Home Blog Page 3021

ಮಾಜಿ ಸಚಿವ ಪ್ರೊ. ಮುಮ್ತಾಝ್ ಅಲಿ ಖಾನ್ ನಿಧನ : ಮುಖ್ಯಮಂತ್ರಿ ಸಹಿತ ಗಣ್ಯರಿಂದ ಸಂತಾಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರೊ.ಮುಮ್ತಾಝ್ ಅಲಿ ಖಾನ್ ಇಂದು ಬೆಳಗ್ಗೆ ಬೆಂಗಳೂರಿನ ತಮ್ಮ ಗಂಗಾನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮುಮ್ತಾಝ್ ಅಲಿ ಖಾನ್, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. 2008 ರಲ್ಲಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿದ್ದರು. ಲೇಖಕರಾಗಿಯೂ ಅವರು ಗಮನ ಸೆಳೆದಿದ್ದರು. ಹಲವು ಲೇಖನಗಳನ್ನು ಬರೆಯುವ ಮೂಲಕ ಮುಸ್ಲಿಂ ಸಮಾಜದ ಬೇರೆ ಬೇರೆ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದರು. ಆದರೆ ಬಿಜೆಪಿಯಲ್ಲಿದ್ದ ಮುಮ್ತಾಝ್ ಅಲಿ ಖಾನ್ ಬಳಿಕ ಡಾ.ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು.

ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ 1982 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ಮುಮ್ತಾಝ್ ಅಲಿ ಖಾನ್, 2 ಮಕ್ಕಳನ್ನು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 1.30 ಕ್ಕೆ ಅವರ ಅಂತ್ಯ ಕ್ರಿಯೆ ಬೆಂಗಳೂರಿನ ಖುದ್ದುಸ್ ಸಾಹೇಬ್ ಖಬ್ರಸ್ಥಾನ್ ನಲ್ಲಿ ನಡೆಯಿತು.

ಮಾಜಿ ಸಚಿವ ಮುಮ್ತಾಝ್ ಅಲಿ ಖಾನ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ, ಹಜ್ಜ್ , ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಅವರು, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಆತ್ಮೀಯ ಸ್ನೇಹಿತ ಹಾಗೂ ಸರಳ ಹಾಗೂ ಸಜ್ಜನ ಚಿಂತನಾಶೀಲ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕ್ಯಾಸ್ ಲೆಸ್ ವಸೂಲಿ ದಂಧೆ ಬಯಲಿಗೆ!

ವಿಜಯಸಾಕ್ಷಿ ಸುದ್ದಿ, ಕೋಲಾರ

ಕೊರೊನಾದಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಜನರು ಕೆಲಸವಿಲ್ಲದ ಕಾರಣ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇದರ ಮಧ್ಯೆ ಪೊಲೀಸರ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ವಾಹನ ಸವಾರರಿಂದ ಹಣ ಸುಲಿಗೆಗೆ ಪೊಲೀಸರು ಇಳಿದಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಠಾಣೆ ಪೋಲಿಸರಿಂದ ಹಣ ವಸೂಲಿ ದಂಧೆ ನಡೆದಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಕೆಲಸಗಳಿಗೆ ತೆರಳುವ ವಾಹನ ಸವಾರರನ್ನು ತಡೆದು ಕೇಸ್ ಹಾಕುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ವಾಹನ ಸವಾರರಿಂದ ಗೂಗಲ್ ಪೇ ಹಾಗೂ ಪೋನ್ ಪೇ ಮೂಲಕ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ರಾಯಲ್ಪಾಡ್ ಪೊಲೀಸ್ ಠಾಣೆಯ ಪೇದೆಯೊಬ್ಬರು ಪೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಜನರಿಂದ ಕೇಳಿ ಬಂದಿದೆ.

