುಗಾಡಿ, ಆಟೋ, ಟಂಟಂಗಳಲ್ಲಿ ಬೀದಿ ಸುತ್ತುವ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳು , ಪಾರ್ಸೆಲ್ ಹಾಗೂ ಹೋಂ ಡಿಲೆವರಿ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವ್ ದರ ಶೇ. 10.5ರಷ್ಟಿದೆ. ಸಾವಿನ ಪ್ರಮಾಣ ಶೇ. 1.26ರಷ್ಟಿದೆ. ಇದನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಸೋಂಕಿನ ಪ್ರಯಾಣ ಹಾಗೂ ಸಾವಿನ ಪ್ರಮಾಣ ಸದ್ಯ ಇಳಿಕೆ ಕಾಣುತ್ತಿದೆ. ಆದರೆ, ಇಷ್ಟಕ್ಕೆ ಮೈ ಮರೆಯುವಂತಿಲ್ಲ. ಅನ್ ಲಾಕ್ ವಿಚಾರ ಸದ್ಯಕ್ಕೆ ಇಲ್ಲ. ಜೂ. 14 ರ ನಂತರ ಸರ್ಕಾರದ ಆದೇಶದ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ವಿಜಯಸಾಕ್ಷಿಗೆ ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ವ್ಯಾನಿಟಿ ಬ್ಯಾಗ್ ಕಳ್ಳತನ; ದುಬೈನಿಂದ ತಂದಿದ್ದ‌ ಮೊಬೈಲ್ ಕಳೆದುಕೊಂಡು ಕಂಗಾಲಾದ ವೈದ್ಯೆ!

ವಿಜಯಸಾಕ್ಷಿ ಸುದ್ದಿ, ಗದಗ

ನಿತ್ಯವೂ ಇಲ್ಲಿ ಜನಜಂಗುಳಿ. ಮಕ್ಕಳು, ಮಹಿಳೆಯರೇ ತುಂಬಿ ತುಳುಕುವ ಈ ಆಸ್ಪತ್ರೆಯಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ, ಸಿಸಿ ಕ್ಯಾಮೆರಾ ಇಲ್ಲದ ಕಾರಣ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನ ಈಗ ಮಾಮೂಲಿ ಆಗಿದೆ. ವಾರದಲ್ಲಿ ಒಂದು ಪ್ರಕರಣವಾದರೂ ನಡೆಯುತ್ತೆ.‌ ಆದರೆ ಪೊಲೀಸ್ ಠಾಣೆಯ ಮೆಟ್ಟಲು ಹತ್ತಲ್ಲ!

ಶನಿವಾರ ಮುಂಜಾನೆ 10ರ ಸುಮಾರಿಗೆ ಕರ್ತವ್ಯ ನಿರತ ವೈದ್ಯ, ಮಹಿಳಾ ಸಿಬ್ಬಂದಿಯ ಎರಡು ವ್ಯಾನಿಟಿ ಬ್ಯಾಗ್‌ಗಳು ಕಳ್ಳತನವಾಗಿವೆ. ಪುಣ್ಯಕ್ಕೆ ಆ ಚೀಲಗಳಲ್ಲಿ ಹಣವಿರಲಿಲ್ಲ. ಆದರೆ, ವೈದ್ಯರ ಬ್ಯಾಗಲ್ಲಿ‌ದ್ದ ದುಬೈಯಿಂದ ತಂದಿದ್ದ ಬೆಲೆಬಾಳುವ ಸ್ಯಾಮ್‌ಸಂಗ್‌ ಮೊಬೈಲ್‌ ಕಳ್ಳತನವಾಗಿದೆ.

ಮಹಿಳಾ ಸಿಬ್ಬಂದಿಯ ಬ್ಯಾಗ್‌ನಲ್ಲಿ ಎಟಿಎಮ್ ಕಾರ್ಡ್, ಡ್ರೈವಿಂಗ್ ‌ಲೈಸೆನ್ಸ್ ಇದ್ದವು. ಈ ಎರಡು ಬ್ಯಾಗ್ ಕಳ್ಳತನವಾಗಿ ಎರಡು ಗಂಟೆಗಳ ಕಾಲ ಮೊಬೈಲ್ ಆನ್ ಆಗಿಯೇ ಇತ್ತು. ಕಾಲ್ ಮಾಡಿದಾಗ ಕಳ್ಳ (ಕಳ್ಳಿ?) ರೀಸೀವ್ ಮಾಡಿದನಾದರೂ ಮಾತನಾಡಲಿಲ್ಲ. ಈ ಬಗ್ಗೆ ಬಡಾವಣೆ ಠಾಣೆಗೆ ಹೋದ ವೈದ್ಯರು ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ‌ಮುಂದುವರೆದಿದೆ.

ಈ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ಕಳ್ಳತನದ ಹಲವಾರು ಪ್ರಕರಣಗಳು ನಡೆದಿವೆ. ವಾರದ ಹಿಂದೆ ಒಪಿಡಿಯಲ್ಲಿ ಜನರ ಚೀಟಿ ಮಾಡಿದ ದುಡ್ಡು ಮಾಯವಾಗಿತ್ತು. ಆ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ.

ಇಷ್ಟೆಲ್ಲ ನಡೆಯುತ್ತಿದ್ದರೂ ಈ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಇನ್ನಾದರೂ ಆಸ್ಪತ್ರೆಯಲ್ಲಿ ಜವಾಬ್ದಾರಿ ಇದ್ದವರು ಸಿಸಿ ಕ್ಯಾಮೆರಾ ಅಳವಡಿಸಿ ಕಳ್ಳತನ ಪ್ರಕರಣ ತಡೆಯಲು ಮುಂದಾಗಬೇಕಿದೆ. ವೈದ್ಯರಿಗೆ ಈ ರೀತಿ ಆದರೆ ರೋಗಿಗಳ, ಅವರ ಸಂಬಂಧಿಕರ ಪಾಡೇನು ಅನ್ನುವ ಪ್ರಶ್ನೆ ಎದುರಾಗಿದೆ.

error: Content is protected !!