ಒಂದು ವಾಹನಕ್ಕೆ ರೂ. 2 ರಿಂದ 5 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಆಂಧ್ರಗಡಿಭಾಗದಿಂದ ಬರುವ ವಾಹನಗಳು ಹಾಗೂ ಸ್ಥಳೀಯವಾಗಿ ಓಡಾಡುವ ವಾಹನಗಳೇ ಈ ಪೊಲೀಸರ ಟಾರ್ಗೆಟ್ ಆಗಿವೆ ಎನ್ನಲಾಗಿದೆ. ಹಣ ಕೊಡದಿದ್ದರೆ, ಲಾಕ್ ಡೌನ್ ಮುಗಿಯುವವರೆಗೂ ನಿಮಗೆ ವಾಹನ ಸಿಗುವುದಿಲ್ಲ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಅಲ್ಲದೇ, ಹಿರಿಯ ಅಧಿಕಾರಿಗಳು ರಾಯಲ್ಪಾಡ್ ಪೋಲಿಸರ ಮೇಲೆ ಕ್ರಮ ಕೈಗೊಳ್ಳವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕುಟುಂಬಸ್ಥರಿಗೆ ವ್ಯಾಕ್ಸಿನ್ ಹಾಕಿಸಲು ಅಧಿಕಾರಿಗಳು ಹಿಡಿದರೆ ಕಳ್ಳ ಮಾರ್ಗ?

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ವ್ಯಾಕ್ಸಿನ್‍ ಪಡೆದುಕೊಳ್ಳುವುದಕ್ಕಾಗಿ ಜನ ಸಾಕಷ್ಟು ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ. ಅಲ್ಲದೇ, ವ್ಯಾಕ್ಸಿನ್ ಗಾಗಿ ಮುಗಿ ಬೀಳುತ್ತಿರುವ ದೃಶ್ಯಗಳು ಕೂಡ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಕಾಫಿನಾಡಿನಲ್ಲಿ ಮಾತ್ರ ಯಾರದ್ದೋ ಹೆಸರಿನಲ್ಲಿ ಇನ್ನ್ಯಾರೋ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಇದಕ್ಕೆ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಕೊರೊನಾ ವ್ಯಾಕ್ಸಿನ್ ಹಲವರಿಗೆ ಒಂದು ದಂಧೆಯಂತಾಗಿ ಬಿಟ್ಟಿದೆ. ಹೀಗಾಗಿ ಸರ್ಕಾರ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪೊಲೀಸರು ಕೂಡ ಅಲರ್ಟ್ ಆಗಿಯೇ ಇದ್ದಾರೆ. ಆದರೂ ಕಳ್ಳರು ಮಾತ್ರ ತಮ್ಮ ದಂಧೆ ಮುಂದುವರೆಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಕೊರೊನಾ ವಾರಿಯರ್ ಎಂದು ಘೋಷಿಸಿ ಜೂ. 2ರಂದು ವ್ಯಾಕ್ಸಿನ್ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಅಂದು ಕೆ.ಎನ್.ಸೋಮಶೇಖರ್ ಎಂಬ ವ್ಯಕ್ತಿ ಡಿ ದರ್ಜೆ ನೌಕರ ಎಂದು ಹೇಳಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಆದರೆ, ಆ ವ್ಯಕ್ತಿಗೂ ಹಾಗೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ.

ಸದ್ಯ ಆತನಿಗೆ ಹಾಗೂ ಇಲಾಖೆಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮೂಡಿಗೆರೆ ಆರ್.ಎಫ್.ಓ. ಅವರು ಸಿಬ್ಬಂದಿ ಎಂದು ಇಲಾಖೆಯಿಂದ ಅಧಿಕೃತ ಲೆಟರ್ ಕಳಿಸಿರುವುದು ಏಕೆ? ಎಂಬ ಚರ್ಚೆ ಪ್ರಾರಂಭವಾಗಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ವ್ಯಾಕ್ಸಿನ್ ಗಾಗಿ ದಿನಗಟ್ಟಲೇ ಕಾಯುತ್ತೇವೆ. ಅಧಿಕಾರಿಗಳು ತಮಗೆ ಬೇಕಾದವರಿಗೆ, ಮನೆಯವರಿಗೆ ನಕಲಿ ದಾಖಲೆ ಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವ್ಯಾಕ್ಸಿನ್ ಪಡೆದ ಸಿಬ್ಬಂದಿಗಳ ಪಟ್ಟಿಯಲ್ಲಿ ಸೋಮಶೇಖರ್ ಹೆಸರಿದೆ. ಸದ್ಯ ತಹಸೀಲ್ದಾರ್ ಕಾರಣ ಕೇಳಿ ಆರ್.ಎಫ್.ಓಗೆ ನೊಟೀಸ್ ನೀಡಿದ್ದಾರೆ. ಆರ್.ಎಫ್.ಓ. ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಸೋಮಶೇಖರ್ ಎಂಬುವವರು ಅರಣ್ಯ ಇಲಾಖೆ ಅಧಿಕಾರಿಯ ಪತಿ ಎನ್ನಲಾಗುತ್ತಿದ್ದು, ಅಧಿಕಾರಿಯ ಕುಟುಂಬಸ್ಥರಿಗೆ ವ್ಯಾಕ್ಸಿನ್ ಹಾಕಿಸಲು ಇಲಾಖೆಯ ಸಿಬ್ಬಂದಿಯೇ ಈ ರೀತಿ ಕಳ್ಳ ದಾರಿ ಹಿಡಿದಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಕುರಿತು ತನಿಖೆಯಾಗಬೇಕು ಎಂದು ಕೂಡ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ದುಷ್ಟರು!

ವಿಜಯಸಾಕ್ಷಿ ಸುದ್ದಿ, ರಾಮನಗರ

ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  

ಈ ಘಟನೆ ಯಾವ ಗ್ರಾಮದಲ್ಲಿ ನಡೆದಿದೆ ಎಂಬ ಕುರಿತು ಇನ್ನೂ ತಿಳಿದು ಬಂದಿಲ್ಲ. ಆದರೆ, ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜೊತೆಗೆ ಮದ್ಯ ಕುಡಿಯುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಸಾಮಾಜಿಕ‌ ಜಾಲತಾಣ ಹುಡುಕಿ ನೋಡಿದಾಗ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದ್ಯ ಕುಡಿದ ನಂತರ ಮಕ್ಕಳು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ.

ಬಾಲಕನೊಬ್ಬ ತನಗೆ ಮತ್ತಷ್ಟು ಮದ್ಯ ಬೇಕು‌ ಎಂದು ಕೂಗಾಡಿದ್ದಾನೆ.  ಈ ರೀತಿ ವಿಕೃತಿ ಮೆರೆದಿರುವ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ನಡೆದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಹಾಗೂ ತಲ್ಲಣ ಮನೆ ಮಾಡಿದೆ.

ಮಕ್ಕಳಿಗೆ ಮದ್ಯ ಕುಡಿಸಿದ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂಬ ಆಗ್ರಹ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಅಲ್ಲದೇ, ಈ ವಿಡಿಯೋಗಳನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

100 ರ ಗಡಿ ದಾಟಿದ ಪೆಟ್ರೋಲ್, ಡೀಸೆಲ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶದ ಜನರು ಕೊರೊನಾ ಹಾಗೂ ಅದರ ನಿಯಂತ್ರಣಕ್ಕೆ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಯ ಬಿಸಿ, ಮತ್ತೊಂದೆಡೆ ಇಂಧನ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ಇಷ್ಟು ದಿನ ಬೇರೆ ಬೇರೆ ರಾಜ್ಯಗಳಲ್ಲಿ ಇಂಧನ ತೈಲ ಶತಕ ಬಾರಿಸುತ್ತಿರುವುದು ವರದಿಯನ್ನು ಓದುತ್ತಿದ್ದೇವು. ಆದರೆ ಇದೀಗ ರಾಜ್ಯದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿ, ಮುನ್ನುಗ್ಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೊಂಚ ಹೆಚ್ಚಾಗಿರುವುದು ಸತ್ಯವೇ ಆಗಿದ್ದರು, ಅದರ ಜೊತೆಗೆ ತೆರಿಗೆಗಳು ಹಾಗೂ ಇತರ ವೆಚ್ಚ ಗಳು ಸೇರಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಮೇ 4ರಿಂದ ಇಲ್ಲಿಯವರೆಗೆ ಒಟ್ಟು 20 ಬಾರಿ ದರ ಏರಿಕೆ ಕಂಡುಬಂದಿದೆ.

ದೇಶದ ಆರು ರಾಜ್ಯಗಳಲ್ಲಿ ರವಿವಾರದಿಂದ ಪ್ರತೀ ಲೀಟರ್‌ ಪೆಟ್ರೋಲ್‌ ದರ 100 ರೂ. ಗಡಿ ದಾಟಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್‌ಗಳಲ್ಲಿ ಈ ಏರಿಕೆ ದಾಖಲಾಗಿದೆ. ರಾಜ್ಯದಲ್ಲಿ ಬಳ್ಳಾರಿಯಲ್ಲಿ ರವಿವಾರ ಪ್ರತೀ ಲೀಟರ್‌ ಪೆಟ್ರೋಲ್‌ ದರ 100.08 ರೂ., ಶಿರಸಿಯಲ್ಲಿ 100.29 ರೂ. ಇತ್ತು. ಇನ್ನು ಕೆಲವು ಜಿಲ್ಲೆಗಳಲ್ಲಿ ಶತಕದ ಸಮೀಪ ಇದೆ.

ಮತ್ತೆ ವಿವಾದ ಎಳೆದುಕೊಂಡ ನಟಿ ಕಂಗನಾ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನಟಿ ಯಾಮಿ ಗೌತಮ್ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ, ಬಾಲಿವುಡ್ನ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ವಿಚಾರವನ್ನು ಜಾಲತಾಣದಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕಿತ್ತಾಟವೊಂದು ನಡೆದಿದೆ. ಈ ಕಿರಿಕ್ ನಲ್ಲಿ ಕೂಡ ನಟಿ ಕಂಗನಾ ರಣಾವತ್ ಹೆಸರು ಕೇಳಿ ಬರುತ್ತಿದೆ . ಮದುವೆ ಫೋಟೋ ಹಂಚಿಕೊಂಡಿದ್ದ ಯಾಮಿ ಗೌತಮ್, ಆಶೀರ್ವಾದ ಕೋರಿದ್ದರು. ಕುಟುಂಬಸ್ಥರ ಆಶೀರ್ವಾದ ಪಡೆದು ಮದುವೆಯಾಗಿದ್ದೇವೆ. ಪ್ರೀತಿ ಹಾಗೂ ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದರು.

ಈ ಫೋಟೋ ಕಂಡು ಸಾಕಷ್ಟು ಜನ ತಾರೆಯರು ಶುಭಾಶಯ ತಿಳಿಸಿದ್ದರು. ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ, ‘ರಾಧೆ ಮಾ ಅವರಂತೆ ಶುದ್ಧ ಮತ್ತು ಧರ್ಮನಿಷ್ಠರಾಗಿ ಕಾಣುತ್ತಿದ್ದೀರಿ ಎಂದು ಕಮೆಂಟ್ ಹಾಕಿದ್ದರು. ಈ ಕಮೆಂಟ್ ಗೆ ಸಿಟ್ಟಾಗಿರುವ ನಟಿ ಕಂಗನಾ, ‘ಈ ಜಿರಲೆ ಎಲ್ಲಿಂದ ಬಂತು? ಯಾರಾದರೂ ನನ್ನ ಚಪ್ಪಲಿ ತನ್ನಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸದ್ಯ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಯಾಮಿ, ಹಿಂದಿಯ ‘ಭೂತ್ ಪೊಲೀಸ್’ ಸಿನಿಮಾದಲ್ಲಿ ಸದ್ಯ ನಟಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಅವರು ಕಾಲಿಟ್ಟಿದ್ದರು.

ವಿಶ್ವ ಚಾಂಪಿಯನ್ ಶಿಪ್ ಟ್ರೋಫಿ ಮುತ್ತಿಕ್ಕುವ ತವಕದಲ್ಲಿ ವಿರಾಟ್!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆಯುವ ವಿಶ್ವ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಆಡಲು ಸಜ್ಜಾಗಿದೆ. ಭಾರತವು ಈ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಎದುರಿಸಲಿದೆ. ಹೀಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು, ಇತ್ತೀಚಿಗಷ್ಟೆ ಸೌತಾಂಪ್ಟನ್ ಕ್ರೀಡಾಂಗಣದ ಚಿತ್ರ ಹಂಚಿಕೊಳ್ಳುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಉತ್ಸುಕತೆ ಬಗ್ಗೆ ಹೇಳಿದ್ದರು. ಈ ಪಂದ್ಯ ಗೆಲ್ಲುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‍ ಆಗಿ ಹೊರಹೊಮ್ಮಿ ಮೊದಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಲು ವಿರಾಟ್ ತುದಿಗಾಲ ಮೇಲೆ ನಿಂತಿದ್ದಾರೆ.

ಸೆನಾ ದೇಶಗಳಲ್ಲಿ ಅಂದರೆ, ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಏಕದಿನ ಮತ್ತು ಟೆಸ್ಟ್ ಪಂದ್ಯಗಳೆರಡರಲ್ಲಿಯೂ ಹತ್ತಕ್ಕಿಂತ ಹೆಚ್ಚು ಶತಕ ಸಿಡಿಸಿದ ಆಟಗಾರರಾಗಿದ್ದಾರೆ., ಈ ದೇಶಗಳಲ್ಲಿ ವಿರಾಟ್ ಕೊಹ್ಲಿ 11 ಟೆಸ್ಟ್ ಶತಕಗಳು ಹಾಗೂ 10 ಏಕದಿನ ಶತಕಗಳನ್ನು ಗಳಿಸಿದ್ದಾರೆ. ಸೆನಾ ದೇಶಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡೂ ಮಾದರಿಗಳಲ್ಲೂ ಹತ್ತಕ್ಕಿಂತ ಹೆಚ್ಚು ಶತಕ ಬಾರಿಸಿರುವ ಏಕೈಕ ಏಷ್ಯಾ ಬ್ಯಾಟ್ಸಮನ್ ಆಗಿ ವಿರಾಟ್ ಹೊರ ಹೊಮ್ಮಿದ್ದು, ಈ ಸಾಧನೆ ಕೂಡ ಇವರ ಹೆಸರಿನಲ್ಲಿದೆ. ಹೀಗಾಗಿ ವಿರಾಟ್ ಪರ್ವದ ಮುಂದೆ ನ್ಯೂಜಿಲೆಂಡ್ ನೆಲ ಕಚ್ಚುವುದು ಶತ ಸಿದ್ಧ ಎಂದು ಆಟಗಾರರು ಮಾತನಾಡಿಕೊಳ್ಳುತ್ತಿದ್ದಾರೆ.

ನೂರು ಕೋಟಿ ಅಭಿಮಾನಿಗಳು ವಿರಾಟ್ ಪರ್ವ ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಟೀಂ ಇಂಡಿಯಾಗೆ ಹಾರೈಸುತ್ತಿದ್ದಾರೆ.

ಭಾರತೀಯ ತಂಡದ ಈ ಆಟಗಾರನನ್ನು ಹಾಡಿ ಹೊಗಳಿದ ಇಂಗ್ಲೆಂಡ್ ನ ದಂತಕಥೆ!

ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್

ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರತಿಭೆ ಉಳ್ಳವರು ಇದ್ದಾರೆ. ಆ ತಂಡದಲ್ಲಿ ಸ್ಫೋಟಕ ಬ್ಯಾಟ್ಸಮನ್ ಗಳು, ಉತ್ತಮ ಬೌಲರ್‌ ಗಳು ಸೇರಿದಂತೆ ವಿಶ್ವವೇ ತಿರುಗಿ ನೋಡುವಂತಹ ಆಲ್‌ ರೌಂಡರ್ ಇದ್ದಾರೆ. ರವೀಂದ್ರ ಜಡೇಜಾ ಇದಕ್ಕೆ ದೊಡ್ಡ ಉದಾಹರಣೆ. ಅವರನ್ನು ಇಂಗ್ಲೆಂಡ್ ಆಟಗಾರರು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಇಂಗ್ಲೆಂಡ್ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ಅಲ್ಲದೇ, ಜಡ್ಡುನನ್ನು ಬಾಯಿ ತಂಬಾ ಕೊಂಡಾಡಿದ್ದಾರೆ.

ಐಪಿಎಲ್, ಅಂತಾರಾಷ್ಟ್ರೀಯ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಸೇರಿದಂತೆ ಎಲ್ಲ ಮಾದರಿಯಲ್ಲಿಯೂ ರವೀಂದ್ರ ಜಡೇಜಾ ಮಿಂಚಿದ್ದಾರೆ. ಅವರು ಎಲ್ಲ ಬಗೆಯ ಆಟದಲ್ಲಿ ಗೆಲುವು ಸಾಧಿಸಿದ್ದಾರೆಯೇ ಹೊರತು, ವಿಫಲರಾಗಿಲ್ಲ. ಆಡಿರುವ ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿ ರವೀಂದ್ರ ಜಡೇಜಾ ಉಳಿದಿದ್ದಾರೆ ಎಂದು ಪೀಟರ್ಸನ್ ಹೊಗಳಿದ್ದಾರೆ.

ಜೀವನದಲ್ಲಿ ಕ್ರಿಕೆಟರ್ ಆಗಬೇಕು ಎಂಬ ಗುರಿ ಹೊಂದಿರುವ ಆಟಗಾರರು, ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಕಾಲಿಡುವ ಕ್ರಿಕೆಟರ್ಸ್, ಕೌಂಟಿ ಕ್ರಿಕೆಟಿಗರು ಸೇರಿದಂತೆ ಯಾರೇ ಆದರೂ ರವೀಂದ್ರ ಜಡೇಜಾ ಅವರನ್ನು ಅನುಸರಿಸಬೇಕು. ಜಡೇಜಾ ಅವರ ಆಟದ ರೀತಿ ಗಮನಿಸಿ ಆ ಶೈಲಿ ಪಾಲಿಸಬೇಕು. ಅವರೊಬ್ಬ ಯಂಗ್ ಕ್ರಿಕೆಟರ್ ಗೆ ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದ್ದಾರೆ.

ರವೀಂದ್ರ ಜಡೇಜಾ ಅವರ ರೀತಿಯ ಎಡಗೈ ಆಲ್ ರೌಂಡರ್ ಇಷ್ಟು ವರ್ಷದ ಇತಿಹಾಸದಲ್ಲಿ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿಯೇ ಇಲ್ಲ. ಆ ಕೊರಗು ಕೂಡ ನನ್ನೊಂದಿಗೆ ನನ್ನ ತಂಡಕ್ಕೂ ಇದೆ ಎಂದು ಬಣ್ಣಿಸಿದ್ದಾರೆ.
ಪೀಟರ್ಸನ್ ಅವರ ಮಾತನ್ನು ಕೂಡ ಅಲ್ಲಗಳೆಯುವಂತಿಲ್ಲ. ಜಡ್ಡುನ ಆಟವೇ ಅಂಥದ್ದು, ಅವರೊಬ್ಬ ಭಾರತ ಕಂಡ ಉತ್ತಮ ಆಟಗಾರ. ಜಡೇಜಾ ಫಿಟ್ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡದ ಆಟದ ಮುಂದೆ ಬೇರೆ ಆಟಗಾರರ ಆಯ್ಕೆಯೇ ಇರುವುದಿಲ್ಲ. ಜಡೇಜಾ ಗಾಯಗೊಂಡರೆ ಮಾತ್ರ ಬೇರೆ ಆಲ್ ರೌಂಡರ್ ಗಾಗಿ ಆಯ್ಕೆ ತಂಡ ಹುಡುಕಾಟ ನಡೆಸುತ್ತದೆಯೇ ಹೊರತು, ಜಡೇಜಾ ಅವರನ್ನು ಮಾತ್ರ ಮಾತೇ ಇಲ್ಲ.

ಅಭಿಮಾನಿಗಳು ಕೂಡ ಜಡೇಜಾ ಗ್ರೌಂಡ್ ನಲ್ಲಿದ್ದರೆ, ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ ಕುಳಿತುಕೊಂಡಿರುತ್ತದೆ. ನಮ್ಮ ಜಡ್ಡು ಅಂದ್ರೆ ಸುಮ್ನೆನಾ?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇಳಿಕೆ ಕಾಣುತ್ತಿದೆ. ಇಂದು ರಾಜ್ಯದಲ್ಲಿ 12,209 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 320 ಜನ ಬಲಿಯಾಗಿದ್ದಾರೆ. ಸೋಂಕು ಹರಡುವಿಕೆ ಪ್ರಮಾಣ ಶೇ. 7.71ಕ್ಕೆ ಇಳಿಕೆಯಾಗಿದೆ.

ಇಂದು 320 ಜನ ಬಲಿಯಾಗಿರುವುದರಿಂದಾಗಿ 31,580 ಜನ ಒಟ್ಟಾರೆಯಾಗಿ ಸಾವನ್ನಪ್ಪಿದಂತಾಗಿದೆ.

ಬೆಂಗಳೂರಿನಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 2,944 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 187 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನುಳಿದಂತೆ ಇಂದು ಬಾಗಲಕೋಟೆ 166, ಬಳ್ಳಾರಿ 285, ಬೆಳಗಾವಿ 418, ಬೆಂಗಳೂರು ಗ್ರಾಮಾಂತರ 277, ಬೆಂಗಳೂರು ನಗರ 2,944, ಬೀದರ್ 7, ಚಾಮರಾಜನಗರ 247, ಚಿಕ್ಕಬಳ್ಳಾಪುರ 348, ಚಿಕ್ಕಮಗಳೂರು 416, ಚಿತ್ರದುರ್ಗ 266, ದಕ್ಷಿಣ ಕನ್ನಡ 609, ದಾವಣಗೆರೆ 143, ಧಾರವಾಡ 262,

ಗದಗ 133, ಹಾಸನ 655, ಹಾವೇರಿ 138, ಕಲಬುರಗಿ 60, ಕೊಡಗು 162, ಕೋಲಾರ 257, ಕೊಪ್ಪಳ 212, ಮಂಡ್ಯ 571, ಮೈಸೂರು 1,237, ರಾಯಚೂರು 104, ರಾಮನಗರ 60, ಶಿವಮೊಗ್ಗ 456, ತುಮಕೂರು 698, ಉಡುಪಿ 494, ಉತ್ತರ ಕನ್ನಡ 360, ವಿಜಯಪುರ 190 ಮತ್ತು ಯಾದಗಿರಿಯಲ್ಲಿ 34 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಲ್ಪತರು ಸೇವಾ ಸಂಘದಿಂದ ಪರಿಸರ ದಿನಾಚರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ 35ನೇ ವಾರ್ಡ್ ನ ಕುರ್ತಕೋಟಿ ಬಸಪ್ಪನಗರದಲ್ಲಿ ಕಲ್ಪತರು ಸೇವಾ ಸಂಘದಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ಪಾರ್ವತಿ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು.

ನಂತರ ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಪೌರಕಾರ್ಮಿಕರು, ನಿರ್ಗತಿಕರಿಗೆ, ಬೀದಿ ದನಕರುಗಳಿಗೆ, ಆಹಾರ ವ್ಯವಸ್ಥೆ ಮಾಡಲಾಯಿತು. ಹಣ್ಣು ಬಿಸ್ಕೆಟ್ ನೀರಿನ ಬಾಟಲ್ ಗಳನ್ನು ವ್ಯವಸ್ಥೆ ಮಾಡಿದ ದಾನಿಗಳಾದ ಆಶೀಸ್ ಖಂಡಪ್ಪಗೌಡರ, ಸಿದ್ದು ಕಲಾಬಾಗ್ಲಿಮಠ, ಶಂಕರಗೌಡ್ರ ಪಾಟೀಲ್ ಇವರಿಗೆ ಕಲ್ಪತರು ಸೇವಾ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!